Saturday, November 29, 2008

ಮೂಷಿಕ ಸಂತತಿಯ ತಿಥಿ ವಿಧಾನ!ಕೃಷಿಕರಿಗೆ ಸಾಲ ಕೊಟ್ಟವರ ಕಾಟ ಒಂದೆಡೆಯಾದರೆ ಅದು ಹಣಕಾಸು ವ್ಯವಹಾರ ಎನ್ನೋಣ. ಅತ್ತ ಕೃಷಿ ವ್ಯವಹಾರದಲ್ಲೂ ಕಾಟ ಒಂದೇ ಎರಡೇ. ಕಾಡುಕೋಣ, ವಾನರ ಸೈನ್ಯ, ಆನೆ, ಹಂದಿ...... ದುರಂತವೆಂದರೆ, ಇವುಗಳಿಂದ ಬೆಳೆ ರಕ್ಷಿಸಿಕೊಳ್ಳಲು ಪ್ರಯತ್ನಿಸಬಹುದೇ ವಿನಃ ಕೊಲ್ಲುವುದು ಕಾನೂನುಬಾಹಿರ. ಅವಕ್ಕೆ ಬೇರೆ ವ್ಯವಸ್ಥೆ ರೈತರಿಗೆ ಸಾಧ್ಯವಿಲ್ಲ, ಸರ್ಕಾರ ಮುಂದಾಗುವುದಿಲ್ಲ. ಆದರೆ ಹೆಗ್ಗಣ, ಇಲಿಯಂತ ಮೂಷಿಕ ಸಂತತಿಗಳನ್ನು ಬಲಿ ಹಾಕಲು ಸದ್ಯ ಕಾನೂನು ಕೈ ಕಟ್ಟುವುದಿಲ್ಲ. ಇಲ್ಲಿ ಮೂಷಿಕ ಪರಿವಾರದ ಕಾಟ ನಿವಾರಣೆಗೆ ಕೆಲವು ಚಾಲಾಕಿ ಸೂತ್ರಗಳನ್ನು ಸಂಗ್ರಹಿಸಲಾಗಿದೆ.
ಹೆಗ್ಗಣವನ್ನು ಇತಿಶ್ರೀ ಮಾಡಲು ನಾವು ಮಾರುಕಟ್ಟೆಯಿಂದ ನಾನಾ ತರದ ವಿಷದ ಬಿಸ್ಕೇಟ್‌, ಮುಲಾಮು, ಪುಡಿಗಳನ್ನು ತರುತ್ತೇವೆ. ಬಹುಷಃ ನೀರು ಕುಡಿದೋ, ಇನ್ನೇನೋ ತಿಂದೋ ಹಲವು ಹೆಗ್ಗಣಗಳು ಬಚಾಯಿಸಿಬಿಡುವುದನ್ನು ನೋಡಿದ್ದೇವೆ. ಆ ಲೆಕ್ಕದಲ್ಲಿ, ಥಿಮೆಟ್‌ ವಿಷದ ಪುಡಿ ತುಂಬಾ ಪರಿಣಾಮಕಾರಿ.
ಮಾರುಕಟ್ಟೆಯಲ್ಲಿ ಕಿಲೋಗ್ರಾಂ ಪ್ಯಾಕ್‌ನಲ್ಲಿ ಥಿಮೆಟ್‌ ಸಿಗುತ್ತದೆ. 50 ರೂ. ಆಜುಬಾಜಿನ ಬೆಲೆ. ಇದರ ಹತ್ತೆಂಟು ಕಾಳುಗಳನ್ನು ಒಂದು ಮುಷ್ಟಿ ಅಕ್ಕಿ ಅಥವಾ ಗೋಧಿ ಹಿಟ್ಟಿನಲ್ಲಿ ಕಲಸಿ ಇಡಿ. ಇದನ್ನು ತಿಂದ ಮೇಲೆ ಮತ್ತೆ ಹೆಗ್ಗಣ ಬದುಕುಳಿಯುವ ಸಾಧ್ಯತೆ ಇಲ್ಲ. ತಿನ್ನುವ ಆಮಿಷದಲ್ಲಿ ಹಿಟ್ಟಿನ ಬದಲು ಇನ್ನಾವುದಾದರೂ ಆದೀತು. ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನು ಮೇಲೆ ಹಾಕಿದರೂ ಸರಿಯೇ. ಥಿಮೆಟ್‌ ಪ್ಯಾಕ್‌ನ್ನು ಗಾಳಿಯಾಡಲು ಬಿಟ್ಟಲ್ಲಿ ಅದರ ಸಾಮರ್ಥ್ಯ ಕುಸಿಯುತ್ತದೆ. ಸ್ವಲ್ಪವನ್ನು ಪ್ರತ್ಯೇಕವಾಗಿ ತೆಗೆದಿರಿಸಿ, ಉಳಿದಂತೆ ಪ್ಯಾಕ್‌ನ್ನು ಸೀಲ್‌ ಮಾಡಿಡುವುದು ಕ್ಷೇಮ.
ಮನೆಯಲ್ಲಿ ಇಲಿ ಕಾಟ ಜಾಸ್ತಿಯಾದಾಗ ನೆನಪಾಗುವುದು ಇಲಿ ಬೋನು. ಧಾವಂತದಿಂದ ಮಾರುಕಟ್ಟೆಗೆ ಹೋಗಿ ತರುತ್ತೇವೆ. ಅದಕ್ಕೂ 50ರೂ ಬೆಲೆ. ಒಂದು, ಅಬ್ಬಬ್ಬಾ ಎಂದರೆ ಎರಡು ಇಲಿ ಸಿಕ್ಕುಬಿದ್ದ ನಂತರವೇ ಸಮಸ್ಯೆ ಶುರು. ಆಮೇಲೆ ಮಾತ್ರ ಒಂದೇ ಒಂದು ಇಲಿ ಬೋನಿಗೆ ಬಿದ್ದರೆ ಕೇಳಿ. ಈಗ ಕೈಲಾಗದೆ ಮೈ ಪರಚಿಕೊಳ್ಳುವಂತ ಸಿಟ್ಟು. ನೋಡಿ, ಈ ಇಲಿಗಳೂ ಎಷ್ಟು ಚುರುಕು? ಅವಕ್ಕೂ ಬೋನಿನ ಕರಾಮತ್ತು ಗೊತ್ತಾಗಿದೆ ಎಂದು ಗೊಣಗುತ್ತೇವೆ. ಇದು ಅರ್ಧಸತ್ಯ ಮಾತ್ರ.
ನಿಜ, ಇಲಿಗೆ ಬೋನು ಅಪಾಯ ಅಂತ ಗೊತ್ತಾಗಿದೆ. ಅದು ಅದರ ಜಾಣ್ಮೆಯಲ್ಲ. ಕೊನೆಯ ಬಾರಿ ಬಿದ್ದ ಇಲಿಯ ಒಳ್ಳೆತನ! ಏನಾಗುತ್ತಪ್ಪಾಂದ್ರೆ, ಬೋನಿಗೆ ಬಿದ್ದ ಇಲಿ ವಿಶಿಷ್ಟ ಹಾರ್ಮೋನ್‌ ಒಂದನ್ನು ಹೊರಚೆಲ್ಲುತ್ತದೆ. ಅದು ಉಳಿದ ಇಲಿಗಳಿಗೆ `ಇಲ್ಲಿದೆ ಅಪಾಯ' ಎಂಬ ಸೂಚನೆ ನೀಡುತ್ತದಾದ್ದರಿಂದ ಉಳಿದವು ಬೋಂಡ, ಚಕ್ಕುಲಿ ಇಟ್ಟರೂ ಅತ್ತ ತಲೆ ಹಾಕವು!
ಇದಕ್ಕೊಂದು ಪರಿಹಾರವಿದೆ. ಒಂದು ಚಮಚ ಸುಣ್ಣ, ಅರ್ಧ ಚಮಚ ಅರಿಸಿನದ ಪುಡಿ ತೆಗೆದುಕೊಳ್ಳಿ. ಅವೆರಡನ್ನು ಬಕೆಟ್‌ ನೀರಿನಲ್ಲಿ ಕದಡಿ. ಕೆಂಪು ನೀರು ಸೃಷ್ಟಿಯಾಗುತ್ತದೆ. ಇದರಲ್ಲಿ ಖಾಲಿ ಇಲಿ ಬೋನನ್ನು ಚೆನ್ನಾಗಿ ತೊಳೆಯಿರಿ. ಮತ್ತೆ ರಾತ್ರಿ ಬೋನು ಹೂಡಿ. ಇಲಿ ಪಿಗ್ಗಿ ಬಿದ್ದು ಬೋನು ಸೇರುತ್ತದೆ! ಸುಣ್ಣ, ಅರಿಸಿನದ ಟ್ರೀಟ್‌ಮೆಂಟ್‌ನಿಂದ ಹಾರ್ಮೋನ್‌ ವಾಸನೆ ಕಾಣೆಯಾಗುವುದೇ ಇದಕ್ಕೆ ಕಾರಣ! ಪ್ರತಿ ಬಾರಿ ಇಲಿ ಬಿದ್ದ ನಂತರವೂ ಬೋನಿಗೆ ಈ ಸ್ನಾನವನ್ನು ಕಡ್ಡಾಯವಾಗಿ ಮಾಡಿಸಬೇಕು.
ಒಂದು ವಿಷಯ ಸ್ವಾರಸ್ಯಕರ. ಹೆಗ್ಗಣ, ಇಲಿಗಳು ಎಲ್ಲ ಕಾಲದಲ್ಲಿ ಒಂದೇ ಮಾದರಿಯ ಆಹಾರವನ್ನು ಇಷ್ಟಪಡುವುದಿಲ್ಲ ಎಂಬ ಅನುಮಾನವಿದೆ. ಕೆಲವು ಸಮಯ ಅವು ಹಿಟ್ಟುಗಳನ್ನು ಮೂಸಿಯೂ ನೋಡುವುದಿಲ್ಲ. ಆಗ ಕರಿದ, ಜಿಡ್ಡಿನ ಪದಾರ್ಥಗಳನ್ನು ಪ್ರಯೋಗಿಸಬೇಕಾಗುತ್ತದೆ. ಏಕೆ ಹೀಗಾಗುತ್ತದೆ ಎಂಬುದನ್ನು ಜೀವ ವಿಜ್ಞಾನಿಗಳು ವಿವರಿಸಬೇಕು. ಅಷ್ಟೇಕೆ, ವರ್ಷದ ಕೆಲವು ವೇಳೆ ಈ ಮೂಷಿಕಗಳು ಯಾವುದೇ ಆಹಾರವನ್ನೂ ತಿನ್ನುವುದಿಲ್ಲ ಎಂಬ ಅಂದಾಜಿದೆ. ಹೌದೆ?
ಅದೇನೆ ಇರಲಿ, ಮಳೆಗಾಲದಲ್ಲಿ ಹೆಗ್ಗಣ, ಇಲಿಗಳು ನಾವಿಡುವ ಆಮಿಷಗಳ ಆಕರ್ಷಣೆಗೊಳಗಾಗುವುದು ಹೆಚ್ಚು. ಯುದ್ಧ ಸಾರಲು ಇದೇ ಸರಿಯಾದ ಸಮಯ!
-ಮಾವೆಂಸ

No comments: