Sunday, November 23, 2008

ನಾಟಿ ಭತ್ತ ರಕ್ಷಣೆಗೆ ಇಳಿದ ರೈತ


ವೈವಿ­ಧ್ಯ­ಮಯ ಭತ್ತದ ತಳಿ­ಗ­ಳನ್ನು ಬೆಳೆ­ಯು­ವು­ದ­ರಲ್ಲಿ ಭಾರತ ಜಗ­ತ್ಪ್ರ­ಸಿದ್ಧ, ಅಂದೊಂದು ದಿನ. ಪ್ರತಿ­ಯೊಂದು ಕಾಲಕ್ಕೆ, ಹಬ್ಬಕ್ಕೆ, ಬೆಳ­ಗ್ಗಿನ ತಿಂಡಿಗೆ, ಮಧ್ಯಾ­ಹ್ನದ ಊಟಕ್ಕೆ, ದೋಸೆಗೆ, ಪಾಯ­ಸಕ್ಕೆ ಹೀಗೆ ಒಂದೊಂದು ಕಾರ್ಯಕ್ಕೂ ಒಂದೊಂದು ಭತ್ತದ ತಳಿ­ಗಳು ನಮ್ಮ­ಲ್ಲಿ­ದ್ದವು. ಭಾರ­ತೀಯ ಆಹಾರ ನಿಗ­ಮದ 1965ರ ಅಂಕಿ-ಅಂ­ಶ­ಗಳ ಪ್ರಕಾರ ಕರ್ನಾ­ಟ­ಕ­ದ­ಲ್ಲಿಯೇ ಸುಮಾರು 244 ತಳಿ­ಗಳು ಇದ್ದವು. ಇದ­ರಲ್ಲಿ ಅತೀ ಸಣ್ಣ ಅಕ್ಕಿ 56, ಸಣ್ಣ ಅಕ್ಕಿ 38, ಮಧ್ಯಮ ಅಕ್ಕಿ 65, ಮಧ್ಯಮ ಅಕ್ಕಿ 87 ಇದ್ದವು. ಆದರೆ ಈಗ ಸೂಕ್ಷ್ಮ­ದ­ರ್ಶಕ ಹಿಡಿದು ಹುಡು­ಕಿ­ದರೆ ಅಬ್ಬಬ್ಬ ಅಂದರೆ ನೂರೈ­ವತ್ತು ತಳಿ­ಗಳು ಸಿಕ್ಕರೆ ಹೆಚ್ಚು. ಸುಮಾರು ಅರ­ವ­ತ್ತ­ರಿಂದ ಎಪ್ಪತ್ತು ತಳಿ­ಗಳು ಕಾಣೆ­ಯಾ­ಗಿವೆ.
ಎಪ್ಪ­ತ್ತರ ದಶ­ಕ­ದಲ್ಲಿ ಭಾರ­ತಕ್ಕೆ ಬಂದ ಹಸಿರು ಕ್ರಾಂತಿ ಅಭಿ­ವೃ­ದ್ಧಿ­ಯನ್ನು ವ್ಯಾವ­ಹಾ­ರಿ­ಕ­ವಾಗಿ ಸಾಧಿ­ಸಿ­ತ್ತಾ­ದರೂ ನಮ್ಮ­ಲ್ಲಿಯ ನೆಲ, ಜಲ­ವನ್ನು ವಿಷ ಮಾಡಿತು ಎನ್ನು­ವುದು ಸ್ಫಟಿ­ಕ­ದಷ್ಟೇ ಸತ್ಯ. ಜಗ­ತ್ತಿಗೆ ಆಹಾರ ಊಣಿ­ಸಲು ಹೋಗಿ ತಮ್ಮ ಜೀವಕ್ಕೆ ಸಂಚ­ಕಾರ ತಂದು­ಕೊ­ಳ್ಳುವ ಸ್ಥಿತಿಗೆ ರೈತ ತಲು­ಪಿ­ದ್ದಾನೆ. ಭತ್ತದ ಉತ್ಪಾ­ದನೆ ಹೆಚ್ಚು ಮಾಡುವ ಉತ್ಕಟ ಬಯ­ಕೆ­ಯಿಂದ ನಮ್ಮ­ಲ್ಲಿಯೇ ಇರುವ ವೈವಿಧ್ಯ ತಳಿ­ಗ­ಳನ್ನು ಕಳೆ­ದು­ಕೊಂ­ಡೆವು. ನಾಟಿ­ತ­ಳಿ­ಗ­ಳನ್ನು ಉಳಿಸಿ ಎಂಬ ಆಂದೋ­ಲನ ಈ ವರ್ಷ ಬನ­ವಾ­ಸಿ­ಯಲ್ಲಿ ಪ್ರಾರಂ­ಭ­ವಾ­ಯಿತು. ಇದರ ಜೊತೆ­ಯ­ಲ್ಲಿಯೇ ಕೆಲವು ಕೃಷಿ­ಕರು ತೆರೆ­ಮ­ರೆ­ಯ­ಲ್ಲಿಯೇ ನಾಟಿ ಭತ್ತ ಉಳಿ­ಸುವ ಆಂದೋ­ಲನ ಪ್ರಾರಂ­ಭಿ­ಸಿ­ದ್ದರು. ಇಂತ­ಹ­ವ­ರಲ್ಲಿ ಧಾರ­ವಾ­ಡದ ಗಂಗಾ­ಧರ ಹೊಸ­ಮನಿ ಅವರು ಒಬ್ಬರು. ತಾವು ಬೆಳೆ­ಯುವ ಭತ್ತ­ವನ್ನು ಸಾವ­ಯವ ಕೃಷಿ­ಯಲ್ಲಿ ಮಾಡಿ, ನಾಟಿ ತಳಿ­ಗ­ಳನ್ನು ಉಳಿ­ಸುವ ಹೋರಾ­ಟ­ದಲ್ಲಿ ತೊಡ­ಗಿ­ದ­ವರು ಇವರು.
ಧಾರ­ವಾಡ- ಹಳಿ­ಯಾಳ ರಸ್ತೆ­ಯಲ್ಲಿ ಬರುವ ಹಳ್ಳಿಗೆ ಗ್ರಾಮ­ದಲ್ಲಿ ಇವ­ರಿಗೆ ಹದಿ­ನೈದು ಎಕರೆ ಕೃಷಿ ಭೂಮಿ ಇದೆ. ಹೊಸ­ಮನಿ ಅವರು ಭತ್ತದ ಸಾವ­ಯವ ಕೃಷಿ ಮಾಡ­ತೊ­ಡಗಿ ವರ್ಷ ಮೂರಾ­ಯಿತು. ಮೊದಲು ಇವರು ಎಲ್ಲ­ರಂತೆ ಇಳು­ವರಿ ಪೂರಕ ಕೃಷಿ ಮಾಡು­ತ್ತಿ­ದ್ದರು. ಕಳೆದ ವರ್ಷ ಇವರು ಏಳು ಎಕರೆ ಪ್ರದೇ­ಶ­ದಲ್ಲಿ ಏಳು ನಾಟಿ ತಳಿ­ಗ­ಳನ್ನು ತಮ್ಮ ಹೊಲ­ದಲ್ಲಿ ಬಿತ್ತಿ­ದರು. ಕಾಗೆ­ತಾಳಿ, ಡೇಹ­ರಾ­ಡೂನ್‌ ಭಾಸ­ಮತಿ, ಬೆಳಗಾಂ ಭಾಸ­ಮತಿ, ಅಂಬೆ ಮೋರ್‌, ಅಂಕುರ್‌ ಸೋನಾ, ಸೆಲಂ­ಸಣ್ಣ ಮತ್ತು ಜ್ಯೋತಿ ಇವರು ಬಿತ್ತಿದ ತಳಿ­ಗಳು.
ಸಾವ­ಯವ ಕೃಷಿ­ಯಲ್ಲಿ ಇಳು­ವರಿ ಕಡಿ­ಮೆ­ಯಾ­ದರೂ ಗುಣ­ಮಟ್ಟ ಉತ್ತಮ. ಇದ­ರಿಂದ ಉತ್ಸಾ­ಹ­ಗೊಂಡ ಇವರು ಈ ಬಾರಿ ಇಪ್ಪ­ತ್ನಾಲ್ಕು ನಾಟಿ ತಳಿ­ಗ­ಳನ್ನು ಬೆಳೆ­ಸು­ತ್ತಿ­ದ್ದಾರೆ. ಇವು­ಗ­ಳನ್ನು ಮೂರು ವಿಭಾ­ಗ­ಗ­ಳಲ್ಲಿ ಇವರು ಬೆಳೆ­ಸು­ತ್ತಿ­ದ್ದಾರೆ.

