Thursday, November 6, 2008

ಕುಲಾಂತರಿ ವಿರುದ್ಧ ಭಾರತದಲ್ಲಿ ಸಮರ


`ಭಾರತದಲ್ಲಿ 2000ರಲ್ಲಿ 44 ದಶಲಕ್ಷ ಟನ್‌ ಆಹಾರಧಾನ್ಯ ಸರ್ಕಾರದ ಉಗ್ರಾಣಗಳಲ್ಲಿ ಉಳಿದಿತ್ತು. 2002ರ ಹೊತ್ತಿಗೆ ಇದರ ಪ್ರಮಾಣ 65 ದಶಲಕ್ಷ ಟನ್‌ಗೆ ಏರಿತು. ಅಂದರೆ, ಇದು ಉತ್ಪಾದನೆಯ ಹೆಚ್ಚಳದಿಂದಲ್ಲ; ಬದಲಾಗಿ ಆಹಾರಧಾನ್ಯ ಖರೀದಿಸುವಷ್ಟು ಹಣ ಜನರ ಕೈಯಲ್ಲಿ ಇರಲಿಲ್ಲ. ಅದಕ್ಕಾಗಿ ಅಷ್ಟೊಂದು ಪ್ರಮಾಣದ ಆಹಾರ ಉಗ್ರಾಣದಲ್ಲಿ ಕೊಳೆಯುತ್ತ ಬಿದ್ದಿತ್ತು..
ಕೃಷಿ ಆರ್ಥಿಕ ತಜ್ಞ ದೇವಿಂದರ್‌ ಶರ್ಮಾ ಅವರ ಈ ವಿಶ್ಲೇಷಣೆಯು ಒಂದೆಡೆ ನಮ್ಮ ದೇಶದ ಜನರ ಹಸಿವನ್ನು ಅನಾವರಣ ಮಾಡುತ್ತದೆ. ಇನ್ನೊಂದೆಡೆ ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸುವ ಕೃಷಿ ವಿವಿ, ಸಂಶೋಧನಾ ಕೇಂದ್ರಗಳ ಪೊಳ್ಳುತನ ಬಿಚ್ಚಿಡುತ್ತದೆ. ಕೋಟಿಗಟ್ಟಲೇ ಹಣ ಸುರಿದು ಮಾಡುವ ಸಂಶೋಧನೆಗಳ ಲಾಭವೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಬೊಕ್ಕಸ ತುಂಬಿಸುತ್ತವೆಯೇ ಹೊರತೂ, ಬಡವರಿಗೆ ಕಡಿಮೆ ವೆಚ್ಚದಲ್ಲಿ ಒಂದು ಹಿಡಿ ಆಹಾರ ನೀಡುವುದಕ್ಕಲ್ಲ ಎಂಬುದು ಸಾಬೀತಾಗುತ್ತಲೇ ಇರುತ್ತದೆ. ಈ ಸಾಲಿಗೆ ಈಗ ಸೇರ್ಪಡೆಯಾಗಿದೆ- `ಕುಲಾಂತರಿ ಆಹಾರ (ಜೆನಿಟಿಕಲಿ ಮಾಡಿಫೈಡ್‌ ಫುಡ್‌- ಜಿ.ಎಂ. ಫುಡ್‌).
ಐರೋಪ್ಯ ರಾಷ್ಟ್ರಗಳೂ ಸೇರಿದಂತೆ ವಿವಿಧ ದೇಶಗಳಲ್ಲಿ ಈಗಾಗಲೇ ವಿರೋಧದ ಅಲೆಯೆಬ್ಬಿಸಿರುವ ಕುಲಾಂತರಿ ಆಹಾರ ಧಾನ್ಯ ನಮ್ಮ ದೇಶದ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಇನ್ನೇನು ಅದು ಅಡುಗೆ ಮನೆಗೂ ಬಂದೀತು. ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಕುಲಾಂತರಿ ಆಹಾರ ದುಷ್ಪರಿಣಾಮ ಬೀರಲಿದೆ ಎಂಬ ಪ್ರತಿಪಾದನೆಯೊಂದಿಗೆ ಹಲವು ಸ್ವಯಂಸೇವಾ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ನಿರತವಾಗಿರುವ ವಿಜ್ಞಾನಿಗಳು `ಕುಲಾಂತರಿ ಆಹಾರ ಸೇವನೆಯಿಂದ ಯಾವುದೇ ದುಷ್ಪರಿಣಾಮ ಇಲ್ಲ' ಎಂದೇ ವಾದಿಸುತ್ತಿದ್ದಾರೆ.
ಏನಿದು ಕುಲಾಂತರಿ?
ಸರಳವಾಗಿ ಹೇಳಬೇಕೆಂದರೆ ಒಂದು ಜೀವಿವ ಕೋಶದಲ್ಲಿರುವ ವಂಶವಾಹಿಯನ್ನು ಇನ್ನೊಂದು ಜೀವಿಯ ವಂಶವಾಹಿಯೊಳಗೆ ಬಲವಂತವಾಗಿ ಸೇರಿಸುವುದು. ಜೀವಕೋಶದ ನ್ಯೂಕ್ಲಿಯಸ್‌ನಲ್ಲಿರುವ ಜೀನ್‌ (ಅಂದರೆ ವಂಶವಾಹಿ) ಅನ್ನು ಇನ್ನೊಂದು ಜೀವಿಯ ಕೋಶದೊಳಗೆ ಸೇರಿಸುವ ಈ ಪ್ರಕ್ರಿಯೆ ತುಂಬ ಕ್ಲಿಷ್ಟದ್ದು. ವೈರಸ್‌, ಬ್ಯಾಕ್ಟೀರಿಯಾ, ಚೇಳು, ಜೇಡ ಇತ್ಯಾದಿ ಜೀವಿಗಳಿಂದ ವಂಶವಾಹಿಗಳನ್ನು ಹೊರತೆಗೆದು ಪಪ್ಪಾಯ, ಬದನೆ, ಆಲೂಗಡ್ಡೆ, ಮೆಕ್ಕೆಜೋಳದಂಥ ಬೆಳೆಗಳ ವಂಶವಾಹಿಯೊಳಗೆ ಬಲವಂತದಿಂದ ಸೇರ್ಪಡೆ ಮಾಡುತ್ತಾರೆ. ಇದರಿಂದಾಗಿ, ಸೇರ್ಪಡೆ ಮಾಡುವ ವಂಶವಾಹಿಯ ಕೆಲವು ವಿಶಿಷ್ಟಪೂರ್ಣ ಸ್ವಭಾವಗಳು ಇನ್ನೊಂದು ಜೀವಕೋಶಕ್ಕೆ ವರ್ಗಾವಣೆಯಾಗುತ್ತವೆ. ಇದು ಕೋಟ್ಯಂತರ ಡಾಲರ್‌ ವೆಚ್ಚದ ಕೆಲಸ.
ಈ ಬಗ್ಗೆ ಸಾಕಷ್ಟು ವಿರೋಧ ವಿವಿಧ ದೇಶಗಳಲ್ಲಿ ವ್ಯಕ್ತವಾಗುತ್ತಿದೆ. ಹೆಚ್ಚಿನ ಪರೀಕ್ಷೆಗೆ ಒಳಪಡಿಸದೇ ಕುಲಾಂತರಿ ಬೆಳೆ ಆಹಾರ ಮಾರುಕಟ್ಟೆಗೆ ಬಿಡುವುದು ಸರಿಯಲ್ಲ. ಮಾನವ ದೇಹ ಮತ್ತು ಪರಿಸರದ ಆರೋಗ್ಯದ ಮೇಲೆ ಈ ಆಹಾರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿವಿಧ ಪರಿಸರಪರ ಸಂಘಟನೆಗಳು ಆಪ್ಷೇಪದ ದನಿಯೆತ್ತಿವೆ.
`ಕೃಷಿ ಉತ್ಪನ್ನ ಹೆಚ್ಚಳಕ್ಕೆ ಬಿ.ಟಿ ಅಥವಾ ಜಿ.ಎಂ. ತಂತ್ರಜ್ಞಾನ ಉತ್ತರವಲ್ಲ. ಭಾರತದಂಥ ಸಮಶೀತೋಷ್ಣ ವಲಯದ ದೇಶಗಳಲ್ಲಿ ವ್ಯವಸಾಯ ನಾನಾ ಅಂಶಗಳನ್ನು ಅವಲಂಬಿಸಿದೆ. ಆಯಾ ಭಾಗದ ವಾತಾವರಣ, ನೀರಾವರಿ ಲಭ್ಯತೆ, ಮಳೆ ಪ್ರಮಾಣ, ತೇವಾಂಶ ಪ್ರಮಾಣ, ಮಣ್ಣಿನ ಗುಣಧರ್ಮ, ರೈತರ ಸಾಂಪ್ರದಾಯಿಕ ಜ್ಞಾನ ಹಾಗೂ ಬೆಳೆಗೆ ಬರುವ ಕೀಟ- ರೋಗ ಬಾಧೆ ಇನ್ನಿತರ ಅಂಶಗಳ ಮೇಲೆ ಆಯಾ ಪ್ರದೇಶದ ಕೃಷಿ ವ್ಯವಸ್ಥೆ ರೂಪಗೊಂಡಿದೆ ಎನ್ನುತ್ತಾರೆ ದೇವಿಂದರ್‌ ಶರ್ಮಾ. ಸಾಕಷ್ಟು ವಿರೋಧದ ಮಧ್ಯೆಯೂ ಆಂಧ್ರದಲ್ಲಿ ಬಿ.ಟಿ. ಹತ್ತಿ ಬೆಳೆದಾಗ ಆರಂಭದಲ್ಲಿ (2002-03) ಇಳುವರಿ ಹೆಚ್ಚು ಪಡೆದರೂ, ನಂತರದ ಒಂದೆರಡು ವರ್ಷಗಳಲ್ಲಿ ಶೇ71ರಷ್ಟು ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸಿದರು. ತಂತ್ರಜ್ಞಾನವನ್ನು ರೈತರ ಮೇಲೆ ಹೇರುವವರಿಗೆ ಇದು ಪಾಠವಾಗಬೇಕು ಎಂದು ಶರ್ಮಾ ಹೇಳುತ್ತಾರೆ.
ನೂರಾರು ವರ್ಷಗಳಿಂದ ರೈತರು ಜತನದಿಂದ ಕಾಪಾಡಿಕೊಂಡು ಬಂದಿರುವ ಅಗಾಧ ಪ್ರಮಾಣದ ಬೀಜ ವೈವಿಧ್ಯ ಕಣ್ಮರೆಯಾಗುವುದು ಕುಲಾಂತರಿ ತಂತ್ರಜ್ಞಾನ ಒಡ್ಡಿರುವ ದೊಡ್ಡ ಅಪಾಯ. ನಿಸರ್ಗದಲ್ಲಿ ಕೋಟಿಗಟ್ಟಲೇ ವರ್ಷಗಳಿಂದ ವ್ಯವಸ್ಥಿತವಾಗಿ ರೂಪುಗೊಳ್ಳುತ್ತ ಬಂದ ಜೀವಜಾಲವನ್ನು ನಮಗೆ ಬೇಕಾದ ಹಾಗೆ ಮಾರ್ಪಡಿಸಿಕೊಳ್ಳುವ ನೈತಿಕ ಹಕ್ಕು ನಮಗಿದೆಯೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಮಾನವನ ಹಸ್ತಕ್ಷೇಪದಿಂದ ಆಗುವ ಸಣ್ಣ ತಪ್ಪು ಕೂಡ ಪ್ರಕೃತಿಗೆ ದೊಡ್ಡ ಅನಾಹುತವನ್ನೇ ತಂದೊಡ್ಡಬಹುದು.
ಒಂದು ಜೀವಿಯ ವಂಶವಾಹಿಯನ್ನು ಬೇರೊಂದು ಜೀವಿಗೆ ಸೇರಿಸಿದಾಗ, ಅದು ಇಡೀ ವರ್ಣತಂತುವಿನ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ. ಈ ತಂತ್ರ ಅನುಸರಿಸಿ ತಯಾರಿಸುವ ಆಹಾರವು ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕೆಲವು ವಿಜ್ಞಾನಿಗಳೇ ಅಪಸ್ವರ ಎತ್ತಿದ್ದಾರೆ. ಪ್ರಯೋಗಾಲಯದಲ್ಲಿ ಇಲಿಗಳಿಗೆ ಜಿ.ಎಂ. ಆಹಾರ ತಿನಿಸಿದ ಬಳಿಕ ಅವುಗಳ ದೇಹದಲ್ಲಿ ವಿಪರೀತ ಎನ್ನುವಂಥ ಬದಲಾವಣೆ ಕಂಡುಬಂದಿದೆ. ಬೆಳವಣಿಗೆಯಲ್ಲಿ ಕುಂಠಿತ, ರೋಗನಿರೋಧಕ ಶಕ್ತಿ ಕುಸಿತ, ಕರುಳಿನಲ್ಲಿ ಕ್ಯಾನ್ಸರ್‌ ಕೋಶಗಳು ಬೆಳೆದಿದ್ದು, ಶ್ವಾಸಕೋಶ ಹಾಗೂ ಮೂತ್ರಪಿಂಡದ ಕೋಶಗಳಲ್ಲಿ ಊತ, ಕುಂದಿದ ಮಿದುಳಿನ ಕಾರ್ಯಕ್ಷಮತೆ, ಯಕೃತ್ತಿನ ತೊಂದರೆಯಂಥ ಸಮಸ್ಯೆಗಳು ಇಲಿಗಳಲ್ಲಿ ಉದ್ಭವಿಸಿವೆ.
ಕೇವಲ ಇಳುವರಿ ಹೆಚ್ಚಳ ಅಥವಾ ರೋಗ- ಕೀಟ ನಿರೋಧಕ ಶಕ್ತಿ ನೀಡುವ ತಂತ್ರಜ್ಞಾನ ಬಳಸಿ, ತಯಾರಿಸಲಾದ ಆಹಾರ ಮಾನವನ ಆರೋಗ್ಯಕ್ಕೆ ಪೂರಕವಾದೀತೆ? ಪರಿಸರದ ಮೇಲಾಗುವ ಅಡ್ಡಪರಿಣಾಮಗಳಿಗೆ ಪರಿಹಾರ ಏನು?
ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಅಂತರರಾಷ್ಟ್ರೀಯ ಪರಿಸರಪರ ಸಂಘಟನೆಗಳು `ಜಿ.ಎಂ. ಆಹಾರದ ವಿರುದ್ಧ ದನಿಯೆತ್ತಿದೆ. ಈಗಾಗಲೇ ಕೇರಳ, ಉತ್ತರಾಂಚಲ ಹಾಗೂ ಒರಿಸ್ಸಾದಲ್ಲಿ ಅಲ್ಲಿನ ಸರ್ಕಾರಗಳು ಕುಲಾಂತರಿ ಬೆಳೆಗೆ ಅವಕಾಶ ಕೊಡುವುದಿಲ್ಲ ಎಂದು ಘೋಷಿಸಿವೆ. ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಗ್ರಾಮಗಳ ಪಂಚಾಯತಿಗಳು ಕುಲಾಂತರಿ ಬೆಳೆ ನಿಷೇಧಿತ ಪ್ರದೇಶ ಎಂದು ಘೋಷಿಸಿಕೊಂಡಿವೆ. ಪಶ್ಚಿಮ ಬಂಗಾಳದ ಕೃಷಿ ಆಯೋಗವು ಕುಲಾಂತರಿ ಬೆಳೆ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಿ.ಟಿ. ಬದನೆ ನಮ್ಮ ದೇಶದ ರೈತರ ಹೊಲಕ್ಕೆ ಬರಲು ಸಿದ್ಧವಾಗಿದೆ. ಅದರ ಬಳಿಕ ಆಲೂ, ನಂತರ ಟೊಮ್ಯಾಟೊ, ಪಪ್ಪಾಯ, ಮೆಕ್ಕೆಜೋಳ, ಸೋಯಾ ಇನ್ನಿತರ ಬಿ.ಟಿ. ಬೆಳೆ ಸಾಲಾಗಿ ನಿಂತಿವೆ. ಕುಲಾಂತರಿ ಆಹಾರದ ಸುರಕ್ಷತೆ ಬಗ್ಗೆ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಈಗ ಅದಕ್ಕೆಲ್ಲ ಸಮಯವಿಲ್ಲ. ಅತ್ಯವಸರದಲ್ಲಿ ಪರೀಕ್ಷೆ ನಡೆಸಿ, ಅಡಿಗೆ ಮನೆಗೆ ಕುಲಾಂತರಿ ಆಹಾರ ರವಾನಿಸಲು ಸಿದ್ಧತೆ ನಡೆದಿದೆ. ಇದನ್ನೇ ಸಂಕೇತವಾಗಿಸಿ, ನಾನು ಪ್ರಯೋಗ ಜೀವಿ ಅಲ್ಲ ಎಂಬ ಆಂದೋಲನ ಭಾರತದಲ್ಲಿ ಆರಂಭಿಸಲಾಗಿದೆ ಎಂದು ಕುಲಾಂತರಿ ಮುಕ್ತ ಭಾರತ ಚಳುವಳಿಯ ಸಂಚಾಲಕಿ ಕವಿತಾ ಕುರಗುಂಟಿ ಹೇಳುತ್ತಾರೆ.
ವಿವಿಧ ರಾಜ್ಯಗಳಲ್ಲಿ ಆರಂಭವಾದ `ಕುಲಾಂತರಿ ವಿರೋಧಿ ಚಳುವಳಿಗೆ ಕರ್ನಾಟಕದಲ್ಲಿ ಅ.16ರಂದು ಚಾಲನೆ ದೊರೆತಿದೆ. ಗ್ರೀನ್‌ಪೀಸ್‌ ಸಂಘಟನೆಯು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಹಾಗೂ ಸಂವಾದ ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಪಶು ಅಲ್ಲ (ಐ ಆಮ್‌ ನೋ ಲ್ಯಾಬ್‌ ರ್ಯಾಟ್‌) ಚಳುವಳಿ ರೂಪಿಸಿದೆ.
ಮಳೆ ಕೊರತೆ, ಬರ, ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ನೂರಾರು ವರ್ಷಗಳಿಂದ ರೂಪುಗೊಂಡ ಸಾಂಪ್ರದಾಯಿಕ ಕೃಷಿ ಬೆಳೆ ಉಳಿಸಿಕೊಳ್ಳಬೇಕೇ ಹೊರತೂ, ರೈತರ ಪ್ರಗತಿ ನೆಪದಲ್ಲಿ ಕೋಟಿಗಟ್ಟಲೇ ಲಾಭ ಗಳಿಸುವ ಉದ್ದೇಶದ ಬಹುರಾಷ್ಟ್ರೀಯ ಕಂಪೆನಿಗಳ ತಂತ್ರಜ್ಞಾನ ನಮಗೇಕೆ ಬೇಕು?

- `ಸಹಜ ಸಮೃದ್ಧ' ಫೀಚರ್ಸ್‌

No comments: