Monday, March 23, 2009

ಗಾಳಿ ಬಂತು ಭತ್ತ ಹೊಯ್ತು


ಕೃಷಿ ದಿನ­ದಿಂದ ದಿನಕ್ಕೆ ಬದ­ಲಾ­ಗು­ತ್ತಿದೆ. ಕೃಷಿ­ಯನ್ನು ಸುಲಭ ಮಾಡಿ­ಕೊ­ಳ್ಳಲು ಕೃಷಿ­ಕರು ಬಹು­ವಾ­ರ್ಷಿಕ ಮತ್ತು ಕೆಲಸ ಕಡಿಮೆ ಇರುವ ಕೃಷಿ­ಯತ್ತ ತಮ್ಮ ಚಿತ್ತ ಹಾಯಿ­ಸು­ತ್ತಿ­ದ್ದಾರೆ. ಆಹಾರ ಬೆಳೆ ಬೆಳೆ­ಯುವ ಜಾಗ­ದಲ್ಲಿ ಅರಣ್ಯ ಕೃಷಿ ಮಾಡು­ತ್ತಿ­ದ್ದಾರೆ. ಇಂತಹ ಅರಣ್ಯ ಕೃಷಿ­ಯಲ್ಲಿ ಗಾಳಿ (ಸರ್ವೆ, ಸುರ್ಗಿ)ಯೂ ಒಂದು. ಕ್ಯಾಸು­ರಿನಾ ಇಕ್ಯೂ­ಸಿ­ಟಿ­ಪೋ­ಲಿಯಾ ( easurina equisitifolia )ಎ­ನ್ನುವ ಜಾತಿಗೆ ಸೇರುವ ಈ ಸಸ್ಯ­ಗ­ಳನ್ನು ಮೊದಲು ಅರಣ್ಯ ಇಲಾ­ಖೆಯ ಜಮೀ­ನಿ­ನಲ್ಲಿ ಮಾತ್ರ ಬೆಳೆ­ಯು­ತ್ತಿ­ದ್ದರು. ಈಗ ಇದು ರೈತರ ಹೊಲ­ಗ­ಳಿಗೂ ಬಂದಿದೆ.
ಬೆಂಗ­ಳೂರು ಗ್ರಾಮಾಂ­ತರ, ಮಂಡ್ಯ, ಮೈಸೂ­ರಿನ ಕೆಲವು ಭಾಗ­ದಲ್ಲಿ ಗಾಳಿ­ಮ­ರ­ಗ­ಳನ್ನು ರೈತರು ಬೆಳೆ­ಸು­ತ್ತಿ­ದ್ದಾರೆ.
ಕೃಷಿ ಮಾಡು­ವುದು ಸುಲಭ:
ಗಾಳಿ ಮರ­ಗ­ಳನ್ನು ಬೆಳೆ­ಸು­ವಾಗ ಮೊದಲು ನರ್ಸರಿ ಮಾಡಿ­ಕೊಂಡು ಸಸಿ­ಗ­ಳನ್ನು ತಯಾ­ರಿ­ಸಿ­ಕೊ­ಳ್ಳ­ಬೇಕು. ನರ್ಸರಿ ಮಾಡುವ ವ್ಯವ­ಧಾ­ನ­ವಿ­ಲ್ಲ­ದಿ­ದ್ದರೆ, 30 ಪೈಸೆ­ಯಿಂದ ಎರಡು ರೂಪಾ­ಯಿ­ವ­ರೆಗೂ ಸಸಿ­ಗಳು ಖಾಸಗಿ ನರ್ಸ­ರಿ­ಗ­ಳಲ್ಲಿ ದೊರೆ­ಯು­ತ್ತದೆ.
ಸಸಿ­ಯಿಂದ ಸಸಿಗೆ ಮೂರು ಅಡಿ, ಸಾಲಿಂದ ಸಾಲಿಗೆ ಆರು ಅಡಿ ಅಂತ­ರ­ದಲ್ಲಿ, ಒಂದು ಅಡಿ ಆಳ- ಅಗ­ಲದ ಗುಂಡಿ­ಯನ್ನು ತೆಗೆದು, ಅದ­ರಲ್ಲಿ ಕೊಟ್ಟಿಗೆ ಗೊಬ್ಬ­ರ­ವನ್ನು ತುಂಬಿ ಗಾಳಿ ಸಸಿ­ಗ­ಳನ್ನು ನಾಟಿ ಮಾಡ­ಬೇಕು. ರಾಸಾ­ಯ­ನಿಕ ಗೊಬ್ಬ­ರ­ವನ್ನು ಗಾಳಿ ಸಸಿ ಬೇಡು­ವು­ದಿಲ್ಲ. ಆದರೂ ಸಸಿ ಸದೃ­ಢ­ವಾಗಿ ಬೆಳೆ­ಯುವ ಸಲು­ವಾಗಿ ಒಂದು ಸಸಿಗೆ ಹತ್ತು ಗ್ರಾಂನಂತೆ ಎನ್‌­ಪಿ­ಕೆ­ಯನ್ನು ನೀಡ­ಬೇಕು. ಮೂರು ತಿಂಗಳ ನಂತರ ಮತ್ತೊಮ್ಮೆ ಒಂದು ಸಸಿಗೆ 20ಗ್ರಾಂ­ನಂತೆ ಎನ್‌­ಪಿಕೆ ಕೊಡ­ಬೇಕು. ಮತ್ತೆ ಆರು ತಿಂಗಳ ನಂತರ ಒಮ್ಮೆ 40ಗ್ರಾಂ ಎನ್‌­ಪಿ­ಕೆ­ಯನ್ನು ಗಾಳಿ­ಗಿ­ಡ­ಗ­ಳಿಗೆ ನೀಡಿ­ದರೆ ರಾಸಾ­ಯ­ನಿಕ ಬಳ­ಕೆ­ಯನ್ನು ಮತ್ತೆ ಮಾಡುವ ಅಗ­ತ್ಯ­ವಿಲ್ಲ.
ಗಾಳಿ ಕೃಷಿಗೆ ನೀರಿನ ಅಗತ್ಯ ಏಪ್ರಿಲ್‌, ಮೆ ತಿಂಗ­ಳಿ­ನಲ್ಲಿ ಬೇಕಾ­ಗು­ತ್ತದೆ. ಸಸಿ­ಗಳ ಸಾಲು­ಗಳ ನಡುವೆ ಇರುವ ಸಣ್ಣ ಬಸಿ ಕಾಲುವೆ ಮೂಲಕ ಹದಿ­ನೈದು ದಿನ­ಕ್ಕೊಮ್ಮೆ ನೀರು ಹಾಯಿ­ಸಿ­ದರೆ ಸಾಕಾ­ಗು­ತ್ತದೆ. ಗಾಳಿ­ಸ­ಸಿ­ಗ­ಳನ್ನು ನಾಟಿ ಮಾಡಿ ಒಂದು­ವರೆ ವರ್ಷ­ವಾದ ನಂತರ ಗಿಡ­ಗ­ಳನ್ನು ಪ್ರೂನಿಂಗ್‌( ಅನ­ಗತ್ಯ ಟೊಂಗೆ­ಗ­ಳನ್ನು ಕಟಾವು ಮಾಡು­ವುದು) ಮಾಡ­ಬೆ­ಕಾ­ಗು­ತ್ತದೆ. ಗಿಡ­ವನ್ನು ನಾಟಿ ಮಾಡಿ ಮೂರು ವರ್ಷದ ನಂತರ ಕಟಾ­ವಿಗೆ ಬರು­ತ್ತದೆ.
ಖರ್ಚು- ಆದಾಯ:
ಒಂದು ಎಕ­ರೆ­ಯಲ್ಲಿ ಸುಮಾರು ಎರಡು ಸಾವಿರ ಸಸಿ­ಗ­ಳನ್ನು ನಾಟಿ ಮಾಡ­ಬ­ಹುದು. ಸಸಿ, ನೀರು, ಗೊಬ್ಬರ ಎಲ್ಲಾ ಸೇರಿ ಸುಮಾರು ಇಪ್ಪ­ತ್ತೈದು ಸಾವಿರ ರೂಪಾಯಿ ಖರ್ಚಾ­ಗು­ತ್ತದೆ. ಒಂದು ಟನ್‌ ಗಾಳಿ ಮರಕ್ಕೆ 800ರಿಂದ ಎರಡು ಸಾವಿರ ರೂಪಾ­ಯಿ­ವ­ರೆಗೂ ಬೆಲೆ ಸಿಗು­ತ್ತದೆ. ಒಂದು ಎಕ­ರೆಗೆ ಒಂದು ಲಕ್ಷ­ದಿಂದ ಒಂದು ಲಕ್ಷದ ಇಪ್ಪ­ತ್ತೈದು ಸಾವಿರ ರೂಪಾ­ಯಿ­ವ­ರೆಗೂ ಆದಾಯ ದೊರೆ­ಯು­ತ್ತದೆ. ಗಿಡ ನಾಟಿ ಮಾಡಿ ಒಂದು­ವರೆ ವರ್ಷ­ವಾದ ಮೇಲೆ ಮಾಡುವ ಪ್ರೂನಿಂ­ಗ್‌­ನಿಂದ ಸುಮಾರು ಹತ್ತು ಸಾವಿರ ರೂಪಾಯಿ ಆದಾಯ ಬರು­ತ್ತದೆ. ಪ್ರೂನಿಂಗ್‌ ಮಾಡಿದ ಗಾಳಿ ಕಟ್ಟಿ­ಗೆ­ಯನ್ನು ಪವರ್‌ ಪ್ಲಾಂಟ್‌­ನ­ವರು ಖರೀದಿ ಮಾಡು­ತ್ತಾರೆ.
`ಕೃಷಿ ಕಾರ್ಮಿ­ಕರ ಕೊರತೆ ನಮ್ಮನ್ನು ಅರಣ್ಯ ಕೃಷಿ ಕಡೆಗೆ ಬರು­ವಂತೆ ಮಾಡಿತು. ನಾವು ಈಗ ಗಾಳಿ ಮರ­ಗ­ಳನ್ನು ಬೆಳೆ­ಸಿದ ಜಾಗ­ದಲ್ಲಿ ಭತ್ತ­ವನ್ನು ಬೆಳೆ­ಯು­ತ್ತಿ­ದ್ದೆವು. ಈಗಲೂ ಐದು ಎಕ­ರೆ­ಯಲ್ಲಿ ಭತ್ತ­ವನ್ನು ಬೆಳೆ­ಯು­ತ್ತಿ­ದ್ದೇವೆ. ಮೂರು ಎಕ­ರೆ­ಯಲ್ಲಿ ಗಾಳಿ­ಮ­ರ­ಗ­ಳನ್ನು ನಾಟಿ ಮಾಡಿ­ದ್ದೇವೆ. ಈಗ ಇರುವ ಭತ್ತದ ಬೇಸಾಯ ಮಾಡಲು ಕೆಲ­ಸ­ಗಾ­ರರ ತಾಪ­ತ್ರಯ ಅನು­ಭ­ವಿ­ಸು­ತ್ತಿ­ದ್ದೇವೆ. ಗಾಳಿ­ಮ­ರ­ಗ­ಳಿಗೆ ಮೊದ­ಲಿ­ಗಿಂ­ತಲೂ ಈಗ ಮಾರು­ಕಟ್ಟೆ ಮೌಲ್ಯ ಹೆಚ್ಚಿದೆ. ನಮ್ಮ ಮಾಲ್ಕಿ ಜಾಗ­ದಲ್ಲಿ ಅರಣ್ಯ ಕೃಷಿ ಮಾಡಿ­ದರೆ ಅರಣ್ಯ ಇಲಾ­ಖೆ­ಯ­ವರ ರಗಳೆ ಇರು­ವು­ದಿಲ್ಲ. ಮೊದಲು ಅವರ ಅನು­ಮ­ತಿ­ಯನ್ನು ಪಡೆ­ಯದೆ ಈ ತರ­ಹದ ಕೃಷಿ ಮಾಡು­ವಂ­ತಿ­ರ­ಲಿಲ್ಲ.
ಗಾಳಿ­ಮ­ರ­ಗ­ಳನ್ನು ಬೆಳೆ­ಸುವ ಜಾಗ­ದಲ್ಲಿ ಮಧ್ಯೆ ಇರುವ ಖಾಲಿ ಜಾಗ­ದಲ್ಲಿ ತರ­ಕಾ­ರಿ­ಗ­ಳನ್ನು ಬೆಳೆ­ಯ­ಬ­ಹುದು. ಈ ಮರ­ಗ­ಳಿಂದ ಉದು­ರುವ ಎಲೆ­ಗ­ಳಿಂದ ಭೂಮಿ ಮುಚ್ಚಿ­ರು­ತ್ತದೆ. ತೇವಾಂಶ ಯಾವಾ­ಗಲೂ ಇರು­ತ್ತದೆ. ಭೂಮಿ ಫಲ­ವ­ತ್ತಾ­ಗು­ತ್ತದೆ. ಎರೆ­ಹು­ಳು­ಗಳ ಉತ್ಪ­ತ್ತಿಯೂ ಆಗು­ತ್ತದೆ.
`ಭ­ತ್ತ­ವನ್ನು ಬೆಳೆ­ದರೆ ನಮಗೆ ಮೂರು ವರ್ಷಕ್ಕೆ ಹೆಚ್ಚೆಂ­ದರೆ ಎಂಬತ್ತು ಸಾವಿರ ರೂಪಾಯಿ ಆದಾಯ ಬರು­ತ್ತಿತ್ತು. ಗಾಳಿ ಮರ­ದಿಂದ ಏನಿಲ್ಲ ವೆಂದರೂ ಮೂರು ವರ್ಷಕ್ಕೆ ಒಂದು­ಕಾಲು ಲಕ್ಷ ರೂಪಾಯಿ ಆದಾಯ ಬರು­ತ್ತದೆ. ನಾಟಿ ಮಾಡು­ವಾಗ ಮಾತ್ರ ಕೆಲ­ಸ­ಗಾ­ರರು ಬೇಕಾ­ಗು­ತ್ತದೆ. ನಂತರ ನಾವು ಗುತ್ತಿಗೆ ನೀಡು­ತ್ತೇವೆ. ಅವರೆ ಬಂದ ಕಟಾವು ಮಾಡಿ ಹೋಗು­ತ್ತಾರೆ. ಮನೆ ಜನವೇ ಕೆಲಸ ಮಾಡಿ­ದರೆ ಸಾಕಾ­ಗು­ತ್ತದೆ. ಬೇರೆ­ಯ­ವ­ರಿ­ಗಾಗಿ ಕಾಯುವ ಅಗ­ತ್ಯ­ವಿ­ರು­ವು­ದಿಲ್ಲ' ಎಂಬುದು ಮಳ­ವಳ್ಳಿ ತಾಲೂ­ಕಿನ ಕಿರು­ಗಾ­ವ­ಲಿನ ರೈತ ಸಯ್ಯದ್‌ ಘನಿ ಖಾನ್‌ ಅವರ ಅಭಿ­ಪ್ರಾಯ.
ಕೃಷಿ ಕೆಲ­ಸ­ದಲ್ಲಿ ತೊಡ­ಗಿ­ಸಿ­ಕೊ­ಳ್ಳು­ವ­ವರ ಸಂಖ್ಯೆ ಕಡಿ­ಮೆ­ಯಾ­ದಂತೆ ಬೆಳೆ­ಯ­ಲ್ಲಿಯೂ ವ್ಯತ್ಯಾ­ಸ­ವಾ­ಗು­ತ್ತಿದೆ. ಕೃಷಿ ಕ್ರಮವೂ ಬದ­ಲಾ­ಗು­ತ್ತಿದೆ ಎನ್ನು­ವು­ದಕ್ಕೆ ಬೇಸಾ­ಯದ ಭೂಮಿ ಅರಣ್ಯ ಕೃಷಿಗೆ ಒಳ­ಪ­ಡು­ತ್ತಿ­ರು­ವುದು ಒಂದು ಉದಾ­ಹ­ರಣೆ. ಗಾಳಿ ಕೃಷಿಯ ಕುರಿತು ಮಾಹಿ­ತಿ­ಗಾಗಿ: ಸಯ್ಯದ್‌ ಘನಿ ಖಾನ್‌, ಕಿರು­ಗಾ­ವಲು, ಮಳ­ವಳ್ಳಿ ತಾಲೂಕು, ಮಂಡ್ಯ-571424, ದೂರ­ವಾಣಿ-990173351


ಆಹಾರ ಸ್ವಾವ­ಲಂ­ಬ­ನೆಗೆ ಕುತ್ತು!

ಬೇಸಾಯ ಭೂಮಿ ಬೇರೆ ಬೇರೆ ಕೃಷಿಗೆ ಮಾರ್ಪ­ಡು­ತ್ತಿ­ರು­ವುದು ಆತಂ­ಕ­ಕಾರಿ ಸಂಗತಿ. ಉತ್ತ­ರ­ಕ­ನ್ನಡ, ಶಿವ­ಮೊಗ್ಗ, ಚಿಕ್ಕ­ಮ­ಗ­ಳೂರು, ದಾವ­ಣ­ಗೆರೆ ಜಿಲ್ಲೆ­ಗಳ ಕೆಲವು ಭಾಗ­ದಲ್ಲಿ ಭತ್ತ ಬೆಳೆ­ಯುವ ಜಾಗ­ದಲ್ಲಿ ಅಡಿಕೆ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ. ಅದೇ ಭತ್ತ ಹೆಚ್ಚು ಬೆಳೆ­ಯುವ ಮಂಡ್ಯ ಮುಂತಾದ ಹಳೇ ಮೈಸೂರು ಪ್ರಾಂತ್ಯ­ದಲ್ಲಿ ಭತ್ತದ ಕೃಷಿ ಬಿಟ್ಟು ಬೇರೆ ಕೃಷಿ ಕಡೆಗೆ ರೈತರು ಹೊರ­ಟಿ­ದ್ದಾರೆ.
ಆಹಾರ ಬೆಳೆ­ಯುವ ಪ್ರದೇ­ಶ­ದಲ್ಲಿ ಆದಾಯ ತರುವ ಬೆಳೆ­ಗ­ಳನ್ನು ಬೆಳೆ­ಯು­ವು­ದ­ರಿಂದ ಸ್ವತಃ ರೈತರೇ ಆಹಾ­ರದ ಸ್ವಾವ­ಲಂ­ಬನೆ ಕಳೆದು ಕೊಳ್ಳು­ತ್ತಿ­ದ್ದಾರೆ.`ಆ­ಹಾರ ಬೆಳೆ ಬೆಳೆ­ಯು­ವುದು ಬಿಟ್ಟು ಅರಣ್ಯ ಕೃಷಿ ಮಾಡು­ತ್ತಿ­ರುವ ಬಗ್ಗೆ ನಮಗೂ ಬೇಸ­ರ­ವಿದೆ. ಆದರೆ ಅನಿ­ವಾರ್ಯ. ಕೆಲ­ಸ­ಗಾ­ರ­ರಿಲ್ಲ. ಆಧು­ನಿಕ ಕೃಷಿ ಮಾಡು­ವಷ್ಟು ಆರ್ಥಿ­ಕ­ವಾಗಿ ಸಬ­ಲ­ರಲ್ಲ' ಎಂದು ಅರಣ್ಯ ಕೃಷಿ ಮಾಡುವ ರೈತರು ಹೇಳು­ತ್ತಾರೆ.

ನಾ. ಮತ್ತಿ­ಗಾರ

Friday, March 20, 2009

ಬ್ಲಾಗ್ ಮಾಡಿ ಮಾಹಿತಿ ನೀಡಿ


ಇಂದು ಹಳ್ಳಿ­ಗಳು ಮೊದಲ ಹಾಗಿಲ್ಲ. ನಗ­ರ­ದ­ಲ್ಲಿ­ರುವ ಅಷ್ಟು ವ್ಯವ­ಸ್ಥೆ­ಗಳೂ ಹಳ್ಳಿ­ಗ­ಳಲ್ಲಿ ಇದೆ. ಅಲ್ಲಿಯೆ ಕುಳಿತು ಕೊಂಡು ಪ್ರಪಂ­ಚ­ವನ್ನು ಕಾಣ­ಬ­ಹುದು. ಹಳ್ಳಿ ಮಂದಿ ಸುಮ್ಮನೆ ತವಾ­ಯಿತು ತಮ್ಮ ಕೆಲ­ಸ­ವಾ­ಯಿತು ಎಂದು ಕುಳಿತು ಕೊಳ್ಳದೇ ತಮಗೆ ತಿಳಿ­ದಿರು ಮಾಹಿ­ತಿ­ಯನ್ನು ಬ್ಲಾಗ್‌ ರಚಿಸಿ ತಿಳಿ­ಸು­ವುದು ಒಳ್ಳೆ­ಯ­ದ­ಲ್ಲವೆ. ಇಂದು ಪ್ರತಿ ಹಳ್ಳಿಯ ಒಂದು ಮನೆ­ಯ­ಲ್ಲಾ­ದರೂ ಕಂಪ್ಯೂ­ಟರ್‌ ಇರು­ತ್ತದೆ. ಅದಕ್ಕೆ ಬ್ರಾಡ್‌­ಬ್ಯಾಂಡ್‌ ಸಂಪರ್ಕ ಪಡೆ­ದ­ವರು ಬಹಳ ಮಂದಿ. ಕೃಷಿ­ಕರ ಪತ್ರಿಕೆ ಅಡಿಕೆ ಪತ್ರಿ­ಕೆ­ಯಲ್ಲಿ ಬ್ಲಾಗ್‌ ಕುರಿತು ಮಾಹಿ­ತಿ­ಗ­ಳಿವೆ. ಪತ್ರಿಕೆ ದೊರೆ­ತರೆ ಓದಿ.

Sunday, March 15, 2009

ದೂರವಾಣಿಯನ್ನು ದುಬಾರಿ ಏಕೆ ಮಾಡಿಕೊಳ್ಳುವಿರಿ?

ರೈತ ಪರ ಪತ್ರಿಕೆಗಳಿಗೆ, ಪುರವಣಿಗಳಿಗೆ ಒಂದು ಸಮಸ್ಯೆಯಿದೆ. ಅವು ರೈತರಿಗೆ ಅನ್ವಯಿಸುವ ಕೃಷಿ ಪದ್ಧತಿ, ಔಷಧ, ಸಾವಯವ-ಶೂನ್ಯ, ಬೀಜ.... ಇಷ್ಟಕ್ಕೇ. ಈ ಮಾಹಿತಿಗಳಿಂದ ಉಪಯೋಗವಿಲ್ಲವೆಂದಲ್ಲ. ಆದರೆ ಬಹುಪಾಲು ಸಂದರ್ಭಗಳಲ್ಲಿ ರೈತ ಸೋಲುವುದು ಸಮೃದ್ಧ ಇಳುವರಿ ತೆಗೆದೂ ಅದನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ. ಬಂದ ಹಣವನ್ನು ಪೂರ್ವಯೋಜಿತವಾಗಿ ನಿರ್ಧರಿಸಿ ವಿನಿಯೋಗಿಸಲು ಸೋಲುತ್ತಾನೆ. ಬದುಕಿನ ಸರ್ಕಸ್‌ನಲ್ಲಿ ನಷ್ಟಕ್ಕೊಳಗಾಗುತ್ತಾನೆ. ಅಂದರೆ ಹಣಕಾಸಿನ ನಿರ್ವಹಣಾ ಜಾಣ್ಮೆಯ ಕುರಿತು ರೈತರಿಗೆ ಪ್ರತ್ಯೇಕ ಪಾಠ ಬೇಕು. ದುರಂತವೆಂದರೆ, ಕೃಷಿ ಪತ್ರಿಕೆಗಳು, ಪುಟಗಳು ಅತ್ತ ಗಮನಹರಿಸುವುದೇ ಇಲ್ಲ.
  ರೈತರು ಎಂದಮೇಲೆ ಅವರು ಗ್ರಾಮೀಣ ಪ್ರದೇಶದವರು ಎನ್ನುವುದು ಖಚಿತ. ಈ ಹಿನ್ನೆಲೆಯಲ್ಲಿ ಹಳ್ಳಿಗರಿಗೆ ಸಿಗುವ ಸವಲತ್ತುಗಳನ್ನು ರೈತರು ಸಮರ್ಥವಾಗಿ ಬಳಸಿಕೊಂಡರೆ ಅಷ್ಟರಮಟ್ಟಿಗೆ ಕಷ್ಟದ ಭಾರ ಕಡಿಮೆಯಾದೀತು ಅಥವಾ ಅನುಕೂಲ ಹೆಚ್ಚೀತು. ಈ ಕಂತಿನಲ್ಲಿ ಆ ನಿಟ್ಟಿನಲ್ಲಿ ಯೋಚನೆಗಳಿವೆ.
ಗ್ರಾಮೀಣ ಭಾಗದ ರೈತರಿಗೆ ಬಿಎಸ್‌ಎನ್‌ಎಲ್ ಸ್ಥಿರ ಅಥವಾ ವಿಲ್ ದೂರವಾಣಿ ಲಾಭಕರ. ಕೇವಲ 50 ರೂ. ತಿಂಗಳ ಬಾಡಿಗೆಗೆ 75 ಉಚಿತ ಕರೆ ಲಭ್ಯ. ಆ ಲೆಕ್ಕದಲ್ಲಿ 75 ಪೈಸೆಗೆ ಒಂದು ಕರೆ. ಇಂದು ಅಷ್ಟೂ ಮೊಬೈಲ್ ಕಂಪನಿಗಳು 50 ಪೈಸೆಗೇ ಕರೆ ಸೌಲಭ್ಯ ಒದಗಿಸುವಾಗ ಬಿಎಸ್‌ಎನ್‌ಎಲ್ ಫೋನ್ ನಷ್ಟ ಎನ್ನುವ ಮಾತಿದೆ. ನಿಜಕ್ಕೂ ಅದು ತಪ್ಪು. ಮೊಬೈಲ್‌ನಲ್ಲಿ ನಿಮಿಷಕ್ಕೊಂದು ಕರೆ ಲೆಕ್ಕ. ಸ್ಥಿರ ದೂರವಾಣಿಯಲ್ಲಿ ಒಂದು ಸ್ಥಳೀಯ ಕರೆಗೆ ಮೂರು ನಿಮಿಷದ ಅವಕಾಶ. ಅಷ್ಟೇಕೆ, ರಾಜ್ಯದ ಯಾವುದೇ ಸ್ಥಿರ ದೂರವಾಣಿ ಮತ್ತು ಬಿಎಸ್‌ಎನ್‌ಎಲ್ ಮೊಬೈಲ್‌ಗೆ  ಕರೆ ಮಾಡಿದರೂ ಎರಡು ನಿಮಿಷಕ್ಕೆ ಒಂದು ಕರೆ. ಯಾವುದೇ ನಿಟ್ಟಿನಿಂದ ನೋಡಿದರೂ ನಮ್ಮದೇ ಜವಾಬ್ದಾರಿಯಾಗಿರುವ, ಕಣ್ಣಿಗೆ ಕಾಣದೆ ಕರಗುವ ಕರೆನ್ಸಿಗಳ ಮೊಬೈಲ್‌ಗಿಂತ ಸ್ಥಿರ ಫೋನ್ ಅನುಕೂಲ.
ಹಲವೆಡೆ ಸಾವಿರ ಲೈನ್ ದಾಟಿದ ಎಕ್ಸ್‌ಚೇಂಜ್ ಎಂಬ ಕಾರಣಕ್ಕೆ ಈ ದೂರವಾಣಿ ಗ್ರಾಹಕರಿಗೆ 100ರೂ.ಗಳ ದುಬಾರಿ ಬಾಡಿಗೆ ವಿಧಿಸಲಾಗುತ್ತದೆ. ಅಂತಹ ಗ್ರಾಹಕ ರೈತರಿಗೂ ಕೂಡ ಒಂದು ವಿಶೇಚ ಅವಕಾಶವಿದೆ. ಅವರು ಲಿಖಿತ ಅರ್ಜಿ ಸಲ್ಲಿಸಿ ‘ಗ್ರಾಮೀಣ - 75’ನ್ನು ಆಯ್ದುಕೊಂಡರೆ ಬಾಡಿಗೆ ದರ 75ಕ್ಕೆ ಇಳಿಯಲಿದೆ. ಉಚಿತ ಕರೆಗಳ ಆಜುಬಾಜಿಂದ ತಿಂಗಳಿಗೆ 300 ಕರೆ ಮಾಡುವವರಿಗಂತೂ ಗ್ರಾಮೀಣ - 75 ಲಾಭದಾಯಕವೇ.
ಬಿಎಸ್‌ಎನ್‌ಎಲ್ ಈ ವರ್ಷದುದ್ದಕ್ಕೂ ಯುಎಸ್‌ಓ ಎಂಬ ಕೇಂದ್ರ ಸರ್ಕಾರದ ಸಹಾಯ ನಿಧಿಯನ್ನು ಬಳಸಿ ಹಲವು ಯೋಜನೆಗಳನ್ನು ಪ್ರಕಟಿಸುತ್ತದೆ. ಅದರಲ್ಲಿ, ಹತ್ತು ತಿಂಗಳ ಬಾಡಿಗೆಯನ್ನು ಒಮ್ಮೆಗೇ ಪಾವತಿಸಿದರೆ ಎರಡು ತಿಂಗಳ ಬಾಡಿಗೆಯಿಂದ ವಿನಾಯ್ತಿ ಸಿಗುತ್ತದೆ. ಮುಖ್ಯವಾಗಿ, ಒಂದು ವರ್ಷದ ಕಾಲದವರೆಗೆ ಯಾವುದೇ ಬಾಡಿಗೆ ಏರಿಕೆಗೆ ಸಂಭಾವ್ಯ  ಬಿಸಿ ಈ ಚಂದಾದಾರರನ್ನು ತಟ್ಟುವುದಿಲ್ಲ. ಈ ದಿನಗಳಲ್ಲಿ ರೈತರು ಕೇಳಿದ್ದಕ್ಕೂ , ಬಿಟ್ಟಿದ್ದಕ್ಕೂ ಬಡ್ಡಿ ಲೆಕ್ಕಾಚಾರ ಹಾಕುತ್ತಾರೆ. ಆ ನಿಟ್ಟಿನಲ್ಲಿ ಯೋಚಿಸಿದರೂ ಈ ಮುಂಗಡ ಬಾಡಿಗೆ ಪಾವತಿಯ ಮೊತ್ತಕ್ಕೆ ಶೇ.೨೦ರ ದರದಲ್ಲಿ ಬಡ್ಡಿ ಕೊಟ್ಟಂತಾಗುತ್ತದೆ! 
ಸ್ವಾರಸ್ಯವೆಂದರೆ, ತಿಂಗಳಿಗೆ150ಕ್ಕಿಂತ ಹೆಚ್ಚು ಕರೆ ಮಾಡುವ ಅಥವಾ 200 ರೂ.ಗಿಂತ ಹೆಚ್ಚಿನ ಬಿಲ್ ಪಡೆಯುವ ಗ್ರಾಮೀಣ ಚಂದಾದಾರ ಎರಡೆರಡು ಸ್ಥರ ದೂರವಾಣಿ ಅಳವಡಿಸಿಕೊಂಡರೇ ಆತನ ಬಿಲ್‌ನಲ್ಲಿ ಉಳಿತಾಯವಾಗುತ್ತದೆ! ಉಚಿತ ಕರೆ ನಂತರದ 50 ಕರೆಗಳ ದರ 80 ಪೈಸೆ ಮತ್ತು ಆನಂತರ ಒಂದು ರೂಪಾಯಿ. ಅಂದರೆ ತೆರಿಗೆ ಸೇರಿದ ಮೇಲೆ 86ಪೈಸೆಗಿಂತ ಕಡಿಮೆಗೆ ಕರೆ ಮಾಡಲಾಗದು. ಅದೇ ಎರಡು ಪ್ರತ್ಯೇಕ ಗ್ರಾಮೀಣ ದೂರವಾಣಿ ಸಂಪರ್ಕದಿಂದ ತಿಂಗಳಿಗೆ ತಲಾ 75ಕರೆಯಂತೆ ಖರ್ಚು ಮಾಡಿದರೂ ಒಂದು ಕರೆಗೆ ವೆಚ್ಚವಾಗುವುದು 74 ಪೈಸೆ. ಲಘುವಾಗಿ ಇದೊಂದು ಸರಳ ಲೆಕ್ಕಾಚಾರ, ಏನುಳಿದೀತು ಮಹಾ ಎನ್ನದಿರಿ. ಪ್ರತಿತಿಂಗಳುಉಳಿಯುವ 15-20 ರೂ. ಪರಿಣಾಮ ನಗಣ್ಯವಂತೂ ಅಲ್ಲ. ಒಂದಲ್ಲ ಒಂದು ಫೋನ್ ಕೆಟ್ಟರೂ ಪರ್ಯಾಯವಿರುವ ನಿಶ್ಚಿಂತೆ ಬೇರೆ. ಸ್ವತಃ ನಾನು ಈ ಸೂತ್ರವನ್ನು ಅನುಸರಿಸುತ್ತಿರುವುದರಿಂದಲೇ ಖಚಿತವಾಗಿ ಹೇಳಲು ಸಾಧ್ಯವಾಗಿದೆ.
ಇದರ ಹೊರತಾಗಿಯೂ ಹಲವು ಯೋಜನೆಗಳನ್ನು ಆಗಾಗ್ಗೆ ಬಿಎಸ್‌ಎನ್‌ಎಲ್ ಪ್ರಕಟಿಸುತ್ತಿರುತ್ತದೆ. ಆ ಸುದ್ದಿ ತಿಳಿಯಬೇಕೆಂಬ ಕುತೂಹಲ, ಆಯ್ದುಕೊಳ್ಳುವ ಚಾಕಚಕ್ಯತೆ ನಮ್ಮದಾಗಬೇಕು. ಕೆಲದಿನಗಳ ಹಿಂದೆ ಮಹಿಳೆಯರಿಗೆ ಶೇ.25 ರಿಯಾಯ್ತಿಯಲ್ಲಿ , ಠೇವಣಿ - ಸ್ಥಾಪನಾ ವೆಚ್ಚ ಕೂಡ ಇಲ್ಲದೆ ಹೊಸ ಫೋನ್ ಸಂಪರ್ಕ ನೀಡಲಾಗಿತ್ತು. ಅಂತೆಯೇ ಈಗ ರಾಜ್ಯದ ಹಲವಡೆ ಹಳ್ಳಿ ಗ್ರಾಹಕರಿಗಾಗಿ ಪ್ರಕಟಗೊಂಡಿರುವ ಹೊಸ ಯೋಜನೆಯ ಪ್ರಕಾರ, 250ರೂ. ಕಟ್ಟಿದರೆ ಎರಡು ವರ್ಷ ಯಾವುದೇ ಬಾಡಿಗೆ ಇಲ್ಲದೆ, ಆರಂಭೀ ಠೇವಣಿ, ಸ್ಥಾಪನಾ ವೆಚ್ಚ ಇಲ್ಲದ ಹೊಸ ಫೋನ್‌ನ್ನು ಬಿಎಸ್‌ಎನ್‌ಎಲ್ ನೀಡುತ್ತಿದೆ. ಯೋಜನೆ ಮಾರ್ಚ್ 15ಕ್ಕೆ ಕೊನೆಗೊಳ್ಳಲಿದೆ. ಗಮನಿಸಬೇಕಾದುದೆಂದರೆ, ಇಂತಹ ಹಳ್ಳಿಗರಿಗೆ ಲಾಭದಾಯಕ ಯೋಜನೆಗಳು 2009ರ ತುದಿಯವರೆಗೂ ಒಂದಲ್ಲಾ ಒಂದು ಚಾಲ್ತಿಗೆ ಬರುತ್ತವೆ. ನಾವು, ಹಳ್ಳಿಗರು ಹತ್ತಿರದ ಬಿಎಸ್‌ಎನ್‌ಎಲ್ ಕಛೇರಿಯನ್ನು ಸಂಪರ್ಕಿಸುತ್ತಿರಬೇಕು ಅಥವಾ ಇಂಟರ್‌ನೆಟ್‌ನಲ್ಲಿ ಬಿಎಸ್‌ಎನ್‌ಎಲ್ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು. ಇನ್ನೂ ಸರಳ ವಿಧಾನವೆಂದರೆ, 1500 ಎಂಬ ದೂರವಾಣಿಗೆ ಕರೆ ಮಾಡಿ ವಿಚಾರಿಸಬಹುದು. ಈ ಸಂಖ್ಯೆಗೆ ಯಾವುದೇ ಕರೆ ವೆಚ್ಚ ಇಲ್ಲ.
ಈ ಕರೆ, ಕರೆ ವೆಚ್ಚ, ಪಲ್ಸ್ ದರ ಇಂತಹ ಮೂಲಭೂತ ಮಾಹಿತಿಗಳನ್ನು ನಾವು ಅರಿತುಕೊಳ್ಳಬೇಕು. ಎಲ್ಲಿಗೆ ಕರೆ ಮಾಡಿದರೆ ಎಷ್ಟು ದರ ಬಿದ್ದೀತು ಎಂಬ ಅರಿವಾದರೂ ನಮ್ಮಲ್ಲಿರಬೇಕು. ಒಟ್ಟಾರೆ ಕರೆ ಮಾಡುತ್ತ ಹೋಗುವ ಬದಲು, ಬಿಎಸ್‌ಎನ್‌ಎಲ್‌ನ 1962ಗೆ ಡಯಲ್ ಮಾಡಿ ನಮ್ಮ ಬಿಲ್ ಮೀಟರ್ ಎಷ್ಟಾಗಿದೆ ಎಂಬ ದಾಖಲೆಯನ್ನು ಪಡೆಯಬಹುದು. ಇದೂ ಉಚಿತ ದೂರವಾಣಿ.
ರೈತನ ಬದುಕಿನಲ್ಲಿ ಇಂತಹ ಅರಿವು, ಉಳಿತಾಯಗಳು ಅವನ ಅಭಿವೃದ್ಧಿಗೆ ಪೂರಕವಾಗಬಹುದೇ? ಚರ್ಚೆಯಾಗಲಿ.

-ಮಾವೆಂಸ 
ಇಲ್ಲಿನ ಮಾಹಿತಿಗಳ ಬಗ್ಗೆ  ವಿವರ ಬೇಕಿದ್ದರೆ ಸಂಜೆ 8ರ ನಂತರ ಸಂಪರ್ಕಿಸಬಹುದು. ಫೋನ್-08183 236068, 296543, 9886407592  ಇ ಮೇಲ್- mavemsa@gmail.com

Sunday, March 8, 2009

ಮಾಡಿ ನೋಡಿ ಮಿನಿ-ಡೈಜೆಸ್ಟರ್


ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದ ಡೈಜೆಸ್ಟರ್‌ ಒಂದನ್ನು ಉಪಯೋಗಿಸುತ್ತಿದ್ದಾರೆ, ಬೆಂಗಳೂರು ಸಮೀಪದ ಮರಸರಹಳ್ಳಿಯ ಸಾವಯವ ಕೃಷಿಕ ಎನ್‌. ಆರ್‌. ಶೆಟ್ಟಿ. ಎರೆಡು ಎಕರೆಯ ಸಣ್ಣ ಕೃಷಿ ಕ್ಷೇತ್ರ. ಜೀವ ವೈವಿಧ್ಯ ತುಂಬಿದ, ನೂರಾರು ಮರಗಳಿರುವ ಕೃಷಿ ಭೂಮಿ. ಕೆಂಪು ಚೆರ್ರಿ, ದಾಳಿಂಬೆ, ಸೀತಾಫಲ, ನೆಲ್ಲಿ ಮೊದಲಾದ ಹಣ್ಣಿನ ಗಿಡಗಳು, ರಾಗಿ, ತೊಗರಿ, ಅವರೆ ಮುಂತಾದ ಮಳೆ ಆಶ್ರಿತ ಬೆಳೆಗಳು. ತರಕಾರಿಗಾಗಿ ಏರುಮಡಿಗಳು. ಇದು ಶೆಟ್ಟಿಯವರ ಕನಸಿನ ನವ ನಂದನ.
ಎಲ್ಲಾ ಸಾವಯವ ಕೃಷಿಕರ ಬಾಯಲ್ಲೂ ಡೈಜೆಸ್ಟರ್‌ ಸುದ್ದಿ. ಬೆಳಗಾಂನ ಕೃಷಿಕರೊಬ್ಬರು ತೊಟ್ಟಿ ಕಟ್ಟಿ ಅದರಲ್ಲಿ ಕೃಷಿತ್ಯಾಜ್ಯಗಳು, ಹೊಂಗೆ ಎಲೆ, ಬೇವಿನ ಎಲೆಗಳು, ಗ್ಲಿರಿಸೀಡಿಯ, ಮೇಲಿನಿಂದ ಸಗಣಿ ಗಂಜಲಗಳ ಮಿಶ್ರಣ ಹಾಕಿ ಚೆನ್ನಾಗಿ ಕಳೆಯಿಸಿ ಗೊಬ್ಬರ ಮಾಡುತ್ತಾರಂತೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಹಲವರು ಅದನ್ನು ನೋಡಿಬರಲೂ ಉತ್ಸುಕತೆ ತೋರಿದರು.
ಶೆಟ್ಟಿ ದಂಪತಿಗಳಿಗೂ ಅದನ್ನು ನೋಡಿ ಬಂದ ನಂತರ ಹಗಲೂ ರಾತ್ರೆ ಅದರದ್ದೇ ಚಿಂತೆ. ಆದರೆ ಮಾಡುವುದೇನು? ಆ ಡೈಜೆಸ್ಟರ್‌ ಭಾರಿ ದೊಡ್ಡದು, ಹತ್ತಿಪ್ಪತ್ತು ಎಕರೆ ಇರುವಂತಹವರಿಗೆ ಸರಿ. ಎರೆಡೆಕರೆ ಕೃಷಿಭೂಮಿಗೆ ಹೇಗೆ? ಏನಾದರೂ ಮಾಡಲೇಬೇಕೆಂಬ ತವಕ. ಮನಸ್ಸೊಂದಿದ್ದರೆ ಮಾರ್ಗ ತಾನೇ ತೆರೆದುಕೊಳ್ಳುವುದಂತೆ. ಶೆಟ್ಟಿಯವರೂ ಇದಕ್ಕೆ ಹೊರತಲ್ಲವಲ್ಲ.
ಶೆಟ್ಟಿಯವರು ಮಾಡಿದ್ದೂ ಅದನ್ನೇ! ಸಿಮೆಂಟಿನ ಕುಂಡಗಳನ್ನು ಮಾಡುವವರನ್ನು ವಿಚಾರಿಸಿದರು. ಕೆಳಭಾಗದಲ್ಲಿ ಸಣ್ಣ ತೂತಿರುವಂತೆ ಎರೆಡು ತೊಟ್ಟಿಗಳು ಸಿದ್ದವಾದವು. ಮೂರನೆಯ ತೊಟ್ಟಿಗೆ ತೂತಿಲ್ಲ. ಮೊದಲೆರಡು ತೊಟ್ಟಿಗಳ ತಳಭಾಗದಲ್ಲಿ ದಪ್ಪ ಜಲ್ಲಿ ಹರಡಿದರು. ಅದರ ಮೇಲೆ ಸಣ್ಣ ಬಟಾಣಿ ಜಲ್ಲಿ, ಅದರ ಮೇಲೆ ಮರಳು. ಮರಳಿನ ಮೇಲೊಂದು ಪ್ಲಾಸ್ಟಿಕ್‌ ಮೆಶ್‌. ಅದರ ಮೇಲೆ ಕೃಷಿ ತ್ಯಾಜ್ಯ, ಮೇಲೆ ಸಗಣಿ ಗಂಜಲಗಳ ಮಿಶ್ರಿತ ದ್ರಾವಣ.
ಮೊದಲ ತೊಟ್ಟಿಯಲ್ಲಿಳಿದ ಕಶಾಯ ಎರಡನೆಯ ತೊಟ್ಟಿಗೆ ಬೀಳಬೇಕು. ಅಂದರೆ ಮೊದಲನೆಯ ತೊಟ್ಟಿ ಸ್ವಲ್ಪ ಎತ್ತರದಲ್ಲಿರಬೇಕು. ಆಲೋಚನೆ ಬಂದಿದ್ದೇ ತಡ, ಕಲ್ಲು ಮಣ್ಣು ಸೇರಿಸಿ ನೆಲ ಎತ್ತರಿಸಿ ಸಮತಟ್ಟು ಮಾಡಿದರು. ಇಲ್ಲಿ ಮೊದಲ ತೊಟ್ಟಿ ಇಟ್ಟರು. ಕೆಳಗಿನ ತೂತಿಗೆ ಒಂದು ಕೊಳವೆ ಜೋಡಿಸಿ ಅದು ಸೋರದಂತೆ ಸಿಮೆಂಟಿನಿಂದ ಭದ್ರ ಪಡಿಸಿದರು. ಆ ಕೊಳವೆಯಿಂದ ಬರುವ ದ್ರಾವಣ ಎರಡನೆಯ ತೊಟ್ಟಿಯ ಮೇಲ್ಭಾಗದಲ್ಲಿ ಬೀಳುವ ಹಾಗಿರಬೇಕು. ಅದಕ್ಕೆ ಸರಿಹೊಂದುವ ಎತ್ತರದಲ್ಲಿ ಎರಡನೆಯ ತೊಟ್ಟಿ ಇಟ್ಟರು. ಅದರ ತಳದ ಕೊಳವೆಯಿಂದ ಬಂದ ನೀರು ಮೂರನೆಯ ತೊಟ್ಟಿಗೆ.
ಎರೆಡೂ ತೊಟ್ಟಿಗಳಲ್ಲಿ ಶೋಧಕಗಳಿರುವುದರಿಂದ ಮೂರನೆಯ ತೊಟ್ಟಿಯಲ್ಲಿರುವ ದ್ರಾವಣದಲ್ಲಿ ಕಸ ಕಡ್ಡಿಗಳಿರುವುದಿಲ್ಲ. ಸಿಂಪರಣೆಗೆ ಸಹ ಸೂಕ್ತ.
ಕಾರ್ಯವೈಖರಿ: ಮೊದಲ, ಮೇಲಿನ ತೊಟ್ಟಿಯಲ್ಲಿ ಕೃಷಿತ್ಯಾಜ್ಯ, ಸಗಣಿ ಬಗ್ಗಡ, ಗಂಜಲ ಎಲ್ಲವನ್ನೂ ಚೆನ್ನಾಗಿ ಬೆರೆಸಿ ಹಾಕಬೇಕು. ನಂತರ ತೊಟ್ಟಿಯ ಅಳತೆಗನುಸಾರವಾಗಿ ನೀರನ್ನು ಹಾಕಿ ಕಲಕಬೇಕು. ( ತೊಟ್ಟಿಗಳನ್ನು 5ಲೀ, 10ಲೀ, 15ಲೀ ಅಳತೆಗೆ ಮಾಡಿಸಬಹುದು.)ಪ್ರತಿ ದಿನ ಬೆಳಗ್ಗೆ ಸಾಯಂಕಾಲ ಕಲಕಬೇಕು. ಮೊದಲಬಾರಿ ಹಾಕಿದಾಗ 8ದಿನ ಕಳಿಯಲು ಬಿಡಬೇಕು. ಅಲ್ಲಿಯವರೆಗೆ ಕೊಳವೆಯ ಬಾಯಿ ಮುಚ್ಚಿರ ಬಹುದು. ನಂತರ ಅದನ್ನು ತೆಗೆದಾಗ ಮೇಲಿನ ತೊಟ್ಟಿಯ ದ್ರಾವಣ ನಿಧಾನವಾಗಿ ಶೋಧಕದೊಳಕ್ಕಿಳಿದು ಎರಡನೆಯ ತೊಟ್ಟಿಗೆ ಬೀಳಲಾರಂಭಿಸುತ್ತದೆ. ಅಲ್ಲಿಯೂ ಮರಳು ಜಲ್ಲಿ ಇರುವುದರಿಂದ ಮತ್ತೊಂದು ಬಾರಿ ಸೋಸಿಕೊಂಡು 3ನೆಯ ಸಂಗ್ರಹಣಾ ತೊಟ್ಟಿಗೆ ಬೀಳುತ್ತದೆ. ಈ ದ್ರಾವಣಕ್ಕೆ 1;10ರ ಅನುಪಾತದಲ್ಲಿ ನೀರು ಬೆರೆಸಿ ಸಿಂಪರಣೆ ಮಾಡಬಹುದು.
ಶೆಟ್ಟಿಯವರ ತೋಟದಲ್ಲಿ ಮರಗಳು ಇರುವುದರಿಂದ ಪ್ರತಿ ಗಿಡದ ಬುಡಕ್ಕೆ ಒಂದು ಲೀಟರ್‌ ದ್ರಾವಣ ಹಾಕುತ್ತಾರೆ. ಸಿಂಪರಣೆ ಮಾಡುವುದಾದರೆ 1/4ಎಕರೆ ಪ್ರದೇಶಕ್ಕೆ ಇಷ್ಟು ದ್ರಾವಣ ಸಾಕು ಎನ್ನುವುದು ಶೆಟ್ಟಿಯವರ ಅನಿಸಿಕೆ. ಆಶ್ಯಕತೆಗೆ ಅನುಸಾರವಾಗಿ ಮೇಲಿನ ತೊಟ್ಟಿಗೆ ನೀರು ಹಾಕಬೇಕು.
300ರೂ ನಿಂದ 500ರೂ ಖರ್ಚಿನಲ್ಲಿ 3 ತೊಟ್ಟಿಗಳನ್ನು ಮಾಡಿಸಬಹುದು. ದೊಡ್ಡ ಡೈಜೆಸ್ಟರ್‌ಗೆ 30ರಿಂದ 40ಸಾವಿರ ರೂಗಳು ಬೇಕಾದೀತು. ಅಲ್ಲದೆ ನಾವು ಖರ್ಚುಮಾಡಿದ ನಂತರವೇ ಸರ್ಕಾರದಿಂದ ಸಬ್ಸಿಡಿ ದೊರಕುವುದು. ಸಣ್ಣ ಹಿಡುವಳಿದಾರರಿಗೆ ಈ ಮಿನಿ ಡೈಜೆಸ್ಟರ್‌ ಸೂಕ್ತ. ಸಾಲದ ಹಂಗಿಲ್ಲ, ಸಬ್ಸಿಡಿಗಾಗಿ ಅಲೆದಾಡಬೇಕಿಲ್ಲ. ಯಾರು ಬೇಕಾದರೂ ಮಾಡಿಕೊಳ್ಳಬಹುದಾದ ಮಿನಿ ಡೈಜೆಸ್ಟರ್‌ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು. ಎನ್‌.ಆರ್‌. ಶೆಟ್ಟಿ. 23330999.

-ಅನುಸೂಯ ಶರ್ಮ

Tuesday, March 3, 2009

ಬಯೋ ಅನಿಲ ಸ್ಥಾವರ ರೈತಗೆ ವರ, ಸಬ್ಸಿಡಿಗೆ ಬರ!


ಕೃಷಿಕರಿಗಾಗಿ ರೂಪಿಸಾಗಿರುವ ರಾಷ್ಟ್ರೀಯ ತೋಟಗಾರಿಕಾ ಸಹಾಯಧನ ಯೋಜನೆ ಸಾರ್ಥಕ ಕ್ರಮಗಳಲ್ಲೊಂದು. ಇದನ್ನು ದೊಡ್ಡ ಸಂಖ್ಯೆಯ ರೈತರು ಬಳಸಿಕೊಂಡು ಶೇ. 50ರಷ್ಟು ಸಹಾಯಧನ ಪಡೆದಿದ್ದಾರೆ. ಈ ಸಹಾಯಧನ ಯೋಜನೆಯ ವ್ಯಾಪ್ತಿಯಲ್ಲಿ ಎರೆಗೊಬ್ಬರ ತಯಾರಿ ಸ್ಥಾವರ ಮತ್ತು ಬಯೋ ಡೈಜಸ್ಟರ್‌ನ್ನು ಸೇರಿಸಲಾಗಿದೆ. ರೈತರ ಬದುಕಿಗೆ ತುಂಬಾ ಪೂರಕವಾಗಿರುವ, ಮುಖ್ಯವಾಗಿ ಪರಿಸರ ರಕ್ಷಣೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುತ್ತಿರುವ ಬಯೋ ಅನಿಲ ಸ್ಥಾವರ ನಿರ್ಮಾಣವನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸದೆ ಇರುವುದು ದುರಂತವೇ ಸರಿ.
ನಿಜಕ್ಕೂ ಎಲ್ಲಿ ಅನ್ಯಾಯವಾಗಿದೆ ಎಂಬ ಅರಿವಿಗಾಗಿಯೇ ಇಲ್ಲಿ ಬಯೋ ಅನಿಲ ಸ್ಥಾವರದ ಅನುಕೂಲಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ. ಪ್ರತಿಯೊಬ್ಬ ರೈತ ಕೃಷಿಯೊಂದಿಗೆ ಪಶುಸಂಗೋಪನೆಯನ್ನೂ ಸಾಮಾನ್ಯವಾಗಿ ನಡೆಸುವುದರಿಂದ ಬಯೋ ಅನಿಲಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಯಾದ ಸಗಣಿ ಆತನಲ್ಲೇ ಲಭ್ಯವಿರುತ್ತದೆ. ಬಯೋ ಅನಿಲವು ಒಂದು ಶಕ್ತಿ ರೂಪದಲ್ಲಿ ಲಭ್ಯವಾಗುವುದರಿಂದ ಹಲವು ಯಾಂತ್ರಿಕ ಸಲಕರಣೆಗಳಿಗೆ ಇಂಧನವಾಗಿ ಬಳಕೆಯಾಗುತ್ತಿದೆ.
ಪ್ರಮುಖವಾಗಿ ಬಯೋ ಅನಿಲದ ಬಳಕೆ ಅಡುಗೆ ಮನೆಯಲ್ಲಿ. ಆಹಾರ ಬೇಯಿಸಲು ನಾವು ಬಳಸುವ ಕಟ್ಟಿಗೆ, ವಿದ್ಯುತ್‌ ಹೀಟರ್‌, ಎಲ್‌ಪಿಜಿ ಗ್ಯಾಸ್‌ಗೆ ಅತ್ಯುತ್ತಮ ಪರ್ಯಾಯವಿದು. ಅಂದರೆ ಬಯೋ ಅನಿಲ ಸ್ಥಾವರಗಳಿಗೆ ಸಬ್ಸಿಡಿ ನೀಡಿ ಉತ್ತೇಜಿಸುವುದು ಸರ್ಕಾರದ ದೃಷ್ಟಿಯಿಂದ ದೂರಗಾಮಿ ಸಫಲತೆಗೆ ಅಡಿಪಾಯವಾಗುತ್ತದೆಂದು ದೃಢವಾಗಿ ಹೇಳಬಹುದು.
ಅಡುಗೆ ಅನಿಲ, ಸೀಮೆಎಣ್ಣೆ, ವಿದ್ಯುತ್‌ಗಳಲ್ಲಾಗುವ ಉಳಿತಾಯದ ಲಾಭ ಸರ್ಕಾರದ ಖಜಾನೆಗೆ. ಇಂದು 26 ಸಾವಿರ ಕೋಟಿ ರೂ.ಗಳ ವಾರ್ಷಿಕ ಸಬ್ಸಿಡಿಯನ್ನು ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತದೆ ಎನ್ನುವುದನ್ನು ಗಮನಿಸಿದರೆ, ಬಯೋ ಅನಿಲ ಸ್ಥಾವರಕ್ಕೆ ಸರ್ಕಾರ ಸಹಾಯಧನ ನೀಡಿ ಉತ್ತೇಜಿಸಿದರೆ, ಆಗುವ ಬದಲಾವಣೆಯನ್ನು ಕ್ರಾಂತಿಕಾರಕ ಎಂದರೆ ಉತ್ಪ್ರೇಕ್ಷೆಯೇನಿಲ್ಲ.
ಬಯೋ ಅನಿಲದಿಂದ ಫ್ರಿಜ್‌ ನಿರ್ವಹಿಸುವ ತಾಂತ್ರಿಕತೆ ಯಶಸ್ವಿಯಾಗಿದೆ. ಶಿರಸಿ ತ್ಯಾಗಲಿಯ ಸುಬ್ರಾಯರು ಹಿಂದೆ ಹಡಗಿನಲ್ಲಿದ್ದ ಫ್ರಿಜ್‌ ಒಂದನ್ನು ತಂದು ಅದನ್ನು ಬಯೋ ಅನಿಲದಲ್ಲಿ ದುಡಿಸಿದ್ದರು. ಅದರ ವ್ಯಾಪಕ ಬಳಕೆ ಇನ್ನಷ್ಟೇ ಆಗಬೇಕಿದೆ. ಇತ್ತೀಚೆಗೆ ಎಲ್‌ಪಿಜಿ ಬಳಸಿ ನೀರು ಕಾಯಿಸುವ ಯಂತ್ರ ಬಂದಿದೆಯಷ್ಟೆ. ಅದರಲ್ಲಿ ಕೆಲ ತಾಂತ್ರಿಕ ಪರಿವರ್ತನೆ ಮಾಡಿ ಎಲ್‌ಪಿಐ ಬದಲು ಬಯೋ ಅನಿಲ ಬಳಸುವ ತಂತ್ರ ನೂರಕ್ಕೆ ನೂರು ಸಫಲವಾಗಿದ್ದು, ಈಗಾಗಲೇ ಕೃಷಿಕರನ್ನು ಆಕರ್ಷಿಸಿದೆ. ಇದರಿಂದ ದೀಪ ಬೆಳಗಿಸುವ ಸಾಧನವಂತೂ ಹಿಂದಿನಿಂದ ಜಾರಿಯಲ್ಲಿದೆ.
ಬಯೋ ಅನಿಲದಿಂದ ನೀರಾವರಿ ಪಂಪ್‌ ನಡೆಸಬಹುದಾದ ವ್ಯವಸ್ಥೆಯನ್ನು ಜಾರಿಗೊಳಿಸಲು ಸಾಧ್ಯವಿದೆ. ಕಳೆದ ಕೆಲವು ವರ್ಷಗಳಿಂದ ಸುಸೂತ್ರವಾಗಿ ರೈತರು ಇದನ್ನು ಬಳಸುತ್ತಿರುವುದೇ ಸಫಲತೆಗೆ ಸಾಕ್ಷಿ ಎನ್ನಬಹುದೇನೋ.
ನಾಣ್ಯದ ಇನ್ನೊಂದು ಮಗ್ಗುಲನ್ನೂ ಇಲ್ಲಿಯೇ ವಿವರಿಸಬೇಕು. ಈಗಾಗಲೇ ಬಯೋ ಅನಿಲ ಸ್ಥಾವರ ಮಾಡಿಕೊಂಡವರು ದೈನಂದಿನ ಅಡುಗೆಗೆ ಸಾಕಷ್ಟು ಅನಿಲ ದೊರಕದೆ ಬಳಲುತ್ತಿದ್ದಾರೆ. ಇದು ಬಯೋ ಅನಿಲ ಸ್ಥಾವರ ಸ್ಥಾಪನೆಯನ್ನು ನಿರುತ್ತೇಜಿಸಿದೆ. ವಾಸ್ತವ ಬೇರೆ. ತಪ್ಪು ಬಯೋ ಅನಿಲದಲ್ಲ, ಕಚ್ಚಾ ವಸ್ತುಗಳದ್ದಲ್ಲ. ದೀನಬಂಧು, ಕಾಮಧೇನು ತೇಲುವ ಫೈಬರ್‌ ಡ್ರಮ್‌ ಮುಂತಾದ ಈ ಹಿಂದಿನ ಸ್ಥಾವರದ ಮಾದರಿಗಳಲ್ಲಿಯೇ ದೋಷವಿದೆ. ಇವುಗಳಲ್ಲಿ ಶೇ.100ರಲ್ಲಿ ಬಯೋ ಅನಿಲ ಉತ್ಪತ್ತಿಯಾಗದಿರುವುದರಿಂದಲೇ ಗ್ರಾಹಕ ಕಡಿಮೆ ಅನಿಲ ಲಭ್ಯತೆಗೆ ತೃಪ್ತಿಪಡುವಂತಾಗಿದೆ. ಆದರೆ ಇದೀಗ ಶಿವಮೊಗ್ಗ ಸಾಗರದ ವೀ.ನಾ.ಕೃಷ್ಣಮೂರ್ತಿಯವರು ವಿನ್ಯಾಸಗೊಳಿಸಿರುವ ಅಕ್ಷಯ ಜೈವಿಕ ಅನಿಲ ಯಂತ್ರ ಸ್ಥಾವರ ಪರಿಹಾರವೆನ್ನಬಹುದು. ಕೇವಲ ಒಂದು ಬುಟ್ಟಿ ಸಗಣಿ, ಇತರ ಕಚ್ಚಾವಸ್ತು ಬಳಸಿದರೆ ಸಾಕು, ಐದು ಜನರ ಒಂದು ಕುಟುಂಬ ಅಡುಗೆಯ ಇಂಧನದ ಸಮಸ್ಯೆ `ಅಕ್ಷಯದಲ್ಲಿ ಹುಟ್ಟುವುದಿಲ್ಲ.
ಬಯೋ ಡೈಜೆಸ್ಟರ್‌ಗಿಂತ ಅನಿಲ ಸ್ಥಾವರ ಹೆಚ್ಚು ಉಪಯೋಗಿ. ಡೈಜಿಸ್ಟರ್‌ನಲ್ಲಿ ದ್ರಾವಣ (ಡಿಕಾಕ್ಷನ್‌) ಮಾತ್ರ ಲಭ್ಯ. ಇದರಲ್ಲಿ ಉತ್ಪತ್ತಿಯಾಗುವ ಮಿಥೇನ್‌ ಅನಿಲ ವ್ಯರ್ಥವಾಗಿ ವಾಯುಮಂಡಲವನ್ನು ಸೇರುತ್ತದೆ. ವಾಸ್ತವವಾಗಿ, ಮಿಥೇನ್‌ ಅನಿಲ ಪರಿಸರಕ್ಕೆ ಬೆರೆಯುವುದು. ಕ್ಷೇಮವಲ್ಲ. ಬಯೋಗ್ಯಾಸ್‌ ಶಕ್ತಿಯ ಮೂಲವಾದುದರಿಂದ ಯಾವುದೇ ಸಂದರ್ಭದಲ್ಲಿ ಇದನ್ನು ವಿದ್ಯುತ್‌ನ್ನಾಗಿಯೂ ಪರಿವರ್ತಿಸಿಕೊಳ್ಳಬಹುದು.
ಪ್ರಸ್ತುತ ಬೇರೊಂದು ಯೋಜನೆಯಡಿ ಗೋ ಅನಿಲ ಸ್ಥಾವರಕ್ಕೆ ಐದು ಸಾವಿರ ರೂ.ಗಳ ಸಬ್ಸಿಡಿ ಸಿಕ್ಕೀತು ಎಂದು ಕೇಳಿದ್ದೇವೆ. ಪ್ಲಾಂಟ್‌ ಬಗ್ಗೆ ಯಾವುದೇ ಷರತ್ತುಗಳಿಲ್ಲದಿರುವುದರಿಂದ ಇದೊಂದು ಅಸಮರ್ಪಕ ಕ್ರಮ. ಮೊತ್ತವೂ ತುಂಬಾ ಕನಿಷ್ಟವಾಗಿದೆ. ಹಾಗಾಗಿ ಎನ್‌ಹೆಚ್‌ಬಿ ಮೂಲಕ ಇದನ್ನು 30 ಸಾವಿರ ರೂ.ಗಳ ಸಹಾಯಧನದ ವ್ಯಾಪ್ತಿಗೆ ಸೇರಿಸಿದರೆ ಅಷ್ಟರಮಟ್ಟಿಗೆ ರೈತರಿಗೇ ಅನುಕೂಲವಾಗುತ್ತದೆ.
ಇದೀಗ ರಾಜ್ಯದಲ್ಲಿ ಚಾಲ್ತಿಗೆ ಬಂದಿರುವ ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷರಾದ ಆ.ಶ್ರೀ. ಆನಂದ್‌, ಸರ್ಕಾರದ ಅಧಿಕಾರಿಗಳು, ವಿಜ್ಞಾನಿಗಳಲ್ಲಿ ರಾಷ್ಟೀಯ ತೋಟಗಾರಿಕಾ ಯೋಜನೆಯ ವ್ಯಾಪ್ತಿಯಲ್ಲಿ ಬಯೋ ಅನಿಲ ಸ್ಥಾವರ ಯೋಜನೆಯನ್ನು ಸೇರಿಸಲು ರೈತ ಸಮುದಾಯದ ಪರವಾಗಿ ಕಾರ್ಯೋನ್ಮುಖರಾಗಬೇಕಾದುದು ಇಂದಿನ ಅಗತ್ಯವಾಗಿದೆ.
ಮಾವೆಂಸ