1. ಸುವಾ­ಸನಾ ಭರಿತ ಭತ್ತ: ಅಂಬೆ­ಮೋರ್‌, ಕಾಗೆ­ಸಾಲಿ, ಕರಿ ಗಜಿ­ಬಿಲಿ (ಇ­ದಕ್ಕೆ ಬಾಣಂತಿ ಭತ್ತ ಎಂದು ಕರೆ­ಯು­ತ್ತಾರೆ. ಬಾಣಂ­ತಿ­ಯ­ರಿಗೆ ಈ ಅಕ್ಕಿ ಊಟ ಪ್ರೋಟಿನ್‌ ಅಂಶ­ವನ್ನು ದೇಹಕ್ಕೆ ನೀಡು­ತ್ತದೆ.) ಆಂಧ­ಸಾಲಿ, ಬಾದ್‌­ಷಹಾ ಬೋಗ್‌, ಬೂಸಾ ಭಾಸ­ಮತಿ 1, ಬೂಸಾ ಭಾಸ­ಮತಿ 2, ಬೆಳಗಾಂ ಭಾಸ­ಮತಿ, ಮಾಲ್ಗುಡಿ ಸಣ್ಣ, ಬಂಗಾರ ಕಡ್ಡಿ.
2. ನಿತ್ಯ ಬಳ­ಕೆಯ ಭತ್ತ: ಎಚ್‌­ಎಂಟಿ, ಗೌರಿ­ಸಣ್ಣ, ಚಕೋತಾ ಭತ್ತ ಅಥವಾ ಹುಗ್ಗಿ ಭತ್ತ, ಸಿದ್ಧ­ಗಿರಿ 1, ಸಿದ್ಧ­ಗಿರಿ 2, ಅಂತರ ಸಾಲಿ, ಉದುರು ಸಾಲಿ, ಮುಗದ 101, ಚಿನ್ನಾ­ಪನ್ನಿ, ಸೇಲಂ­ಸಣ್ಣ, ಅಂಕುರ್‌ ಸೋನಾ, ಮೈಸೂರು ಮಲ್ಲಿಗೆ.
3. ಔಷಧ ಭತ್ತ: ನಾಗಾ­ಲ್ಯಾಂಡ್‌ ಭತ್ತ, ನವರ.
ಈ ಎಲ್ಲಾ ರೀತಿಯ ಭತ್ತ­ಗ­ಳನ್ನು ಬೆಳೆ­ಯುವ ಉದ್ದೇ­ಶ­ವೇನು ಎಂದು ಹೊಸ­ಮನಿ ಅವ­ರನ್ನು ಪ್ರಶ್ನಿ­ಸಿ­ದರೆ, ಅವರು ಕೊಡುವ ಉತ್ತರ ಹೀಗಿದೆ; `ಸಾ­ವ­ಯವ ಕೃಷಿಗೆ ಪೂರ­ಕ­ವಾಗಿ ನಾಟಿ ತಳಿ ಬೆಳೆ­ಯು­ತ್ತಿ­ದ್ದೇನೆ. ನಮ್ಮ­ಲ್ಲಿಯೇ ಇರುವ ಹಟ್ಟಿ ಗೊಬ್ಬ­ರವೇ ಈ ಬೆಳೆಗೆ ಸಾಕು. ರಾಸಾ­ಯ­ನಿಕ ಗೊಬ್ಬ­ರ­ಕ್ಕಾಗಿ ಪರ­ದಾ­ಡುವ ಪ್ರಶ್ನೆ­ಯಿಲ್ಲ. ನಮ್ಮ­ಲ್ಲಿ­ರು­ವುದು ಕಸುವು ಇಲ್ಲದ ಭೂಮಿ. ಅದ­ಕ್ಕಾಗಿ ನಾವು ರಾಸಾ­ಯ­ನಿಕ ಗೊಬ್ಬ­ರ­ದ­ಲ್ಲಿಯೇ ಬೆಳೆ ಬೆಳೆ­ಯುತ್ತಾ ಹೋದರೆ ಭೂಮಿ ಭಂಜ­ರಾ­ಗು­ವುದು ಗ್ಯಾರಂಟಿ. ಅದ­ಕ್ಕಾಗಿ ಇಳು­ವರಿ ಕಡಿ­ಮೆ­ಯಾ­ದರು ತೊಂದ­ರೆ­ಯಿಲ್ಲ. ಭೂಮಿ ತಾಕ­ತ್ತಿ­ನಲ್ಲಿ ಇರ­ಬೇಕು'.
ಹೊಸ­ಮನಿ ಅವರು ಕೃಷಿ ಏಕ­ತಾ­ನ­ತೆ­ಯನ್ನು ಇಷ್ಟ­ಪ­ಡದೆ ವೈವಿ­ಧ್ಯತೆ ಬಯ­ಸಿ­ರು­ವುದು ವಿಭಿನ್ನ ತಳಿ ಬೆಳೆ­ಯ­ಲಿಕ್ಕೆ ಕಾರಣ. ಇವರು ಹಲ­ವಾರು ರೀತಿಯ ಭತ್ತದ ತಳಿ­ಗ­ಳನ್ನು ಬೆಳೆಯ ಬೇಕೆಂ­ದಾಗ ಯಾವ ಭತ್ತವು ತಾನಾ­ಗಿಯೇ ಕೈಗೆ ಸಿಗ­ಲಿಲ್ಲ. ಇದ­ಕ್ಕಾಗಿ ಕರ್ನಾ­ಟ­ಕದ ತುಂಬ ಅವರು ಓಡಾ­ಡಿ­ದರು. ಕಳೆದ ವರ್ಷ ಮಂಡ್ಯದ ಶಿವ­ಳ್ಳಿಯ ರೈತ ಬೋರೆ­ಗೌ­ಡರು 35 ಬಗೆಯ ಭತ್ತದ ತಳಿ­ಗ­ಳನ್ನು ಬೆಳೆ­ದಿ­ದ್ದರು. ಅವ­ರ­ಲ್ಲಿಗೆ ಹೋಗಿ ಕೆಲವು ತಳಿ­ಗ­ಳನ್ನು ಆಯ್ಕೆ ಮಾಡಿ­ತಂ­ದರು. ಕೃಷಿ ವಿಶ್ವ­ವಿ­ದ್ಯಾ­ಲ­ಯ­ಗ­ಳಿಂದ ಮತ್ತು ಬೆಂಗ­ಳೂ­ರಿನ ಸಹಜ ಸಮೃದ್ಧ ಬಳ­ಗ­ದ­ವ­ರಿಂದ ಕೆಲವು ತಳಿ­ಗ­ಳನ್ನು ತಂದರು.
ಬೇರೆ­ಯ­ವ­ರಿಂದ ಸ್ವಲ್ಪ ಸ್ವಲ್ಪ ಭತ್ತ­ಗ­ಳನ್ನು ತಂದು ಇವರು ನಾಟಿ ಮಾಡಿ­ದರೂ, ಈ ವರ್ಷ ಅವು ದ್ವಿಗುಣ ಆಗು­ತ್ತದೆ ಎನ್ನುವ ತೃಪ್ತಿ ಇವ­ರದ್ದು. `ಅ­ನ್ನ­ದಾ­ತ­ರಾದ ನಾವು ಅನ್ನ­ವನ್ನೇ ನೀಡ­ಬೇಕು. ಬದ­ಲಾಗಿ ವಿಷ­ವನ್ನು ನೀಡ­ಬಾ­ರದು. ಸಾವ­ಯವ ಕೃಷಿ ಮತ್ತು ನಾಟಿ ತಳಿ ಇದಕ್ಕೆ ಸಹ­ಕಾರಿ. ಅಷ್ಟೇ ಅಲ್ಲದೆ ನಮ್ಮ­ಲ್ಲಿಯ ಸಾಂಪ್ರ­ದಾ­ಯಿಕ ಕೃಷಿ ಪದ್ದ­ತಿ­ಯನ್ನು ಸ್ಥಳೀ­ಯ­ರಿಗೆ ಪುನಃ ನೆನ­ಪಿ­ಸು­ವಲ್ಲಿ ಈ ರೀತಿಯ ಕೃಷಿ ಉಪ­ಯೋ­ಗಕ್ಕೆ ಬರು­ತ್ತದೆ' ಎಂಬುದು ಹೊಸ­ಮನಿ ಅವರ ಹೇಳಿಕೆ.
ನಾಟಿ ತಳಿ ಕಾಣೆ­ಯಾ­ಗು­ತ್ತಿ­ರುವ ಇಂದಿನ ದಿನ­ಗ­ಳಲ್ಲಿ ನಾಟಿ ತಳಿ­ಯನ್ನು ಉಳಿ­ಸು­ವು­ದರ ಜೊತೆಗೆ ದ್ವಿಗು­ಣ­ಗೊ­ಳಿ­ಸು­ತ್ತಿ­ರುವ ಹೊಸ­ಮನಿ ಅವರ ಪ್ರಯತ್ನ ಶ್ಲಾಘ­ನೀಯ.
ಮಾಹಿ­ತಿ­ಗಾಗಿ: ಗಂಗಾ­ಧರ ಹೊಸ­ಮನಿ
29/7b ಮರಾಠಾ ಕಾಲೀನಿ
ಗಣ­ಪ­ತಿ­ಗುಡಿ ಹತ್ತಿರ
ಧಾರ­ವಾಡ- 580008
ದೂರ­ವಾಣಿ: 0836-2447137
9448130647

ನಾಗರಾಜ ಮತ್ತಿಗಾರ
e-mail: nagam25@gmail.com

No comments: