Tuesday, November 25, 2008

ಸಾವಯವ ದೃಢೀಕರಣ ಈಗ ರೈತರ ಕೈಹಿಡಿತದಲ್ಲಿ ........

ನಮ್ಮ ಬ್ಲಾಗ್‌ನ್ನು ನಿರಂತರವಾಗಿ ಗಮನಿಸುತ್ತಿರುವ ಗಂಭೀರ ಕೃಷಿ ಪತ್ರಿಕೆ ‘ಸಹಜ ಸಾಗುವಳಿ’ಯ ಸಂಪಾದಕಿ ಗಾಯತ್ರಿಯವರು ಒಂದು ಚರ್ಚೆ ನಡೆಯಲಿ ಎಂಬ ಆಶಯದಿಂದ ಈ ಬರಹ ಕಳುಹಿಸಿದ್ದಾರೆ. ಓದುಗ ಮಿತ್ರರಲ್ಲಿ ವಿಮರ್ಶಿಸುವ ತವಕ ಹುಟ್ಟುತ್ತದೆಂಬುದು ‘ರೈತಾಪಿ’ ನಿರೀಕ್ಷೆ.......

ಸಾವಯವ ಲೇಬಲಿಂಗ್ ಸ್ಕೀಮ್(ಸಹಭಾಗಿತ್ವದ ಖಾತ್ರಿ ಪದ್ಧತಿ)ನಿಂದಾಗಿ ........

ಸಾವಯವ ಕೃಷಿಯೇ ನಮ್ಮ ಭವಿಷ್ಯತ್ತಿನ ಕೃಷಿ ಎಂದರೆ ತಪ್ಪಾಗದು. ಕೃಷಿ ಉತ್ಪಾದನೆಯ ಅತ್ಯುತ್ತಮ ಸುಸ್ಥಿರ ವಿಧಾನವಾಗಿ ಇದು ರೂಪಿತವಾಗುತ್ತಿದೆ. ನಮ್ಮಲ್ಲಿ ಸಾವಯವ ಕೃಷಿಗೆ ಪರಿವರ್ತಿತವಾಗಿರುವ ಪ್ರದೇಶ ಅಷ್ಟೇನೂ ಹೆಚ್ಚಿಲ್ಲದೆ ಹೋದರೂ ಪರ್ಯಾಯ ಪದ್ಧತಿಯಾಗಿ ಇದು ರೈತರ ಮತ್ತು ಗ್ರಾಹಕರ ಹೃದಯಕ್ಕೆ ಹತ್ತಿರವಾಗುವಲ್ಲಿ ಸಮರ್ಥವಾಗಿದೆ. ಇದರ ಪರಿಣಾಮವಾಗಿ ಸಾವಯವ ಉತ್ಪನ್ನಗಳ ಉತ್ಪಾದನೆ ಹೆಚ್ಚುತ್ತಿದೆ ಹಾಗೆಯೇ ಗ್ರಾಹಕರಲ್ಲಿ ಅರಿವು ಕೂಡಾ ಹೆಚ್ಚಾಗುತ್ತಿದೆ. 
                                                                                                     
ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವಂತೆ, ಸಾವಯವ ಗುಂಪುಗಳು ಮತ್ತು  ಸಾವಯವ ಉತ್ಪನ್ನಗಳ ಗ್ರಾಹಕರಿಗೆ ದೃಢೀಕರಣದ ಅವಶ್ಯಕತೆ ಕಂಡುಬರುತ್ತಿರುವುದು ಸಹಜ. ಆದರೆ ಈ ಸದ್ಯ ಇರುವ ಸಾವಯವ ಉತ್ಪನ್ನಗಳ ದೃಢೀಕರಣ ಪದ್ಧತಿಯು ಸಾವಯವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಯಸುವ ದೇಶಗಳ ಅವಶ್ಯಕತೆಗಳನ್ನು ಪೂರೈಸುವಲ್ಲಿ ನಿರತವಾಗಿದ್ದು ರಫ್ತು ಮಾರುಕಟ್ಟೆಯನ್ನೇ ಗುರಿಯಾಗಿರಿಸಿದೆ. ಈ ದೃಢೀಕರಣ ಏಜೆನ್ಸಿಗಳ ಕ್ರಮಗಳು ಮತ್ತು ಪದ್ಧತಿಗಳು ತ್ರಾಸದಾಯಕ ಮಾತ್ರವಲ್ಲ, ಅನೇಕ ಸಲ ಪೋಲೀಸ್ ತಪಾಸಣೆಯ ಸ್ವರೂಪ ಪಡೆದುಕೊಂಡು ಬಿಡುತ್ತವೆ. ಇನ್ನು ಇನ್ಸ್ಪೆಕ್ಷನ್‌ನ ಗುಣಮಟ್ಟದ ಬಗ್ಗೆ ಹೇಳದಿರುವುದೇ ಒಳಿತು(ಇದಕ್ಕೆ ಕೆಲ ಅಪವಾದಗಳು ಇಲ್ಲವೆಂದಲ್ಲ). 
ಈ ಏಜೆನ್ಸಿಗಳಲ್ಲಿ ’ಇನ್ಸ್ಪೆಕ್ಷನ್’ ಪ್ರಕ್ರಿಯೆಗೆ ಅಗತ್ಯವಾದ ಮನೋಧರ್ಮ, ಕಾಳಜಿಗಳು ಬಹುತೇಕ ಸಮಯದಲ್ಲಿ ಕಾಣೆಯಾಗಿದ್ದು ಇವರಿಗೆ  ಸಾಮಾನ್ಯವಾಗಿ ಸಾವಯವ ಕೃಷಿಯ ಆಳ ಅರಿವಾಗಲೀ, ಅನುಭವವಾಗಲೇ ಇರುವುದಿಲ್ಲ ಎಂದು ರೈತರಿಗೆ ಅನಿಸಿದೆ. ಇಲ್ಲಿ ಇನ್ಸ್ಪೆಕ್ಷನ್ ಮತ್ತು ದೃಢೀಕರಣ ವಿಪರೀತ ದುಬಾರಿಯಾಗಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರು ಹತ್ತಿರ ಕೂಡಾ ಸುಳಿಯಲಾರರು. ಇತ್ತೀಚಿನ ವರ್ಷಗಳಲ್ಲಿ ಕೆಲ ಏಜೆನ್ಸಿಗಳು ಸಣ್ಣ ರೈತರ ಗುಂಪುಗಳಿಗೆ ತೆರಿಗೆ ವಿನಾಯತಿ ಕೊಟ್ಟು ದೃಢೀಕರಣ ಮಾಡಿಕೊಡುವುದಾಗಿ ಹೇಳಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ ಈ ಪ್ರಕ್ರಿಯೆ ಅಷ್ಟೆ ಪ್ರಮಾಣದ ಬರವಣಿಗೆಯ ಕೆಲಸ, ದಾಖಲಾತಿ ನಿರ್ವಹಣೆಯ ಕೆಲಸವನ್ನು ಮತ್ತು ಅದೇ ನೀತಿ-ನಿಯಮಗಳನ್ನು ಒಳಗೊಂಡಿರುತ್ತದೆ. ಇದು ನಿಜಾರ್ಥದಲ್ಲಿ ರೈತರಿಗೆ ಮಿಗುತಾಯವನ್ನೇನೂ ಮಾಡುವುದಿಲ್ಲ. ಆದರೆ ಇಲ್ಲಿ ಖರ್ಚು ಕಣ್ಣಿಗೆ ಕಾಣದಂತಿದ್ದು ಅಷ್ಟೇ ಅಗೋಚರವಾಗಿಯೇ ರೈತರಿಗೆ ರವಾನೆಯಾಗಿರುತ್ತದೆ. 

ಪ್ರಕೃತಿಯ ಸ್ವಾಭಾವಿಕ ಉತ್ಪನ್ನಕ್ಕೆ ದೃಢೀಕರಣವೇ?!
ಅನೇಕ ಉದ್ಧಾಮ ಸಾವಯವ ರೈತರು, ಗುಂಪುಗಳು ಈ ಮೂರನೆಯವರ ದೃಢೀಕರಣ ( third party certification) ಎನ್ನುವ ಕಲ್ಪನೆಯನ್ನೇ ಇಡಿಯಾಗಿ ತಿರಸ್ಕರಿಸಿದ್ದಾರೆ. ಇದು ದುಬಾರಿಯೆನ್ನುವ ಕಾರಣಕ್ಕೆ ಮಾತ್ರವಲ್ಲ, ಇದರಲ್ಲಿ ನೀತಿ-ನೇಮಕ್ಕೆ, ಔಚಿತ್ಯಕ್ಕೆ ಸಂಬಂಧಿಸಿದ ಕೆಲ ಮೂಲಭೂತ ಪ್ರಶ್ನೆಗಳೇ ಇರುವುದನ್ನು ಎತ್ತಿ ತೋರಿಸಿದ್ದಾರೆ. ಪ್ರಕೃತಿಯ ಸ್ವಾಭಾವಿಕ ಉತ್ಪನ್ನಕ್ಕೆ ದೃಢೀಕರಣವೇ? ಎಂದು ಚಕಿತರೂ, ಕುಪಿತರೂ ಆಗಿ ಪ್ರಶ್ನಿಸಿದ್ದಾರೆ. ಯಾವುದಾದರೂ ಉತ್ಪನ್ನಕ್ಕೆ ದೃಢೀಕರಣ ಬೇಕಾಗಿದ್ದೇ ಆದರೆ, ಅದು ಅಗತ್ಯವಾಗಿ ರಾಸಾಯನಿಕವಾಗಿ ಬೆಳೆದ ಉತ್ಪನ್ನಕ್ಕೇ ಹೊರತು ಸಾವಯವ ಉತ್ಪನ್ನಕ್ಕಲ್ಲ ಎಂಬುದು ಅವರ ವಾದ. ರಸಗೊಬ್ಬರ, ವಿಷ ಬಳಸಿ ಬೆಳೆದ ಈ ಉತ್ಪನ್ನಗಳು ಈ ಭೂಮಿ ಮೇಲಿನ ಮತ್ತು ಅದರಾಚೆಗಿನ ಸಕಲ ಜೀವಜಂತುಗಳಿಗೂ ಅಪಾಯ ತರಬಲ್ಲುವಾದ್ದರಿಂದ ಇವುಗಳಿಗೆ ಲೇಬಲಿಂಗ್ ಮಾಡಿ ಪ್ರತ್ಯೇಕವಾಗಿಡಬೇಕು(ತಂಬಾಕಿನ ಉತ್ಪನ್ನಗಳಿಗೆ ಮಾಡಿದ ಹಾಗೆ)  ಎಂದು ಅವರು ಒತ್ತಾಯಿಸಿಸುತ್ತಾರೆ. ಹೀಗೆ  ಒಬ್ಬ ಸ್ವಾವಲಂಭೀ ರೈತ ತಮ್ಮ ಸರ್ವಸ್ವತಂತ್ರತೆಯ ಮೇಲೆ ಆಕ್ರಮಣ ಮಾಡುವ/ ಧಕ್ಕೆ ತರುವ ಯಾವುದೇ ಪದ್ಧತಿಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. 
                    
ಇನ್ನೊಂದು ಗುಂಪಿನ ಸಾವಯವ ರೈತರು ಕೂಡ ಕೇಂದ್ರೀಕೃತ ಮೂರನೆಯವರ ದೃಢೀಕರಣ ವ್ಯವಸ್ಥೆಯನ್ನು ತಿರಸ್ಕರಿಸುತ್ತಾರೆ. ತಮ್ಮ ಅಗಾಧ ಶ್ರಮದ ಫಲದ ಮತ್ತು ಸಾವಯವ ಚಳುವಳಿಯ ಹಿಂದಿನ ಮೂಲಭೂತ ತತ್ವ ಮತ್ತು ಮೌಲ್ಯವನ್ನು ಗಣನೆಗೆ ತಂದುಕೊಳ್ಳದೆ  ಇದು ತಮ್ಮ ಕೆಲಸವಷ್ಟೇ ಎಂಬ ದೃಷ್ಟಿಯಿಂದ ನೋಡುವ ಸಂಪೂರ್ಣ ಅಪರಿಚಿತರನ್ನು ಒಳಗೊಂಡ ಈ ಪದ್ಧತಿಯನ್ನು ಇವರು ನಿರಾಕರಿಸುತ್ತಾರೆ. ಸಾವಯವ ಉತ್ಪಾದನಾ ಪ್ರಕ್ರಿಯೆಯ ಅರಿವಿಲ್ಲದ ಇಂತಹವರ ದೃಢೀಕರಣವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಇವರು. ಆದಾಗ್ಯೂ, ಇವರಿಗೆ ತಮ್ಮ ಸಾವಯವ ಚಳುವಳಿಯ/ ಉತ್ಪನ್ನದ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ಯಾವುದೋ ಒಂದು ರೀತಿಯ ಖಾತ್ರಿ ಪದ್ಧತಿಯ ಅವಶ್ಯಕತೆ ಇದೆ ಎಂದು ಅನಿಸಿದೆ. ಈ ದೇಶದಲ್ಲಿ ಕೃಷಿ ಉತ್ಪಾದನಾ ವ್ಯವಸ್ಥೆಯಲ್ಲಿ ಯಾವುದೇ ನಿಯಂತ್ರಕ ಸೂತ್ರಗಳನ್ನು ರೂಪಿಸಲು ಈ ವ್ಯವಸ್ಥೆ ಸೋತಿರುವಾಗ ನಮಗೆ ಈ ಬಗೆಯ ದೃಢೀಕರಣ ಅವಶ್ಯಕವಾಗುತ್ತದೆ ಎಂಬುದು ಇವರ ಅಂಬೋಣ. ಇವರ ಆತಂಕ ಸರಿಯೇ. ಏಕೆಂದರೆ ಇಂದು ಮಾರುಕಟ್ಟೆಯಲ್ಲಿ ನೈಸರ್ಗಿಕವಾಗಿ ಬೆಳೆದ, ರಾಸಾಯನಿಕ ಮುಕ್ತ, ಅಥವಾ ಕ್ರಿಮಿನಾಶಕ ಮುಕ್ತ ಎಂದೆಲ್ಲ ಲೇಬಲ್ ಹಚ್ಚಿಕೊಂಡಿರುವ ಪದಾರ್ಥಗಳು ಸಾಕಷ್ಟಿವೆ. ಆದರೆ ಅವು ನಿಜದಲ್ಲಿ ಸಾವಯವವಾಗಿ ಬೆಳೆದ ಉತ್ಪನ್ನಗಳಲ್ಲ, ಅವುಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸಿದ ರಾಸಾಯನಿಕಗಳು ನಿಷೇಧಕ್ಕೊಳಗಾಗದ ರಾಸಾಯನಿಕಗಳಿರಬಹುದು, ಅಥವಾ ಅವರ ಉತ್ಪನ್ನಗಳಲ್ಲಿ ವಿಷ ಶೇಷವು ’ಒಪ್ಪಿತ’ವಾದ ಮಟ್ಟದಲ್ಲಿ ಇರಬಹುದು.

ಹೀಗಾಗಿ ಈ ಗುಂಪಿನ ಸಾವಯವ ರೈತರು ಈಗ ಇರುವ ದೃಢೀಕರಣ ಪದ್ಧತಿಗಿಂತ ಮೂಲಭೂತವಾಗಿ ಭಿನ್ನವಾದ, ಸಹಭಾಗಿತ್ವ ಇರುವ, ರೈತರನ್ನು ಸಾವಯವವೋ ಅಲ್ಲವೋ ಎಂದು ತೀರ್ಮಾನಿಸುವಲ್ಲಿ ಪ್ರಾಥಮಿಕ ಉತ್ಪಾದಕರು(ಸಾವಯವ ರೈತರು) ಪ್ರಮುಖ ಪಾತ್ರ ಹೊಂದಿರುವಂತಹ ಸಾವಯವ ಖಾತ್ರಿ ಪದ್ಧತಿಯೊಂದನ್ನು ಎದುರುನೋಡತೊಡಗಿದರು. ಹೀಗೆ ರೈತರದ್ದೇ ಆದಂತಹ ಖಾತ್ರಿ ಪದ್ಧತಿಯೊಂದಕ್ಕಾಗಿ ನಿರಂತರ ಹುಡುಕಾಟ ಮತ್ತು ಹೋರಾಟದ ಫಲವಾಗಿ ರೂಪುತಳೆದದ್ದು ಸಹಭಾಗಿತ್ವದ ಖಾತ್ರಿ ಪದ್ಧತಿ(Participatory Guarantee system)
ಸಹಭಾಗಿತ್ವದ ಖಾತ್ರಿ ಪದ್ಧತಿ  ಎಂದರೆ ಏನು? 
ಸಹಭಾಗಿತ್ವ ಖಾತ್ರಿ ಪದ್ಧತಿಯಲ್ಲಿ ಕೆಲ ನಿಯಮಗಳನ್ನು ಮತ್ತು ವ್ಯವಸ್ಥೆಯನ್ನು ಅನುಸರಿಸಿ ರೈತರೇ ತಮ್ಮ ಉತ್ಪನ್ನ/ಹೊಲಗಳಿಗೆ ದೃಢೀಕರಣವನ್ನು ಕೊಡುತ್ತಾರೆ. NPOP ಮತ್ತು  IFOAM ಸೂಚಿಸಿರುವ ಸಾವಯವ ಗುಣಮಟ್ಟವನ್ನು ಸಹಭಾಗಿತ್ವದ ಖಾತ್ರಿ ಪದ್ಧತಿ ಅನುಸರಿಸುತ್ತದೆ. ಸಾವಯವ ಖಾತ್ರಿಯನ್ನು ಹೊಂದಬಯಸುವ ರೈತರು /ರೈತ ಗುಂಪುಗಳು ಈ ಮೂಲಭೂತ ಗುಣಮಟ್ಟಗಳನ್ನು ಪಾಲಿಸಬೇಕು ಮತ್ತು ತಾವು ಅನುಸರಿಸುವ ಪದ್ಧತಿ ಮತ್ತು ತಮ್ಮ ಹೊಲದ ಬಗ್ಗೆ ಕನಿಷ್ಟ ದಾಖಲಾತಿಯನ್ನು ಇಡಬೇಕು. 
ಪಿಜಿಎಸ್ ದೃಢೀಕರಣದ ಪದ್ಧತಿಯ ಉಪಯೋಗ ಪಡೆಯಲು ಒಂದು ಅಥವಾ ಹಲವು ಗ್ರಾಮಗಳ ರೈತರು ಒಂದಾಗಿ ಒಂದು ಸ್ಥಳೀಯ ಗುಂಪು ರಚಿಸಿಕೊಳ್ಳಬೇಕು. ಒಮ್ಮೆ ಸ್ಥಳೀಯ ಗುಂಪು(ಕನಿಷ್ಟ ೫ ಮಂದಿ) ರಚನೆಯಾಯಿತೆಂದರೆ ಅದು ಕೆಲ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ. ಸರಳ ದಾಖಲಾತಿಗಳನ್ನು ನಿರ್ವಹಿಸುವುದು, ಗುಂಪಿನ ಕನಿಷ್ಟ ಮೂರು ಮಂದಿ ಸೇರಿ (ನಿಪುಣ ಗುಂಪು) ಹೊಲಗಳಿಗೆ ಭೇಟಿ ಕೊಡುವುದು, ಅನುಮೋದನಾ ಹೇಳಿಕೆಯನ್ನು ತಯಾರಿಸಿ ಗುಂಪಿನ ಸದಸ್ಯರಿಗೆ ಕೊಡುವುದು ಇತ್ಯಾದಿ ಕೆಲಸಗಳನ್ನು ಮಾಡಬೇಕು. ಸ್ಥಳೀಯ ಗುಂಪು ಈ ದಾಖಲೆಯನ್ನು ಪರಿಶೀಲಿಸಿ /ಪರಿಷ್ಕರಿಸಿ/ಸಂಸ್ಕರಿಸಿ ತಮ್ಮ ತೀರ್ಮಾನವನ್ನು ಪಿಜಿಎಸ್ ಪ್ರಾದೇಶಿಕ ಕೌನ್ಸಿಲ್‌ಗೆ ಮುಂದಿನ ಪರಿಶೀಲನೆ ಮತ್ತು ಅವರಿಗೆ ಸ್ಪಷ್ಟನೆಗಳೇನಾದರೂ ಬೇಕಿದ್ದರೆ ಅದಕ್ಕಾಗಿ ಕಳುಹಿಸಿಕೊಡುತ್ತದೆ. ಪಿಜಿಎಸ್ ಪ್ರಾದೇಶಿಕ ಕೌನ್ಸಿಲ್ ಅದನ್ನು ತಾನು ಪರಿಶೀಲಿಸಿದ ನಂತರ ಸ್ಥಳೀಯ ಗುಂಪಿಗೆ ಎಂಟು ಸಂಖ್ಯೆಯ ಕೋಡನ್ನು ನೀಡುತ್ತದೆ. ಮತ್ತು ಪಿಜಿಎಸ್ ಇಂಡಿಯಾ ಕೌನ್ಸಿಲ್‌ಗೆ ಈ ಸ್ಥಳೀಯ ಗುಂಪಿಗೆ ಪಿಜಿಎಸ್ ಸದಸ್ಯ ಗುಂಪೆಂದು ದೃಢೀಕರಣ ನೀಡುವಂತೆ ಶಿಫಾರಸ್ಸು ಮಾಡುತ್ತದೆ. ಪ್ರಾದೇಶಿಕ ಕೌನ್ಸಿಲ್ ಸ್ಥಳೀಯ ಗುಂಪುಗಳಿಗೆ ಸೇರಿದ ಎಲ್ಲ ಡ್ಯಾಟಾವನ್ನು ನಿರ್ವಹಿಸುತ್ತದೆ- ಕಾಗದದಲ್ಲಿ ಮತ್ತು ಕಂಪ್ಯೂಟರ್‌ನಲ್ಲಿ. ಇದರಲ್ಲಿ  ಸ್ಥಳೀಯ ಗುಂಪಿನ ಸಂಚಾಲಕರು, ಸದಸ್ಯರು, ಅವರ ಜಮೀನಿನ, ಬೆಳೆಗಳ ವಿವರ ಇದೆಲ್ಲ ಇರುತ್ತದೆ. 
ಸ್ಥಳೀಯ ಗುಂಪುಗಳನ್ನು ಹೇಗೆ ರಚಿಸಬೇಕು ಎಂಬ ವಿವರವನ್ನು ರಾಜ್ಯ ಸೆಕ್ರೆಟೆರಿಯೆಟ್- ಒ.ಎಫ್.ಎ.ಐ, ನಂ.೨೨, ಮೈಕೆಲ್ ಪಾಳ್ಯ, ಹೊಸತಿಪ್ಪಸಂದ್ರ ಅಂಚೆ, ಬೆಂಗಳೂರು- ೫೬೦ ೦೭೫ ಇವರು ಹೊರತಂದಿರುವ ಪಿಜಿಎಸ್ ದಾಖಲೆಯ ಕನ್ನಡ ಅವತರಣಿಕೆಯಲ್ಲಿ ಕೊಡಲಾಗಿದೆ. 
ಸಾವಯವ ದೃಢೀಕರಣದಲ್ಲಿ ಹೊಸ ಅಧ್ಯಾಯ ತೆರೆಯಬಲ್ಲ ಪಿ.ಜಿ.ಎಸ್ 

ಪಿಜಿಎಸ್ ಪದ್ಧತಿಯಲ್ಲಿ ಗುಣಮಟ್ಟ ಮತ್ತು ನೀತಿ-ನಿಯಮಗಳು ಭಿನ್ನವಾಗಿವೆ ಎಂಬುದು ಮಾತ್ರ ಇದರ ಮಹತ್ವವಲ್ಲ. ವಿಪರೀತ ಬರೆದಿಟ್ಟ ದಾಖಲೆಗಳ ಅಗತ್ಯವನ್ನು ಇದು ಖಂಡಿತವಾಗಿಯೂ ಕಡಿತಗೊಳಿಸುತ್ತದೆ ನಿಜ. ಆದರೆ ಇದರ ಹೆಗ್ಗಳಿಕೆ ಇರುವುದು ಇದು ಹೇಗೆ ಕಾರ್ಯಾಚರಣೆಗೊಳ್ಳುತ್ತಿದೆ ಎಂಬ ಬಗ್ಗೆ. 
ಇಲ್ಲಿನ ದೃಢೀಕರಣ ಪ್ರಕ್ರಿಯೆಯಲ್ಲಿ ಸಾವಯವ ರೈತರು ದೃಢೀಕರಣ ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದುತ್ತಾರೆ. ತಮ್ಮ ಹೊಲಕ್ಕೆ ಸಬಂಧಿಸಿದ ಎಲ್ಲ ಆಗುಹೋಗುಗಳ ಬಗ್ಯೂ ಅವರಿಗೆ ಅರಿವಿರಿತ್ತದೆ. ಮತ್ತು ತಮ್ಮ ಹೊಲಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನಕ್ಕೆ ಅವರು ಭಾಗಿಗಳಾಗಿರುತ್ತಾರೆ. ಅಂದರೆ, ಪಿಜಿಎಸ್ ಪದ್ಧತಿಯು ದೃಢೀಕರಣದ ಕ್ರಮವನ್ನು ಸರಳಗೊಳಿಸುವುದು ಮಾತ್ರವಲ್ಲ, ದೃಢೀಕರಣ ಮಾಡುವುದು ರೈತರ ಕೈಯಲ್ಲಿರುವುದನ್ನು ಖಾತ್ರಿಗೊಳಿಸುತ್ತದೆ. ಈಗಿರುವ ದೃಢೀಕರಣ ಪದ್ಧತಿಗಿಂತ ಇದು ಭಿನ್ನವಾಗುವ ಇನ್ನೊಂದು ರೀತಿಯೆಂದರೆ, ಪಿಜಿಎಸ್ ಅನ್ನು ರೈತರೇ ಅನುಷ್ಟಾನಗೊಳಿಸುವುದು ಮಾತ್ರವಲ್ಲ, ಇದು ರೈತ-ರೈತರ ನಡುವಿನ ನಂಬಿಕೆಯನ್ನು ಆಧರಿಸಿರುತ್ತದೆ ಮತ್ತು ಸ್ಥಳೀಯ ಗುಂಪಿನ ಸದಸ್ಯರು ಹೊಂದಿರುವ ಆ ಪ್ರದೇಶದ ಕೃಷಿ ಪದ್ಧತಿಗಳ ಬಗೆಗಿನ ಆಳವಾದ ಜ್ನಾನವನ್ನು  ಅವಲಂಸಿರುತ್ತದೆ. 

ಯಶಸ್ವಿಯಾಗಿ ಮುಂತೆಗೆದುಕೊಂಡು ಹೋದದ್ದೇ ಆದರೆ ಸಾವಯವ ದೃಢೀಕರಣದಲ್ಲಿ ಪಿಜಿಎಸ್ ಒಂದು ಹೊಸ ಅಧ್ಯಾಯವನ್ನೇ ತೆರೆಯುತ್ತದೆ. ದೃಢೀಕರಣದ ಮೇಲೆ ರೈತರು ನಿಯಂತ್ರಣ ಹೊಂದುವ ಜತೆಗೆ ಪಿಜಿಎಸ್ ಸಾವಯವ ರೈತರ ನಡುವೆ ಪರಸ್ಪರ ವಿಚಾರ ವಿನಿಮಯ, ಕಲಿಕೆ ಮತ್ತು ಸಾಮಾಜಿಕ ಕೊಡುಕೊಳ್ಳುವಿಕೆಗೆ ಅವಶ್ಯವಾದ/ ಅನುಕೂಲವಾದ ವಾತಾವರಣವನ್ನು ಸೃಷ್ಟಿಸಿ ಕ್ರಿಯಾಶೀಲತೆಯನ್ನು ತಂದುಕೊಡುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಪಿಜಿಎಸ್ ವ್ಯವಸ್ಥೆಯು ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಆಚರಣೆಗಳ ರೀತಿ ರಿವಾಜಿಗೆ ತುಂಬಾ ಸರಿಯಾಗಿ ಹೊಂದಿಕೊಳ್ಳುತ್ತದೆ. 
                                        
ಯಾವುದೇ ಪ್ರಗತಿಪರ ವಿಚಾರಕ್ಕೆ ವಿರೋಧ ವ್ಯಕ್ತವಾಗುವಂತೆ, ಪಿಜಿಎಸ್ ಕೂಡ ಕೆಲವು ಹಿತಾಸಕ್ತಿ ಗುಂಪುಗಳಿಂದ ವಿರೋಧ ಎದುರಿಸಿತ್ತು/ಸುತ್ತಿದೆ. ಆದಾಗ್ಯೂ, ಅನೇಕಾನೇಕ ಕಾರ್ಯಕರ್ತರ, ನಾಗರಿಕ ಸಮಾಜ ಸಂಸ್ಥೆಗಳ ಪಟ್ಟುಬಿಡದ ಪ್ರಯತ್ನದಿಂದ ಈಗ IFOAM, FAOಗಳು ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿವೆ. ಪೆಟ್ರೋಲಿಯಂ ಮೂಲದ ಉತ್ಪನ್ನಗಳ ಮೇಲೆ ಅವಲಂಬನೆ ಹೊಂದಿರುವ ರಾಸಾಯನಿಕ ಕೃಷಿಗಿಂತ ಪಿಜಿಎಸ್ ಹೆಚ್ಚು ರೈತರನ್ನು ಸಾವಯವ ಕೃಷಿಗೆ ಒಳಗೊಳ್ಳಿಸುತ್ತದೆ ಎಂಬುದು ಮನವರಿಕೆಯಾಗಿದೆ. ಇದಕ್ಕೆ ಭಾರತ ಸರ್ಕಾರದಿಂದ ಅನುಮೋದನೆ ಪಡೆಯಲು ಪ್ರಯತ್ನ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲೇ ಇದು ಕೈಗೂಡುವ ನಿರೀಕ್ಷೆ ಇದೆ. 


-ಇಕ್ರಾ (ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್), ಬೆಂಗಳೂರು, ದೂರವಾಣಿ: ೨೫೨೮೩೩೭೦, ೨೫೨೧೩೧೦೪ 

No comments: