Sunday, May 31, 2009

ನುಗ್ಗಿ ನುಗ್ಗೆ ಬೆಳೆದರು



ಪ್ರಕಟಗೊಳ್ಳುವ ರೈತ ಯಶಸ್ಸಿನ ಕತೆಗಳಲ್ಲಿ ಸತ್ಯದ ಜೊತೆಗೆ ಸುಳ್ಳಗಳೂ ತೂರಿರುತ್ತವೆ ಎಂಬ ಆರೋಪವಿದೆ. ಅವರ ಯಶಸ್ಸನ್ನು ಪ್ರಭಾವಯುತಗೊಳಿಸಲು ಅತಿರಂಜಿತ ಅಂಕಿಅಂಶಗಳನ್ನು ಬಳಸಲಾಗುವುದೇ ಅಂತಹ ಒಂದು ಸಾಧ್ಯತೆ. ವಾಸ್ತವವಾಗಿ ಓದುಗ ರೈತರು ಅಂತಹ ಸಫಲತೆಯ ಉದಾಹರಣೆಯ ಗೆಲುವಿನ ಸೂತ್ರಗಳನ್ನು ಪರಿಗಣಿಸುವುದೇ ಹೆಚ್ಚು ಸೂಕ್ತವಾದೀತು. ಅಂದರೆ ಇಂತಹ ರೈತ ಯಶಸ್ಸಿಗೆ ಏನು ಕ್ರಮ ಕೈಗೊಂಡಿದ್ದಾನೆ ಎಂಬುದನ್ನು ಅರ್ಥೆಸಿಕೊಳ್ಳಬೇಕು.
ಇಲ್ಲಿ ಪ್ರಸ್ತಾಪಿಸುತ್ತಿರುವುದು ತಮಿಳುನಾಡಿನ ರೈತನ ಒಂದು ಯಶಸ್ಸಿನ ಕತೆ. ಬೆಳೆದದ್ದು ನುಗ್ಗೇಕಾಯಿ. ವಾರ್ಷಿಕ ಆದಾಯ ಆರು ಲಕ್ಷ ರೂಪಾಯಿ! ಅತಿರಂಜಿತವೆನ್ನಿಸುತ್ತದಾದರೆ ಅಂಕಿಅಂಶಗಳ ಗೋಜಲನ್ನು ಬಿಡಿ, ಆತನ ಯಶಸ್ಸಿನ ಹೆಜ್ಜೆಗಳನ್ನಷ್ಟೇ ಅನುಸರಿಸಿ.
ಅಲಾಗರ ಸ್ವಾಮಿ ತಮಿಳುನಾಡಿನ ದಿಂಡಿಗಲ್‌ನವರು. ಕಲಾವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು. ಅವರಿಗೆ 10 ಎಕರೆ ಜಮೀನು ಇತ್ತಾದರೂ ಬೇರೆಡೆ ಉದ್ಯೋಗ ಸಿಕ್ಕದ್ದು ಹಾಗೂ ಕ್ರಿಯಾತ್ಮಕ ಚಟುವಟಿಕೆಯ ಪ್ರವೃತ್ತಿ ಅವರನ್ನು ಸಾಧಕನಾಗಲು ಪ್ರೇರೇಪಿಸಿತು. ಆ ಸಮಯದಲ್ಲಿ ಹತ್ತೆಕರೆ ಜಮೀನೇ ಅವರ ಪ್ರಯೋಗಾಲಯವಾಯಿತು.
ಸ್ವಾಮಿ ತಮ್ಮದೇ ಆದ ನುಗ್ಗೆ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ ಪಿಎವಿಎಂ ಎನ್ನುವ ಹೆಸರನ್ನು ಕೊಟ್ಟಿದ್ದಾರೆ. ಇದನ್ನು ಅಭಿವೃದ್ಧಿಪಡಿಸಲು ಬಳಸಿದ ಮೂಲ ಮಾದರಿಯನ್ನು ಗುಪ್ತವಾಗಿಡಲಾಗಿದೆ. ಏತಕ್ಕಪ್ಪಾಂದರೆ, ಇಂದು ಅಲಾಗರ ಸ್ವಾಮಿಯವರ ದುಡಿಮೆಯ ದೊಡ್ಡ ಪಾಲು ಬರುವುದು ಈ ತಳಿಯ ನುಗ್ಗೆ ನರ್ಸರಿಯಿಂದ!
ಪಿಎವಿಎಂ ತಳಿ ವರ್ಷದ 8-9 ತಿಂಗಳು ಇಳುವರಿ ನೀಡುವುದು ವಿಶೇಷ. ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಇದಕ್ಕೆ ಕಡಿಮೆ ನೀರು ಸಾಕು. ನೆಲಕ್ಕೆ ನಾಟಿ ಮಾಡಿದ ಐದು ಅಥವಾ ಆರನೇ ತಿಂಗಳಿನಿಂದಲೇ ಪೈರು ಬರಲಾರಂಭಿಸುತ್ತದೆ. ಎರಡನೇ ವರ್ಷದಿಂದಲೇ ಒಂದು ಗಿಡದಿಂದ ಒಂದೂವರೆಯಿಂದ ಎರಡು ಕ್ವಿಂಟಾಲ್‌ ನುಗ್ಗೇಕಾಯಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಸಾವಯವ ಕ್ರಮದಲ್ಲಿ ಬೆಳೆದರಂತೂ ಪ್ರತಿ ನುಗ್ಗೇಕಾಯಿ 200 ಗ್ರಾಂಗಳಷ್ಟು ತೂಗಿದ್ದಿದೆ. ಅಷ್ಟೇಕೆ, ಹೆಚ್ಚು ಕಡಿಮೆ ಒಂದು ವಾರ ಕಾಲ ತಾಜಾವಾಗಿಯೇ ಉಳಿಯುತ್ತದೆಂದರೆ....
ಒಂದು ಎಕರೆ ನುಗ್ಗೇ ಕೃಷಿಯಿಂದ ವಾರ್ಷಿಕ 20 ಟನ್‌ ನುಗ್ಗೇಕಾಯಿ ಬೆಳೆಯಬಹುದು ಎಂದು ಲೆಕ್ಕಿಸುತ್ತಾರೆ ಅಲಾಗರ ಸ್ವಾಮಿ. ಒಂದು ಎಕರೆಯಲ್ಲಿ 200 ನುಗ್ಗೆ ಮರದಿಂದ ತಲಾ ಒಂದು ಕ್ವಿಂಟಾಲ್‌ ಬೆಳೆ ಎಂಬ ಸರಾಸರಿಯಲ್ಲಿ ಈ ಉತ್ಪತ್ತಿ ಸಾಧ್ಯ. ಗಮನಿಸಬೇಕಾದುದೆಂದರೆ, ಸ್ವಾಮಿ 10 ಲಕ್ಷ ಸಸಿಗಳನ್ನು ಸರಿಸುಮಾರು ಮೂರು ಸಾವಿರ ರೈತರಿಗೆ ಒದಗಿಸಿದ್ದಾರೆ. ಅಂದರೆ ತಮಿಳುನಾಡಿನ ದಿಂಡಿಗಲ್‌, ಮಧುರೈ ಹಾಗೂ ಕೊಯಮತ್ತೂರು ಜಿಲ್ಲೆಗಳಲ್ಲಿಯೇ ಸುಮಾರು ಆರು ಸಾವಿರ ಎಕರೆ ಪ್ರದೇಶದಲ್ಲಿ ಪಿಎವಿಎಂ ನುಗ್ಗೆ ಬೆಳೆಯಲಾಗುತ್ತಿದೆ!
ವೃತ್ತಿಧರ್ಮದ ಹೊರತಾಗಿ, ಸ್ವಾಮಿ ಈ ತಳಿಯ ಗಿಡ ತಯಾರಿಕೆಯ ವಿಧಾನಗಳನ್ನು ವಿವರಿಸುತ್ತಾರೆ. ಏರ್‌ ಲೇಯರಿಂಗ್‌ ಎಂದು ಕರೆಸಿಕೊಳ್ಳುವ ತಂತ್ರಜ್ಞಾನದಿಂದ ನರ್ಸರಿ ಗಿಡಗಳನ್ನು ಉತ್ಪಾದಿಸಲಾಗುತ್ತಿದೆ. ತಾಯಿ ಮರದ ಯೋಗ್ಯ ರೆಂಬೆಗಳನ್ನು ಆಯು ಅದರ ತೊಗಟೆಗಳನ್ನು ಕೆತ್ತಿಕೊಳ್ಳುತ್ತಾರೆ. ಆ ಭಾಗವನ್ನು ಅವರೇ ತಯಾರಿಸಿದ ವಿಶಿಷ್ಟ ಪಂಚಗವ್ಯ ದ್ರಾವಣದಿಂದ ಶುಶ್ರೂಷೆ ಮಾಡುತ್ತಾರೆ. ಇದರ ಮೇಲೆ ತೆಂಗಿನ ಸಿಪ್ಪೆಗಳನ್ನು ಪೇರಿಸಿ ಒಟ್ಟೂ ಭಾಗವನ್ನು ಪಾಲಿಥೀನ್‌ ಶೀಟ್‌ನಿಂದ ಮುಚ್ಚಿ ಗಟ್ಟಿಯಾಗಿ ಕಟ್ಟಲಾಗುತ್ತಿದೆ. ಸರಿಸುಮಾರು ಮೂರು ವಾರಗಳ ನಂತರ ಈ ರೆಂಬೆಯಲ್ಲಿ ಹೊಸ ಬೇರುಗಳು ಮೂಡುತ್ತವೆ. ಮುಂದಿನ ಹಂತವಾಗಿ ತಾಯಿ ಮರದಿಂದ ಬೇರ್ಪಡಿಸಿ ಪ್ರತ್ಯೇಕ ಪಾಲಿಥೀನ್‌ ಚೀಲಗಳಲ್ಲಿ ಹಾಕಿ ಪೋಷಿಸಲಾಗುತ್ತದೆ. ಮುಂದಿನ 20 ದಿನಗಳ ಆರೈಕೆಯ ನಂತರ ಇವು ಕೃಷಿ ಭೂಮಿಯಲ್ಲಿ ನಾಟಿ ಮಾಡಲು ಯೋಗ್ಯವಾಗುತ್ತದೆ.
ಯಶಸ್ಸಿನ ಎಳೆ ಇರುವುದೇ ಇಲ್ಲಿ! ಸ್ವಾಮಿಯವರ ಏರ್‌ ಲೇಯರಿಂಗ್‌ನ ಪಕ್ಕಾ ಮಾಹಿತಿಯನ್ನು ನಮ್ಮಲ್ಲಿನ ರೈತರು ಪಡೆಯಬೇಕು. ಇಲ್ಲಿನ ಅತ್ಯುತ್ಕಷ್ಟ ನುಗ್ಗೆ ತಳಿಗಳಲ್ಲೂ ಈ ಕ್ರಮ ಅನುಸರಿಸಿ ನರ್ಸರಿ ಸಸಿ ತಯಾರಿಸಬೇಕು. ಈಗಾಗಲೇ ಇಲ್ಲಿನ ಪರಿಸರಕ್ಕೆ ಒಗ್ಗಿರುವ ತಳಿಗಳೇ ಅಧಿಕ ಇಳುವರಿ ನೀಡುತ್ತವೆಂದಾದರೆ ಯಶಸ್ಸು ಕೈಗೆಟುಕಿದಂತೆ. ಖುದ್ದು ಅಲಾಗರ ಸ್ವಾಮಿಯವರನ್ನು ಸಂಪರ್ಕಿಸಬಯಸುವವರು ಅವರ ಮೊಬೈಲ್‌ 98653 45911 ಅಥವಾ 97917 74887ನಲ್ಲಿ ಸಂಪರ್ಕಿಸಬಹುದು. ಪತ್ರ ಮುಖೇನವಾದರೆ .ಂಟಚಿಚಿಡಿಚಿಚಿಥಿ, ಚಿಣ ಓ.6/39, ಣ ಣಡಿಣ, ಚಿಟಟಚಿಠಿಚಿಣಣ, ಓಟಚಿಞಣಣಚಿ ಖಿಚಿಟಞ, ಆಟಿಜಚಿಟ, ಖಿಚಿಟ ಓಚಿಜ.
ಪಿಎವಿಎಂ ತಳಿಯ ರೋಗ ನಿರೋಧಕತೆ ಹಾಗೂ ಸಾವಯವ ಕೃಷಿಗೆ ಅತ್ಯುತ್ತಮವಾಗಿ ಸ್ಪಂದಿಸುತ್ತದೆ ಎಂಬುದು ಅದೇ ದಿಂಡಿಗಲ್‌ ಜಿಲ್ಲೆಯ ರೈತ ರಾಜೇಂದ್ರನ್‌ರ ಅಭಿಪ್ರಾಯ. ಒಂದು ಎಕರೆ ಭೂಮಿಯಲ್ಲಿ ಮೊದಲ ವರ್ಷವೇ ಒಂದು ಲಕ್ಷ ರೂಪಾಯಿಯ ಆದಾಯ ಪಡೆದಿದ್ದಾರಂತೆ. ವಾರ ಕಾಲ ಬಾಳುವುದು ನುಗ್ಗೆಯ ಬೆಲೆ ಸ್ಥಿರತೆಗೆ ಕಾರಣ. ಹಾಗಾಗಿ ಇನ್ನೋರ್ವ ರೈತ ಇರೋಡ್‌ನ ಕುಪ್ಪುಸ್ವಾಮಿ ಕೆ.ಜಿ.ಗೆ ಐದರಿಂದ 20 ರೂ.ವರೆಗೆ ಮಾರುತ್ತಿದ್ದಾರೆ.
ಮುಖ್ಯವಾಗಿ, ರೈತನೊಬ್ಬನ ಸಂಶೋಧನೆ ಮಧುರೈನ ಸಸ್ಟೈನಬಲ್‌ ಅಗ್ರಿಕಲ್ಚರ್‌ ಮತ್ತು ಎನ್ವಿರೋನ್ಮೆಂಟ್‌ ವಾಲಂಟರಿ ಆ್ಯಕ್ಷನ್‌ `ಸೇವಾ' ಎನ್‌ಜಿಓ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ವಿವೇಕಾನಂದನ್‌ ಪಿಎವಿಎಂ ತಳಿಯ ಜನಪ್ರಿಯತೆಗೆ ತಲೆದೂಗಿದ್ದಾರೆ. ಆಸಕ್ತರು ಇವರನ್ನು ಞಚಿಜಚಿಣಚಿಟಿ.ಟಿನಲ್ಲಿ ಮೇಲ್‌ ಮಾಡಿ ಮಾಹಿತಿ ಕೇಳಬಹುದು. ಅವರ ದೂರವಾಣಿ (0452)2380082 ಮತ್ತು 2380943.
ನಿಜ, ಯಶಸ್ಸಿನ ಘಟನೆ ತಮಿಳುನಾಡಿನದೆದು. ನೇರವಾಗಿ ಅದು ನಮ್ಮಲ್ಲಿನ ರೈತರಿಗೆ ಎಷ್ಟು ಅನುಕೂಲವಾದೀತು ಎಂಬುದು ಗೊತ್ತಿಲ್ಲ. ಆದರೆ ಗೆಲುವಿನ ಸೂತ್ರವನ್ನು ನಮ್ಮ ಯಶಸ್ಸಿಗೆ ಬಗ್ಗಿಸಿ ಅಳವಡಿಸಿಕೊಳ್ಳಲು ಅವಕಾಶವಿದೆ. ನೀವೇ ಹೇಳಿ, ನಿಜಕ್ಕೂ ರೈತರಿಗೆ ಬೇಕಾದುದು ಅದೇ ಅಲ್ಲವೇ?
-ಮಾವೆಂಸ
ಈ ಲೇಖಕರ ವಿಭಿನ್ನ ಬರಹಗಳಿಗಾಗಿ
http://mavemsa.blogspot.com ನೋಡಿ

Thursday, May 21, 2009

ಎಳನೀರೆಂಬ ಅಮೃತ...


ಮೇ 23, 24 ಕ್ಕೆ ಎಳನೀರು ಮೇಳ
ಆರಂಭ ಟ್ರಸ್ಟ್‌ ಬಿಳಿಗೆರೆ ಮತ್ತು ಬೆಂಗಳೂರಿನ ಗ್ರಾಮೀಣ ಭಾರತ ಪ್ರತಿಷ್ಠಾನಗಳ ಸಹಯೋಗದಲ್ಲಿ ಮೇ 23 ಮತ್ತು 24ರಂದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿಳಿಗೆರೆಯಲ್ಲಿ `ಎಳನೀರು ಮೇಳ' ನಡೆಯಲಿದೆ. ರೈತರ ತೋಟದಲ್ಲಿ ಬೆಳೆಯುತ್ತಿರುವ ನೈಸರ್ಗಿಕ ಪೇಯ ಎಳನೀರು. ಇದರ ಜಾಗೃತಿ ಮೂಡಿಸುವುದು. ತೆಂಗಿನ ಬೆಳೆಗಾರರಿಗೆ ಎಳನೀರು ಮಾರಾಟದ ಬಗ್ಗೆ ಇರುವ ಅಳುಕನ್ನು ಹೋಗಲಾಡಿಸುವುದು ಮೇಳದ ಉದ್ದೇಶ.
ಮೇಳದಲ್ಲಿ ಎಳನೀರು ಕುಡಿಯುವ ಸ್ಪರ್ಧೆ, ಎಳನೀರು ಉತ್ಪನ್ನಗಳ ಮಳಿಗೆಗಳು, ಎಳನೀರಿನ ಮಹತ್ವದ ಕುರಿತು ಗೋಷ್ಠಿಗಳು ನಡೆಯಲಿದೆ. ಡಾ ಡಿ. ಚಂದ್ರಶೇಖರ ಚೌಟ, ಶ್ರೀಪಡ್ರೆ, ಕೋಡಿಹಳ್ಳಿ ಚಂದ್ರಶೇಖರ್‌ ಮುಂತಾದವರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.
ಆಸಕ್ತರು: ಕೃಷ್ಣಮೂರ್ತಿ ಬಿಳಿಗೆರೆ ದೂ.ಸಂ.9481490975 ಅಥವಾ ವಿಶ್ವನಾಥ್‌ ಅಣೆಕಟ್ಟೆ, ದೂ.ಸಂ. 9481735059 ಇಲ್ಲಿಗೆ ಸಂಪರ್ಕಿಸಬಹುದು.

ಎಳನೀರು ಹೊಟ್ಟೆಗೆ ತಂಪು, ಆರೋಗ್ಯಕ್ಕೆ ಹಿತ.
ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದ ಪ್ರವಾಸಿಗರಾದ ಮಾರ್ಕೋಪೋಲೋ, ಬುಕಾನನ್‌ ಮುಂತಾದವರು ತಮ್ಮ ಅನುಭವ ಕಥನದಲ್ಲಿ ಎಳನೀರಿನ ಕುರಿತು ಪ್ರಸ್ತಾಪಿಸಿದ್ದಾರೆ. ಚಾರ್ಲ್ಸ್‌ ಡಾರ್ವಿನ್‌ `ಬೆಳ್ಳಂ ಬೆಳಿಗ್ಗೆ ತಂಪು ಹೊತ್ತಿನಲ್ಲಿ ತಂಪಾಗಿ ಎಳನೀರು ಕುಡಿದರೆ ಅದರ ಹೆಚ್ಚುಗಾರಿಕೆ ಏನೆಂಬುದು ಗೊತ್ತಾಗುತ್ತದೆ' ಎಂದಿದ್ದಾನೆ.
ಥೈಲೆಂಡ್‌ ಮೂಲದ್ದು ಎಂದು ನಂಬಲಾದ ತೆಂಗು ನಮ್ಮ ದೇಶದ ದಕ್ಷಿಣ ಭಾರತೀಯರ ಬದುಕಿಗೆ ಆಸರೆಯಾಗಿದೆ. ದೇವರ ಸ್ಥಾನದಲ್ಲಿ ತೆಂಗಿನ ಕಾಯಿ ಇಟ್ಟು ಪೂಜೆ ಮಾಡುವ ಸಂಪ್ರದಾಯವನ್ನು ನಾವು ರೂಢಿಸಿಕೊಂಡಿದ್ದೇವೆ. ಬಯಲು ಸೀಮೆ, ಮಲೆನಾಡು, ಕರಾವಳಿ ಎಲ್ಲಾ ಕಡೆ ಬೆಳೆಯುವ ಏಕೈಕ ಬೆಳೆ ತೆಂಗು.
ತೆಂಗಿನ ಮರ ಹಲವಾರು ಬೇಡಿಕೆಗಳನ್ನು ಈಡೇರುತ್ತದೆ. ಆಹಾರ, ಪಾನೀಯ, ಇಂಧನ, ಎಣ್ಣೆ, ಪೊರಕೆ, ಕಾರ್ಪೆಟ್‌, ಹಾಸಿಗೆ, ಸೂರು... ಹೀಗೆ ಮನುಷ್ಯನ ಹಲವಾರು ಬೇಡಿಕೆಗಳನ್ನು ಪೂರೈಸುತ್ತದೆ ತೆಂಗಿನ ಮರ. ಬೇಸರದ ಸಂಗತಿಯೆಂದರೆ, ಕಲ್ಪವೃಕ್ಷವನ್ನು ಮಡಿಲಲ್ಲೇ ಇಟ್ಟುಕೊಂಡ ರೈತರು ಸೋಲುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತ ಹೋದರೆ ತೆಂಗಿನ ಉತ್ಪಾದನೆಯಲ್ಲಿ ಶೇ. 10ರಷ್ಟು ಮಾತ್ರ ಎಳನೀರು ಬಳಕೆಯಾಗುತ್ತಿದೆ. ಶೇ. 25ರಷ್ಟು ಎಳನೀರು ಬಳಕೆಯಾದರೆ ರೈತರ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.
ಎಳನೀರನ ತಳಿಗಳು: ಎಳನೀರಿಗಾಗಿಯೇ ಹಲವಾರು ತಳಿಗಳು ನಮ್ಮಲ್ಲಿ ಪ್ರಚಲಿತದಲ್ಲಿದೆ. ಅವುಗಳಲ್ಲಿ ಪ್ರಮುಖವಾದವು- ತಿಪಟೂರು ಟಾಲ್‌, ಗಂಗಾಪಾಣಿ, ಚೌಗಾಟ್‌ ಹಳದಿ ಗಿಡ್ಡ ತಳಿ, ಚೌಗಾಟ್‌ ಹಸಿರು, ಶ್ರೀಲಂಕಾ ಗೋಲ್ಡನ್‌ ಕಿಂಗ್‌, ಮಲೇಷಿಯನ್‌ ಹಸಿರು ಗಿಡ್ಡ ತಳಿ, ಮಲೇಷಿಯನ್‌ ಕೆಂಪು ಗಿಡ್ಡ ತಳಿ, ಮಲೇಷಿಯನ್‌ ಟಾಲ್‌.
ಎಳನೀರು ಹೇಗಿರಬೇಕು?: ತೆಂಗಿನ ಮರ ಪ್ರತಿ ತಿಂಗಳು ಗರ್ಭ ಕಟ್ಟುತ್ತದೆ. ಪ್ರತಿ ತಿಂಗಳು ಹೆರುತ್ತದೆ. ಹನ್ನೆರಡು ತಿಂಗಳಿಗೆ ಗೊನೆ ಕೊಯ್ಲಿಗೆ ಬರುತ್ತದೆ. ಅದಕ್ಕಾಗಿಯೇ ತೆಂಗಿನ ಮರಕ್ಕೆ `ಸದಾ ತಾಯಿ' ಎನ್ನುವ ಹೆಸರಿದೆ. ಹೂ ಬಿಟ್ಟ ಆರು ತಿಂಗಳಿಗೆ ಎಳನೀರು ರೂಪ ಪಡೆಯುತ್ತದೆ. 180ರಿಂದ 220 ದಿನಗಳವರೆಗಿನ ಎಳನೀರು ಕುಡಿಯಲು ಯೋಗ್ಯವಾಗಿರುತ್ತದೆ. ಎಳನೀರನ್ನು ಕುರುಬು (ತೀರಾ ಎಳೆಯದು), ಹದವಾದದ್ದು (ಪೇಪರ್‌ ಗಂಜಿ), ದೋಸೆಯಷ್ಟು ದಪ್ಪ ಎಳೆಗಾಯಿ ಸಿಗುವ ಬಲಿತ ಎಳನೀರು- ಹೀಗೆ ಮೂರು ವಿಧದಲ್ಲಿ ಕೊಯ್ಲು ಮಾಡುತ್ತಾರೆ.
ಎಳನೀರು ಕೊಯ್ಲಿನ ಪ್ರಯೋಜನ: ತೆಂಗಿನಕಾಯಿಯನ್ನು ರೈತರು ವರ್ಷಕ್ಕೆ ನಾಲ್ಕು ಬಾರಿ ಮಾತ್ರ ಕೊಯ್ಲು ಮಾಡಬಹುದು. ಎಳನೀರನ್ನು ಆರು ಬಾರಿ ಕೊಯ್ಲು ಮಾಡಬಹುದು. ಎಳನೀರು ಮಾರುವುದರಿಂದ ತೆಂಗಿನ ಮರದಲ್ಲಿ ನ ಕಾಯಿ ಕಚ್ಚುವ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಎಳನೀರು ಮಾರಾಟಕ್ಕಿಳಿದರೆ ಏಳು ತಿಂಗಳಿಗೆ ಹಣ ರೈತರ ಕೆ ಸೇರುತ್ತದೆ. ಆದೇ ಕೊಬ್ಬರಿ ಮಾರಿದರೆ 20 ರಿಂದ 22 ತಿಂಗಳವರೆಗೆ ಕಾಯಬೇಕಾದ ಅನಿವಾರ್ಯತೆ ಇರುತ್ತದೆ. ಸದ್ಯದ ಎಳನೀರು ಮಾರುಕಟ್ಟೆಯಲ್ಲಿ ರೈತರ ತೋಟಕ್ಕೆ ನೇರವಾಗಿ ಕೊಯ್ಲಿಗೆ ಬಂದರೆ 4 ರೂಪಾಯಿಗೆ ಖರೀದಿ ಮಾಡುತ್ತಾರೆ. ಅದೇ ಒಂದು ಕಾಯಿಗೆ 5 ರೂಪಾಯಿ ಇದೆ. ಎಳನೀರನ್ನು ವರ್ಷಕ್ಕೆ ಮೂರು ಕೊಯ್ಲು ಮಾಡಬಹುದು.
ಔಷಧಿಯ ಗುಣ: ಎಳನೀರು ಅಮೃತಕ್ಕೆ ಸಮಾನ ಎನ್ನುವ ಮಾತಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಿಶ್ಯಕ್ತರಾದ ಸೈನಿಕರ ರಕ್ತದ ಧಮನಿಗೆ ನೇರವಾಗಿ ಸೇರಿಸಿದ್ದರು. ಕಾರಣ ಎಳನೀರಿನಲ್ಲಿರುವ ಗ್ಲುಕೋಸ್‌ ಅಂಶ. ಒಂದು ದಿನದ ಕೂಸಿಗೂ ಎಳನೀರು ಕುಡಿಸಿದರೆ ಅಪಾಯವಿಲ್ಲ. ವೃದ್ಧರು, ರೋಗಿಗಳಿಗೆ ಹೊಸ ಚೈತನ್ಯ ನೀಡುವ ಶಕ್ತಿ ಎಳನೀರಿಗೆ ಇದೆ. ಶಿಶುವಿಗೆ ಭೇದಿಯಾದಾಗ ಎಳನೀರು ಕುಡಿಸಿದರೆ ಗುಣವಾಗುತ್ತದೆ. ನಿರ್ಜಲೀಕರಣಕ್ಕೆ ಇದು ಮದ್ದು. ಬೆಳವಣಿಗೆಗೆ ಪೂರಕವಾದ ಹಾರ್ಮೋನುಗಳನ್ನು ಇದು ಒದಗಿಸುತ್ತದೆ. ಬೇಸಿಗೆಯ ಬಿಸಿಲಿನ ಝಳದಿಂದ ಬೇಯುವ ಶರೀರಕ್ಕೆ ತಂಪು ನೀಡಿ ದೇಹದ ಸಮತೋಲನ ಕಾಪಾಡುವಲ್ಲಿ ಎಳನೀರು ಸಹಕಾರಿ. ಎಳನೀರಿನಲ್ಲಿರುವ ವಿಶೇಷ ಪೋಷಕಾಂಶಗಳಾದ ಅಲ್ಬಮಿನ್‌ ಮತ್ತು ಸಾಲಿನ್‌ ಕಾಲರಾ ರೋಗಕ್ಕೆ ಹೇಳಿ ಮಾಡಿಸಿದ ಔಷಧಿ.
ಡಿಹೈಡ್ರೇಷನ್‌ ಮತ್ತು ಗ್ಯಾಸ್ಟ್ರಿಕ್‌ಗೆ ಎಳನೀರು ಔಷಧಿಯಂತೆ ಕೆಲಸ ಮಾಡುತ್ತದೆ. ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಬಯೋಲಿಸಿಸ್‌ ಚಿಕಿತ್ಸಾ ವಿಧಾನಕ್ಕೆ ಎಳನೀರು ಅತಿಮುಖ್ಯ. ಎಳನೀರಿನಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನಿಶಿಯಂ, ಫಾಸ್ಪರಸ್‌, ಕಬ್ಬಿಣ ಮತ್ತು ತಾಮ್ರದ ಅಂಶಗಳಿರುತ್ತವೆ. ಈ ಕಾರಣದಿಂದ ಎಳನೀರನ್ನು ರಕ್ತಕ್ಕೆ ಸಮನಾದ ಜೀವದ್ರವ ಎನ್ನುತ್ತಾರೆ.
ಎಳನೀರಿನ ಮೌಲ್ಯವರ್ಧನೆ: ಕೊಲ್ಕತ್ತಾ, ಬೆಂಗಳೂರು, ಚೆನ್ನೈ ಮುಂತಾದ ಪ್ರವಾಸಿ ಕೇಂದ್ರಗಳು ಎಳನೀರಿನ ಮುಖ್ಯ ಮಾರುಕಟ್ಟೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಉತ್ಪನ್ನದಲ್ಲಿ ಶೇ. 80ರಷ್ಟು ಎಳನೀರು ಕುಡಿಯುತ್ತಾರೆ. ಅಲ್ಲಿನ ಕಾಲೇಜು, ಕಚೇರಿ, ಫ್ಯಾಕ್ಟರಿ, ಬ್ಯಾಂಕು ಎಲ್ಲೆಂದರಲ್ಲಿ ಎಳನೀರು ಲಭ್ಯ. ಕೇರಳದಲ್ಲೂ ಈಚೆಗೆ ಈ ಸಂಸ್ಕೃತಿ ಪ್ರಾರಂಭವಾಗಿದೆ. ಎಳೆನೀರನ್ನು ಸಂಸ್ಕರಿಸಿ ಮಾರುಕಟ್ಟೆಗೆ ತರಲಾಗುತ್ತಿದೆ. ವಿದೇಶಿ ಪೇಯಗಳನ್ನು ಸರಿಗಟ್ಟುವಂತೆ ಪ್ಯಾಕಿಂಗ್‌ ಮಾಡಿ ಜನರನ್ನು ಆಕರ್ಷಿಸಲಾಗುತ್ತಿದೆ. ಕೇರಳದಲ್ಲಿ ತಾಯ್‌ ಎಳನೀರನ್ನು ಮಾರಲಾಗುತ್ತಿದೆ. ಇದು ಎಳನೀರನ್ನು ಬಾಕ್ಸ್ಸ್‌ ಮಾದರಿಯಲ್ಲಿ ಮಾರುಕಟ್ಟೆಗೆ ತರುತ್ತಿದೆ. ಇದಕ್ಕಿಂತ ಮುಂದುವರೆದು ಸ್ನೋಬಾಲ್‌ ಮಾದರಿಯಲ್ಲಿ ತಯಾರಿಸಿ ಪ್ರತಿಷ್ಠಿತರನ್ನು ಸೆಳೆಯುವ ಯತ್ನ ನಡೆಯುತ್ತಿದೆ. ಮೈಸೂರಿನ ಡಿಫೆನ್ಸ್‌ ಫುಡ್‌ ರೀಸರ್ಚ್‌ ಲ್ಯಾಬೋರೆಟರಿಯು ತೆಂಗು ಮಂಡಳಿಯ ಸಹಕಾರದಿಂದ ಸಂಸ್ಕರಣ ತಂತ್ರವನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಎಳನೀರನ್ನು ಪ್ಲಾಸ್ಟಿಕ್‌ ಸ್ಯಾಶೆಯಲ್ಲಿ ತುಂಬಲಿಕ್ಕೆ ಸಹಕಾರಿಯಾಗುತ್ತದೆ.
ಈ ರೀತಿಯಾಗಿ ಮೌಲ್ಯವರ್ಧನೆ ಮಾಡುವ ಮೂಲಕ ನುಸಿ ಪೀಡೆಯಿಂದ ಹೆದರಿ ಹೋಗಿದ್ದ ತೆಂಗಿನ ಬೆಳಗಾರರು ಕೆಲವು ಕಡೇ ಚೇತರಿಸಿ ಕೊಂಡಿದ್ದಾರೆ.
ಎಳನೀರು ನಮ್ಮಲ್ಲಿ ಬೇಕಾದಷ್ಟು ಇದೆ. ಆದರೆ ಬಣ್ಣ ಬಣ್ಣದ ಪಾನೀಯಗಳಿಗೆ ಮರುಳಾಗುವವರೆ ಹೆಚ್ಚು. ಕೃತಕ, ವಿಷಯುಕ್ತ ಬಾಟಲಿ ಪೇಯಗಳಿಂದ ಹೊರಬಂದು ನಮ್ಮಲ್ಲಿಯೇ ಸಿಗುವ ನೈಸರ್ಗಿಕ ಪೇಯವಾದ ಎಳನೀರನ್ನು ಕುಡಿಯುವ ಸಂಸ್ಕೃತಿ ಬೆಳೆಯುವ ಅಗತ್ಯವಿದೆ.

Saturday, May 9, 2009

ಸಹಕಾರ ಸಂಘಟನೆ - ಕೃಷಿಕರ ಅನಿವಾರ್ಯ


ಕೃಷಿಕರ ಬದುಕು ಸಂಕೀರ್ಣ ಘಟ್ಟದಲ್ಲಿದೆ. ಒಂದೆಡೆ ನಗರದತ್ತ, ಸ್ವಯಂ ಉದ್ಯೋಗಗಳತ್ತ ರೈತ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಅಳಿದುಳಿದ ಕಾರ್ಮಿಕರನ್ನು ರೈತರು ಬಳಸಿಕೊಳ್ಳಬಹುದಿತ್ತು ಎಂದುಕೊಂಡರೆ ಸರ್ಕಾರಗಳು ಉದ್ಯೋಗ ಖಾತರಿ ಯೋಜನೆಯ ಹೆಸರಿನಲ್ಲಿ ಯಂತ್ರಗಳ ಬದಲು ಇದೇ ಕಾರ್ಮಿಕರನ್ನು ಉಪಯೋಗಿಸಿ ಅಕ್ಷರಶಃ ರೈತರ ಬದುಕನ್ನು ಗೋಳಾಟಕ್ಕೆ ತಂದಿಟ್ಟಿದ್ದಾರೆ. ಬೆಳೆಗೆ ಬೆಲೆ ಇಲ್ಲ, ಕೂಲಿಗೆ ಕೈಗೆಟುಕದ ದುಬಾರಿ ಪಗಾರ ಎಂದಾದರೆ ರೈತ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎನ್ನುವಂತಾಗಿದೆ.
ಇಲ್ಲ, ಬಹುಷಃ ಬಹುಸಂಖ್ಯಾತ ರೈತರು ಕಷ್ಟವನ್ನೇ ಉಂಡು ಹೊದ್ದು ಮಲಗಿದವರು. ಅವಮಾನಗಳಿಗೆ ನೊಂದಾರೆಯೇ ವಿನಃ ಸಮಸ್ಯೆಗಳಿಗಲ್ಲ
. ಆ ಲೆಕ್ಕದಲ್ಲಿ ಸರ್ಕಾರಗಳ ಉದ್ಯೋಗ ಖಾತರಿ ಯೋಜನೆಗಳಿಗೆ ಥ್ಯಾಂಕ್ಸ್‌ ಹೇಳಬೇಕು. ಇಂದು ಮುಖ್ಯವಾಗಿ ತೋಟಗಳ ಮಾಲಿಕನಾದ ರೈತ ತಾನೇ ಕೆಲಸಕ್ಕೆ ಮುಂದಾಗಿದ್ದು ಪರಸ್ಪರರ ಸಹಕಾರದ ಪದ್ಧತಿ ರೈತರ ಮಧ್ಯದಲ್ಲಿ ಹುಟ್ಟಿಕೊಂಡಿದೆ. ಒಂದು ತೆರನ ಒಡೆದ ಮನಸ್ಸುಗಳು ಈಗ ಒಂದುಗೂಡಿದ್ದು ಹಳ್ಳಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿದೆ.
ಅಂತದೊಂದು ಉದಾಹರಣೆಯನ್ನು ಕಣ್ಣಾರೆ ನೋಡಲು ನಾವು ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಪುರಪ್ಪೇಮನೆಯತ್ತ ಹೋಗಬೇಕು. ಅಲ್ಲಿನ ಐದು ಜನ ಅಡಿಕೆ ಬೆಳೆಗಾರರು ಸೇರಿ `ಪಂಚಮಿ ತಂಡ'ವನ್ನು ರಚಿಸಿಕೊಂಡಿದ್ದಾರೆ. ತಂಡಕ್ಕೆ ಒಂದು ಶಿಸ್ತಿನ ಆಧಾರದ ಅಗತ್ಯವಿದೆ ಎಂಬ ಕಾರಣಕ್ಕಾಗಿ ತಮ್ಮನ್ನು ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಭಾಗವಾದರು. ಅದರಲ್ಲಿ ಕೆಲವು ನಿಯಮಗಳಿವೆ. ಪ್ರತಿ ವಾರ 10 ರೂ. ಉಳಿತಾಯ ಮಾಡಬೇಕು. ವಾರಕ್ಕೊಂದು ದಿನವಾದರೂ ಕೆಲಸ ಮಾಡಲೇಬೇಕು. ತಂಡಕ್ಕೆ ಅಧ್ಯಕ್ಷರು, ಕಾರ್ಯದರ್ಶಿಗಳೆಲ್ಲ ಇರಬೇಕು.
ಪುರಪ್ಪೇಮನೆಯ ಪಂಚಮಿ ತಂಡಕ್ಕೆ ವಾರಕ್ಕೊಂದು ದಿನ ಕೆಲಸ ಮಾಡಿದರೆ ಪೂರೈಸುವುದಿಲ್ಲ. ಹಾಗಾಗಿ ಅವರು ಅವಶ್ಯಕತೆ ಇದ್ದಾಗಲೆಲ್ಲ ಹಾಳೆಟೊಪ್ಪಿ ಹಾಕಿದ್ದೇ. ಬೆಳಿಗ್ಗೆ ಒಂಭತ್ತರಿಂದ ಮಧ್ಯಾಹ್ನ ಮೂರರವರೆಗೆ ಕೆಲಸ. ಯಾರ ಮನೆಯಲ್ಲಿ ಕೆಲಸವೋ ಅವರ ಮನೆಯಲ್ಲಿ ಊಟ. ಶ್ರಮ ವಿನಿಯೋಗದ ಪದ್ಧತಿಯಲ್ಲಿ ಲೆಕ್ಕಾಚಾರ ಸಲೀಸು. ಮೈಯಾಳು ಹೋಗಿ ಆಳು ಸಾಲ ತೀರಿಸುವುದು. ಅಷ್ಟಕ್ಕೂ ಒಬ್ಬಾತ ಹೆಚ್ಚುವರಿ ಆಳು ಕೆಲಸ ಮಾಡಿದ್ದರೆ ಅದಕ್ಕೆ ವರ್ಷಕ್ಕೊಮ್ಮೆ ಸಂಬಳ ರೂಪದಲ್ಲಿ ಪಾವತಿಸುವ ವ್ಯವಸ್ಥೆಯೂ ಇದೆ.
ಗಣೇಶ್‌, ರಾಜಾರಾಂ, ಮೋಹನ, ನಾಗರಾಜ, ಹೆಚ್‌.ಪಿ.ನಾಗರಾಜರ ಈ ತಂಡ ಮಾಡದ ಕೃಷಿ ಚಟುವಟಿಕೆಯೇ ಇಲ್ಲ. ಈ ವರ್ಷ ತೋಟದಲ್ಲಿ ಕಳೆ ತೆಗೆದದ್ದು, ತೋಟದ ಮಣ್ಣು ಅಗೆತ, ಗೊಬ್ಬರ ಹಾಕಿದ್ದು, ಅಡಿಕೆ ಸಸಿ ನೆಟ್ಟಿದ್ದು, ಕರಡ ಕಡಿದಿದ್ದು, ಸೊಪ್ಪು-ದರಲೆ ಒಟ್ಟು ಬಾಚಿದ್ದು, ತೋಟದಲ್ಲಿ ಮಣ್ಣು ಹಾಕಿದ್ದು........ ಯಾವ ಕೃಷಿ ಕಾರ್ಮಿಕರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡುತ್ತಿರುವುದು ಗಮನಾರ್ಹ.
ಇಂದು ಪುರಪ್ಪೇಮನೆ ಊರಿನಲ್ಲಿಯೇ ಎರಡು ಸಹಕಾರಿ ತಂಡಗಳಿವೆ. ಈ ಎರಡು ಗುಂಪುಗಳ ನಡುವೆಯೂ ಹೊಂದಾಣಿಕೆಯಿದೆ. ಒಂದೊಮ್ಮೆ ಹೆಚ್ಚು ಕೆಲಸಗಾರರು ಬೇಕಾದ ಕಾಮಗಾರಿಯಾದರೆ ಇವರು ಅವರಲ್ಲಿಗೆ, ಅವರು ಇಲ್ಲಿಗೆ ಬಂದು ಕೆಲಸ ಮಾಡಿಕೊಡುತ್ತಾರೆ.
ಬಹುಷಃ ಈ ಸಹಕಾರದ ಹಿಂದೆ ಆಗುತ್ತಿರುವ ಪರೋಕ್ಷ ಲಾಭದ ಬಗ್ಗೆ ಹಲವರಿಗೆ ಗೊತ್ತಿಲ್ಲ. ಒಟ್ಟಾಗಿ ಕೆಲಸ ಮಾಡುವುದರಿಂದ ಹರಟೆ, ಹಾಡು, ಖುಷಿಗಳು ಮನೋಲ್ಲಾಸಕ್ಕೆ ಕಾರಣವಾಗಿದೆ. ಒಟ್ಟಾಗಿ ಮಾತನಾಡುವುದರಿಂದ ಹಲವು ವಿಚಾರಗಳು ತಿಳಿಯುತ್ತದೆ. ನಿನ್ನೆ ಪೇಟೆಗೆ ಹೋಗಿದ್ದ ಗಣೇಶ್‌ ತೊಟಗಾರಿಕಾ ಇಲಾಖೆಯಲ್ಲಿ ರೈತರಿಗೆ ಕೊಡುತ್ತಿರುವ ಮೆಣಸಿನ ಬಳ್ಳಿಗಳ ಸುದ್ದಿ ಹೇಳುತ್ತಾರೆ. ಮೆಸ್ಕಾಂ ಕಛೇರಿಗೆ ಹೋಗುವವನಿಗೆ ಉಳಿದವರು ಬಿಲ್‌ ಪಾವತಿಸಲು ಕೊಡುತ್ತಾರೆ. ಶಂಕ್ರಣ್ಣನಿಗೆ ಕೇವಲ ಎರಡು ಲೆಂಗ್ತ್‌ ಒಂದೂಕಾಲು ಇಂಚಿನ ಪೈಪ್‌ ತರಬೇಕು. ಅಷ್ಟನ್ನೇ ತರುವುದು ಕಷ್ಟ, ನಷ್ಟ.ನಾಗರಾಜ 50 ಲೆಂಗ್ತ್‌ ಎರಡು ಇಂಚಿನ ಪೈಪ್‌ ತಮ್ಮನೆಗೆ ತರುವಾಗ ಶಂಕ್ರಣ್ಣನ ಎರಡು ಪೈಪ್‌ನ್ನೂ ಹಾಕಿಕೊಂಡು ಬರುತ್ತಾನೆ. ಈ ಲಾಭಕ್ಕೆ ಬೆಲೆ ಕಟ್ಟಲಾಗುತ್ತದೆಯೇ?
ಇಂದು ಮಲೆನಾಡು, ದಕ್ಷಿಣ ಕನ್ನಡ, ಮಡಿಕೇರಿ, ಸೊರಬ, ಮಾವಿನಸರ ಮುಂತಾದ ಕಡೆ ಈ ತರದ ರೈತ ಗುಂಪುಗಳು ಮೈಯಾಳೀನ ಆಧಾರದಲ್ಲಿ ಕೃಷಿ ಕೆಲಸಗಳನ್ನು ಸ್ವತಃ ತಾವೇ ಮಾಡಿಕೊಳ್ಳುತ್ತಿವೆ. ಆದರೆ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಂತದರ ಕೆಳಗೆ ಸೇರ್ಪಡೆಗೊಳ್ಳುವುದರಿಂದ ತಂಡಗಳಲ್ಲಿ ಒಂದು ಮಟ್ಟಿನ ಶಿಸ್ತು ಲಭ್ಯವಾಗುತ್ತದೆ. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾಲಕಾಲಕ್ಕೆ ಸಾಲ, ಸಹಾಯಧನಗಳೂ ಒದಗಿಬರಬಹುದು. ಇದು ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯಪಡುತ್ತಾರೆ ಪುರಪ್ಪೇಮನೆಯ ಗಣೇಶ್‌. ಇವರ ಪಂಚಮಿ ಸಂಘಕ್ಕೆ ಬರುವ ಜೂನ್‌ 30ಕ್ಕೆ ಬರೋಬ್ಬರಿ ಒಂದು ವರ್ಷ.
ಚುನಾವಣಾ ಕಾಲದಲ್ಲಿ ರಾಜಕಾರಣಿಗಳು ಕೃಷಿ ಮಾಲಿಕರು ಹಾಗೂ ಕಾರ್ಮಿಕ ವರ್ಗವನ್ನು ಒಡೆದು ಮತಬ್ಯಾಂಕ್‌ ಸೃಷ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮೊದಲೇ ಹದಗೆಟ್ಟ ವ್ಯವಸ್ಥೆಗೆ ಇದು ವಜ್ರಾಘಾತ. ಚುನಾವಣೆ ಮುಗಿದ ನಂತರ ರಾಜಕಾರಣಿಗಳು ಬೆಂಗಳೂರಿಗೋ, ದೆಹಲಿಗೋ ಹಾರುತ್ತಾರೆ. ಇಲ್ಲಿ ಮೂಡಿದ ಕಂದಕ ಹಾಗೇ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ, ರೈತರೇ ರಚಿಸಿಕೊಳ್ಳುವ ಸಹಕಾರ ತತ್ವದ ಸಂಘಟನೆ ಇಂದಿನ ಅನಿವಾರ್ಯ.

-ಮಾವೆಂಸ

Sunday, May 3, 2009

ವಿಷಮುಕ್ತ ಮಾವು


ಬೇಸಿಗೆ ಪ್ರಾರಂ­ಭ­ವಾ­ಗು­ತ್ತಿ­ದ್ದಂತೆ ಹಣ್ಣು­ಗ­ಳಿಗೆ ಎಲ್ಲಿ­ಲ್ಲದ ಬೇಡಿಕೆ ಪ್ರಾರಂ­ಭ­ವಾ­ಗು­ತ್ತದೆ. ಅದ­ರಲ್ಲೂ ಮಾವಿನ ಹಣ್ಣು `ಹ­ಣ್ಣು­ಗಳ ರಾಜ'. ಮಾವಿನ ಹಣ್ಣಿನ ವಾಸನೆ ಬರು­ತ್ತಿ­ದ್ದರೆ ತಿನ್ನಲೇ ಬೇಕೆಂಬ ಬಯಕೆ ಪ್ರತಿ­ಯೊ­ಬ್ಬ­ರಿಗೂ ಬರು­ತ್ತದೆ. ಹಾಗೇ ಈ ಹಣ್ಣಿನ ರುಚಿ­ಯನ್ನು ಆಸ್ವಾ­ದಿ­ಸ­ದ­ವರು ಯಾರೂ ಇರ­ಲಿ­ಕ್ಕಿಲ್ಲ. ಸಾಮಾ­ನ್ಯ­ವಾಗಿ ಎಲ್ಲರ ಮನೆಯ ಹಿತ್ತಿ­ಲಲ್ಲಿ ಒಂದು ಮಾವಿನ ಮರ­ವಾ­ದರೂ ಇರು­ತ್ತದೆ. ಮಲೆ­ನಾಡು ಮತ್ತು ಅರೆ ಮಲೆ­ನಾ­ಡಿನ ಬಹು­ತೇಕ ಕೃಷಿ­ಕರು ಮಾವನ್ನು ವಾಣಿಜ್ಯ ಬೆಳೆ­ಯಾಗಿ ಬೆಳೆ­ಯು­ತ್ತಿ­ದ್ದಾರೆ.
ಆಕ­ರ್ಷ­ಕ­ವಾದ, ಸಿಹಿ­ಯಾದ, ಸತ್ವ­ವುಳ್ಳ ಮಾವು ಇಂದು ವಿಷ­ವಾ­ಗು­ತ್ತಿದೆ. ಮಾವಿನ ಕಸ್ತ್ರ(ಹೂ) ಬಿಡಲು ಆರಂ­ಭ­ವಾ­ದಾ­ಗಿ­ನಿಂದ ಹಿಡಿದು ಹಣ್ಣು ಮಾರು­ಕ­ಟ್ಟೆಗೆ ಹೋಗು­ವ­ವ­ರೆಗೆ ಒಂದಲ್ಲ ಒಂದು ವಿಷ­ವನ್ನು ಅದು ಉಣ್ಣು­ತ್ತಿ­ರು­ತ್ತದೆ. ಮಾವಿನ ವಿಚಾ­ರ­ದಲ್ಲಿ ಗಮ­ನಿಸ ಬೇಕಾದ ಅಂಶ­ವೆಂ­ದರೆ ಇದಕ್ಕೆ ಯಾವುದೇ ಪೋಷ­ಕಾಂ­ಶ­ಗ­ಳನ್ನು ನೀಡ­ದಿ­ದ್ದರೂ ಬೆಳೆ ಬರು­ತ್ತದೆ. ಆದರೂ ಹೆಚ್ಚಿನ ಇಳು­ವ­ರಿಯ ಆಸೆಗೆ ರೈತ ಒಳ­ಗಾಗಿ ಅದನ್ನು ವಿಷ ಮಾಡು­ತ್ತಿ­ದ್ದಾನೆ.
ಬಹ­ಳಷ್ಟು ಕೃಷಿ­ಕರು ಮಾವಿನ ಬೆಳೆ­ಯನ್ನು ಸಾವ­ಯವ ರೀತಿ­ಯಲ್ಲಿ ಅಥವಾ ನೈಸ­ರ್ಗಿಕ ಕೃಷಿ­ಯಲ್ಲಿ ಮಾವನ್ನು ಬೆಳೆ­ಸು­ತ್ತಿ­ದ್ದಾರೆ. ಅವ­ರಲ್ಲಿ ಚಿತ್ರ­ದು­ರ್ಗದ ಎಂ ಮಹಾ­ವೀ­ರ­ಕು­ಮಾರ್‌ ಒಬ್ಬರು.
ಮಹಾ­ವೀರ ಅವರು ಎಲ್ಲ­ರಂತೆ ಮೊದಲು ಪ್ರಾರಂ­ಭಿ­ಸಿದ್ದು ರಾಸಾ­ಯ­ನಿಕ ಕೃಷಿ­ಯನ್ನೇ. ಆದರೆ ಆದಾ­ಯ­ಕ್ಕಿಂತ ಖರ್ಚು ಹೆಚ್ಚಾ­ದಾಗ ಕೃಷಿ ವಿಧಾ­ನ­ವನ್ನು ಬದ­ಲಾ­ಯಿ­ಸಿ­ಕೊ­ಳ್ಳು­ವುದು ಅನಿ­ವಾ­ರ್ಯ­ವಾ­ಯಿತು. ಅದೇ ಸಮ­ಯ­ದಲ್ಲಿ ಇವರು ಸುಭಾಷ್‌ ಪಾಳೇ­ಕರ್‌ ಅವರ ನೈಸ­ರ್ಗಿಕ ಕೃಷಿ ಕಾರ್ಯಾ­ಗಾ­ರ­ದಲ್ಲಿ ಭಾಗ­ವ­ಹಿ­ಸಿ­ದರು. `ನಾನು ಯಾಕೆ ನನ್ನ ಬೆಳೆಗೆ ಇದೇ ಕೃಷಿ ವಿಧಾ­ನ­ವನ್ನು ಅಳ­ವ­ಡಿ­ಸಿ­ಕೊ­ಳ್ಳ­ಬಾ­ರದು?' ಎಂದು­ಕೊಂ­ಡರು. ರಾಸಾ­ಯ­ನಿಕ ಕೃಷಿ­ಯಿಂದ ನೈಸ­ರ್ಗಿಕ ಕೃಷಿಯ ಕಡೆಗೆ ಬಂದರು.
ಮಾವಿನ ಕೃಷಿ ವಿಧಾನ:
ಹದಿ­ಮೂರು ಎಕರೆ ಪ್ರದೇ­ಶ­ದಲ್ಲಿ ಮಹಾ­ವೀರ ಅವರು ಮಾವಿನ ಕೃಷಿ ಮಾಡು­ತ್ತಿ­ದ್ದಾರೆ. ಇದ­ರಲ್ಲಿ ಮಿಶ್ರ ಬೆಳೆ­ಯಾಗಿ ಸೀತಾ­ಫಲ ಮತ್ತು ನುಗ್ಗೆ ಬೆಳೆ­ಸು­ತ್ತಿ­ದ್ದಾರೆ. 25-25 ಅಂತ­ರ­ದಲ್ಲಿ ಮಾವಿನ ಗಿಡ­ಗ­ಳನ್ನು ನಾಟಿ ಮಾಡಿ­ದ್ದಾರೆ. 1994ರಲ್ಲಿ ಇವರು ಗಿಡ­ಗ­ಳನ್ನು ನಾಟಿ ಮಾಡಿ­ದ್ದಾರೆ. ಮೂರು ಅಡಿ ಅಗಲ ಮೂರು ಅಡಿ ಆಳದ ಗುಂಡಿ ತೆಗೆದು ಅದ­ರೊ­ಳಗೆ ಹಟ್ಟಿ­ಗೊ­ಬ್ಬರ ಮತ್ತು ಸ್ವಲ್ಪ ರಾಸಾ­ಯ­ನಿಕ ಶೀಲಿಂ­ದ್ರ­ನಾ­ಶ­ಕ­ವನ್ನು ಮಿಶ್ರಣ ಮಾಡಿ ಗಿಡ­ಗ­ಳನ್ನು ನಾಟಿ ಮಾಡಿ­ದ್ದಾರೆ. ಮೊದಲು ಹರಿ ನೀರನ್ನು ಇವರು ಅಳ­ವ­ಡಿ­ಸಿ­ಕೊಂ­ಡಿ­ದ್ದರು. ಆದರೆ ನೀರಿನ ಲಭ್ಯತೆ ಕಡಿಮೆ ಇರು­ವು­ದ­ರಿಂದ ಈಗ ಹನಿ ನೀರಾ­ವ­ರಿ­ಯನ್ನು ಅಳ­ವ­ಡಿ­ಸಿ­ಕೊಂ­ಡಿ­ದ್ದಾರೆ.
ಸಾವ­ಯ­ವ­ದೆ­ಡೆಗೆ ಮಾವಿನ ಕೃಷಿ: 1994ರಿಂದ 2004ರ­ವ­ರೆಗೂ ರಾಸಾ­ಯ­ನಿಕ ಕೃಷಿ­ಯನ್ನು ಮಾಡು­ತ್ತಿದ್ದ ಮಹಾ­ವೀರ ಅವರು ಸಾವ­ಯವ ರೀತಿ­ಯಲ್ಲಿ ಮಾವಿನ ಕೃಷಿ ಮಾಡ­ತೊ­ಡ­ಗಿ­ದರು. ರಾಸಾ­ಯ­ನಿಕ ಕೃಷಿ­ಯಲ್ಲಿ ಮಾವನ್ನು ಬೆಳೆ­ದರೆ ಆಗುವ ಹಾನಿ­ಯನ್ನು ಇವರು ಅರಿ­ತಿ­ರು­ವುದೇ ಇದಕ್ಕೆ ಮುಖ್ಯ ಕಾರಣ. ವಿಷ ಆಹಾ­ರ­ವನ್ನು ಜನ­ರಿಗೆ ನೀಡಿ­ದರೆ ಎಷ್ಟು ಸರಿ? ಎನ್ನು­ವುದು ಇವ­ರಿಗೆ ಕಾಡಿದ ಪ್ರಶ್ನೆ. ಅದ­ಕ್ಕಾಗಿ ಈಗ ಇವರು ಸಂಪೂರ್ಣ ಸಾವ­ಯವ ರೀತಿ­ಯ­ಲ್ಲಿಯೇ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ.
ಪೋಷ­ಕಾಂಶ ನಿರ್ವ­ಹಣೆ: ಪಾಳೇ­ಕರ್‌ ವಿಧಾ­ನದ ಜೀವಾ­ಮೃತ ಇವರು ಮಾವಿಗೆ ನೀಡುವ ಮುಖ್ಯ ಪೋಷ­ಕಾಂಶ. ನೂರು ಲೀಟರ್‌ ನೀರಿಗೆ 5 ಕಿಲೊ ಸಗಣಿ, 5 ಲೀಟರ್‌ ಗೋ ಮೂತ್ರ, ಒಂದು ಕಿಲೊ ಬೆಲ್ಲ, ಒಂದು ಕಿಲೊ ದ್ವಿದಳ ಧಾನ್ಯದ ಹಿಟ್ಟು ಜೊತೆ ಒಂದು ಕಿಲೊ ಮಣ್ಣನ್ನು ಸೇರಿಸಿ ಜೀವಾ­ಮೃತ ತಯಾ­ರಿಸಿ ಕೊಳ್ಳು­ತ್ತಾರೆ. ಇದನ್ನು ಒಂದು­ವಾರ ಕೊಳೆಸಿ ನಂತರ ಮಾವಿನ ಗಿಡ­ಗ­ಳಿಗೆ ಹಾಕು­ತ್ತಾರೆ. ಮಾವಿನ ಕಸ್ತ್ರ(ಹೂ) ಬಿಡಲು ಪ್ರಾರಂ­ಭಿ­ಸಿ­ದಾ­ಗಿಂದ ನೀಡ­ತೊ­ಡ­ಗು­ತ್ತಾರೆ. ಜೀವಾ­ಮೃ­ತ­ವನ್ನು ಎರಡು ರೀತಿ­ಯಲ್ಲಿ ಗಿಡ­ಗ­ಳಿಗೆ ನೀಡು­ತ್ತಾರೆ. ಮೊದ­ಲ­ನೆ­ಯದು ಹೂ ಬಿಟ್ಟ ನಂತರ ನಿಯ­ಮಿ­ತ­ವಾಗಿ ಸಿಂಪ­ಡಿ­ಸು­ವುದು. ಇನ್ನೊಂದು: ಗಿಡ­ಗಳ ಬುಡಕ್ಕೂ ಎರಡು ಲೀಟರ್‌ ಜೀವಾ­ಮೃ­ತ­ವನ್ನು ಹಾಕು­ವುದು.
ಪೋಷ­ಕಾಂ­ಶ­ಕಕ್ಕೆ ಪೂರ­ಕ­ವಾದ ಮುಚ್ಚಿಗೆ: ಎಲ್ಲರ ಮಾವಿನ ತೋಟ­ದಂತೆ ಇವರ ಮಾವಿನ ತೋಟ ಇಲ್ಲ­ದಿ­ರು­ವುದು ವಿಶೇಷ. ಪೋಷ­ಕಾಂ­ಶಕ್ಕೆ ಪ್ರಾಮು­ಖ್ಯತೆ ನೀಡಿ­ದಂತೆ, ಮುಚ್ಚಿ­ಗೆಗೂ ನೀಡಿ­ದ್ದಾರೆ. ಇವರು ಎರಡು ವಿದಧ ಮುಚ್ಚಿಗೆ ಮಾಡು­ತ್ತಿ­ದ್ದಾರೆ. ಸಜೀವ ಮುಚ್ಚಿಗೆ, ನಿರ್ಜೀವ ಮುಚ್ಚಿಗೆ ಮುಚ್ಚಿಗೆ. ಸಜೀವ ಮುಚ್ಚಿ­ಗೆ­ಯಾಗಿ ಇವರು ಅಲ­ಸಂಡೆ, ತೊಗರಿ, ಅವರೆ, ವೆಲ್ವೆ­ಟ್‌­ಬೀನ್ಸ್‌, ಹುರು­ಳಿ­ಯನ್ನು ಬೆಳೆ­ಯು­ತ್ತಿ­ದ್ದಾರೆ. ಮಳೆ­ಗಾ­ಲ­ದಲ್ಲಿ ಇದನ್ನು ಕಟಾವು ಮಾಡಿ ಗಿಡ­ಗಳ ಬುಡಕ್ಕೆ ಹಾಕು­ತ್ತಾರೆ. ಉಳಿದ ದಿನ­ಗ­ಳಲ್ಲಿ ಇದು ಭೂಮಿಗೆ ಸಾರ­ಜ­ನ­ಕ­ವನ್ನು ಪೂರೈ­ಸು­ತ್ತದೆ. ನಿರ್ಜೀವ ಮುಚ್ಚಿ­ಗೆ­ಯಲ್ಲಿ ಮುಖ್ಯ­ವಾಗಿ ಸೊಪ್ಪು­ಗ­ಳನ್ನು ಬಳ­ಸು­ತ್ತಿ­ದ್ದಾರೆ.
ರೋಗ ನಿರ್ವ­ಹ­ಣೆಗೆ ಅಗ್ನಿ ಅಸ್ತ್ರ:
ಮಾವಿಗೆ ರೋಗ­ಗಳ ತೊಂದ­ರೆಯೂ ಇದೆ. ಸಾಮಾ­ನ್ಯ­ವಾಗಿ ಮಾವಿಗೆ ಬೂದಿ­ರೋಗ, ಅಂಟು­ರೋಗ ಹಾಗೂ ಚಿಟ್ಟೆ­ರೋ­ಗ­ಗಳು ಬರು­ತ್ತದೆ. ರೋಗಕ್ಕೂ ಮಹಾ­ವೀರ ಅವರು ಉಪ­ಯೋ­ಗಿ­ಸು­ವುದು ಶುದ್ಧ ಜೈವಿಕ ಕೀಟ­ನಾ­ಶಕ. ಇದರ ಹೆಸರು`ಅಗ್ನಿ ಅಸ್ತ್ರ'. 20 ಲೀಟರ್‌ ಗೋಮೂತ್ರ, 12 ಕೀಲೊ ಬೇವಿನ ಸೊಪ್ಪು, ಮೂರು ಕೀಲೊ ನಾಟಿ ಬೆಳ್ಳುಳ್ಳಿ, ಒಂದು ಹಸಿ­ಮೆ­ಣಸು ಇವ­ನ್ನೆಲ್ಲ ಸೇರಿಸಿ ರುಬ್ಬು­ತ್ತಾರೆ. ಇದನ್ನು ಹತ್ತು ದಿನ­ಗಳ ಕಾಲ ಕೊಳೆ­ಯಿಸಿ ನಂತರ ಗಿಡ­ಗ­ಳಿಗೆ ಸಿಂಪ­ಡಿ­ಸು­ತ್ತಾರೆ. ಇದನ್ನು ಸಿಂಪ­ಡಿ­ಸು­ವಾಗ 10 ಲೀಟರ್‌ ನೀರಿಗೆ 3 ಲೀಟರ್‌ ಅಗ್ನಿ­ಅ­ಸ್ತ್ರ­ವನ್ನು ಮಿಶ್ರಣ ಮಾಡಿ­ಕೊ­ಳ್ಳು­ತ್ತಾರೆ. ಇದನ್ನು ಸಹ ನಿಯ­ಮಿ­ತ­ವಾಗಿ ನೀಡು­ತ್ತಾರೆ. ಇದನ್ನು ಸಿಂಪ­ಡಿ­ಸು­ವ­ದ­ರಿಂದ ಹೂಗಳ ಮೇಲೆ ಯಾವುದೇ ರೀತಿಯ ಪರಿ­ಣಾಮ ಬೀರದೆ ಹೂವು­ಗಳು ಚೆನ್ನಾಗಿ ಇರು­ತ್ತದೆ ಎನ್ನು­ವುದು ಮಹಾ­ವೀರ ಅವರ ಅನು­ಭ­ವದ ಮಾತು.
ಇಳು­ವರಿ ಮತ್ತು ಮಾರು­ಕಟ್ಟೆ:
ಅಪೋಸ್‌, ತೋತಾ­ಪುರಿ, ಬೆಂಗ­ಪಳಿ ಅಥವಾ ಬ್ಲಾನಿಷ್‌ ಮಾವಿನ ಬಗೆ­ಯನ್ನು ಇವರು ಬೆಳೆ­ಯು­ತ್ತಿ­ದ್ದಾರೆ. `ರಾ­ಸಾ­ಯ­ನಿಕ ಕೃಷಿ ಮಾಡು­ತ್ತಿ­ರು­ವಾಗ 13 ಎಕ­ರೆಗೆ ಹದಿ­ನಾಲ್ಕು ಟನ್‌ ಮಾವು ಬರು­ತ್ತಿತ್ತು. ಈಗ ನೈಸ­ರ್ಗಿಕ ಕೃಷಿ­ಯಲ್ಲಿ ಅದಕ್ಕೂ ಹೆಚ್ಚಿಗೆ ಬೆಳೆ ಬರು­ತ್ತಿದೆ. ಮೊದಲು ಪ್ರತಿ ವರ್ಷವು ಪ್ರತಿ ಗಿಡ­ದಲ್ಲಿ ಹೂವು ಬರು­ತ್ತಿ­ರ­ಲಿಲ್ಲ. ಆದರೆ ಈಗ ಪ್ರತಿ ವರ್ಷವು ಎಲ್ಲಾ ಗಿಡ­ದ­ಲ್ಲಿಯೂ ಕಾಯಿ ಬಿಡು­ತ್ತಿದೆ. ಮಾವಿನ ಗಿಗಳು ಬಲಿ­ತಿವೆ. ಕಳೆದ ವರ್ಷ 13 ಎಕ­ರೆಗೆ 30 ಟನ್‌ ಮಾವು ಬಂದಿತ್ತು. ಈ ಬಾರಿ ವಾತ­ವ­ರಣ ವ್ಯತ್ಯಾ­ಸ­ದಿಂದ ಸ್ವಲ್ಪ ಬೆಳೆ ಕಡಿ­ಮೆ­ಯಾ­ಗುವ ಸಾಧ್ಯ­ತೆ­ಯಿದೆ. ಖರ್ಚು ಕಡಿ­ಮೆ­ಯಾ­ಗಿದೆ. ವಿಷ ಮುಕ್ತ ಮಾವಿನ ಹಣ್ಣನ್ನು ನೀಡು­ತ್ತಿ­ರುವ ತೃಪ್ತಿ­ಯಿದೆ. ಇಳು­ವ­ರಿಯು ಹೆಚ್ಚಾ­ಗಿದೆ' ಎನ್ನು­ವು­ದಾಗಿ ಮಾಹಾ­ವೀರ ಅವರು ಹೇಳು­ತ್ತಾರೆ.
ಇವರ ಮಾವಿನ ಹಣ್ಣು­ಗ­ಳನ್ನು ಯಾವ ದಳ್ಳಾ­ಳಿ­ಗಳ ಮೂಲಕ ಮಾರು­ಕಟ್ಟೆ ಮಾಡದೆ ಸ್ವತಃ ಮಾರು­ತ್ತಿ­ದ್ದಾರೆ. ತೋತಾ­ಪುರಿ ಹಣ್ಣು­ಗ­ಳನ್ನು ತೋಟ­ದ­ಲ್ಲಿಯೇ ನೇರ­ವಾಗಿ ಗುತ್ತಿಗೆ ನೀಡು­ತ್ತಿ­ದ್ದಾರೆ. ಉಳಿದ ಎರಡು ಬಗೆಯ ಮಾವಿನ ಹಣ್ಣು­ಗ­ಳನ್ನು ತಾವೇ ಮನೆ ಮನೆ ಬಾಗಿ­ಲಿಗೆ ಹೋಗಿ ಮಾರು­ತ್ತಾರೆ. ನಾಲ್ಕು ಡಜನ್‌ ಹಣ್ಣು­ಗ­ಳನ್ನು ರಟ್ಟಿನ ಪೆಟ್ಟಿ­ಗೆ­ಯಲ್ಲಿ ಹಾಕಿ ಬಳ್ಳಾರಿ, ಬೆಂಗ­ಳೂರು, ಗದಗ, ಆಂದ್ರದ ಕರ್ನೂ­ಲ್‌­ವ­ರೆಗೆ ತಲು­ಪಿ­ಸು­ತ್ತಿ­ದ್ದಾರೆ.
ಸಾವ­ಯವ ಕೃಷಿ ಹಾಗೂ ಸ್ವತಃ ಮಾರು­ಕ­ಟ್ಟೆ­ಯನ್ನು ಕಂಡು ಕೊಂಡಿ­ರುವ ಮಹಾ­ವೀರ್‌ ಅವರು ಮಾವಿನ ಬೆಳೆ­ಗಾ­ರ­ರಿಗೆ ಮಾದರಿ.
ಇವ­ರನ್ನು ಸಂಪ­ರ್ಕಿ­ಸಲು: ಎಂ. ಮಹಾ­ವೀ­ರ­ಕು­ಮಾರ್‌
1ನೇ ಅಡ್ಡ­ರಸ್ತೆ, ಗುಮಾಸ್ತ ಕಾಲೋನಿ
ಎಪಿ­ಎಂಸಿ ರಸ್ತೆ, ಚಿತ್ರ­ದುರ್ಗ
ದೂರ­ವಾಣಿ: 958194-೨೨೫೨೮೩

-ನಾಗರಾಜ ಮತ್ತಿಗಾರ