Saturday, December 27, 2008

ಬರಲಿದೆ...ಔಷಧ ಬೆಳೆಗಳ ಮಿಷನ್‌


2009 ಜನವರಿಗೆ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಅನುಷ್ಠಾನ. ಇದರಿಂದ ಬಹಳಷ್ಟು ಸಹಾಯಧನ ಸಿಗುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳುವ ಬದಲು ಯೋಜನೆಯ ಸದುಪಯೋಗ ಮುಖ್ಯ. ಇಲಾಖೆಯವರು ಅರ್ಹರಿಗೆ ಯೋಜನೆ ತಲುಪಿಸಿದರೆ ಇದರ ಉದ್ದೇಶ ಸಾರ್ಥಕ.


ನಗರ ಪ್ರದೇಶಗಳು ೃಹತ್ತಾಗಿ ಬೆಳೆಯುತ್ತಿವೆ. ಪರಿಣಾಮ, ಕೃಷಿ ಭೂಮಿಗಳು ಕಡಿಮೆಯಾಗುತ್ತಿದೆ. ಭೂಮಿ ಇರುವ ಕೃಷಿಕರು ಬೇಸಾಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಬೇಸಾಯ ಮಾಡುವವರಿಗೆ ಬೆಲೆ ಕೈಕೊಡುತ್ತಿದೆ. ಎಂತಹ ಸ್ಥಿತಿ!
ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿಯೇ ಕೃಷಿ ಉತ್ಪನ್ನ ಕಡಿಮೆ ಆಗುತ್ತಿರುವುದು ವಿಷಾದನೀಯ. ಅದಕ್ಕಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ತರುತ್ತಲೂ ಇದೆ. ಬಹಳಷ್ಟು ರೈತರು ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ನೀಡುವ ಅನುದಾನದ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಿಂದ ಸಿಗುವ ಅನುದಾನ ಬಳಸಿಕೊಂಡು ತಮ್ಮ ಜಮೀನಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಔಷಧ ಬೆಳೆಗಳನ್ನು ಉತ್ತೇಜಿಸಲಿಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಮಾದರಿಯಲ್ಲಿಯೇ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಸದ್ಯದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ.
ಭಾರತ ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆ ಇದು. ಇಂದಿನ ಜನರಲ್ಲಿ ನೈಸರ್ಗಿಕ, ಆಯುರ್ವೇದ ಔಷಧ ಮತ್ತು ಸೌಂದರ್ಯ ವರ್ಧಕಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ಇದನ್ನು ಗಮನಿಸಿದ ಸರ್ಕಾರ ಔಷಧ ಬೆಳೆಗಳನ್ನು ರೈತರ ಹೊಲದಲ್ಲಿ ಬೆಳೆಸಲು, ಅವರನ್ನು ಬೆಳೆಯುವಂತೆ ಉತ್ತೇಜಿಸುವುದು ಯೋಜನೆ ಉದ್ದೇಶ.
ಯಾರಿಗೆ ಯೋಜನೆ?
ಔಷಧಿ ಬೆಳೆಗಳನ್ನು ಯಾವ ಕೃಷಿಕ ಬೇಕಾದರೂ ಬೆಳೆಯಬಹುದು. ಭೂ ಗುಣವನ್ನು ನೋಡಿ. ಒಬ್ಬೊಬ್ಬರೇ ಔಷಧ ಬೆಳೆಗಳನ್ನು ಬೆಳೆದರೆ ಕೊಯ್ಲೋತ್ತರ ಸಂಸ್ಕರಣ ಘಟಕ ಮುಂತಾದವುಗಳಿಗೆ ಸಹಾಯಧನ ಕಡಿಮೆ. ತಮ್ಮದೇ ಗುಂಪು ಸ್ಥಾಪಿಸಿಕೊಂಡು ಕೃಷಿ ಮಾಡುವವರಿಗೆ ಈ ಔಷಧ ಮಿಷನ್‌ ಪ್ರಯೋಜನ ನೂರಕ್ಕೆ ನೂರು. ಸ್ವಸಹಾಯ ಗುಂಪುಗಳು ಈ ಕೃಷಿ ಮಾಡಲು ತೊಡಗಿದರೆ ಮಿಷನ್‌ ಸಹಕಾರದಿಂದ ಹೆಚ್ಚನ ಸ್ಥಿರತೆ ಸಾಧಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ. ಔಷಧ ಬೆಳೆಗಳನ್ನು ಬೆಳೆಯುವ ಪ್ರತಿಯೊಂದು ಹಂತದಲ್ಲಿಯೂ ಸಹಾಯಧನ ದೊರೆಯುತ್ತದೆ.
ನರ್ಸರಿ ಅಭಿವೃದ್ಧಿ
ಔಷಧೀಯ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೆಂದರೆ ಉತ್ತಮ ನರ್ಸರಿಯ ಅಗತ್ಯವು ಇದೆ. ಇದನ್ನು ಅಭಿವೃದ್ಧಿಪಡಿಸಲು ಈ ಮಿಷನ್‌ ಸಹಾಯಧನ ನೀಡುತ್ತದೆ. ಇದು ಎರಡು ವಿಭಾಗದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು, ಅಂದರೆ ಸ್ವಸಹಾಯ ಗುಂಪುಗಳು ನರ್ಸರಿ ಘಟಕ ಪ್ರಾರಂಭಿಸುತ್ತಾರೆಂದರೆ ಶೇ. 100 ಸಹಾಯಧನ ದೊರೆಯುತ್ತದೆ. ದೊಡ್ಡ ಪ್ರಮಾಣದ ಘಟಕಕ್ಕೆ 20 ಲಕ್ಷ ರೂ. ಮತ್ತು ಸಾರ್ವಜನಿಕರು ಸ್ಥಾಪಿಸುವ ಸಣ್ಣ ಘಟಕ್ಕೆ 4 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಖಾಸಗಿ ಸಂಸ್ಥೆಗಳು ನರ್ಸರಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಶೇ. 50 (10 ಲಕ್ಷ ರೂ.) ಮತ್ತು ಸಣ್ಣ ಘಟಕಕ್ಕೆ 2 ಲಕ್ಷ ರೂ. ಸಹಾಯಧನ ದೊರೆಯುತ್ತದೆ.
ಔಷಧ ಬೆಳೆ ಬೆಳೆಯುವುದು ಸುಲಭವಲ್ಲ. ಸಾವಯವ ಕೃಷಿ ಮಾಡಿದರೆ ಮಾರುಕಟ್ಟೆ ಮೌಲ್ಯ ಜಾಸ್ತಿ. ಬೇರೆ ಕಡೆಯಿಂದ ಸಾವಯವ ಪೋಷಕಾಂಶ ತಂದು ಕೃಷಿ ಮಾಡುವುದಾದರೆ ವೆಚ್ಚ ಹೆಚ್ಚು. ರಾಸಾಯನಿಕ ಪೋಷಕಾಂಶ ನೀಡಿದರು ಖರ್ಚು ಕಡಿಮೆಯಾಗದು. ಪೋಷಕಾಂಶ, ನೀರಾವರಿ ಉಳಿದ ಕೆಲಸಗಳಿಗೆ ತಗಲುವ ವೆಚ್ಚದ ಶೇ. 20 ರಿಂದ ಶೇ. 75ರವರೆಗೂ ಸಹಾಯಧನ ಲಭ್ಯ. ಆದರೆ ಷರತ್ತು ಅನ್ವಯ. ಬೆಳೆಯುವ ಪ್ರದೇಶ ವಿಸ್ತರಣೆಯನ್ನು ಗೊಂಚಲು ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದು ಆ ಷರತ್ತು.
ಕೊಯ್ಲೋತ್ತರ ಸಂಸ್ಕರಣೆ
ಬೆಳೆಗಳನ್ನು ಕಟಾವು ಮಾಡಿದ ನಂತರದ ಚಟುವಟಿಕೆಗಳಾದ ಒಣಗಿಸುವ ಘಟಕ ಸ್ಥಾಪನೆ ಮತ್ತು ಉತ್ಪನ್ನಗಳನ್ನು ಶೇಖರಿಸಿಡಲು ಅಗತ್ಯವಿರುವ ಗೋದಾಮು ನಿರ್ಮಾಣಕ್ಕೆ ತಗಲುವ ವೆಚ್ಚಕ್ಕೆ ಕ್ರಮವಾಗಿ ಸಾರ್ವಜನಿಕ ಶೇ. 100ರಷ್ಟು ಮತ್ತು ಖಾಸಗಿ ಸಂಸ್ಥೆಗಳಿಗೆ ಶೇ. 50 ಸಹಾಯಧನವನ್ನು ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ ನೀಡುತ್ತದೆ.
ಔಷಧಿ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಅದನ್ನು ಸರಿಯಾದ ರೀತಿ ಸಂಸ್ಕರಣೆ ಮಾಡಬೇಕಾಗುತ್ತದೆ. ಇದರ ಸಂಸ್ಕರಣಾ ಘಟಕ ಸ್ಥಾಪನೆಗೆ ಶೇ. 25ರಂತೆ 50 ಲಕ್ಷಗಳವರೆಗೆ ದೊರೆಯುತ್ತದೆ. ಇದಲ್ಲದೇ, ಔಷಧ ಬೆಳೆಗಳನ್ನು ಬೆಳೆಸಿ ಅದರಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡುಹಿಡಿಯುವ ದೃಷ್ಠಿಯಿಂದ ಪ್ರಯೋಗಾಲಯ ಸ್ಥಾಪಿಸುವುದಾದರೆ ಶೇ. 30ರಂತೆ 30 ಲಕ್ಷಗಳವರೆಗೆ ಹಾಗೂ ಮಾರುಕಟ್ಟೆ ಉತ್ತೇಜನಕ್ಕೆ ಶೇ. 10ರಂತೆ 10 ಲಕ್ಷದವರೆಗೆ ಸಹಾಯಧನ ದೊರೆಯುತ್ತದೆ. ಅಷ್ಟೇ ಅಲ್ಲದೆ, ಮಾರುಕಟ್ಟೆ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಶೇ. 100ರಂತೆ ಗರಿಷ್ಟ 20 ಲಕ್ಷದವರೆಗೆ ಸಹಾಯಧನವನ್ನು ಮಿಷನ್‌ ಒದಗಿಸುತ್ತದೆ.
ಇದಲ್ಲದೇ ಮಾರುಕಟ್ಟೆ ತಂತ್ರ, ಮರು ಖರೀದಿ ಚಟುವಟಿಕೆಗಳು, ಸಾವಯವ ಧೃಡೀಕರಣ, ಬೆಳೆ ವಿಮೆಯಂತಹ ಚಟುವಟಿಕೆಗಳಿಗೆ ಯೋಜನಾ ವರದಿಯನ್ನಾಧರಿಸಿ ಸಹಾಯಧನವನ್ನು ನೀಡಲಾಗುತ್ತದೆ. ಈ ಸಹಾಯಧನ ಸುಮಾರು 93 ಬೆಳೆಗಳಿಗೆ ದೊರೆಯುತ್ತದೆ. ಹಾಗೆಯೇ ಬೆಳೆಗಳನ್ನು ಆಧರಿಸಿ ಶೇ. 20ರಿಂದ ಶೇ. 75ರವರೆಗೆ ಸಬ್ಸಿಡಿಯು ಸಿಗುತ್ತದೆ.
ಮರುಖರೀದಿ ಒಪ್ಪಂದ
ಔಷಧ ಬೆಳೆ ಬೆಳೆದಾಗ ರೈತರಿಗೆ ಎದುರಾಗುವ ಮೊದಲ ಸಮಸ್ಯೆ ಮಾರುಕಟ್ಟೆಯದ್ದು. ಅದಕ್ಕಾಗಿ ಈ ಬೆಳೆಯಲು ತೊಡಗುವ ರೈತರು ತಮ್ಮದೇ ಆದ ಸಹಕಾರ ಸಂಘವನ್ನು ಸ್ಥಾಪಿಸಿಕೊಳ್ಳುವುದು ಉತ್ತಮ. ಈ ಸಂಘದ ಮೂಲಕ ವಿಶ್ವಾಸನೀಯ ಕಂಪೆನಿಗಳೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಉತ್ತರ ಕನ್ನಡದ ಕಾರವಾರದಲ್ಲಿ `ಪ್ರಗತಿ' ಅನ್ನುವ ಕಂಪೆ ಈಗಾಗಲೇ 40 ಔಷಧೀಯ ಉತ್ಪನ್ನಗಳನ್ನು ಖರೀದಿಸುತ್ತಿದೆ. ಇದಲ್ಲದೇ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಔಷಧೀಯ ಬೆಳೆಗಳನ್ನು ಖರೀದಿಸುತ್ತವೆ. ಒಪ್ಪಂದ ಮಾಡಿಕೊಳ್ಳುವಾಗ ಮಾತ್ರ ರೈತರು ಜಾಗರೂಕರಾಗಿದ್ದರೆ ಒಳ್ಳೆಯದು.
ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ನ ಕ್ರೀಯಾ ಯೋಜನೆ ಸಿದ್ಧವಾಗಿದ್ದು ಜನವರಿ 2009ರ ಸಮಯಕ್ಕೆ ಆಶಾವಾದಿ ರೈತರ ಬಳಕೆಗೆ ಲಭ್ಯ. ಕೊನೆಯ ವಿನಂತಿ, ಸರ್ಕಾರದಿಂದ ದೊರೆಯುವ ಸಹಾಯಧನವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಸಿಕ್ಕುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳದಿದ್ದರೆ ಸರ್ಕಾರ ಅನುಷ್ಠಾನಕ್ಕೆ ತರುವ ಯೋಜನೆಗಳು ಸಾರ್ಥಕ. ಹಾಗೆಯೇ ತೋಟಗಾರಿಕಾ ಇಲಾಖೆಯವರು ಅರ್ಹ ಫಲಾನುಭವಿಗಳಿಗೆ ಯೋಜನೆ ಸಮರ್ಪಕವಾಗಿ ಸಿಗುವಂತೆ ಮಾಡಬೇಕು.
ನಾಗರಾಜ ಮತ್ತಿಗಾರ

Friday, December 19, 2008

ತುಡುವೆ ಜೇನಿನ ಕೃತಕ ಹಿಸ್ಸೆ!


                                               .                        
      ಜೇನು ಸಹಜ ಕೃಷಿಯ ಒಂದು ಭಾಗ. ತೋಟಗಾರಿಕಾ ಬೆಳೆಗಳ ಪರಾಗ  ಸ್ಪರ್ಷ ಕ್ರಿಯೆ ಹೆಚ್ಚಿಸಿ ಬೆಳೆ ಉತ್ತಮವಾಗುವಂತೆ ನೊಡಿಕೊಳ್ಳುವ ಜೇನು ತುಪ್ಪವನ್ನು ನೀಡಿ ಇನ್ನಷ್ಟು ಉಪಆದಾಯವನ್ನೂ ತಂದುಕೊಡುತ್ತದೆ. ಆದ್ದರಿಂದ  ವರ್ಷದಿಂದ ವರ್ಷಕ್ಕೆ ಜೇನು ಸಾಕಾಣಿಕೆ ಮಾಡುವ ಕೃಷಿಕರ ಸಂಖ್ಯೆ ಹೆಚ್ಚುತ್ತಿದೆ. ಮನೆಯ ಸುತ್ತಮುತ್ತ  ಪೆಟ್ಟಿಗೆಯಲ್ಲಿ ಸಾಕುವ ತುಡುವೆಜೇನು  ಸಾಕಾಣಿಕೆ ಮಾಡುವ   ಕೃಷಿಕರಿಗೆ  ನವೆಂಬರ್ ಡಿಸೆಂಬರ್ ತಿಂಗಳು ಬಂತೆಂದರೆ ಸಮಸ್ಯೆ ಪ್ರಾರಂಭವಾಯಿತೆಂದೇ ಅರ್ಥ. ಕಾರಣ  ಮಳೆಗಾಲಪೂರ್ತಿ  ಕೃತಕ ಆಹಾರ  ಕೊಟ್ಟು  ಮನೆಯಂಗಳದಲ್ಲಿ ಸಾಕಿದ  ತುಡುವೆ ಜೇನಿನ  ರಾಣಿಗೆ   ಹಿಸ್ಸೆಯಾಗಿ ಹೊಸರಾಣಿಹುಳುವನ್ನು ಸೃಷ್ಟಿಸಿ ಪೆಟ್ಟಿಗೆ  ಬಿಟ್ಟು  ಬೇರೆ  ಗೂಡನ್ನು ಅರಸಿ ಓಡಿಹೋಗುವ ಆತುರ. ಜೇನು ರಾಣಿಯ  ಈ ಪ್ರಾಕೃತಿಕ  ಕ್ರಿಯೆ  ತುಡುವೆಜೇನು ಸಾಕಾಣಿಕಾದಾರನಿಗೆ ಮಾತ್ರ ನಷ್ಟ. ಪೆಟ್ಟಿಗೆಯಲ್ಲಿನ ಜೇನುಪಡೆ   ಕಣ್ಣಾರೆ  ಕಾಡುಪಾಲಾಗುವುದನ್ನು  ನೋಡುತ್ತಾ  ನಿಲ್ಲಬೇಕು.  ಜೇನಿನ  ಹಿಸ್ಸೆ ಪ್ರಕ್ರಿಯೆನ್ನಾಗಲಿ ಅಥವಾ ಹೊಸ  ರಾಣಿಯ  ಹುಟ್ಟನ್ನಾಗಲಿ ರಾಣಿಮೊಟ್ಟೆಯ ಮುರಿದು  ತಡೆಗಟ್ಟಬಹುದಾದರೂ  ಅದು  ಪ್ರಕೃತಿ  ಸಹಜವಲ್ಲ.ಹಾಗೂ ಮತ್ತೊಂದು ಜೇನು ಸಂಸಾರ ಅಭಿವೃದ್ಧಿಯನ್ನು ತಡೆಗಟ್ಟಿದಂತಾಗುತ್ತದೆ. ಜತೆಗೆ  ರಾಣಿಜೇನು ಮೊಟ್ಟೆಯನ್ನಿಟ್ಟ ಸಮಯದಲ್ಲಿ   ಗೂಡಿಗೆ  ಕೈಹಾಕುವುದು  ಕಷ್ಟಕರ. ಹಾಗಾಗಿ ಜೇನು ಹುಟ್ಟನ್ನು ಮನೆಯಲ್ಲಿಯೇ ಉಳಿಸಿಕೊಂಡು ಗೂಡು ಹೆಚ್ಚಿಸಿಕೊಳ್ಳುವುದು ಎಲ್ಲಾ ಜೇನು ಕೃಷಿಕರ ಆಶಯ.  ಹಳೆರಾಣಿ ತನ್ನ ಪಾಲಿನ  ಹುಳುಗಳನ್ನು ಕರೆದುಕೊಂಡು  ಕಾಡುಪಾಲಾಗದಂತೆ  ತಡೆದು, ಜೇನಿನ ಹಿಸ್ಸೆಯನ್ನು ಸಹಜವಾಗಿ ನಡೆಯುವಂತೆ  ಮಾಡಿ  ಜೇನು ಸಂಸಾರವನ್ನೂ  ಹೆಚ್ಚಿಸಿಕೊಳ್ಳಲು ಇಲ್ಲಿದೆ  ಸುಲಬೋಪಾಯ.
     ಈಗಾಗಲೆ  ಇರುವ ಜೇನು ಪೆಟ್ಟಿಗೆಯನ್ನೇ  ಹೋಲುವ(ಒಂದೇ  ಬಣ್ಣದ್ದಾದರೆ  ಉತ್ತಮ)  ಇನ್ನೊಂದು  ಪೆಟ್ಟಿಗೆಯನ್ನು ಮೂಲಪೆಟ್ಟಿಗೆಯಿಟ್ಟ ಜಾಗಕ್ಕಿಂತ  ೩  ಅಡಿ ದೂರದಲ್ಲಿ  ಇಡಬೇಕು. ಮೂಲಪೆಟ್ಟಿಗೆಯನ್ನು  ಕೂಡ  ಅದರ  ಜಾಗದಿಂದ  ೩ ಅಡಿ  ಪಕ್ಕಕ್ಕೆ  ಇಡಬೇಕು(ಚಿತ್ರದಲ್ಲಿ ತೋರಿಸಿದಂತೆ). ಬೆಳಿಗಿನ  ಸಮಯದಲ್ಲಿ  ಹಿಸ್ಸೆ  ಪ್ರಕ್ರಿಯೆ  ಮಾಡಿದರೆ  ಉತ್ತಮ. ಮೂಲಪೆಟ್ಟಿಗೆಯಲ್ಲಿನ  ಯಾವುದಾದರೂ  ನಾಲ್ಕು  ತತ್ತಿಗಳನ್ನು  ಹೊಸ ಪೆಟ್ಟಿಗೆಗೆ  ಹಾಕಿ  ಮುಚ್ಚಳ ಹಾಕಿದರೆ  ಅರ್ದ ಕೆಲಸ  ಮುಗಿದಂತೆ.  ಈಗ  ಒಂದು  ಪೆಟ್ಟಿಗೆಯಲ್ಲಿ  ರಾಣಿನೊಣ  ಇರುತ್ತದೆ.  ರಾಣಿ ನೊಣ ಇರದ  ಇನ್ನೊಂದು  ಪೆಟ್ಟಿಗೆಯಲ್ಲಿ  ಇರುವ  ಕಡ್ಡಿಮೊಟ್ಟೆಗೆ  ಜೇನುಹುಳುಗಳು  ರಾಜಾಷಾಯಿ  ಯೆಂಬ  ಆಹಾರವನ್ನು  ಕೊಟ್ಟು  ರಾಣಿಯನ್ನಾಗಿ  ಪರಿವರ್ತಿಸಿಕೊಳ್ಳುತ್ತವೆ. ಹೀಗೆ ಹಿಸ್ಸೆಮಾಡಿ  ೧೩  ದಿವಸಕ್ಕೆ  ೩-೪  ಹೊಸರಾಣಿ ಹೊರಬರುತ್ತವೆ.  ಒಂದು  ರಾಣಿಯನ್ನು  ಉಳಿಸಿಕೊಳ್ಳಬೇಕು.  ಹುಳುಗಳ  ಸಂಖ್ಯೆ  ಜಾಸ್ತಿ   ಇದ್ದಲ್ಲಿ  ಇನ್ನೊಂದು  ಜೇನು  ಸಂಸಾರವನ್ನು ಕೂಡ  ಮಾಡಿಕೊಳ್ಳಬಹುದು.  ಇದರಿಂದಾಗಿ  ಅತ್ಯಂತ  ಸುಲಭವಾಗಿ  ಜೇನು  ಸಂಸಾರವನ್ನು  ವೃದ್ದಿಸಿಕೊಳ್ಳಬಹುದು  ಎಂಬುದು  ಕಳೆದ  ನಾಲ್ಕಾರು ವರ್ಷದಿಂದ  ಕೃತಕಹಿಸ್ಸೆಯನ್ನು  ಮಾಡಿ  ಜೇನು  ಸಂಸಾರ   ಹೆಚ್ಚಿಸಿಕೊಂಡ  ಸಾಗರ  ತಾಲ್ಲೂಕಿನ   ಪ್ರಶಾಂತ  ಕೆರೇಕೈರವರ  ಅಭಿಪ್ರಾಯ. 
 ಹೆಚ್ಚಿನ  ಮಾಹಿತಿಗೆ  ಸಂಪರ್ಕಿಸಿ   ಮೋ: ೯೪೪೮೯೧೪೭೯೧ 

ಚಿತ್ರ  ಬರಹ: ಕೆ.ಆರ್.ಶರ್ಮಾ  ತಲವಾಟ
shreeshum@gmail.com


Saturday, December 13, 2008

ಹರಿಯಾಣ ಎಮ್ಮೆ ಮಲೆನಾಡಿಗೆ ಬಂತು!




                                                                                                                                                                                                                                                       ಎಲ್ಲಿಯ ಮಾಮರ, ಎಲ್ಲಿಯ ಕೋಗಿಲೆ ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿ ಮೇಲಿನ ಸುದ್ದಿಯನ್ನು ತಳ್ಳಿಹಾಕುವಂತಿಲ್ಲ. ಸಾಗರದ ಚಿಕ್ಕತೋಟ ಶಶಿಧರ್ ಅಕ್ಷರಶಃ ಹರಿಯಾಣ ರಾಜ್ಯದಿಂದ ಎವ್ಮ್ಮೆಗಳನ್ನು ತಂದು ಹಾಲಿನ ಡೈರಿ ಆರಂಭಿಸಿದ್ದಾರೆ. ಮೈ ತುಂಬಾ ಸವಾಲುಗಳೇ ಇರುವ ಈ ಸಾಹಸ ಗಮನಿಸಲೇಬೇಕಾದಂತದು.
ಶಿವಮೊಗ್ಗ ಜಿಲ್ಲೆಯ ಈ ಚಿಕ್ಕತೋಟ ಎಂಬ ಪುಟ್ಟ ಹಳ್ಳಿ ಸಾಗರದಿಂದ ೧೩ ಕಿ.ಮೀ. ಅಂತರದಲ್ಲಿದೆ. ಅಲ್ಲಿನ ಯುವಕ ಸಿ.ಎಸ್. ಶಶಿಧರ್‌ರಿಗೆ ಮೊದಲಿನಿಂದಲೂ ಜಾನುವಾರು ಸಾಕಣೆ ಅಚ್ಚುಮೆಚ್ಚಿನ ಸಂಗತಿ. ಅದರಲ್ಲಿನ ಪ್ರಯೋಗಗಳತ್ತ ಆಸಕ್ತಿ, ಎಮ್ಮೆ ಎಂದರೆ ಆಕರ್ಷಣೆ. ಒಮ್ಮೆ ಟಿ.ವಿ.ಯಲ್ಲಿ ಕೃಷಿ ಕಾರ್ಯಕ್ರಮವೊಂದನ್ನು ನೋಡುವಾಗ, ಗೋಕಾಕ್‌ನಲ್ಲಿ ಹರಿಯಾಣ ಎಮ್ಮೆಗಳನ್ನು ತಂದು ಹೈನುಗಾರಿಕೆ ನಡೆಸುತ್ತಿರುವ ವಿಹಂಗಮ ಕತೆ ಗಮನ ಸೆಳೆಯಿತು. ನಮ್ಮೂರಿಗೂ ಹರಿಯಾಣ ಎಮ್ಮೆ ತಂದರೆ ಹೇಗೆ?
ಅಧ್ಯಯನದ ಅಗತ್ಯವಿತ್ತು. ಅಲ್ಲಿನ ಎಮ್ಮೆ ಮಲೆನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಹಲವು ಓಡಾಟಗಳ ನಂತರ ಮಲೆನಾಡಿನ ಚಳಿ, ಮಳೆಯನ್ನು ಇವು ತಾಳಿಕೊಳ್ಳುವುದು ಸ್ಪಷ್ಟವಾಯಿತು. ಸ್ವಾರಸ್ಯವೆಂದರೆ, ಗೋಕಾಕ್‌ನಲ್ಲಿರುವುದೂ ಹೆಚ್ಚು ಕಡಿಮೆ ಸಾಗರದ ಹವಾಮಾನ!
ಹರಿಯಾಣದಿಂದ ಎಮ್ಮೆ ತರಿಸುವುದೇ ತ್ರಾಸದ, ದುಬಾರಿಯ ಕೆಲಸ. ಒಂದೆರಡು ಎಮ್ಮ್ಮೆಯನ್ನು ಖರೀದಿಸಲಾಗದು. ಅಲ್ಲಿ ಹತ್ತು ಎಮ್ಮೆಗಳಿಗೆ ಒಂದು ಯೂನಿಟ್. ಒಂದು ಯೂನಿಟ್‌ಗೆ ತಕ್ಕುದಾದ ವಾಹನ ವ್ಯವಸ್ಥೆಯಿರುತ್ತದೆ. ಯೂನಿಟ್ ಒಂದರ ನಿರ್ವಹಣೆಗೆ ಒಬ್ಬ ನಿರ್ವಾಹಕನನ್ನು ಅಲ್ಲಿಂದಲೇ ಕಳಿಸಿಕೊಡಲಾಗುತ್ತದೆ. ಆತನಿಗೆ ದಿನಕ್ಕೆ ೧೦೦ ರೂಪಾಯಿ ಸಂಬಳ, ಜೊತೆಗೆ ಆಹಾರ ಸಾಮಗ್ರಿ ಕೊಡಬೇಕು. ಇವೆಲ್ಲವನ್ನೂ ನಿರ್ವಹಿಸಲು ‘ಎಮ್ಮೆ ಏಜೆಂಟ್’ಗಳಿರುತ್ತಾರೆ. ಈ ಏಜೆಂಟರು ದೂರದ ಊರಿನಿಂದ ಬರುವ ಗ್ರಾಹಕರಿಗೆ ಗೆಸ್ಟ್‌ಹೌಸ್ ಸೌಲಭ್ಯವನ್ನೂ ಮಾಡಿರುತ್ತಾರೆ!
ಶಶಿಧರ್ ಈ ಎಮ್ಮೆಗಳಿಗಾಗಿಯೇ ಹೊಸ ಕೊಟ್ಟಿಗೆ ನಿರ್ಮಿಸಿದ್ದಾರೆ. ಹರಿಯಾಣದಿಂದ ಅವರು ಒಂಭತ್ತು ಎಮ್ಮೆ-ಕರು ತರಿಸಿದ್ದಾರೆ. ಒಟ್ಟು ೩.೮೦ ಲಕ್ಷ ರೂಪಾಯಿ ಎಮ್ಮೆಗಳಿಗಾಗಿ ವೆಚ್ಚವಾಗಿದೆ. ಅಂದರೆ ಒಂದು ಎಮ್ಮೆಗೆ ೪೨ ಸಾವಿರ ರೂ.! ಪ್ರತಿ ಎಮ್ಮೆಗೆ ದಾರಿ ಖರ್ಚು ಎಂತಲೇ ಆರು ಸಾವಿರ ರೂಪಾಯಿ ಖರ್ಚಾಗಿದೆ.
ಅಷ್ಟಕ್ಕೂ ಹರಿಯಾಣ ಎಮ್ಮೆಯೇ ಹೈನುಗಾರಿಕೆಗೆ ಏಕೆ ಬೇಕು? ಶಶಿ ಉತ್ತರಿಸುವುದು ಹೀಗೆ, ಸ್ಥಳೀಯ ಎಮ್ಮೆಗಳಲ್ಲಿ ಹಲವು ದೋಷಗಳಿವೆ. ಗರ್ಭ ಕಟ್ಟದಿರುವಿಕೆ ದೊಡ್ಡ ಸಮಸ್ಯೆ. ಹಾಲು ಕೊಯ್ಲಿನ ಅವಧಿ ಅನಿಶ್ಚಿತವಾಗಿರುವುದು ಮತ್ತು ೬ - ೮ ತಿಂಗಳಿಗೇ ನಿಲ್ಲಿಕೆಯಾಗಿಬಿಡುವುದು ನಷ್ಟದ ಬಾಬತ್ತು. ಗರ್ಭಾವಧಿಯಲ್ಲೂ ಹಾಲು ಇಳುವರಿ ಕಡಿಮೆಯಾಗದಿರುವುದು ಮುರಾ ವೈಶಿಷ್ಟ್ಯ. ಸ್ಥಳೀಯ ಎಮ್ಮೆಗಿಂತ ಹೆಚ್ಚಿನ ಫ್ಯಾಟ್ ಅರ್ಥಾತ್ ೮ - ೯ ಅಂಶಗಳಷ್ಟು ಕೊಬ್ಬು ಹಾಲಿನಲ್ಲಿರುತ್ತದೆ. ಸಾಮಾನ್ಯವಾಗಿಯೇ ಹಾಲಿನ ಇಳುವರಿ ಜಾಸ್ತಿಯೇ. ಹರಿಯಾಣದಲ್ಲಿ ಹೊತ್ತಿಗೆ ಹತ್ತು ಲೀಟರ್‌ವರೆಗೆ ಬರುತ್ತಿದೆಯಂತೆ. ಈಗ ನಮ್ಮಲ್ಲೂ ಆರೂವರೆ ಲೀಟರ್ ಲಭಿಸುತ್ತಿದೆ
ಆ ಲೆಕ್ಕದಲ್ಲಿ, ನಿರ್ವಹಣೆ ಸಂಕೀರ್ಣವೇನಲ್ಲ. ಹತ್ತಿ ಹಿಂಡಿ, ಗೋಧಿ ಬೂಸ, ಜೋಳದ ಕಡಿ ಮಿಶ್ರಣದ ಮೂರು ಕೆ.ಜಿ. ಹಿಂಡಿ, ಕೋ ತ್ರಿ ಜಾತಿಯ ಹಸಿ ಹುಲ್ಲು, ಕತ್ತರಿಸಿದ ಒಣ ಹುಲ್ಲು ಎಮ್ಮೆಗಳಿಗೆ ಆಹಾರ. ಒಂದು ಎಮ್ಮೆಗೆ ದಿನಕ್ಕೆ ಸರಾಸರಿ ೧೧೫ ರೂ. ನಿರ್ವಹಣಾ ವೆಚ್ಚ. ಶಶಿಧರ್ ಪ್ರಕಾರ, ಸದ್ಯಕ್ಕಂತೂ ಹಾಲು ಮತ್ತು ನಿರ್ವಹಣೆಯ ಅನುಪಾತ ಸರಿಸಮ. ಸಗಣಿ ಗೊಬ್ಬರದ ಆದಾಯ ನಿಕ್ಕಿ ಉಳಿಯುತ್ತದೆ. ಒಂದು ವ್ಯಾನ್ ಲೋಡ್‌ಗೆ ೨,೩೦೦ ರೂ.ನಂತೆ ಗೊಬ್ಬರ ಮಾರಾಟವಾಗುತ್ತಿದೆ.
     ತಕ್ಷಣಕ್ಕೆ ಸಮಸ್ಯೆಗಳು ಬರಲಿಲ್ಲವೆಂದೇನಲ್ಲ. ವ್ಯಾನ್ ಹತ್ತಿದ ಒಂಬತ್ತು ಕರುಗಳಲ್ಲಿ ಒಂದು ದೊಡ್ಡ ಎಮ್ಮೆಗಳ ಕಾಲ್ತುಳಿತಕ್ಕೆ ಸಿಕ್ಕು ಬರುವಾಗಲೆ ಪ್ರಾಣ ಬಿಟ್ಟಿತ್ತು. ಚಿಕ್ಕತೋಟಕ್ಕೆ ಬಂದ ನಂತರವೂ ಮೂರು ಕರುಗಳು ವಿವಿಧ ಕಾರಣಗಳಿಂದ ಜೀವ ಕಳೆದುಕೊಂಡವು. ಬಂದ ಹೊಸದರಲ್ಲಿ ಎಮ್ಮೆಗಳಿಗೆ ಥಂಡಿ, ಜ್ವರ ಇತ್ಯಾದಿ ಸಣ್ಣ ಪುಟ್ಟ ರೋಗ ಕಾಣಿಸಿದ್ದುಂಟು. ಅದೃಷ್ಟಕ್ಕೆ, ಹರಿಯಾಣದಿಂದ ಬಂದಿರುವ ಪಶು ನಿರ್ವಾಹಕನಿಗೆ ಒಂದು ಮಟ್ಟಿನ ವೈದ್ಯವೂ ಗೊತ್ತಿದೆ., ಇಂಜಕ್ಷನ್ ಕೊಡುವುದಕ್ಕೂ ಸೈ. ಹಾಗಾಗಿ ತ್ರಾಸ ಎಷ್ಟೋ ಕಡಿಮೆಯಾದಂತೆ. ಇಂದು ಶಶಿ ಪಶು ಆಹಾರ, ಹಾಲು ಮಾರಾಟ ಮುಂತಾದ ವ್ಯಾವಹಾರಿಕ ವಿಚಾರಗಳಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿದರೆ ಸಾಕು. 
     ಸ್ಥಳೀಯ ಕೆಎಂಎಫ್ ಡೈರಿಗೆ ಹಾಲು ಹಾಕುವುದರಿಂದ ಲಾಭ ನಿರೀಕ್ಷಿಸಲಾಗದು. ಈ ವಿಚಾರ ಅರ್ಥವಾದ ತಕ್ಷಣ ಶಶಿಧರ್ ಸ್ವತಃ ಹಾಲು ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅವರು ಸಾಗರ ಪೇಟೆಗೆ ಪ್ಯಾಕೆಟ್ ಹಾಲು ಮಾಡಿ ಮಾರಲಾರಂಭಿಸಿದ್ದಾರೆ. ತಾಜಾ ಹಾಲಿನ ಒಂದು ಲೀಟರ್ ದರ ೨೦ ರೂ. ಈಗಾಗಲೇ ಹಲವರು ಬೆಣ್ಣೆ ಜಾಸ್ತಿ ಬರುತ್ತಿದೆ ಎನ್ನುವುದನ್ನು ದೃಢಪಡಿಸುತ್ತಿದ್ದಾರೆ.
ಹರಿಯಾಣ ಎಮ್ಮೆಗಳದ್ದು ವಾಸ್ತವವಾಗಿ ‘ಮುರಾ’ ಜಾತಿ. ಈ ಹಿಂದಿನಿಂದಲೇ ತಂದು ಸಾಕಿರುವ ಗೋಕಾಕ್‌ನ ಜೇನುಗೌಡ, ಗೋಣಿಯವರ ಮಾರ್ಗದರ್ಶನದಲ್ಲಿ ಶಶಿಧರ್ ಮಲೆನಾಡಿಗೆ ಎಮ್ಮೆ ತಂದಿದ್ದಾರೆ. ಅಧ್ಯಯನಕ್ಕೆ ಸಾಗರದ ಪಶು ವೈದ್ಯ ಶ್ರೀಪಾದರಾವ್ ನಂದೀತಳೆಯವರ ಸಹಕಾರವನ್ನು ಶಶಿ ಸ್ಮರಿಸುತ್ತಾರೆ.
ಇದಿನ್ನೂ ಯೋಜನೆಯ ಆರಂಭ ಮಾತ್ರ. ಇನ್ನೊಂದು ಯೂನಿಟ್ ದನಗಳನ್ನು ತಂದು ಕಟ್ಟಬೇಕಿದೆ. ಖರ್ಚು ಮಿಗತೆಗೆ ರಸಮೇವು, ಅಜೋಲಾಗಳಂತಹ ತಂತ್ರಗಳನ್ನು ಅನುಸರಿಸಬೇಕಿದೆ. ಬಹುಷಃ ಇನ್ನೊಂದು ತಿಂಗಳಲ್ಲಿ ಇನ್ನೊಂದು ಯೂನಿಟ್ ದನಗಳನ್ನು ಶಶಿ ತರಿಸಲಿದ್ದಾರೆ. ಈ ಸಂಬಂಧ ಬ್ಯಾಂಕ್ ಖುಷಿಯಿಂದಲೇ ಸಾಲ ವ್ಯವಸ್ಥೆ ಮಾಡಿದೆ. ಮುರಾದ ಅಸಲಿ ಗುಣದ ಸಂತತಿ ಬೆಳೆಸಬೇಕೆಂದರೆ ತಕ್ಷಣಕ್ಕೇ ‘ಮುರಾ ಕೋಣ’ವೊಂದನ್ನು ಕೊಟ್ಟಿಗೆಗೆ ತರಬೇಕಿದೆ! ಸದ್ಯ ಕೃತಕ ಗರ್ಭಧಾರಣೆ ಕ್ರಮವನ್ನು ಅನುಸರಿಸಲಾಗಿದೆ.
ಶಶಿ ಒಂದು ಸಾಹಸದ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ಮೇವಿನ ಅಗತ್ಯವನ್ನು ಸ್ವಜಮೀನು ಪೂರೈಸುವಂತಿದ್ದರೆ, ಏಕಾಏಕಿ ಜಾನುವಾರುಗಳಿಗೆ ಮರಣಾಂತಿಕ ಕಾಯಿಲೆ ಬಾರದಿದ್ದರೆ ಹೈನುಗಾರಿಕೆಯಲ್ಲಿ ಅಷ್ಟಿಷ್ಟು ಲಾಭ ಕಟ್ಟಿಟ್ಟ ಬುತ್ತಿ. ಮಲೆನಾಡಿಗೆ ಬಂದಿಳಿದ ಹರಿಯಾಣ ಎಮ್ಮೆಗಳ ಲಾಭ - ನಷ್ಟದ ಅನುಪಾತ ತೆಗೆಯಲು ಇನ್ನೂ ಸ್ವಲ್ಪಕಾಲ ಬೇಕಾದೀತು. ಮೂರು ತಿಂಗಳ ಈ ಕ್ಲುಪ್ತ ಸಮಯದಲ್ಲಿ ಶಶಿಯವರಿಗಂತೂ ತಮ್ಮ ಹೆಜ್ಜೆ ಸಮಾಧಾನ ತಂದಿದೆ. ಮಲೆನಾಡಿನ ಉಳಿದ ಕೃಷಿಕರೂ ಶಶಿಯವರ ದಾರಿ ಹಿಡಿಯುವಂತಾಗಲು ಇನ್ನೂ ಕೆಲಕಾಲ ಕಾಯಲೇಬೇಕು.
ಶಶಿಧರ್‌ರ ಸಂಪರ್ಕ ದೂರವಾಣಿ -(೦೮೧೮೩)೨೩೧೬೯೮ [ಸ್ಥಿರ] ಮತ್ತು ೯೪೪೮೦೧೮೫೫೫ [ಮೊಬೈಲ್]
 
-ಮಾವೆಂಸ
ಫೋನ್-೦೮೧೮೩ ೨೩೬೦೬೮, ೨೯೬೫೪೩, ೯೮೮೬೪೦೭೫೯೨
ಇ ಮೇಲ್- mavemsa@gmail.com

Thursday, December 4, 2008

ಜವಾರಿ ಸರೋಜ!

ರಾಜ್ಯದಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಲ್ಲಿ ದಾವಣಗೆರೆಯೂ ಒಂದು. ಇಲ್ಲಿನ ಹೆಚ್ಚಿನ ರೈತರು ರಾಸಾಯನಿಕ ಕೃಷಿ ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕೆಲವು ರೈತರು ರಾಸಾಯಾನಿಕ ಕೃಷಿ ಬಿಟ್ಟು ಸಾವಯವದತ್ತ ಮುಖ ಮಾಡಿದ್ದಾರೆ. ಹಂತ ಹಂತವಾಗಿ ರಸಗೊಬ್ಬರ ಹಾಕುವುದನ್ನು ಬಿಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಉತ್ತಮ ಬೆಳೆವಣಿಗೆಯೇ.
ದಾವಣಗೆರೆಯ ಜಿಲ್ಲೆ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಸರೋಜ, ನಾಗೇಂದ್ರ ಪಾಟೀಲ್‌ ದಂಪತಿ ಪ್ರಗತಿಪರ ಕೃಷಿಕರು. ಇವರಿಗೆ ಹತ್ತೊಂಬತ್ತು ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಆರು ಎಕರೆ ತೆಂಗು, ಮೂರು ಎಕರೆ ಅಡಿಕೆ ತೋಟವಿದೆ. ಉಳಿದ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ.
ಸರೋಜ ಹರಿಹರ ಗ್ರಾಮ ಸಂಪರ್ಕ ಕೇಂದ್ರದ ಸಂಪನ್ಮೂಲ ವ್ಯಕ್ತಿ. ಇವರು ಹಳ್ಳಿ ಹಳ್ಳಿಗಳಗೆ ಹೋಗಿ ಕೃಷಿಯಲ್ಲಿ ತಮಗಿರುವ ಅನುಭವದ ಕುರಿತು ಉಪನ್ಯಾಸ ಕೊಡುತ್ತಾರೆ. ಈ ಸಂದರ್ಭದಲ್ಲಿ ಇವರಿಗೆ ನೈಸರ್ಗಿಕ ಕೃಷಿಯ ಕಡೆಗೆ ಆಸಕ್ತಿ ಮೂಡಿತು. ಅಡಿಕೆ, ತೆಂಗಿನ ತೋಟಕ್ಕೆ ರಸಗೊಬ್ಬರ ಬಿಟ್ಟು ಜೀವಾಮೃತವನ್ನು ಹಾಕತೊಡಗಿದರು. ಭತ್ತದ ಕೃಷಿಗೂ ಇದನ್ನೇ ಅನುಸರಿಸಿದರು. ಸಾವಯವ ಕೃಷಿಯನ್ನು ಮಾಡತೊಡಗಿದಾಗ ನಾಟಿ ಭತ್ತದ ತಳಿ ಬೆಳೆಯಬೇಕೆಂಬ ಮನಸ್ಸು ಸರೋಜ ಅವರಿಗೆ ಬಂತು.
ನಾಟಿ ತಳಿ ಬೆಳೆಸಬೇಕೆಂದು ಮನಸ್ಸಾದರೆ ತಳಿಗಳು ಸಿಗಬೇಕಲ್ಲ? ಕಳೆದ ವರ್ಷ ಇವರು ಗಂಧಸಾಲಿ ಎನ್ನುವ ಒಂದು ತಳಿಯನ್ನು ಮಾತ್ರ ಬೆಳೆದಿದ್ದರು. ನಾಟಿ ತಳಿ ಬಹಳ ಆಸಕ್ತಿಯಿಂದ ಬೆಳೆದು, ಸಂರಕ್ಷಣೆ ಮಾಡುತ್ತಿದ್ದ ಮಂಡ್ಯ ಹತ್ತಿರದ ಶಿವಳ್ಳಿಯ ಬೋರೇಗೌಡರಲ್ಲಿಗೆ ಹೋಗಿ 23 ತಳಿಗಳನ್ನು ತಂದು ನಾಟಿ ಮಾಡಿದ್ದಾರೆ. ಇವರು ತಳಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ 5 ಕೆಜಿ ಸಗಣಿ, 100 ಗ್ರಾಂ ಸುಣ್ಣ ಮತ್ತು ಗೋಮೂತ್ರ ಮಿಶ್ರಣ ಮಾಡಿ, ಅದರಲ್ಲಿ ಬೀಜೋಪಚಾರ ನಡೆಸಿ ನಾಟಿ ಮಾಡಿದ್ದಾರೆ. ಇದರಿಂದ ಈ ಭಾಗದಲ್ಲಿ ಸಾಮಾನ್ಯವಾಗಿ ಬರುವ ಬೆಂಕಿರೋಗ ಮತ್ತು ಕಾಂಡಕೊರಕ ಬಾಧೆ ಬಂದಿಲ್ಲ.
ಇವರು ಬೀಜ ಬ್ಯಾಂಕ್‌ ಅನ್ನು ಮಾಡುತ್ತಿದ್ದಾರೆ. ಇವರಲ್ಲಿ ಇಂದು 23 ಜವಾರಿ ತಳಿಗಳು ಇವೆ. ಗಂಧಸಾಲಿ, ರಾಜಭೋಗ್‌, ರಾಜಮುಡಿ, ಬಂಗಾರಸಣ್ಣ, ರತ್ನಚೂಡಿ, ಮೋರಡ್ಡಿ, ಬೂಸ ಬಾಸಮತಿ, ಕರಿಮುಂಡ್ಗ, ರಾಜಕೈಮೆ, ಜೀರಿಗೆಸಾಂಬ, ಮೈಸೂರು ಮಲ್ಲಿಗೆ, ಕೆಂಪುದಡಿ, ಸೇಲಂ ಸಣ್ಣ, ಮಾಲ್ಗುಡಿ ಸಣ್ಣ, ನಾಗ ಭತ್ತ, ಚಿನ್ನಾಪನ್ನಿ, ನವರ, ಪೂಸಾ ಸುಗಂಧ, ಗೌರಿ ಸಣ್ಣ, ಎಚ್‌ಎಂಟಿ ಸೋನಾ ತಳಿಗಳನ್ನು ಇವರು ಪ್ರಾತ್ಯಕ್ಷಿಕೆ ಮಾದರಿ ಬೆಳೆಯುತ್ತಿದ್ದಾರೆ.
ನಮ್ಮಲ್ಲಿಯ ಭೂಮಿಗೆ ಯಾವ ತಳಿ ಹೆಚ್ಚು ಇಳುವರಿ ಬರುತ್ತದೆ ಎನ್ನುವುದನ್ನು ಗಮನಿಸಿ ಅಂತಹ ತಳಿಗಳನ್ನು ಹೆಚ್ಚು ಬೆಳೆಯುವುದು ಮತ್ತು ನಮ್ಮಲ್ಲಿನ ಅಪರೂಪದ ತಳಿಗಳನ್ನು ಸಂರಕ್ಷಿಸಿ ದ್ವಿಗುಣಗೊಳಸುವುದು ಉದ್ದೇಶ. ಸಾವಯವ ಕೃಷಿಗೆ ನಾಟಿ ತಳಿಯೇ ಸೂಕ್ತ. ನಾವು ಮೊದಲು ಇಳವರಿ ಪಡೆಯಲು ತುಂಬಾ ಕಸರತ್ತು ಮಾಡುತ್ತಿದ್ದೆವು. ರೋಗ ಬಾಧೆಗೆ, ಕೀಟ ಬಾಧೆಗೆ ಔಷಧಗಳನ್ನು ಸಿಂಪಡಿಸುತ್ತಿದ್ದೆವು. ಆದರೆ ಈಗ ಮಾತ್ರ ಅದಾವುದನ್ನೂ ಮಾಡದೇ ಸಾವಯವದಲ್ಲಿಯೇ ಕೃಷಿ ಮಾಡುತ್ತಿದ್ದೇವೆ. ಮಾರಾಟಕ್ಕಾಗಿ ಬೆಳೆಯುತ್ತಿರುವ ಭತ್ತದ ಗದ್ದೆಗಳಿಗೆ ಒಂದೂವರೆ ಕ್ವಿಂಟಾಲ್‌ ರಾಸಾಯನಿಕ ಗೊಬ್ಬರ ಹಾಕುತ್ತಿದ್ದೇವೆ. ಮೊದಲು ತುಂಬಾ ಗೊಬ್ಬರದ ಬಳಕೆ ಮಾಡುತ್ತಿದ್ದೆವು. ಈಗ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬರುತ್ತಿದ್ದೇವೆ. ಎರೆಗೊಬ್ಬರವನ್ನು ಹೆಚ್ಚು ಬಳಸುತ್ತಿದ್ದೇವೆ ಅನ್ನುತ್ತಾರೆ ಸರೋಜಮ್ಮ.
ನಾಟಿ ತಳಿಯನ್ನು ಬೆಳೆಸುತ್ತಿರುವ ತಾಕುಗಳಿಗೆ ಯಾವುದೇ ತರಹದ ರಾಸಾಯನಿಕವನ್ನು ಬಳಸುತ್ತಿಲ್ಲ. ಈ ಭಾಗದಲ್ಲಿ ಶ್ರೀಪದ್ಧತಿ ಭತ್ತವನ್ನು ಮೊದಲು ಬೆಳೆದವರು ಇವರು. ಕೃಷಿಯೇ ಬದುಕಾಗಿರುವ ಸರೋಜಮ್ಮ ಅವರ ಪ್ರತಿಯೊಂದು ಯೋಚನೆ, ಯೋಜನೆಗೆ ಬೆನ್ನೆಲುಬಾಗಿ ನಿಂತವರು ಪತಿ ನಾಗೇಂದ್ರಪ್ಪ ಪಾಟೀಲರು. ಇವರ ಕೃಷಿಯನ್ನು ನೋಡಿ ಕೃಷಿ ಇಲಾಖೆಯವರು ಬಹಳಷ್ಟು ಕೃಷಿಕರಿಗೆ ಇವರಿಂದ ಮಾರ್ಗದರ್ಶನ ಕೊಡಿಸಿದ್ದಾರೆ. ಇವರು ಸಹ ಕೃಷಿ ಇಲಾಖೆಯ ಸಲಹೆ ಪಡೆಯದೆ ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾರೆ. ಸರೋಜಮ್ಮ ಅವರ ಕೃಷಿ ತೋಟಕ್ಕೆ ಅಮೇರಿಕಾದ ಪತ್ರಕರ್ತೆ ರೆಬಾಕಾ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.
ನಾವು ಕೇವಲ ವಾಣಿಜ್ಯ ಉದ್ದೇಶಗಳಿಗೆ ಭತ್ತ ಬೆಳೆಯದೇ ನಮ್ಮದೇ ಆದ ಜವಾರಿ ತಳಿಗಳನ್ನು ಹುಡುಕಿ ಬೆಳೆಸಬೇಕು ಎಂದು ಪತ್ನಿ ಸರೋಜ ಹೇಳಿದಳು. ಕೃಷಿ ವಿಚಾರದಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಅವಳು. ನನಗೂ ಸರಿ ಅನ್ನಿಸಿತು. ಸಾವಯವ ಕೃಷಿಯ ಕಡೆಗೆ ಬಂದಿದ್ದೆವು. ಸಾವಯವ ಕೃಷಿಯ ಜೊತೆ ಜವಾರಿ ತಳಿಗಳನ್ನು ಬೆಳೆಯುವುದು ಸರಿಯಾದ ಹೊಂದಾಣಿಕೆ. ಅವಳ ಆಸಕ್ತಿಗೆ ನಾನು ಆಸರೆಯಾಗಿದ್ದೇನೆ. ನಾಟಿ ತಳಿಗಳಲ್ಲಿ ಇಳವರಿ ಹೆಚ್ಚು ಬಾರದಿದ್ದರೂ ಗುಣಮಟ್ಟ ಒಳ್ಳೆಯದಾಗಿರುತ್ತದೆ ಎಂಬುದು ಸತ್ಯ ಅನ್ನುತ್ತಾರೆ ನಾಗೇಂದ್ರಪ್ಪ ಪಾಟೀಲ.
ಕಾಣೆಯಾಗುತ್ತಿರುವ ನಾಟಿ ತಳಿಗಳನ್ನು ಹುಡುಕಿ ಬೆಳೆಯುತ್ತಿರುವ ಸರೋಜ ಅವರ ಪ್ರಯತ್ನ ಶ್ಲಾಘನೀಯ. ಒಂದೊಂದು ಭಾಗದಲ್ಲಿ ಇಂತಹ ಒಬ್ಬೊಬ್ಬರು ಇದ್ದರೂ ಜವಾರಿ ತಳಿಯ ಕೃಷಿ ಪುನರ್ಜನ್ಮ ಪಡೆಯುಯುವುದು ಖಂಡಿತ.
ಇವರ ಕೃಷಿ ಮಾಹಿತಿಗಾಗಿ: ಸರೋಜ ನಾಗೇಂದ್ರಪ್ಪ ಪಾಟೀಲ್‌
ನಿಟ್ಟೂರು
ಅಂಚೆ: ನಿಟ್ಟೂರು
ಹರಿಹರ, ದಾವಣಗೆರೆ
ದೂರವಾಣಿ: 08192293014
ನಾಗರಾಜ ಮತ್ತಿಗಾರ

Saturday, November 29, 2008

ಮೂಷಿಕ ಸಂತತಿಯ ತಿಥಿ ವಿಧಾನ!



ಕೃಷಿಕರಿಗೆ ಸಾಲ ಕೊಟ್ಟವರ ಕಾಟ ಒಂದೆಡೆಯಾದರೆ ಅದು ಹಣಕಾಸು ವ್ಯವಹಾರ ಎನ್ನೋಣ. ಅತ್ತ ಕೃಷಿ ವ್ಯವಹಾರದಲ್ಲೂ ಕಾಟ ಒಂದೇ ಎರಡೇ. ಕಾಡುಕೋಣ, ವಾನರ ಸೈನ್ಯ, ಆನೆ, ಹಂದಿ...... ದುರಂತವೆಂದರೆ, ಇವುಗಳಿಂದ ಬೆಳೆ ರಕ್ಷಿಸಿಕೊಳ್ಳಲು ಪ್ರಯತ್ನಿಸಬಹುದೇ ವಿನಃ ಕೊಲ್ಲುವುದು ಕಾನೂನುಬಾಹಿರ. ಅವಕ್ಕೆ ಬೇರೆ ವ್ಯವಸ್ಥೆ ರೈತರಿಗೆ ಸಾಧ್ಯವಿಲ್ಲ, ಸರ್ಕಾರ ಮುಂದಾಗುವುದಿಲ್ಲ. ಆದರೆ ಹೆಗ್ಗಣ, ಇಲಿಯಂತ ಮೂಷಿಕ ಸಂತತಿಗಳನ್ನು ಬಲಿ ಹಾಕಲು ಸದ್ಯ ಕಾನೂನು ಕೈ ಕಟ್ಟುವುದಿಲ್ಲ. ಇಲ್ಲಿ ಮೂಷಿಕ ಪರಿವಾರದ ಕಾಟ ನಿವಾರಣೆಗೆ ಕೆಲವು ಚಾಲಾಕಿ ಸೂತ್ರಗಳನ್ನು ಸಂಗ್ರಹಿಸಲಾಗಿದೆ.
ಹೆಗ್ಗಣವನ್ನು ಇತಿಶ್ರೀ ಮಾಡಲು ನಾವು ಮಾರುಕಟ್ಟೆಯಿಂದ ನಾನಾ ತರದ ವಿಷದ ಬಿಸ್ಕೇಟ್‌, ಮುಲಾಮು, ಪುಡಿಗಳನ್ನು ತರುತ್ತೇವೆ. ಬಹುಷಃ ನೀರು ಕುಡಿದೋ, ಇನ್ನೇನೋ ತಿಂದೋ ಹಲವು ಹೆಗ್ಗಣಗಳು ಬಚಾಯಿಸಿಬಿಡುವುದನ್ನು ನೋಡಿದ್ದೇವೆ. ಆ ಲೆಕ್ಕದಲ್ಲಿ, ಥಿಮೆಟ್‌ ವಿಷದ ಪುಡಿ ತುಂಬಾ ಪರಿಣಾಮಕಾರಿ.
ಮಾರುಕಟ್ಟೆಯಲ್ಲಿ ಕಿಲೋಗ್ರಾಂ ಪ್ಯಾಕ್‌ನಲ್ಲಿ ಥಿಮೆಟ್‌ ಸಿಗುತ್ತದೆ. 50 ರೂ. ಆಜುಬಾಜಿನ ಬೆಲೆ. ಇದರ ಹತ್ತೆಂಟು ಕಾಳುಗಳನ್ನು ಒಂದು ಮುಷ್ಟಿ ಅಕ್ಕಿ ಅಥವಾ ಗೋಧಿ ಹಿಟ್ಟಿನಲ್ಲಿ ಕಲಸಿ ಇಡಿ. ಇದನ್ನು ತಿಂದ ಮೇಲೆ ಮತ್ತೆ ಹೆಗ್ಗಣ ಬದುಕುಳಿಯುವ ಸಾಧ್ಯತೆ ಇಲ್ಲ. ತಿನ್ನುವ ಆಮಿಷದಲ್ಲಿ ಹಿಟ್ಟಿನ ಬದಲು ಇನ್ನಾವುದಾದರೂ ಆದೀತು. ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನು ಮೇಲೆ ಹಾಕಿದರೂ ಸರಿಯೇ. ಥಿಮೆಟ್‌ ಪ್ಯಾಕ್‌ನ್ನು ಗಾಳಿಯಾಡಲು ಬಿಟ್ಟಲ್ಲಿ ಅದರ ಸಾಮರ್ಥ್ಯ ಕುಸಿಯುತ್ತದೆ. ಸ್ವಲ್ಪವನ್ನು ಪ್ರತ್ಯೇಕವಾಗಿ ತೆಗೆದಿರಿಸಿ, ಉಳಿದಂತೆ ಪ್ಯಾಕ್‌ನ್ನು ಸೀಲ್‌ ಮಾಡಿಡುವುದು ಕ್ಷೇಮ.
ಮನೆಯಲ್ಲಿ ಇಲಿ ಕಾಟ ಜಾಸ್ತಿಯಾದಾಗ ನೆನಪಾಗುವುದು ಇಲಿ ಬೋನು. ಧಾವಂತದಿಂದ ಮಾರುಕಟ್ಟೆಗೆ ಹೋಗಿ ತರುತ್ತೇವೆ. ಅದಕ್ಕೂ 50ರೂ ಬೆಲೆ. ಒಂದು, ಅಬ್ಬಬ್ಬಾ ಎಂದರೆ ಎರಡು ಇಲಿ ಸಿಕ್ಕುಬಿದ್ದ ನಂತರವೇ ಸಮಸ್ಯೆ ಶುರು. ಆಮೇಲೆ ಮಾತ್ರ ಒಂದೇ ಒಂದು ಇಲಿ ಬೋನಿಗೆ ಬಿದ್ದರೆ ಕೇಳಿ. ಈಗ ಕೈಲಾಗದೆ ಮೈ ಪರಚಿಕೊಳ್ಳುವಂತ ಸಿಟ್ಟು. ನೋಡಿ, ಈ ಇಲಿಗಳೂ ಎಷ್ಟು ಚುರುಕು? ಅವಕ್ಕೂ ಬೋನಿನ ಕರಾಮತ್ತು ಗೊತ್ತಾಗಿದೆ ಎಂದು ಗೊಣಗುತ್ತೇವೆ. ಇದು ಅರ್ಧಸತ್ಯ ಮಾತ್ರ.
ನಿಜ, ಇಲಿಗೆ ಬೋನು ಅಪಾಯ ಅಂತ ಗೊತ್ತಾಗಿದೆ. ಅದು ಅದರ ಜಾಣ್ಮೆಯಲ್ಲ. ಕೊನೆಯ ಬಾರಿ ಬಿದ್ದ ಇಲಿಯ ಒಳ್ಳೆತನ! ಏನಾಗುತ್ತಪ್ಪಾಂದ್ರೆ, ಬೋನಿಗೆ ಬಿದ್ದ ಇಲಿ ವಿಶಿಷ್ಟ ಹಾರ್ಮೋನ್‌ ಒಂದನ್ನು ಹೊರಚೆಲ್ಲುತ್ತದೆ. ಅದು ಉಳಿದ ಇಲಿಗಳಿಗೆ `ಇಲ್ಲಿದೆ ಅಪಾಯ' ಎಂಬ ಸೂಚನೆ ನೀಡುತ್ತದಾದ್ದರಿಂದ ಉಳಿದವು ಬೋಂಡ, ಚಕ್ಕುಲಿ ಇಟ್ಟರೂ ಅತ್ತ ತಲೆ ಹಾಕವು!
ಇದಕ್ಕೊಂದು ಪರಿಹಾರವಿದೆ. ಒಂದು ಚಮಚ ಸುಣ್ಣ, ಅರ್ಧ ಚಮಚ ಅರಿಸಿನದ ಪುಡಿ ತೆಗೆದುಕೊಳ್ಳಿ. ಅವೆರಡನ್ನು ಬಕೆಟ್‌ ನೀರಿನಲ್ಲಿ ಕದಡಿ. ಕೆಂಪು ನೀರು ಸೃಷ್ಟಿಯಾಗುತ್ತದೆ. ಇದರಲ್ಲಿ ಖಾಲಿ ಇಲಿ ಬೋನನ್ನು ಚೆನ್ನಾಗಿ ತೊಳೆಯಿರಿ. ಮತ್ತೆ ರಾತ್ರಿ ಬೋನು ಹೂಡಿ. ಇಲಿ ಪಿಗ್ಗಿ ಬಿದ್ದು ಬೋನು ಸೇರುತ್ತದೆ! ಸುಣ್ಣ, ಅರಿಸಿನದ ಟ್ರೀಟ್‌ಮೆಂಟ್‌ನಿಂದ ಹಾರ್ಮೋನ್‌ ವಾಸನೆ ಕಾಣೆಯಾಗುವುದೇ ಇದಕ್ಕೆ ಕಾರಣ! ಪ್ರತಿ ಬಾರಿ ಇಲಿ ಬಿದ್ದ ನಂತರವೂ ಬೋನಿಗೆ ಈ ಸ್ನಾನವನ್ನು ಕಡ್ಡಾಯವಾಗಿ ಮಾಡಿಸಬೇಕು.
ಒಂದು ವಿಷಯ ಸ್ವಾರಸ್ಯಕರ. ಹೆಗ್ಗಣ, ಇಲಿಗಳು ಎಲ್ಲ ಕಾಲದಲ್ಲಿ ಒಂದೇ ಮಾದರಿಯ ಆಹಾರವನ್ನು ಇಷ್ಟಪಡುವುದಿಲ್ಲ ಎಂಬ ಅನುಮಾನವಿದೆ. ಕೆಲವು ಸಮಯ ಅವು ಹಿಟ್ಟುಗಳನ್ನು ಮೂಸಿಯೂ ನೋಡುವುದಿಲ್ಲ. ಆಗ ಕರಿದ, ಜಿಡ್ಡಿನ ಪದಾರ್ಥಗಳನ್ನು ಪ್ರಯೋಗಿಸಬೇಕಾಗುತ್ತದೆ. ಏಕೆ ಹೀಗಾಗುತ್ತದೆ ಎಂಬುದನ್ನು ಜೀವ ವಿಜ್ಞಾನಿಗಳು ವಿವರಿಸಬೇಕು. ಅಷ್ಟೇಕೆ, ವರ್ಷದ ಕೆಲವು ವೇಳೆ ಈ ಮೂಷಿಕಗಳು ಯಾವುದೇ ಆಹಾರವನ್ನೂ ತಿನ್ನುವುದಿಲ್ಲ ಎಂಬ ಅಂದಾಜಿದೆ. ಹೌದೆ?
ಅದೇನೆ ಇರಲಿ, ಮಳೆಗಾಲದಲ್ಲಿ ಹೆಗ್ಗಣ, ಇಲಿಗಳು ನಾವಿಡುವ ಆಮಿಷಗಳ ಆಕರ್ಷಣೆಗೊಳಗಾಗುವುದು ಹೆಚ್ಚು. ಯುದ್ಧ ಸಾರಲು ಇದೇ ಸರಿಯಾದ ಸಮಯ!
-ಮಾವೆಂಸ

Tuesday, November 25, 2008

ಸಾವಯವ ದೃಢೀಕರಣ ಈಗ ರೈತರ ಕೈಹಿಡಿತದಲ್ಲಿ ........

ನಮ್ಮ ಬ್ಲಾಗ್‌ನ್ನು ನಿರಂತರವಾಗಿ ಗಮನಿಸುತ್ತಿರುವ ಗಂಭೀರ ಕೃಷಿ ಪತ್ರಿಕೆ ‘ಸಹಜ ಸಾಗುವಳಿ’ಯ ಸಂಪಾದಕಿ ಗಾಯತ್ರಿಯವರು ಒಂದು ಚರ್ಚೆ ನಡೆಯಲಿ ಎಂಬ ಆಶಯದಿಂದ ಈ ಬರಹ ಕಳುಹಿಸಿದ್ದಾರೆ. ಓದುಗ ಮಿತ್ರರಲ್ಲಿ ವಿಮರ್ಶಿಸುವ ತವಕ ಹುಟ್ಟುತ್ತದೆಂಬುದು ‘ರೈತಾಪಿ’ ನಿರೀಕ್ಷೆ.......

ಸಾವಯವ ಲೇಬಲಿಂಗ್ ಸ್ಕೀಮ್(ಸಹಭಾಗಿತ್ವದ ಖಾತ್ರಿ ಪದ್ಧತಿ)ನಿಂದಾಗಿ ........

ಸಾವಯವ ಕೃಷಿಯೇ ನಮ್ಮ ಭವಿಷ್ಯತ್ತಿನ ಕೃಷಿ ಎಂದರೆ ತಪ್ಪಾಗದು. ಕೃಷಿ ಉತ್ಪಾದನೆಯ ಅತ್ಯುತ್ತಮ ಸುಸ್ಥಿರ ವಿಧಾನವಾಗಿ ಇದು ರೂಪಿತವಾಗುತ್ತಿದೆ. ನಮ್ಮಲ್ಲಿ ಸಾವಯವ ಕೃಷಿಗೆ ಪರಿವರ್ತಿತವಾಗಿರುವ ಪ್ರದೇಶ ಅಷ್ಟೇನೂ ಹೆಚ್ಚಿಲ್ಲದೆ ಹೋದರೂ ಪರ್ಯಾಯ ಪದ್ಧತಿಯಾಗಿ ಇದು ರೈತರ ಮತ್ತು ಗ್ರಾಹಕರ ಹೃದಯಕ್ಕೆ ಹತ್ತಿರವಾಗುವಲ್ಲಿ ಸಮರ್ಥವಾಗಿದೆ. ಇದರ ಪರಿಣಾಮವಾಗಿ ಸಾವಯವ ಉತ್ಪನ್ನಗಳ ಉತ್ಪಾದನೆ ಹೆಚ್ಚುತ್ತಿದೆ ಹಾಗೆಯೇ ಗ್ರಾಹಕರಲ್ಲಿ ಅರಿವು ಕೂಡಾ ಹೆಚ್ಚಾಗುತ್ತಿದೆ. 
                                                                                                     
ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವಂತೆ, ಸಾವಯವ ಗುಂಪುಗಳು ಮತ್ತು  ಸಾವಯವ ಉತ್ಪನ್ನಗಳ ಗ್ರಾಹಕರಿಗೆ ದೃಢೀಕರಣದ ಅವಶ್ಯಕತೆ ಕಂಡುಬರುತ್ತಿರುವುದು ಸಹಜ. ಆದರೆ ಈ ಸದ್ಯ ಇರುವ ಸಾವಯವ ಉತ್ಪನ್ನಗಳ ದೃಢೀಕರಣ ಪದ್ಧತಿಯು ಸಾವಯವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಯಸುವ ದೇಶಗಳ ಅವಶ್ಯಕತೆಗಳನ್ನು ಪೂರೈಸುವಲ್ಲಿ ನಿರತವಾಗಿದ್ದು ರಫ್ತು ಮಾರುಕಟ್ಟೆಯನ್ನೇ ಗುರಿಯಾಗಿರಿಸಿದೆ. ಈ ದೃಢೀಕರಣ ಏಜೆನ್ಸಿಗಳ ಕ್ರಮಗಳು ಮತ್ತು ಪದ್ಧತಿಗಳು ತ್ರಾಸದಾಯಕ ಮಾತ್ರವಲ್ಲ, ಅನೇಕ ಸಲ ಪೋಲೀಸ್ ತಪಾಸಣೆಯ ಸ್ವರೂಪ ಪಡೆದುಕೊಂಡು ಬಿಡುತ್ತವೆ. ಇನ್ನು ಇನ್ಸ್ಪೆಕ್ಷನ್‌ನ ಗುಣಮಟ್ಟದ ಬಗ್ಗೆ ಹೇಳದಿರುವುದೇ ಒಳಿತು(ಇದಕ್ಕೆ ಕೆಲ ಅಪವಾದಗಳು ಇಲ್ಲವೆಂದಲ್ಲ). 
ಈ ಏಜೆನ್ಸಿಗಳಲ್ಲಿ ’ಇನ್ಸ್ಪೆಕ್ಷನ್’ ಪ್ರಕ್ರಿಯೆಗೆ ಅಗತ್ಯವಾದ ಮನೋಧರ್ಮ, ಕಾಳಜಿಗಳು ಬಹುತೇಕ ಸಮಯದಲ್ಲಿ ಕಾಣೆಯಾಗಿದ್ದು ಇವರಿಗೆ  ಸಾಮಾನ್ಯವಾಗಿ ಸಾವಯವ ಕೃಷಿಯ ಆಳ ಅರಿವಾಗಲೀ, ಅನುಭವವಾಗಲೇ ಇರುವುದಿಲ್ಲ ಎಂದು ರೈತರಿಗೆ ಅನಿಸಿದೆ. ಇಲ್ಲಿ ಇನ್ಸ್ಪೆಕ್ಷನ್ ಮತ್ತು ದೃಢೀಕರಣ ವಿಪರೀತ ದುಬಾರಿಯಾಗಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರು ಹತ್ತಿರ ಕೂಡಾ ಸುಳಿಯಲಾರರು. ಇತ್ತೀಚಿನ ವರ್ಷಗಳಲ್ಲಿ ಕೆಲ ಏಜೆನ್ಸಿಗಳು ಸಣ್ಣ ರೈತರ ಗುಂಪುಗಳಿಗೆ ತೆರಿಗೆ ವಿನಾಯತಿ ಕೊಟ್ಟು ದೃಢೀಕರಣ ಮಾಡಿಕೊಡುವುದಾಗಿ ಹೇಳಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ ಈ ಪ್ರಕ್ರಿಯೆ ಅಷ್ಟೆ ಪ್ರಮಾಣದ ಬರವಣಿಗೆಯ ಕೆಲಸ, ದಾಖಲಾತಿ ನಿರ್ವಹಣೆಯ ಕೆಲಸವನ್ನು ಮತ್ತು ಅದೇ ನೀತಿ-ನಿಯಮಗಳನ್ನು ಒಳಗೊಂಡಿರುತ್ತದೆ. ಇದು ನಿಜಾರ್ಥದಲ್ಲಿ ರೈತರಿಗೆ ಮಿಗುತಾಯವನ್ನೇನೂ ಮಾಡುವುದಿಲ್ಲ. ಆದರೆ ಇಲ್ಲಿ ಖರ್ಚು ಕಣ್ಣಿಗೆ ಕಾಣದಂತಿದ್ದು ಅಷ್ಟೇ ಅಗೋಚರವಾಗಿಯೇ ರೈತರಿಗೆ ರವಾನೆಯಾಗಿರುತ್ತದೆ. 

ಪ್ರಕೃತಿಯ ಸ್ವಾಭಾವಿಕ ಉತ್ಪನ್ನಕ್ಕೆ ದೃಢೀಕರಣವೇ?!
ಅನೇಕ ಉದ್ಧಾಮ ಸಾವಯವ ರೈತರು, ಗುಂಪುಗಳು ಈ ಮೂರನೆಯವರ ದೃಢೀಕರಣ ( third party certification) ಎನ್ನುವ ಕಲ್ಪನೆಯನ್ನೇ ಇಡಿಯಾಗಿ ತಿರಸ್ಕರಿಸಿದ್ದಾರೆ. ಇದು ದುಬಾರಿಯೆನ್ನುವ ಕಾರಣಕ್ಕೆ ಮಾತ್ರವಲ್ಲ, ಇದರಲ್ಲಿ ನೀತಿ-ನೇಮಕ್ಕೆ, ಔಚಿತ್ಯಕ್ಕೆ ಸಂಬಂಧಿಸಿದ ಕೆಲ ಮೂಲಭೂತ ಪ್ರಶ್ನೆಗಳೇ ಇರುವುದನ್ನು ಎತ್ತಿ ತೋರಿಸಿದ್ದಾರೆ. ಪ್ರಕೃತಿಯ ಸ್ವಾಭಾವಿಕ ಉತ್ಪನ್ನಕ್ಕೆ ದೃಢೀಕರಣವೇ? ಎಂದು ಚಕಿತರೂ, ಕುಪಿತರೂ ಆಗಿ ಪ್ರಶ್ನಿಸಿದ್ದಾರೆ. ಯಾವುದಾದರೂ ಉತ್ಪನ್ನಕ್ಕೆ ದೃಢೀಕರಣ ಬೇಕಾಗಿದ್ದೇ ಆದರೆ, ಅದು ಅಗತ್ಯವಾಗಿ ರಾಸಾಯನಿಕವಾಗಿ ಬೆಳೆದ ಉತ್ಪನ್ನಕ್ಕೇ ಹೊರತು ಸಾವಯವ ಉತ್ಪನ್ನಕ್ಕಲ್ಲ ಎಂಬುದು ಅವರ ವಾದ. ರಸಗೊಬ್ಬರ, ವಿಷ ಬಳಸಿ ಬೆಳೆದ ಈ ಉತ್ಪನ್ನಗಳು ಈ ಭೂಮಿ ಮೇಲಿನ ಮತ್ತು ಅದರಾಚೆಗಿನ ಸಕಲ ಜೀವಜಂತುಗಳಿಗೂ ಅಪಾಯ ತರಬಲ್ಲುವಾದ್ದರಿಂದ ಇವುಗಳಿಗೆ ಲೇಬಲಿಂಗ್ ಮಾಡಿ ಪ್ರತ್ಯೇಕವಾಗಿಡಬೇಕು(ತಂಬಾಕಿನ ಉತ್ಪನ್ನಗಳಿಗೆ ಮಾಡಿದ ಹಾಗೆ)  ಎಂದು ಅವರು ಒತ್ತಾಯಿಸಿಸುತ್ತಾರೆ. ಹೀಗೆ  ಒಬ್ಬ ಸ್ವಾವಲಂಭೀ ರೈತ ತಮ್ಮ ಸರ್ವಸ್ವತಂತ್ರತೆಯ ಮೇಲೆ ಆಕ್ರಮಣ ಮಾಡುವ/ ಧಕ್ಕೆ ತರುವ ಯಾವುದೇ ಪದ್ಧತಿಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. 
                    
ಇನ್ನೊಂದು ಗುಂಪಿನ ಸಾವಯವ ರೈತರು ಕೂಡ ಕೇಂದ್ರೀಕೃತ ಮೂರನೆಯವರ ದೃಢೀಕರಣ ವ್ಯವಸ್ಥೆಯನ್ನು ತಿರಸ್ಕರಿಸುತ್ತಾರೆ. ತಮ್ಮ ಅಗಾಧ ಶ್ರಮದ ಫಲದ ಮತ್ತು ಸಾವಯವ ಚಳುವಳಿಯ ಹಿಂದಿನ ಮೂಲಭೂತ ತತ್ವ ಮತ್ತು ಮೌಲ್ಯವನ್ನು ಗಣನೆಗೆ ತಂದುಕೊಳ್ಳದೆ  ಇದು ತಮ್ಮ ಕೆಲಸವಷ್ಟೇ ಎಂಬ ದೃಷ್ಟಿಯಿಂದ ನೋಡುವ ಸಂಪೂರ್ಣ ಅಪರಿಚಿತರನ್ನು ಒಳಗೊಂಡ ಈ ಪದ್ಧತಿಯನ್ನು ಇವರು ನಿರಾಕರಿಸುತ್ತಾರೆ. ಸಾವಯವ ಉತ್ಪಾದನಾ ಪ್ರಕ್ರಿಯೆಯ ಅರಿವಿಲ್ಲದ ಇಂತಹವರ ದೃಢೀಕರಣವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಇವರು. ಆದಾಗ್ಯೂ, ಇವರಿಗೆ ತಮ್ಮ ಸಾವಯವ ಚಳುವಳಿಯ/ ಉತ್ಪನ್ನದ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ಯಾವುದೋ ಒಂದು ರೀತಿಯ ಖಾತ್ರಿ ಪದ್ಧತಿಯ ಅವಶ್ಯಕತೆ ಇದೆ ಎಂದು ಅನಿಸಿದೆ. ಈ ದೇಶದಲ್ಲಿ ಕೃಷಿ ಉತ್ಪಾದನಾ ವ್ಯವಸ್ಥೆಯಲ್ಲಿ ಯಾವುದೇ ನಿಯಂತ್ರಕ ಸೂತ್ರಗಳನ್ನು ರೂಪಿಸಲು ಈ ವ್ಯವಸ್ಥೆ ಸೋತಿರುವಾಗ ನಮಗೆ ಈ ಬಗೆಯ ದೃಢೀಕರಣ ಅವಶ್ಯಕವಾಗುತ್ತದೆ ಎಂಬುದು ಇವರ ಅಂಬೋಣ. ಇವರ ಆತಂಕ ಸರಿಯೇ. ಏಕೆಂದರೆ ಇಂದು ಮಾರುಕಟ್ಟೆಯಲ್ಲಿ ನೈಸರ್ಗಿಕವಾಗಿ ಬೆಳೆದ, ರಾಸಾಯನಿಕ ಮುಕ್ತ, ಅಥವಾ ಕ್ರಿಮಿನಾಶಕ ಮುಕ್ತ ಎಂದೆಲ್ಲ ಲೇಬಲ್ ಹಚ್ಚಿಕೊಂಡಿರುವ ಪದಾರ್ಥಗಳು ಸಾಕಷ್ಟಿವೆ. ಆದರೆ ಅವು ನಿಜದಲ್ಲಿ ಸಾವಯವವಾಗಿ ಬೆಳೆದ ಉತ್ಪನ್ನಗಳಲ್ಲ, ಅವುಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸಿದ ರಾಸಾಯನಿಕಗಳು ನಿಷೇಧಕ್ಕೊಳಗಾಗದ ರಾಸಾಯನಿಕಗಳಿರಬಹುದು, ಅಥವಾ ಅವರ ಉತ್ಪನ್ನಗಳಲ್ಲಿ ವಿಷ ಶೇಷವು ’ಒಪ್ಪಿತ’ವಾದ ಮಟ್ಟದಲ್ಲಿ ಇರಬಹುದು.

ಹೀಗಾಗಿ ಈ ಗುಂಪಿನ ಸಾವಯವ ರೈತರು ಈಗ ಇರುವ ದೃಢೀಕರಣ ಪದ್ಧತಿಗಿಂತ ಮೂಲಭೂತವಾಗಿ ಭಿನ್ನವಾದ, ಸಹಭಾಗಿತ್ವ ಇರುವ, ರೈತರನ್ನು ಸಾವಯವವೋ ಅಲ್ಲವೋ ಎಂದು ತೀರ್ಮಾನಿಸುವಲ್ಲಿ ಪ್ರಾಥಮಿಕ ಉತ್ಪಾದಕರು(ಸಾವಯವ ರೈತರು) ಪ್ರಮುಖ ಪಾತ್ರ ಹೊಂದಿರುವಂತಹ ಸಾವಯವ ಖಾತ್ರಿ ಪದ್ಧತಿಯೊಂದನ್ನು ಎದುರುನೋಡತೊಡಗಿದರು. ಹೀಗೆ ರೈತರದ್ದೇ ಆದಂತಹ ಖಾತ್ರಿ ಪದ್ಧತಿಯೊಂದಕ್ಕಾಗಿ ನಿರಂತರ ಹುಡುಕಾಟ ಮತ್ತು ಹೋರಾಟದ ಫಲವಾಗಿ ರೂಪುತಳೆದದ್ದು ಸಹಭಾಗಿತ್ವದ ಖಾತ್ರಿ ಪದ್ಧತಿ(Participatory Guarantee system)
ಸಹಭಾಗಿತ್ವದ ಖಾತ್ರಿ ಪದ್ಧತಿ  ಎಂದರೆ ಏನು? 
ಸಹಭಾಗಿತ್ವ ಖಾತ್ರಿ ಪದ್ಧತಿಯಲ್ಲಿ ಕೆಲ ನಿಯಮಗಳನ್ನು ಮತ್ತು ವ್ಯವಸ್ಥೆಯನ್ನು ಅನುಸರಿಸಿ ರೈತರೇ ತಮ್ಮ ಉತ್ಪನ್ನ/ಹೊಲಗಳಿಗೆ ದೃಢೀಕರಣವನ್ನು ಕೊಡುತ್ತಾರೆ. NPOP ಮತ್ತು  IFOAM ಸೂಚಿಸಿರುವ ಸಾವಯವ ಗುಣಮಟ್ಟವನ್ನು ಸಹಭಾಗಿತ್ವದ ಖಾತ್ರಿ ಪದ್ಧತಿ ಅನುಸರಿಸುತ್ತದೆ. ಸಾವಯವ ಖಾತ್ರಿಯನ್ನು ಹೊಂದಬಯಸುವ ರೈತರು /ರೈತ ಗುಂಪುಗಳು ಈ ಮೂಲಭೂತ ಗುಣಮಟ್ಟಗಳನ್ನು ಪಾಲಿಸಬೇಕು ಮತ್ತು ತಾವು ಅನುಸರಿಸುವ ಪದ್ಧತಿ ಮತ್ತು ತಮ್ಮ ಹೊಲದ ಬಗ್ಗೆ ಕನಿಷ್ಟ ದಾಖಲಾತಿಯನ್ನು ಇಡಬೇಕು. 
ಪಿಜಿಎಸ್ ದೃಢೀಕರಣದ ಪದ್ಧತಿಯ ಉಪಯೋಗ ಪಡೆಯಲು ಒಂದು ಅಥವಾ ಹಲವು ಗ್ರಾಮಗಳ ರೈತರು ಒಂದಾಗಿ ಒಂದು ಸ್ಥಳೀಯ ಗುಂಪು ರಚಿಸಿಕೊಳ್ಳಬೇಕು. ಒಮ್ಮೆ ಸ್ಥಳೀಯ ಗುಂಪು(ಕನಿಷ್ಟ ೫ ಮಂದಿ) ರಚನೆಯಾಯಿತೆಂದರೆ ಅದು ಕೆಲ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ. ಸರಳ ದಾಖಲಾತಿಗಳನ್ನು ನಿರ್ವಹಿಸುವುದು, ಗುಂಪಿನ ಕನಿಷ್ಟ ಮೂರು ಮಂದಿ ಸೇರಿ (ನಿಪುಣ ಗುಂಪು) ಹೊಲಗಳಿಗೆ ಭೇಟಿ ಕೊಡುವುದು, ಅನುಮೋದನಾ ಹೇಳಿಕೆಯನ್ನು ತಯಾರಿಸಿ ಗುಂಪಿನ ಸದಸ್ಯರಿಗೆ ಕೊಡುವುದು ಇತ್ಯಾದಿ ಕೆಲಸಗಳನ್ನು ಮಾಡಬೇಕು. ಸ್ಥಳೀಯ ಗುಂಪು ಈ ದಾಖಲೆಯನ್ನು ಪರಿಶೀಲಿಸಿ /ಪರಿಷ್ಕರಿಸಿ/ಸಂಸ್ಕರಿಸಿ ತಮ್ಮ ತೀರ್ಮಾನವನ್ನು ಪಿಜಿಎಸ್ ಪ್ರಾದೇಶಿಕ ಕೌನ್ಸಿಲ್‌ಗೆ ಮುಂದಿನ ಪರಿಶೀಲನೆ ಮತ್ತು ಅವರಿಗೆ ಸ್ಪಷ್ಟನೆಗಳೇನಾದರೂ ಬೇಕಿದ್ದರೆ ಅದಕ್ಕಾಗಿ ಕಳುಹಿಸಿಕೊಡುತ್ತದೆ. ಪಿಜಿಎಸ್ ಪ್ರಾದೇಶಿಕ ಕೌನ್ಸಿಲ್ ಅದನ್ನು ತಾನು ಪರಿಶೀಲಿಸಿದ ನಂತರ ಸ್ಥಳೀಯ ಗುಂಪಿಗೆ ಎಂಟು ಸಂಖ್ಯೆಯ ಕೋಡನ್ನು ನೀಡುತ್ತದೆ. ಮತ್ತು ಪಿಜಿಎಸ್ ಇಂಡಿಯಾ ಕೌನ್ಸಿಲ್‌ಗೆ ಈ ಸ್ಥಳೀಯ ಗುಂಪಿಗೆ ಪಿಜಿಎಸ್ ಸದಸ್ಯ ಗುಂಪೆಂದು ದೃಢೀಕರಣ ನೀಡುವಂತೆ ಶಿಫಾರಸ್ಸು ಮಾಡುತ್ತದೆ. ಪ್ರಾದೇಶಿಕ ಕೌನ್ಸಿಲ್ ಸ್ಥಳೀಯ ಗುಂಪುಗಳಿಗೆ ಸೇರಿದ ಎಲ್ಲ ಡ್ಯಾಟಾವನ್ನು ನಿರ್ವಹಿಸುತ್ತದೆ- ಕಾಗದದಲ್ಲಿ ಮತ್ತು ಕಂಪ್ಯೂಟರ್‌ನಲ್ಲಿ. ಇದರಲ್ಲಿ  ಸ್ಥಳೀಯ ಗುಂಪಿನ ಸಂಚಾಲಕರು, ಸದಸ್ಯರು, ಅವರ ಜಮೀನಿನ, ಬೆಳೆಗಳ ವಿವರ ಇದೆಲ್ಲ ಇರುತ್ತದೆ. 
ಸ್ಥಳೀಯ ಗುಂಪುಗಳನ್ನು ಹೇಗೆ ರಚಿಸಬೇಕು ಎಂಬ ವಿವರವನ್ನು ರಾಜ್ಯ ಸೆಕ್ರೆಟೆರಿಯೆಟ್- ಒ.ಎಫ್.ಎ.ಐ, ನಂ.೨೨, ಮೈಕೆಲ್ ಪಾಳ್ಯ, ಹೊಸತಿಪ್ಪಸಂದ್ರ ಅಂಚೆ, ಬೆಂಗಳೂರು- ೫೬೦ ೦೭೫ ಇವರು ಹೊರತಂದಿರುವ ಪಿಜಿಎಸ್ ದಾಖಲೆಯ ಕನ್ನಡ ಅವತರಣಿಕೆಯಲ್ಲಿ ಕೊಡಲಾಗಿದೆ. 
ಸಾವಯವ ದೃಢೀಕರಣದಲ್ಲಿ ಹೊಸ ಅಧ್ಯಾಯ ತೆರೆಯಬಲ್ಲ ಪಿ.ಜಿ.ಎಸ್ 

ಪಿಜಿಎಸ್ ಪದ್ಧತಿಯಲ್ಲಿ ಗುಣಮಟ್ಟ ಮತ್ತು ನೀತಿ-ನಿಯಮಗಳು ಭಿನ್ನವಾಗಿವೆ ಎಂಬುದು ಮಾತ್ರ ಇದರ ಮಹತ್ವವಲ್ಲ. ವಿಪರೀತ ಬರೆದಿಟ್ಟ ದಾಖಲೆಗಳ ಅಗತ್ಯವನ್ನು ಇದು ಖಂಡಿತವಾಗಿಯೂ ಕಡಿತಗೊಳಿಸುತ್ತದೆ ನಿಜ. ಆದರೆ ಇದರ ಹೆಗ್ಗಳಿಕೆ ಇರುವುದು ಇದು ಹೇಗೆ ಕಾರ್ಯಾಚರಣೆಗೊಳ್ಳುತ್ತಿದೆ ಎಂಬ ಬಗ್ಗೆ. 
ಇಲ್ಲಿನ ದೃಢೀಕರಣ ಪ್ರಕ್ರಿಯೆಯಲ್ಲಿ ಸಾವಯವ ರೈತರು ದೃಢೀಕರಣ ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದುತ್ತಾರೆ. ತಮ್ಮ ಹೊಲಕ್ಕೆ ಸಬಂಧಿಸಿದ ಎಲ್ಲ ಆಗುಹೋಗುಗಳ ಬಗ್ಯೂ ಅವರಿಗೆ ಅರಿವಿರಿತ್ತದೆ. ಮತ್ತು ತಮ್ಮ ಹೊಲಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನಕ್ಕೆ ಅವರು ಭಾಗಿಗಳಾಗಿರುತ್ತಾರೆ. ಅಂದರೆ, ಪಿಜಿಎಸ್ ಪದ್ಧತಿಯು ದೃಢೀಕರಣದ ಕ್ರಮವನ್ನು ಸರಳಗೊಳಿಸುವುದು ಮಾತ್ರವಲ್ಲ, ದೃಢೀಕರಣ ಮಾಡುವುದು ರೈತರ ಕೈಯಲ್ಲಿರುವುದನ್ನು ಖಾತ್ರಿಗೊಳಿಸುತ್ತದೆ. ಈಗಿರುವ ದೃಢೀಕರಣ ಪದ್ಧತಿಗಿಂತ ಇದು ಭಿನ್ನವಾಗುವ ಇನ್ನೊಂದು ರೀತಿಯೆಂದರೆ, ಪಿಜಿಎಸ್ ಅನ್ನು ರೈತರೇ ಅನುಷ್ಟಾನಗೊಳಿಸುವುದು ಮಾತ್ರವಲ್ಲ, ಇದು ರೈತ-ರೈತರ ನಡುವಿನ ನಂಬಿಕೆಯನ್ನು ಆಧರಿಸಿರುತ್ತದೆ ಮತ್ತು ಸ್ಥಳೀಯ ಗುಂಪಿನ ಸದಸ್ಯರು ಹೊಂದಿರುವ ಆ ಪ್ರದೇಶದ ಕೃಷಿ ಪದ್ಧತಿಗಳ ಬಗೆಗಿನ ಆಳವಾದ ಜ್ನಾನವನ್ನು  ಅವಲಂಸಿರುತ್ತದೆ. 

ಯಶಸ್ವಿಯಾಗಿ ಮುಂತೆಗೆದುಕೊಂಡು ಹೋದದ್ದೇ ಆದರೆ ಸಾವಯವ ದೃಢೀಕರಣದಲ್ಲಿ ಪಿಜಿಎಸ್ ಒಂದು ಹೊಸ ಅಧ್ಯಾಯವನ್ನೇ ತೆರೆಯುತ್ತದೆ. ದೃಢೀಕರಣದ ಮೇಲೆ ರೈತರು ನಿಯಂತ್ರಣ ಹೊಂದುವ ಜತೆಗೆ ಪಿಜಿಎಸ್ ಸಾವಯವ ರೈತರ ನಡುವೆ ಪರಸ್ಪರ ವಿಚಾರ ವಿನಿಮಯ, ಕಲಿಕೆ ಮತ್ತು ಸಾಮಾಜಿಕ ಕೊಡುಕೊಳ್ಳುವಿಕೆಗೆ ಅವಶ್ಯವಾದ/ ಅನುಕೂಲವಾದ ವಾತಾವರಣವನ್ನು ಸೃಷ್ಟಿಸಿ ಕ್ರಿಯಾಶೀಲತೆಯನ್ನು ತಂದುಕೊಡುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಪಿಜಿಎಸ್ ವ್ಯವಸ್ಥೆಯು ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಆಚರಣೆಗಳ ರೀತಿ ರಿವಾಜಿಗೆ ತುಂಬಾ ಸರಿಯಾಗಿ ಹೊಂದಿಕೊಳ್ಳುತ್ತದೆ. 
                                        
ಯಾವುದೇ ಪ್ರಗತಿಪರ ವಿಚಾರಕ್ಕೆ ವಿರೋಧ ವ್ಯಕ್ತವಾಗುವಂತೆ, ಪಿಜಿಎಸ್ ಕೂಡ ಕೆಲವು ಹಿತಾಸಕ್ತಿ ಗುಂಪುಗಳಿಂದ ವಿರೋಧ ಎದುರಿಸಿತ್ತು/ಸುತ್ತಿದೆ. ಆದಾಗ್ಯೂ, ಅನೇಕಾನೇಕ ಕಾರ್ಯಕರ್ತರ, ನಾಗರಿಕ ಸಮಾಜ ಸಂಸ್ಥೆಗಳ ಪಟ್ಟುಬಿಡದ ಪ್ರಯತ್ನದಿಂದ ಈಗ IFOAM, FAOಗಳು ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿವೆ. ಪೆಟ್ರೋಲಿಯಂ ಮೂಲದ ಉತ್ಪನ್ನಗಳ ಮೇಲೆ ಅವಲಂಬನೆ ಹೊಂದಿರುವ ರಾಸಾಯನಿಕ ಕೃಷಿಗಿಂತ ಪಿಜಿಎಸ್ ಹೆಚ್ಚು ರೈತರನ್ನು ಸಾವಯವ ಕೃಷಿಗೆ ಒಳಗೊಳ್ಳಿಸುತ್ತದೆ ಎಂಬುದು ಮನವರಿಕೆಯಾಗಿದೆ. ಇದಕ್ಕೆ ಭಾರತ ಸರ್ಕಾರದಿಂದ ಅನುಮೋದನೆ ಪಡೆಯಲು ಪ್ರಯತ್ನ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲೇ ಇದು ಕೈಗೂಡುವ ನಿರೀಕ್ಷೆ ಇದೆ. 


-ಇಕ್ರಾ (ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್), ಬೆಂಗಳೂರು, ದೂರವಾಣಿ: ೨೫೨೮೩೩೭೦, ೨೫೨೧೩೧೦೪ 

Sunday, November 23, 2008

ನಾಟಿ ಭತ್ತ ರಕ್ಷಣೆಗೆ ಇಳಿದ ರೈತ


ವೈವಿ­ಧ್ಯ­ಮಯ ಭತ್ತದ ತಳಿ­ಗ­ಳನ್ನು ಬೆಳೆ­ಯು­ವು­ದ­ರಲ್ಲಿ ಭಾರತ ಜಗ­ತ್ಪ್ರ­ಸಿದ್ಧ, ಅಂದೊಂದು ದಿನ. ಪ್ರತಿ­ಯೊಂದು ಕಾಲಕ್ಕೆ, ಹಬ್ಬಕ್ಕೆ, ಬೆಳ­ಗ್ಗಿನ ತಿಂಡಿಗೆ, ಮಧ್ಯಾ­ಹ್ನದ ಊಟಕ್ಕೆ, ದೋಸೆಗೆ, ಪಾಯ­ಸಕ್ಕೆ ಹೀಗೆ ಒಂದೊಂದು ಕಾರ್ಯಕ್ಕೂ ಒಂದೊಂದು ಭತ್ತದ ತಳಿ­ಗಳು ನಮ್ಮ­ಲ್ಲಿ­ದ್ದವು. ಭಾರ­ತೀಯ ಆಹಾರ ನಿಗ­ಮದ 1965ರ ಅಂಕಿ-ಅಂ­ಶ­ಗಳ ಪ್ರಕಾರ ಕರ್ನಾ­ಟ­ಕ­ದ­ಲ್ಲಿಯೇ ಸುಮಾರು 244 ತಳಿ­ಗಳು ಇದ್ದವು. ಇದ­ರಲ್ಲಿ ಅತೀ ಸಣ್ಣ ಅಕ್ಕಿ 56, ಸಣ್ಣ ಅಕ್ಕಿ 38, ಮಧ್ಯಮ ಅಕ್ಕಿ 65, ಮಧ್ಯಮ ಅಕ್ಕಿ 87 ಇದ್ದವು. ಆದರೆ ಈಗ ಸೂಕ್ಷ್ಮ­ದ­ರ್ಶಕ ಹಿಡಿದು ಹುಡು­ಕಿ­ದರೆ ಅಬ್ಬಬ್ಬ ಅಂದರೆ ನೂರೈ­ವತ್ತು ತಳಿ­ಗಳು ಸಿಕ್ಕರೆ ಹೆಚ್ಚು. ಸುಮಾರು ಅರ­ವ­ತ್ತ­ರಿಂದ ಎಪ್ಪತ್ತು ತಳಿ­ಗಳು ಕಾಣೆ­ಯಾ­ಗಿವೆ.
ಎಪ್ಪ­ತ್ತರ ದಶ­ಕ­ದಲ್ಲಿ ಭಾರ­ತಕ್ಕೆ ಬಂದ ಹಸಿರು ಕ್ರಾಂತಿ ಅಭಿ­ವೃ­ದ್ಧಿ­ಯನ್ನು ವ್ಯಾವ­ಹಾ­ರಿ­ಕ­ವಾಗಿ ಸಾಧಿ­ಸಿ­ತ್ತಾ­ದರೂ ನಮ್ಮ­ಲ್ಲಿಯ ನೆಲ, ಜಲ­ವನ್ನು ವಿಷ ಮಾಡಿತು ಎನ್ನು­ವುದು ಸ್ಫಟಿ­ಕ­ದಷ್ಟೇ ಸತ್ಯ. ಜಗ­ತ್ತಿಗೆ ಆಹಾರ ಊಣಿ­ಸಲು ಹೋಗಿ ತಮ್ಮ ಜೀವಕ್ಕೆ ಸಂಚ­ಕಾರ ತಂದು­ಕೊ­ಳ್ಳುವ ಸ್ಥಿತಿಗೆ ರೈತ ತಲು­ಪಿ­ದ್ದಾನೆ. ಭತ್ತದ ಉತ್ಪಾ­ದನೆ ಹೆಚ್ಚು ಮಾಡುವ ಉತ್ಕಟ ಬಯ­ಕೆ­ಯಿಂದ ನಮ್ಮ­ಲ್ಲಿಯೇ ಇರುವ ವೈವಿಧ್ಯ ತಳಿ­ಗ­ಳನ್ನು ಕಳೆ­ದು­ಕೊಂ­ಡೆವು. ನಾಟಿ­ತ­ಳಿ­ಗ­ಳನ್ನು ಉಳಿಸಿ ಎಂಬ ಆಂದೋ­ಲನ ಈ ವರ್ಷ ಬನ­ವಾ­ಸಿ­ಯಲ್ಲಿ ಪ್ರಾರಂ­ಭ­ವಾ­ಯಿತು. ಇದರ ಜೊತೆ­ಯ­ಲ್ಲಿಯೇ ಕೆಲವು ಕೃಷಿ­ಕರು ತೆರೆ­ಮ­ರೆ­ಯ­ಲ್ಲಿಯೇ ನಾಟಿ ಭತ್ತ ಉಳಿ­ಸುವ ಆಂದೋ­ಲನ ಪ್ರಾರಂ­ಭಿ­ಸಿ­ದ್ದರು. ಇಂತ­ಹ­ವ­ರಲ್ಲಿ ಧಾರ­ವಾ­ಡದ ಗಂಗಾ­ಧರ ಹೊಸ­ಮನಿ ಅವರು ಒಬ್ಬರು. ತಾವು ಬೆಳೆ­ಯುವ ಭತ್ತ­ವನ್ನು ಸಾವ­ಯವ ಕೃಷಿ­ಯಲ್ಲಿ ಮಾಡಿ, ನಾಟಿ ತಳಿ­ಗ­ಳನ್ನು ಉಳಿ­ಸುವ ಹೋರಾ­ಟ­ದಲ್ಲಿ ತೊಡ­ಗಿ­ದ­ವರು ಇವರು.
ಧಾರ­ವಾಡ- ಹಳಿ­ಯಾಳ ರಸ್ತೆ­ಯಲ್ಲಿ ಬರುವ ಹಳ್ಳಿಗೆ ಗ್ರಾಮ­ದಲ್ಲಿ ಇವ­ರಿಗೆ ಹದಿ­ನೈದು ಎಕರೆ ಕೃಷಿ ಭೂಮಿ ಇದೆ. ಹೊಸ­ಮನಿ ಅವರು ಭತ್ತದ ಸಾವ­ಯವ ಕೃಷಿ ಮಾಡ­ತೊ­ಡಗಿ ವರ್ಷ ಮೂರಾ­ಯಿತು. ಮೊದಲು ಇವರು ಎಲ್ಲ­ರಂತೆ ಇಳು­ವರಿ ಪೂರಕ ಕೃಷಿ ಮಾಡು­ತ್ತಿ­ದ್ದರು. ಕಳೆದ ವರ್ಷ ಇವರು ಏಳು ಎಕರೆ ಪ್ರದೇ­ಶ­ದಲ್ಲಿ ಏಳು ನಾಟಿ ತಳಿ­ಗ­ಳನ್ನು ತಮ್ಮ ಹೊಲ­ದಲ್ಲಿ ಬಿತ್ತಿ­ದರು. ಕಾಗೆ­ತಾಳಿ, ಡೇಹ­ರಾ­ಡೂನ್‌ ಭಾಸ­ಮತಿ, ಬೆಳಗಾಂ ಭಾಸ­ಮತಿ, ಅಂಬೆ ಮೋರ್‌, ಅಂಕುರ್‌ ಸೋನಾ, ಸೆಲಂ­ಸಣ್ಣ ಮತ್ತು ಜ್ಯೋತಿ ಇವರು ಬಿತ್ತಿದ ತಳಿ­ಗಳು.
ಸಾವ­ಯವ ಕೃಷಿ­ಯಲ್ಲಿ ಇಳು­ವರಿ ಕಡಿ­ಮೆ­ಯಾ­ದರೂ ಗುಣ­ಮಟ್ಟ ಉತ್ತಮ. ಇದ­ರಿಂದ ಉತ್ಸಾ­ಹ­ಗೊಂಡ ಇವರು ಈ ಬಾರಿ ಇಪ್ಪ­ತ್ನಾಲ್ಕು ನಾಟಿ ತಳಿ­ಗ­ಳನ್ನು ಬೆಳೆ­ಸು­ತ್ತಿ­ದ್ದಾರೆ. ಇವು­ಗ­ಳನ್ನು ಮೂರು ವಿಭಾ­ಗ­ಗ­ಳಲ್ಲಿ ಇವರು ಬೆಳೆ­ಸು­ತ್ತಿ­ದ್ದಾರೆ.

1. ಸುವಾ­ಸನಾ ಭರಿತ ಭತ್ತ: ಅಂಬೆ­ಮೋರ್‌, ಕಾಗೆ­ಸಾಲಿ, ಕರಿ ಗಜಿ­ಬಿಲಿ (ಇ­ದಕ್ಕೆ ಬಾಣಂತಿ ಭತ್ತ ಎಂದು ಕರೆ­ಯು­ತ್ತಾರೆ. ಬಾಣಂ­ತಿ­ಯ­ರಿಗೆ ಈ ಅಕ್ಕಿ ಊಟ ಪ್ರೋಟಿನ್‌ ಅಂಶ­ವನ್ನು ದೇಹಕ್ಕೆ ನೀಡು­ತ್ತದೆ.) ಆಂಧ­ಸಾಲಿ, ಬಾದ್‌­ಷಹಾ ಬೋಗ್‌, ಬೂಸಾ ಭಾಸ­ಮತಿ 1, ಬೂಸಾ ಭಾಸ­ಮತಿ 2, ಬೆಳಗಾಂ ಭಾಸ­ಮತಿ, ಮಾಲ್ಗುಡಿ ಸಣ್ಣ, ಬಂಗಾರ ಕಡ್ಡಿ.
2. ನಿತ್ಯ ಬಳ­ಕೆಯ ಭತ್ತ: ಎಚ್‌­ಎಂಟಿ, ಗೌರಿ­ಸಣ್ಣ, ಚಕೋತಾ ಭತ್ತ ಅಥವಾ ಹುಗ್ಗಿ ಭತ್ತ, ಸಿದ್ಧ­ಗಿರಿ 1, ಸಿದ್ಧ­ಗಿರಿ 2, ಅಂತರ ಸಾಲಿ, ಉದುರು ಸಾಲಿ, ಮುಗದ 101, ಚಿನ್ನಾ­ಪನ್ನಿ, ಸೇಲಂ­ಸಣ್ಣ, ಅಂಕುರ್‌ ಸೋನಾ, ಮೈಸೂರು ಮಲ್ಲಿಗೆ.
3. ಔಷಧ ಭತ್ತ: ನಾಗಾ­ಲ್ಯಾಂಡ್‌ ಭತ್ತ, ನವರ.
ಈ ಎಲ್ಲಾ ರೀತಿಯ ಭತ್ತ­ಗ­ಳನ್ನು ಬೆಳೆ­ಯುವ ಉದ್ದೇ­ಶ­ವೇನು ಎಂದು ಹೊಸ­ಮನಿ ಅವ­ರನ್ನು ಪ್ರಶ್ನಿ­ಸಿ­ದರೆ, ಅವರು ಕೊಡುವ ಉತ್ತರ ಹೀಗಿದೆ; `ಸಾ­ವ­ಯವ ಕೃಷಿಗೆ ಪೂರ­ಕ­ವಾಗಿ ನಾಟಿ ತಳಿ ಬೆಳೆ­ಯು­ತ್ತಿ­ದ್ದೇನೆ. ನಮ್ಮ­ಲ್ಲಿಯೇ ಇರುವ ಹಟ್ಟಿ ಗೊಬ್ಬ­ರವೇ ಈ ಬೆಳೆಗೆ ಸಾಕು. ರಾಸಾ­ಯ­ನಿಕ ಗೊಬ್ಬ­ರ­ಕ್ಕಾಗಿ ಪರ­ದಾ­ಡುವ ಪ್ರಶ್ನೆ­ಯಿಲ್ಲ. ನಮ್ಮ­ಲ್ಲಿ­ರು­ವುದು ಕಸುವು ಇಲ್ಲದ ಭೂಮಿ. ಅದ­ಕ್ಕಾಗಿ ನಾವು ರಾಸಾ­ಯ­ನಿಕ ಗೊಬ್ಬ­ರ­ದ­ಲ್ಲಿಯೇ ಬೆಳೆ ಬೆಳೆ­ಯುತ್ತಾ ಹೋದರೆ ಭೂಮಿ ಭಂಜ­ರಾ­ಗು­ವುದು ಗ್ಯಾರಂಟಿ. ಅದ­ಕ್ಕಾಗಿ ಇಳು­ವರಿ ಕಡಿ­ಮೆ­ಯಾ­ದರು ತೊಂದ­ರೆ­ಯಿಲ್ಲ. ಭೂಮಿ ತಾಕ­ತ್ತಿ­ನಲ್ಲಿ ಇರ­ಬೇಕು'.
ಹೊಸ­ಮನಿ ಅವರು ಕೃಷಿ ಏಕ­ತಾ­ನ­ತೆ­ಯನ್ನು ಇಷ್ಟ­ಪ­ಡದೆ ವೈವಿ­ಧ್ಯತೆ ಬಯ­ಸಿ­ರು­ವುದು ವಿಭಿನ್ನ ತಳಿ ಬೆಳೆ­ಯ­ಲಿಕ್ಕೆ ಕಾರಣ. ಇವರು ಹಲ­ವಾರು ರೀತಿಯ ಭತ್ತದ ತಳಿ­ಗ­ಳನ್ನು ಬೆಳೆಯ ಬೇಕೆಂ­ದಾಗ ಯಾವ ಭತ್ತವು ತಾನಾ­ಗಿಯೇ ಕೈಗೆ ಸಿಗ­ಲಿಲ್ಲ. ಇದ­ಕ್ಕಾಗಿ ಕರ್ನಾ­ಟ­ಕದ ತುಂಬ ಅವರು ಓಡಾ­ಡಿ­ದರು. ಕಳೆದ ವರ್ಷ ಮಂಡ್ಯದ ಶಿವ­ಳ್ಳಿಯ ರೈತ ಬೋರೆ­ಗೌ­ಡರು 35 ಬಗೆಯ ಭತ್ತದ ತಳಿ­ಗ­ಳನ್ನು ಬೆಳೆ­ದಿ­ದ್ದರು. ಅವ­ರ­ಲ್ಲಿಗೆ ಹೋಗಿ ಕೆಲವು ತಳಿ­ಗ­ಳನ್ನು ಆಯ್ಕೆ ಮಾಡಿ­ತಂ­ದರು. ಕೃಷಿ ವಿಶ್ವ­ವಿ­ದ್ಯಾ­ಲ­ಯ­ಗ­ಳಿಂದ ಮತ್ತು ಬೆಂಗ­ಳೂ­ರಿನ ಸಹಜ ಸಮೃದ್ಧ ಬಳ­ಗ­ದ­ವ­ರಿಂದ ಕೆಲವು ತಳಿ­ಗ­ಳನ್ನು ತಂದರು.
ಬೇರೆ­ಯ­ವ­ರಿಂದ ಸ್ವಲ್ಪ ಸ್ವಲ್ಪ ಭತ್ತ­ಗ­ಳನ್ನು ತಂದು ಇವರು ನಾಟಿ ಮಾಡಿ­ದರೂ, ಈ ವರ್ಷ ಅವು ದ್ವಿಗುಣ ಆಗು­ತ್ತದೆ ಎನ್ನುವ ತೃಪ್ತಿ ಇವ­ರದ್ದು. `ಅ­ನ್ನ­ದಾ­ತ­ರಾದ ನಾವು ಅನ್ನ­ವನ್ನೇ ನೀಡ­ಬೇಕು. ಬದ­ಲಾಗಿ ವಿಷ­ವನ್ನು ನೀಡ­ಬಾ­ರದು. ಸಾವ­ಯವ ಕೃಷಿ ಮತ್ತು ನಾಟಿ ತಳಿ ಇದಕ್ಕೆ ಸಹ­ಕಾರಿ. ಅಷ್ಟೇ ಅಲ್ಲದೆ ನಮ್ಮ­ಲ್ಲಿಯ ಸಾಂಪ್ರ­ದಾ­ಯಿಕ ಕೃಷಿ ಪದ್ದ­ತಿ­ಯನ್ನು ಸ್ಥಳೀ­ಯ­ರಿಗೆ ಪುನಃ ನೆನ­ಪಿ­ಸು­ವಲ್ಲಿ ಈ ರೀತಿಯ ಕೃಷಿ ಉಪ­ಯೋ­ಗಕ್ಕೆ ಬರು­ತ್ತದೆ' ಎಂಬುದು ಹೊಸ­ಮನಿ ಅವರ ಹೇಳಿಕೆ.
ನಾಟಿ ತಳಿ ಕಾಣೆ­ಯಾ­ಗು­ತ್ತಿ­ರುವ ಇಂದಿನ ದಿನ­ಗ­ಳಲ್ಲಿ ನಾಟಿ ತಳಿ­ಯನ್ನು ಉಳಿ­ಸು­ವು­ದರ ಜೊತೆಗೆ ದ್ವಿಗು­ಣ­ಗೊ­ಳಿ­ಸು­ತ್ತಿ­ರುವ ಹೊಸ­ಮನಿ ಅವರ ಪ್ರಯತ್ನ ಶ್ಲಾಘ­ನೀಯ.
ಮಾಹಿ­ತಿ­ಗಾಗಿ: ಗಂಗಾ­ಧರ ಹೊಸ­ಮನಿ
29/7b ಮರಾಠಾ ಕಾಲೀನಿ
ಗಣ­ಪ­ತಿ­ಗುಡಿ ಹತ್ತಿರ
ಧಾರ­ವಾಡ- 580008
ದೂರ­ವಾಣಿ: 0836-2447137
9448130647

ನಾಗರಾಜ ಮತ್ತಿಗಾರ
e-mail: nagam25@gmail.com

Wednesday, November 19, 2008

ಈ ಮರ - ಕೊಡಲಿ ಕಾವಿಗೊಂದು ವರ


ಕೊಡಲಿ, ಗುದ್ದಲಿ, ಪಿಕಾಸಿ ಇಲ್ಲದ ಕೃಷಿಕರ ಜೀವನ ಸಾಗದು. ಅದೇ ರೀತಿ ಆ ಕೊಡಲಿ ಗುದ್ದಲಿಗಳಿಗೆ ಹಿಡಿಕೆಯಾಗಿ ಮರದ ಕಾವು ಇಲ್ಲದಿದ್ದರೆ ಅವುಗಳು ಪ್ರಯೋಜನಕ್ಕೆ ಬಾರವು. ಆದರೆ ಇಂದಿನ ಕಾಡಿನ ಪರಿಸ್ಥಿತಿಯಲ್ಲಿ ಕೃಷಿ ಉಪಕರಣಗಳಿಗೆ ಬಳಸುವ ಮರದ ಹಿಡಿಕೆಗಳಿಗೆ ಸೂಕ್ತವಾದ ಮರ ಸಿಗುವುದು ಕಷ್ಟ. ಸಿಕ್ಕರೂ ನೇರವಾದ ದಪ್ಪನೆಯ ಹಿಡಿಕೆಗಾಗಿ ಮರವನ್ನು ಕಡಿಯುವುದು ಖೇದವೆನಿಸುವ ವಿಚಾರ. ಆದರೆ ಅನೀವಾರ್ಯ ಹಿಡಿಕೆ ಬೇಕು ಮತ್ತು ಅದಕ್ಕಾಗಿ ಮರ ಕಡಿಯಲೇ ಬೇಕು. ಆದರೆ ಸಾಗರ ತಾಲ್ಲೂಕಿನ ತಲವಾಟ ಸಮೀಪದ ಕಡವಿನಮನೆ ತಿರುಮಲ ಶರ್ಮಾರ ಪ್ರಕಾರ ಕೊಡಲಿ ಗುದ್ದಲಿಗಳಿಗೆ ಸೂಕ್ತವಾದ ಮರವೊಂದಿದೆ. ಅದನ್ನು ಉಪಯೋಗಿಸುವುದರಿಂದ ಮರವೂ ಉಳಿಯುತ್ತದೆ ಅತ್ಯಂತ ಘಟ್ಟಿಮುಟ್ಟಾದ ಕೊಡಲಿ ಕಾವು ದೊರೆತಂತಾಗುತ್ತದೆ. ಆ ಮರದ ಹೆಸರು ಸೂಜಿಗರಗಲು. ಇದು ಹೇಗೆ ಮರವೂ ಉಳಿಯುತ್ತದೆ ಹತ್ಯಾರಗಳಿಗೆ ಹಿಡಿಕೆಯೂ ದೊರೆಯುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.
ಟೊಂಗೆ ಟೊಂಗೆಗಲಲ್ಲಿ ಮುಳ್ಳುತುಂಬಿರುವ ಈ ಸೂಜಿಗರಗಲು ಮರ ತನ್ನ ಕಾಂಡದ ಸುತ್ತಲೂ ಕೊಡಲಿಯ ಹಿಡಿಕೆಯಾಕಾರದ ಉದ್ದನೆಯ ಉಬ್ಬನ್ನು ಹೊಂದಿದೆ. ನಮಗೆ ಬೇಕಾದ ಅಳತೆಯ ಕಾಂಡಕ್ಕೆ ಮೇಲ್ಗಡೆ ಹಾಗೂ ಕೆಳಗಡೆ ಗುರುತು ಮಾಡಿಕೊಂಡು ಕೊಡಲಿಯಿಂದ ಬಿಡಿಸಿಕೊಂದರೆ ಹಿಡಿಕೆ ರೆಡಿ. ಮತ್ತೆ ಮುಂದಿನ ವರ್ಷ ಅದೇ ಜಾಗದಲ್ಲಿ ಹೊಸ ಹಿಡಿಕೆ ಮೂಡಿರುತ್ತದೆ. ಇದರಿಂದ ಮರದ ಬೆಳವಣಿಗೆಗೆ ತೊಂದರೆಯಾಗುವುದಿಲ್ಲ. ಮತ್ತು ಇದು ಎಷ್ಟರಮಟ್ಟಿಗೆ ಗಟ್ಟಿ ಎಂದರೆ ಹಳ್ಳಿಗರು ತಮ್ಮ ಅನುಭವದ ಪ್ರಕಾರ ಕೊಡಲಿ ಅಥವಾ ಗುದ್ದಲಿ ಇರುವವರೆಗೂ ಹಿಡಿಕೆ ಇರುತ್ತದೆ ಎನ್ನುತ್ತಾರೆ. ಅದು ಅತಿಶಯೋಕ್ತಿಯ ಮಾತು ಖಂಡಿತಾ ಅಲ್ಲ. ಸೂಜಿಗರಗಲು ಮರ ಹೇರಳ ಸೊಪ್ಪನ್ನು ಬಿಡುವುದರಿಂದ ತೋಟಕ್ಕೆ ಮುಚ್ಚಿಗೆಗೆ ಕೂಡ ಸಹಾಯಕಾರಿ. ಈ ಅಪರೂಪದ ಮರವೂ ಕೂಡ ಸಹಜ ಕಾಡುಗಳಲ್ಲಿ ಅಪರೂಪವಾಗುತ್ತಿದೆ. ಸೂಜಿಗರಗಲು ಮರವನ್ನು ರಕ್ಷಿಸಿದರೆ ಅದು ಹಿಡಿಕೆಗಾಗಿ ನಾಶವಾಗುವ ಕಾಡನ್ನು ರಕ್ಷಿಸುತ್ತದೆ ಎನ್ನುವುದು ನಿಸ್ಸಂಶಯ.
ಆರ್‌.ಶರ್ಮಾ.ತಲವಾಟ

Saturday, November 15, 2008

ಕಾರ್ಮಿ­ಕರು `ಕೈ'ಕೊ­ಟ್ಟ­ರೇ­ನಂತೆ, ಗಾಡಿ­ಗ­ಳಿವೆ ನಮ್ಹತ್ರ...


ಅವಿ­ಭಕ್ತ ಕುಂಟುಂ­ಬ­ಗಳು ಕಣ್ಮ­ರೆ­ಯಾ­ಗು­ತ್ತಿ­ದ್ದಂತೆ ಕೃಷಿ ಕೆಲ­ಸ­ಗಳು ಕಷ್ಟ­ಕ­ರ­ವಾ­ಗ­ತೊ­ಡ­ಗಿದೆ.
ಕುಟುಂ­ಬ­ಗಳು ಒಂದಾ­ಗಿ­ದ್ದಾಗ ರೈತಾಪಿ ಕೆಲ­ಸ­ಗ­ಳನ್ನು ಎಲ್ಲಾ ಸದ­ಸ್ಯರು ಹಂಚಿ­ಕೊ­ಳ್ಳು­ತ್ತಿ­ದ್ದರು. ಕೆಲ­ಸ­ಗಳು ಸರಾ­ಗ­ವಾಗಿ ನಡೆ­ಯು­ತ್ತಿ­ದ್ದವು. ಆದರೆ ಈಗ ಹೇಳಿ­ಕೇಳಿ ಒಬ್ಬಂಟಿ ಸಂಸಾರ, ಇನ್ನೆ­ಲ್ಲಿಂದ ಸಾಗ­ಬೇಕು ಕೃಷಿ ಕೆಲಸ ಕಾರ್ಯ. ಆದ್ದ­ರಿಂದ ಇಂದು ಕಾಣ­ಸಿ­ಕೊಂ­ಡಿದೆ ಕೃಷಿ ಕಾರ್ಮಿ­ಕರ ಕೊರತೆ.
ಸದ್ಯ ಎಲ್ಲಾ ಕಡೆ­ಯಲ್ಲೂ ಕೆಲ­ಸ­ಗಾ­ರರ ಕೊರ­ತೆಯ ತೀವ್ರತೆ ಎದ್ದು­ಕಾ­ಣು­ತ್ತಿದೆ. ಅದ­ರಲ್ಲೂ ಮಲೆ­ನಾ­ಡಿ­ನಲ್ಲಿ ಹೆಚ್ಚು ಎನ್ನ­ಬ­ಹುದು. ಇಲ್ಲಿನ ಕೃಷಿ­ಕ­ರಿಗೆ ಮತ್ತೊಂದು ಸಮ­ಸ್ಯೆ­ಯೆಂ­ದರೆ ಒಂದೇ ಕಡೆ ಜಮೀನು ಕೇಂದ್ರಿ­ಕೃತ ವಾಗಿ­ರದೆ ಇರು­ವುದು. ಒಂದು ಕಡೆ ನಾಲ್ಕು ಭರಣ ಅಡಿಕೆ ತೋಟ­ವಿ­ದ್ದರೆ, ಮತ್ತೊಂ­ದೆಡೆ ಅರ್ಧ ಎಕರೆ ಗದ್ದೆ ಇರು­ತ್ತದೆ. ಮನೆ­ಯ­ವ­ನೊಂ­ದಿಗೆ ಒಬ್ಬ ಕೆಲ­ಸ­ಗಾರ ಇಲ್ಲ­ದಿ­ದ್ದರೂ ಯಾವ ಕೆಲ­ಸವು ಆಗ­ದಿ­ರುವ ಸ್ಥಿತಿ. ಇದ­ಕ್ಕಾಗಿ ರೈತರು ಕೈಗಾ­ಡಿ­ಗ­ಳನ್ನು ಬಳ­ಕೆಗೆ ತಂದು ಕೊಂಡಿ­ದ್ದಾರೆ.
ಕೈಗಾ­ಡಿ­ಗಳು ಬಹ­ಳಷ್ಟು ವರ್ಷ­ದಿಂದ ಇದ್ದರೂ ಒಂದೆ­ರಡು ಮಾದ­ರಿ­ಯಲ್ಲಿ ಮಾತ್ರ ಇದ್ದವು. ಈಗ ಅನೇಕ ಕೃಷಿ­ಕರು ತಮ್ಮ ಬಳಕೆ ಮತ್ತು ಅನು­ಕೂ­ಲಕ್ಕೆ ತಕ್ಕಂತೆ ಕೈಗಾ­ಡಿ­ಗ­ಳನ್ನು ತಯಾ­ರಿ­ಸಿ­ಕೊ­ಳ್ಳು­ತ್ತಿ­ದ್ದಾರೆ. ಕೃಷಿ­ಕರ ಮನ­ಸ್ಥಿ­ತಿ­ಯನ್ನು ಅರಿ­ತು­ಕೊಂಡ ಚಿಕ್ಕ­ಮ­ಗ­ಳೂ­ರಿನ ಕೊಪ್ಪದ ನರ­ಸಿಂಹ ಬಂಡಾರಿ ವಿವಿಧ ನಮೂ­ನೆಯ ಕೈಗಾ­ಡಿ­ಗ­ಳನ್ನು ತಯಾ­ರಿ­ಸು­ವ­ದ­ರಲ್ಲಿ ಪ್ರವೀ­ಣರು.
ಕೊಪ್ಪ­ದಲ್ಲಿ ದುರ್ಗಾ ಎಂಜ­ನಿ­ಯ­ರಿಂಗ್‌ ವರ್ಕ್ಸ್‌ ನಡೆ­ಸು­ತ್ತಿ­ರುವ ಬಂಡಾರಿ, ಕೃಷಿ ಉಪ­ಯೋ­ಗದ ವಸ್ತು­ಗ­ಳನ್ನು ಹೆಚ್ಚು ಹೆಚ್ಚು ತಯಾ­ರಿ­ಸು­ತ್ತಿ­ದ್ದರೆ. ಕೃಷಿ ಉಪ­ಯೋ­ಗ­ಕ್ಕಾಗಿ ಸುಮಾರು ಎಂಟು ತರ­ಹದ ಕೈಗಾ­ಡಿ­ಗ­ಳನ್ನು ಇವರು ತಯಾ­ರಿ­ಸಿ­ದ್ದಾರೆ. ಇದ­ರಲ್ಲಿ ಒಂದು ಗಾಲಿಯ ಗಾಡಿ­ಯಿಂದ ಹಿಡಿದು ನಾಲ್ಕು ಗಾಲಿ­ಯ­ವ­ರೆಗೂ. ಒಂದೇ ಗಾಲಿಯ ಗಾಡಿ­ಯನ್ನು ಎರಡು ತರ­ಹ­ದಲ್ಲಿ ತಯಾ­ರಿ­ಸಿ­ದ್ದಾರೆ. ಒಂದು ಸೈಕಲ್‌ ಗಾಲಿ­ಯಂತೆ ಕಡ್ಡಿ­ಯನ್ನು ಹೊಂದಿ­ದ್ದರೆ, ಮತ್ತೊಂದು ಟ್ಯೂಬ್‌ ರಹಿತ ಗಾಲಿ­ಯದ್ದು. ಇದ­ರಲ್ಲಿ ಐದಾರು ಬಗೆ­ಯವು ಇವೆ. 30 ಕಿಲೋ ಬಾರ­ದಿಂದ 60 ಕಿಲೋ ತೂಕ­ದ­ವ­ರೆ­ಗಿನ ಸಾಮ­ಗ್ರಿ­ಯನ್ನು ಸಲೀ­ಸಾಗಿ ಸಾಗಿ­ಸ­ಬ­ಹುದು. ಹಾಗೆಯೇ ನೆಲಕ್ಕೆ ಇಡು­ವಲ್ಲಿ ಸ್ಟ್ಯಾಂಡ್‌ ಬದಲು ಎರಡು ಚಿಕ್ಕ ಚಿಕ್ಕ ಗಾಲಿ­ಗ­ಳನ್ನು ಜೋಡಿ­ಸಿ­ದ್ದಾರೆ. ಸಮ­ತ­ಟ್ಟಾದ ಜಾಗ­ದಲ್ಲಿ ಮೂರು ಗಾಲಿ­ಗ­ಳನ್ನು ಬಳ­ಸಿ­ಕೊ­ಳ್ಳುವ ಅವ­ಕಾಶ ಈ ಗಾಡಿ­ಗಿದೆ.
ಮೂರು ಮತ್ತು ನಾಲ್ಕು ಗಾಲಿಯ ಗಾಡಿ­ಗ­ಳನ್ನು ಬಂಡಾರಿ ತಯಾ­ರಿ­ಸಿ­ದ್ದಾರೆ. ಇದ­ರಲ್ಲಿ ಐದ­ರಿಂದ ಎಂಟು ಕ್ವಿಂಟಾ­ಲ್‌­ವ­ರೆಗೆ ಸಾಗಿ­ಸ­ಬ­ಹುದು. ತಯಾ­ರಿ­ಸಿದ ಎಲ್ಲಾ ಗಾಡಿ­ಗಳ ತೂಕ ಕಡಿಮೆ, ಆದರೆ ಹೆಚ್ಚಿಗೆ ತೂಕ­ವನ್ನು ಹೊರಲು ಸಮರ್ಥ. ಹಾಗೆಯೇ ಗೂಡಿನ ತರ­ಹದ ಕೈಗಾ­ಡಿ­ಗ­ಳನ್ನು ಮಾಡಿ­ದ್ದಾರೆ. ಇದ­ರಲ್ಲಿ ಸಗಣಿ, ಗೊಬ್ಬ­ರ­ವನ್ನು ಸಾಗಿ­ಸಲು ಅನು­ಕೂ­ಲ­ವಾ­ಗು­ತ್ತದೆ. `ನಾ­ನೊಬ್ಬ ಮೆಕ್ಯಾ­ನಿಕ್‌. ನನ್ನ ಕೆಲ­ಸವೇ ಕೃಷಿ ಉಪ­ಕ­ಣ­ಗಳ ರಿಪೇರಿ. ಇದ­ರಿಂ­ದಾಗಿ ಕೃಷಿ­ಕರ ಒಡ­ನಾಟ. ಅವರು ಎದು­ರಿ­ಸು­ತ್ತಿ­ರುವ ಕಾರ್ಮಿ­ಕರ ಸಮ­ಸ್ಯೆ­ಯನ್ನು ಗಮ­ನಿ­ಸಿ­ದ್ದೇನೆ. ಹಲವು ಜನ ರೈತಾಪಿ ಮಿತ್ರರು ಗಾಡಿ­ಗ­ಳನ್ನು ತಯಾ­ರಿಸಿ ಕೊಡು­ವಂತೆ ವಿನಂತಿ ಮಾಡಿ­ದರು. ಗಾಡಿ­ಗಳ ವಿನ್ಯಾ­ಸ­ಕ್ಕಾಗಿ ಸಲಹೆ ನೀಡಿ­ದರು. ಈಗ ನಾನೇ ಅವ­ರಿಗೆ ಯಾವ ರೀತಿಯ ಗಾಡಿ­ಗಳು ಉಪ­ಯೋ­ಗ­ವಾ­ಗ­ಬ­ಹು­ದೆಂದು ತಿಳಿದು ತಯಾ­ರಿ­ಸು­ತ್ತಿ­ದ್ದೇನೆ' ಎಂದು ಹೆಮ್ಮೆ­ಯಿಂದ ಹೇಳಿ­ಕೊ­ಳ್ಳು­ತ್ತಾರೆ ಬಂಡಾರಿ.
ಉತ್ತ­ರ­ಕ­ನ್ನಡ ಹೊನ್ನಜ್ಜಿ ಮಂಜು­ನಾಥ್‌ ಹೆಗಡೆ ಅವರು ಹುಬ್ಬ­ಳ್ಳಿ­ಯಿಂದ ನೀರು ಸಾಗಿ­ಸುವ ಗಾಡಿ­ಯನ್ನು ತಂದು ಅದನ್ನು ತಮ್ಮ ಕೃಷಿ ಉಪ­ಯೋ­ಗ­ಕ್ಕಾಗಿ ಬಳ­ಸು­ತ್ತಿ­ದ್ದಾರೆ. ಸಿದ್ದಾ­ಪುರ ಗೋಡ್ವೆ­ಮನೆ ಭಟ್ಟರ ಕುಟುಂ­ಬ­ದ­ವರು ಸುಮಾರು ಇಪ್ಪತ್ತು ವರ್ಷ­ದಿಂದ ಕೈಗಾ­ಡಿ­ಯನ್ನು ಬಳ­ಸು­ತ್ತಿ­ದ್ದಾರೆ. ಯಜಡಿ ಟೈಯರ್‌, ಹಾಗೂ ಕಬ್ಬಿ­ಣದ ಪಟ್ಟಿ­ಗ­ಳನ್ನು ಬಳಸಿ ಗಾಡಿ ತಯಾ­ರಿ­ಸಿ­ಕೊಂ­ಡಿ­ದ್ದಾರೆ. ಇದ­ರಲ್ಲಿ ಹುಲ್ಲು, ದರ­ಕು­ಗ­ಳನ್ನು ಸಾಗಿ­ಸು­ತ್ತಾರೆ. `ನಾಲ್ಕು ಜನ ಹೊರುವ ತಲೆ ಹೊರೆ­ಯನ್ನು ಒಮ್ಮೆಲೆ ಗಾಡಿ­ಯಲ್ಲಿ ತರ­ಬ­ಹುದು. ಇದ­ರಿಂದ ಕೂಲಿ ಉಳಿ­ತಾ­ಯ­ವಾ­ಗು­ತ್ತದೆ ' ಎನ್ನು­ವುದು ಭಟ್ಟರ ಕುಟುಂ­ಬ­ದ­ವರ ಮಾತು.
ಶಿವ­ಮೊಗ್ಗ ಸಾಗರ ಹತ್ತಿ­ರದ ಮಾವಿ­ನ­ಸ­ರದ ಶ್ರೀಪಾ­ದ­ರಾವ್‌ ಅವ­ರದ್ದು ಎರೆ­ಗೊ­ಬ್ಬರ ಉದ್ಯ­ಮ­ವಿದೆ. ಇರುವ ತೆಂಗಿನ ತೋಟವು ದೂರ­ದ­ಲ್ಲಿದೆ. ತೆಂಗಿನ ಮಧ್ಯೆ ಜಾನು­ವಾ­ರು­ಗ­ಳಿ­ಗಾಗಿ ಹುಲ್ಲನ್ನು ಬೆಳೆ­ಸು­ತ್ತಿ­ದ್ದಾರೆ. ಹುಲ್ಲನ್ನು ಪ್ರತಿ­ದಿನ ತರ­ಬೇಕು. ಒಂದು ದಿನ ಕೆಲ­ಸ­ದ­ವರು ಕೈಕೊ­ಟ್ಟರು ತೊಂದರೆ. ಅದ­ಕ್ಕಾಗಿ ಇವರು ಮೂರು ಗಾಲಿಯ ಕೈಗಾ­ಡಿ­ಯನ್ನು ಬಳ­ಸು­ತ್ತಿ­ದ್ದಾರೆ. ಗಟ್ಟು­ಮು­ಟ್ಟಾದ ಕಬ್ಬಿ­ಣದ ರಾಡ್‌­ಗ­ಳನ್ನು ಈ ಗಾಡಿಗೆ ಬಳ­ಸಿ­ದ್ದರೆ, ಟ್ಯೂಬ್‌ ಲೆಸ್‌ ಟೈಯರ್‌ ಇದ­ಕ್ಕಿದೆ. ಈ ಗಟ­ಡಿ­ಯನ್ನು ಇವರೇ ವಿನ್ಯಾಸ ಮಾಡಿ ತಮ್ಮ ಅನು­ಕೂ­ಲಕ್ಕೆ ತಕ್ಕಂತೆ ಮಾಡಿ­ಕೊಂ­ಡಿ­ದ್ದಾರೆ.
ಪಕ್ಕದ ಮನೆಯ ರಾಘ­ವೇಂದ್ರ ಇದೇ ಮಾದರಿ ಗಾಡಿ ಬಳ­ಸು­ತ್ತಿ­ದ್ದಾರೆ. ಆದರೆ ಇದರ ಹೊರ ವಿನ್ಯಾಸ ಸ್ವಲ್ಪ ವ್ಯತ್ಯಾ­ಸ­ವಿದೆ. ಮಣ್ಣು ಕಲ್ಲು, ಚೀಲ, ಅಡಿ­ಕೆ­ಗೊನೆ ಎಲ್ಲ­ವನ್ನು ಹೇರ­ಬ­ಹುದು. ಇದರ ಕ್ಯಾರಿ­ಯರ್‌ ಮತ್ರ ಗೂಟ್ಸ್‌ ರಿಕ್ಷಾ­ದಂತೆ ಇದೆ. ಈ ರೀತಿ ಕ್ಯಾರಿ­ಯರ್‌ ಇರು­ವು­ದ­ರಿಂದ ಮಣ್ಣು, ಕಲ್ಲು, ಅಡಿಕೆ ತುಂಬಿ­ದರು ಆರಾ­ಮಾಗಿ ಸಾಗಿ­ಸ­ಬ­ಹುದು. `ಶ್ರೀ­ಪಾ­ದಣ್ಣ ನಾನು ಒಬ್ಬನೇ ಮೆಕ್ಯಾ­ನಿಕ್‌ ಹತ್ತಿರ ಗಾಡಿ ರೆಡಿ ಮಾಡಿ­ಸಿ­ದ್ದೇವೆ. ನನ್ನದು ಸ್ವಲ್ಪ ಚಿಕ್ಕ ಗಾಡಿ. ನನ್ನ ತೋಟ ಅರ್ಧ ಕಿಲೋ ಮೀಟರ್‌ ದೂರ­ದ­ಲ್ಲಿದೆ. ಅಡಿ­ಕೆ­ಗೊನೆ ಸಾಗಾ­ಟಕ್ಕೆ ತುಂಬ ತೊಂದ­ರೆ­ಯಾ­ಗು­ತ್ತಿತ್ತು. ಆದರೆ ಈಗ ಮಾತ್ರ ಒಬ್ಬ ಕೂಲಿ­ಯಾಳು ಇದ್ದರೆ ನೂರು­ಗೊ­ನೆ­ಯನ್ನು ಆರಾ­ಮ­ದಲ್ಲಿ ಇಬ್ಬರೇ ಸಾಗಿ­ಸ­ಬ­ಹುದು. ಮಣ್ಣು ತುಂಬ­ಲಿಕ್ಕೆ ಹೆಚ್ಚಿಗೆ ಆಳು ಬೇಕಾ­ಗು­ತ್ತಿತ್ತು. ಈಗ ತೊಂದ­ರೆ­ಯಿಲ್ಲ' ಎನ್ನು­ವುದು ರಾಘ­ವೇಂದ್ರ ಅವರ ಅಭಿ­ಪ್ರಾಯ.
ಕೃಷಿ ಕೆಲ­ಸ­ಗಾ­ರರ ತೊಂದರೆ ಹೆಚ್ಚು ಹೆಚ್ಚು ಕೃಷಿ ಸಾಮ­ಗ್ರಿ­ಗ­ಳನ್ನು ಅನು­ಶೋ­ಧನೆ ಮಾಡಲು ಸಹ­ಕಾ­ರಿ­ಯಾ­ಗು­ತ್ತಿದೆ. ಇದ­ರಲ್ಲಿ ರೈತರು ಬಳಕೆ ಮಾಡ­ಲ್ಪ­ಡು­ತ್ತಿ­ರುವ ಕೈಗಾ­ಡಿ­ಗಳು ನವ ನವೀ­ನ­ವಾಗಿ ಮಾರ್ಪಾ­ಡು­ಗೊಂಡು ಬಳಕೆ ಮಾಡು­ತ್ತಿ­ರು­ವುದು ಕಾರ್ಮಿ­ಕರ ಕೊರತೆ ನೀಗಿ­ಸು­ತ್ತಿವೆ. ಜತೆಗೆ ಹಣ ಕೂಡ ಉಳಿ­ತಾ­ಯ­ವಾ­ಗು­ತ್ತಿದೆ.

ನಾಗ­ರಾಜ ಮತ್ತಿ­ಗಾರ

Wednesday, November 12, 2008

ಹಸಿದವರ ಊಟದಲ್ಲೂ ಹೊಂಚುವುದೇ?


ಸರ್ಕಾರದಿಂದ ರೈತರ ಸಹಾಯಕ್ಕೆಂದು ಹಣ ಧಾರಾಕಾರವಾಗಿಯೇ ಬರುತ್ತಿದೆ. ದುರಂತವೆಂದರೆ, ಬಸವಳಿದ ರೈತನಿಗೆ ಅದು ಹನಿಗಳ ರೂಪದಲ್ಲಷ್ಟೇ ದಕ್ಕುತ್ತಿದೆ.

ಉದಾ.ಗೆ ಕಳೆದ ವರ್ಷ ಕೊಳೆ ರೋಗದಿಂದ ಹೀನಾಯ ಸ್ಥಿತಿಯಲ್ಲಿರುವ ಅಡಿಕೆ ಬೆಳೆಗಾರರಿಗೆ ಅರ್ಧ ಬೆಲೆಯಲ್ಲಿ ಮೈಲುತುತ್ತವನ್ನು ಸರ್ಕಾರ ಸರಬರಾಜು ಮಾಡಿತು. ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನಡಿ ವಿನಿಯೋಗಿಸಿದ ಹಣ ಹಲವು ಕೋಟಿ. ನಿಜಕ್ಕಾದರೆ ರೈತರ ಹೆಸರಿನಲ್ಲಿ ಅಧಿಕಾರಿಗಳ, ರಾಜಕಾರಣಿಗಳ ಬೊಕ್ಕಸ ತುಂಬಿತು.

ಅರ್ಧಬೆಲೆಗೆ ಕೊಟ್ಟದ್ದೇನೋ ನಿಜ. ಆದರೆ ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ್ಜೆಯ ತುತ್ತಕ್ಕೆ ಕೆ.ಜಿ.ಗೆ 145 ರೂ. ಈ ಯೋಜನೆಯಡಿ ಖರೀದಿಗೆ 176 ರೂ! ದಾಖಲೆ ಒದಗಿಸುವ ಪರಿಪಾಟಲು, ಓಡಾಟದ ಖರ್ಚು ಬೇರೆ.
ಪಾಠ ಕಲಿತಿದ್ದರಿಂದಲೇನೋ ಏನೋ ಈ ವರ್ಷ ಹೊಸ ತರದ ವ್ಯವಸ್ಥೆ ಜಾರಿಗೆ ಬಂದಿತು. ತೋಟಗಾರಿಕಾ ಇಲಾಖೆ ಕೇಳಿದ ದಾಖಲೆ ಜೊತೆಗೆ ಕೃಷಿಕರು ತಮ್ಮ ಬ್ಯಾಂಕ್‌ ಖಾತೆಯ ವಿವರವನ್ನೂ ಕೊಡಬೇಕಿತ್ತು. ಎಕರೆಗೆ ಸಿಗುವ ಬರೀ 500 ರೂಪಾಯಿ ಮೊಬಲಿಗೆ ರೈತ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 500 ರೂ. ತೆತ್ತು ಖಾತೆ ಆರಂಭಿಸುವ ಶಿಕ್ಷೆ. ಅದರಲ್ಲೂ ತೋಟ ಮನೆಯ ಅಜ್ಜಿ ಹೆಸರಲ್ಲಿ ಇತ್ತೆಂದರೆ ಅವರ ಹೆಸರಿನ ಖಾತೆಯೇ ಆಗಬೇಕು. ವ್ಯವಹರಿಸಲು ಅವರು ಬೇರ್ಯಾರಿಗೋ ಪವರ್‌ ಆಫ್‌ ಅಟಾರ್ನಿ ಕೊಟ್ಟಿದ್ದರೂ! ಷರತ್ತುಗಳು ಬೇರೆ. ಗ್ರಾಮೀಣ ಬ್ಯಾಂಕ್‌ ಖಾತೆಗೆ ಅವಕಾಶ ಇಲ್ಲ. ಸುಲಭ ನಿರ್ವಹಣೆಯ ಅಂಚೆ ಖಾತೆಯನ್ನು ಪರಿಗಣಿಸಲಿಲ್ಲ.
ಹೋಗಲಿ, ಇಷ್ಟಾದರೂ ಸರಿಯಾಗಿ ರೈತರ ಅಕೌಂಟಿಗೆ ದುಡ್ಡು ಬಂದಿದ್ದರೆ ಸಮಾಧಾನವಿರುತ್ತಿತ್ತು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ತಪ್ಪು ತಪ್ಪಾಗಿ ಹೆಸರು, ಖಾತೆ ಸಂಖ್ಯೆ ನಮೂದಿಸಿದ್ದರಿಂದ ಈ ಅಕ್ಟೋಬರ್‌ ತಿಂಗಳಾದರೂ 2008ರ ಕೊಳೆ ಸಹಾಯಧನ ಪಡೆಯದವರ ಸಂಖ್ಯೆ ನೂರಾರು. ದುರಂತವೆಂದರೆ, ಅಪರಾಧ ಸರ್ಕಾರಿ ನೌಕರರದ್ದು, ಶಿಕ್ಷೆ ಮತ್ತೆ ಹತಾಶ ಕೃಷಿಕನಿಗೇ!
ಇದರ ಬದಲು ಸರ್ಕಾರ ರೈತರಿಗೆ ಅರ್ಧ ಬೆಲೆಯ ಕೂಪನ್‌ ವಿತರಿಸಿ ಸಹಕಾರಿ ಸಂಘಗಳಲ್ಲಿ ಖರೀದಿಸಲು ಸೂಚಿಸಬಹುದಿತ್ತು. ಸಂಘಗಳು ಕೂಪನ್‌ನ್ನು ಪಡೆದು ನಂತರ ನಗದೀಕರಿಸಿಕೊಳ್ಳುವುದು ಸರಳ ವ್ಯವಸ್ಥೆಯಾಗಿರುತ್ತಿತ್ತು. ಭ್ರಷ್ಟಾಚಾರ ತಾನೇತಾನಾಗಿ ಕಡಿಮೆಯಾಗಿರುತ್ತಿತ್ತು.

ಪದೇ ಪದೇ ಬರುವ ಚುನಾವಣೆಗಳಿಗೆ ಫಂಡ್‌ ಹೊಂಚುವ ರಾಜಕಾರಣಿಗಳ ಕಷ್ಟಕ್ಕೆಂದೇ ಕೃಷಿಕರ ಬರ, ನೆರೆಗಳ ಯೋಜನೆಗಳಿವೆ ಎನ್ನುವಂತಾಗಿರುವುದು ಎಷ್ಟು ಸರಿ? ಈ ಮಾತನ್ನು ಓರ್ವ ಕೃಷಿಕನಾಗಿ ದುಃಖದಿಂದ ಹೇಳುವಂತಾಗಿದೆ. ಹಸಿದವರ ತುತ್ತನ್ನೇ ಕಸಿಯುವಷ್ಟು ನಾವು ಕೆಟ್ಟು ಹೋಗಿದ್ದೇವೆಯೇ?

-ಮಾವೆಂಸ

Tuesday, November 11, 2008

ಬಂಡವಾಳ ಬೇಡದ ದಾಲ್ಚಿನಿ ಕೃಷಿ


ನಮ್ಮ ದೇಶ ಇತರ ರಾಷ್ಟ್ರ­ಗ­ಳಿಗೆ ಬಹಳ ಹಿಂದಿ­ನಿಂ­ದಲೂ ಆಕ­ರ್ಷಣೆ ಆಗು­ತ್ತಿ­ರು­ವುದು ಇಲ್ಲಿನ ನೈಸ­ರ್ಗಿಕ ಕಾರ­ಣ­ದಿಂದ. ಪ್ರಕೃ­ತಿ­ಯಲ್ಲಿ ತಾನಾ­ಗಿಯೇ ಬೆಳೆ­ಯುವ ಮೌಲ್ಯ­ಯುತ ಸಾಂಬಾರ ಪದಾ­ರ್ಥ­ಗ­ಳಿಂ­ದಾಗಿ. ಬ್ರಿಟಿ­ಷರು 200 ವರ್ಷ­ಗಳ ಕಾಲ ಇಲ್ಲಿನ ಸಾಂಬಾರ ಪದಾ­ರ್ಥ­ಗ­ಳನ್ನು ಲೂಟಿ ಮಾಡಿ ಹೋದರು. ಇಲ್ಲಿ ಇನ್ನು ಅವು­ಗಳ ಬೆಳೆ ಯಥೇಚ್ಚ. ಆಂಗ್ಲರು ಶ್ರೀಲಂ­ಕಾ­ದಿಂದ ಕೆಲವು ಸಾಂಬಾರ ಸಸ್ಯ­ಗ­ಳನ್ನು ಭಾರ­ತ­ದಲ್ಲಿ ನಾಟಿ ಮಾಡಿ­ದರು. ಹೀಗೆ ನಾಟಿ ಮಾಡಿದ ಸಸ್ಯ­ಗ­ಳಲ್ಲಿ ದಾಲ್ಚಿನಿ (ದಾಂ­ಚಿನಿ)ಯು ಒಂದು.
ಕಾಡಿ­ನ­ಲ್ಲಿಯೇ ಇರುವ ದಾಲ್ಚಿನಿ ಮರದ ಚಕ್ಕೆ­ಯನ್ನು ತೆಗೆದು ಉಪ­ಯೋ­ಗಿ­ಸುವ ರೂಢಿ ಬಹಳ ಜನ­ಕ್ಕಿದೆ. ಸದ್ಯ ಕಾಡಿ­ನಲ್ಲಿ ಸಿಗು­ತ್ತಿ­ರು­ವುದು ದಾಲ್ಚಿ­ನಿಯ ಜಾತಿಗೆ ಸೇರಿದ ನಿಶಣೆ. ಇದ­ರಲ್ಲಿ ದಾಲ್ಚಿ­ನಿ­ಗಿ­ರುವ ಗುಣ­ಗ­ಳೆಲ್ಲ ಇದ್ದರೂ ಇದು ಪಕ್ಕಾ ದಾಲ್ಚಿ­ನಿ­ಯಲ್ಲ. ವರಿ­ಜ­ನಲ್‌ ದಾಂಚಿ­ನಿ­ಯನ್ನು ಸ್ವಂತ ಜಾಗ­ದಲ್ಲಿ ಪ್ರತ್ಯೇ­ಕ­ವಾಗಿ ಕೃಷಿ ಮಾಡು­ತ್ತಿ­ರು­ವ­ವರು ಸೊರಬ ತಾಲೂ­ಕಿನ ಹೊಸ­ಬಾಳೆ ಮಂಜು­ನಾಥ.
ಸುಮಾರು 60ನೇ ದಶ­ಕ­ದಲ್ಲಿ ಮಂಜು­ನಾಥ ಅವರ ತಂದೆ ಎಚ್‌. ನಾರಾ­ಯಣ ರಾವ್‌ ಅವರು ಕೇರ­ಳದ ಅಚ­ರ­ಕಂ­ಡಿಯ ಬ್ರಿಟಿಷ್‌ ಫಾರಂ­ನಿಂದ ದಾಲ್ಚಿ­ನಿ­ಯನ್ನು ತಂದು ಕೃಷಿ ಆರಂ­ಭಿ­ಸಿ­ದರು. ಅವರು ಇದರ ಸಸಿ­ಯನ್ನು ಮೊದಲು ಬ್ರಿಟಿಷ್‌ ಫಾರಂ­ನಲ್ಲಿ ಕೆಲ­ಸಕ್ಕೆ ಸೇರಿ ಗಿಡ ತಂದ­ರಂತೆ. ಇದು ಮೂಲತಃ ಶ್ರೀಲಂ­ಕಾ­ದ­ಲ್ಲಿ­ರುವ ದಾಲ್ಚಿನಿ ತಳಿ.
ಶೂನ್ಯ ಕೃಷಿ
ಒಣ ಮತ್ತು ಕಲ್ಲು ಮಿಶ್ರಿತ ಭೂಮಿಗೆ ಯೋಗ್ಯ­ವಾ­ದದ್ದು ದಾಲ್ಚಿನಿ. ಸಸಿ­ಯನ್ನು ನಾಟಿ ಮಾಡಿದ ನಾಲ್ಕು ವರ್ಷ­ಗಳ ಕಾಲ ಬೆಂಕಿ­ಯಿಂದ ರಕ್ಷಣೆ ಮಾಡಿ­ಕೊ­ಳ್ಳ­ಬೇಕು. ಒಮ್ಮೆ ನಾಟಿ ಮಾಡಿದ ಮೇಲೆ ಇದಕ್ಕೆ ವಿಶೇಷ ಕೃಷಿ ಮಾಡುವ ಅಗ­ತ್ಯ­ವಿಲ್ಲ. ಮೇಲು ಗೊಬ್ಬರ ನೀಡಿ­ದರೆ ಗಿಡದ ಬೆಳ­ವ­ಣಿಗೆ ಉತ್ತ­ಮ­ವಾ­ಗು­ತ್ತವೆ. ಇಳು­ವರಿ ಪ್ರಮಾ­ಣವು ಹೆಚ್ಚಾ­ಗು­ತ್ತದೆ ಎನ್ನು­ವುದು ಮಂಜು­ನಾ­ಥರ ಅಭಿ­ಪ್ರಾಯ.
ಗಿಡ­ವನ್ನು ನಾಟಿ ಮಾಡಿದ 5-6 ವರ್ಷಕ್ಕೆ ಕೊಯ್ಲಿಗೆ ಬರು­ತ್ತದೆ. ಕೊಯ್ಲು ಅಂದರೆ ಮರದ ಚಕ್ಕೆ­ಯನ್ನು ಕೆತ್ತು­ವುದು. ಇದನ್ನು ದಾಲ್ಚಿನಿ ಮರಕ್ಕೆ ಪೆಟ್ಟಾ­ಗದ ರೀತಿ ತೆಗೆ­ಯ­ಬೇ­ಕಾ­ಗು­ತ್ತದೆ. ಇದರ ಎಲೆಯು ಬಳ­ಕೆಗೆ ಬರು­ತ್ತದೆ. ಮತ್ತು ಇದಕ್ಕೆ ಮಾರು­ಕ­ಟ್ಟೆ­ಯಲ್ಲಿ ಉತ್ತಮ ಬೇಡಿ­ಕೆಯೂ ಇದೆ. ಅಷ್ಟೇ ಅಲ್ಲದೆ ಇದ­ರಲ್ಲಿ ಬಿಡುವ ಕಾಯಿಯು ಕೂಡಾ ಉಪ­ಯೋ­ಗಕ್ಕೆ ಬರು­ತ್ತದೆ. ಚಕ್ಕೆ ಮತ್ತು ಎಲೆ ಸಾಂಬಾರ ಪದಾ­ರ್ಥ­ವಾಗಿ ಬಳ­ಕೆಗೆ ಬಂದರೆ, ಕಾಯಿ­ಗಳು ಎಣ್ಣೆ ತಯಾ­ರಿ­ಕೆಗೆ ಬರು­ತ್ತದೆ. ಇದೊಂದು ಥರಾ ಬಹು­ಪ­ಯೋಗಿ ಬೆಳೆ.
ದಾಲ್ಚಿನಿ ಕೃಷಿ­ಯನ್ನು ಹೊಸ­ಬಾಳೆ ಮಂಜು­ನಾಥ ಅವರು ಮಾಡು­ವು­ದಕ್ಕೆ ತೊಡ­ಗಿದ ಮೇಲೆ ಒಂದಷ್ಟು ಪ್ರಚಾರ ಪಡೆ­ಯಿತು. ಕೆಲವು ಕೃಷಿ­ಕರು ಇದನ್ನು ತಮ್ಮ ತೋಟ­ದಲ್ಲಿ ನಾಟಿ ಮಾಡಿ­ದರು. ಆರ್ಥಿಕ ದೃಷ್ಠಿ­ಯಿಂದ ಅಲ್ಲ­ದಿ­ದ್ದರೂ ಮೊದ ಮೊದಲು ಸ್ವಂತ ಬಳ­ಕೆಗೆ ಬೆಳೆ­ದರು. ಈಗ ಅದೇ ಹಣ ತರುವ ಬೆಳೆ­ಯಾಗಿ ಪರಿ­ಣ­ಮಿ­ಸಿದೆ!
ತೋಟ­ಗಾ­ರಿಕ ಇಲಾ­ಖೆ­ಯ­ವರು ದಾಲ್ಚಿನಿ ಸಸ್ಯ­ಗ­ಳನ್ನು ಬೆಳೆ­ಸು­ತ್ತಿ­ದ್ದಾರೆ. ಅಲ್ಲದೇ ರೈತ­ರಿಗೆ ಬೆಳೆ­ಸ­ಲಿಕ್ಕೂ ಸಸ್ಯ­ಗ­ಳನ್ನು ನೀಡು­ತ್ತಾರೆ. ಇದ­ಕ್ಕಾಗಿ ಇವರು ನರ್ಸ­ರಿ­ಗ­ಳಲ್ಲಿ ಸಸ್ಯಾ­ಭಿ­ವೃದ್ಧಿ ಮಾಡು­ತ್ತಾರೆ. ಇವರ ನರ್ಸ­ರಿಗೆ ಬಹ­ಳಷ್ಟು ವರ್ಷ­ಗಳ ಕಾಲ ಮಂಜು­ನಾಥ ಹೆಗಡೆ ತಮ್ಮ­ಲ್ಲಿ­ರುವ ದಾಲ್ಚಿನಿ ಸಸ್ಯ­ಗ­ಳನ್ನು ನೀಡಿ­ದ್ದಾರೆ.

ದಾಲ್ಚಿ­ನಿಯ ವಿವಿಧ ಉಪ­ಯೋಗ
ಸಾಂಬಾ­ರದ ಉಪ­ಯೋಗ ಮಾತ್ರ­ವ­ಲ್ಲದೇ ಬಹ­ಳಷ್ಟು ಬಗೆಯ ಉಪ­ಯೋ­ಗಕ್ಕೆ ದಾಲ್ಚಿನಿ ಬರು­ತ್ತದೆ. ಎಣ್ಣೆ ತಯಾ­ರಿಕೆ, ಹಳ್ಳಿ­ಗ­ಳಲ್ಲಿ ಸಾಮಾ­ನ್ಯ­ವಾಗಿ ಮರದ ಹಲಿ­ಗೆಯ ಮುಚ್ಚಿಗೆ ಮಾಡು­ತ್ತಾರೆ ಮಾಳಿಗೆ ಮನೆ­ಗ­ಳಿಗೆ. ಅಂತಹ ಸಂಧ­ರ್ಭ­ದಲ್ಲಿ ಇದರ ಸೊಪ್ಪನ್ನು ಮುಚ್ಚಿ ನಂತರ ಮಣ್ಣು ತುಂಬುವ ಪದ್ಧತಿ ಇತ್ತು. ಇದ­ರಿಂದ ಮರಕ್ಕೆ ಬರುವ ಒರ­ಲೆ­ಯಿಂದ ಮುಕ್ತಿ ಸಿಕ್ಕಿ ಬಹ­ಳಷ್ಟು ವರ್ಷ ಮರ ಬಳ­ಕೆಗೆ ಬರು­ತ್ತದೆ. ಹಾಗೆಯೇ ನೋವಿನ ಎಣ್ಣೆ, ದಾಲ್ಚಿ­ನಿ­ಯಲ್ಲಿ ಸಿಗುವ ಯುಜಿ­ನಾಲ್‌ ಮತ್ತು ವೆನಿ­ಲಿ­ಲ್‌­ನಿಂದ ಲೋಕಲ್‌ ಅರ­ವ­ಳಿಕೆ ತಯಾ­ರಿಕೆ ಮಾಡು­ತ್ತಾರೆ. ಹಲ್ಲು ನೋವಿಗೆ ಇದು ರಾಮ­ಬಾ­ಣ­ದಂ­ತಹ ಔಷಧ.
`ದಾ­ಲ್ಚಿನಿ ಒಣ ಭೂಮಿಗೆ ಹೇಳಿ ಮಾಡಿ­ಸಿದ ಬೆಳೆ. ಕಡಿಮೆ ಬಂಡ­ವಾಳ- ಹೆಚ್ಚು ಆದಾಯ. ಎರಡು ವರ್ಷ­ಕ್ಕೊಮ್ಮೆ 45 ಸಾವಿ­ರ­ದಿಂದ 50 ಸಾವಿರ ರೂಪಾಯಿ ಗಳಿಕೆ ತರು­ತ್ತದೆ. ಅವ­ಕಾ­ಶ­ವಿದ್ದು ನರ್ಸರಿ ಮಾಡು­ವಷ್ಟು ಜಾಗದ ಸೌಕ­ರ್ಯ­ವಿ­ದ್ದರೆ ಮತ್ತಷ್ಟು ಹೆಚ್ಚಿನ ಆದಾಯ ಪಡೆ­ಯ­ಬ­ಹುದು. ನನ­ಗೆಂತು ದಾಲ್ಚಿನಿ ಇರು­ವು­ದ­ರಿಂದ ತೊಂದ­ರೆ­ಯಾ­ಗ­ಲಿಲ್ಲ. ಅದ­ಕ್ಕಾಗಿ ಅಪ್ಪ ಆಸ­ಕ್ತಿ­ಯಿಂದ ಮಾಡಿದ ಈ ಗಿಡ­ಗ­ಳನ್ನು ತೆಗೆದು ಬೇರೆ ಕೃಷಿ ಮಾಡಲು ಹೋಗ­ಲಿಲ್ಲ'- ತಮ್ಮ ಪೂರ್ವಿ­ಕರು ನೀಡಿದ ಈ ಬೆಳೆಯ ಬಗ್ಗೆ ಮಂಜು­ನಾಥ ಅವರ ಮೆಚ್ಚು­ಗೆಯ ನುಡಿ ಇದು.
ದಾಲ್ಚಿನಿ ಕೃಷಿಗೆ ಯಾವುದೇ ತರ­ಹದ ರಾಸಾ­ಯ­ನಿಕ ಬಳ­ಸದೆ ಇರು­ವು­ದ­ರಿಂದ ಸಾವ­ಯವ ಮಾರು­ಕ­ಟ್ಟೆ­ಯಲ್ಲಿ ಹೆಚ್ಚಿನ ಬೇಡಿ­ಕೆ­ಯಿದೆ. ಖಾಸಗಿ ವ್ಯಾಪಾ­ರಿ­ಗಳು, ಕಂಪೆ­ನಿ­ಗಳು ಇವ­ರ­ಲ್ಲಿಗೆ ಬಂದು ದಾಲ್ಚಿ­ನಿ­ಯನ್ನು ಖರೀ­ದಿ­ಸಿ­ಕೊಂಡು ಹೋಗು­ತ್ತಾರೆ. ಲಾಲ್‌­ಬಾಗ್‌ ಸಸ್ಯ ಪ್ರದ­ರ್ಶ­ನ­ದಲ್ಲಿ ಆರೇಳೇ ವರ್ಷ ಇವರ ದಾಲ್ಚಿನಿ ಕೃಷಿಗೆ ಪ್ರಶ­ಸ್ತಿಯೂ ಲಭಿ­ಸಿದೆ. ಸುಮಾರು ಎರಡು ಎಕರೆ ಪ್ರದೇ­ಶ­ದಲ್ಲಿ ದಾಲ್ಚಿ­ನಿ­ಯನ್ನು ಬೆಳೆ­ಸು­ತ್ತಿ­ರುವ ಮಂಜು­ನಾಥ ಅವರ ಕೆಲಸ ಶ್ಲಾಘ­ನೀಯ.
ಮಾಹಿತಿ ಬೇಕಾ­ದರೆ: ಮಂಜು­ನಾಥ್‌ ಹೊಸ­ಬಾಳೆ, ಸೊರಬ ತಾಲೂಕು, ಶಿವ­ಮೊಗ್ಗ ಜಿಲ್ಲೆ. ದೂ: 08184-263437.
ನಾಗ­ರಾಜ ಮತ್ತಿ­ಗಾರ

Monday, November 10, 2008

ತೆಂಗಿನ ಮರ ಏರುವ ಸುಲಭ ಸಾಧನ


ಕೃಷಿಕರ ಪಾಡು ಹೀನಾಯ. ಕೂಲಿ ಕಾರ್ಮಿಕರು ನಗರಗಳತ್ತ ವಲಸೆ ಹೋಗಿ ಗಾರೆ, ಮರ ಕೈಗಾರಿಕೆ, ಹೋಟೆಲ್‌, ಗಾರ್ಮೆಂಟ್‌ ಕಾರ್ಮಿಕರಾಗುತ್ತಿದ್ದಾರೆ. ಖುದ್ದು ಕೃಷಿ ಕಾರ್ಮಿಕನ ಪುಟ್ಟ ಜಮೀನಿನ ಕಾಮಗಾರಿಗೂ ಆಳು ತತ್ವಾರ. ಇನ್ನು ತೆಂಗಿನ ಮರ ಹತ್ತಿ ಕಾಯಿ ಇಳಿಸುವಂತ ಪರಿಣತ ಚಟುವಟಿಕೆಗಂತೂ ನುರಿತ ಪಟುಗಳ ಅಭಾವ ಹೇಳತೀರದು. ಮಲೆನಾಡು, ಕರಾವಳಿಯ ಹಲವು ಭಾಗಗಳಲ್ಲಿ ಬಿದ್ದ ಸಿಪ್ಪೆಕಾಯಿಯನ್ನಷ್ಟೇ ಹೆಕ್ಕಿ ತಂದಿಟ್ಟುಕ್ಕೊಳ್ಳುವ ಕ್ರಮ ಜಾರಿಗೆ ಬಂದಿದೆ. ಮತ್ತೇನು ಮಾಡಿಯಾರು?
ಪೂರ್ಣ ಯಾಂತ್ರೀಕರಣ ಇಂತಹ ನಾಜೂಕಿನ ಕೆಲಸಕ್ಕೆ ಊಹಿಸಲೂ ಸಾಧ್ಯವಿಲ್ಲ. ಕೊನೆಗೆ ರೋಬೋಟ್‌ ಕೂಡ ಈ ದುಡಿಮೆಗಿಳಿಯುವುದು ಅನುಮಾನ! ನಿರಾಶೆಯ ಅಗತ್ಯವಿಲ್ಲ. ಮರ ಹತ್ತಲು ಮಾನವನಿಗೆ ಉತ್ತೇಜನವೀಯುವಂತ ಉಪಕರಣ ಸೃಷ್ಟಿಸಬಹುದಾದಂತ ಸಾಧ್ಯತೆಯಂತೂ ಇದೆ. ಆ ನಿಟ್ಟಿನಲ್ಲಿಯೇ ಸಂಶೋಧನೆಗಳೂ ನಡೆದಿದೆ.
ನಿಜ, ಅಂತಹ ಹಲವು ಪ್ರಯತ್ನಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ನಡೆದಿವೆ. ಕೇರಳದ ಜೋಸೆಫ್‌ ಎನ್ನುವವರು ಮೊತ್ತಮೊದಲಾಗಿ ಕಂಡುಹಿಡಿದ ಮರ ಏರುವ ಸಾಧನ ಚೆನ್ನಾಗಿಯೇ ಇತ್ತು. ಮೂರಡಿ ಉದ್ದದ ಉಪಕರಣದಲ್ಲಿ ಮರಕ್ಕೆ ಜೋಡಿಸುವಂತ ಎರಡು ಭಾಗ. ಇವುಗಳ ಮೇಲ್ಭಾಗದಲ್ಲಿ ಕೈ ತೂರಿಸಿ ಹಿಡಿದುಕೊಳ್ಳಲು ಕಬ್ಬಿಣದ ಹಿಡಿಕೆ. ಕೆಳತುದಿಯಲ್ಲಿ ಪಾದವನ್ನು ಇರಿಸಿಕೊಳ್ಳುವ ವ್ಯವಸ್ಥೆ. ಇದು ಹೊರಮೈಯಲ್ಲಿದ್ದರೆ ಒಳಭಾಗದಲ್ಲಿ ಮೇಲ್ತುದಿಯಿಂದ ತೆಂಗಿನ ಮರವನ್ನು ಆವಾಹಿಸಿರುವ ಟಯರ್‌ನ ಕ್ಲಿಪ್‌, ಅದಕ್ಕೆ ಕ್ಲಚ್‌ ಕೇಬಲ್‌ನ ಬೆಂಬಲ. ಇನ್ನೊಂದು ಭಾಗವೂ ಇದೇ ತರ.
ಕೇಬಲ್‌ನ್ನು ಮರವನ್ನು ಬಳಸುವಂತೆ ಮಾಡಿ ಕ್ಲಿಪ್‌ ಹಾಕಬೇಕು. ಎರಡರಲ್ಲೂ ಪಾದ ತೂರಿಸಿ ನಿಂತರೆ ಉಪಕರಣ ಬಳಸಲು ಸಿದ್ಧ. ಈಗ ಒಂದು ಕಾಲಿನ ಮೇಲೆ ಪೂರ್ಣ ಭಾರ ಬಿಟ್ಟು ಇನ್ನೊಂದು ಭಾಗವನ್ನು ಕೈಹಿಡಿಕೆಯಿಂದ ಮೇಲೆತ್ತಬೇಕು. ಈಗ ಅದರ ಮೇಲೆ ಭಾರ ಹೇರಿ ಇನ್ನೊಂದನ್ನು ಮೇಲೆತ್ತುವುದು. ಹೀಗೆ ಒಂದನ್ನೊಂದು ಮೇಲೆತ್ತುತ್ತಿದ್ದಂತೆ ನಾವು ಮರ ಏರಿರುತ್ತೇವೆ!
ಇದರಲ್ಲೂ ಕೆಲವು ಸಮಸ್ಯೆಗಳು. ಮರ ಬಾಗಿದ್ದಲ್ಲಿ ಅಥವಾ ಅಂಕುಡೊಂಕಾಗಿದ್ದಲ್ಲಿ ಈ ಸಾಧನ ಉಪಯೋಗಕ್ಕೆ ಬಾರದು. ಕೇಬಲ್‌ ಮರದ ಮೆಲಿದ್ದಾಗ ತುಂಡಾದರೆ? ಬಹುಷಃ ಫೋಟೋ ನಮಗೆ ಹೆಚ್ಚಿನ ಚಿತ್ರಣ ನೀಡುತ್ತದೆ.
ಒಂದಿಷ್ಟು ಫ್ಲಾಶ್‌ಬ್ಯಾಕ್‌ಗೆ ಹೋದರೆ, 60ರ ದಶಕದಲ್ಲಿಯೇ ಎ.ವಿ.ಡೇವಿಸ್‌ ಎಂಬಾತ ತ್ರಿಕೋನಾಕೃತಿಯ ಚೌಕಟ್ಟಿಗೆ ಎರಡು ರೋಲರ್‌ ಅಳವಡಿಸಿದ ವಿನೂತನ ಮರ ಏರುವ ಯಂತ್ರ ರೂಪಿಸಿದ್ದ ಇತಿಹಾಸ ಕಾಣುತ್ತದೆ. ಒಂದು ರೋಲರ್‌ ಮರಕ್ಕೆ. ಅದು ಕೇಬಲ್‌ ಬಲದಿಂದ ಮರಕ್ಕೆ ಭದ್ರ. ಇನ್ನೊಂದು ರೋಲರ್‌ಗೆ ಪೆಡಲ್‌ ವ್ಯವಸ್ಥೆ. ಕೂತ ಮನುಷ್ಯ ಪೆಡಲ್‌ ಮಾಡಿದಂತೆ ಯಂತ್ರ ಮೇಲೇರುತ್ತದೆ. ಉಪಕರಣದ ಭಾರ ಬರೀ 90 ಕೆ.ಜಿ.! ಅದನ್ನು ಪೆಡಲ್‌ ಮಾಡಲು ಕನಿಷ್ಟ 9 ಕೆ.ಜಿ. ಶಕ್ತಿ ಬೇಕಿತ್ತು. ಆಮಟ್ಟಿಗೆ ಇದನ್ನು ವೈಫಲ್ಯ ಎಂದರೂ ಅವತ್ತು ಬಳಸಿದ ವೈಜ್ಞಾನಿಕ ಸೂತ್ರವೇ ಇಂದಿಗೂ ಬಳಕೆಯಾಗುತ್ತಿದೆ. ಅಷ್ಟೇಕೆ, ಇದೀಗ ಕೊಯಮತ್ತೂರಿನ ಕೃಷಿ ಯಾಂತ್ರಿಕ ಸಂಶೋಧನಾ ಕೇಂದ್ರ ತಯಾರಿಸಿದ ಸುಧಾರಿತ ಸಾಧನಕ್ಕೂ ಇದೇ ಆಧಾರ.
ಇದನ್ನು ಲಘು ಸ್ಟೀಲ್‌ ಚೌಕಾಕೃತಿಯ ಪೈಪ್‌ಗಳಿಂದ ತಯಾರಿಸಲಾಗಿದೆ. ಇದಕ್ಕೂ ಎರಡು ಫ್ರೇಮ್‌ಗಳು. ಮೇಲಿನ ಫ್ರೇಮ್‌ನ್ನು ಎರಡೂ ಕೈ ಬಳಸಿ ಚಾಲಿಸಬೇಕು. ಕೆಳಗಿನ ಫ್ರೇಮ್‌ನ್ನು ಒಂದು ಕಾಲಿನಿಂದ ಮೇಲೆತ್ತಿಕೊಳ್ಳುವ ತಂತ್ರ ಅನುಸರಿಸಬೇಕು. ಇವೆರಡೂ ಫ್ರೇಮ್‌ಗಳನ್ನು ಬೆಲ್ಟ್‌ನಿಂದ ಒಂದಕ್ಕೊಂದು ಜೋಡಿಸಲಾಗಿದ್ದು ಮರ ಹತ್ತುವ ವ್ಯಕ್ತಿಯ ಎತ್ತರವನ್ನು ಆಧರಿಸಿ ಫ್ರೇಮ್‌ ನಡುವಣ ಅಂತರವನ್ನು ಹೊಂದಿಸಿಕೊಳ್ಳಬಹುದು. ಗಮನಿಸಬೇಕಾದುದೆಂದರೆ, ಮೇಲ್ಗಡೆಯ ಫ್ರೇಮ್‌ನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಕೆಳ ಫ್ರೇಮ್‌ನಲ್ಲಿ ಕಾಲಿಟ್ಟುಕೊಳ್ಳುವ ಸೌಲಭ್ಯ. ಇಲ್ಲೂ ಅಷ್ಟೇ, ಈ ಫ್ರೇಮ್‌ಗಳು ಒಂದರ ನಂತರ ಇನ್ನೊಂದು ಮೇಲೆ ಕೆಳಗೆ ಚಲಿಸುವುದರಿಂದ ಮರವನ್ನು ಹತ್ತಿ ಇಳಿದು ಮಾಡಬಹುದು.
ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ವಿ.ಜಿ.ಎಫ್‌.ಕುಮಾರ್‌ರ ಪ್ರಕಾರ ಇದು ಶೇಕಡಾ ನೂರರ ಸುರಕ್ಷಿತ ಏರು ಸಾಧನ. ಉಳಿದವುಗಳಲ್ಲಿ ಏರುವ ಮನುಷ್ಯ ಬೀಳುವ ಅಪಾಯ ಇದ್ದೇಇತ್ತು. ಇಲ್ಲಿ ಫ್ರೇಮ್‌ ಒಳಗೇ ಏರುವಾತ ಇರುವುದರಿಂದ ಕಾಲು ಜಾರಿದರೂ ಬಹುಮಟ್ಟಿಗೆ ಸುರಕ್ಷಿತ. ಪರಿಣತಿ ಇಲ್ಲದವರೂ ಹತ್ತು ನಿಮಿಷಗಳಲ್ಲಿ ಒಂದು ಮರ ಹತ್ತಬಹುದು. ಮುಖ್ಯವಾಗಿ, ಸಲಕರನೆಯ ತೂಕ ಅತ್ಯಂತ ಕಡಿಮೆ ಇರುವುದರಿಂದ ಮಾನವ ಶಕ್ತಿ ಬಳಕೆಯಾಗುವುದು ನಗಣ್ಯ. ಬಹುಷಃ ಬಾಗಿದ, ಡೊಂಕಾದ ಮರ ಹತ್ತಲು ಈ ಸಾಧನವೂ ಪೂರಕವಾಗಿಲ್ಲ.
ಇಡೀ ಉಪಕರಣದ ತೂಕ ಬರೀ ಒಂಬತ್ತು ಕೆ.ಜಿ. ಬೆಲೆ ಅಜಮಾಸು ಎರಡೂವರೆ ಸಾವಿರ ರೂಪಾಯಿ. ತಾಂತ್ರಿಕತೆ ಅರ್ಥವಾದಲ್ಲಿ ಸ್ಥಳೀಯ ಲೇತ್‌ಗಳಲ್ಲಿ ಖುದ್ದು ನಾವೇ ತಯಾರಿಸಿಕೊಳ್ಳಲೂಬಹುದು.
ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ 0422 6611204

-ಮಾವೆಂಸ

Sunday, November 9, 2008

ಬಿಟಿ ಬದನೆಗೆ ಒತ್ತು ಬದನೆ ಕಾಯಿಗೆ



22 ಫೆಬ್ರವರಿ 2008, 12 ಘಂಟೆ.
ಕೊಯಂಬತ್ತೂರಿನ ತಮಿಳುನಾಡು ಕೃಷಿವಿಶ್ವವಿದ್ಯಾಲಯದ ಗೇಟಿನ ಮುಂದೆ ಒಂದಷ್ಟು ರೈತರು ಜಮಾಯಿಸಿದರು. ಸ್ವಲ್ಪ ಹೊತ್ತಿನಲ್ಲೇ ಇನ್ನಷ್ಟು ಜನ ಗುಂಪುಕಟ್ಟಿ ಬಂದರು, ಪೆನ್‌-ಪ್ಯಾಡ್‌, ಕ್ಯಾಮರಾ ಹಿಡಿದ ಮಾಧ್ಯಮದ ಮಂದಿ ಜೊತೆಗೂಡಿದರು. ಅದೊಂದು ದೊಡ್ಡ ಗುಂಪೇ ಆಯಿತು. ನೋಡ ನೋಡುತ್ತಿದ್ದಂತೆ ಗುಂಪು ಗೇಟಿನ ಅಂಚಿಗಿದ್ದ ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಎಂಬ ನಾಮ ಫಲಕದ ಕೆಳಗೆ ಈಗ ಮನ್ಸಾಂಟೊ ತೆಕ್ಕೆಗೆ ಎಂಬ ಸ್ಟಿಕ್ಕರ್‌ ಅಂಟಿಸಿದರು. ಒಂದಷ್ಟು ಜನ ಅಲ್ಲೇ ಗೇಟಿನ ಮುಂದೆ ಧರಣಿ ಕುಂತರು. ಇನ್ನಷ್ಟುಜನ ಪತ್ರಕರ್ತರ ಜೊತೆ ಕ್ಯಾಂಪಸ್‌ನ ಒಳನಡೆದು ಬಿಟಿ ಬದನೆ ಎಂದು ಬೋರ್ಡು ತಗುಲಿಸಿದ್ದ ಹೊಲದ ಅಂಚಿನಲ್ಲಿ ಕುಂತರು. ಗುಂಪಿನಿಂದ ಬಿಟಿ ಬೇಡ ಮನ್ಸಾಂಟೋ ತೊಲಗು ನಮ್ಮ ಊಟ: ನಮ್ಮ ಹಕ್ಕು....ಭಿತ್ತಿ ಪತ್ರಗಳು ತಲೆಎತ್ತಿದವು. ಕ್ಯಾಮರಾ, ವಿಡಿಯೋ ಸದ್ದು ಮಾಡಿದವು. ಇಡೀ ಕಾರ್ಯಾಚರಣೆ ಮಕ್ಕಳ್‌ ಟಿವಿಯಲ್ಲಿ ನೇರ ಪ್ರಸಾರ ಕಾಣುತ್ತಿತ್ತು.
ನಿಧಾನವಾಗಿ ಪೋಲೀಸರು ಬಂದರು!. ಬಿಟಿ ಬದನೆಗೆ ಕೈಹಚ್ಚದೆ ಶಾಂತರೀತಿಯಲ್ಲಿ ಧರಣಿ ಕುಂತ ಗುಂಪನ್ನು ಕಂಡು ಅವರಿಗೂ ನಿರಾಸೆಯಾಯಿತು; ಲಾಠಿ ಬೀಸುವ ಅವಕಾಶ ತಪ್ಪಿದ್ದಕ್ಕೆ. ಪ್ರತಿಭಟನಾಕಾರರ ಜೊತೆ ಪೋಲೀಸರು ಕಾದೇ ಕಾದರು. ವಿಶ್ವವಿದ್ಯಾಲಯದ ಯಾಮೊಬ್ಬ ನೌಕರ, ವಿಜ್ಞಾನಿ, ವಿದ್ಯಾರ್ಥಿ ಇತ್ತ ಸುಳಿಯಲಿಲ್ಲ. ಸ್ವತಃ ಡೆಪ್ಯುಟಿ ಕಮೀಷನರ್‌ ಆಫ್‌ ಪೋಲೀಸ್‌ ವಿನಂತಿಸಿದರೂ ಉಪಕುಲಪತಿಗಳು ಸ್ಥಳಕ್ಕೆ ಬರುವ ಧೈರ್ಯ ತೋರಲಿಲ್ಲ.....ಘಂಟೆ ಎರಡರ ಹೊತ್ತಿಗೆ ಪ್ರತಿಭಟನಾಕಾರರು ಚದುರಿದರು.
ಸಂಜೆಯ ವೇಳೆಗೆ ಈ ಘಟನೆ ರಾಷ್ಟ್ರೀಯ ಮಟ್ಟದ ಸುದ್ದಿಯಾಯಿತು. ಬಿಟಿ ಬದನೆ ಪ್ರತಿಭಟನೆಯ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡಿದವು. ಪಿಎಂಕೆ ನಾಯಕ ರಾಮದಾಸ್‌ ಬಿಟಿ ಬದನೆ ತಮಿಳುನಾಡಿಗೆ ಕಾಲಿಡಕೂಡದು ಎಂದು ಗುಡುಗಿದರು. ರಾಜಕೀಯ ನಾಯಕರು ಬಿಟಿ ಬದನೆಯ ಪರ-ವಿರೋಧ ಹೇಳಿಕೆ ಕೊಟ್ಟರು.
ಸಣ್ಣದನಿಯಲ್ಲಿ ಕೇಳಿಬರುತ್ತಿದ್ದ ಬಿಟಿ ಬದನೆಯ ವಿರೋಧಕೆ ದನಿ ಬಂತು.
ಬದನೆಕಾಯಿ ಪುರಾಣ!
ಬಿಟಿ ಹತ್ತಿ ನಮಗೆ ಗೊತ್ತು, ಏನಿದು ಬಿಟಿ ಬದನೆ? ಎಂದು ತಲೆತುರಿಸಿಕೊಳ್ಳುವ ಮುನ್ನ ಬದನೆಕಾಯಿಯ ಇತಿಹಾಸದತ್ತ ಒಮ್ಮೆ ಕಣ್ಣು ಹಾಯಿಸಿ. ಬದನೆಕಾಯಿ ಹುಟ್ಟಿದ್ದೇ ಭಾರತದಲ್ಲಿ. ಕಾಡು ಬದನೆಯನ್ನು ಕೃಷಿಗೆ ಒಗ್ಗಿಸಿದ ಹೆಮ್ಮೆ ನಮ್ಮದು, ನಾಲ್ಕು ಸಾವಿರ ವರ್ಷಗಳಿಂದ ಬದನೆಯ ಕೃಷಿ ಭಾರತದಲ್ಲಿ ನಡೆಯುತ್ತಿದೆ. ರೈತರು ನೂರಾರು ತರದ ಬದನೆ ತಳಿಗಳನ್ನು ಅಭಿವೃದ್ಧಿ ಪಡಿಸಿ ಆಯಾ ಪ್ರದೇಶಕ್ಕೆ ಒಗ್ಗಿಸಿದ್ದಾರೆ. 8ನೇ ಶತಮಾನದಲ್ಲಿ ಅರಬ್‌ ವರ್ತಕರು ಬದನೆಯನ್ನು ಮಧ್ಯಪ್ರಾಚ್ಯದೇಶಗಳಿಗೆ ಪರಿಚಯಿಸಿದರು. ಅಲ್ಲಿಂದ ಇದು ಯೂರೋಪ್‌ಗೆ ಬಂತು; ಇಡೀ ಪ್ರಪಂಚಕ್ಕೆ ಹರಡಿತು.
ನಮ್ಮ ಜನಪದರ ಹಾಡು, ಗಾದೆ ಮಾತು, ಕತೆ, ಕಾವ್ಯಗಳಲ್ಲಿ ಬದನೆ ಮಾತಾಗಿದೆ. ವರಹಾಮಿಹಿರನ ಬೃಹತ್‌ಸಂಹಿತೆಯಲ್ಲಿ ಬದನೆಯ ಪ್ರಸ್ತಾಪ ಬರುತ್ತದೆ. ಸುರಪಾಲನ ವೃಕ್ಷಾರ್ಯವೇದ ಗ್ರಂಥದಲ್ಲಿ ಬದನೆಕಾಯಿಯ ಗಾತ್ರ ದೊಡ್ಡದು ಮಾಡುವ, ಗಿಡ ಪೋಷಿಸುವ ತಂತ್ರಗಳ ವಿವರ ಸಿಗುತ್ತದೆ. ಆರ್ಯುವೇದದಲ್ಲಿ ಔಷಧಿಯಾಗಿ ಬಳಕೆಯಾಗುತ್ತದೆ. ಬದನೆ ಭಾರತೀಯರ ಬದುಕಿನ ಭಾಗವೇ ಹೌದು.
ಇವತ್ತು 5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬದನೆಯ ಕೃಷಿ ನಡೆಯುತ್ತಿದೆ. ಟೊಮೊಟೋದ ನಂತರ ಹೆಚ್ಚು ಬೆಳೆಯುವ, ಬಳಸುವ ತರಕಾರಿ. ವರ್ಷದ ಎಲ್ಲ ಋತುಮಾನಗಳಲ್ಲಿ ಬೆಳೆಯುವ, ಎಲ್ಲ ಮಣ್ಣಿಗೂ ಒಗ್ಗುವ ಅಪರೂಪದ ಬೆಳೆ. ಬಡವರ ತರಕಾರಿ ಎಂಬ ಹೆಗ್ಗಳಿಕೆ.
ಬದನೆಯ ವೈವಿಧ್ಯ ಅಪಾರ, ಹಳ್ಳಿಗಾಡು ಸುತ್ತಿಬಂದರೆ, ನೂರೆಂಟು ತರದ ಬದನೆ ತಳಿಗಳು ಕಾಣಸಿಗುತ್ತವೆ. ಒರಿಸ್ಸಾ ರಾಜ್ಯ ಒಂದರಲ್ಲೇ 226 ಬದನೆ ತಳಿಗಳಿವೆ. ದೊಡ್ಡ ಬದನೆ, ಈರಂಗೆರೆ ಬದನೆ, ರಾಂಪುರ ಬದನೆ, ಗುಳ್ಳ ಬದನೆ, ಜೋಳ ಬದನೆ, ಬಾಲ ಬದನೆ, ಕೊತ್ತಿತಲೆ ಬದನೆ, ನೀಲಿ ಬದನೆ, ಗುಂಡು ಬದನೆ, ಬಿಳಿ ಬದನೆ, ಗೋಟಾಮಂಚೂರಿ, ಮುಳ್ಳು ಬದನೆ, ಬಾಸಲ ಬದನೆ.....ಕನ್ನಡನಾಡಿನ ಬದನೆ ತಳಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆಯಸ್ಸು ಮುಗಿದು ಬಂದಳಿಕೆ ಬಂದ ಗಿಡವನ್ನೇ ಟ್ರಿಮ್‌ ಮಾಡಿ, ಮತ್ತೆ ಮರುನೆಟ್ಟು ನಾಲ್ಕೈದು ವರ್ಷ ಕಾಯಿ ಪಡೆದ ಕೊಂಟು ಬದನೆ, ಕಾಡು ಸುಂಡೆಗಿಡಕ್ಕೆ ಊರು ಬದನೆ ಕಸಿಮಾಡುವ ದೇಸಿ ಪದ್ಧತಿಗಳು ಇವತ್ತಿಗೂ ಜೀವಂತವಾಗಿವೆ.
ಒಟ್ಟಿನಲ್ಲಿ ಬದನೆ ಸಂಸ್ಕತಿ ಭಾರತದ ನೆಲದಲ್ಲಿ ಬಲವಾಗಿ ಬೇರೂರಿದೆ.
ಬದನೆಗೆ ಶನಿಕಾಟ
ಮಣ್ಣಿನಲ್ಲಿ ಬ್ಯಾಸಿಲಸ್‌ ಥುರನ್‌ಜೆನಿಸಸ್‌ ಎಂಬ ಬ್ಯಾಕ್ಟೀರಿಯಾ ಇರುತ್ತವೆ. ಇವನ್ನೇ ಬಿಟಿ ಎನ್ನುವುದು. ಕಾಯಿ ಮತ್ತು ಕಾಂಡ ಕೊರಕ ಕೀಟಗಳಿಗೆ ಮಾರಕವಾಗಬಲ್ಲ ಪ್ರೋಟೀನನ್ನು ಉತ್ಪಾದಿಸುವ ಸಾಮರ್ಥ್ಯ ಬಿಟಿ ಬ್ಯಾಕ್ಟೀರಿಯಾಗಳಿಗಿದೆ. ಕೀಟಗಳಿಗೆ ಮೃತ್ಯುಕಾರಕವಾಗುವ ಬ್ಯಾಕ್ಟೀರಿಯಾದ ವಂಶವಾಯಿ (ಬಿಟಿ ಜೀನ್‌)ಯನ್ನು ಹುಷಾರಾಗಿ ಕತ್ತರಿಸಿ, ಗನ್‌ ಬಳಸಿ, ಗುಂಡು ಹೊಡೆದು ಬದನೆಗಿಡದ ಜೀವಕೋಶಕ್ಕೆ ಸೇರಿಸುತ್ತಾರೆ. ನೆನಪಿರಲಿ! ಇದು ದರ್ಜಿ ಕತ್ತರಿ ಹಿಡಿದು ಬಟ್ಟೆ ಕತ್ತರಿಸಿದಂತಲ್ಲ. ಸೂಕ್ಷ್ಮಾತಿಸೂಕ್ಷ್ಮವಾದ ಬಿಟಿ ಜೀನ್‌ನ್ನು ಪತ್ತೆ ಹಚ್ಚಿ, ಬದನೆಯ ಜೀವಕೋಶಕ್ಕೆ ಸೇರಿಸಲು ಅತ್ಯಾಧುನಿಕ ಸೂಕ್ಷ್ಮದರ್ಶಕ ಯಂತ್ರ, ಸಾಧನ ಸಲಕರಣೆ ಬೇಕು. ಕೋಟ್ಯಾಂತರ ಡಾಲರ್‌ ಖರ್ಚಿನ ಬಾಬತ್ತು ಇದು. ತನ್ನೊಳಗೆ ಬಿಟಿ ಜೀನ್‌ನ್ನು ಸೇರಿಸಿಕೊಳ್ಳುವ ಬದನೆಗಿಡ, ಮೈತುಂಬ ವಿಷ ತುಂಬಿಕೊಂಡ ಪೂತಿನಿ ಯಾಗುತ್ತದೆ. ಕಾಯಿ, ಕಾಂಡ ಕೊರಕ ಹುಳುಗಳು ಬಿಟಿಬದನೆಯ ಕಾಯಿ, ಎಲೆ ತಿಂದರೆ, ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ಸಾವನ್ನಪ್ಪುತ್ತವೆ. ಔಷಧಿ ಹೊಡೆಯುವ ತರಲೆ, ತಾಪತ್ರಾಯ ಇಲ್ಲ. ಇಳುವರಿ ತನ್ನಿಂದ ತಾನೇ ಹೆಚ್ಚುತ್ತದೆ.
ಅರೆ! ಎಂಥ ಅದ್ಧುತ ತಂತ್ರಜ್ಞಾನ?, ಎಂದು ಅಚ್ಚರಿ ಪಡುತ್ತೀರಾ? ಸ್ವಲ್ಪ ನಿಲ್ಲಿ. ಜೀನ್‌ ಜೊತೆಗಿನ ಚೆಲ್ಲಾಟ ಕಣ್ಣಿಗೆ ಬಟ್ಟೆಕಟ್ಟಿಕೊಂಡು ವೈರಿಯ ಜೊತೆ ಸೆಣಸಿದಂತೆ. ನಾವೆಂದುಕೊಂಡಂತೆ ಆಗಬೇಕೆಂದೇನೂ ಇಲ್ಲ. ಬ್ಯಾಕ್ಟೀರಿಯಾದಿಂದ ಪ್ರತ್ಯೇಕಿಸಿದ ಜೀನ್‌ ಪರಿಣಾಮಕಾರಿಯಾದರೂ ಕೂಡ, ಗಿಡದೊಳಗೆ ಹೋದ ನಂತರ ನಿಷ್ಕ್ರಿಯವಾಗಬಹುದು. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಸೃಷ್ಟಿಸಿದಂತೆ. ಸೃಷ್ಟಿಗೊಂಡ ಹೊಸತಳಿ ಹೊಸ ಸಮಸೈಗಳನ್ನು ತಂದೊಡ್ಡಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬ್ಯಾಕ್ಟೀರಿಯಾದಿಂದ ಜೀನ್‌ ಪ್ರತ್ಯೇಕಿಸುವ ತಂತ್ರಜ್ಞಾನ ಮಾನ್ಸಾಂಟೋದಂತ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆ. ಬಿಟಿ ತಳಿಗಳ ಅಭಿವೃದ್ಧಿಗೆ ಬೇಕಾದ Cry1Ac ಬಿಟಿ ಜೀನ್‌, ತಂತ್ರಜ್ಞಾನ ಬೇಕೆಂದರೆ ಮಾನ್ಸಂಟೋದ ಮೊರೆ ಹೋಗಬೇಕು. ಭಾರತದಲ್ಲಿ ಮಾನ್ಸಂಟೋದ ಪಾಲುದಾರ ಮಹಿಕೋ ಬೀಜಕಂಪನಿ ಬಿಟಿಜೀನ್‌ನನ್ನು ಬದನೆಗಿಡದೊಳಗೆ ಕಸಿಮಾಡುವ ತಂತ್ರಜ್ಞಾನಕ್ಕೆ ಪೇಟೆಂಟ್‌ ಪಡೆಯಲು ಅರ್ಜಿಹಾಕಿ ಕುಂತಿದೆ.
ಭಾರತಕ್ಕೆ ಕಾಲಿಟ್ಟ ಬಿಟಿ ಬದನೆ
ಬಿಟಿ ಹತ್ತಿಯ ಮೂಲಕ ವಂಶವಾಯಿ ಪರಿವರ್ತಿತ (ಜಿಎಂ) ಬೆಳೆಗಳಿಗೆ ನಮ್ಮ ದೇಶ ಬಾಗಿಲು ತೆರೆದಿದ್ದೇ ತಡ, ಬದನೆ, ಭತ್ತ, ಆಲೂಗೆಡ್ಡೆ, ಟೊಮೊಟೋ, ಸಾಸಿವೆ, ಪಪ್ಪಾಯದ ಬಿಟಿ ತಳಿಗಳು ಒಳನುಗ್ಗಿದವು.
ಬಿಟಿ ಬದನೆಯ ಪ್ರಯೋಗ ಶುರುವಾಗಿದ್ದು 2000ದಲ್ಲಿ. ಮನ್ಸಾಂಟೋದ ಪಾಲುದಾರ ಕಂಪನಿ ಮಹಿಕೋ ಮೊದಲೆರೆಡು ವರ್ಷ ಹಸಿರು ಮನೆಯೊಳಗೆ ಬಿಟಿ ಬದನೆಯ ಪ್ರಯೋಗನಡೆಸಿತು. 2004ರಲ್ಲಿ ದೇಶದ 11 ವಿವಿಧ ಸ್ಥಳಗಳಲ್ಲಿ ಪ್ರಯೋಗಾರ್ಥವಾಗಿ ಐದು ಬಿಟಿ ಹೈಬ್ರಿಡ್‌ ಬದನೆಯನ್ನು ಬೆಳೆಸಲಾಯಿತು. ದೊಡ್ಡ ಪ್ರಮಾಣದಲ್ಲಿ ಬೆಳೆಸಿನೋಡಲು ಸಿದ್ದವಾಗಿರುವ ಮಹಿಕೋದ ಬಿಟಿ ಹೈಬ್ರಿಡ್‌ ಬದನೆ 2009ರ ಮುಂಗಾರಿಗೆ ಮಾರುಕಟ್ಟೆಗೆ ಬರುವ ಸಿದ್ಧತೆ ನಡೆಸಿದೆ. ಭಾರತದ ಮೊದಲ ವಂಶವಾಯಿ ಪರಿವರ್ತಿತ ಆಹಾರ ಬೆಳೆ ಎಂಬ ಕುಖ್ಯಾತಿ ಬಿಟಿಬದನೆಯದ್ದು.
ಬಿಟಿ ಬದನೆಯ ರಂಗ ಪ್ರವೇಶಕ್ಕೆ ಅನುಕೂಲವಾಗಲೆಂದು ದೇಶದ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಪ್ರಾಯೋಗಿಕ ತಾಕುಗಳಲ್ಲಿ ಮಹಿಕೋದ ಬಿಟಿ ಹೈಬ್ರಿಡ್‌ನ ಮೌಲ್ಯಮಾಪನ ನಡೆಯುತ್ತಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕೂಡ ಈ ಕಾರ್ಯ ದಲ್ಲಿ ತೊಡಗಿದೆ.
ಒಂದೇ ಕಲ್ಲಿಗೆ ಎರಡು ಹಕ್ಕಿ!
ಅತ್ತ ಮಹಿಕೊ ಬಿಟಿ ಹೈಬ್ರಿಡ್‌ ಬದನೆಯನ್ನು ರಂಗಕ್ಕೆ ತರಲು ತಾಲೀಮು ನಡೆಸುತ್ತಿದ್ದರೆ, ಇತ್ತ 2006ರ ಆರಂಭಕ್ಕೆ USAIDನ ಆರ್ಥಿಕ ನೆರವಿನೊಂದಿಗೆ ಅಮೆರಿಕಾದ ಕಾರ್ನೆಲ್‌ ವಿಶ್ವವಿದ್ಯಾಲಯ ಬಿಟಿ ತಂತ್ರಜ್ಞಾನವನ್ನು ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಗಳ ಮೇಲೆ ಹೇರುವ, ಆ ಮೂಲಕ ವಂಶವಾಹಿ ಪರಿವರ್ತಿತ ಆಹಾರ ಬೆಳೆಗಳ ಸಂಶೋಧನೆ ಪ್ರಮುಖವಾಗುವಂತೆ ನೋಡಿಕೊಳ್ಳುವ ಯೋಜನೆ ರೂಪಿಸಿತು. ಬಿಟಿ ಬದನೆಯ ಸಂಶೋಧನೆ ನಡೆಸಲು ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಕೃಷಿವಿಶ್ವವಿದ್ಯಾಲಯ ಮತ್ತು ವಾರಣಾಸಿಯ ಭಾರತೀಯ ತರಕಾರಿ ಸಂಶೋಧನಾ ಮಂದಿರಗಳ ಜೊತೆ ಒಪ್ಪಂದಕ್ಕೆ ಸಹಿಹಾಕಿತು. ಕಾರ್ನೆಲ್‌ ವಿಶ್ವವಿದ್ಯಾಲಯ Cry1Ac ಬಿಟಿಜೀನ್‌ನ್ನು ನೀಡಿದರೆ, ಬದನೆಗಿಡಕ್ಕೆ ಈ ಬಿಟಿಜೀನ್‌ನ್ನು ಸೇರಿಸಲುಬೇಕಾದ ತಂತ್ರಜ್ಞಾನ ಪುಕ್ಕಟೆ ಕೊಡಲು ಮಹಿಕೊ ಮುಂದೆ ಬಂತು. ಬಿಟಿ ತಂತ್ರಜ್ಞಾನವನ್ನು ಉಚಿತವಾಗಿ ನೀಡಿದ ಮಹಿಕೋ ಬಿಟಿ ಬದನೆ ಹೈಬ್ರಿಡ್‌ ತಳಿ ಅಭಿವೃದ್ಧಿ ಪಡಿಸದಂತೆ ಕೃಷಿವಿಶ್ವವಿದ್ಯಾಲಯಕ್ಕ ಷರತ್ತು ವಿಧಿಸಿದೆ! ಸ್ಥಳೀಯ ಅಥವ ಸುಧಾರಿತ ಬದನೆ ತಳಿಗಳಿಗೆ ಮಾತ್ರ ಬಿಟಿ ಜೀನ್‌ ಸೇರಿಸಲು ಅವಕಾಶವಿದೆ. ಮಾರುಕಟ್ಟೆಯಲ್ಲಿ ಎದುರಾಳಿ ಇಲ್ಲದಂತೆ ನೋಡಿಕೊಳ್ಳುವ ಮಾನ್ಸಂಟೋ-ಮಹಿಕೋದ ಜಾಣತನವಿದು.
ಮನೆಬಾಗಿಲಿಗೆ ಬಂದ ಬಿಟಿ ಬದನೆ:
ಕರ್ನಾಟಕದಲ್ಲಿ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಲು ಮುಂದಾಧ ಮೊದಲ ಕೃಷಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಧಾರವಾಡದ್ದು. ಕಳೆದ ಒಂದು ದಶಕದಿಂದ ಸಾವಯವ ಕೃಷಿ ಬೇರುಗಳನ್ನು ಭದ್ರಪಡಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಬಿಟಿ ಬದನೆಯ ಸಂಶೋಧನೆಗೆ ಕೈಹಾಕುವ ಮೂಲಕ ಧಾರವಾಡ ಕೃಷಿ ವಿಶ್ವವಿದ್ಯಾಲಯ ತಾನೇ ಭೋದಿಸಿದ ಸಾವಯವ ಕೃಷಿ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದೆ. ಕಳೆದ ವರ್ಷದ ಹಿಂಗಾರು ಹಂಗಾಮಿನಿಂದ ಬಿಟಿ ಬದನೆಯ ಸಂಶೋಧನೆ ಕಾರ್ಯ ಆರಂಭವಾಗಿದೆ.
ಬಿಟಿ ಬದನೆಯ ಸಂಶೋಧನೆಯ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂಬ ಸುಪ್ರಿಂಕೋರ್ಟು ಆದೇಶವಿರುವುದರಿಂದಲೋ ಏನೋ ಸಂಶೋಧನೆಯ ವಿವರಗಳು ಸುಲಭವಾಗಿ ಸಿಕ್ಕವು. ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕುರುವಿನಶೆಟ್ಟಿ ಸಂಶೋಧನೆಯ ವಿವರಗಳನ್ನು ಬಿಚ್ಚಿಟ್ಟರು. ಅರೇಬಾವಿ ಲೋಕಲ್‌, ಉಡುಪಿಗುಳ್ಳ, ಮಾಳಾಪುರ ಲೋಕಲ್‌, ಗೋವ ಲೋಕಲ್‌, ಮಂಜರಿ ಗೋಟಾ ಮತ್ತು ಸ್ಥಳೀಯ ಬದನೆಯೊಂದಕ್ಕೆ ಬಿಟಿ ಜೀನ್‌ನ್ನು ಸೇರಿಸಲಾಗಿದೆ. ರುಚಿ, ಗಟ್ಟಿತನ ಮತ್ತು ಎಣ್ಣೆಕಾಯಿ ಮಾಡಲು ಸೂಕ್ತವಾದ ಇವು ಜನಪ್ರಿಯ ಜವಾರಿ ತಳಿಗಳು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಂಶೋಧನಾ ಕೇಂದ್ರ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌, ಕಲ್ಲೊಳ್ಳಿ ಫಾರಂ, ಕೊಲ್ಲಾಪುರದ ಬಳಿ, ಗೋವದ ಹತ್ತಿರ ಬಿಟಿ ಬದನೆಯ ಪ್ರಾಯೋಗಿಕ ತಾಕುಗಳಿವೆ ಎನ್ನುತ್ತಾರೆ. ಬೆಳೆಯ ಹಂತಗಳ ಬಗ್ಗೆ ಕೇಳಿದರೆ, ವಿವರ ನೀಡಬೇಕೋ ಬೇಡವೋ ಎಂಬ ಆತಂಕ ಅವರ ಮಾತಿನಲ್ಲಿ ಮಡುಗಟ್ಟುತ್ತದೆ. ಬಿಟಿ ಬದನೆಯ ಕ್ಷೇತ್ರೋತ್ಸವ ಮಾಡುತ್ತೇವೆ, ನಿಮ್ಮನ್ನೆಲ್ಲಾ ಕರೆಯುತ್ತೇವೆ.ಬನ್ನಿ! ಎಂದು ಮಾತು ಜಾರಿಸುತ್ತಾರೆ.
ಹಾಗಾದರೆ ಬಿಟಿಬದನೆಗೆ ಕಾಯಿ ಮತ್ತು ಕಾಂಡ ಕೊರಕದ ಭಾದೆ ಇಲ್ಲವೇ ಇಲ್ಲವಾ? ಔಷಧಿಸಿಂಪರಣೆ ಅಗತ್ಯವೇ ಇಲ್ಲವಾ?
ಬಿಟಿಬದನೆಯಲ್ಲಿ ಕಾಯಿ ಮತ್ತು ಕಾಂಡ ಕೊರಕದ ಹುಳು ನೂರಕ್ಕೆನೂರು ಇಲ್ಲ ಅಂತ ಹೇಳಕಾಗಲ್ಲ, ಆದರೆ ತುಂಬಾ ಕಡಿಮೆ ಇದೆ. ರಸ ಹೀರುವ ಕೀಟಗಳು ಮಾಮೂಲಿನಂತೆ ಇವೆ. ಅವಕ್ಕೆ ಔಷಧಿ ಸಿಂಪಡಣೆ ಬೇಕೇಬೇಕು. ಬಿಟಿಯಲ್ಲದ ತಳಿಗಳಲ್ಲಿ ಶೇ 40ರಷ್ಟು ಕಾಯಿ ಕೊರಕಗಳು ಕಂಡುಬಂದರೆ, ಬಿಟಿ ಬದನೆಗೆ ಶೇ 5 ರಿಂದ 15ರಷ್ಟು ಮಾತ್ರ ಇವೆ. ಅಷ್ಟರ ಮಟ್ಟಿಗೆ ಇಳುವರಿ ಜಾಸ್ತಿಯಾಗುತ್ತೆ ಸಂಶೋಧನೆಯ ಉಸ್ತುವಾರಿ ಹೊತ್ತಿರುವ ಡಾ. ಆರ್‌. ಎಮ್‌. ಹೊಸಮನಿ ಬಿಟಿ ಬದನೆಗೆ ಸರ್ಟಿಫಿಕೇಟ ಕೊಡುತ್ತಾರೆ.
ಸಾವಯವ ಕೃಷಿಯಲ್ಲಿ ಸುಲಭನಾಗಿ ಕಾಯಿ ಮತ್ತು ಕಾಂಡ ಕೊರಕ ಹುಳುವಿನ ನಿಯಂತ್ರಣ ಮಾಡಬಹುದು. ರಾಸಾಯನಿಕಗಳನ್ನು ಮೀರಿಸುವ ಸಸ್ಯಮೂಲ ಕೀಟನಾಶಕಗಳು ನಮ್ಮಲ್ಲಿವೆ, ಬಿಟಿ ಬದನೆಯ ಅಗತ್ಯವೇ ಇಲ್ಲ ಎನ್ನುತ್ತಾರೆ ಹೆಸರಾಂತ ಸಾವಯವ ಕೃಷಿಕ ಭರಮಗೌಡ.
ಜವಾರಿ ಬದನೆಗೆ ಕಂಟಕ
ನೂರಾರು ವರ್ಷಗಳಿಂದ ರೈತರು ದೇಸಿ ಬದನೆ ತಳಿಗಳನ್ನು ಅಭಿವೃದ್ಧಿಪಡಿಸಿ, ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ತಂದಿದ್ದಾರೆ. ಆಯಾ ಮಣ್ಣು, ವಾತಾವರಣ, ಆಹಾರ ಪದ್ಧತಿಗೆ ಅನುಗುಣವಾಗಿ ರೂಪುಗೊಂಡ ಬದನೆ ತಳಿಗಳ ವೈವಿಧ್ಯ ನಮ್ಮಲ್ಲಿದೆ; ಇಂಥ ತಳಿಗಳಿಗೆ ಬಿಟಿ ಜೀನ್‌ ಸೇರಿದರೆ ಇಡೀ ಬದನೆ ವೈವಿಧ್ಯವೇ ಕುಲಗೆಡುವ ಅಪಾಯ ಇದೆ.
ಬಿಟಿ ಜೀನ್‌ ಸ್ಥಳೀಯ ಜವಾರಿ ತಳಿಗಳಿಗೆ ಸೇರುವ ಸಾಧ್ಯತೆಯನ್ನು ವಿಜ್ಞಾನಿಗಳು ಅಲ್ಲಗೆಳೆಯುವುದಿಲ್ಲ. ಆದರೆ ತಳಿಗಳ ವಂಶವಾಹಿ ಕುಲಗೆಡುವ ವಾದ ಒಪ್ಪುವುದಿಲ್ಲ. ಸ್ಥಳೀಯ ತಳಿಗಳಿಗೆ ಬಿಟಿ ಜೀನ್‌ ಸೇರಿದರೆ ಮತ್ತೂ ಉತ್ತಮ. ಕಾಯಿ ಮತ್ತು ಕಾಂಡ ಕೊರಕ ಹುಳುವಿನ ನಿರೋಧಕಶಕ್ತಿ ಹೆಚ್ಚುತ್ತದೆ. ಒಂದು ಜೀನ್‌ ಜಾಸ್ತಿಯಾಗುತ್ತೆ ಅಷ್ಟೇ. ಯಾವ ಅಪಾಯ ಇಲ್ಲ ಡಾ. ಕುರುವಿನ ಶೆಟ್ಟಿ ಭರವಸೆನೀಡುತ್ತಾರೆ. ಸುಮ್ಮನೆ ಊಹಿಸಿಕೊಳ್ಳಿ. ನಿಮ್ಮ ದೇಹಕ್ಕೆ ವಿಷಸೂಸುವ ಜೀನ್‌ಮೊಂದನ್ನು ಸೇರಿಸಿದೆ. ನಿಮ್ಮನ್ನು ಕಚ್ಚಿದ ಸೊಳ್ಳೆ, ತಿಗಣೆ ಸತ್ತು ಬೀಳುತ್ತಿವೆ. ನೀವು ಮಾತ್ರ ವಿಷಮಾನವರಾಗಿ ಬದುಕುತ್ತೀರಿ. ಮೈತುಂಬ ಬಿಟಿ ವಿಷ ಹೊತ್ತ ಬದನೆಯದ್ದೂ ಇದೇ ಕತೆ. ತನ್ನ ನಿಸರ್ಗದತ್ತ ಗುಣವನ್ನ ಕಳೆದುಕೊಂಡು ತನ್ನದಲ್ಲದ ಪರಕೀಯ ಜೀನ್‌ನ್ನು ತನ್ನೊಳಗೆ ಪೋಷಿಸುವ ಹಣೆಬರಹ.
ವಿಜ್ಞಾನಿಗಳು ಮರೆತ ಸಂಗತಿಯೊಂದಿದೆ; ಹೇಳಿ ಕೇಳಿ ಭಾರತ ಬದನೆಯ ಮೂಲ. ಬದನೆ ಹುಟ್ಟಿದ್ದೇ ಇಲ್ಲಿ. ವೈವಿಧ್ಯದ ತಾಣಗಳಲ್ಲಿ ವಂಶವಾಯಿ ಪರಿರ್ವತಿತ (ಜಿಎಂ) ಪ್ರಯೋಗಗಳನ್ನು ಸಡೆಸುವಂತಿಲ್ಲ. ಅದು ನಿಷಿದ್ದ, ಮೂಲ ತಳಿಗಳ ಜೀವದ್ರವ್ಯ ಕುಲಗೆಡೆದಂತೆ ನೋಡಿಕೊಳ್ಳುವ ಕಾಳಜಿ.ಮುಸುಕಿನ ಜೋಳದ ವೈವಿಧ್ಯ ಇರುವ ಮೆಕ್ಸಿಕೋ ದೇಶ, ಜಿಎಂ ಮುಸಿಕಿನ ಜೋಳದ ಪ್ರಯೋಗಗಳಿಗೆ ನಿಷೇದ ಹೇರಿದೆ. ಅಮೇರಿಕಾದ ಕೆಂಗಣ್ಣಿಗೆ ಗುರಿಯಾದರೂ ದಿಟ್ಟವಾಗಿ ನಿಂತಿದೆ. ನಮ್ಮ ವಿಜ್ಞಾನಿಗಳು ಮಾತ್ರ ಅಮೇರಿಕಾದ ಮಾತಿಗೆ ತಲೆದೂಗುತ್ತಾ, ಬದನೆ ಭಾರತ ಮೂಲದ್ದೇ ಅಲ್ಲ ಅನ್ನುತಿದ್ದಾರೆ; ನಮ್ಮ ಮನೆ ಮಗ ನಮ್ಮವನೇ ಅಲ್ಲ ಅಂದಂತೆ.
ಕೃಷ್ಣನ ಪಾದ ಸೇರಲಿರುವ ಉಡುಪಿಗುಳ್ಳ
ಗುಳ್ಳ ಬದನೆ ಕರಾವಳಿಯ ವಿಶಿಷ್ಟ ಬದನೆ. ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಈ ಬದನೆಯಲ್ಲಿ ಹತ್ತಾರು ತಳಿಗಳಿವೆ. ಇವುಗಳಲ್ಲಿ ಮಟ್ಟಿಗುಳ್ಳ ಮತ್ತು ಪೆರಂಪಲ್ಲಿ ಗುಳ್ಳ ಜನಪ್ರಿಯ ಬದನೆ ತಳಿಗಳು. ಮಟ್ಟಿಗುಳ್ಳದಿಂದ ಮಾಡಿದ ವಿಶೇಶ ಖಾದ್ಯವನ್ನು ಶ್ರೀಕೃಷ್ಣ ದೇವಸ್ಥಾನದ ಉತ್ಸವದ ಸಂಧಂರ್ಭದಲ್ಲಿ ಬಳಸುವ ಸಂಪ್ರದಾಯ ಇದೆ. ಮಟ್ಟು ಊರಿನ ನೆಲದಲ್ಲಿ ಬೆಳೆದ ಈ ಗುಳ್ಳದ ರುಚಿ ವಿಶಿಷ್ಟ. ಕರಾವಳಿಗರು ಎಲ್ಲೇ ಇರಲಿ ಅವರಿಗೆ ಗುಳ್ಳ ಬೇಕು. ಅರಬ್‌ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಬೊಂಬಾಯಿ, ಬೆಂಗಳೂರಿಗೆ ಪ್ರತಿದಿನ ಗುಳ್ಳ ಬದನೆ ಬರುತ್ತದೆ. ಗುಳ್ಳ ಬದನೆಯ ವಾಣಿಜ್ಯ ಪ್ರಾಮುಖ್ಯತೆಯನ್ನು ಮನಗೊಂಡ ತೋಟಗಾರಿಕೆ ಇಲಾಖೆ ಭೂಗೋಳಿಕ ಗುರುತಿಸುವಿಕೆಗೆ (GI) ನೊಂದಾಯಿಸಲು ಮತ್ತಿಗುಳ್ಳವನ್ನು ಆಯ್ಕೆ ಮಾಡಿಕೊಂಡಿದೆ. ಕೃಷಿ ವಿವರ, ತಳಿಯ ಇತಿಹಾಸ, ವಂಶವಾಹಿ ನಕ್ಷೆ ಮಾಡುವ ಕಾರ್ಯ ಆರಂಭಿಸಿದೆ. ಭೂಗೋಳಿಕ ಗುರುತುಸುವಿಕೆ ಪ್ರಮಾಣ ಪತ್ರ ಪಡೆದ ತಳಿಗಳಿಗೆ ಬಿಟಿ ಜೀನ್‌ ಸೇರಿಸುವಂತಿಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬ್ರಹ್ಮಾವರ ಸಂಶೋಧನಾ ಕೇಂದ್ರದಲ್ಲಿ ಬಿಟಿ ಜೀನ್‌ ಸೇರಿಸಿದ ಗುಳ್ಳ ಬದನೆಗಳನ್ನು ಬೆಳೆಸಲಾಗಿದೆ. ತೆರೆದ ಬಯಲಿನಲ್ಲಿ ಪ್ರಯೋಗಾತ್ಮಕವಾಗಿ ಬಿಟಿ ಬೆಳೆಯಲು ಪ್ರಪಂಚದ ಯಾವುದೇ ಭಾಗದಲ್ಲಿ ಅನುಮತಿ ಇಲ್ಲ.
ಕರಾವಳಿ ಭಾಗದ ಜೀವವೈವಿಧ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ, ಡಾ. ಎನ್‌. ಮಧ್ಯಸ್ಥ ಮಟ್ಟುಗುಳ್ಳಕ್ಕೆ ಬಿಟಿಜೀನ್‌ ಸೇರಿಸಿದರೆ, ತಳಿಯ ವಂಶವಾಹಿ ಕುಲಗೆಡುವ ಅಪಾಯವಿದೆ ಎಂಬ ಸಂಗತಿಯನ್ನು ಕರೆಂಟ್‌ ಸೈನ್ಸ್‌ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ. ಬಿಟಿ ಧ್ಯಾನದಲ್ಲಿ ಮುಳುಗಿರುವ ನಮ್ಮ ವಿಜ್ಞಾನಿಗಳಿಗೆ ಉಡುಪಿಯ ಶ್ರೀಕೃಷ್ಣನೇ ಜ್ಞಾನೋದಯ ನೀಡಬೇಕು!

ಬಿಟಿ ಬದನೆಯ ಅಪಾಯಗಳು
ಬಿಟಿ ಬದನೆಯ ತಂತ್ರಜ್ಞಾನ ಸಿದ್ಧಗೊಂಡಿದ್ದು 2000ನೇ ವರ್ಷದಲ್ಲಿ. ಬಿಟಿ ಬದನೆಯ ಸುರಕ್ಷತೆಯ ಪ್ರಯೋಗಗಳೆಲ್ಲಾ ಕೇವಲ ಆರು ವರ್ಷದ ಅವಧಿಯವು. ಮನುಷ್ಯನ ಆರೋಗ್ಯಕ್ಕೆ ಯಾವುದೇ ಅಪಾಯ ಇಲ್ಲ ಎಂದು ಮಹಿಕೊ ವರದಿ ಮಾಡಿದೆ. ದೂರಗಾಮಿ ಪರಿಣಾಮಗಳ ಬಗ್ಗೆ ನಮಗೆ ಏನೂ ಗೊತ್ತಿಲ್ಲ. 60ರ ದಶಕದಲ್ಲಿ ಹಸಿರು ಕ್ರಾಂತಿಯ ಕಾಲದಲ್ಲೂ ವಿಜ್ಞಾನಿಗಳು ಮತ್ತು ಕಂಪನಿಗಳು ಇದೇ ಮಾತು ಆಡಿದ್ದರು. ಮುಂದೆ ಏನಾಯಿತೆಂದು ಎಲ್ಲರಿಗೂ ಗೊತ್ತು. ಬಿಟಿ ಬದನೆಯ ವಿರೋಧಿಗಳು ಒಮ್ಮೆ ಬಿಟಿಜೀನ್‌ ಪ್ರಕೃತಿಯಲ್ಲಿ ಸೇರಿದರೆ ಮತ್ತೆ ವಾಪಸ್‌ ತರಲಾಗದು. ಅದರ ಅವಘಡಗಳನ್ನು ನೋಡುವುದಷ್ಟೇ ನಮ್ಮ ಕೆಲಸ ಎನ್ನುತ್ತಾರೆ;ಡಿಡಿಟಿಯ ಹಾಗೆ. ಬಿಟಿ ಬದನೆಯ ಸಂಭವನೀಯ ಅಪಾಯಗಳು ಹೀಗಿವೆ.
· ಬಿಟಿಬದನೆ ತಿಂದ ಮನುಷ್ಯನ ಜೀರ್ಣಾಂಗದ ಕರುಳಿನ ಬ್ಯಾಕ್ಟೀರಿಯಾಗಳಿಗೆ ಬಿಟಿ ಜೀನ್‌ ವರ್ಗಾವಣೆಯಾಗುವ ಅಪಾಯ ಇದೆ. ಇದರಿಂದ ಮನುಷ್ಯನ ನಿರೋಧಕ ಶಕ್ತಿಯ ಮೇಲೆ ಅಡ್ಡ ಪರಿಣಾಮ ಮತ್ತು ಜೀವಕೋಶಗಳು ಅಸಹಜವಾಗಿ ಬೆಳೆಯುವ ಸಾಧ್ಯತೆ ಇದೆ.
ಬಾಲರವಿ.
ಕೃಷಿ ಇಲಾಖೆ ಕರ್ನಾಟಕದ ಎಲ್ಲಾ ತಾಲ್ಲೂಕುಗಳಲ್ಲಿ ಸಾವಯವ ಗ್ರಾಮ ಯೋಜನೆ ಆರಂಭಿಸಿದೆ. ಸಾವಯವ ಧೃಡೀಕರಣ ಮಾಡಲು ಪ್ರತಿ ಯೋಜನೆಗೆ ತಲಾ 30,000 ನೀಡಿದೆ. ವಂಶವಾಹಿ ಪರಿವರ್ತಿತ ಬೆಳೆಗಳಿಗೆ ಸಾವಯವ ದೃಡೀಕರಣ ನೀಡುವಂತಿಲ್ಲ. ಬಿಟಿ ಬದನೆಯನ್ನು ಸಾವಯವದಲ್ಲಿ ಬೆಳೆದರೂ ರೈತ ಅದನ್ನು ಸಾವಯವ ಲೇಬಲ್‌ ಹಚ್ಚಿ ಮಾರುವಂತಿಲ್ಲ.
ಶ್ರೀಮಂತವಾಗಲಿ ಬದನೆ ಸಂಸ್ಕತಿ
ಬದನೆ ನಮ್ಮ ಹಿತ್ತಲಿನ ತರಕಾರಿ; ಸಂಸ್ಕತಿಯ ಭಾಗ. ನಮ್ಮ ಹಿರಿಯರು ಪೋಷಿಸಿತಂದ ಈ ವೈವಿಧ್ಯವನ್ನು ಶ್ರೀಮಂತಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕು. ಅದಾಗದಿದ್ದರೆ ಅದನ್ನು ಕುಲಗೆಡಿಸುವ ಪ್ರಯತ್ನಬೇಡ.
ಬದನೆಯ ಭವಿಷ್ಯ ನಮ್ಮ ಕೈಯಲ್ಲಿದೆ. ಬಿಟಿ ಬದನೆಗೆ ಸಂಶೋಧನೆ ಕೈಬಿಡುವಂತೆ ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ-580005 ಇವರಿಗೆ ಪತ್ರ ಅಥಾವ ಪೋನಿನ ಮೂಲಕ ಒತ್ತಡ ಹೇರಿ. ನಿಮ್ಮ ಈ ಸಣ್ಣ ಪ್ರಯತ್ನ ಬದನೆ ಸಂಸ್ಕತಿ ಉಳಿಸಲು ನೆರವಾಗಲಿದೆ.
ಪೋನ್‌: 0836-2745903, 2747627
-ಜಿ. ಕೃಷ್ಣ ಪ್ರಸಾದ್‌




Saturday, November 8, 2008

ಕೃಷಿ ಬೈಕ್: ಕೆಲಸ ಚಕಚಕ್


ಇಂದು ಕೃಷಿ ಕಾರ್ಮಿ­ಕರ ಕೊರ­ತೆಯ ತೀವ್ರತೆ ಇರು­ವುದು ಸ್ಪಷ್ಟ. ಕೆಲ­ಸ­ಗಾ­ರರ ಇಲ್ಲ ಎಂದು ಕೃಷಿ ಕೆಲ­ಸ­ವನ್ನು ಬಿಡ­ಲಿಕ್ಕೆ ಸಾಧ್ಯವೇ? ಇಂತಹ ಕೊರತೆ ಹೊಸ ಹೊಸ ಕೃಷಿ ಉಪ­ಕ­ರ­ಣ­ಗಳ ಅನು­ಶೋ­ಧ­ನೆ­ಗ­ಳಿಗೂ ಕಾರ­ಣ­ವಾ­ಗು­ತ್ತಿ­ರು­ವುದು ಸ್ಪಷ್ಟ. ಕೃಷಿ­ಯನ್ನು ಸುಲ­ಭ­ಗೊ­ಳಿಸಿ ಕೊಳ್ಳುವ ಅನೇಕ ಸಾಧ­ನ­ಗಳು ಕೃಷಿ­ಕರ ಮನೆ­ಯಲ್ಲಿ ಇದೆ. ಬೇಸಾಯ ಸುಲಭ ಮಾಡಿ­ಕೊ­ಳ್ಳುವ ಸಲು­ವಾಗಿ ಹಲ­ವಾರು ರೈತರು ಕೈಗಾ­ಡಿ­ಗ­ಳನ್ನು ಮಾಡಿ­ಕೊಂ­ಡಿ­ದ್ದಾರೆ. ಅದೇ ಉತ್ತರ ಕನ್ನಡ, ಸಿದ್ದಾ­ಪು­ರದ ಸುಳ­ಗಾರ ಗಣ­ಪತಿ ಹೆಗಡೆ ಒಂದು ಹೆಜ್ಜೆ ಮುಂದೆ ಹೋಗಿ­ದ್ದಾರೆ. ಅಂದರೆ ಇವ­ರದ್ದು ಮೋಟಾರ್‌ ಸೈಕ­ಲ್‌ಗೆ ಜೋಡಿ­ಸುವ ಗಾಡಿ.
ಮೋಟಾರ್‌ ಸೈಕಲ್‌ ಇಂದು ಎಲ್ಲರ ಹತ್ತಿ­ರವೂ ಇರು­ತ್ತದೆ. ಹೀಗಿ­ರು­ವಾಗ ಬೈಕ್‌ ಅನ್ನು ಕೇವಲ ಓಡಾ­ಡ­ಲಿಕ್ಕೆ ಬಳ­ಸಿ­ಕೊ­ಳ್ಳು­ವು­ದರ ಜೊತೆಗೆ ಕೃಷಿ­ಕರು ಅದನ್ನು ತಮ್ಮ ಬೇಸಾ­ಯದ ಬಳ­ಕೆಗೂ ಯಾಕೆ ಬಳಸಿ ಕೊಳ್ಳ­ಬಾ­ರದು ಎನ್ನುವ ಪ್ರಶ್ನೆ ಗಣ­ಪತಿ ಅವ­ರಿಗೆ ಹುಟ್ಟಿತು. ಇವರು ತಮ್ಮ ಯೋಚ­ನೆ­ಯನ್ನು ಗೆಳೆ­ಯ­ರಾದ ಹುಲಿ­ಮನೆ ನಾಗ­ರಾಜ, ಮತ್ತಿ­ಗಾರ ರಾಮ­ಚಂದ್ರ ಅವ­ರಲ್ಲಿ ಹೇಳಿ­ಕೊಂ­ಡಿ­ದ್ದಾರೆ. ಮತ್ತ್ಯಾಕೆ ತಡ, ಶುರು­ವಾ­ಯಿತು ಕಾರ್ಯ­ಚ­ರಣೆ. ಮರು ದಿನವೇ ಗಾಡಿ ತಯಾ­ರಿ­ಕೆ­ಯಲ್ಲಿ ತೊಡ­ಗಿ­ದರು.
ಗಣ­ಪತಿ ಅವ­ರದ್ದು 125 ಸಿಸಿ ಬೈಕ್‌. ಅದಕ್ಕೆ ಯಾವ ರೀತಿ ಟ್ರ್ಯಾಲಿ­ಯನ್ನು ಅಳ­ವ­ಡಿ­ಸಿ­ದರೆ ಅನು­ಕೂಲ ಎಂದು ಮೊದ ಮೊದಲು ಯೋಜನೆ ಹಾಕಿ­ದರು. ಗುಜ­ರಿ­ಯಿಂದ ಕಬ್ಬಿಣ ಮತ್ತು ಯಜಡಿ ಬೈಕಿನ ಗಾಲಿ­ಯನ್ನು ಖರೀ­ದಿಸಿ ತಮಗೆ ಬೇಕಾದ ರೀತಿ ಗಾಡಿ ಮಾಡಿ­ಸಿ­ಕೊಂ­ಡರು. ಬೈಕ್‌ ಜೋರಾಗಿ ಹೋದರು ಹಿಂದಿ­ರುವ ಟ್ರ್ಯಾಲಿ ಸರಿ­ಯಾ­ಗಿದ್ದು, ಯಾವುದೇ ಕಡೇ ವಾಲದೇ ಸಲೀ­ಸಾಗಿ ಚಲಿ­ಸು­ವಂತೆ ಮಾರ್ಪ­ಡಿಸಿ ಕೊಂಡರು. ಆದರೆ ಗಾಡಿ ವೇಗಕ್ಕೂ ಟ್ರ್ಯಾಲಿಯ ವೇಗಕ್ಕೂ ಇದು ಸರಿ ಬರ­ಲಿಲ್ಲ. ಯಾಕೆಂ­ದರೆ, ಟ್ರ್ಯಾಲಿಯ ಉದ್ದ ನಾಲ್ಕು ಅಡಿ ಇತ್ತು. ತಕ್ಷಣ ಅದ­ಕ್ಕಾಗಿ ಟ್ರ್ಯಾಲಿ ಉದ್ದ ಕಡಿಮೆ ಮಾಡ­ಬೇ­ಕಾ­ಯಿತು. ಜತೆಗೆ ಗೋಡ್ವೆ­ಮನೆ ರವಿ ಈ ಗಾಡಿ ತಯಾ­ರಿ­ಕೆಗೆ ಹೊಸ ಇಂಜ­ನಿ­ಯರ್‌ ಆಗಿ ಸೇರ್ಪ­ಡೆ­ಗೊಂ­ಡರು.
ರವಿ ಅವರು ಟ್ರ್ಯಾಲಿ ಅಳ­ತೆ­ಯನ್ನು ಮೂರು, ಮೂರರ ಅಳ­ತೆಗೆ ಮಾರ್ಪ­ಡಿ­ಸಿ­ಕೊಂ­ಡರು. ಬೈಕಿನ ಚಾರ್ಸ್ಸಿ­ಯಿಂ­ದಲೇ ಟ್ರ್ಯಾಲಿ ಜೋಡಿ­ಸುವ ವ್ಯವಸ್ಥೆ ಮಾಡಿ­ದರು. ಬೈಕಿನ ಹೊಂದಿದ ಗಾಲಿಯ ಬ್ರೇಕ್‌­ನಿಂ­ದಲೇ ಟ್ರ್ಯಾಲಿ ಗಾಲಿ­ಗ­ಳಿಗೂ ಬ್ರೇಕ್‌ ಅಳ­ವ­ಡಿ­ಸಿ­ದರು. ಈಗ ಗಾಡಿ­ಯಲ್ಲಿ ಯಾವುದೇ ತರ­ಹದ ವಸ್ತು­ಗ­ಳನ್ನು ಹಾಕಿ­ಕೊಂಡು ಸರಾ­ಗ­ವಾಗಿ ಓಡಿ­ಸ­ಬ­ಹುದು.
ಗಾಡಿಯ ಸಮಸ್ಯೆ
ಬೈಕಿಗೆ ಗಾಡಿ­ಯನ್ನು ಅಳ­ವ­ಡಿ­ಸಿದ ನಂತರ ಕನಿಷ್ಠ 15 ಕಿ.ಮೀ. ವೇಗ­ವಾ­ದ­ಲ್ಲಾ­ದರೂ ಬೈಕ್‌ ಚಲಿ­ಸ­ಬೇಕು. ಇಲ್ಲ­ವೆಂ­ದರೆ ಬ್ಯಾಲೆನ್ಸ್‌ ತಪ್ಪು­ತ್ತದೆ ಎನ್ನು­ವುದು ಗಣ­ಪತಿ ಅವರ ಅನು­ಭ­ವದ ಮಾತು. ಸಮ­ರ­ಸ್ತೆ­ಯಲ್ಲಿ ಮತ್ತು ಉತ್ತಮ ರಸ್ತೆ­ಗ­ಳಲ್ಲಿ ಏಷ್ಟೇ ವೇಗ­ವಾಗಿ ಮತ್ತು ನಿಧಾ­ನ­ವಾಗಿ ಹೋದರು ಯಾವುದೇ ರೀತಿ ತೊಂದ­ರೆ­ಯಾ­ಗು­ವು­ದಿಲ್ಲ. ಮಲೆ­ನಾ­ಡಿನ ಕೊರ­ಕಲು ರಸ್ತೆ­ಯಲ್ಲಿ ಈ ಗಾಡಿ­ಯನ್ನು ಸರಾ­ಗ­ವಾಗಿ ಓಡಿ­ಸು­ವುದು ಕಷ್ಟ. ಹಳ್ಳಿ ರಸ್ತೆ­ಯಲ್ಲಿ ಬಹಳ ತಗ್ಗು ಮತ್ತು ಗಾಟಿ­ಯಿ­ರು­ವುದೇ ಈ ಗಾಡಿ­ಗಿ­ರುವ ತೊಂದರೆ.
5 ಕ್ವಿಂಟಾಲ್‌ ಭಾರ­ವನ್ನು ಗಾಡಿಯ ಮೇಲೆ ಹೇರಿ­ದರೂ ಆರಾ­ಮ­ವಾಗಿ ಬೈಕ್‌ ಎಳೆ­ಯು­ತ್ತದೆ. ಮೊದಲ ಸಲ ಈ ಗಾಡಿ­ಯನ್ನು ತಯಾ­ರಿ­ಸಿ­ರು­ವು­ದ­ರಿಂದ ಎಳು ಸಾವಿರ ಖರ್ಚಾ­ಗಿದ್ದು. ಮತ್ತೊಮ್ಮೆ ತಯಾ­ರಿ­ಸು­ವಾಗ ಇಷ್ಟು ಖರ್ಚು ಬರು­ವು­ದಿಲ್ಲ. ಕಬ್ಬಣ, ಗುಜು­ರಿ­ಯಿಂದ ಎರಡು ಗಾಲಿ, ಟ್ರ್ಯಾಲಿ­ಯನ್ನು ತಯಾ­ರಿ­ಸುವ ಕೂಲಿ ಇದಕ್ಕೆ ಬೇಕಾದ ಸಾಮಗ್ರಿ. ಈಗ ಕಬ್ಬಿ­ಣದ ಬೆಲೆ ಹೆಚ್ಚಾ­ಗಿ­ರು­ವು­ದ­ರಿಂದ ಐದು ಸಾವಿ­ರದ ಹತ್ತಿರ ಖರ್ಚಾ­ಗ­ಬ­ಹುದು ಅನ್ನು­ತ್ತಾರೆ ಗಣ­ಪತಿ.
ಮಳೆ­ಗಾ­ಲ­ದಲ್ಲಿ ಹಟ್ಟಿಗೆ ಬೇಕಾ­ಗುವ ಸೊಪ್ಪು, ಬೇಸಿ­ಗೆ­ಯಲ್ಲಿ ತರ­ಗೆ­ಲೆ­ಯನ್ನು, ಕೃಷಿ ಉತ್ಪ­ನ್ನ­ಗ­ಳನ್ನು ಸರಾ­ಗ­ವಾಗಿ ಇದ­ರಲ್ಲಿ ಸಾಗಿ­ಸ­ಬ­ಹು­ದಾ­ದ್ದ­ರಿಂದ ಇದೊಂದು ಬಹು­ಪ­ಯೋಗ ಬೈಕ್‌ ಗಾಡಿ ಅನ್ನ­ಬ­ಹುದು. ಕೃಷಿ ಕಾರ್ಮಿ­ಕರ ಕೊರತೆ ರೈತ­ರನ್ನೇ ಹೊಸ ಹೊಸ ಅನು­ಶೋ­ಧನೆ ಮಾಡುವ ವಿಜ್ಞಾ­ನಿ­ಗ­ಳ­ನ್ನಾಗಿ ರೂಪಿ­ಸು­ತ್ತಿ­ರು­ವು­ದಂತೂ ಸತ್ಯ.
ಬೈಕ್‌ ಗಾಡಿ ಬಗ್ಗೆ ಮಾಹಿ­ತಿ­ಗಾಗಿ: ಗಣ­ಪತಿ ಹೆಗಡೆ ಸುಳ­ಗಾರ, ಅಂಚೆ: ಸಂಪ­ಗೋಡ
ಸಿದ್ದಾ­ಪುರ, ಉತ್ತರ ಕನ್ನಡ- 581355. ದೂ: 08389-248408
ನಾಗ­ರಾಜ ಮತ್ತಿ­ಗಾರ

Friday, November 7, 2008

ಆಹಾ.. ಜೋನಿ ಬೆಲ್ಲ




ಡಬ್ಬಿ ಬೆಲ್ಲ ಬಳಸದ ಮಲೆನಾಡಿನ ಮನೆಗಳೇ ಇಲ್ಲ. ಊಟಕ್ಕೆ ಉಪ್ಪಿನ ಕಾಯಿಯಂತೆ ಬೆಲ್ಲ ಬಳಸುವವರೂ ಸಿಗುತ್ತಾರೆ ಇಲ್ಲಿ. ಬಿಸಿಲಿನ ಬೇಗೆಯ ತಂಪಿಗೆ ನೀರುಬೆಲ್ಲ ಹಲವರ ಅಭ್ಯಾಸ. ನಿತ್ಯ ಸವಿಯುವ ಬೆಲ್ಲದ ಮಧುರ ಸವಿಯಂತ0ೆುೀ ವರ್ಷಕ್ಕೊಮ್ಮೆ ಆಲೆಮನೆಯ ಕಬ್ಬು , ಕಬ್ಬಿನ ಹಾಲು ಹಾಗೂ ನೊರೆಬೆಲ್ಲದಲ್ಲಿಯೂ ಮಜ ಇದೆ. ಅದನ್ನು ಅನುಭವಿಸಿದವರು ಮಾತ್ರ ಬಲ್ಲರು.
ಮಾರ್ಚ್‌ ತಿಂಗಳಿನಲ್ಲಿ ಹೆಚ್ಚು ಕಬ್ಬು ಒಂದೆಡೆ ಸಿಗುವ ಜಾಗದಲ್ಲಿ ಮಣ ಭಾರದ ಕಣೆ ಹಾಗೂ ಘಟ್ಟದ ಕೆಳಗಿನ ಕೋಣ ಬರುತ್ತದೆ. ಅಲ್ಲಿಂದ ತಿಂಗಳುಗಟ್ಟಲೆ ಆ ಭಾಗದ ಜನರಿಗೆ ಆಲೆಮನೆಯ ಮಜ. ಶಾಲೆಯ ಮಕ್ಕಳಿಗಂತಲೂ ಆಲೆಮನೆ0ೆುಂದರೆ ಸ್ವರ್ಗ. ಶಾಲೆ ಬಿಟ್ಟ ಸಂಜೆಗಳು ಆಲೆಮಾವನ ಬಳಿ ಹುಸಿಬೆದರಿಕೆಯನ್ನು ಎದುರಿಸುತ್ತಾ ಕಬ್ಬು ತಿನ್ನದ ದಿನಗಳಿಲ್ಲ. ನೊರೆ ಹಾಲು ಹಾಗೂ ಅಕಸ್ಮಾತ್‌ ಸಿಗುವ ಮಾವಿನ ಮಿಡಿ ಚಪ್ಪರಿಸುತ್ತಾ ಕುಡಿದು ಅಳ್ಳಟ್ಟೆ ಸಿಪ್ಪೆಯಲ್ಲಿ ಮೊಗೆದು ಕೊಡುವ ನೊರೆಬೆಲ್ಲ ಮೆದ್ದರೆ ಅದರ ಸ್ವಾರಸ್ಯವೇ ಬೇರೆ ಬಗೆಯದು. ಅದೆಷ್ಟು ಜನರು ಕಬ್ಬು, ಹಾಲು ತಿಂದುಕುಡಿದರು ಒಂದಿನಿತೂ ಬೇಸರಿಸಿದೆ ಆಲೆಮನೆಗೆ ಬರುವವರು ನನ್ನ ಅತಿಥಿಗಳು ಎಂದೆಣಿಸುವ ಕಬ್ಬಿನ ಒಡೆಯ ರೈತ ಅತಿಥಿದೇವೋ ಭವ ಎನ್ನುವ ವಾಕ್ಯಕ್ಕೆ ಅರ್ಥಪೂರ್ಣವೆನಿಸುತ್ತಾನೆ. ಆದರೆ

ಯಾಂತ್ರೀಕರಣದ ಭರಾಟೆಯ ಇಂದಿನ ದಿನಗಳಲ್ಲಿ ಈ ಸಾಂಪ್ರಾದಾಯಿಕ ಆಲೆಮನೆಗಳು ನಿಧಾನವಾಗಿ ಕಣ್ಮರೆ0ಾಗುವತ್ತ ಹೊರಟಿದೆ. ಅಕ್ಕಿ ಮಿಲ್ಲಿನಂತೆ ಯಂತ್ರದ ಆಲೆಮನೆಗಳು ಆಲೆಮಾವನ ಮತ್ತು ಕೋಣನ ತುತ್ತು ಕಸಿಯುತ್ತಿದೆ ಜತೆ ಜತೆಯಲ್ಲಿ0ೆುೀ ರೈತನನ್ನು ವ್ಯಾಪಾರಿಕರಣಕ್ಕೆ ಒಳಪಡಿಸಿ ಸಾಂಪ್ರದಾಯಿಕ ಆಲೆಮನೆಯ ಸೊಬಗನ್ನು ನಿಲ್ಲಿಸುತ್ತಿದೆ. ಸಂಪೂರ್ಣ ನಿಲ್ಲುವ ಮೊದಲು ಅದೊಂದು ಸುಖ ಅನುಭವಿಸುವವನು ಸುಖಿ.
ಆರ್‌. ಶರ್ಮಾ ತಲವಾಟ

Thursday, November 6, 2008

ಕುಲಾಂತರಿ ವಿರುದ್ಧ ಭಾರತದಲ್ಲಿ ಸಮರ


`ಭಾರತದಲ್ಲಿ 2000ರಲ್ಲಿ 44 ದಶಲಕ್ಷ ಟನ್‌ ಆಹಾರಧಾನ್ಯ ಸರ್ಕಾರದ ಉಗ್ರಾಣಗಳಲ್ಲಿ ಉಳಿದಿತ್ತು. 2002ರ ಹೊತ್ತಿಗೆ ಇದರ ಪ್ರಮಾಣ 65 ದಶಲಕ್ಷ ಟನ್‌ಗೆ ಏರಿತು. ಅಂದರೆ, ಇದು ಉತ್ಪಾದನೆಯ ಹೆಚ್ಚಳದಿಂದಲ್ಲ; ಬದಲಾಗಿ ಆಹಾರಧಾನ್ಯ ಖರೀದಿಸುವಷ್ಟು ಹಣ ಜನರ ಕೈಯಲ್ಲಿ ಇರಲಿಲ್ಲ. ಅದಕ್ಕಾಗಿ ಅಷ್ಟೊಂದು ಪ್ರಮಾಣದ ಆಹಾರ ಉಗ್ರಾಣದಲ್ಲಿ ಕೊಳೆಯುತ್ತ ಬಿದ್ದಿತ್ತು..
ಕೃಷಿ ಆರ್ಥಿಕ ತಜ್ಞ ದೇವಿಂದರ್‌ ಶರ್ಮಾ ಅವರ ಈ ವಿಶ್ಲೇಷಣೆಯು ಒಂದೆಡೆ ನಮ್ಮ ದೇಶದ ಜನರ ಹಸಿವನ್ನು ಅನಾವರಣ ಮಾಡುತ್ತದೆ. ಇನ್ನೊಂದೆಡೆ ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸುವ ಕೃಷಿ ವಿವಿ, ಸಂಶೋಧನಾ ಕೇಂದ್ರಗಳ ಪೊಳ್ಳುತನ ಬಿಚ್ಚಿಡುತ್ತದೆ. ಕೋಟಿಗಟ್ಟಲೇ ಹಣ ಸುರಿದು ಮಾಡುವ ಸಂಶೋಧನೆಗಳ ಲಾಭವೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಬೊಕ್ಕಸ ತುಂಬಿಸುತ್ತವೆಯೇ ಹೊರತೂ, ಬಡವರಿಗೆ ಕಡಿಮೆ ವೆಚ್ಚದಲ್ಲಿ ಒಂದು ಹಿಡಿ ಆಹಾರ ನೀಡುವುದಕ್ಕಲ್ಲ ಎಂಬುದು ಸಾಬೀತಾಗುತ್ತಲೇ ಇರುತ್ತದೆ. ಈ ಸಾಲಿಗೆ ಈಗ ಸೇರ್ಪಡೆಯಾಗಿದೆ- `ಕುಲಾಂತರಿ ಆಹಾರ (ಜೆನಿಟಿಕಲಿ ಮಾಡಿಫೈಡ್‌ ಫುಡ್‌- ಜಿ.ಎಂ. ಫುಡ್‌).
ಐರೋಪ್ಯ ರಾಷ್ಟ್ರಗಳೂ ಸೇರಿದಂತೆ ವಿವಿಧ ದೇಶಗಳಲ್ಲಿ ಈಗಾಗಲೇ ವಿರೋಧದ ಅಲೆಯೆಬ್ಬಿಸಿರುವ ಕುಲಾಂತರಿ ಆಹಾರ ಧಾನ್ಯ ನಮ್ಮ ದೇಶದ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಇನ್ನೇನು ಅದು ಅಡುಗೆ ಮನೆಗೂ ಬಂದೀತು. ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಕುಲಾಂತರಿ ಆಹಾರ ದುಷ್ಪರಿಣಾಮ ಬೀರಲಿದೆ ಎಂಬ ಪ್ರತಿಪಾದನೆಯೊಂದಿಗೆ ಹಲವು ಸ್ವಯಂಸೇವಾ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ನಿರತವಾಗಿರುವ ವಿಜ್ಞಾನಿಗಳು `ಕುಲಾಂತರಿ ಆಹಾರ ಸೇವನೆಯಿಂದ ಯಾವುದೇ ದುಷ್ಪರಿಣಾಮ ಇಲ್ಲ' ಎಂದೇ ವಾದಿಸುತ್ತಿದ್ದಾರೆ.
ಏನಿದು ಕುಲಾಂತರಿ?
ಸರಳವಾಗಿ ಹೇಳಬೇಕೆಂದರೆ ಒಂದು ಜೀವಿವ ಕೋಶದಲ್ಲಿರುವ ವಂಶವಾಹಿಯನ್ನು ಇನ್ನೊಂದು ಜೀವಿಯ ವಂಶವಾಹಿಯೊಳಗೆ ಬಲವಂತವಾಗಿ ಸೇರಿಸುವುದು. ಜೀವಕೋಶದ ನ್ಯೂಕ್ಲಿಯಸ್‌ನಲ್ಲಿರುವ ಜೀನ್‌ (ಅಂದರೆ ವಂಶವಾಹಿ) ಅನ್ನು ಇನ್ನೊಂದು ಜೀವಿಯ ಕೋಶದೊಳಗೆ ಸೇರಿಸುವ ಈ ಪ್ರಕ್ರಿಯೆ ತುಂಬ ಕ್ಲಿಷ್ಟದ್ದು. ವೈರಸ್‌, ಬ್ಯಾಕ್ಟೀರಿಯಾ, ಚೇಳು, ಜೇಡ ಇತ್ಯಾದಿ ಜೀವಿಗಳಿಂದ ವಂಶವಾಹಿಗಳನ್ನು ಹೊರತೆಗೆದು ಪಪ್ಪಾಯ, ಬದನೆ, ಆಲೂಗಡ್ಡೆ, ಮೆಕ್ಕೆಜೋಳದಂಥ ಬೆಳೆಗಳ ವಂಶವಾಹಿಯೊಳಗೆ ಬಲವಂತದಿಂದ ಸೇರ್ಪಡೆ ಮಾಡುತ್ತಾರೆ. ಇದರಿಂದಾಗಿ, ಸೇರ್ಪಡೆ ಮಾಡುವ ವಂಶವಾಹಿಯ ಕೆಲವು ವಿಶಿಷ್ಟಪೂರ್ಣ ಸ್ವಭಾವಗಳು ಇನ್ನೊಂದು ಜೀವಕೋಶಕ್ಕೆ ವರ್ಗಾವಣೆಯಾಗುತ್ತವೆ. ಇದು ಕೋಟ್ಯಂತರ ಡಾಲರ್‌ ವೆಚ್ಚದ ಕೆಲಸ.
ಈ ಬಗ್ಗೆ ಸಾಕಷ್ಟು ವಿರೋಧ ವಿವಿಧ ದೇಶಗಳಲ್ಲಿ ವ್ಯಕ್ತವಾಗುತ್ತಿದೆ. ಹೆಚ್ಚಿನ ಪರೀಕ್ಷೆಗೆ ಒಳಪಡಿಸದೇ ಕುಲಾಂತರಿ ಬೆಳೆ ಆಹಾರ ಮಾರುಕಟ್ಟೆಗೆ ಬಿಡುವುದು ಸರಿಯಲ್ಲ. ಮಾನವ ದೇಹ ಮತ್ತು ಪರಿಸರದ ಆರೋಗ್ಯದ ಮೇಲೆ ಈ ಆಹಾರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿವಿಧ ಪರಿಸರಪರ ಸಂಘಟನೆಗಳು ಆಪ್ಷೇಪದ ದನಿಯೆತ್ತಿವೆ.
`ಕೃಷಿ ಉತ್ಪನ್ನ ಹೆಚ್ಚಳಕ್ಕೆ ಬಿ.ಟಿ ಅಥವಾ ಜಿ.ಎಂ. ತಂತ್ರಜ್ಞಾನ ಉತ್ತರವಲ್ಲ. ಭಾರತದಂಥ ಸಮಶೀತೋಷ್ಣ ವಲಯದ ದೇಶಗಳಲ್ಲಿ ವ್ಯವಸಾಯ ನಾನಾ ಅಂಶಗಳನ್ನು ಅವಲಂಬಿಸಿದೆ. ಆಯಾ ಭಾಗದ ವಾತಾವರಣ, ನೀರಾವರಿ ಲಭ್ಯತೆ, ಮಳೆ ಪ್ರಮಾಣ, ತೇವಾಂಶ ಪ್ರಮಾಣ, ಮಣ್ಣಿನ ಗುಣಧರ್ಮ, ರೈತರ ಸಾಂಪ್ರದಾಯಿಕ ಜ್ಞಾನ ಹಾಗೂ ಬೆಳೆಗೆ ಬರುವ ಕೀಟ- ರೋಗ ಬಾಧೆ ಇನ್ನಿತರ ಅಂಶಗಳ ಮೇಲೆ ಆಯಾ ಪ್ರದೇಶದ ಕೃಷಿ ವ್ಯವಸ್ಥೆ ರೂಪಗೊಂಡಿದೆ ಎನ್ನುತ್ತಾರೆ ದೇವಿಂದರ್‌ ಶರ್ಮಾ. ಸಾಕಷ್ಟು ವಿರೋಧದ ಮಧ್ಯೆಯೂ ಆಂಧ್ರದಲ್ಲಿ ಬಿ.ಟಿ. ಹತ್ತಿ ಬೆಳೆದಾಗ ಆರಂಭದಲ್ಲಿ (2002-03) ಇಳುವರಿ ಹೆಚ್ಚು ಪಡೆದರೂ, ನಂತರದ ಒಂದೆರಡು ವರ್ಷಗಳಲ್ಲಿ ಶೇ71ರಷ್ಟು ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸಿದರು. ತಂತ್ರಜ್ಞಾನವನ್ನು ರೈತರ ಮೇಲೆ ಹೇರುವವರಿಗೆ ಇದು ಪಾಠವಾಗಬೇಕು ಎಂದು ಶರ್ಮಾ ಹೇಳುತ್ತಾರೆ.
ನೂರಾರು ವರ್ಷಗಳಿಂದ ರೈತರು ಜತನದಿಂದ ಕಾಪಾಡಿಕೊಂಡು ಬಂದಿರುವ ಅಗಾಧ ಪ್ರಮಾಣದ ಬೀಜ ವೈವಿಧ್ಯ ಕಣ್ಮರೆಯಾಗುವುದು ಕುಲಾಂತರಿ ತಂತ್ರಜ್ಞಾನ ಒಡ್ಡಿರುವ ದೊಡ್ಡ ಅಪಾಯ. ನಿಸರ್ಗದಲ್ಲಿ ಕೋಟಿಗಟ್ಟಲೇ ವರ್ಷಗಳಿಂದ ವ್ಯವಸ್ಥಿತವಾಗಿ ರೂಪುಗೊಳ್ಳುತ್ತ ಬಂದ ಜೀವಜಾಲವನ್ನು ನಮಗೆ ಬೇಕಾದ ಹಾಗೆ ಮಾರ್ಪಡಿಸಿಕೊಳ್ಳುವ ನೈತಿಕ ಹಕ್ಕು ನಮಗಿದೆಯೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಮಾನವನ ಹಸ್ತಕ್ಷೇಪದಿಂದ ಆಗುವ ಸಣ್ಣ ತಪ್ಪು ಕೂಡ ಪ್ರಕೃತಿಗೆ ದೊಡ್ಡ ಅನಾಹುತವನ್ನೇ ತಂದೊಡ್ಡಬಹುದು.
ಒಂದು ಜೀವಿಯ ವಂಶವಾಹಿಯನ್ನು ಬೇರೊಂದು ಜೀವಿಗೆ ಸೇರಿಸಿದಾಗ, ಅದು ಇಡೀ ವರ್ಣತಂತುವಿನ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ. ಈ ತಂತ್ರ ಅನುಸರಿಸಿ ತಯಾರಿಸುವ ಆಹಾರವು ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕೆಲವು ವಿಜ್ಞಾನಿಗಳೇ ಅಪಸ್ವರ ಎತ್ತಿದ್ದಾರೆ. ಪ್ರಯೋಗಾಲಯದಲ್ಲಿ ಇಲಿಗಳಿಗೆ ಜಿ.ಎಂ. ಆಹಾರ ತಿನಿಸಿದ ಬಳಿಕ ಅವುಗಳ ದೇಹದಲ್ಲಿ ವಿಪರೀತ ಎನ್ನುವಂಥ ಬದಲಾವಣೆ ಕಂಡುಬಂದಿದೆ. ಬೆಳವಣಿಗೆಯಲ್ಲಿ ಕುಂಠಿತ, ರೋಗನಿರೋಧಕ ಶಕ್ತಿ ಕುಸಿತ, ಕರುಳಿನಲ್ಲಿ ಕ್ಯಾನ್ಸರ್‌ ಕೋಶಗಳು ಬೆಳೆದಿದ್ದು, ಶ್ವಾಸಕೋಶ ಹಾಗೂ ಮೂತ್ರಪಿಂಡದ ಕೋಶಗಳಲ್ಲಿ ಊತ, ಕುಂದಿದ ಮಿದುಳಿನ ಕಾರ್ಯಕ್ಷಮತೆ, ಯಕೃತ್ತಿನ ತೊಂದರೆಯಂಥ ಸಮಸ್ಯೆಗಳು ಇಲಿಗಳಲ್ಲಿ ಉದ್ಭವಿಸಿವೆ.
ಕೇವಲ ಇಳುವರಿ ಹೆಚ್ಚಳ ಅಥವಾ ರೋಗ- ಕೀಟ ನಿರೋಧಕ ಶಕ್ತಿ ನೀಡುವ ತಂತ್ರಜ್ಞಾನ ಬಳಸಿ, ತಯಾರಿಸಲಾದ ಆಹಾರ ಮಾನವನ ಆರೋಗ್ಯಕ್ಕೆ ಪೂರಕವಾದೀತೆ? ಪರಿಸರದ ಮೇಲಾಗುವ ಅಡ್ಡಪರಿಣಾಮಗಳಿಗೆ ಪರಿಹಾರ ಏನು?
ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಅಂತರರಾಷ್ಟ್ರೀಯ ಪರಿಸರಪರ ಸಂಘಟನೆಗಳು `ಜಿ.ಎಂ. ಆಹಾರದ ವಿರುದ್ಧ ದನಿಯೆತ್ತಿದೆ. ಈಗಾಗಲೇ ಕೇರಳ, ಉತ್ತರಾಂಚಲ ಹಾಗೂ ಒರಿಸ್ಸಾದಲ್ಲಿ ಅಲ್ಲಿನ ಸರ್ಕಾರಗಳು ಕುಲಾಂತರಿ ಬೆಳೆಗೆ ಅವಕಾಶ ಕೊಡುವುದಿಲ್ಲ ಎಂದು ಘೋಷಿಸಿವೆ. ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಗ್ರಾಮಗಳ ಪಂಚಾಯತಿಗಳು ಕುಲಾಂತರಿ ಬೆಳೆ ನಿಷೇಧಿತ ಪ್ರದೇಶ ಎಂದು ಘೋಷಿಸಿಕೊಂಡಿವೆ. ಪಶ್ಚಿಮ ಬಂಗಾಳದ ಕೃಷಿ ಆಯೋಗವು ಕುಲಾಂತರಿ ಬೆಳೆ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಿ.ಟಿ. ಬದನೆ ನಮ್ಮ ದೇಶದ ರೈತರ ಹೊಲಕ್ಕೆ ಬರಲು ಸಿದ್ಧವಾಗಿದೆ. ಅದರ ಬಳಿಕ ಆಲೂ, ನಂತರ ಟೊಮ್ಯಾಟೊ, ಪಪ್ಪಾಯ, ಮೆಕ್ಕೆಜೋಳ, ಸೋಯಾ ಇನ್ನಿತರ ಬಿ.ಟಿ. ಬೆಳೆ ಸಾಲಾಗಿ ನಿಂತಿವೆ. ಕುಲಾಂತರಿ ಆಹಾರದ ಸುರಕ್ಷತೆ ಬಗ್ಗೆ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಈಗ ಅದಕ್ಕೆಲ್ಲ ಸಮಯವಿಲ್ಲ. ಅತ್ಯವಸರದಲ್ಲಿ ಪರೀಕ್ಷೆ ನಡೆಸಿ, ಅಡಿಗೆ ಮನೆಗೆ ಕುಲಾಂತರಿ ಆಹಾರ ರವಾನಿಸಲು ಸಿದ್ಧತೆ ನಡೆದಿದೆ. ಇದನ್ನೇ ಸಂಕೇತವಾಗಿಸಿ, ನಾನು ಪ್ರಯೋಗ ಜೀವಿ ಅಲ್ಲ ಎಂಬ ಆಂದೋಲನ ಭಾರತದಲ್ಲಿ ಆರಂಭಿಸಲಾಗಿದೆ ಎಂದು ಕುಲಾಂತರಿ ಮುಕ್ತ ಭಾರತ ಚಳುವಳಿಯ ಸಂಚಾಲಕಿ ಕವಿತಾ ಕುರಗುಂಟಿ ಹೇಳುತ್ತಾರೆ.
ವಿವಿಧ ರಾಜ್ಯಗಳಲ್ಲಿ ಆರಂಭವಾದ `ಕುಲಾಂತರಿ ವಿರೋಧಿ ಚಳುವಳಿಗೆ ಕರ್ನಾಟಕದಲ್ಲಿ ಅ.16ರಂದು ಚಾಲನೆ ದೊರೆತಿದೆ. ಗ್ರೀನ್‌ಪೀಸ್‌ ಸಂಘಟನೆಯು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಹಾಗೂ ಸಂವಾದ ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಪಶು ಅಲ್ಲ (ಐ ಆಮ್‌ ನೋ ಲ್ಯಾಬ್‌ ರ್ಯಾಟ್‌) ಚಳುವಳಿ ರೂಪಿಸಿದೆ.
ಮಳೆ ಕೊರತೆ, ಬರ, ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ನೂರಾರು ವರ್ಷಗಳಿಂದ ರೂಪುಗೊಂಡ ಸಾಂಪ್ರದಾಯಿಕ ಕೃಷಿ ಬೆಳೆ ಉಳಿಸಿಕೊಳ್ಳಬೇಕೇ ಹೊರತೂ, ರೈತರ ಪ್ರಗತಿ ನೆಪದಲ್ಲಿ ಕೋಟಿಗಟ್ಟಲೇ ಲಾಭ ಗಳಿಸುವ ಉದ್ದೇಶದ ಬಹುರಾಷ್ಟ್ರೀಯ ಕಂಪೆನಿಗಳ ತಂತ್ರಜ್ಞಾನ ನಮಗೇಕೆ ಬೇಕು?

- `ಸಹಜ ಸಮೃದ್ಧ' ಫೀಚರ್ಸ್‌

Wednesday, November 5, 2008

ಬಳ್ಳಿ ಭೂ ಸಾರ!


ರಸ­ಗೊ­ಬ್ಬರ ಇಲ್ಲದೆ ಬೆಳೆ ಬೆಳೆ­ಯು­ವುದು ಅಸಾಧ್ಯ ಎನ್ನುವ ಸ್ಥಿತಿಗೆ ಇಂದಿನ ರೈತರು ತುಲು­ಪಿ­ದ್ದಾರೆ. ಹಸಿರು ಕ್ರಾಂತಿಯ ಪೂರ್ವ­ದಲ್ಲಿ ರೈತರು ರಸ­ಗೊ­ಬ್ಬ­ರ­ವಿ­ಲ್ಲದೆ ಸುಲ­ಲಿ­ತ­ವಾಗಿ ಬೆಳೆ ಬೆಳೆ­ಯು­ತ್ತಿ­ದ್ದರು. ಉತ್ಪಾ­ದನೆ ಹೆಚ್ಚು ಮಾಡ­ಬೇ­ಕೆಂಬ ಉತ್ಕಟ ಆಸೆ­ಯಿಂದ ತಮ್ಮ ನೆಲ ಜ್ಞಾನ­ವನ್ನು ಅವರು ಮರೆ­ತಿ­ದ್ದಾ­ರೆಯೇ? ಉತ್ತರ ಅವರ ಆತ್ಮ­ಸಾ­ಕ್ಷಿಯೇ ಹೇಳ­ಬೇಕು!
ಹಿಂದೆ ನಮ್ಮಲ್ಲಿ ಪೌಷ್ಠಿ­ಕ­ವಾದ ಬಳ್ಳಿ ಬೆಳೆ­ಯನ್ನು ಮೊದಲು ಬೆಳೆದು ನಂತರ ಭತ್ತ, ರಾಗಿ ಮುಂತಾ­ದ­ವನ್ನು ಬೆಳೆ­ಯು­ತ್ತಿ­ದ್ದರು. ಇಂತಹ ಬಳ್ಳಿ ಬೆಳೆ­ಗಳೂ ಭೂಮಿ­ಯಲ್ಲಿ ತೇವಾಂಶ ಹಿಡಿ­ದಿ­ಡು­ವು­ದ­ಲ್ಲದೇ ಮುಂದಿನ ಬೆಳೆಗೆ ಗೊಬ್ಬ­ರ­ವಾಗಿ ಬದ­ಲಾ­ಗು­ತ್ತಿತ್ತು. ಆದರೆ, ಈಗ ಅಂತಹ ಬೆಳೆ­ಗಳ ಬಗ್ಗೆ ರೈತರು ನಿರ್ಲ­ಕ್ಷಿ­ಸಿ­ದ್ದಾರೆ.
ಬಳ್ಳಿ ಬೆಳೆಯ ಬಗ್ಗೆ ಹೇಳ­ಬೇ­ಕಾ­ದರೆ, ಬರ­ಗಾ­ಲದ ಅವ­ಧಿ­ಯಲ್ಲಿ ಅಡಿಕೆ ತೋಟ­ವನ್ನು ಉಳಿ­ಸಿ­ಕೊ­ಳ್ಳ­ಬೇ­ಕಾದ ಅನಿ­ವಾ­ರ್ಯದ ಸ್ಥಿತಿ. ಮತ್ತೊಂ­ದೆಡೆ ಭತ್ತ­ವನ್ನು ಬೆಳೆ­ಯಲೇ ಬೇಕಾದ ಪರಿ­ಸ್ಥಿತಿ. ನಂತರ ಬಳ್ಳಿ ಬೆಳೆ­ಗ­ಳಿಗೆ ಮೊರೆ ಹೋಗಿ ಯಶ ಕಂಡ ರೈತರು ತುಂಬಾ ವಿರಳ. ಅಂತ­ಹ­ವ­ರಲ್ಲಿ ಶಿಕಾ­ರಿ­ಪುರ ಚುರ್ಚಿ­ಗುಂ­ಡಿಯ ಬಿ.ಎನ್‌. ನಂದೀಶ್‌ ಅವರು ಒಬ್ಬರು. ಇವರು ವೆಲ್ವೆಟ್‌ ಬೀನ್ಸ್‌ ಬಳ್ಳಿ­ಯನ್ನು ಬೆಳೆದು ಇತ­ರ­ರಿಗೆ ಮಾದ­ರಿ­ಯಾ­ಗಿ­ದ್ದಾರೆ.
ಸಾಮಾ­ನ್ಯ­ವಾಗಿ ಕಾಡು­ಬ­ಳ್ಳಿ­ಯಾದ ನಸ­ಗುನ್ನಿ ಎನ್ನುವ ಬಳ್ಳಿ ಪ್ರಭೇ­ದಕ್ಕೆ ಸೇರು­ತ್ತದೆ ವೆಲ್ವೆಟ್‌ ಬೀನ್ಸ್‌. ಇದೇ ಜಾತಿಗೆ ಸೇರುವ ಮತ್ತೊಂದು ಬಳ್ಳಿ ಮುಕೋನಾ. ಇದು ಆಫ್ರಿಕಾ ಖಂಡ­ದಲ್ಲಿ ಹೆಚ್ಚಾಗಿ ಬೆಳೆ­ಯುವ ಬೆಳೆ. ನಮ್ಮ­ಲ್ಲಿ­ರುವ ನಸು­ಗುನ್ನಿ ಬಳ್ಳಿ­ಯನ್ನು ಮುಟ್ಟಿ­ದರೆ ಅಥವಾ ತಾಗಿ­ದರೆ ತುರಿಕೆ ಆರಂ­ಭ­ವಾ­ಗು­ತ್ತದೆ. ಆದರೆ ಮುಕೋನಾ ಮತ್ತು ವೆಲ್ವೆಟ್‌ ಬೀನ್ಸ್‌ ಬಳ್ಳಿ­ಗ­ಳಿಗೆ ತುರಿಕೆ ಬರಿ­ಸುವ ಗುಣ­ವಿಲ್ಲ. ಇದೇ ಇದರ ವಿಶೇಷ.
ವೆಲ್ವೆಟ್‌ ಬೀನ್ಸ್‌ ಬಳ್ಳಿ­ಯನ್ನು ಯಾವುದೇ ತರ­ಹದ ತೋಟ­ಗ­ಳಲ್ಲಿ, ಭತ್ತ, ರಾಗಿ ಗದ್ದೆ­ಗ­ಳಲ್ಲಿ ಹಿಂಗಾರು ಬೆಳೆ­ಯಾ­ಗಿಯೂ ಬೆಳೆ­ಯ­ಬ­ಹುದು. ಮುಕೋ­ನಾ­ವನ್ನು ಸಾಮಾ­ನ್ಯ­ವಾಗಿ ಮುಚ್ಚಲು ಬೆಳೆ­ಯಾಗಿ ರಬ್ಬರ್‌ ತೋಟ­ದಲ್ಲಿ ಬೆಳೆ­ಯು­ತ್ತಾರೆ. ವೆಲ್ವೆಟ್‌ ಬೀನ್ಸ್‌ ಕೇವಲ ಮಣ್ಣು ಫಲ­ವತ್ತು ಮಾಡು­ವುದು ಅಲ್ಲದೆ, ಆದಾಯ ತರುವ ಬೆಳೆ ಕೂಡ. ಇದ­ನ್ನೊಂದು ಪರ್ಯಾಯ ಬೆಳೆ­ಯ­ನ್ನಾಗಿ ಮಾಡಿ ಮಾರು­ಕ­ಟ್ಟೆ­ಯಲ್ಲಿ ಸೂಕ್ತ ಬೆಲೆ ಕೊಡಿ­ಸುವ ಪ್ರಯ­ತ್ನವು ಈಚೇಗೆ ನಡೆ­ಯು­ತ್ತಿದೆ. ಈ ಬಳ್ಳಿ­ಯಲ್ಲಿ ಬಿಡುವ ಬಿನ್ಸ್‌­ನಲ್ಲಿ ಔಷ­ಧೀಯ ಗುಣ­ವಿ­ರು­ವುದು ಅಧ್ಯ­ಯ­ನ­ದಿಂದ ತಿಳಿ­ದು­ಬಂ­ದಿದೆ. ಇದ­ರಲ್ಲಿ ಎಣ್ಣೆಯ ಅಂಶ­ವಿ­ರು­ವು­ದ­ರಿಂದ ಎಣ್ಣೆ ಉತ್ಪಾ­ದ­ನೆಗೂ ಇದು ಸಹ­ಕಾರಿ. ಇಷ್ಟೇ ಅಲ್ಲದೇ ಈ ಬಳ್ಳಿ­ಯನ್ನು ಹಣದ ದೃಷ್ಠಿ­ಯಿಂದ ಬೆಳೆ­ಯದೇ ಹಾಗೇ ಬೆಳೆ­ಸಿ­ದರು ರೈತ­ರಿಗೆ ಬೇರೆ ರೂಪ­ದಲ್ಲಿ ಲಾಭ­ವಂತೂ ಇದ್ದೇ ಇದೆ.
ರೈತರು ವೆಲ್ವೆಟ್‌ ಬೀನ್ಸ್‌ ಅನ್ನು ಬೆಳೆ­ಯ­ಬೇ­ಕಾ­ದರೆ ಇತರೆ ಬೀನ್ಸ್‌­ಗ­ಳನ್ನು ಬೆಳೆ­ಯು­ವಾಗ ಅನು­ಸ­ರಿ­ಸುವ ಕೃಷಿ ಪದ್ಧ­ತಿ­ಯನ್ನು ಅನಿ­ಸ­ರಿ­ಸ­ಬೇ­ಕಾದ ಅವ­ಶ್ಯ­ಕತೆ ಇಲ್ಲ. ಸುಮ್ಮನೆ ಈ ಬಳ್ಳಿಯ ಬೀಜ­ಗ­ಳನ್ನು ಬಿತ್ತಿ­ದರೆ ಸಾಕು. ಬಳ್ಳಿ ಟೀಸಿಲು ಬರು­ವಷ್ಟು ಭೂಮಿ ತೇವಾಂ­ಶ­ವಿ­ದ್ದರೆ ಸಾಕು. ಒಮ್ಮೆ ಬದು­ಕಿ­ದರೆ ಒಂದು ವರ್ಷ­ದ­ವ­ರೆಗೆ ಯಾವುದೇ ಸಮಸ್ಯೆ ಇಲ್ಲ! ಇದೊಂದು ನೆಲ­ದಲ್ಲಿ ಹಬ್ಬುವ ಬಳ್ಳಿ­ಯಾ­ದ­ರಿಂದ ವ್ಯಾಪ­ಕ­ವಾಗಿ ಹಬ್ಬು­ತ್ತದೆ. ಅಡಿಕೆ ಅಥವಾ ಬೇರೆ ಯಾವುದೇ ಬಹು­ವಾ­ರ್ಷಿಕ ಬೆಳೆ­ಗಳ ನಡುವೆ ಬೆಳೆ­ದರೆ ಇತರೆ ಕೆಲ­ಸ­ಗ­ಳಿಗೆ ತೊಂದ­ರೆ­ಯಾ­ಗುವ ಸಾಧ್ಯ­ತೆಯು ಇರು­ತ್ತದೆ. ಆದರೆ ಯೋಜ­ನಾ­ಬ­ದ್ಧ­ವಾಗಿ ಬೆಳೆ­ದರೆ ತೊಡ­ಕಾ­ದಂತೆ ಬೆಳೆ­ಸ­ಬ­ಹುದು. ಹಾಗೆ ಇದಕ್ಕೆ ನೀರಾ­ವರಿ ಬೇಕೇ ಬೇಕು ಎನ್ನುವ ಆಗಿಲ್ಲ, ಇದರ ಅಗತ್ಯ ಕಡಿಮೆ. ಮೂಲ ಬೆಳೆ­ಗ­ಳಿಗೆ ಬೇಕಾದ ಸಾರ­ಜ­ನ­ಕ­ವನ್ನು ಭೂಮಿಗೆ ಒದ­ಗಿ­ಸು­ತ್ತದೆ. ಬೀನ್ಸ್‌ ಅನ್ನು ಕೊಯ್ದಾದ ಮೇಲೆ ಬಳ್ಳಿ­ಗಳ ಮೇಲೆ ಉಳಿಮೆ ಮಾಡಿ­ದರೆ ಅಲ್ಲಿಯೇ ಇದು ಗೊಬ್ಬ­ರ­ವಾಗಿ ಮಾರ್ಪ­ಡು­ತ್ತದೆ. ಇದನ್ನು ಬೆಳೆ­ಸು­ವು­ದ­ರಿಂದ ಬೇಡದೆ ಹೋದ ಕಳೆ­ಗಳು ನಾಶ­ವಾ­ಗು­ತ್ತದೆ. ಆಲ್ಲಿ ಜೈವಿಕ ವಾತ­ವ­ರ­ಣ­ವನ್ನು ಸೃಷ್ಟಿ ಮಾಡು­ತ್ತದೆ.
ವೆಲ್ವೆಟ್‌ ಬೀನ್ಸ್‌ ಉತ್ತಮ ಪಶು ಆಹಾ­ರವೂ ಹೌದು. ಇದೊಂದು ದ್ವಿದಳ ಧಾನ್ಯ­ವಾ­ದ­ರಿಂದ ಜಾನ­ವಾ­ರು­ಗ­ಳಿಗೆ ಹೆಚ್ಚಿಗೆ ಪೌಷ್ಠಿ­ಕಾಂಶ ಒದ­ಗಿ­ಸು­ತ್ತದೆ. ಒಣ ಮೇವಾಗಿ ಇದನ್ನು ಬಳ­ಸು­ವು­ದ­ರಿಂದ ಹಾಲಿನ ಉತ್ಪಾ­ದನೆ ಹೆಚ್ಚಿಗೆ ಆಗು­ತ್ತದೆ. `ತೋಟ ಮತ್ತು ಹೊಲ­ಗ­ಳಲ್ಲಿ ವೆಲ್ವೆಟ್‌ ಬೀನ್ಸ್‌ ಬೆಳೆ­ದಿ­ದ್ದೇನೆ. ನಮ್ಮಲ್ಲಿ ಮಲೆ­ನಾ­ಡಿ­ನಷ್ಟು ಸಮೃದ್ಧ ಮಣ್ಣು ಇಲ್ಲ­ದಿ­ರು­ವು­ದ­ರಿಂದ ಇಂತಹ ಬೆಳೆ­ಗ­ಳನ್ನು ಬೆಳೆ­ಸಿಯೇ ಮಣ್ಣು ಫಲ­ವತ್ತು ಮಾಡಿ­ಕೊ­ಳ್ಳ­ಬೇ­ಕಾದ ಸ್ಥಿತಿ ಇದೆ. ಅಡಿಕೆ ತೋಟ­ಗ­ಳಿಗೆ ನಾನು ಗೊಬ್ಬರ ಹಾಕು­ವು­ದಿಲ್ಲ. ಹಸಿರು ಸಸ್ಯ­ಗ­ಳಿಗೆ ಅವು­ಗಳೇ ಬೇಕಾದ ಗೊಬ್ಬರ ಒದ­ಗಿ­ಸು­ತ್ತದೆ. ಇಂತಹ ಮುಚ್ಚಲು ಬಳ್ಳಿ­ಯನ್ನು ಬೆಳೆ­ಯು­ವು­ದ­ರಿಂದ ರಸ­ಗೊ­ಬ್ಬ­ರಕ್ಕೆ ಪರ­ದಾಟ ನಡೆ­ಸು­ವುದು ತಪ್ಪು­ತ್ತದೆ. ಬೆಳೆಯ ಇಳು­ವ­ರಿ­ಯಲ್ಲೂ ಅಂತಹ ವ್ಯತ್ಯಾ­ಸ­ವೇನು ಆಗು­ವು­ದಿಲ್ಲ' ಅನ್ನು­ತ್ತಾರೆ ನಂದೀಶ್‌. ಅವರ ಮಾತಿ­ನಲ್ಲಿ ಸಾವ­ಯವ ಕೃಷಿ ಮಾಡಿದ ಸಂತೃಪ್ತಿ ಇತ್ತು.
ಇನ್ನು ಮುಕೋನಾ, ಇದನ್ನು ರಬ್ಬರ್‌ ತೋಟ­ದಲ್ಲಿ ಸಾರ­ಜ­ನಕ ಒದ­ಗಿ­ಸಿ­ಕೊ­ಳ್ಳು­ವು­ದ­ಕ್ಕಾಗಿ ಬೆಳೆ­ಯು­ತ್ತಾರೆ. ರಬ್ಬರ್‌ ಬೇರು­ಗಳು ಬಹಳ ವಿಸ್ತಾ­ರ­ವಾಗಿ ಹರ­ಡಿ­ಕೊಂ­ಡಿ­ರು­ವು­ದ­ರಿಂದ ಈ ಬಳ್ಳಿ­ಗ­ಳನ್ನು ರಬ್ಬರ್‌ ಗಿಡ­ಗಳ ಎರಡು ಸಾಲು­ಗಳ ಮಧ್ಯೆ ಬೆಳೆ­ಸು­ತ್ತಾರೆ. ಇದ­ರಲ್ಲಿ ಬೀನ್ಸ್‌ ಬಿಡುವ ಪ್ರಮಾಣ ಕಡಿಮೆ. ಉಳಿ­ದಂತೆ ವಾಣಿಜ್ಯ ಮಹತ್ವ ಇದಕ್ಕೆ ಇಲ್ಲ­ದಿ­ದ್ದರೂ ವೆಲ್ವೆಟ್‌ ಬೀನ್ಸ್‌ನ ಪರಿ­ಣಾ­ಮ­ವನ್ನೇ ಭೂಮಿಗೆ ನೀಡು­ತ್ತದೆ.
ವೆಲ್ವೆಟ್‌ ಬೀನ್ಸ್‌ ಕುರಿತು ಪತ್ರ­ಕರ್ತ, ಕೃಷಿ ಬರ­ಹ­ಗಾರ ಗಾಣ­ದಾಳು ಶ್ರೀಕಂಠ ಅವರು ವಿಸ್ತಾ­ರ­ವಾದ ಮಾಹಿ­ತಿ­ಯುಳ್ಳ ಪುಸ್ತಕ (ವೆ­ಲ್ವೆಟ್‌ ಬೀನ್ಸ್‌)ವನ್ನು ಬರೆ­ದಿ­ದ್ದಾರೆ. ಈ ಬೆಳೆಯ ಕುರಿತು ಹೆಚ್ಚಿನ ಮಾಹಿ­ತಿಗೆ ಭಾರ­ತೀಯ ಭೂ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ ರಾಜೇಂದ್ರ ಹೆಗಡೆ (94487897) ಅವ­ರನ್ನು ಸಂಪ­ರ್ಕಿ­ಸ­ಬ­ಹುದು. ಬೀಜ­ಕ್ಕಾಗಿ ಸಹಜ ಸಮೃದ್ಧ- 080-22715744/ 9880862058 ವಿಚಾ­ರಿ­ಸ­ಬ­ಹುದು.

Tuesday, November 4, 2008

ಜತ್ರೋಫಾ - ಸೋಲುತ್ತಿದೆ ಏಕೆ?



ಆಗಷ್ಟೇ ವೆನಿಲ್ಲಾ ರೈತರನ್ನು ನಿರಾಶೆಗೊಳಿಸಿತ್ತು. ಒಂದೆಡೆ ಅದರ ಬೆಲೆ ಮೂರೂವರೆ ಸಾವಿರದಿಂದ ನೂರಾ ಹತ್ತು-ಇಪ್ಪತ್ತಕ್ಕೆ ಇಳಿದಿತ್ತು. ಜೊತೆಗೆ ಗುಣಪಡಿಸಲಾಗದ ವಿಲ್ಟ್‌ ಯಾ ಕೊಳೆ ರೋಗಮೊಂದು ವೆನಿಲ್ಲಾ ಬಳ್ಳಿಗಳನ್ನು ನಾಶಪಡಿಸತೊಡಗಿತ್ತು. ಆಗ ಅಬ್ಬರದೊಂದಿಗೆ ಆಗಮಿಸಿದ ಜತ್ರೋಫಾ ರೈತರಲ್ಲಿ ಮತ್ತೆ ಹೊಸ ಆಸೆ ಹುಟ್ಟಿಸಿತ್ತು. ಆ ಮಟ್ಟಿಗಾದರೂ ಜತ್ರೋಫಾಗೆ ಥ್ಯಾಂಕ್ಸ್‌ ಹೇಳಬೇಕು. ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ಅದು ಕಡಿಮೆಗೊಳಿಸಿರಲೇಬೇಕು!
ಬಹುಸಂಖ್ಯಾತ ರೈತರಿಗೆ ಜತ್ರೋಫಾ ಹೆಸರು ಹೊಸದಾದರೂ ಗಿಡ ಚಿರಪರಿಚಿತವಾಗಿತ್ತು. ಮಲೆನಾಡು ಭಾಗದಲ್ಲಿ ಕಳ್ಳಿ ಎಂಬ ಬೇಲಿಸಾಲಿನ ಈ ಗಿಡ ಬೆಳೆಸುವುದು ಸುಲಭ ಎನ್ನಿಸಿತ್ತು. ಪೂರಕವಾಗಿ ಜತ್ರೋಫಾಗೆ ಸಿಕ್ಕ ಪ್ರಚಾರವೂ ಅದೇ ನಿಟ್ಟಿನಲ್ಲಿತ್ತು. ಎಲ್ಲ ಮಾದರಿಯ ಭೂಮಿಯಲ್ಲಿ ಬೆಳೆಯಲು ಯೋಗ್ಯ, ಬದುಕಲು ಬೆಳೆಯಲು ಬಾಹ್ಯ ನೀರೇ ಬೇಡ. ನೆಟ್ಟರೆ ಸಾಕು, ಆರೈಕೆ ಬೇಡ ಎಂದೇ ವ್ಯಾಖ್ಯಾನಿಸಲಾಗಿತ್ತು. ನಿಜಕ್ಕಾದರೆ, ಈ ಮಾತು ಬೀಜಕ್ಕೆ ಮಾತ್ರ ಅನ್ವಯವಾಗುತ್ತಿತ್ತು!
ಜತ್ರೋಫಾದ್ದು ಮೃದು ಕಾಂಡ. ಇದು ಭರ್ಜರಿ ಮಳೆಯನ್ನಾಗಲೀ, ಬಿರು ಬೇಸಿಗೆಯನ್ನಾಗಲಿ ತಾಳುವಂತದಲ್ಲ. ಮೊದಲ ನಾಲ್ಕು ವರ್ಷವಂತೂ ನೀರಿನ ಒತ್ತಾಯ ಬೇಕೇ ಬೇಕು. ರಕ್ಷಣೆ ಬೇಕು. ಜಾನುವಾರುಗಳು ತಿನ್ನಲಾರವು ಎಂಬುದು ಸತ್ಯವಾದರೂ ಅವುಗಳ ಓಡಾಟಕ್ಕೆ ಸಿಕ್ಕ ಗಿಡಗಳು ನಲುಗಿದ ಉದಾಹರಣೆ ಹಲವು. ಹಾಗಾಗಿ ಬೇಲಿ ಅನಿವಾರ್ಯ. ಜತ್ರೋಫಾದಿಂದ ಕೂಡ ಸೂಚಿತ ಮಟ್ಟದ ಇಳುವರಿ ಪಡೆಯಲು ಗೊಬ್ಬರದ ಬೆಂಬಲವೂ ಬೇಕು. ಅಂದ ಮೇಲೆ ಖರ್ಚೇ ಇಲ್ಲದ ಬೆಳೆ ಎಂಬ ಮಾತು ಮಿಥ್ಯೆಯಾಗಿ ಜತ್ರೋಫಾ ಕೃಷಿಯೂ ಬಂಡವಾಳ ಬಯಸುತ್ತದೆ ಎಂದಾಯಿತು. ರೈತ ಮುನ್ನುಗ್ಗಲು ಹೆದರುವಂತಾಯಿತು. ಅಷ್ಟಕ್ಕೂ ಜತ್ರೋಫಾ ಬೀಜದ ಮಾರುಕಟ್ಟೆ ದರ ಇವತ್ತಿಗೂ ನಿಗದಿಯಾಗಿಲ್ಲ!
ಸುಮ್ಮನೆ ಇನ್ನೊಂದು ಅಂಕಿಅಂಶವನ್ನು ಪರಿಶೀಲಿಸಿ. 2006-07ರ ಸಾಲಿನಲ್ಲಿ ಸರಿಸುಮಾರು 52.33 ಮಿಲಿಯನ್‌ ಮೆಟ್ರಿಕ್‌ ಟನ್‌ ಪೆಟ್ರೋ-ಡೀಸೆಲ್‌ ದೇಶದಲ್ಲಿ ಬಳಕೆಯಾಗಿದೆ. ಇದರೊಂದಿಗೆ ಶೇಕಡಾ ಒಂದರಷ್ಟು ಜತ್ರೋಫಾ ತೈಲವನ್ನು ಬೆರೆಸಬೇಕೆಂದರೂ 6,27,960 ಎಕರೆ ಭೂಪ್ರದೇಶದ ಜತ್ರೋಫಾ ಇಳುವರಿಯ ಅಗತ್ಯವಿದೆ!
ಜತ್ರೋಫಾ ತನ್ನ ಮೂರನೇ ವರ್ಷದಿಂದ ಪರಮಾವಧಿ ಬೆಳೆ ಅರ್ಥಾತ್‌ ಎಕರೆಗೆ 2,500 ಕೆ.ಜಿ. ದೊರಕಿಸಿಕೊಡುತ್ತದೆ ಎಂಬುದು ಒಂದು ಅಂದಾಜು. ಆದರೆ ಈ ಮೂರು ವರ್ಷಕ್ಕೆ ಶೇ. ಒಂದರ ಪ್ರಮಾಣದ ತೈಲಕ್ಕಾಗಿ ಜತ್ರೋಫಾ ಕೃಷಿಗೆ ತೊಡಗಿಸಬೇಕಾದ ಬಂಡವಾಳ ರೂ.628 ಕೋಟಿ! ಮುಖ್ಯವಾಗಿ ಗಮನಿಸಬೇಕಾದುದೆಂದರೆ, ಇದು ತೈಲ ಬೀಜ ತೆಗೆಯಲು ಮಾಡುವ ಖರ್ಚು. ಸಂಸ್ಕರಣೆಯ ಬಾಬತ್ತಿನದೇ ಬೇರೆಯ ಲೆಕ್ಕ.
ಬಯೋ ಪೆಟ್ರೋ-ಡೀಸೆಲ್‌ಗಳನ್ನು ಉತ್ತೇಜಿಸಬೇಕಿರುವುದು ಖರೆ. ಅಷ್ಟು ಮಾತ್ರಕ್ಕೆ ಜತ್ರೋಫಾವನ್ನು ಪರ್ಯಾಯ ಪೆಟ್ರೋಲ್‌, ಪುನಃ ಸೃಷ್ಟಿಸಬಲ್ಲ ಶಕ್ತಿಮೂಲ, ಗ್ರಾಮೀಣ ಕೃಷಿಯಲ್ಲಿ ಕ್ರ್ರಾಂತಿಕಾರಕ ಹೆಜ್ಜೆ, ಶುಷ್ಕ ಭೂಮಿ ಬೆಳೆ, ಅಭಿವೃದ್ಧಿ ತಂತ್ರ, ವಿದೇಶಿ ವಿನಿಮಯ ಉಳಿತಾಯ ಕ್ರಮ.... ಈ ಪ್ರಮಾಣದಲ್ಲಿ ವಿಶೇಷಣಗಳನ್ನು ಬಳಸಿದರೆ ಅತಿರಂಜಿತ ಎನ್ನಿಸೀತು. ವಾಸ್ತವ ಅದಲ್ಲ. ಸಾಕ್ಷಿ ಎಂಬಂತೆ, ಕೃಷಿಕರ ಬಾಯಲ್ಲಿ ನಲಿದ ಮೂರು ವರ್ಷಗಳ ನಂತರ ಜತ್ರೋಫಾ ಈಗೆಲ್ಲಿದೆ?
ಆಗಿದ್ದೇನು? ಇದ್ದಕ್ಕಿದ್ದಂತೆ ಸರ್ಕಾರಕ್ಕೆ ಪರ್ಯಾಯ ಪೆಟ್ರೋಲ್‌ನ ಚಿಂತನೆ ಮೂಡಿತು. ಬಯೋ ಇಂಧನದ ಕೃಷಿಯನ್ನು ಉತ್ತೇಜಿಸಲು ಕೋಟಿಗಳ ಲೆಕ್ಕದಲ್ಲಿ ಹಣ ತೆಗೆದಿಟ್ಟಿತು. ವಿದೇಶಿ ಸಹಾಯಧನ ಹಾಗೂ ಸರ್ಕಾರದ ಬಜೆಟ್‌ನ್ನು ನುಂಗಿ ಹಾಕುವ ಏಕೈಕ ಉದ್ದೇಶದಿಂದ ಕೆಲವು ಸರ್ಕಾರೇತರ ಸಂಘಟನೆಗಳು ಜತ್ರೋಫಾ ಕೃಷಿಯ ಮುಂಚೂಣಿಯಲ್ಲಿ ನಿಂತವು. ಉಚಿತ ಬೀಜ ಹಂಚಿದವು. ದುಡ್ಡು ತಾವೆಣಿಸಿದವು. ಅವುಗಳ ಪ್ರಚಾರದಿಂದ ರೈತರು ಮತ್ತೆ ದಿಕ್ಕು ತಪ್ಪಿದರು. ಇತ್ತ ಮೀಸಲಿಟ್ಟ ಹಣ ಖರ್ಚಾಗುತ್ತಿದ್ದಂತೆ ಎನ್‌ಜಿಓಗಳು ಮಾಯವಾಗಿಬಿಟ್ಟಿವೆ!
ಸಸ್ಯಜನ್ಯ ಇಂಧನ ಪಡೆಯುವುದು ಸುಲಭದ ಮಾತಲ್ಲ. ಜತ್ರೋಫಾದಂತೆಯೇ ಪ್ರಚಾರದಲ್ಲಿರುವ ಹೊಂಗೆ ತಟಕ್ಕನೆ ತೈಲವಿರುವ ಬೀಜ ಕೊಡುವುದಿಲ್ಲ. ಇದು ಬಹು ವಾಷಿಕ ಬೆಳೆ. ಬೆಳವಣಿಗೆ ನಿಧಾನ. ಈ ಮಧ್ಯೆ ಜನ, ಸರ್ಕಾರ ಸೇರಿ ಯಾವ ಪರಿ ಅರಣ್ಯನಾಶ ಮಾಡಿದ್ದೇವೆಂದರೆ ಕಾಡುಪ್ರಾಣಿಗಳು ಊರಲ್ಲಿಯೇ ವಾಸಿಸುವ ಅನಿವಾರ್ಯತೆ. ಇಂತಹ ವೇಳೆ ಪ್ರಾಣಿಗಳ ಕಾಟ ತಪ್ಪಿಸಿ ಎಕರೆಗಟ್ಟಲೆ ಜತ್ರೋಫಾ, ಹೊಂಗೆ ಕೃಷಿ ದಕ್ಕೀತೆ? ಸಾಗರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಹೊಂಗೆ ಬೆಳೆಯಲು ಮಾಡಿದ ಪ್ರಯತ್ನ ಕಾಡೆಮ್ಮೆ, ಕೋಣಗಳ ಲೂಟಿಗೆ ತುತ್ತಾಗಿರುವುದು ನೆನಪಾಗುತ್ತದೆ.
ನಾಲ್ಕು ವರ್ಷಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಜತ್ರೋಫಾ ಕೆ.ಜಿ. ಬೀಜಕ್ಕೆಷ್ಟು ದರ ಎಂಬುದು ನಿಗದಿಯಾಗಿಲ್ಲ. ಖರೀದಿಸುವ ಕಂಪನಿಗಳು ಹುಟ್ಟಿದಂತಿಲ್ಲ. ತೈಲ ತೆಗೆಯುವ ತಂತ್ರಜ್ಞಾನ, ಯಾಂತ್ರಿಕತೆ, ಪೆಟ್ರೋಲ್‌ ಜೊತೆ ಬೆರೆಸುವ ವ್ಯವಸ್ಥೆಗಳು ಸಿದ್ಧಗೊಂಡಿರುವುದು ಅನುಮಾನ. ಹಿಂದೊಮ್ಮೆ ಕೋಕೋ ಬೆಳೆಯ ವಿಚಾರದಲ್ಲೂ ಇಂತದ್ದೇ ಘಟಿಸಿತ್ತು. ಸರ್ಕಾರೀ ವ್ಯವಸ್ಥೆಯ ಪ್ರಚಾರಕ್ಕೆ ಮರುಳಾದ ರೈತರು ಕೃಷಿ ಇಲಾಖೆ ಒದಗಿಸಿದ ಕೋಕೋ ಗಿಡ ನೆಟ್ಟರು. ಬೀಜ ಕೊಳ್ಳುವವರಾರು? ನಿಕ್ಕಿಯಾಗಲೇ ಇಲ್ಲ. ಅದೃಷ್ಟಕ್ಕೆ ಕ್ಯಾಂಪ್ಕೋ ಖರೀದಿಸುತ್ತಿರುವುದರಿಂದ ಕೋಕೋ ಉಳಿದಿದೆ. ಆದರೆ ಕ್ಯಾಂಪ್ಕೋ ಒಂದೇ ಖರೀದಿದಾರ ಎಂಬುದು ಯಾವತ್ತೂ ರೈತನ ತಲೆ ಮೇಲೆ ತೂಗುತ್ತಿರುವ ಕತ್ತಿ ಎಂಬುದೂ ನಿಜ. ಹಾಗೆ ನೋಡಿದರೆ ತಾಳೆ ಕೃಷಿಯದ್ದೂ ಯಥಾವತ್‌ ಇದೇ ಕತೆ. ಸರ್ಕಾರವೂ ಬದಲಿಸಿಲ್ಲ, ರೈತರೂ!
ಜತ್ರೋಫಾ ವಾಣಿಜ್ಯ ಬೆಳೆಯಾಗಿ ಅಭಿವೃದ್ಧಿಗೊಳ್ಳುವುದು ಕಷ್ಟ ಕಷ್ಟ. ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯ ಒಡೆಯ ಜತ್ರೋಫಾ ಬೆಳೆದು ಲಾಭ ಮಾಡಲಿಕ್ಕಾಗದು. ಸಾಮೂಹಿಕವಾಗಿ ಬೆಳೆ ಬೆಳೆದಲ್ಲಿ ಮಾತ್ರ ಮಾರುಕಟ್ಟೆ ಸುಲಭವಾದೀತು. ಈ ಕ್ಷಣದಲ್ಲಂತೂ ಅದಕ್ಕೊದಗಬಹುದಾದ ರೋಗಗಳು ಗೊತ್ತಾಗಿಲ್ಲ. ರೈತನ ಗೊಂದಲ ಅಕ್ಷರಶಃ ಹೆಚ್ಚುತ್ತಿದೆ.
ನಿಜಕ್ಕೂ ಆ ಕಳ್ಳೀ ಗಿಡ ಜೀವಂತ ಬೇಲಿಯ ವಿಧಾನವಾಗಿ ನಿರುಮ್ಮಳವಾಗಿತ್ತು. ಒಮ್ಮೆ ಬದುಕಿಸಿ, ಬೆಳೆಸಿ ಬಿಟ್ಟರೆ ವರ್ಷಕ್ಕೊಮ್ಮೆ ಟ್ರಿಮ್‌ ಮಾಡಿದರೆ ಸಾಕು. ಅಂತಹ ಕಳ್ಳಿಯನ್ನು ಜತ್ರೋಫಾವಾಗಿ ಪುನರ್ನಾಮಕರಣ ಮಾಡಿ ಬೇಲಿಯ ಒಳಗೆ ಕರೆಸಿದ್ದು ವ್ಯರ್ಥ. ಮತ್ತೆ ಕಳ್ಳಿ ಬೇಲಿಯ ಸದಸ್ಯನಾಗಿ ತನ್ನ ಗಾರ್ಡ್‌ ಕೆಲಸ ಮುಂದುವರೆಸಿದೆ. ಇನ್ನೇನು ಆದೀತು?
-ಮಾವೆಂಸ