Wednesday, January 21, 2009

ಗಗನಕೆ ಏರಿದ ಅಕ್ಕಿ ಬೆಲೆ: ಇದೇ ಪರಿಹಾರವೇ


ನೆರೆಯ ಆಂಧ್ರ­ಪ್ರ­ದೇ­ಶ­ದಲ್ಲಿ ಸಾಧ್ಯ­ವಾ­ಗಿ­ರು­ವುದು? ಕರ್ನಾ­ಟ­ಕ­ದಲ್ಲಿ ಏಕೆ ಸಾಧ್ಯ­ವಾ­ಗು­ತ್ತಿಲ್ಲ? ಇದೇನಾ ಪರಿ­ಹಾರ?
ಅಕ್ಕಿ ಬೆಲೆ ಕೈಗೆ­ಟು­ಕದ ರೀತಿ­ಯಲ್ಲಿ ಗಗ­ನ­ಮುಖಿ ಆಗಿ­ರುವ ಕಾರಣ ತತ್ತ­ರಿ­ಸಿ­ರುವ ಜನ­ಸಾ­ಮಾ­ನ್ಯ­ರಿಂದ ಕೇಳಿ ಬರು­ತ್ತಿ­ರುವ ಪ್ರಶ್ನೆ­ಗ­ಳಿವು.
ಆಂಧ್ರ­ಪ್ರ­ದೇ­ಶ­ದ­ಲ್ಲಿಯೂ ಸರ್ಕಾ­ರ­ವಿದೆ. ರಾಜ್ಯ­ದ­ಲ್ಲಿ­ರು­ವಂ­ತಹ ಕಾನೂ­ನು­ಗಳೇ ಅಲ್ಲಿಯೂ ಇವೆ. ಅಲ್ಲಿ ಅಕ್ಕಿಯ ಬೆಲೆ ನಿಯಂ­ತ್ರ­ಣಕ್ಕೆ ತರುವ ರೀತಿ­ಯಲ್ಲಿ ರಫ್ತಿನ ಮೇಲೆ ನಿಯಂ­ತ್ರಣ ತರಲು ಸಾಧ್ಯ­ವಾ­ಗು­ತ್ತದೆ. ಆದರೆ ರಾಜ್ಯ­ದ­ಲ್ಲಿನ ಸರ್ಕಾರ ಏನು ಮಾಡು­ತ್ತಿದೆ? ಜನ ಸಾಮಾ­ನ್ಯರ ಆಕ್ರೋಶ ಈ ರೀತಿ­ಯಲ್ಲಿ ಕಟ್ಟೆ­ಯೊ­ಡೆ­ಯು­ತ್ತಿದೆ.
ಅಕ್ಕಿಯ ಬೆಲೆ ಕಳೆದ ಕೆಲವು ತಿಂಗ­ಳಿ­ನಿಂದ ಏರು­ಗ­ತಿ­ಯ­ಲ್ಲಿಯೇ ಇದೆ. ಕಳೆದ ಒಂದೇ ತಿಂಗ­ಳಿ­ನ­ಲ್ಲಿಯೇ ಪ್ರತಿ ಕೆಜಿಗೆ 3 ರಿಂದ 5 ರೂ.ಗಳ ತನಕ ಏರಿ­ಕೆ­ಯಾ­ಗಿದೆ. ಒಂದು ವರ್ಷದ ಅವ­ಧಿ­ಯಲ್ಲಿ 10 ರಿಂದ 13 ರೂ.ಗಳ ತನಕ ಅಕ್ಕಿಯ ಬೆಲೆ ಏರಿ­ಕೆ­ಯಾ­ಗಿದೆ. ಇದು ಮುಂದಿನ ವರ್ಷ­ದಲ್ಲಿ ಇನ್ನೂ ಹೆಚ್ಚಾ­ಗ­ಲಿದೆ ಎಂಬ ಆಘಾ­ತ­ಕಾರಿ ಸುದ್ದಿಯೂ ವರ್ತಕ ಸಮು­ದಾ­ಯ­ದ­ಲ್ಲಿದೆ. ಈ ಸದ್ಯಕ್ಕೆ ಬೆಲೆ ಹೆಚ್ಚ­ಳ­ವಾ­ಗಿದೆ. ಮುಂದೆ ಕೊರ­ತೆಯೂ ಕಾಣಿ­ಸಿ­ಕೊ­ಳ್ಳುವ ಎಲ್ಲಾ ಸಾಧ್ಯ­ತೆ­ಗಳೂ ಇವೆ. ಅದಕ್ಕೂ ಮೊದಲು ಪರಿ­ಹಾರ ಎಂದ ಸರ್ಕಾರ ಎಚ್ಚೆ­ತ್ತು­ಕೊ­ಳ್ಳ­ಬೇ­ಕಾ­ಗಿದೆ.
ಕರ್ನಾ­ಟಕ ರಾಗಿ, ಜೋಳ, ಗೋಧಿಯ ಜತೆಗೆ ಅಕ್ಕಿ ಸಹ ಹೆಚ್ಚು ಉಪ­ಯೋ­ಗಿ­ಸುವ ರಾಜ್ಯ­ಗಳ ಸಾಲಿಗೆ ಸೇರು­ತ್ತದೆ. ಇಲ್ಲಿ ಸಾಕಷ್ಟು ಪ್ರಮಾ­ಣ­ದಲ್ಲಿ ಭತ್ತ ಬೆಳೆ­ಯ­ಲಾ­ಗು­ತ್ತದೆ. ಆದರೆ ಈಗ ಉಂಟಾ­ಗಿ­ರುವ ಸಮ­ಸ್ಯೆಗೆ ತನ್ನದೇ ಆದ ಕೆಲವು ಕಾರ­ಣ­ಗ­ಳಿವೆ.
ಒಂದೆಡೆ ಆಂಧ್ರ ಪ್ರದೇಶ ಅಕ್ಕಿ ರಫ್ತಿನ ಮೇಲೆ ವಿಧಿ­ಸಿ­ರುವ ನಿರ್ಬಂಧ, ಇನ್ನೊಂ­ದೆಡೆ ರಾಜ್ಯ­ದಲ್ಲಿ ಉತ್ಪಾ­ದ­ನೆ­ಯಲ್ಲಿ ಆಗಿ­ರುವ ಕುಂಠಿತ, ಕಡಿ­ಮೆ­ಯಾ­ಗು­ತ್ತಿ­ರುವ ಇಳು­ವರಿ, ಮತ್ತೊಂ­ದೆಡೆ ಅಕ್ಕಿ ಬಳ­ಕೆಯ ಪ್ರಮಾಣ ಹೆಚ್ಚು­ತ್ತಿ­ರು­ವುದು ಹೀಗೆ ಅನೇಕ ಕಾರ­ಣ­ಗ­ಳನ್ನು ಗುರು­ತಿ­ಸ­ಬ­ಹು­ದಾ­ಗಿದೆ.
ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಅಕ್ಕಿ ಬಳ­ಕೆಯ ಯಥೇ­ಚ್ಚ­ವಾ­ಗಿಯೇ ಆಗು­ತ್ತಿದೆ. ಉತ್ತರ ಕರ್ನಾ­ಟ­ಕ­ದಲ್ಲಿ ಜೋಳದ ಜತೆಗೆ ಅಕ್ಕಿಯ ಬಳ­ಕೆ­ಯಾ­ದರೆ, ಹಳೇ ಮೈಸೂರು ಭಾಗ­ದಲ್ಲಿ ರಾಗಿಯ ಜತೆಗೆ ಬಳ­ಸ­ಲಾ­ಗು­ತ್ತದೆ. ಮಲೆ­ನಾಡು ಮತ್ತು ಕರಾ­ವಳಿ ಭಾಗ­ದಲ್ಲಿ ಅಕ್ಕಿಯೇ ಪ್ರಮುಖ ಉಪ­ಯೋ­ಗದ ಆಹಾರ ಉತ್ಪನ್ನ. ಒಂದು ಅಂದಾ­ಜಿನ ಪ್ರಕಾರ ಬೆಂಗ­ಳೂರು ನಗ­ರ­ವೊಂ­ದಕ್ಕೆ ಪ್ರತಿ ನಿತ್ಯ 50 ಲಾರಿ ಲೋಡ್‌­ನಷ್ಟು ಅಕ್ಕಿ ವ್ಯಾಪಾ­ರಿ­ಗ­ಳಿಗೆ ಬೇಕಾ­ಗು­ತ್ತದೆ. ಇಡೀ ರಾಜ್ಯಕ್ಕೆ ದಿನಕ್ಕೆ ಎಷ್ಟು ಅಕ್ಕಿ ಬೇಕಾ­ಗು­ತ್ತದೆ ಎಂಬು­ದನ್ನು ಈ ಆಧಾ­ರದ ಮೇಲೆ ಲೆಕ್ಕ ಹಾಕ­ಲಾ­ಗು­ತ್ತಿದೆ.
ರಾಜ್ಯ­ಕ್ಕಿಂತ ಆಂಧ್ರ­ಪ್ರ­ದೇಶ ಅಕ್ಕಿ ಹೆಚ್ಚು ಬೆಳೆ­ಯುವ ರಾಜ್ಯ. ಪ್ರತಿ ವರ್ಷ ಅಲ್ಲಿಂದ ಬೇರೆ ಬೇರೆ ರಾಜ್ಯ­ಗ­ಳಿಗೆ ಅಕ್ಕಿ ರಫ್ತು ಆಗು­ತ್ತಿತ್ತು. ಆದರೆ ಈ ವರ್ಷ ನಿಷೇಧ ಮಾಡಿ­ರುವ ಪರಿ­ಣಾಮ ಬೇರೆ ರಾಜ್ಯದ ವ್ಯಾಪಾ­ರಿ­ಗ­ಳೆಲ್ಲ ಕರ್ನಾ­ಟ­ಕ­ವನ್ನು ಅವ­ಲಂ­ಬಿ­ಸಿ­ದ್ದಾರೆ. ರಾಜ್ಯ­ದಿಂದ ಪ್ರತಿ ವರ್ಷ ಆಗು­ತ್ತಿದ್ದ ರಫ್ತು­ವಿನ ಪ್ರಮಾ­ಣ­ದಲ್ಲಿ ಶೇ.30ರಷ್ಟು ಹೆಚ್ಚಾ­ಗಿದೆ. ಬೇರೆ ರಾಜ್ಯದ ವ್ಯಾಪಾ­ರಿ­ಗಳು ಇಲ್ಲಿಗೆ ಆಗ­ಮಿಸಿ ಅಕ್ಕಿ ಖರೀದಿ ಮಾಡ­ಲಾ­ರಂ­ಭಿ­ಸಿ­ರುವ ಪರಿ­ಣಾಮ ಬೆಲೆ­ಯಲ್ಲಿ ಹೆಚ್ಚ­ಳ­ವಾ­ಗಿದೆ.
ಆಂಧ್ರ­ಪ್ರ­ದೇ­ಶ­ದಲ್ಲಿ ರಫ್ತು­ವಿನ ಮೇಲೆ ನಿಯಂ­ತ್ರಣ ಹಾಕಿ­ರುವ ಪರಿ­ಣಾಮ ಅಲ್ಲಿ ಅತ್ಯು­ತ್ತಮ ಅಕ್ಕಿಯ 19.40 ರೂ.ಗಳಿಗೆ ಲಭ್ಯ­ವಾ­ಗು­ತ್ತಿದೆ ಎಂಬು­ವುದು ಅಲ್ಲಿಂದ ದೊರ­ಕಿ­ರುವ ಮಾಹಿತಿ. ಆದರೆ ಅದೇ ಅಕ್ಕಿ ರಾಜ್ಯ­ದಲ್ಲಿ ಈಗ 30 ರೂ.ಗಳಿ­ಗಿಂತ ಕಡಿಮೆ ದರಕ್ಕೆ ಲಭ್ಯ­ವಾ­ಗು­ವು­ದಿಲ್ಲ. ರಾಜ್ಯ­ದಲ್ಲಿ ಸರ್ಕಾರ ಅಧಿ­ಕಾ­ರಕ್ಕೆ ಬರು­ವು­ದ­ಕ್ಕಿಂತ ಮುನ್ನ ಹೇಳಿದ ಬಿಜೆ­ಪಿಯೇ ಪರಿ­ಹಾರ ಎಂಬ ಮಾತು ಈಗ ಸುಳ್ಳಾ­ಗಿದೆ. ಏಕೆಂ­ದರೆ ಮುಂದಿನ ವರ್ಷ­ದಲ್ಲಿ ಈ ದರ ಇನ್ನೂ ಹೆಚ್ಚಾ­ಗುವ ಎಲ್ಲಾ ಸಾಧ್ಯ­ತೆ­ಗಳು ಗೋಚ­ರಿ­ಸ­ಲಾ­ರಂ­ಭಿ­ಸಿವೆ. ಅದಕ್ಕೂ ಮುನ್ನವೇ ಸರ್ಕಾರ ಎಚ್ಚೆ­ತ್ತು­ಕೊ­ಳ್ಳ­ಬೇ­ಕಾ­ಗಿದೆ.
ರಾಜ್ಯ­ದಲ್ಲಿ ಈ ವರ್ಷ ಭತ್ತ ಬೆಳೆ­ಯುವ ಪ್ರಮಾಣ ಕಡಿ­ಮೆ­ಯಾ­ಗು­ತ್ತಿದೆ. ನಿರೀ­ಕ್ಷಿತ ಪ್ರಮಾ­ಣ­ದಲ್ಲಿ ಭತ್ತ ನಾಟಿ­ಯಾ­ಗಿಲ್ಲ. ಈ ವರ್ಷದ ಮೂರು ಹಂಗಾ­ಮು­ಗ­ಳಿಂದ 14.07 ಲಕ್ಷ ಹೆಕ್ಟೇ­ರ್‌­ನಲ್ಲಿ ಬಿತ್ತ­ನೆಯ ಗುರಿ ಇತ್ತು. ಇನ್ನೂ ಬೇಸಿ­ಗೆಯ ಹಂಗಾಮು ನಾಟಿ­ಯಾ­ಗಿಲ್ಲ. ಮುಂಗಾ­ರಿ­ನಲ್ಲಿ ಸ್ವಲ್ಪ ಕಡಿ­ಮೆ­ಯಾ­ಗಿದೆ. ಮಳೆ ಆಶ್ರ­ಯ­ದಲ್ಲಿ ಬಿತ್ತ­ನೆಯೇ ಆಗ­ಲಿಲ್ಲ. ಕೆಲವು ಭಾಗ­ದಲ್ಲಿ ಹೆಚ್ಚು ಮಳೆ­ಯಿಂದ ಹಾನಿ­ಯಾ­ಗಿದೆ. ಇದು ಉತ್ಪಾ­ದ­ನೆಯ ಮೇಲೆ ಪರಿ­ಣಾಮ ಬೀರುವ ಸಾಧ್ಯ­ತೆ­ಗ­ಳಿವೆ. ಎಲ್ಲಾ ಹಂಗಾ­ಮು­ಗ­ಳಲ್ಲಿ ಉತ್ತಮ ಬೆಳೆ ಬಂದರೆ 40.78 ಲಕ್ಷ ಅಕ್ಕಿಯ ಉತ್ಪಾ­ದ­ನೆಯ ಗುರಿ­ಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಈಗ ಬೇಸಿ­ಗೆ­ಯ­ಲ್ಲಿಯೂ ಉತ್ತ­ಮ­ವಾಗಿ ಆದರೆ ಮಾತ್ರ 38 ಲಕ್ಷ ಟನ್‌ ಆಗ­ಬ­ಹು­ದೆಂದು ಅಂದಾಜು ಮಾಡ­ಲಾ­ಗು­ತ್ತಿದೆ. ಆದರೆ ಬೇಸಿ­ಗೆ­ಯಲ್ಲಿ ಆ ಪ್ರಮಾ­ಣ­ದಲ್ಲಿ ಆಗುವ ಸಾಧ್ಯ­ತೆ­ಗ­ಳಿ­ಲ್ಲದ ಕಾರಣ 30 ರಿಂದ 35 ಲಕ್ಷ ಟನ್‌ಗೆ ನಿಲ್ಲ­ಬ­ಹುದು ಎಂಬುದು ಒಂದು ಮೂಲ­ದಿಂದ ಲಭ್ಯ­ವಾ­ಗುವ ಮಾಹಿತಿ.
ಕೇಂದ್ರ ಸರ್ಕಾರ ರೂಪಿ­ಸಿ­ರುವ ರಾಷ್ಟ್ರೀಯ ಆಹಾರ ಭದ್ರತೆ ಮಿಷ­ನ್‌­ನಲ್ಲಿ ರಾಜ್ಯಕ್ಕೆ ಭತ್ತ ಮತ್ತು ದ್ವಿದಳ ಧಾನ್ಯ­ಗ­ಳಿಗೆ ಹೆಚ್ಚಿನ ಆದ್ಯತೆ ನೀಡ­ಲಾ­ಗು­ತ್ತಿದೆ. ಏಳು ಜಿಲ್ಲೆ­ಗ­ಳಲ್ಲಿ ಈ ಯೋಜನೆ ಜಾರಿ­ಯಾ­ಗು­ತ್ತಿದೆ. ಇದ­ರಿಂದ ಅಕ್ಕಿಯ ಉತ್ಪಾ­ದ­ಕತೆ ಹೆಚ್ಚಾ­ಗು­ತ್ತದೆ ಎಂದು ಕೃಷಿ ಇಲಾ­ಖೆಯ ಅಧಿ­ಕಾ­ರಿ­ಗಳು ಹೇಳು­ತ್ತಾರೆ.
ಆದರೆ ಲಭ್ಯ­ವಿ­ರುವ ಮತ್ತೊಂದು ಮೂಲದ ಪ್ರಕಾರ ಕೆಲವು ಜಿಲ್ಲೆ­ಗ­ಳಲ್ಲಿ ಇಳು­ವರಿ ಕುಂಠಿ­ತ­ವಾ­ಗು­ತ್ತಿದೆ. 15 ರಿಂದ 20ರಷ್ಟು ಭತ್ತದ ಇಳು­ವರಿ ಕಡಿ­ಮೆ­ಯಾ­ಗುವ ಸಾಧ್ಯ­ತೆ­ಗ­ಳಿವೆ. ಈ ರೀತಿ­ಯಾ­ದರೆ ನಿರೀ­ಕ್ಷಿತ ಪ್ರಮಾ­ಣದ ಉತ್ಪಾ­ದನೆ ಕುಸಿ­ತ­ವಾ­ಗು­ತ್ತದೆ. ಆಗ ಸಮಸ್ಯೆ ಇನ್ನಷ್ಟು ಹೆಚ್ಚಾ­ಗು­ತ್ತದೆ. ಏಕೆಂ­ದರೆ ರಾಜ್ಯಕ್ಕೆ ಆಂಧ್ರ­ಪ್ರ­ದೇ­ಶ­ದಿಂದ ಸಾಕಷ್ಟು ಅಕ್ಕಿ ಬರು­ತ್ತಿತ್ತು, ಆದರೆ ಈಗ ಅದು ನಿಂತಿದೆ.
ಕನಿಷ್ಠ ಬೆಂಬಲ ಬೆಲೆ­ಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿದೆ. ಇದ­ರಿಂದ ರೈತರು ಸಂತೋ­ಷ­ದ­ಲ್ಲಿ­ದ್ದಾರೆ. ಆದರೆ ಅಕ್ಕಿಯ ಬೆಲೆ ನಿಯಂ­ತ್ರ­ಣಕ್ಕೆ ಸರ್ಕಾರ ಶ್ರಮ­ವ­ಹಿ­ಸು­ತ್ತಿಲ್ಲ ಎಂಬ ದೂರು­ಗ­ಳಿವೆ.
ಈ ಬಗ್ಗೆ ಆಹಾರ ಮತ್ತು ನಾಗ­ರಿಕ ಸರ­ಬ­ರಾಜು ಸಚಿವ ಎಚ್‌. ಹಾಲಪ್ಪ ಹೇಳು­ವುದು, ಪಡಿ­ತ­ರ­ದಲ್ಲಿ ವಿತ­ರಣೆ ಮಾಡುವ ಆಹಾರ ಧಾನ್ಯದ ಬಗ್ಗೆ ಮಾತ್ರ ಸರ್ಕಾರ ತಲೆ ಕೆಡಿ­ಸಿ­ಕೊ­ಳ್ಳು­ತ್ತದೆ ಹೊರತು ಇನ್ನು­ಳಿದ ವಿಚಾ­ರ­ದಲ್ಲಿ ಅಲ್ಲ.
ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಲು ಎಲ್ಲಾ ಪ್ರಯತ್ನ ಮಾಡಿ ವಿಫ­ಲ­ವಾ­ಗಿ­ದ್ದೇವೆ. ಯಾವುದೇ ಕಾನೂ­ನಿ­ನಲ್ಲಿ ಇದು ಸಾಧ್ಯ­ವಾ­ಗು­ತ್ತಿಲ್ಲ ಎಂದು ಕೈಚೆ­ಲ್ಲು­ತ್ತಾರೆ.
ಪಡಿ­ತ­ರಕ್ಕೆ ಸಮಸ್ಯೆ ಇಲ್ಲ:
ಪಡಿ­ತ­ರಕ್ಕೆ ಸಮ­ಸ್ಯೆ­ಯಾ­ಗುವ ಸಾಧ್ಯ­ತೆ­ಗ­ಳಿಲ್ಲ. ಏಕೆಂ­ದರೆ ಈ ವರ್ಷ ಸರ್ಕಾರ ಲೆವಿ ಸಂಗ್ರ­ಹಣೆ ಬಿಗಿ­ಯಾಗಿ ಮಾಡು­ತ್ತಿದೆ. ರಾಜ್ಯ­ದಲ್ಲಿ 1.35 ಲಕ್ಷ ಮೆಟ್ರಿಕ್‌ ಟನ್‌ ಲೆವಿ ಸಂಗ್ರಹ ಮಾಡು­ತ್ತಿದೆ. ಕಳೆದ ಆರೇಳು ವರ್ಷ­ದಿಂದ ನಿಂತಿದ್ದ ಲೆವಿ ಸಂಗ್ರ­ಹಕ್ಕೆ ಈಗ ಚಾಲನೆ ನೀಡ­ಲಾ­ಗಿದೆ.
ಆದರೆ ಸಮ­ಸ್ಯೆ­ಯಾ­ಗು­ವುದು ಪಡಿ­ತರ ಬಿಟ್ಟು ಬೇರೆ­ಯ­ವರು ಖರೀದಿ ಮಾಡುವ ಭತ್ತಕ್ಕೆ. ಪಡಿ­ತ­ರ­ದಲ್ಲಿ ನೀಡು­ವುದು ಕೇವಲ ಹಸಿರು ಕಾರ್ಡ್‌ ಹೊಂದಿ­ರುವ ಕಡು ಬಡ­ವ­ರಿಗೆ ಮಾತ್ರ.
ಈಗ ಬೆಲೆ ಹೆಚ್ಚ­ಳ­ವಾ­ಗಿದೆ. ಮುಂದೆ ಕೊರ­ತೆಯೂ ಉಂಟಾ­ದರೆ ಜನ ಸಾಮಾ­ನ್ಯ­ರನ್ನು ಕಾಪಾ­ಡಲು ನಿಜಕ್ಕೂ ಆ ದೇವರೇ ಬರ­ಬೇ­ಕಾ­ಗು­ತ್ತದೆ.

ರುದ್ರಣ್ಣ ಹರ್ತಿ­ಕೋಟೆ

(ಕೃಪೆ-ಉದಯವಾಣಿ ವಾಣಿಜ್ಯ ಸಂಪದ)

Sunday, January 11, 2009

ಅಡಿಕೆಗೆ ಹೋದ ಮಾನ: ಬರುವುದು ಯಾವಾಗ



ಇಂದಿನ ಸರಕಾರದಲ್ಲಿ ಅಡಿಕೆ ಬೆಳೆಯುವ ಪ್ರದೇಶದಿಂದ ಆರಿಸಿಬಂದ ಸಿ.ಎಂ ಹಾಗೂ ಇತರ ಮಂತ್ರಿಗಳಿದ್ದರೂ ಅಡಿಕೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.ಇತರ ವಸ್ತುಗಳ ಬೆಲೆ ಹೆಚ್ಚುತ್ತಿದ್ದರೆ ಅಡಿಕೆಯ ಬೆಲೆ ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದೆ.ಅತಂತ್ರ ಬದುಕಿನಲ್ಲಿ ಒದ್ದಾಡುತ್ತಿರುವ ಬೆಳೆಗಾರ ಸರಕಾರಕ್ಕೆ ಬೆಂಬಲ ಬೆಲೆ ನೀಡುವಂತೆ ಮಾಡಿದ ಮನವಿಗೆ ಸರಕಾರ “ನೋ” ಹೇಳಿದ್ದು ಬರಸಿಡಿಲಿನಂತೆ ಎರಗಿದೆ.
“ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು” ಎಂಬ ನಾಡ್ನುಡಿ ಅಕ್ಷರಶ: ಅಡಿಕೆ ಬೆಳೆಗಾರ ಪಾಲಿಗೆ ನಿಜವಾಗಿದೆ.
ಒಂದು ಕಡೆ ಬೆಳೆ ಇದ್ದರೆ ಬೆಲೆ ಇಲ್ಲ.ಜೊತೆಗೆ ಹವಮಾನ ವೈಪರಿತ್ಯದಿಂದ ಪ್ರತಿ ವರ್ಷ ಒಂದಲ್ಲ ಒಂದು ಹೊಸ ರೋಗ ಅಡಿಕೆಗೆ ಪೂರಕ ಬೆಳೆಗೆ ದಾಳಿ ಇಡುತ್ತಿದ್ದು ಅಡಿಕೆ ಕೃಷಿಕರನ್ನು ಕಂಗೇಡಿಸಿದೆ.ಮತ್ತೊಂದು ಕಡೆ ದರ ವೈಪರಿತ್ಯವನ್ನು ಅನುವಿಸುತ್ತಿರುವ ಅಡಿಕೆ ಬೆಳೆಗಾರರು ,ಎಲ್ಲರೀತಿಯಿಂದಲೂ “ಅಡಕತ್ತರಿಯಲ್ಲಿ ಸಿಕ್ಕ ಅಡಿಕೆ”.ಇತರರಿಗೆ ಮಾತ್ರ “ಶ್ರೀಮಂತ ಬೆಳೆಗಾರ”
ಮಲೆನಾಡು,ಕರಾವಳಿ ಪ್ರದೇಶವಾದ ಶಿರಸಿ,ಸಿದ್ದಾಪುರ,ಯಲ್ಲಾಪುರ,ಸಾಗರ,ಶಿವಮೊಗ್ಗ,ಹೊಸನಗರ,ದಕ್ಷಿಣಕನ್ನಡ ಜಿಲ್ಲೆಗಳಲ್ಲಿ,ಹಾಗೂ ಈಗ ಬಯಲು ಸೀಮೆ,ಕಡೂರು,ಬೀರೂರುಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಈ ಹಿಂದೆ ಅಟಲ್‌ ಬಿಹಾರಿ ವಾಜ್‌ ಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಡಿಕೆಯ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರಾಗಿದ್ದ ಅಂದಿನ ವಾಣಿಜ್ಯ ಮಂತ್ರಿ ದಿ.ರಾಮಕೃಷ್ಣಹೆಗಡೆ ಅವರು ಅಡಿಕೆಗೆ ಬಂಗಾರದ ಬೆಲೆಯನ್ನು ,ವಿದೇಶಿ ಅಡಿಕೆಗೆ ಅಧೀಕ ತೆರಿಗೆ ವಿಧಿಸುವುದರ ಮೂಲಕ,ಇತರ ಬಿಗಿಯಾದ ವಾಣಿಜ್ಯ ನೀತಿಯಿಂದ ದೊರಕಿಸಿಕೊಟ್ಟಿದ್ದರು.ಇದರಿಂದ ಅಡಿಕೆ ಬೆಳೆಗಾರ ಸಂಖ್ಯೆ ಹೆಚ್ಚಿತು.ಕೇವಲ ಪ್ರಾದೇಶಿಕವಾಗಿ ಬೆಳೆಯುವ ಪ್ರದೇಶದಾಚೆ ಇದರ ಬೆಳೆಯುವರು ಸಹ ಹೆಚ್ಚಾದರು.ಬೆಲೆ ಏರಿಕೆಯಿಂದ ತಮ್ಮ ಜೀವನ್ದ ಮೌಲ್ಯವನ್ನು ಹೆಚ್ಚಿಸಿಕೊಂಡ ಅಡಿಕೆ ಬೆಳೆಗಾರರು ನಂತರ ದಿನಗಳಲ್ಲಿ ಹಿಡಿತ ಕಳೆದುಕೊಂಡ ನೀತಿಯಿಂದಾಗಿ ಮತ್ತು ಇತರ ಕಾರಣಗಳಿಂದ ಅಡಿಕೆಯ ದರ ಬೀಳುತ್ತ ನೆಲಕಚ್ಚಿದರೆ,ಆಗ ಏರಬಹುದು,ಈಗ ಏರಬಹುದು ಎಂಬ ಆಸೆಯಿಂದ ಬೆಳೆಗಾರ ಕಾಲ ತಳ್ಳುತ್ತಿದ್ದಾರೆ.ಸರಕಾರ ಈ ಹಿಂದೆ ಬೆಂಬಲ ಬೆಲೆಯನ್ನು ಘೋಷಿಸಿದರೂ ಹೆಚ್ಚಿನ ಜನರಿಗೆ ಪ್ರಯೋಜನ ಸಿಗದೇ ಸೋತಿತು.ಈಗ ಮತ್ತೆ ದರ ಏರಿಳತಕ್ಕೆ ಒಳಗಾಗುತ್ತಿರುವ ಅಡಿಕೆ ಬೆಳೆಗಾರರನ್ನು ಚಿಂತಾಕ್ರೀತರನ್ನಾಗಿ ಮಾಡಿದೆ.ಈ ವರ್ಷ ಮತ್ತೆ ಬೆಂಬಲ ಬೆಲೆ ನೀಡಿ ಬೆಳೆಗಾರರಿಗೆ ಚೈತನ್ಯ ನೀಡಿ ಎಂದು ಬೆಳೆಗಾರರು ಮಾಡಿದ ಮನವಿಗೆ ಸರಕಾರ “ನೋ” ಎಂದು ಹೇಳಿದೆ.ಇದು ಬೆಳೆಗಾರರನ್ನು ಕಂಗೇಡಿಸಿದೆ. ಈ ಹಿಂದೆ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್‌. ಸಮ್ಮೀಶ್ರ ಸರಕಾರ ಇದ್ದಾಗ ಅಂದಿನ ಸಚಿವರಾಗಿದ್ದ ಶಿವಾನಂದ ನಾಯ್ಕ,ನಾಗರಜ ಶೆಟ್ಟಿ ಮುಂತಾದ ಬಿ.ಜೆ.ಪಿ. ಮುಖಂಡರು ಅಡಿಕೆ ಬೆಳೆಗಾರರ ಸಬೆಕರೆದು ,ಬೆಳೆಗಾರರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವ ರವಸೆ ನೀಡಲಾಗಿತ್ತು.ಆದರೆ ಇಂದು ಸರಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಾದಿಯಾಗಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ,ಹಾಲಪ್ಪ,ಕೃಷ್ಣಶೆಟ್ಟಿ,ಸದಾನಂದ ಗೌಡ ಮುಂತಾದವರು ಅಡಿಕೆ ಬೆಳೆಯುವ ಪ್ರದೇಶದಿಂದ ಬಂದವರಾಗಿದ್ದು ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.ಅಂದು ಸಮ್ಮೀಶ್ರ ಸರಕಾರದಲ್ಲಿ ಆಸಕ್ತಿ ತೋರಿಸಿದವರು ಇಂದು ಅವರದೇ ಸರಕಾರ ಆಡಳಿತದಲ್ಲಿ ಇರುವುದರಿಂದ ಅಡಿಕೆ ಬೆಳೆಗಾರರು ತಮ್ಮ ಕೇಲಮೊಂದು ಸಮಸ್ಯೆಗಾದರೂ ಪರಿಹಾರ ಸಿಗಬಹುದು ಎಂದು ಆಶೀಸಿದ್ದರು.
ಅಡಿಕೆಯನ್ನು ಕಮಾಡಿಟಿ ಎಕ್ಸ್ಚೆಂಜ್‌ ನಲ್ಲಿ ಸೇರಿಸಿರುವುದು ,ಶೇರು ಮಾರುಕಟ್ಟೆ ಕುಸೀತ,ಆರ್ಥೀಕ ಕುಸಿತ ಅಡಿಕೆ ಬೆಲೆಗೆ ಹೊಡೆತ ನೀಡಿದರೆ ,ಕುಸಿಯುತ್ತಿರುವ ಆರ್ಥೀಕ ಸ್ಥಿತಿಯಲ್ಲಿ ಅದು ಜೀವನದ ಅವಶ್ಯಕ ವಸ್ತು ಅಲ್ಲದೇ ಇರುವುದರಿಂದ ಸರಕಾರ ಬೆಂಬಲ ಬೆಲೆ ನೀಡಲು ನಿರಾಕರಿಸಿದರೂ ಅಡಿಕೆ ಒಂದು ಕೃಷಿಯ ಅಂಗವಾಗಿದೆ.ಅಡಿಕೆ ಬೆಳೆಗಾರರಿಗೆ ಬೇರೆ ಬೆಳೆ ಇಲ್ಲದೇ ಪುರಾತನ ಕಾಲದಿಂದ ಕುಲ ಕಸುಬಾಗಿ ಬೆಳೆದುಕೊಂಡು ಬರಲಾಗುತ್ತಿದೆ.ಹೆಚ್ಚಿನದಾಗಿ ಗುಟ್ಕಾಕ್ಕೆ ಅಡಿಕೆ ಹೋಗುತ್ತದೆ ಆದರೂ ಪರ್ಯಾಯ ಬಳಕೆಯ ಬಗ್ಗೆ ಸಾಕಷ್ಟು ಸಂಶೋಧನೆ ಆಗದೇ ಇರುವುದು ಅಡಿಕೆ ಬೆಳೆಗಾರರಿಗೆ ಸಾಕಷ್ಟು ಹೊಡೆತ ನೀಡಿದೆ.ಸಂಶೋಧನೆಗೆ ತೋಡಗಿರುವವರಿಗೂ ಸಾಕಷ್ಟು ಪ್ರೋತ್ಸಾಹ ಸಿಗದೆ ಅವರ ಸಂಶೋಧನೆ ನೆಲ ಕಚ್ಚುತ್ತಿದೆ. ರೈತರಿಗೆ ವ್ಯವಹಾರಿಕವಾಗಿ ದರ,ಕ್ಯಾಂಪ್ಕೊದಂತಹ ಸಂಸ್ಥೆಗೆ ದರ ನೆಲಕಚ್ಚಿದಾಗ ಹೆಚ್ಚಿನ ದರದಲ್ಲಿ ಬೆಳೆಯನ್ನು ಖರಿದಿಸುವ ವ್ಯವಸ್ಥೆಗೆ ಆರ್ಥಿಕ ಸಹಕಾರ ,ಹೆಚ್ಚುತ್ತಿರುವ ಇತರ ವಸ್ತುಗಳ ಬೆಲೆ,ಕೂಲಿ,ಗೊಬ್ಬರ ಇತರ ಖರ್ಚನ್ನು ಗಮನಿಸಿ ನೂತನವಾಗಿ ಬೆಂಬಲ ಬೆಲೆ ಘೋಷಿಸುವುದು ಅಗತ್ಯವಾಗಿದೆ.ಇಂದು ಕೆಂಪಡಕಿಗೆ 8-9 ಸಾವಿರ ರೂ ಮತ್ತು ಚಾಲಿ (ಬಿಳಿ) ಅಡಿಕೆಗೆ 6000-7000 ರೂ ದರ ಸಿಗುತ್ತಿದೆ.ಕೆಂಪಡಿಕೆಗೆ 13000 ರೂ.,ಚಾಲಿಗೆ 9000 ರೂ ಬೆಂಬಲ ಬೆಲೆ ಅಗತ್ಯವಾಗಿದೆ ಎಂದು ಬೆಳೆಗಾರರ ಅಭಿಪ್ರಾಯ.ಈಗಾಗಲೆ ಅನೇಕ ಕಡೆಗಳಲ್ಲಿ ಸುಗ್ಗಿ ಆರಂವಾಗಿದ್ದು ಬೆಂಬಲ ಬೆಲೆ ಇಲ್ಲ ಎಂದು ಹೇಳಿರುವುದು ಅಡಿಕೆ ಬೆಲೆ ಮೇಲೆ ಪರಿಣಾಮ ಬೀರುವುದು ನಿಶ್ಚಿತ.ಈ ಹಿಂದೆ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸಲಾಗಿತ್ತು.ಇದಕ್ಕೆ 10ಕೋಟಿ ರೂಗಳನ್ನು ಮಂಜೂರಿ ಮಾಡಿ ಅದರ ಮೂಲಕ ಅಡಿಕೆಗೆ ಚೈತನ್ಯ ತುಂಬುವ ಕೆಲಸವಾಗಿತ್ತು.ಚಾಲಿ ಅಡಿಕೆ 6000ರೂ ಮತ್ತು ಕೆಂಪಡಿಕೆಗೆ 10000ರೂಗಳ ಬೆಂಬಲ ಬೆಲೆಯಡಿಯಲ್ಲಿ ಪ್ರತಿ ರೈತರಿಂದ 5 ಕ್ವೀ. ಅಡಿಕೆಯನ್ನು ಖರಿದಿಸಲಾಗಿತ್ತು.ಬೆಂಬಲ ಬೆಲೆ ಘೋಷಣೆಯಿಂದ 4500 ರೂಗಿದ್ದ ಚಾಲಿ ಅಡಿಕೆ 7000 ರೂಗೆ ಏರಿದರೆ,7000ರದ ಆಸುಪಾಸಲ್ಲಿದ್ದ ಕೆಂಪಡಿಕೆ 10000 ರೂಗಿಂತ ಮೇಲಿನ ಪಡೆದಿತ್ತು.ಆದರೆ ಬೆಂಬಲ ಬೆಲೆ ನೀಡಿದ್ದು ಮಾತ್ರ ಮೇನಲ್ಲಿ!!. ಇದು ಸಾಕಷ್ಟು ಬೆಳೆಗಾರರಿಗೆ ಪ್ರಯೋಜನ ಸಿಗದೆ ಇದ್ದರೂ ಅಡಿಕೆ ಬೆಲೆಗೆ ಚೈತನ್ಯ ನೀಡಿತ್ತು.ಈ ವರ್ಷ ಬೆಂಬಲ ಬೆಲೆ ನೀಡಲು ಇದು ಸೂಕ್ತ ಸಮಯವಾಗಿತ್ತಾದರೂ ಸರಕಾರ ಈ ವರ್ಷ ಬೆಂಬಲ ಬೆಲೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

· “ಕಳ್ಳ” ಅಡಿಕೆ ತಂದಿತು ಆಪತ್ತು:
ಗೌಹಾಟಿ ಮುಂತಾದ ಕಡೆ ಅಡಕೆಯನ್ನು ಅರಣ್ಯಪ್ರದೇಶದಲ್ಲಿ ಬೆಳೆದು ದೊಡ್ಡ ಪ್ರಮಾಣದಲ್ಲಿ ಬಾರತಕ್ಕೆ ಕಳುಹಿಸುತ್ತಿರುವುದರಿಂದ ಮತ್ತು ಮಲೇಷಿಯಾ,ಶ್ರೀಲಂಕಾ ದೇಶಗಳಿಂದ ಕಡಿಮೆ ದರ್ಜೆಯ ಅಡಿಕೆಯನ್ನು ಕಳ್ಳ ವ್ಯವಸ್ಥೆಯಡಿಯಲ್ಲಿ ಬಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ ಬಾರತೀಯ ಅಡಿಕೆಯ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಿದೆ.ದಿ.ರಾಮಕೃಷ್ಣ ಹೆಗಡೆ ವಾಣಿಜ್ಯ ಮಂತ್ರಿಯಾದ ಸಂದರ್ದಲ್ಲಿ ಗ್ಲೋಬಲೈಸೆಶನ್‌ ಇದ್ದರೂ 33-4 ಕಾಯ್ದೆಯಡಿಯಲ್ಲಿ ಆಮದು ಅಡಿಕೆಗೆ ಶೇ.300ರಷ್ಟು ತೆರಿಗೆ ಮತ್ತು ಎಕ್ಸಿವ್‌ ನಿಯಮದಲ್ಲಿ ಹಿಡಿತ ತಂದು ಕಳ್ಳವ್ಯವಹಾರಕ್ಕೆ ಕೊನೆಗಾಣಿಸಿದ್ದರು.ಅದಲ್ಲದೇ ಪಾಕಿಸ್ಥಾನದ ಜೊತೆ ಒಳ್ಳೆ ಸಂಬಂಧ ಬೆಳೆಸಿ ,ಹೆಚ್ಚು ಅಡಿಕೆಯನ್ನು ಉಪಯೋಗಿಸುವ ಪಾಕಿಸ್ಥಾನಕ್ಕೆ ರಪ್ತುಮಾಡಲು ಶ್ರಮಿಸಿದ್ದರು.ಗಡಿ ಸಮಸ್ಯೆಯ ಕರಿ ನೆರಳು ಈಗ ಮತ್ತೆ ಅಲ್ಲಿಗೆ ರಪ್ತು ಮಾಡಲು ತಡೆಯಾಗಿದೆ.ಇದರಿಂದಲೂ ಅಡಿಕೆಗೆ ಅಷ್ಟು ಬೇಡಿಕೆ ಕುಸಿದಂತಾಗಿದೆ.ಬೆಲೆ ಬಂದಾಗ ಮತ್ತು ಸ್ವಲ್ಪ ಕೃಷಿ ಕಾರ್ಯ ಸ್ವಲ್ಪ ಏರುಪೇರಾದರೂ ನಡೆಯುತ್ತದೆ ಎಂದು ಎಲ್ಲ ಪ್ರದೇಶದಲ್ಲಿ ಬೆಳೆಯಲು ಆರಂಭಿದ್ದು ಸಹ ಬೆಲೆ ಯ ಮೇಲೆ ದುಷ್ಪರೀಣಾಮ ಬೀರಿತು. “ಸರಕಾರ ಅಥವಾ ನಬಾರ್ಡ್‌ ಕೃಷಿ ಯೋಜನೆಗಳನ್ನು ತಂದು ಪ್ರಾದೇಶಿಕ ಬೆಳೆಗಳನ್ನು ಆಯಾ ಪ್ರದೇಶದಲ್ಲಿ ಸೀಮಿತಗೊಳಿಸಬೇಕು.ಇದರಿಂದ ಬೆಳೆಗಳಲ್ಲಿ ಸಮತೋಲನ ಉಂಟಾಗುತ್ತದೆ.ಆಯಾಪ್ರದೇಶದಲ್ಲಿ ಪ್ರಾದೇಶಿಕವಾಗಿ ಇರುವ ಬೆಳೆಗೆ ಮಾತ್ರ ಹೆಚ್ಚಿನ ಪ್ರಯೋಜನ ನೀಡುವಂತಾದರೆ,ಗೋದಿ ಬೆಳೆಯುವಲ್ಲಿ ಅಡಿಕೆ ಬೆಳೆಯುವುದಿಲ್ಲ.ಅಡಿಕೆ ಬೆಳೆಯುವಲ್ಲಿ ಕಾಫಿ ಬೆಳೆಯದೆ ಯಾವುದೇ ಬೆಳೆಗಳ ಮೇಲೆ ಆಗುವ ದುಷ್ಪರೀಣಾಮವನ್ನು ತಡೆಗಟ್ಟಬಹುದು” ಎಂದು ಅಭಿಪ್ರಾಯಪಡುತ್ತಾರೆ ಅಡಿಕೆ ಕೃಷಿಕ ಯಲ್ಲಾಪುರದ ಪ್ರಮೋದ ಹೆಗಡೆ.
“ಇಂದು ಅಡಿಕೆ ಉತ್ಪಾದನೆಗೆ ಖರ್ಚು ಹೆಚ್ಚಾಗುತ್ತಿದ್ದು ಬೆಲೆ ಕುಸಿಯುತ್ತಿದೆ.ನುರಿತ ಕೆಲಸಗಾರರ ಅಬಾವ ಉಂಟಾಗುತ್ತಿದ್ದು,ರೋಗಗಳ ಹಾವಳಿ ಮೀತಿ ಮೀರುತ್ತಿದೆ.ಸರಕಾರ ಮಾರ್ಕೇಟಿಂಗ್‌ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ ಸಂಸ್ಥೆಗಳಿಗೆ ರೈತರ ಮಾಲನ್ನು ಬೆಲೆ ಬರುವ ತನಕ ಹಿಡಿದಿಟ್ಟುಕೊಳ್ಳಲು ಅಥವಾ ಹೆಚ್ಚಿನ ಬೆಲೆಗೆ ಇದನ್ನು ಖರಿದಿಸಲು ಸಾಲ ಸೌಲ್ಯ ನೀಡಬೇಕು” ಎಂದೆನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ ಎನ್‌.ವಿ.ಹೆಗಡೆ.
· ತಂಬಾಕು / ಅಡಿಕೆ:
ಅಡಿಕೆ ಮತ್ತು ತಂಬಾಕಿಗೆ ಮೊದಲಿನಿಂದಲೂ ವೈರತ್ವ!!.ಅಡಿಕೆ ಮತ್ತು ತಂಬಾಕಿನ ಲಾಬಿ ಇಂದು ನಿನ್ನೆಯದಲ್ಲ..ಮೊದಲಿನಿಂದಲೂ ಅಡಿಕೆಯ ಮೇಲೆ ಸವಾರಿ ಮಾಡುತ್ತಿರುವ ತಂಬಾಕಿನ ಲಾಬಿ,ಅಡಿಕೆ ವಿಷಕಾರಿ ಎಂದು ಪ್ರಚಾರಮಾಡಿತು.ಗುಟ್ಕಾದಲ್ಲಿನ ವಿಷಕಾರಿ ಪದಾರ್ಥ ಅಡಿಕೆಗೆ ಮಾರಕವಾಗಿ ಅಡಿಕೆಯೇ ವಿಷಕಾರಿ ಪಟ್ಟಿಯಲ್ಲಿದೆ!.ಅದಿಕೆಯಲ್ಲಿರುವ ಅನೇಕ ಉಪಯೋಗಹೊಂದಿದ ಅಂಶಗಳ ಪ್ರಚಾರ ಅವಶ್ಯವಾಗಿದೆ.ಗುಟ್ಕಾದಲ್ಲಿನ ವಿಷ ಪದಾರ್ಥ ಕಡಿಮೆ ಮಾಡಿ ಅಡಿಕೆ ಆರೋಗ್ಯಕ್ಕೆ ಉತ್ತಮ ಎಂಬ ಬಿರುದು ಬೇಕಾಗಿದೆ.
· ಬೇಕಿದೆ ಸಹಾಯ ಹಸ್ತ:ಅಡಿಕೆಯ ಸಂಪೂರ್ಣ ಬೆಲೆ ನಿಯಂತ್ರಿಸುವವರು ಇತರ ರಾಜ್ಯದ ದೊಡ್ಡ ದೊಡ್ಡ ವ್ಯಾಪರಸ್ಥರು.ಕೋಟ್ಯಾಂತರ ವ್ಯವಹಾರ ನಡೆಸುವರು ಇವರೆ.ಆದರೆ ಗುಟ್ಕಾಕೆ ಹೋಗುವ ಅಡಿಕೆ ಕಡಿಮೆ ದರ್ಜೆಯದು ಮತ್ತು ಕೆಲಮೊಂದು ಮದ್ಯಮದರ್ಜೆಯ ಅಡಿಕೆ ಅಲ್ಪ ಪ್ರಮಾಣದಲ್ಲಿ ಬಳಕೆಯಾಗುತ್ತದೆ.ಆದರೆ ಇತರ ದರ್ಜೆಯ ಅಡಿಕೆ ಎಲ್ಲಿಗೆ ಹೋಗುತ್ತದೆ ಯಾರಿಗೂ ತಿಳಿದಿಲ್ಲ.ಅಡಿಕೆಗೆ ಕಡಿಮೆ ರೇಟು ಬಿದ್ದಿದೆ ಎಂದು ಕಡಿಮೆ ಬೆಲೆಗೆ ಖರಿದಿಸಿ ಹೆಚ್ಚಿನ ಲಾ ಮಾಡಿಕೊಳ್ಳುವ ವ್ಯಾಪರಸ್ಥರಿಗೆ ಕಡಿವಾಣ ಹಾಕಲು ಸರಕಾರ ಕ್ಯಾಂಪ್ಕೊ ಮತ್ತು ಶಿವಮೊಗ್ಗದ ಸಂಸ್ಥೆಗೆ 10 ಕೋಟಿರೂಗಳ ನೆರವು ನೀಡಿದ್ದರೂ ಬೆಲೆ ಏರಿಸಲು ಮತ್ತು ಮಾಲನ್ನು ಬೆಲೆ ಬರುವ ತನಕ ರಕ್ಷಿಸಲು ಏನೇನು ಸಾಲದು.ರೈತರಿಗೆ ಮಾಲನ್ನು ಕೆಡದಂತೆ ಹೆಚ್ಚಿನದಿನ ಬರುವಂತೆ ರಕ್ಷಿಸಲು ಔಷಧಿ ಸಾಮಗ್ರಿಗಳ ಸೌಲ್ಯ,ಗೊಡೊನ್‌ ಗಳ ವ್ಯವಸ್ಥೆ,ಆಗಬೇಕಿದೆ.
ಅಡಿಕೆ ಪ್ರಕೃತಿ ಮೇಲೆ ಅವಲಂಬಿಸಿದ್ದು ,ರೋಗಾಣುಗಳ ದಾಳಿ,ಹೊಸ-ಹೊಸ ರೋಗಗಳ ಹೆಚ್ಚಿದೆ.ಬಣ್ಣದ ರೋಗ,ಅಡಿಕೆ ಮಿಳ್ಳೆ ಉದುರುವ ರೋಗ,ಚಂಡೆ ರೋಗ,ಹಳದಿ ರೋಗ ಮುಂತಾದ ರೋಗದಿಂದ ಮಲೆನಾಡಿನ ಹೆಗ್ಗುರುತಾಗಿದ್ದ ಅಡಿಕೆ ತೋಟಗಳು ಬರಿದಾಗುತ್ತಿದೆ.ಒಮ್ಮೆ 1 ಮರ ಹೋದರೂ ಅದು ಬೆಳೆಗಾರರ ಪಾಲಿಗೆ ಅದು ಸಾವಿರಾರು ರೂಗಳಿಗೆ ಸಮಾನ.ಏಕೆಂದರೆ ಅಡಿಕೆ ಬೆಳೆ 1 ವರ್ಷಕ್ಕೆ ಬೆಳೆ ಸಿಗುವಂಥದಲ್ಲ.ಅದರ ಪಸಲು ಕೈಗೆ ಸಿಗಲು 10-15 ವರ್ಷವಾದರೂ ಬೇಕು.ದೀರ್ಘಾವಧಿ ಬೆಳೆಯಾದ್ದರಿಂದ ಅದನ್ನು ರಕ್ಷಿಸಿಕೊಳ್ಳುವುದು ಬೆಳೆಗಾರರಿಗೆ ಅವಶ್ಯವಾಗಿದೆ.ಸರಕಾರ ರೋಗದ ಬಗ್ಗೆ ಸಂಶೋಧನೆಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ.ಶ್ರೀಮಂತ ಬೆಳೆ ಎಂದು ಯಾಮದೇ ಪರಿಹಾರ ಅಡಿಕೆ ಬೆಳೆಗಾರರಿಗೆ ಸಿಗುತ್ತಿಲ್ಲ.ನೈಜ ಸ್ಥಿತಿ ಹಾಗೆ ಇಲ್ಲದೇ ಇರುವುದರಿಂದ ಇದನ್ನು ಪ್ಲಾಂಟೇಶನ್‌ ಬೆಳೆಗೆ ಸೇರಿಸಬೇಕು ಮತ್ತು ಅದಕ್ಕೆ ಸಿಗುವ ಸೌಲ್ಯ ನೀಡಬೇಕು ಎಂಬುದು ಅಡಿಕೆ ಬೆಳೆಗಾರರ ಕನಸು.ಅಡಿಕೆಗೆ ಈಗಾಗಲೇ ಹೋಗಿರುವ ಮಾನ ಯಾವುದರಿಂದಲಾದರೂ ಬರುತ್ತದೆಯೇ?ಕಾದು ನೋಡಬೇಕಷ್ಟೆ.

ನಿತಿನ್‌ ಮುತ್ತಿಗೆ nitinmuttige@gmail.com

Thursday, January 1, 2009

ತುಡುವೆ ಜೇನಿಗೊಂದು ಪಾರದರ್ಶಕ ಪೆಟ್ಟಿಗೆ.


ಜೇನು ತುಪ್ಪದ ರುಚಿ ಹಾಗೂ ಮಹತ್ವವನ್ನು ಸವಿದವರೇ ಬಲ್ಲರು. ಆದರೆ ತುಡುವೆ ಜೇನನ್ನು ಪೆಟ್ಟಿಗೆಯಲ್ಲಿ ಸಾಕುವವರಿಗೆ ತುಪ್ಪದ ಮಹತ್ವ ಇನ್ನೂ ಚೆನ್ನಾಗಿ ಬಲ್ಲವರಾಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ತುಡುವೆ ಜೇನುಹುಳಗಳನ್ನು ಪೆಟ್ಟಿಗೆಯಲ್ಲಿ ಸಾಕುವುದು ಕೃಷಿಕರಿಗೆ ಬಹಳ ಪ್ರಯೋಜನಾಕರಿ ಎಂಬುದು ನಿಜವಾದರೂ, ಜೇನುಕುಟುಂಬಗಳು ಅಕ್ಟೋಬರ್‌ ನವೆಂಬರ್‌ ತಿಂಗಳಿನಲ್ಲಿ ಹಿಸ್ಸೆಯಾಗಿ ಹಾರಿಹೋಗದಂತೆ ತಡೆಯುವುದು ಕಷ್ಟಕರ ಕೆಲಸ. ಮಳೆಗಾಲ ಮುಗಿದ ತಕ್ಷಣ ರಾಣಿ ಹುಳು ಮತ್ತೊಂದು ರಾಣಿಮೊಟ್ಟೆಯನ್ನಿಟ್ಟು ಹಾರಿಹೋಗುತ್ತದೆ. ಇದನ್ನು ತಡೆಯಲು ಕೃತಕ ಹಿಸೆಯನ್ನು ಮಾಡಿಸಬೇಕಾಗುತ್ತದೆ. ಅಥವಾ ಹೊಸ ರಾಣಿ ಮೊಟ್ಟೆಗಳನ್ನು ಕೀಳಬೇಕಾಗುತ್ತದೆ.ಮರದ ಪೆಟ್ಟಿಗೆಯೊಳಗಿನ ಜೇನು ಕುಟುಂಬಗಳ ಹಿಸ್ಸೆ ಪ್ರಕ್ರಿಯೆಯನ್ನು ಗಮನಿಸಲು ಜೇನು ಪೆಟ್ಟಿಗೆಯ ಮುಚ್ಚಳವನ್ನು ಪದೆ ಪದೆ ತೆಗೆದು ನೋಡಬೇಕು. ರಾಣಿ ಮೊಟ್ಟೆಯನ್ನು ಇಟ್ಟಾಗ ಹುಳುಗಳು ಸಿಟ್ಟಿನಿಂದ ಇರುತ್ತವೆಯಾದ್ದರಿಂದ ಮರದ ಪೆಟ್ಟಿಗೆಯ ಮುಚ್ಚುಳ ತೆಗೆದಾಗಲೆಲ್ಲಾ ಹತ್ತಾರು ಜೇನುನೊಣಗಳಿಂದ ಕಚ್ಚಿಸಿಕೊಳ್ಳುವುದು ಅನಿವಾರ್ಯ. ಎರಡು ದಿನಗಳಿಗೊಮ್ಮೆ ಜೇನುಪೆಟ್ಟಿಗೆಯ ಸಂಸಾರಕೋಣೆಯನ್ನು ಮುಚ್ಚಳ ತೆಗೆದು ನೋಡದಿದ್ದರೆ ಜೇನುಕುಟುಂಬ ಪರಾರಿಯಾಗುವುದು ಖಂಡಿತ. ಪೆಟ್ಟಿಗೆಯ ಮುಚ್ಚಳ ತೆಗೆಯದೇ, ರಾಣಿ ಹಾಗು ಇತರ ಹುಳುಗಳ ಕೆಲಸಗಳನ್ನು ಅರಿಯಲು ಅತ್ಯಂತ ಸುಲಭವಾದ ಮಾರ್ಗವೆಂದರೆ, ಜೇನುಪೆಟ್ಟಿಗೆಯ ಸಂಸಾರಕೋಣೆಯ ಹೊರಗಡೆ ಗಾಜನ್ನು ಅಳವಡಿಸುವುದು. ಇದರಿಂದಾಗಿ ಪದೆಪದೇ ಮುಚ್ಚುಳತೆಗೆದು ನೋಡುವ ಕೆಲಸ ತಪ್ಪುತ್ತದೆ ಎನ್ನುವುದು ಹಲವಾರು ವರ್ಷಗಳಿಂದ ತುಡುವೆ ಜೇನಿನ ಕೃಷಿ ಮಾಡುತ್ತಾ ಬಂದಿರುವ ಸಾಗರ ತಾಲ್ಲೂಕಿನ ಕೆರೇಕೈಪ್ರಶಾಂತ್‌ರವರ ಅಭಿಪ್ರಾಯ.
ಹಣವೂ ಉಳಿತಾಯ: ಮರದಿಂದ ತಯಾರಿಸಿದ ಜೇನುಪೆಟ್ಟಿಗೆಗೆ ಸುಮಾರು 900 ರೂಪಾಯಿಗಳು ತಗಲುತ್ತವೆ. ಆದರೆ ಗಾಜಿನಿಂದ ತಯಾರಾಗುವ ಜೇನುಪೆಟ್ಟಿಗೆ ತಗಲುವ ವೆಚ್ಚ 400 ರೂಪಾಯಿ. ಗಾಜು ಮಾರಾಟ ಮಾಡುವ ಅಂಗಡಿಗಳಲ್ಲಿನ ಅಳಿದುಳಿದ ಗಾಜಿನ ತುಣುಕುಗಳು ಅರ್ದ ಬೆಲೆಗೆ ದೊರಕುತ್ತದೆ. ಅವುಗಳಿಗೆ ಅರಾಲ್ಡೇಟ್‌ ಅಂಟನ್ನು ಬಳಸಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಒಂದು ಮುನ್ನೆಚ್ಚರಿಕೆಯನ್ನು ಮಾತ್ರಾ ತೆಗೆದುಕೊಳ್ಳಬೇಕು. ತುಡುವೆ ಜೇನುಗಳು ಕತ್ತಲಿನಲ್ಲಿ ಮಾತ್ರಾ ಗೂಡುಕಟ್ಟಿ ವಾಸಮಾಡುವುದರಿಂದ ಗಾಜಿನಪೆಟ್ಟಿಗೆಯ ಒಳಗಡೆ ಬೆಳಕು ಪ್ರವೇಶಿಸದಂತೆ ದಟ್ಟ ವರ್ಣದ ಬಟ್ಟೆಯಿಂದ ಮುಚ್ಚಬೇಕಾಗುತ್ತದೆ. ಜೇನುನೊಣಗಳ ಚಲನವಲನ ನೋಡಬೇಕಾದ ಸಂದರ್ಭಗಳಲ್ಲಿ ಬಟ್ಟೆಯನ್ನು ಬದಿಸರಿಸಿ ನೋಡಿದರಾಯಿತು. ಗಾಜು ಅಳವಡಿಸಿದ ಪಾರದರ್ಶಕ ಜೇನುಪೆಟ್ಟಿಗೆಯಿಂದ ಪದೆಪದೆ ಜೇನುನೊಣಗಳಿಗೆ ತೊಂದರೆಕೊಡುವುದು ಮತ್ತು ಅವುಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು, ಹಾಗೂ ಜೇನುಕುಟುಂಬಗಳು ಪರಾರಿಯಾಗುವುದನ್ನು ಸುಲಭದಲ್ಲಿ ಕಂಡುಹಿಡಿಯಬಹುದು. ಇಡೀ ಪೆಟ್ಟಿಗೆಯನ್ನು ಗಾಜಿನಿಂದ ರಚಿಸ ಬಯಸುವವರು ಒಳಗಡೆ ಗಾಳಿ ಪ್ರವೇಶಿಸಲು ಸಣ್ಣ ಜಾಗವನ್ನು ಬಿಡಲು ಮರೆಯಬಾರದು.
ರಾಘವೇಂದ್ರ ಶರ್ಮಾ ಕೆ.ಎಲ್‌