Thursday, December 4, 2008

ಜವಾರಿ ಸರೋಜ!

ರಾಜ್ಯದಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಲ್ಲಿ ದಾವಣಗೆರೆಯೂ ಒಂದು. ಇಲ್ಲಿನ ಹೆಚ್ಚಿನ ರೈತರು ರಾಸಾಯನಿಕ ಕೃಷಿ ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕೆಲವು ರೈತರು ರಾಸಾಯಾನಿಕ ಕೃಷಿ ಬಿಟ್ಟು ಸಾವಯವದತ್ತ ಮುಖ ಮಾಡಿದ್ದಾರೆ. ಹಂತ ಹಂತವಾಗಿ ರಸಗೊಬ್ಬರ ಹಾಕುವುದನ್ನು ಬಿಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಉತ್ತಮ ಬೆಳೆವಣಿಗೆಯೇ.
ದಾವಣಗೆರೆಯ ಜಿಲ್ಲೆ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಸರೋಜ, ನಾಗೇಂದ್ರ ಪಾಟೀಲ್‌ ದಂಪತಿ ಪ್ರಗತಿಪರ ಕೃಷಿಕರು. ಇವರಿಗೆ ಹತ್ತೊಂಬತ್ತು ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಆರು ಎಕರೆ ತೆಂಗು, ಮೂರು ಎಕರೆ ಅಡಿಕೆ ತೋಟವಿದೆ. ಉಳಿದ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ.
ಸರೋಜ ಹರಿಹರ ಗ್ರಾಮ ಸಂಪರ್ಕ ಕೇಂದ್ರದ ಸಂಪನ್ಮೂಲ ವ್ಯಕ್ತಿ. ಇವರು ಹಳ್ಳಿ ಹಳ್ಳಿಗಳಗೆ ಹೋಗಿ ಕೃಷಿಯಲ್ಲಿ ತಮಗಿರುವ ಅನುಭವದ ಕುರಿತು ಉಪನ್ಯಾಸ ಕೊಡುತ್ತಾರೆ. ಈ ಸಂದರ್ಭದಲ್ಲಿ ಇವರಿಗೆ ನೈಸರ್ಗಿಕ ಕೃಷಿಯ ಕಡೆಗೆ ಆಸಕ್ತಿ ಮೂಡಿತು. ಅಡಿಕೆ, ತೆಂಗಿನ ತೋಟಕ್ಕೆ ರಸಗೊಬ್ಬರ ಬಿಟ್ಟು ಜೀವಾಮೃತವನ್ನು ಹಾಕತೊಡಗಿದರು. ಭತ್ತದ ಕೃಷಿಗೂ ಇದನ್ನೇ ಅನುಸರಿಸಿದರು. ಸಾವಯವ ಕೃಷಿಯನ್ನು ಮಾಡತೊಡಗಿದಾಗ ನಾಟಿ ಭತ್ತದ ತಳಿ ಬೆಳೆಯಬೇಕೆಂಬ ಮನಸ್ಸು ಸರೋಜ ಅವರಿಗೆ ಬಂತು.
ನಾಟಿ ತಳಿ ಬೆಳೆಸಬೇಕೆಂದು ಮನಸ್ಸಾದರೆ ತಳಿಗಳು ಸಿಗಬೇಕಲ್ಲ? ಕಳೆದ ವರ್ಷ ಇವರು ಗಂಧಸಾಲಿ ಎನ್ನುವ ಒಂದು ತಳಿಯನ್ನು ಮಾತ್ರ ಬೆಳೆದಿದ್ದರು. ನಾಟಿ ತಳಿ ಬಹಳ ಆಸಕ್ತಿಯಿಂದ ಬೆಳೆದು, ಸಂರಕ್ಷಣೆ ಮಾಡುತ್ತಿದ್ದ ಮಂಡ್ಯ ಹತ್ತಿರದ ಶಿವಳ್ಳಿಯ ಬೋರೇಗೌಡರಲ್ಲಿಗೆ ಹೋಗಿ 23 ತಳಿಗಳನ್ನು ತಂದು ನಾಟಿ ಮಾಡಿದ್ದಾರೆ. ಇವರು ತಳಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ 5 ಕೆಜಿ ಸಗಣಿ, 100 ಗ್ರಾಂ ಸುಣ್ಣ ಮತ್ತು ಗೋಮೂತ್ರ ಮಿಶ್ರಣ ಮಾಡಿ, ಅದರಲ್ಲಿ ಬೀಜೋಪಚಾರ ನಡೆಸಿ ನಾಟಿ ಮಾಡಿದ್ದಾರೆ. ಇದರಿಂದ ಈ ಭಾಗದಲ್ಲಿ ಸಾಮಾನ್ಯವಾಗಿ ಬರುವ ಬೆಂಕಿರೋಗ ಮತ್ತು ಕಾಂಡಕೊರಕ ಬಾಧೆ ಬಂದಿಲ್ಲ.
ಇವರು ಬೀಜ ಬ್ಯಾಂಕ್‌ ಅನ್ನು ಮಾಡುತ್ತಿದ್ದಾರೆ. ಇವರಲ್ಲಿ ಇಂದು 23 ಜವಾರಿ ತಳಿಗಳು ಇವೆ. ಗಂಧಸಾಲಿ, ರಾಜಭೋಗ್‌, ರಾಜಮುಡಿ, ಬಂಗಾರಸಣ್ಣ, ರತ್ನಚೂಡಿ, ಮೋರಡ್ಡಿ, ಬೂಸ ಬಾಸಮತಿ, ಕರಿಮುಂಡ್ಗ, ರಾಜಕೈಮೆ, ಜೀರಿಗೆಸಾಂಬ, ಮೈಸೂರು ಮಲ್ಲಿಗೆ, ಕೆಂಪುದಡಿ, ಸೇಲಂ ಸಣ್ಣ, ಮಾಲ್ಗುಡಿ ಸಣ್ಣ, ನಾಗ ಭತ್ತ, ಚಿನ್ನಾಪನ್ನಿ, ನವರ, ಪೂಸಾ ಸುಗಂಧ, ಗೌರಿ ಸಣ್ಣ, ಎಚ್‌ಎಂಟಿ ಸೋನಾ ತಳಿಗಳನ್ನು ಇವರು ಪ್ರಾತ್ಯಕ್ಷಿಕೆ ಮಾದರಿ ಬೆಳೆಯುತ್ತಿದ್ದಾರೆ.
ನಮ್ಮಲ್ಲಿಯ ಭೂಮಿಗೆ ಯಾವ ತಳಿ ಹೆಚ್ಚು ಇಳುವರಿ ಬರುತ್ತದೆ ಎನ್ನುವುದನ್ನು ಗಮನಿಸಿ ಅಂತಹ ತಳಿಗಳನ್ನು ಹೆಚ್ಚು ಬೆಳೆಯುವುದು ಮತ್ತು ನಮ್ಮಲ್ಲಿನ ಅಪರೂಪದ ತಳಿಗಳನ್ನು ಸಂರಕ್ಷಿಸಿ ದ್ವಿಗುಣಗೊಳಸುವುದು ಉದ್ದೇಶ. ಸಾವಯವ ಕೃಷಿಗೆ ನಾಟಿ ತಳಿಯೇ ಸೂಕ್ತ. ನಾವು ಮೊದಲು ಇಳವರಿ ಪಡೆಯಲು ತುಂಬಾ ಕಸರತ್ತು ಮಾಡುತ್ತಿದ್ದೆವು. ರೋಗ ಬಾಧೆಗೆ, ಕೀಟ ಬಾಧೆಗೆ ಔಷಧಗಳನ್ನು ಸಿಂಪಡಿಸುತ್ತಿದ್ದೆವು. ಆದರೆ ಈಗ ಮಾತ್ರ ಅದಾವುದನ್ನೂ ಮಾಡದೇ ಸಾವಯವದಲ್ಲಿಯೇ ಕೃಷಿ ಮಾಡುತ್ತಿದ್ದೇವೆ. ಮಾರಾಟಕ್ಕಾಗಿ ಬೆಳೆಯುತ್ತಿರುವ ಭತ್ತದ ಗದ್ದೆಗಳಿಗೆ ಒಂದೂವರೆ ಕ್ವಿಂಟಾಲ್‌ ರಾಸಾಯನಿಕ ಗೊಬ್ಬರ ಹಾಕುತ್ತಿದ್ದೇವೆ. ಮೊದಲು ತುಂಬಾ ಗೊಬ್ಬರದ ಬಳಕೆ ಮಾಡುತ್ತಿದ್ದೆವು. ಈಗ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬರುತ್ತಿದ್ದೇವೆ. ಎರೆಗೊಬ್ಬರವನ್ನು ಹೆಚ್ಚು ಬಳಸುತ್ತಿದ್ದೇವೆ ಅನ್ನುತ್ತಾರೆ ಸರೋಜಮ್ಮ.
ನಾಟಿ ತಳಿಯನ್ನು ಬೆಳೆಸುತ್ತಿರುವ ತಾಕುಗಳಿಗೆ ಯಾವುದೇ ತರಹದ ರಾಸಾಯನಿಕವನ್ನು ಬಳಸುತ್ತಿಲ್ಲ. ಈ ಭಾಗದಲ್ಲಿ ಶ್ರೀಪದ್ಧತಿ ಭತ್ತವನ್ನು ಮೊದಲು ಬೆಳೆದವರು ಇವರು. ಕೃಷಿಯೇ ಬದುಕಾಗಿರುವ ಸರೋಜಮ್ಮ ಅವರ ಪ್ರತಿಯೊಂದು ಯೋಚನೆ, ಯೋಜನೆಗೆ ಬೆನ್ನೆಲುಬಾಗಿ ನಿಂತವರು ಪತಿ ನಾಗೇಂದ್ರಪ್ಪ ಪಾಟೀಲರು. ಇವರ ಕೃಷಿಯನ್ನು ನೋಡಿ ಕೃಷಿ ಇಲಾಖೆಯವರು ಬಹಳಷ್ಟು ಕೃಷಿಕರಿಗೆ ಇವರಿಂದ ಮಾರ್ಗದರ್ಶನ ಕೊಡಿಸಿದ್ದಾರೆ. ಇವರು ಸಹ ಕೃಷಿ ಇಲಾಖೆಯ ಸಲಹೆ ಪಡೆಯದೆ ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾರೆ. ಸರೋಜಮ್ಮ ಅವರ ಕೃಷಿ ತೋಟಕ್ಕೆ ಅಮೇರಿಕಾದ ಪತ್ರಕರ್ತೆ ರೆಬಾಕಾ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.
ನಾವು ಕೇವಲ ವಾಣಿಜ್ಯ ಉದ್ದೇಶಗಳಿಗೆ ಭತ್ತ ಬೆಳೆಯದೇ ನಮ್ಮದೇ ಆದ ಜವಾರಿ ತಳಿಗಳನ್ನು ಹುಡುಕಿ ಬೆಳೆಸಬೇಕು ಎಂದು ಪತ್ನಿ ಸರೋಜ ಹೇಳಿದಳು. ಕೃಷಿ ವಿಚಾರದಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಅವಳು. ನನಗೂ ಸರಿ ಅನ್ನಿಸಿತು. ಸಾವಯವ ಕೃಷಿಯ ಕಡೆಗೆ ಬಂದಿದ್ದೆವು. ಸಾವಯವ ಕೃಷಿಯ ಜೊತೆ ಜವಾರಿ ತಳಿಗಳನ್ನು ಬೆಳೆಯುವುದು ಸರಿಯಾದ ಹೊಂದಾಣಿಕೆ. ಅವಳ ಆಸಕ್ತಿಗೆ ನಾನು ಆಸರೆಯಾಗಿದ್ದೇನೆ. ನಾಟಿ ತಳಿಗಳಲ್ಲಿ ಇಳವರಿ ಹೆಚ್ಚು ಬಾರದಿದ್ದರೂ ಗುಣಮಟ್ಟ ಒಳ್ಳೆಯದಾಗಿರುತ್ತದೆ ಎಂಬುದು ಸತ್ಯ ಅನ್ನುತ್ತಾರೆ ನಾಗೇಂದ್ರಪ್ಪ ಪಾಟೀಲ.
ಕಾಣೆಯಾಗುತ್ತಿರುವ ನಾಟಿ ತಳಿಗಳನ್ನು ಹುಡುಕಿ ಬೆಳೆಯುತ್ತಿರುವ ಸರೋಜ ಅವರ ಪ್ರಯತ್ನ ಶ್ಲಾಘನೀಯ. ಒಂದೊಂದು ಭಾಗದಲ್ಲಿ ಇಂತಹ ಒಬ್ಬೊಬ್ಬರು ಇದ್ದರೂ ಜವಾರಿ ತಳಿಯ ಕೃಷಿ ಪುನರ್ಜನ್ಮ ಪಡೆಯುಯುವುದು ಖಂಡಿತ.
ಇವರ ಕೃಷಿ ಮಾಹಿತಿಗಾಗಿ: ಸರೋಜ ನಾಗೇಂದ್ರಪ್ಪ ಪಾಟೀಲ್‌
ನಿಟ್ಟೂರು
ಅಂಚೆ: ನಿಟ್ಟೂರು
ಹರಿಹರ, ದಾವಣಗೆರೆ
ದೂರವಾಣಿ: 08192293014
ನಾಗರಾಜ ಮತ್ತಿಗಾರ

No comments: