Wednesday, November 12, 2008

ಹಸಿದವರ ಊಟದಲ್ಲೂ ಹೊಂಚುವುದೇ?


ಸರ್ಕಾರದಿಂದ ರೈತರ ಸಹಾಯಕ್ಕೆಂದು ಹಣ ಧಾರಾಕಾರವಾಗಿಯೇ ಬರುತ್ತಿದೆ. ದುರಂತವೆಂದರೆ, ಬಸವಳಿದ ರೈತನಿಗೆ ಅದು ಹನಿಗಳ ರೂಪದಲ್ಲಷ್ಟೇ ದಕ್ಕುತ್ತಿದೆ.

ಉದಾ.ಗೆ ಕಳೆದ ವರ್ಷ ಕೊಳೆ ರೋಗದಿಂದ ಹೀನಾಯ ಸ್ಥಿತಿಯಲ್ಲಿರುವ ಅಡಿಕೆ ಬೆಳೆಗಾರರಿಗೆ ಅರ್ಧ ಬೆಲೆಯಲ್ಲಿ ಮೈಲುತುತ್ತವನ್ನು ಸರ್ಕಾರ ಸರಬರಾಜು ಮಾಡಿತು. ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನಡಿ ವಿನಿಯೋಗಿಸಿದ ಹಣ ಹಲವು ಕೋಟಿ. ನಿಜಕ್ಕಾದರೆ ರೈತರ ಹೆಸರಿನಲ್ಲಿ ಅಧಿಕಾರಿಗಳ, ರಾಜಕಾರಣಿಗಳ ಬೊಕ್ಕಸ ತುಂಬಿತು.

ಅರ್ಧಬೆಲೆಗೆ ಕೊಟ್ಟದ್ದೇನೋ ನಿಜ. ಆದರೆ ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ್ಜೆಯ ತುತ್ತಕ್ಕೆ ಕೆ.ಜಿ.ಗೆ 145 ರೂ. ಈ ಯೋಜನೆಯಡಿ ಖರೀದಿಗೆ 176 ರೂ! ದಾಖಲೆ ಒದಗಿಸುವ ಪರಿಪಾಟಲು, ಓಡಾಟದ ಖರ್ಚು ಬೇರೆ.
ಪಾಠ ಕಲಿತಿದ್ದರಿಂದಲೇನೋ ಏನೋ ಈ ವರ್ಷ ಹೊಸ ತರದ ವ್ಯವಸ್ಥೆ ಜಾರಿಗೆ ಬಂದಿತು. ತೋಟಗಾರಿಕಾ ಇಲಾಖೆ ಕೇಳಿದ ದಾಖಲೆ ಜೊತೆಗೆ ಕೃಷಿಕರು ತಮ್ಮ ಬ್ಯಾಂಕ್‌ ಖಾತೆಯ ವಿವರವನ್ನೂ ಕೊಡಬೇಕಿತ್ತು. ಎಕರೆಗೆ ಸಿಗುವ ಬರೀ 500 ರೂಪಾಯಿ ಮೊಬಲಿಗೆ ರೈತ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 500 ರೂ. ತೆತ್ತು ಖಾತೆ ಆರಂಭಿಸುವ ಶಿಕ್ಷೆ. ಅದರಲ್ಲೂ ತೋಟ ಮನೆಯ ಅಜ್ಜಿ ಹೆಸರಲ್ಲಿ ಇತ್ತೆಂದರೆ ಅವರ ಹೆಸರಿನ ಖಾತೆಯೇ ಆಗಬೇಕು. ವ್ಯವಹರಿಸಲು ಅವರು ಬೇರ್ಯಾರಿಗೋ ಪವರ್‌ ಆಫ್‌ ಅಟಾರ್ನಿ ಕೊಟ್ಟಿದ್ದರೂ! ಷರತ್ತುಗಳು ಬೇರೆ. ಗ್ರಾಮೀಣ ಬ್ಯಾಂಕ್‌ ಖಾತೆಗೆ ಅವಕಾಶ ಇಲ್ಲ. ಸುಲಭ ನಿರ್ವಹಣೆಯ ಅಂಚೆ ಖಾತೆಯನ್ನು ಪರಿಗಣಿಸಲಿಲ್ಲ.
ಹೋಗಲಿ, ಇಷ್ಟಾದರೂ ಸರಿಯಾಗಿ ರೈತರ ಅಕೌಂಟಿಗೆ ದುಡ್ಡು ಬಂದಿದ್ದರೆ ಸಮಾಧಾನವಿರುತ್ತಿತ್ತು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ತಪ್ಪು ತಪ್ಪಾಗಿ ಹೆಸರು, ಖಾತೆ ಸಂಖ್ಯೆ ನಮೂದಿಸಿದ್ದರಿಂದ ಈ ಅಕ್ಟೋಬರ್‌ ತಿಂಗಳಾದರೂ 2008ರ ಕೊಳೆ ಸಹಾಯಧನ ಪಡೆಯದವರ ಸಂಖ್ಯೆ ನೂರಾರು. ದುರಂತವೆಂದರೆ, ಅಪರಾಧ ಸರ್ಕಾರಿ ನೌಕರರದ್ದು, ಶಿಕ್ಷೆ ಮತ್ತೆ ಹತಾಶ ಕೃಷಿಕನಿಗೇ!
ಇದರ ಬದಲು ಸರ್ಕಾರ ರೈತರಿಗೆ ಅರ್ಧ ಬೆಲೆಯ ಕೂಪನ್‌ ವಿತರಿಸಿ ಸಹಕಾರಿ ಸಂಘಗಳಲ್ಲಿ ಖರೀದಿಸಲು ಸೂಚಿಸಬಹುದಿತ್ತು. ಸಂಘಗಳು ಕೂಪನ್‌ನ್ನು ಪಡೆದು ನಂತರ ನಗದೀಕರಿಸಿಕೊಳ್ಳುವುದು ಸರಳ ವ್ಯವಸ್ಥೆಯಾಗಿರುತ್ತಿತ್ತು. ಭ್ರಷ್ಟಾಚಾರ ತಾನೇತಾನಾಗಿ ಕಡಿಮೆಯಾಗಿರುತ್ತಿತ್ತು.

ಪದೇ ಪದೇ ಬರುವ ಚುನಾವಣೆಗಳಿಗೆ ಫಂಡ್‌ ಹೊಂಚುವ ರಾಜಕಾರಣಿಗಳ ಕಷ್ಟಕ್ಕೆಂದೇ ಕೃಷಿಕರ ಬರ, ನೆರೆಗಳ ಯೋಜನೆಗಳಿವೆ ಎನ್ನುವಂತಾಗಿರುವುದು ಎಷ್ಟು ಸರಿ? ಈ ಮಾತನ್ನು ಓರ್ವ ಕೃಷಿಕನಾಗಿ ದುಃಖದಿಂದ ಹೇಳುವಂತಾಗಿದೆ. ಹಸಿದವರ ತುತ್ತನ್ನೇ ಕಸಿಯುವಷ್ಟು ನಾವು ಕೆಟ್ಟು ಹೋಗಿದ್ದೇವೆಯೇ?

-ಮಾವೆಂಸ

No comments: