Monday, November 10, 2008

ತೆಂಗಿನ ಮರ ಏರುವ ಸುಲಭ ಸಾಧನ


ಕೃಷಿಕರ ಪಾಡು ಹೀನಾಯ. ಕೂಲಿ ಕಾರ್ಮಿಕರು ನಗರಗಳತ್ತ ವಲಸೆ ಹೋಗಿ ಗಾರೆ, ಮರ ಕೈಗಾರಿಕೆ, ಹೋಟೆಲ್‌, ಗಾರ್ಮೆಂಟ್‌ ಕಾರ್ಮಿಕರಾಗುತ್ತಿದ್ದಾರೆ. ಖುದ್ದು ಕೃಷಿ ಕಾರ್ಮಿಕನ ಪುಟ್ಟ ಜಮೀನಿನ ಕಾಮಗಾರಿಗೂ ಆಳು ತತ್ವಾರ. ಇನ್ನು ತೆಂಗಿನ ಮರ ಹತ್ತಿ ಕಾಯಿ ಇಳಿಸುವಂತ ಪರಿಣತ ಚಟುವಟಿಕೆಗಂತೂ ನುರಿತ ಪಟುಗಳ ಅಭಾವ ಹೇಳತೀರದು. ಮಲೆನಾಡು, ಕರಾವಳಿಯ ಹಲವು ಭಾಗಗಳಲ್ಲಿ ಬಿದ್ದ ಸಿಪ್ಪೆಕಾಯಿಯನ್ನಷ್ಟೇ ಹೆಕ್ಕಿ ತಂದಿಟ್ಟುಕ್ಕೊಳ್ಳುವ ಕ್ರಮ ಜಾರಿಗೆ ಬಂದಿದೆ. ಮತ್ತೇನು ಮಾಡಿಯಾರು?
ಪೂರ್ಣ ಯಾಂತ್ರೀಕರಣ ಇಂತಹ ನಾಜೂಕಿನ ಕೆಲಸಕ್ಕೆ ಊಹಿಸಲೂ ಸಾಧ್ಯವಿಲ್ಲ. ಕೊನೆಗೆ ರೋಬೋಟ್‌ ಕೂಡ ಈ ದುಡಿಮೆಗಿಳಿಯುವುದು ಅನುಮಾನ! ನಿರಾಶೆಯ ಅಗತ್ಯವಿಲ್ಲ. ಮರ ಹತ್ತಲು ಮಾನವನಿಗೆ ಉತ್ತೇಜನವೀಯುವಂತ ಉಪಕರಣ ಸೃಷ್ಟಿಸಬಹುದಾದಂತ ಸಾಧ್ಯತೆಯಂತೂ ಇದೆ. ಆ ನಿಟ್ಟಿನಲ್ಲಿಯೇ ಸಂಶೋಧನೆಗಳೂ ನಡೆದಿದೆ.
ನಿಜ, ಅಂತಹ ಹಲವು ಪ್ರಯತ್ನಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ನಡೆದಿವೆ. ಕೇರಳದ ಜೋಸೆಫ್‌ ಎನ್ನುವವರು ಮೊತ್ತಮೊದಲಾಗಿ ಕಂಡುಹಿಡಿದ ಮರ ಏರುವ ಸಾಧನ ಚೆನ್ನಾಗಿಯೇ ಇತ್ತು. ಮೂರಡಿ ಉದ್ದದ ಉಪಕರಣದಲ್ಲಿ ಮರಕ್ಕೆ ಜೋಡಿಸುವಂತ ಎರಡು ಭಾಗ. ಇವುಗಳ ಮೇಲ್ಭಾಗದಲ್ಲಿ ಕೈ ತೂರಿಸಿ ಹಿಡಿದುಕೊಳ್ಳಲು ಕಬ್ಬಿಣದ ಹಿಡಿಕೆ. ಕೆಳತುದಿಯಲ್ಲಿ ಪಾದವನ್ನು ಇರಿಸಿಕೊಳ್ಳುವ ವ್ಯವಸ್ಥೆ. ಇದು ಹೊರಮೈಯಲ್ಲಿದ್ದರೆ ಒಳಭಾಗದಲ್ಲಿ ಮೇಲ್ತುದಿಯಿಂದ ತೆಂಗಿನ ಮರವನ್ನು ಆವಾಹಿಸಿರುವ ಟಯರ್‌ನ ಕ್ಲಿಪ್‌, ಅದಕ್ಕೆ ಕ್ಲಚ್‌ ಕೇಬಲ್‌ನ ಬೆಂಬಲ. ಇನ್ನೊಂದು ಭಾಗವೂ ಇದೇ ತರ.
ಕೇಬಲ್‌ನ್ನು ಮರವನ್ನು ಬಳಸುವಂತೆ ಮಾಡಿ ಕ್ಲಿಪ್‌ ಹಾಕಬೇಕು. ಎರಡರಲ್ಲೂ ಪಾದ ತೂರಿಸಿ ನಿಂತರೆ ಉಪಕರಣ ಬಳಸಲು ಸಿದ್ಧ. ಈಗ ಒಂದು ಕಾಲಿನ ಮೇಲೆ ಪೂರ್ಣ ಭಾರ ಬಿಟ್ಟು ಇನ್ನೊಂದು ಭಾಗವನ್ನು ಕೈಹಿಡಿಕೆಯಿಂದ ಮೇಲೆತ್ತಬೇಕು. ಈಗ ಅದರ ಮೇಲೆ ಭಾರ ಹೇರಿ ಇನ್ನೊಂದನ್ನು ಮೇಲೆತ್ತುವುದು. ಹೀಗೆ ಒಂದನ್ನೊಂದು ಮೇಲೆತ್ತುತ್ತಿದ್ದಂತೆ ನಾವು ಮರ ಏರಿರುತ್ತೇವೆ!
ಇದರಲ್ಲೂ ಕೆಲವು ಸಮಸ್ಯೆಗಳು. ಮರ ಬಾಗಿದ್ದಲ್ಲಿ ಅಥವಾ ಅಂಕುಡೊಂಕಾಗಿದ್ದಲ್ಲಿ ಈ ಸಾಧನ ಉಪಯೋಗಕ್ಕೆ ಬಾರದು. ಕೇಬಲ್‌ ಮರದ ಮೆಲಿದ್ದಾಗ ತುಂಡಾದರೆ? ಬಹುಷಃ ಫೋಟೋ ನಮಗೆ ಹೆಚ್ಚಿನ ಚಿತ್ರಣ ನೀಡುತ್ತದೆ.
ಒಂದಿಷ್ಟು ಫ್ಲಾಶ್‌ಬ್ಯಾಕ್‌ಗೆ ಹೋದರೆ, 60ರ ದಶಕದಲ್ಲಿಯೇ ಎ.ವಿ.ಡೇವಿಸ್‌ ಎಂಬಾತ ತ್ರಿಕೋನಾಕೃತಿಯ ಚೌಕಟ್ಟಿಗೆ ಎರಡು ರೋಲರ್‌ ಅಳವಡಿಸಿದ ವಿನೂತನ ಮರ ಏರುವ ಯಂತ್ರ ರೂಪಿಸಿದ್ದ ಇತಿಹಾಸ ಕಾಣುತ್ತದೆ. ಒಂದು ರೋಲರ್‌ ಮರಕ್ಕೆ. ಅದು ಕೇಬಲ್‌ ಬಲದಿಂದ ಮರಕ್ಕೆ ಭದ್ರ. ಇನ್ನೊಂದು ರೋಲರ್‌ಗೆ ಪೆಡಲ್‌ ವ್ಯವಸ್ಥೆ. ಕೂತ ಮನುಷ್ಯ ಪೆಡಲ್‌ ಮಾಡಿದಂತೆ ಯಂತ್ರ ಮೇಲೇರುತ್ತದೆ. ಉಪಕರಣದ ಭಾರ ಬರೀ 90 ಕೆ.ಜಿ.! ಅದನ್ನು ಪೆಡಲ್‌ ಮಾಡಲು ಕನಿಷ್ಟ 9 ಕೆ.ಜಿ. ಶಕ್ತಿ ಬೇಕಿತ್ತು. ಆಮಟ್ಟಿಗೆ ಇದನ್ನು ವೈಫಲ್ಯ ಎಂದರೂ ಅವತ್ತು ಬಳಸಿದ ವೈಜ್ಞಾನಿಕ ಸೂತ್ರವೇ ಇಂದಿಗೂ ಬಳಕೆಯಾಗುತ್ತಿದೆ. ಅಷ್ಟೇಕೆ, ಇದೀಗ ಕೊಯಮತ್ತೂರಿನ ಕೃಷಿ ಯಾಂತ್ರಿಕ ಸಂಶೋಧನಾ ಕೇಂದ್ರ ತಯಾರಿಸಿದ ಸುಧಾರಿತ ಸಾಧನಕ್ಕೂ ಇದೇ ಆಧಾರ.
ಇದನ್ನು ಲಘು ಸ್ಟೀಲ್‌ ಚೌಕಾಕೃತಿಯ ಪೈಪ್‌ಗಳಿಂದ ತಯಾರಿಸಲಾಗಿದೆ. ಇದಕ್ಕೂ ಎರಡು ಫ್ರೇಮ್‌ಗಳು. ಮೇಲಿನ ಫ್ರೇಮ್‌ನ್ನು ಎರಡೂ ಕೈ ಬಳಸಿ ಚಾಲಿಸಬೇಕು. ಕೆಳಗಿನ ಫ್ರೇಮ್‌ನ್ನು ಒಂದು ಕಾಲಿನಿಂದ ಮೇಲೆತ್ತಿಕೊಳ್ಳುವ ತಂತ್ರ ಅನುಸರಿಸಬೇಕು. ಇವೆರಡೂ ಫ್ರೇಮ್‌ಗಳನ್ನು ಬೆಲ್ಟ್‌ನಿಂದ ಒಂದಕ್ಕೊಂದು ಜೋಡಿಸಲಾಗಿದ್ದು ಮರ ಹತ್ತುವ ವ್ಯಕ್ತಿಯ ಎತ್ತರವನ್ನು ಆಧರಿಸಿ ಫ್ರೇಮ್‌ ನಡುವಣ ಅಂತರವನ್ನು ಹೊಂದಿಸಿಕೊಳ್ಳಬಹುದು. ಗಮನಿಸಬೇಕಾದುದೆಂದರೆ, ಮೇಲ್ಗಡೆಯ ಫ್ರೇಮ್‌ನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಕೆಳ ಫ್ರೇಮ್‌ನಲ್ಲಿ ಕಾಲಿಟ್ಟುಕೊಳ್ಳುವ ಸೌಲಭ್ಯ. ಇಲ್ಲೂ ಅಷ್ಟೇ, ಈ ಫ್ರೇಮ್‌ಗಳು ಒಂದರ ನಂತರ ಇನ್ನೊಂದು ಮೇಲೆ ಕೆಳಗೆ ಚಲಿಸುವುದರಿಂದ ಮರವನ್ನು ಹತ್ತಿ ಇಳಿದು ಮಾಡಬಹುದು.
ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ವಿ.ಜಿ.ಎಫ್‌.ಕುಮಾರ್‌ರ ಪ್ರಕಾರ ಇದು ಶೇಕಡಾ ನೂರರ ಸುರಕ್ಷಿತ ಏರು ಸಾಧನ. ಉಳಿದವುಗಳಲ್ಲಿ ಏರುವ ಮನುಷ್ಯ ಬೀಳುವ ಅಪಾಯ ಇದ್ದೇಇತ್ತು. ಇಲ್ಲಿ ಫ್ರೇಮ್‌ ಒಳಗೇ ಏರುವಾತ ಇರುವುದರಿಂದ ಕಾಲು ಜಾರಿದರೂ ಬಹುಮಟ್ಟಿಗೆ ಸುರಕ್ಷಿತ. ಪರಿಣತಿ ಇಲ್ಲದವರೂ ಹತ್ತು ನಿಮಿಷಗಳಲ್ಲಿ ಒಂದು ಮರ ಹತ್ತಬಹುದು. ಮುಖ್ಯವಾಗಿ, ಸಲಕರನೆಯ ತೂಕ ಅತ್ಯಂತ ಕಡಿಮೆ ಇರುವುದರಿಂದ ಮಾನವ ಶಕ್ತಿ ಬಳಕೆಯಾಗುವುದು ನಗಣ್ಯ. ಬಹುಷಃ ಬಾಗಿದ, ಡೊಂಕಾದ ಮರ ಹತ್ತಲು ಈ ಸಾಧನವೂ ಪೂರಕವಾಗಿಲ್ಲ.
ಇಡೀ ಉಪಕರಣದ ತೂಕ ಬರೀ ಒಂಬತ್ತು ಕೆ.ಜಿ. ಬೆಲೆ ಅಜಮಾಸು ಎರಡೂವರೆ ಸಾವಿರ ರೂಪಾಯಿ. ತಾಂತ್ರಿಕತೆ ಅರ್ಥವಾದಲ್ಲಿ ಸ್ಥಳೀಯ ಲೇತ್‌ಗಳಲ್ಲಿ ಖುದ್ದು ನಾವೇ ತಯಾರಿಸಿಕೊಳ್ಳಲೂಬಹುದು.
ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ 0422 6611204

-ಮಾವೆಂಸ

2 comments:

ತೇಜಸ್ವಿನಿ ಹೆಗಡೆ said...

ತುಂಬಾ ಉಪಯುಕ್ತ ಮಾಹಿತಿಗಳು ರೈತಾಪಿಯಲ್ಲಿ ಬರುತ್ತಿವೆ. ಇದರಿಂದ ಅದೆಷ್ಟೋ ಕೃಷಿಕರಿಗೆ, ಕೃಷಿಯಾಸಕ್ತರಿಗೆ ಉಪಯೋಗವಾಗುವುದು. ರೈತಾಪಿ ಹೀಗೇ ಮುಂದುವರಿಯಲಿ.

Unknown said...

How many price