Sunday, November 9, 2008

ಬಿಟಿ ಬದನೆಗೆ ಒತ್ತು ಬದನೆ ಕಾಯಿಗೆ



22 ಫೆಬ್ರವರಿ 2008, 12 ಘಂಟೆ.
ಕೊಯಂಬತ್ತೂರಿನ ತಮಿಳುನಾಡು ಕೃಷಿವಿಶ್ವವಿದ್ಯಾಲಯದ ಗೇಟಿನ ಮುಂದೆ ಒಂದಷ್ಟು ರೈತರು ಜಮಾಯಿಸಿದರು. ಸ್ವಲ್ಪ ಹೊತ್ತಿನಲ್ಲೇ ಇನ್ನಷ್ಟು ಜನ ಗುಂಪುಕಟ್ಟಿ ಬಂದರು, ಪೆನ್‌-ಪ್ಯಾಡ್‌, ಕ್ಯಾಮರಾ ಹಿಡಿದ ಮಾಧ್ಯಮದ ಮಂದಿ ಜೊತೆಗೂಡಿದರು. ಅದೊಂದು ದೊಡ್ಡ ಗುಂಪೇ ಆಯಿತು. ನೋಡ ನೋಡುತ್ತಿದ್ದಂತೆ ಗುಂಪು ಗೇಟಿನ ಅಂಚಿಗಿದ್ದ ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಎಂಬ ನಾಮ ಫಲಕದ ಕೆಳಗೆ ಈಗ ಮನ್ಸಾಂಟೊ ತೆಕ್ಕೆಗೆ ಎಂಬ ಸ್ಟಿಕ್ಕರ್‌ ಅಂಟಿಸಿದರು. ಒಂದಷ್ಟು ಜನ ಅಲ್ಲೇ ಗೇಟಿನ ಮುಂದೆ ಧರಣಿ ಕುಂತರು. ಇನ್ನಷ್ಟುಜನ ಪತ್ರಕರ್ತರ ಜೊತೆ ಕ್ಯಾಂಪಸ್‌ನ ಒಳನಡೆದು ಬಿಟಿ ಬದನೆ ಎಂದು ಬೋರ್ಡು ತಗುಲಿಸಿದ್ದ ಹೊಲದ ಅಂಚಿನಲ್ಲಿ ಕುಂತರು. ಗುಂಪಿನಿಂದ ಬಿಟಿ ಬೇಡ ಮನ್ಸಾಂಟೋ ತೊಲಗು ನಮ್ಮ ಊಟ: ನಮ್ಮ ಹಕ್ಕು....ಭಿತ್ತಿ ಪತ್ರಗಳು ತಲೆಎತ್ತಿದವು. ಕ್ಯಾಮರಾ, ವಿಡಿಯೋ ಸದ್ದು ಮಾಡಿದವು. ಇಡೀ ಕಾರ್ಯಾಚರಣೆ ಮಕ್ಕಳ್‌ ಟಿವಿಯಲ್ಲಿ ನೇರ ಪ್ರಸಾರ ಕಾಣುತ್ತಿತ್ತು.
ನಿಧಾನವಾಗಿ ಪೋಲೀಸರು ಬಂದರು!. ಬಿಟಿ ಬದನೆಗೆ ಕೈಹಚ್ಚದೆ ಶಾಂತರೀತಿಯಲ್ಲಿ ಧರಣಿ ಕುಂತ ಗುಂಪನ್ನು ಕಂಡು ಅವರಿಗೂ ನಿರಾಸೆಯಾಯಿತು; ಲಾಠಿ ಬೀಸುವ ಅವಕಾಶ ತಪ್ಪಿದ್ದಕ್ಕೆ. ಪ್ರತಿಭಟನಾಕಾರರ ಜೊತೆ ಪೋಲೀಸರು ಕಾದೇ ಕಾದರು. ವಿಶ್ವವಿದ್ಯಾಲಯದ ಯಾಮೊಬ್ಬ ನೌಕರ, ವಿಜ್ಞಾನಿ, ವಿದ್ಯಾರ್ಥಿ ಇತ್ತ ಸುಳಿಯಲಿಲ್ಲ. ಸ್ವತಃ ಡೆಪ್ಯುಟಿ ಕಮೀಷನರ್‌ ಆಫ್‌ ಪೋಲೀಸ್‌ ವಿನಂತಿಸಿದರೂ ಉಪಕುಲಪತಿಗಳು ಸ್ಥಳಕ್ಕೆ ಬರುವ ಧೈರ್ಯ ತೋರಲಿಲ್ಲ.....ಘಂಟೆ ಎರಡರ ಹೊತ್ತಿಗೆ ಪ್ರತಿಭಟನಾಕಾರರು ಚದುರಿದರು.
ಸಂಜೆಯ ವೇಳೆಗೆ ಈ ಘಟನೆ ರಾಷ್ಟ್ರೀಯ ಮಟ್ಟದ ಸುದ್ದಿಯಾಯಿತು. ಬಿಟಿ ಬದನೆ ಪ್ರತಿಭಟನೆಯ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡಿದವು. ಪಿಎಂಕೆ ನಾಯಕ ರಾಮದಾಸ್‌ ಬಿಟಿ ಬದನೆ ತಮಿಳುನಾಡಿಗೆ ಕಾಲಿಡಕೂಡದು ಎಂದು ಗುಡುಗಿದರು. ರಾಜಕೀಯ ನಾಯಕರು ಬಿಟಿ ಬದನೆಯ ಪರ-ವಿರೋಧ ಹೇಳಿಕೆ ಕೊಟ್ಟರು.
ಸಣ್ಣದನಿಯಲ್ಲಿ ಕೇಳಿಬರುತ್ತಿದ್ದ ಬಿಟಿ ಬದನೆಯ ವಿರೋಧಕೆ ದನಿ ಬಂತು.
ಬದನೆಕಾಯಿ ಪುರಾಣ!
ಬಿಟಿ ಹತ್ತಿ ನಮಗೆ ಗೊತ್ತು, ಏನಿದು ಬಿಟಿ ಬದನೆ? ಎಂದು ತಲೆತುರಿಸಿಕೊಳ್ಳುವ ಮುನ್ನ ಬದನೆಕಾಯಿಯ ಇತಿಹಾಸದತ್ತ ಒಮ್ಮೆ ಕಣ್ಣು ಹಾಯಿಸಿ. ಬದನೆಕಾಯಿ ಹುಟ್ಟಿದ್ದೇ ಭಾರತದಲ್ಲಿ. ಕಾಡು ಬದನೆಯನ್ನು ಕೃಷಿಗೆ ಒಗ್ಗಿಸಿದ ಹೆಮ್ಮೆ ನಮ್ಮದು, ನಾಲ್ಕು ಸಾವಿರ ವರ್ಷಗಳಿಂದ ಬದನೆಯ ಕೃಷಿ ಭಾರತದಲ್ಲಿ ನಡೆಯುತ್ತಿದೆ. ರೈತರು ನೂರಾರು ತರದ ಬದನೆ ತಳಿಗಳನ್ನು ಅಭಿವೃದ್ಧಿ ಪಡಿಸಿ ಆಯಾ ಪ್ರದೇಶಕ್ಕೆ ಒಗ್ಗಿಸಿದ್ದಾರೆ. 8ನೇ ಶತಮಾನದಲ್ಲಿ ಅರಬ್‌ ವರ್ತಕರು ಬದನೆಯನ್ನು ಮಧ್ಯಪ್ರಾಚ್ಯದೇಶಗಳಿಗೆ ಪರಿಚಯಿಸಿದರು. ಅಲ್ಲಿಂದ ಇದು ಯೂರೋಪ್‌ಗೆ ಬಂತು; ಇಡೀ ಪ್ರಪಂಚಕ್ಕೆ ಹರಡಿತು.
ನಮ್ಮ ಜನಪದರ ಹಾಡು, ಗಾದೆ ಮಾತು, ಕತೆ, ಕಾವ್ಯಗಳಲ್ಲಿ ಬದನೆ ಮಾತಾಗಿದೆ. ವರಹಾಮಿಹಿರನ ಬೃಹತ್‌ಸಂಹಿತೆಯಲ್ಲಿ ಬದನೆಯ ಪ್ರಸ್ತಾಪ ಬರುತ್ತದೆ. ಸುರಪಾಲನ ವೃಕ್ಷಾರ್ಯವೇದ ಗ್ರಂಥದಲ್ಲಿ ಬದನೆಕಾಯಿಯ ಗಾತ್ರ ದೊಡ್ಡದು ಮಾಡುವ, ಗಿಡ ಪೋಷಿಸುವ ತಂತ್ರಗಳ ವಿವರ ಸಿಗುತ್ತದೆ. ಆರ್ಯುವೇದದಲ್ಲಿ ಔಷಧಿಯಾಗಿ ಬಳಕೆಯಾಗುತ್ತದೆ. ಬದನೆ ಭಾರತೀಯರ ಬದುಕಿನ ಭಾಗವೇ ಹೌದು.
ಇವತ್ತು 5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬದನೆಯ ಕೃಷಿ ನಡೆಯುತ್ತಿದೆ. ಟೊಮೊಟೋದ ನಂತರ ಹೆಚ್ಚು ಬೆಳೆಯುವ, ಬಳಸುವ ತರಕಾರಿ. ವರ್ಷದ ಎಲ್ಲ ಋತುಮಾನಗಳಲ್ಲಿ ಬೆಳೆಯುವ, ಎಲ್ಲ ಮಣ್ಣಿಗೂ ಒಗ್ಗುವ ಅಪರೂಪದ ಬೆಳೆ. ಬಡವರ ತರಕಾರಿ ಎಂಬ ಹೆಗ್ಗಳಿಕೆ.
ಬದನೆಯ ವೈವಿಧ್ಯ ಅಪಾರ, ಹಳ್ಳಿಗಾಡು ಸುತ್ತಿಬಂದರೆ, ನೂರೆಂಟು ತರದ ಬದನೆ ತಳಿಗಳು ಕಾಣಸಿಗುತ್ತವೆ. ಒರಿಸ್ಸಾ ರಾಜ್ಯ ಒಂದರಲ್ಲೇ 226 ಬದನೆ ತಳಿಗಳಿವೆ. ದೊಡ್ಡ ಬದನೆ, ಈರಂಗೆರೆ ಬದನೆ, ರಾಂಪುರ ಬದನೆ, ಗುಳ್ಳ ಬದನೆ, ಜೋಳ ಬದನೆ, ಬಾಲ ಬದನೆ, ಕೊತ್ತಿತಲೆ ಬದನೆ, ನೀಲಿ ಬದನೆ, ಗುಂಡು ಬದನೆ, ಬಿಳಿ ಬದನೆ, ಗೋಟಾಮಂಚೂರಿ, ಮುಳ್ಳು ಬದನೆ, ಬಾಸಲ ಬದನೆ.....ಕನ್ನಡನಾಡಿನ ಬದನೆ ತಳಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆಯಸ್ಸು ಮುಗಿದು ಬಂದಳಿಕೆ ಬಂದ ಗಿಡವನ್ನೇ ಟ್ರಿಮ್‌ ಮಾಡಿ, ಮತ್ತೆ ಮರುನೆಟ್ಟು ನಾಲ್ಕೈದು ವರ್ಷ ಕಾಯಿ ಪಡೆದ ಕೊಂಟು ಬದನೆ, ಕಾಡು ಸುಂಡೆಗಿಡಕ್ಕೆ ಊರು ಬದನೆ ಕಸಿಮಾಡುವ ದೇಸಿ ಪದ್ಧತಿಗಳು ಇವತ್ತಿಗೂ ಜೀವಂತವಾಗಿವೆ.
ಒಟ್ಟಿನಲ್ಲಿ ಬದನೆ ಸಂಸ್ಕತಿ ಭಾರತದ ನೆಲದಲ್ಲಿ ಬಲವಾಗಿ ಬೇರೂರಿದೆ.
ಬದನೆಗೆ ಶನಿಕಾಟ
ಮಣ್ಣಿನಲ್ಲಿ ಬ್ಯಾಸಿಲಸ್‌ ಥುರನ್‌ಜೆನಿಸಸ್‌ ಎಂಬ ಬ್ಯಾಕ್ಟೀರಿಯಾ ಇರುತ್ತವೆ. ಇವನ್ನೇ ಬಿಟಿ ಎನ್ನುವುದು. ಕಾಯಿ ಮತ್ತು ಕಾಂಡ ಕೊರಕ ಕೀಟಗಳಿಗೆ ಮಾರಕವಾಗಬಲ್ಲ ಪ್ರೋಟೀನನ್ನು ಉತ್ಪಾದಿಸುವ ಸಾಮರ್ಥ್ಯ ಬಿಟಿ ಬ್ಯಾಕ್ಟೀರಿಯಾಗಳಿಗಿದೆ. ಕೀಟಗಳಿಗೆ ಮೃತ್ಯುಕಾರಕವಾಗುವ ಬ್ಯಾಕ್ಟೀರಿಯಾದ ವಂಶವಾಯಿ (ಬಿಟಿ ಜೀನ್‌)ಯನ್ನು ಹುಷಾರಾಗಿ ಕತ್ತರಿಸಿ, ಗನ್‌ ಬಳಸಿ, ಗುಂಡು ಹೊಡೆದು ಬದನೆಗಿಡದ ಜೀವಕೋಶಕ್ಕೆ ಸೇರಿಸುತ್ತಾರೆ. ನೆನಪಿರಲಿ! ಇದು ದರ್ಜಿ ಕತ್ತರಿ ಹಿಡಿದು ಬಟ್ಟೆ ಕತ್ತರಿಸಿದಂತಲ್ಲ. ಸೂಕ್ಷ್ಮಾತಿಸೂಕ್ಷ್ಮವಾದ ಬಿಟಿ ಜೀನ್‌ನ್ನು ಪತ್ತೆ ಹಚ್ಚಿ, ಬದನೆಯ ಜೀವಕೋಶಕ್ಕೆ ಸೇರಿಸಲು ಅತ್ಯಾಧುನಿಕ ಸೂಕ್ಷ್ಮದರ್ಶಕ ಯಂತ್ರ, ಸಾಧನ ಸಲಕರಣೆ ಬೇಕು. ಕೋಟ್ಯಾಂತರ ಡಾಲರ್‌ ಖರ್ಚಿನ ಬಾಬತ್ತು ಇದು. ತನ್ನೊಳಗೆ ಬಿಟಿ ಜೀನ್‌ನ್ನು ಸೇರಿಸಿಕೊಳ್ಳುವ ಬದನೆಗಿಡ, ಮೈತುಂಬ ವಿಷ ತುಂಬಿಕೊಂಡ ಪೂತಿನಿ ಯಾಗುತ್ತದೆ. ಕಾಯಿ, ಕಾಂಡ ಕೊರಕ ಹುಳುಗಳು ಬಿಟಿಬದನೆಯ ಕಾಯಿ, ಎಲೆ ತಿಂದರೆ, ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ಸಾವನ್ನಪ್ಪುತ್ತವೆ. ಔಷಧಿ ಹೊಡೆಯುವ ತರಲೆ, ತಾಪತ್ರಾಯ ಇಲ್ಲ. ಇಳುವರಿ ತನ್ನಿಂದ ತಾನೇ ಹೆಚ್ಚುತ್ತದೆ.
ಅರೆ! ಎಂಥ ಅದ್ಧುತ ತಂತ್ರಜ್ಞಾನ?, ಎಂದು ಅಚ್ಚರಿ ಪಡುತ್ತೀರಾ? ಸ್ವಲ್ಪ ನಿಲ್ಲಿ. ಜೀನ್‌ ಜೊತೆಗಿನ ಚೆಲ್ಲಾಟ ಕಣ್ಣಿಗೆ ಬಟ್ಟೆಕಟ್ಟಿಕೊಂಡು ವೈರಿಯ ಜೊತೆ ಸೆಣಸಿದಂತೆ. ನಾವೆಂದುಕೊಂಡಂತೆ ಆಗಬೇಕೆಂದೇನೂ ಇಲ್ಲ. ಬ್ಯಾಕ್ಟೀರಿಯಾದಿಂದ ಪ್ರತ್ಯೇಕಿಸಿದ ಜೀನ್‌ ಪರಿಣಾಮಕಾರಿಯಾದರೂ ಕೂಡ, ಗಿಡದೊಳಗೆ ಹೋದ ನಂತರ ನಿಷ್ಕ್ರಿಯವಾಗಬಹುದು. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಸೃಷ್ಟಿಸಿದಂತೆ. ಸೃಷ್ಟಿಗೊಂಡ ಹೊಸತಳಿ ಹೊಸ ಸಮಸೈಗಳನ್ನು ತಂದೊಡ್ಡಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬ್ಯಾಕ್ಟೀರಿಯಾದಿಂದ ಜೀನ್‌ ಪ್ರತ್ಯೇಕಿಸುವ ತಂತ್ರಜ್ಞಾನ ಮಾನ್ಸಾಂಟೋದಂತ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆ. ಬಿಟಿ ತಳಿಗಳ ಅಭಿವೃದ್ಧಿಗೆ ಬೇಕಾದ Cry1Ac ಬಿಟಿ ಜೀನ್‌, ತಂತ್ರಜ್ಞಾನ ಬೇಕೆಂದರೆ ಮಾನ್ಸಂಟೋದ ಮೊರೆ ಹೋಗಬೇಕು. ಭಾರತದಲ್ಲಿ ಮಾನ್ಸಂಟೋದ ಪಾಲುದಾರ ಮಹಿಕೋ ಬೀಜಕಂಪನಿ ಬಿಟಿಜೀನ್‌ನನ್ನು ಬದನೆಗಿಡದೊಳಗೆ ಕಸಿಮಾಡುವ ತಂತ್ರಜ್ಞಾನಕ್ಕೆ ಪೇಟೆಂಟ್‌ ಪಡೆಯಲು ಅರ್ಜಿಹಾಕಿ ಕುಂತಿದೆ.
ಭಾರತಕ್ಕೆ ಕಾಲಿಟ್ಟ ಬಿಟಿ ಬದನೆ
ಬಿಟಿ ಹತ್ತಿಯ ಮೂಲಕ ವಂಶವಾಯಿ ಪರಿವರ್ತಿತ (ಜಿಎಂ) ಬೆಳೆಗಳಿಗೆ ನಮ್ಮ ದೇಶ ಬಾಗಿಲು ತೆರೆದಿದ್ದೇ ತಡ, ಬದನೆ, ಭತ್ತ, ಆಲೂಗೆಡ್ಡೆ, ಟೊಮೊಟೋ, ಸಾಸಿವೆ, ಪಪ್ಪಾಯದ ಬಿಟಿ ತಳಿಗಳು ಒಳನುಗ್ಗಿದವು.
ಬಿಟಿ ಬದನೆಯ ಪ್ರಯೋಗ ಶುರುವಾಗಿದ್ದು 2000ದಲ್ಲಿ. ಮನ್ಸಾಂಟೋದ ಪಾಲುದಾರ ಕಂಪನಿ ಮಹಿಕೋ ಮೊದಲೆರೆಡು ವರ್ಷ ಹಸಿರು ಮನೆಯೊಳಗೆ ಬಿಟಿ ಬದನೆಯ ಪ್ರಯೋಗನಡೆಸಿತು. 2004ರಲ್ಲಿ ದೇಶದ 11 ವಿವಿಧ ಸ್ಥಳಗಳಲ್ಲಿ ಪ್ರಯೋಗಾರ್ಥವಾಗಿ ಐದು ಬಿಟಿ ಹೈಬ್ರಿಡ್‌ ಬದನೆಯನ್ನು ಬೆಳೆಸಲಾಯಿತು. ದೊಡ್ಡ ಪ್ರಮಾಣದಲ್ಲಿ ಬೆಳೆಸಿನೋಡಲು ಸಿದ್ದವಾಗಿರುವ ಮಹಿಕೋದ ಬಿಟಿ ಹೈಬ್ರಿಡ್‌ ಬದನೆ 2009ರ ಮುಂಗಾರಿಗೆ ಮಾರುಕಟ್ಟೆಗೆ ಬರುವ ಸಿದ್ಧತೆ ನಡೆಸಿದೆ. ಭಾರತದ ಮೊದಲ ವಂಶವಾಯಿ ಪರಿವರ್ತಿತ ಆಹಾರ ಬೆಳೆ ಎಂಬ ಕುಖ್ಯಾತಿ ಬಿಟಿಬದನೆಯದ್ದು.
ಬಿಟಿ ಬದನೆಯ ರಂಗ ಪ್ರವೇಶಕ್ಕೆ ಅನುಕೂಲವಾಗಲೆಂದು ದೇಶದ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಪ್ರಾಯೋಗಿಕ ತಾಕುಗಳಲ್ಲಿ ಮಹಿಕೋದ ಬಿಟಿ ಹೈಬ್ರಿಡ್‌ನ ಮೌಲ್ಯಮಾಪನ ನಡೆಯುತ್ತಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕೂಡ ಈ ಕಾರ್ಯ ದಲ್ಲಿ ತೊಡಗಿದೆ.
ಒಂದೇ ಕಲ್ಲಿಗೆ ಎರಡು ಹಕ್ಕಿ!
ಅತ್ತ ಮಹಿಕೊ ಬಿಟಿ ಹೈಬ್ರಿಡ್‌ ಬದನೆಯನ್ನು ರಂಗಕ್ಕೆ ತರಲು ತಾಲೀಮು ನಡೆಸುತ್ತಿದ್ದರೆ, ಇತ್ತ 2006ರ ಆರಂಭಕ್ಕೆ USAIDನ ಆರ್ಥಿಕ ನೆರವಿನೊಂದಿಗೆ ಅಮೆರಿಕಾದ ಕಾರ್ನೆಲ್‌ ವಿಶ್ವವಿದ್ಯಾಲಯ ಬಿಟಿ ತಂತ್ರಜ್ಞಾನವನ್ನು ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಗಳ ಮೇಲೆ ಹೇರುವ, ಆ ಮೂಲಕ ವಂಶವಾಹಿ ಪರಿವರ್ತಿತ ಆಹಾರ ಬೆಳೆಗಳ ಸಂಶೋಧನೆ ಪ್ರಮುಖವಾಗುವಂತೆ ನೋಡಿಕೊಳ್ಳುವ ಯೋಜನೆ ರೂಪಿಸಿತು. ಬಿಟಿ ಬದನೆಯ ಸಂಶೋಧನೆ ನಡೆಸಲು ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಕೃಷಿವಿಶ್ವವಿದ್ಯಾಲಯ ಮತ್ತು ವಾರಣಾಸಿಯ ಭಾರತೀಯ ತರಕಾರಿ ಸಂಶೋಧನಾ ಮಂದಿರಗಳ ಜೊತೆ ಒಪ್ಪಂದಕ್ಕೆ ಸಹಿಹಾಕಿತು. ಕಾರ್ನೆಲ್‌ ವಿಶ್ವವಿದ್ಯಾಲಯ Cry1Ac ಬಿಟಿಜೀನ್‌ನ್ನು ನೀಡಿದರೆ, ಬದನೆಗಿಡಕ್ಕೆ ಈ ಬಿಟಿಜೀನ್‌ನ್ನು ಸೇರಿಸಲುಬೇಕಾದ ತಂತ್ರಜ್ಞಾನ ಪುಕ್ಕಟೆ ಕೊಡಲು ಮಹಿಕೊ ಮುಂದೆ ಬಂತು. ಬಿಟಿ ತಂತ್ರಜ್ಞಾನವನ್ನು ಉಚಿತವಾಗಿ ನೀಡಿದ ಮಹಿಕೋ ಬಿಟಿ ಬದನೆ ಹೈಬ್ರಿಡ್‌ ತಳಿ ಅಭಿವೃದ್ಧಿ ಪಡಿಸದಂತೆ ಕೃಷಿವಿಶ್ವವಿದ್ಯಾಲಯಕ್ಕ ಷರತ್ತು ವಿಧಿಸಿದೆ! ಸ್ಥಳೀಯ ಅಥವ ಸುಧಾರಿತ ಬದನೆ ತಳಿಗಳಿಗೆ ಮಾತ್ರ ಬಿಟಿ ಜೀನ್‌ ಸೇರಿಸಲು ಅವಕಾಶವಿದೆ. ಮಾರುಕಟ್ಟೆಯಲ್ಲಿ ಎದುರಾಳಿ ಇಲ್ಲದಂತೆ ನೋಡಿಕೊಳ್ಳುವ ಮಾನ್ಸಂಟೋ-ಮಹಿಕೋದ ಜಾಣತನವಿದು.
ಮನೆಬಾಗಿಲಿಗೆ ಬಂದ ಬಿಟಿ ಬದನೆ:
ಕರ್ನಾಟಕದಲ್ಲಿ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಲು ಮುಂದಾಧ ಮೊದಲ ಕೃಷಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಧಾರವಾಡದ್ದು. ಕಳೆದ ಒಂದು ದಶಕದಿಂದ ಸಾವಯವ ಕೃಷಿ ಬೇರುಗಳನ್ನು ಭದ್ರಪಡಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಬಿಟಿ ಬದನೆಯ ಸಂಶೋಧನೆಗೆ ಕೈಹಾಕುವ ಮೂಲಕ ಧಾರವಾಡ ಕೃಷಿ ವಿಶ್ವವಿದ್ಯಾಲಯ ತಾನೇ ಭೋದಿಸಿದ ಸಾವಯವ ಕೃಷಿ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದೆ. ಕಳೆದ ವರ್ಷದ ಹಿಂಗಾರು ಹಂಗಾಮಿನಿಂದ ಬಿಟಿ ಬದನೆಯ ಸಂಶೋಧನೆ ಕಾರ್ಯ ಆರಂಭವಾಗಿದೆ.
ಬಿಟಿ ಬದನೆಯ ಸಂಶೋಧನೆಯ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂಬ ಸುಪ್ರಿಂಕೋರ್ಟು ಆದೇಶವಿರುವುದರಿಂದಲೋ ಏನೋ ಸಂಶೋಧನೆಯ ವಿವರಗಳು ಸುಲಭವಾಗಿ ಸಿಕ್ಕವು. ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕುರುವಿನಶೆಟ್ಟಿ ಸಂಶೋಧನೆಯ ವಿವರಗಳನ್ನು ಬಿಚ್ಚಿಟ್ಟರು. ಅರೇಬಾವಿ ಲೋಕಲ್‌, ಉಡುಪಿಗುಳ್ಳ, ಮಾಳಾಪುರ ಲೋಕಲ್‌, ಗೋವ ಲೋಕಲ್‌, ಮಂಜರಿ ಗೋಟಾ ಮತ್ತು ಸ್ಥಳೀಯ ಬದನೆಯೊಂದಕ್ಕೆ ಬಿಟಿ ಜೀನ್‌ನ್ನು ಸೇರಿಸಲಾಗಿದೆ. ರುಚಿ, ಗಟ್ಟಿತನ ಮತ್ತು ಎಣ್ಣೆಕಾಯಿ ಮಾಡಲು ಸೂಕ್ತವಾದ ಇವು ಜನಪ್ರಿಯ ಜವಾರಿ ತಳಿಗಳು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಂಶೋಧನಾ ಕೇಂದ್ರ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌, ಕಲ್ಲೊಳ್ಳಿ ಫಾರಂ, ಕೊಲ್ಲಾಪುರದ ಬಳಿ, ಗೋವದ ಹತ್ತಿರ ಬಿಟಿ ಬದನೆಯ ಪ್ರಾಯೋಗಿಕ ತಾಕುಗಳಿವೆ ಎನ್ನುತ್ತಾರೆ. ಬೆಳೆಯ ಹಂತಗಳ ಬಗ್ಗೆ ಕೇಳಿದರೆ, ವಿವರ ನೀಡಬೇಕೋ ಬೇಡವೋ ಎಂಬ ಆತಂಕ ಅವರ ಮಾತಿನಲ್ಲಿ ಮಡುಗಟ್ಟುತ್ತದೆ. ಬಿಟಿ ಬದನೆಯ ಕ್ಷೇತ್ರೋತ್ಸವ ಮಾಡುತ್ತೇವೆ, ನಿಮ್ಮನ್ನೆಲ್ಲಾ ಕರೆಯುತ್ತೇವೆ.ಬನ್ನಿ! ಎಂದು ಮಾತು ಜಾರಿಸುತ್ತಾರೆ.
ಹಾಗಾದರೆ ಬಿಟಿಬದನೆಗೆ ಕಾಯಿ ಮತ್ತು ಕಾಂಡ ಕೊರಕದ ಭಾದೆ ಇಲ್ಲವೇ ಇಲ್ಲವಾ? ಔಷಧಿಸಿಂಪರಣೆ ಅಗತ್ಯವೇ ಇಲ್ಲವಾ?
ಬಿಟಿಬದನೆಯಲ್ಲಿ ಕಾಯಿ ಮತ್ತು ಕಾಂಡ ಕೊರಕದ ಹುಳು ನೂರಕ್ಕೆನೂರು ಇಲ್ಲ ಅಂತ ಹೇಳಕಾಗಲ್ಲ, ಆದರೆ ತುಂಬಾ ಕಡಿಮೆ ಇದೆ. ರಸ ಹೀರುವ ಕೀಟಗಳು ಮಾಮೂಲಿನಂತೆ ಇವೆ. ಅವಕ್ಕೆ ಔಷಧಿ ಸಿಂಪಡಣೆ ಬೇಕೇಬೇಕು. ಬಿಟಿಯಲ್ಲದ ತಳಿಗಳಲ್ಲಿ ಶೇ 40ರಷ್ಟು ಕಾಯಿ ಕೊರಕಗಳು ಕಂಡುಬಂದರೆ, ಬಿಟಿ ಬದನೆಗೆ ಶೇ 5 ರಿಂದ 15ರಷ್ಟು ಮಾತ್ರ ಇವೆ. ಅಷ್ಟರ ಮಟ್ಟಿಗೆ ಇಳುವರಿ ಜಾಸ್ತಿಯಾಗುತ್ತೆ ಸಂಶೋಧನೆಯ ಉಸ್ತುವಾರಿ ಹೊತ್ತಿರುವ ಡಾ. ಆರ್‌. ಎಮ್‌. ಹೊಸಮನಿ ಬಿಟಿ ಬದನೆಗೆ ಸರ್ಟಿಫಿಕೇಟ ಕೊಡುತ್ತಾರೆ.
ಸಾವಯವ ಕೃಷಿಯಲ್ಲಿ ಸುಲಭನಾಗಿ ಕಾಯಿ ಮತ್ತು ಕಾಂಡ ಕೊರಕ ಹುಳುವಿನ ನಿಯಂತ್ರಣ ಮಾಡಬಹುದು. ರಾಸಾಯನಿಕಗಳನ್ನು ಮೀರಿಸುವ ಸಸ್ಯಮೂಲ ಕೀಟನಾಶಕಗಳು ನಮ್ಮಲ್ಲಿವೆ, ಬಿಟಿ ಬದನೆಯ ಅಗತ್ಯವೇ ಇಲ್ಲ ಎನ್ನುತ್ತಾರೆ ಹೆಸರಾಂತ ಸಾವಯವ ಕೃಷಿಕ ಭರಮಗೌಡ.
ಜವಾರಿ ಬದನೆಗೆ ಕಂಟಕ
ನೂರಾರು ವರ್ಷಗಳಿಂದ ರೈತರು ದೇಸಿ ಬದನೆ ತಳಿಗಳನ್ನು ಅಭಿವೃದ್ಧಿಪಡಿಸಿ, ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ತಂದಿದ್ದಾರೆ. ಆಯಾ ಮಣ್ಣು, ವಾತಾವರಣ, ಆಹಾರ ಪದ್ಧತಿಗೆ ಅನುಗುಣವಾಗಿ ರೂಪುಗೊಂಡ ಬದನೆ ತಳಿಗಳ ವೈವಿಧ್ಯ ನಮ್ಮಲ್ಲಿದೆ; ಇಂಥ ತಳಿಗಳಿಗೆ ಬಿಟಿ ಜೀನ್‌ ಸೇರಿದರೆ ಇಡೀ ಬದನೆ ವೈವಿಧ್ಯವೇ ಕುಲಗೆಡುವ ಅಪಾಯ ಇದೆ.
ಬಿಟಿ ಜೀನ್‌ ಸ್ಥಳೀಯ ಜವಾರಿ ತಳಿಗಳಿಗೆ ಸೇರುವ ಸಾಧ್ಯತೆಯನ್ನು ವಿಜ್ಞಾನಿಗಳು ಅಲ್ಲಗೆಳೆಯುವುದಿಲ್ಲ. ಆದರೆ ತಳಿಗಳ ವಂಶವಾಹಿ ಕುಲಗೆಡುವ ವಾದ ಒಪ್ಪುವುದಿಲ್ಲ. ಸ್ಥಳೀಯ ತಳಿಗಳಿಗೆ ಬಿಟಿ ಜೀನ್‌ ಸೇರಿದರೆ ಮತ್ತೂ ಉತ್ತಮ. ಕಾಯಿ ಮತ್ತು ಕಾಂಡ ಕೊರಕ ಹುಳುವಿನ ನಿರೋಧಕಶಕ್ತಿ ಹೆಚ್ಚುತ್ತದೆ. ಒಂದು ಜೀನ್‌ ಜಾಸ್ತಿಯಾಗುತ್ತೆ ಅಷ್ಟೇ. ಯಾವ ಅಪಾಯ ಇಲ್ಲ ಡಾ. ಕುರುವಿನ ಶೆಟ್ಟಿ ಭರವಸೆನೀಡುತ್ತಾರೆ. ಸುಮ್ಮನೆ ಊಹಿಸಿಕೊಳ್ಳಿ. ನಿಮ್ಮ ದೇಹಕ್ಕೆ ವಿಷಸೂಸುವ ಜೀನ್‌ಮೊಂದನ್ನು ಸೇರಿಸಿದೆ. ನಿಮ್ಮನ್ನು ಕಚ್ಚಿದ ಸೊಳ್ಳೆ, ತಿಗಣೆ ಸತ್ತು ಬೀಳುತ್ತಿವೆ. ನೀವು ಮಾತ್ರ ವಿಷಮಾನವರಾಗಿ ಬದುಕುತ್ತೀರಿ. ಮೈತುಂಬ ಬಿಟಿ ವಿಷ ಹೊತ್ತ ಬದನೆಯದ್ದೂ ಇದೇ ಕತೆ. ತನ್ನ ನಿಸರ್ಗದತ್ತ ಗುಣವನ್ನ ಕಳೆದುಕೊಂಡು ತನ್ನದಲ್ಲದ ಪರಕೀಯ ಜೀನ್‌ನ್ನು ತನ್ನೊಳಗೆ ಪೋಷಿಸುವ ಹಣೆಬರಹ.
ವಿಜ್ಞಾನಿಗಳು ಮರೆತ ಸಂಗತಿಯೊಂದಿದೆ; ಹೇಳಿ ಕೇಳಿ ಭಾರತ ಬದನೆಯ ಮೂಲ. ಬದನೆ ಹುಟ್ಟಿದ್ದೇ ಇಲ್ಲಿ. ವೈವಿಧ್ಯದ ತಾಣಗಳಲ್ಲಿ ವಂಶವಾಯಿ ಪರಿರ್ವತಿತ (ಜಿಎಂ) ಪ್ರಯೋಗಗಳನ್ನು ಸಡೆಸುವಂತಿಲ್ಲ. ಅದು ನಿಷಿದ್ದ, ಮೂಲ ತಳಿಗಳ ಜೀವದ್ರವ್ಯ ಕುಲಗೆಡೆದಂತೆ ನೋಡಿಕೊಳ್ಳುವ ಕಾಳಜಿ.ಮುಸುಕಿನ ಜೋಳದ ವೈವಿಧ್ಯ ಇರುವ ಮೆಕ್ಸಿಕೋ ದೇಶ, ಜಿಎಂ ಮುಸಿಕಿನ ಜೋಳದ ಪ್ರಯೋಗಗಳಿಗೆ ನಿಷೇದ ಹೇರಿದೆ. ಅಮೇರಿಕಾದ ಕೆಂಗಣ್ಣಿಗೆ ಗುರಿಯಾದರೂ ದಿಟ್ಟವಾಗಿ ನಿಂತಿದೆ. ನಮ್ಮ ವಿಜ್ಞಾನಿಗಳು ಮಾತ್ರ ಅಮೇರಿಕಾದ ಮಾತಿಗೆ ತಲೆದೂಗುತ್ತಾ, ಬದನೆ ಭಾರತ ಮೂಲದ್ದೇ ಅಲ್ಲ ಅನ್ನುತಿದ್ದಾರೆ; ನಮ್ಮ ಮನೆ ಮಗ ನಮ್ಮವನೇ ಅಲ್ಲ ಅಂದಂತೆ.
ಕೃಷ್ಣನ ಪಾದ ಸೇರಲಿರುವ ಉಡುಪಿಗುಳ್ಳ
ಗುಳ್ಳ ಬದನೆ ಕರಾವಳಿಯ ವಿಶಿಷ್ಟ ಬದನೆ. ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಈ ಬದನೆಯಲ್ಲಿ ಹತ್ತಾರು ತಳಿಗಳಿವೆ. ಇವುಗಳಲ್ಲಿ ಮಟ್ಟಿಗುಳ್ಳ ಮತ್ತು ಪೆರಂಪಲ್ಲಿ ಗುಳ್ಳ ಜನಪ್ರಿಯ ಬದನೆ ತಳಿಗಳು. ಮಟ್ಟಿಗುಳ್ಳದಿಂದ ಮಾಡಿದ ವಿಶೇಶ ಖಾದ್ಯವನ್ನು ಶ್ರೀಕೃಷ್ಣ ದೇವಸ್ಥಾನದ ಉತ್ಸವದ ಸಂಧಂರ್ಭದಲ್ಲಿ ಬಳಸುವ ಸಂಪ್ರದಾಯ ಇದೆ. ಮಟ್ಟು ಊರಿನ ನೆಲದಲ್ಲಿ ಬೆಳೆದ ಈ ಗುಳ್ಳದ ರುಚಿ ವಿಶಿಷ್ಟ. ಕರಾವಳಿಗರು ಎಲ್ಲೇ ಇರಲಿ ಅವರಿಗೆ ಗುಳ್ಳ ಬೇಕು. ಅರಬ್‌ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಬೊಂಬಾಯಿ, ಬೆಂಗಳೂರಿಗೆ ಪ್ರತಿದಿನ ಗುಳ್ಳ ಬದನೆ ಬರುತ್ತದೆ. ಗುಳ್ಳ ಬದನೆಯ ವಾಣಿಜ್ಯ ಪ್ರಾಮುಖ್ಯತೆಯನ್ನು ಮನಗೊಂಡ ತೋಟಗಾರಿಕೆ ಇಲಾಖೆ ಭೂಗೋಳಿಕ ಗುರುತಿಸುವಿಕೆಗೆ (GI) ನೊಂದಾಯಿಸಲು ಮತ್ತಿಗುಳ್ಳವನ್ನು ಆಯ್ಕೆ ಮಾಡಿಕೊಂಡಿದೆ. ಕೃಷಿ ವಿವರ, ತಳಿಯ ಇತಿಹಾಸ, ವಂಶವಾಹಿ ನಕ್ಷೆ ಮಾಡುವ ಕಾರ್ಯ ಆರಂಭಿಸಿದೆ. ಭೂಗೋಳಿಕ ಗುರುತುಸುವಿಕೆ ಪ್ರಮಾಣ ಪತ್ರ ಪಡೆದ ತಳಿಗಳಿಗೆ ಬಿಟಿ ಜೀನ್‌ ಸೇರಿಸುವಂತಿಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬ್ರಹ್ಮಾವರ ಸಂಶೋಧನಾ ಕೇಂದ್ರದಲ್ಲಿ ಬಿಟಿ ಜೀನ್‌ ಸೇರಿಸಿದ ಗುಳ್ಳ ಬದನೆಗಳನ್ನು ಬೆಳೆಸಲಾಗಿದೆ. ತೆರೆದ ಬಯಲಿನಲ್ಲಿ ಪ್ರಯೋಗಾತ್ಮಕವಾಗಿ ಬಿಟಿ ಬೆಳೆಯಲು ಪ್ರಪಂಚದ ಯಾವುದೇ ಭಾಗದಲ್ಲಿ ಅನುಮತಿ ಇಲ್ಲ.
ಕರಾವಳಿ ಭಾಗದ ಜೀವವೈವಿಧ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ, ಡಾ. ಎನ್‌. ಮಧ್ಯಸ್ಥ ಮಟ್ಟುಗುಳ್ಳಕ್ಕೆ ಬಿಟಿಜೀನ್‌ ಸೇರಿಸಿದರೆ, ತಳಿಯ ವಂಶವಾಹಿ ಕುಲಗೆಡುವ ಅಪಾಯವಿದೆ ಎಂಬ ಸಂಗತಿಯನ್ನು ಕರೆಂಟ್‌ ಸೈನ್ಸ್‌ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ. ಬಿಟಿ ಧ್ಯಾನದಲ್ಲಿ ಮುಳುಗಿರುವ ನಮ್ಮ ವಿಜ್ಞಾನಿಗಳಿಗೆ ಉಡುಪಿಯ ಶ್ರೀಕೃಷ್ಣನೇ ಜ್ಞಾನೋದಯ ನೀಡಬೇಕು!

ಬಿಟಿ ಬದನೆಯ ಅಪಾಯಗಳು
ಬಿಟಿ ಬದನೆಯ ತಂತ್ರಜ್ಞಾನ ಸಿದ್ಧಗೊಂಡಿದ್ದು 2000ನೇ ವರ್ಷದಲ್ಲಿ. ಬಿಟಿ ಬದನೆಯ ಸುರಕ್ಷತೆಯ ಪ್ರಯೋಗಗಳೆಲ್ಲಾ ಕೇವಲ ಆರು ವರ್ಷದ ಅವಧಿಯವು. ಮನುಷ್ಯನ ಆರೋಗ್ಯಕ್ಕೆ ಯಾವುದೇ ಅಪಾಯ ಇಲ್ಲ ಎಂದು ಮಹಿಕೊ ವರದಿ ಮಾಡಿದೆ. ದೂರಗಾಮಿ ಪರಿಣಾಮಗಳ ಬಗ್ಗೆ ನಮಗೆ ಏನೂ ಗೊತ್ತಿಲ್ಲ. 60ರ ದಶಕದಲ್ಲಿ ಹಸಿರು ಕ್ರಾಂತಿಯ ಕಾಲದಲ್ಲೂ ವಿಜ್ಞಾನಿಗಳು ಮತ್ತು ಕಂಪನಿಗಳು ಇದೇ ಮಾತು ಆಡಿದ್ದರು. ಮುಂದೆ ಏನಾಯಿತೆಂದು ಎಲ್ಲರಿಗೂ ಗೊತ್ತು. ಬಿಟಿ ಬದನೆಯ ವಿರೋಧಿಗಳು ಒಮ್ಮೆ ಬಿಟಿಜೀನ್‌ ಪ್ರಕೃತಿಯಲ್ಲಿ ಸೇರಿದರೆ ಮತ್ತೆ ವಾಪಸ್‌ ತರಲಾಗದು. ಅದರ ಅವಘಡಗಳನ್ನು ನೋಡುವುದಷ್ಟೇ ನಮ್ಮ ಕೆಲಸ ಎನ್ನುತ್ತಾರೆ;ಡಿಡಿಟಿಯ ಹಾಗೆ. ಬಿಟಿ ಬದನೆಯ ಸಂಭವನೀಯ ಅಪಾಯಗಳು ಹೀಗಿವೆ.
· ಬಿಟಿಬದನೆ ತಿಂದ ಮನುಷ್ಯನ ಜೀರ್ಣಾಂಗದ ಕರುಳಿನ ಬ್ಯಾಕ್ಟೀರಿಯಾಗಳಿಗೆ ಬಿಟಿ ಜೀನ್‌ ವರ್ಗಾವಣೆಯಾಗುವ ಅಪಾಯ ಇದೆ. ಇದರಿಂದ ಮನುಷ್ಯನ ನಿರೋಧಕ ಶಕ್ತಿಯ ಮೇಲೆ ಅಡ್ಡ ಪರಿಣಾಮ ಮತ್ತು ಜೀವಕೋಶಗಳು ಅಸಹಜವಾಗಿ ಬೆಳೆಯುವ ಸಾಧ್ಯತೆ ಇದೆ.
ಬಾಲರವಿ.
ಕೃಷಿ ಇಲಾಖೆ ಕರ್ನಾಟಕದ ಎಲ್ಲಾ ತಾಲ್ಲೂಕುಗಳಲ್ಲಿ ಸಾವಯವ ಗ್ರಾಮ ಯೋಜನೆ ಆರಂಭಿಸಿದೆ. ಸಾವಯವ ಧೃಡೀಕರಣ ಮಾಡಲು ಪ್ರತಿ ಯೋಜನೆಗೆ ತಲಾ 30,000 ನೀಡಿದೆ. ವಂಶವಾಹಿ ಪರಿವರ್ತಿತ ಬೆಳೆಗಳಿಗೆ ಸಾವಯವ ದೃಡೀಕರಣ ನೀಡುವಂತಿಲ್ಲ. ಬಿಟಿ ಬದನೆಯನ್ನು ಸಾವಯವದಲ್ಲಿ ಬೆಳೆದರೂ ರೈತ ಅದನ್ನು ಸಾವಯವ ಲೇಬಲ್‌ ಹಚ್ಚಿ ಮಾರುವಂತಿಲ್ಲ.
ಶ್ರೀಮಂತವಾಗಲಿ ಬದನೆ ಸಂಸ್ಕತಿ
ಬದನೆ ನಮ್ಮ ಹಿತ್ತಲಿನ ತರಕಾರಿ; ಸಂಸ್ಕತಿಯ ಭಾಗ. ನಮ್ಮ ಹಿರಿಯರು ಪೋಷಿಸಿತಂದ ಈ ವೈವಿಧ್ಯವನ್ನು ಶ್ರೀಮಂತಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕು. ಅದಾಗದಿದ್ದರೆ ಅದನ್ನು ಕುಲಗೆಡಿಸುವ ಪ್ರಯತ್ನಬೇಡ.
ಬದನೆಯ ಭವಿಷ್ಯ ನಮ್ಮ ಕೈಯಲ್ಲಿದೆ. ಬಿಟಿ ಬದನೆಗೆ ಸಂಶೋಧನೆ ಕೈಬಿಡುವಂತೆ ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ-580005 ಇವರಿಗೆ ಪತ್ರ ಅಥಾವ ಪೋನಿನ ಮೂಲಕ ಒತ್ತಡ ಹೇರಿ. ನಿಮ್ಮ ಈ ಸಣ್ಣ ಪ್ರಯತ್ನ ಬದನೆ ಸಂಸ್ಕತಿ ಉಳಿಸಲು ನೆರವಾಗಲಿದೆ.
ಪೋನ್‌: 0836-2745903, 2747627
-ಜಿ. ಕೃಷ್ಣ ಪ್ರಸಾದ್‌




1 comment:

Me, Myself & I said...

ಕೃಷ್ಣಪ್ರಸಾದ್ ಸಾರ್, ಜಸ್ಟ್ ಸೂಪಾರ್.
ಸಾಕಷ್ಟು ವಿವರವಾಗಿ ಬರೆದಿದ್ದರಿಂದ ಅನೇಕ ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ. ಧನ್ಯವಾದಗಳು.