Saturday, December 13, 2008

ಹರಿಯಾಣ ಎಮ್ಮೆ ಮಲೆನಾಡಿಗೆ ಬಂತು!




                                                                                                                                                                                                                                                       ಎಲ್ಲಿಯ ಮಾಮರ, ಎಲ್ಲಿಯ ಕೋಗಿಲೆ ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿ ಮೇಲಿನ ಸುದ್ದಿಯನ್ನು ತಳ್ಳಿಹಾಕುವಂತಿಲ್ಲ. ಸಾಗರದ ಚಿಕ್ಕತೋಟ ಶಶಿಧರ್ ಅಕ್ಷರಶಃ ಹರಿಯಾಣ ರಾಜ್ಯದಿಂದ ಎವ್ಮ್ಮೆಗಳನ್ನು ತಂದು ಹಾಲಿನ ಡೈರಿ ಆರಂಭಿಸಿದ್ದಾರೆ. ಮೈ ತುಂಬಾ ಸವಾಲುಗಳೇ ಇರುವ ಈ ಸಾಹಸ ಗಮನಿಸಲೇಬೇಕಾದಂತದು.
ಶಿವಮೊಗ್ಗ ಜಿಲ್ಲೆಯ ಈ ಚಿಕ್ಕತೋಟ ಎಂಬ ಪುಟ್ಟ ಹಳ್ಳಿ ಸಾಗರದಿಂದ ೧೩ ಕಿ.ಮೀ. ಅಂತರದಲ್ಲಿದೆ. ಅಲ್ಲಿನ ಯುವಕ ಸಿ.ಎಸ್. ಶಶಿಧರ್‌ರಿಗೆ ಮೊದಲಿನಿಂದಲೂ ಜಾನುವಾರು ಸಾಕಣೆ ಅಚ್ಚುಮೆಚ್ಚಿನ ಸಂಗತಿ. ಅದರಲ್ಲಿನ ಪ್ರಯೋಗಗಳತ್ತ ಆಸಕ್ತಿ, ಎಮ್ಮೆ ಎಂದರೆ ಆಕರ್ಷಣೆ. ಒಮ್ಮೆ ಟಿ.ವಿ.ಯಲ್ಲಿ ಕೃಷಿ ಕಾರ್ಯಕ್ರಮವೊಂದನ್ನು ನೋಡುವಾಗ, ಗೋಕಾಕ್‌ನಲ್ಲಿ ಹರಿಯಾಣ ಎಮ್ಮೆಗಳನ್ನು ತಂದು ಹೈನುಗಾರಿಕೆ ನಡೆಸುತ್ತಿರುವ ವಿಹಂಗಮ ಕತೆ ಗಮನ ಸೆಳೆಯಿತು. ನಮ್ಮೂರಿಗೂ ಹರಿಯಾಣ ಎಮ್ಮೆ ತಂದರೆ ಹೇಗೆ?
ಅಧ್ಯಯನದ ಅಗತ್ಯವಿತ್ತು. ಅಲ್ಲಿನ ಎಮ್ಮೆ ಮಲೆನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಹಲವು ಓಡಾಟಗಳ ನಂತರ ಮಲೆನಾಡಿನ ಚಳಿ, ಮಳೆಯನ್ನು ಇವು ತಾಳಿಕೊಳ್ಳುವುದು ಸ್ಪಷ್ಟವಾಯಿತು. ಸ್ವಾರಸ್ಯವೆಂದರೆ, ಗೋಕಾಕ್‌ನಲ್ಲಿರುವುದೂ ಹೆಚ್ಚು ಕಡಿಮೆ ಸಾಗರದ ಹವಾಮಾನ!
ಹರಿಯಾಣದಿಂದ ಎಮ್ಮೆ ತರಿಸುವುದೇ ತ್ರಾಸದ, ದುಬಾರಿಯ ಕೆಲಸ. ಒಂದೆರಡು ಎಮ್ಮ್ಮೆಯನ್ನು ಖರೀದಿಸಲಾಗದು. ಅಲ್ಲಿ ಹತ್ತು ಎಮ್ಮೆಗಳಿಗೆ ಒಂದು ಯೂನಿಟ್. ಒಂದು ಯೂನಿಟ್‌ಗೆ ತಕ್ಕುದಾದ ವಾಹನ ವ್ಯವಸ್ಥೆಯಿರುತ್ತದೆ. ಯೂನಿಟ್ ಒಂದರ ನಿರ್ವಹಣೆಗೆ ಒಬ್ಬ ನಿರ್ವಾಹಕನನ್ನು ಅಲ್ಲಿಂದಲೇ ಕಳಿಸಿಕೊಡಲಾಗುತ್ತದೆ. ಆತನಿಗೆ ದಿನಕ್ಕೆ ೧೦೦ ರೂಪಾಯಿ ಸಂಬಳ, ಜೊತೆಗೆ ಆಹಾರ ಸಾಮಗ್ರಿ ಕೊಡಬೇಕು. ಇವೆಲ್ಲವನ್ನೂ ನಿರ್ವಹಿಸಲು ‘ಎಮ್ಮೆ ಏಜೆಂಟ್’ಗಳಿರುತ್ತಾರೆ. ಈ ಏಜೆಂಟರು ದೂರದ ಊರಿನಿಂದ ಬರುವ ಗ್ರಾಹಕರಿಗೆ ಗೆಸ್ಟ್‌ಹೌಸ್ ಸೌಲಭ್ಯವನ್ನೂ ಮಾಡಿರುತ್ತಾರೆ!
ಶಶಿಧರ್ ಈ ಎಮ್ಮೆಗಳಿಗಾಗಿಯೇ ಹೊಸ ಕೊಟ್ಟಿಗೆ ನಿರ್ಮಿಸಿದ್ದಾರೆ. ಹರಿಯಾಣದಿಂದ ಅವರು ಒಂಭತ್ತು ಎಮ್ಮೆ-ಕರು ತರಿಸಿದ್ದಾರೆ. ಒಟ್ಟು ೩.೮೦ ಲಕ್ಷ ರೂಪಾಯಿ ಎಮ್ಮೆಗಳಿಗಾಗಿ ವೆಚ್ಚವಾಗಿದೆ. ಅಂದರೆ ಒಂದು ಎಮ್ಮೆಗೆ ೪೨ ಸಾವಿರ ರೂ.! ಪ್ರತಿ ಎಮ್ಮೆಗೆ ದಾರಿ ಖರ್ಚು ಎಂತಲೇ ಆರು ಸಾವಿರ ರೂಪಾಯಿ ಖರ್ಚಾಗಿದೆ.
ಅಷ್ಟಕ್ಕೂ ಹರಿಯಾಣ ಎಮ್ಮೆಯೇ ಹೈನುಗಾರಿಕೆಗೆ ಏಕೆ ಬೇಕು? ಶಶಿ ಉತ್ತರಿಸುವುದು ಹೀಗೆ, ಸ್ಥಳೀಯ ಎಮ್ಮೆಗಳಲ್ಲಿ ಹಲವು ದೋಷಗಳಿವೆ. ಗರ್ಭ ಕಟ್ಟದಿರುವಿಕೆ ದೊಡ್ಡ ಸಮಸ್ಯೆ. ಹಾಲು ಕೊಯ್ಲಿನ ಅವಧಿ ಅನಿಶ್ಚಿತವಾಗಿರುವುದು ಮತ್ತು ೬ - ೮ ತಿಂಗಳಿಗೇ ನಿಲ್ಲಿಕೆಯಾಗಿಬಿಡುವುದು ನಷ್ಟದ ಬಾಬತ್ತು. ಗರ್ಭಾವಧಿಯಲ್ಲೂ ಹಾಲು ಇಳುವರಿ ಕಡಿಮೆಯಾಗದಿರುವುದು ಮುರಾ ವೈಶಿಷ್ಟ್ಯ. ಸ್ಥಳೀಯ ಎಮ್ಮೆಗಿಂತ ಹೆಚ್ಚಿನ ಫ್ಯಾಟ್ ಅರ್ಥಾತ್ ೮ - ೯ ಅಂಶಗಳಷ್ಟು ಕೊಬ್ಬು ಹಾಲಿನಲ್ಲಿರುತ್ತದೆ. ಸಾಮಾನ್ಯವಾಗಿಯೇ ಹಾಲಿನ ಇಳುವರಿ ಜಾಸ್ತಿಯೇ. ಹರಿಯಾಣದಲ್ಲಿ ಹೊತ್ತಿಗೆ ಹತ್ತು ಲೀಟರ್‌ವರೆಗೆ ಬರುತ್ತಿದೆಯಂತೆ. ಈಗ ನಮ್ಮಲ್ಲೂ ಆರೂವರೆ ಲೀಟರ್ ಲಭಿಸುತ್ತಿದೆ
ಆ ಲೆಕ್ಕದಲ್ಲಿ, ನಿರ್ವಹಣೆ ಸಂಕೀರ್ಣವೇನಲ್ಲ. ಹತ್ತಿ ಹಿಂಡಿ, ಗೋಧಿ ಬೂಸ, ಜೋಳದ ಕಡಿ ಮಿಶ್ರಣದ ಮೂರು ಕೆ.ಜಿ. ಹಿಂಡಿ, ಕೋ ತ್ರಿ ಜಾತಿಯ ಹಸಿ ಹುಲ್ಲು, ಕತ್ತರಿಸಿದ ಒಣ ಹುಲ್ಲು ಎಮ್ಮೆಗಳಿಗೆ ಆಹಾರ. ಒಂದು ಎಮ್ಮೆಗೆ ದಿನಕ್ಕೆ ಸರಾಸರಿ ೧೧೫ ರೂ. ನಿರ್ವಹಣಾ ವೆಚ್ಚ. ಶಶಿಧರ್ ಪ್ರಕಾರ, ಸದ್ಯಕ್ಕಂತೂ ಹಾಲು ಮತ್ತು ನಿರ್ವಹಣೆಯ ಅನುಪಾತ ಸರಿಸಮ. ಸಗಣಿ ಗೊಬ್ಬರದ ಆದಾಯ ನಿಕ್ಕಿ ಉಳಿಯುತ್ತದೆ. ಒಂದು ವ್ಯಾನ್ ಲೋಡ್‌ಗೆ ೨,೩೦೦ ರೂ.ನಂತೆ ಗೊಬ್ಬರ ಮಾರಾಟವಾಗುತ್ತಿದೆ.
     ತಕ್ಷಣಕ್ಕೆ ಸಮಸ್ಯೆಗಳು ಬರಲಿಲ್ಲವೆಂದೇನಲ್ಲ. ವ್ಯಾನ್ ಹತ್ತಿದ ಒಂಬತ್ತು ಕರುಗಳಲ್ಲಿ ಒಂದು ದೊಡ್ಡ ಎಮ್ಮೆಗಳ ಕಾಲ್ತುಳಿತಕ್ಕೆ ಸಿಕ್ಕು ಬರುವಾಗಲೆ ಪ್ರಾಣ ಬಿಟ್ಟಿತ್ತು. ಚಿಕ್ಕತೋಟಕ್ಕೆ ಬಂದ ನಂತರವೂ ಮೂರು ಕರುಗಳು ವಿವಿಧ ಕಾರಣಗಳಿಂದ ಜೀವ ಕಳೆದುಕೊಂಡವು. ಬಂದ ಹೊಸದರಲ್ಲಿ ಎಮ್ಮೆಗಳಿಗೆ ಥಂಡಿ, ಜ್ವರ ಇತ್ಯಾದಿ ಸಣ್ಣ ಪುಟ್ಟ ರೋಗ ಕಾಣಿಸಿದ್ದುಂಟು. ಅದೃಷ್ಟಕ್ಕೆ, ಹರಿಯಾಣದಿಂದ ಬಂದಿರುವ ಪಶು ನಿರ್ವಾಹಕನಿಗೆ ಒಂದು ಮಟ್ಟಿನ ವೈದ್ಯವೂ ಗೊತ್ತಿದೆ., ಇಂಜಕ್ಷನ್ ಕೊಡುವುದಕ್ಕೂ ಸೈ. ಹಾಗಾಗಿ ತ್ರಾಸ ಎಷ್ಟೋ ಕಡಿಮೆಯಾದಂತೆ. ಇಂದು ಶಶಿ ಪಶು ಆಹಾರ, ಹಾಲು ಮಾರಾಟ ಮುಂತಾದ ವ್ಯಾವಹಾರಿಕ ವಿಚಾರಗಳಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿದರೆ ಸಾಕು. 
     ಸ್ಥಳೀಯ ಕೆಎಂಎಫ್ ಡೈರಿಗೆ ಹಾಲು ಹಾಕುವುದರಿಂದ ಲಾಭ ನಿರೀಕ್ಷಿಸಲಾಗದು. ಈ ವಿಚಾರ ಅರ್ಥವಾದ ತಕ್ಷಣ ಶಶಿಧರ್ ಸ್ವತಃ ಹಾಲು ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅವರು ಸಾಗರ ಪೇಟೆಗೆ ಪ್ಯಾಕೆಟ್ ಹಾಲು ಮಾಡಿ ಮಾರಲಾರಂಭಿಸಿದ್ದಾರೆ. ತಾಜಾ ಹಾಲಿನ ಒಂದು ಲೀಟರ್ ದರ ೨೦ ರೂ. ಈಗಾಗಲೇ ಹಲವರು ಬೆಣ್ಣೆ ಜಾಸ್ತಿ ಬರುತ್ತಿದೆ ಎನ್ನುವುದನ್ನು ದೃಢಪಡಿಸುತ್ತಿದ್ದಾರೆ.
ಹರಿಯಾಣ ಎಮ್ಮೆಗಳದ್ದು ವಾಸ್ತವವಾಗಿ ‘ಮುರಾ’ ಜಾತಿ. ಈ ಹಿಂದಿನಿಂದಲೇ ತಂದು ಸಾಕಿರುವ ಗೋಕಾಕ್‌ನ ಜೇನುಗೌಡ, ಗೋಣಿಯವರ ಮಾರ್ಗದರ್ಶನದಲ್ಲಿ ಶಶಿಧರ್ ಮಲೆನಾಡಿಗೆ ಎಮ್ಮೆ ತಂದಿದ್ದಾರೆ. ಅಧ್ಯಯನಕ್ಕೆ ಸಾಗರದ ಪಶು ವೈದ್ಯ ಶ್ರೀಪಾದರಾವ್ ನಂದೀತಳೆಯವರ ಸಹಕಾರವನ್ನು ಶಶಿ ಸ್ಮರಿಸುತ್ತಾರೆ.
ಇದಿನ್ನೂ ಯೋಜನೆಯ ಆರಂಭ ಮಾತ್ರ. ಇನ್ನೊಂದು ಯೂನಿಟ್ ದನಗಳನ್ನು ತಂದು ಕಟ್ಟಬೇಕಿದೆ. ಖರ್ಚು ಮಿಗತೆಗೆ ರಸಮೇವು, ಅಜೋಲಾಗಳಂತಹ ತಂತ್ರಗಳನ್ನು ಅನುಸರಿಸಬೇಕಿದೆ. ಬಹುಷಃ ಇನ್ನೊಂದು ತಿಂಗಳಲ್ಲಿ ಇನ್ನೊಂದು ಯೂನಿಟ್ ದನಗಳನ್ನು ಶಶಿ ತರಿಸಲಿದ್ದಾರೆ. ಈ ಸಂಬಂಧ ಬ್ಯಾಂಕ್ ಖುಷಿಯಿಂದಲೇ ಸಾಲ ವ್ಯವಸ್ಥೆ ಮಾಡಿದೆ. ಮುರಾದ ಅಸಲಿ ಗುಣದ ಸಂತತಿ ಬೆಳೆಸಬೇಕೆಂದರೆ ತಕ್ಷಣಕ್ಕೇ ‘ಮುರಾ ಕೋಣ’ವೊಂದನ್ನು ಕೊಟ್ಟಿಗೆಗೆ ತರಬೇಕಿದೆ! ಸದ್ಯ ಕೃತಕ ಗರ್ಭಧಾರಣೆ ಕ್ರಮವನ್ನು ಅನುಸರಿಸಲಾಗಿದೆ.
ಶಶಿ ಒಂದು ಸಾಹಸದ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ಮೇವಿನ ಅಗತ್ಯವನ್ನು ಸ್ವಜಮೀನು ಪೂರೈಸುವಂತಿದ್ದರೆ, ಏಕಾಏಕಿ ಜಾನುವಾರುಗಳಿಗೆ ಮರಣಾಂತಿಕ ಕಾಯಿಲೆ ಬಾರದಿದ್ದರೆ ಹೈನುಗಾರಿಕೆಯಲ್ಲಿ ಅಷ್ಟಿಷ್ಟು ಲಾಭ ಕಟ್ಟಿಟ್ಟ ಬುತ್ತಿ. ಮಲೆನಾಡಿಗೆ ಬಂದಿಳಿದ ಹರಿಯಾಣ ಎಮ್ಮೆಗಳ ಲಾಭ - ನಷ್ಟದ ಅನುಪಾತ ತೆಗೆಯಲು ಇನ್ನೂ ಸ್ವಲ್ಪಕಾಲ ಬೇಕಾದೀತು. ಮೂರು ತಿಂಗಳ ಈ ಕ್ಲುಪ್ತ ಸಮಯದಲ್ಲಿ ಶಶಿಯವರಿಗಂತೂ ತಮ್ಮ ಹೆಜ್ಜೆ ಸಮಾಧಾನ ತಂದಿದೆ. ಮಲೆನಾಡಿನ ಉಳಿದ ಕೃಷಿಕರೂ ಶಶಿಯವರ ದಾರಿ ಹಿಡಿಯುವಂತಾಗಲು ಇನ್ನೂ ಕೆಲಕಾಲ ಕಾಯಲೇಬೇಕು.
ಶಶಿಧರ್‌ರ ಸಂಪರ್ಕ ದೂರವಾಣಿ -(೦೮೧೮೩)೨೩೧೬೯೮ [ಸ್ಥಿರ] ಮತ್ತು ೯೪೪೮೦೧೮೫೫೫ [ಮೊಬೈಲ್]
 
-ಮಾವೆಂಸ
ಫೋನ್-೦೮೧೮೩ ೨೩೬೦೬೮, ೨೯೬೫೪೩, ೯೮೮೬೪೦೭೫೯೨
ಇ ಮೇಲ್- mavemsa@gmail.com

No comments: