Saturday, November 1, 2008

ಜಾನುವಾರು ವಿಮೆಯ ಸುತ್ತಮುತ್ತ......


ವಾಸ್ತವ ಇದು. ಇಂದು ಜಾನುವಾರು ವಿಮೆ ಎನ್ನುವುದು ಸಾಲ ಪಡೆಯುವ ಮುನ್ನ ರೈತ ಕೈಗೊಳ್ಳಲೇಬೇಕಾದ ಒಂದು ಕಾನೂನು ಕ್ರಮ. ಒಂದರ್ಥದಲ್ಲಿ, ಸಾಲ ಕೊಟ್ಟ ಬ್ಯಾಂಕ್‌ ತನ್ನ ಹಣದ ಮರು ಪಾವತಿಗೆ ಅಳವಡಿಸಿಕೊಂಡಿರುವ ಸುರಕ್ಷತೆಯಿದು. `ಕೃಷಿಗೆ ಪೂರಕವಾದುದು ಹೈನುಗಾರಿಕೆ. ಗ್ರಾಮೀಣ ರೈತನ ಆರ್ಥಿಕ ಸಬಲತೆಗೆ ಕಾರಣವಾಗಿದ್ದು ಇದೇ. ಹೆಚ್ಚು ಬೆಲೆ ನೀಡಿ ಖರೀದಿಸಿದ ಉತ್ತಮ ಮಿಶ್ರತಳಿ ಹಸು ಎಮ್ಮೆ, ಎತ್ತು ಅಕಸ್ಮಾತ್‌ ಮರಣಹೊಂದಿದಲ್ಲಿ ನೊಂದ ರೈತನಿಗೆ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆಯೇ ಜಾನುವಾರು ಜೀವವಿಮೆ' ಎನ್ನುವ ಮಾತನ್ನು ನಾವೂ ಮತ್ತೊಮ್ಮೆ ಹೇಳಬಹುದಾದರೂ ಅದು ಅರೆಬರೆ ಸತ್ಯ.
ಸಾಮಾನ್ಯ ವಿಮಾ ಕಂಪನಿಗಳಾದ ಯುನೈಟೆಡ್‌ ಇಂಡಿಯಾ, ಓರಿಯಂಟಲ್‌, ನ್ಯಾಷನಲ್‌ ಮುಂತಾದುವುಗಳು ಜಾನುವಾರುಗಳಲ್ಲಿ ಜೀವವಿಮೆ ಕೈಗೊಳ್ಳುತ್ತಿವೆ. ಜಾನುವಾರು ಮೌಲ್ಯದ ಶೇ.4.5-5ರಷ್ಟನ್ನು ವಿಮಾ ಕಂತಾಗಿ ಪಾವತಿಸಬೇಕಾಗುತ್ತದೆ. ಮೂರರಿಂದ 12 ವರ್ಷದ ರಾಸುಗಳನ್ನು ವಿಮೆಯ ವ್ಯಾಪ್ತಿಗೊಳಪಡಿಸಬಹುದು. ವಿಮಾ ಅವಧಿಯಲ್ಲಿ ರಾಸು ಮರಣ ಹೊಂದಿದರೆ ಮಾತ್ರ ಮಾರುಕಟ್ಟೆ ಬೆಲೆಯನ್ನು ಮರುಪಾವತಿಸಲಾಗುತ್ತದೆ. ಒಂದು ವೇಳೆ ರಾಸು ಕಾರಣಾಂತರಗಳಿಂದ ನಿಷ್ಪ್ರಯೋಜಕವಾದರೆ (ಕಾಲು ಮುರಿದುಕೊಳ್ಳುವುದು, ಕೆಚ್ಚಲುಬಾವಿನಿಂದ ಹಾಲು ಬಾರದಿರುವುದು, ಗರ್ಭ ಧರಿಸದೇ ಜೀವನ ಪೂರ್ತಿ ಬರಡಾಗುವುದು ಇತ್ಯಾದಿ) ವಿಮೆ ಪಾವತಿಸಲಾಗುವುದಿಲ್ಲ.
ಒಂದಂತೂ ನಿಜ. ಮನೆಯಲ್ಲಿ `ಹಾಗೇ ಸುಮ್ಮನೆ' ತಮ್ಮ ಹಾಲು ಬಳಕೆಗೆ, ಗೊಬ್ಬರ ತಯಾರಿಕೆಗೆಂದು ಎಮ್ಮೆ ದನ ಸಾಕುವವರು ತಮ್ಮ ರಾಸುಗಳಿಗೆ ಜೀವವಿಮೆ ಮಾಡಿಸುವ ಸಂಪ್ರದಾಯ, ವ್ಯವಸ್ಥೆ ನಮ್ಮಲ್ಲಂತೂ ಇಲ್ಲ. ಅಂತಹ ಮನಸ್ಥಿತಿ ನಮಗಾಗಲಿ ವಿಮಾ ಕಂಪನಿಗಾಗಲಿ ಇಲ್ಲ ಎನ್ನುವುದಕ್ಕೆ `ಖಾಸಗಿ ವಿಮೆ'ಗಿರುವ ಕಟ್ಟುಪಾಡುಗಳೇ ಸಾಕ್ಷಿ. ಖಾಸಗಿಯಾಗಿ ರೈತ ತನ್ನ ಬಿಡಿ ಎಮ್ಮೆಗೆ, ದನಕ್ಕೆ ವಿಮೆ ಮಾಡಿಸಲು ಅವಕಾಶವೇ ಇಲ್ಲ. ಮಾಡಿಸಲೇಬೇಕೆಂದಿದ್ದರೆ, ತನ್ನಲ್ಲಿರುವ ಎಲ್ಲ ಜಾನುವಾರುಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಬೇಕು!
ಸಾಧಕ ಬಾಧಕಗಳ ಮಾತು ಕೊನೆಗಿರಲಿ. ಕೊನೆಪಕ್ಷ ಪಶು ಸಾಲ ನಿರೀಕ್ಷಿಸುವ ರೈತ ಏನೆಲ್ಲ ಹರ್ಡಲ್ಸ್‌ ದಾಟಬೇಕಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ವಿಮೆ ಮಾಡಿಸುವುದು ಹೇಗೆ?
ಮೊದಲಾಗಿ ನೊಂದಾಯಿತ(.ಗಿ.ಅ) ಸರ್ಕಾರಿ ಅಥವಾ ಖಾಸಗಿ ಪಶುವೈದ್ಯರಿಂದ ರಾಸುವಿನ ಆರೋಗ್ಯ ದೃಢೀಕರಣ ಮಾಡಿಸಿ, ಕಿವಿಗೆ ಗುರುತಿನ ಸಂಖ್ಯೆಯುಳ್ಳ ಓಲೆಯನ್ನು ಹಾಕಿಸಬೇಕು. ರೈತನೊಂದಿಗೆ ಓಲೆ ಸಹಿತದ ರಾಸುವಿನ ಛಾಯಾಚಿತ್ರ ವಿಮೆ ಮಾಡಿಸುವ ವೇಳೆ ಕಡ್ಡಾಯ. ವಿಮೆಯನ್ನು ವರ್ಷಕ್ಕೊಮ್ಮೆ ನವೀಕರಿಸಬೇಕಾಗುತ್ತದೆ. ವಿಮೆ ಮಾಡಿಸಿದ 15 ದಿನಗಳ ನಂತರವೇ ರಾಸು ವಿಮೆಗೊಳಪಡುತ್ತದೆ. ರಾಸುವನ್ನು ಮಾರಿದರೆ ವಿಮೆಯೂ ವರ್ಗಾವಣೆಯಾಗುತ್ತದೆ. ಗುರುತಿನ ಸಂಖ್ಯೆಯ ಓಲೆ ಕಡ್ಡಾಯವಾಗಿದ್ದು ಅಕಸ್ಮಾತ್‌ ಬಿದ್ದುಹೋದಲ್ಲಿ ವಿಳಂಬ ಮಾಡದೆ ಪುನಃ ಹಾಕಿಸಿ ವಿಮಾ ಕಂಪನಿಗೆ ತಪ್ಪದೆ ತಿಳಿಸಬೇಕಾಗುತ್ತದೆ. ಅದರಲ್ಲಿರುವ ವಿಶಿಷ್ಟ ನಂಬರ್‌ ರಾಸುವಿನ ಗುರುತಾಗಿರುವುದೇ ಈ ನಿಯಮಕ್ಕೆ ಕಾರಣ. ಸಾಂಕ್ರಾಮಿಕ ರೋಗಗಳಿಗೆ ಕಾಲಕಾಲಕ್ಕೆ ಮುಂಜಾಗ್ರತಾ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವುದು ಕ್ಷೇಮ.
ಒಂದೊಮ್ಮೆ ವಿಮೆ ಮಾಡಿಸಿದ ರಾಸು ಮರಣ ಹೊಂದಿದರೆ ವಿಳಂಬಮಾಡದೆ ಸಂಬಂಧಿಸಿದ ವಿಮಾಕಂಪನಿ ಮತ್ತು ಬ್ಯಾಂಕಿಗೆ ಲಿಖಿತವಾಗಿ ತಿಳಿಸಬೇಕು. ವಿಮಾ ಅಧಿಕಾರಿಗಳು ಮೃತ ರಾಸಿನ ಪರಿಶೀಲನೆ ಮಾಡಬೇಕಾಗಿರುವುದರಿಂದ ರಜಾದಿನವಾದರೂ ತಪ್ಪದೇ ಈ ಕೆಲಸ ನಿರ್ವಹಿಸಬೇಕಾಗುತ್ತದೆ. ಮೃತ ರಾಸುವಿನ ಫೋಟೋ, ಗುರುತಿನ ಓಲೆ ಹಾಗೂ ಚಿಕಿತ್ಸೆ ನೀಡಿದ್ದರೆ ಚಿಕಿತ್ಸಾ ಪ್ರಮಾಣಪತ್ರವನ್ನು ಕ್ಲೇಮು ಫಾರಂನೊಂದಿಗೆ ಸಲ್ಲಿಸಬೇಕು. ನೋಂದಾಯಿತ(.ಗಿ.ಅ) ಸರ್ಕಾರಿ ಪಶುವೈದ್ಯರಿಂದ ಶವಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಎನ್ನುವುದನ್ನು ಮರೆಯುವಂತಿಲ್ಲ.
ವಿಮೆ ತಿರಸ್ಕರಿಸಲ್ಪಡುತ್ತದೆ!
ಊಹ್ಞೂ, ಜಾನುವಾರಿಗೆ ವಿಮೆ ಇದೆ ಎಂದರೂ ಅದನ್ನು ವಿಪರೀತ ಜಾಗ್ರತೆಯಿಂದ ಸಾಕುವುದನ್ನು ತಪ್ಪಿಸುವಂತಿಲ್ಲ. ವಿಮಾ ಕಂಪನಿ ರೈತ ಪಾಲನೆಯಲ್ಲಿಯೇ ತಪ್ಪೆಸಗಿದ್ದಾನೆಂಬ ಕಾರಣ ಹೂಡಿ ವಿಮೆ ನಿರಾಕರಿಸುವ ಸಂಭವವಿದ್ದೇ ಇದೆ. ಅಷ್ಟಲ್ಲದೆ ರಾಸುಗಳು ಕಾಲುಬಾಯಿ ರೋಗ, ಗಳಲೆರೋಗ, ಚಪ್ಪೆರೋಗದಂತ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಲ್ಲಿ ವಿಮೆಯನ್ನು ನೀಡುವುದಿಲ್ಲ. ಅಷ್ಟೇಕೆ, ವಿಮೆ ಹೊಂದಿದ ಪಶುಗೆ ರೈತ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂಬ ಅಂಶವನ್ನು ಮುಂದಿಟ್ಟೂ ವಿಮೆ ನಿರಾಕರಿಸಬಹುದು.
ಆ ಮಟ್ಟಿಗೆ ಜಾನುವಾರು ವಿಮೆಯ ವ್ಯಾಖ್ಯೆ, ನಿಯಮಗಳು ಬದಲಾಗಲೇಬೇಕು. ರಾಸುವಿನ ಮೌಲ್ಯದ ಶೇ.ಐದರ ಮೊತ್ತ ವಾರ್ಷಿಕ ವಿಮಾ ಕಂತಾಗಿರುವುದು ದುಬಾರಿಯೇ. ಬಹುಷಃ ವಿಮಾ ಕಂಪನಿಗಳು ಇದರಿಂದ ಗಳಿಸುವ ಆದಾಯ, ವಿನಿಯೋಗಿಸುವ ಪರಿಹಾರಗಳನ್ನು ಬಹಿರಂಗಪಡಿಸಿದರೆ ಅವು ಪಡೆಯುತ್ತಿರುವ ಲಾಭದ ಪ್ರಮಾಣ ಅರ್ಥವಾಗುತ್ತದೆ. ಈ ವಿಮೆಯನ್ನು ಬರೀ ಸಾವಿಗೆ ಅನ್ವಯಿಸುವುದರಿಂದ ರೈತನಿಗೆ ಯಾವ ಲಾಭವೂ ಇಲ್ಲ.
ಗಗನ ಮುಟ್ಟಿದ ಔಷಧ ಬೆಲೆಯ ಇಂದಿನ ಬಿಸಿಯಲ್ಲಿ, ರಾಸುವಿಗೆ ಬಂದ ಯಾವುದೇ ಕಾಯಿಲೆಯನ್ನು ಗುಣಪಡಿಸಲು ಮೂರು - ನಾಲ್ಕು ದಿನದ ಚಿಕಿತ್ಸೆಗೆ ಕಡಿಮೆಯೆಂದರೂ ಸಾವಿರ ರೂಪಾಯಿ ಬೇಕು. ಕಾಯಿಲೆಯ ಲಕ್ಷಣಗಳನ್ನು ಸ್ಪಷ್ಟವಾಗಿ ಓದಲಾಗದಿರುವುದರಿಂದ ಪಶುವೈದ್ಯ ಮೂರ್ನಾಲ್ಕು ಸಂಭಾವ್ಯ ರೋಗಗಳ ನಿವಾರಣೆಗೆಂದು ತರೇವಾರಿ ಔಷಧ, ಇಂಜಕ್ಷನ್‌ ಕೊಟ್ಟಿರುತ್ತಾನೆ. ವಿಮೆಯಲ್ಲಿ ರೈತನ ಈ ಖರ್ಚು ಭರಿಸಲಾಗುವುದಿಲ್ಲ. ನಿಜಕ್ಕಾದರೆ, ಕಾಲು ಮುರಿದುಕೊಳ್ಳುವ, ಗರ್ಭ ಧರಿಸದಿರುವ ಸಂದರ್ಭಗಳಲ್ಲಾದರೂ ಪರಿಹಾರ ಲಭ್ಯವಾಗಬೇಕಿತ್ತು. ಬರೀ `ಜೀವಕ್ಕೆ' ವಿಮೆ ಎಂದಾಗಿರುವುದರಿಂದ ಇದ್ದಕ್ಕಿದ್ದಂತೆ ರಾಸು ಸತ್ತರೆ ಸಾಲ ಕೊಟ್ಟ ಹಣಕಾಸು ಸಂಸ್ಥೆ ವಿಮೆಯ ಲಾಭ ಪಡೆಯುತ್ತದೆ. ಅಕ್ಷರಶಃ ಇದು ವಿಪರ್ಯಾಸ. ರೈತ ಮತ್ತೊಂದು ಹಾಲು ಕರೆವ ರಾಸು ಕೊಳ್ಳಲು ಸಾಲ ಮಾಡಬೇಕು, ಮತ್ತದಕ್ಕೆ ಜೀವವಿಮೆ ಕಂತು ತೆರಬೇಕು!
ವಿಮೆಗೊಳಪಡದ ರಾಸುಗಳಿಗೆ ಕೂಡ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ. ಬಹುಪಾಲು ರೈತರಿಗೆ ಈ ಮಾಹಿತಿ ಇರುವುದೇ ಇಲ್ಲ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಸುವು ಮರಣ ಹೊಂದಿದಾಗ ರೈತನು ಕಂದಾಯ ಇಲಾಖೆಯ ಅಧಿಕಾರಿಗಳಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು. ವಾಹನ ಅಥವಾ ಇತರೆ ಅಫಘಾತದಿಂದ ಮರಣ ಹೊಂದಿದಾಗ ಪೋಲಿಸ್‌ ಇಲಾಖೆಯಲ್ಲಿ ಮತ್ತು ಹಾವಿನ ಕಡಿತದಿಂದ ಮರಣ ಹೊಂದಿದಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎ.ಪಿ.ಎಮ್‌.ಸಿ)ಯ ಮೂಲಕ ಪರಿಹಾರ ಪಡೆಯಲು ಸಾಧ್ಯವಿದೆ. ಇಲ್ಲೆಲ್ಲ ಸಂಬಂಧಿಸಿದ ಇಲಾಖೆಯಲ್ಲಿ ಲಿಖಿತ ದೂರನ್ನು ನೀಡಿ ಪರಿಹಾರ ಪಡೆಯಬಹುದಾಗಿದೆ. ವಿದ್ಯುತ್‌ ಅವಘಡದಿಂದ ಮರಣ ಹೊಂದಿದರೆ, ದುರುದ್ದೇಶದಿಂದ ವಿಷಪ್ರಾಶನ ಮಾಡಿ ಅಥವಾ ಹೊಡೆದು ದೈಹಿಕ ಕಿರುಕುಳ ನೀಡಿದ್ದರಿಂದ ರಾಸು ಮರಣ ಹೊಂದಿದರೆ ಅನುಕ್ರಮವಾಗಿ ವಿದ್ಯುತ್‌ ವಿತರಣ ಕಂಪನಿ(ಎಸ್ಕಾಂ), ಪೋಲಿಸ್‌ ಹಾಗೂ ಕಂದಾಯ ಇಲಾಖೆಗಳು ಪರಿಹಾರ ಕೊಡಿಸಲು ಜವಾಬ್ದಾರರು. ಈ ಪ್ರಕರಣಗಳಲ್ಲಿ ಜಾನುವಾರಿಗೆ ವಿಮೆ ಪ್ರಶ್ನೆ ಬರುವುದಿಲ್ಲ.

-ಮಾವೆಂಸ

4 comments:

Aditya Bedur said...

ಒಹ್ ಕೃಷಿಕರಿಗಾಗಿ ಒಂದು ಬ್ಲಾಗ್ .. ಹೀಗೆ ಒಳ್ಳೊಳ್ಳೆ ಲೇಖನ ಮಾಹಿತಿಗಳು ಮೂಡಿ ಬರಲಿ... ಇಡಿಯ ರೈತಾಪಿ ಬ್ಲಾಗ್ ಬಳಗಕ್ಕೆ ಹಾರ್ಧಿಕ ಸುಸ್ವಾಗತ...

ಗುರುಗಳೆ ತುಂಬಾ ಒಳ್ಳೆಯ ಮಾಹಿತಿ ಒದಗಿಸಿದ್ದೀರಿ... ಬ್ಲಾಗ್ ಲೋಕಕ್ಕೆ ಸ್ವಾಗತ.. ಅಂದ ಹಾಗೆ ಅದೇನು ನೊಂದಾಯಿತ(ಗಿ.ಅ )?? ಗಿ.ಅ ಎಂದರೇನು ಎಂದು ಎಲ್ಲಿಯೂ ಮಾಹಿತಿಯಿಲ್ಲ...(ಬಳಕೆ ತಿಳುವಳಿಕೆ ನೀಡುವವರೆ ಹೀಗೆ ಮಾಡಿದರೆ ನಮ್ಮ ಗತಿ ;-)) ಗೊತ್ತಾಗಲಿಲ್ಲ.. ದಯವಿಟ್ಟು ತಿಳಿಸಿ..
ಸಾಲ ಸೌಲಭ್ಯವನ್ನು ಯಾವ ಆದಾರದ ಮೇಲೆ ನೀಡುತ್ತಾರೆ ಮತ್ತು ಎಷ್ಟು ವಿಮಾ ಕಂತುಗಳು ದೊರೆಯುತ್ತವೆ ರೈತನಿಗೆ ಸಾಲ ಮರುಪಾವತಿಗೆ? ರಾಸಿನ ವಿಮೆಯ ಮೊಬಲಗನ್ನು ಯಾವ ಆಧಾರದ ಮೇಲೆ ನಿರ್ಧರಿಸುತ್ತಾರೆ ಹಾಗು ಪ್ರೀಮಿಯಂ ಪ್ರತಿ ತಿಂಗಳು ಪಾವತಿ ಮಾಡಬೇಕಾಗುತ್ತದೆಯೆ ಹೇಗೆ?
(ಕಾಲು ಮುರಿದುಕೊಳ್ಳುವುದು, ಕೆಚ್ಚಲು ಬಾವಿನಿಂದ ಹಾಲು ಬಾರದಿರುವುದು, ಗರ್ಭ ಧರಿಸದೇ ಜೀವನ ಪೂರ್ತಿ ಬರಡಾಗುವುದು ಇತ್ಯಾದಿ
ಜಾನುವಾರುಗಳ ಶುಶ್ರೂಷೆಗೆ ರಾಸಿಗೆ ವಿಮೆಯಿದ್ದು ಪ್ರಯೋಜನವಾಗುವುದಿಲ್ಲ... ಆರೋಗ್ಯವಾಗಿದ್ದೇ 12ವರ್ಷದೊಳಗೆ ರಾಸು ಸ್ವಾಭಾವಿಕವಾಗಿ ಹಾಗು ರೈತ ಅದನ್ನು ಅತ್ಯಂತ ಕಾಳಜಿಯಿಂದ ಸಾಕಿದ್ದೇನೆ ಎನ್ನುವ ಪುರಾವೆಯೊಂದಿಗೆ ಜೀವ ವಿಮೆಯ ಫಲಾನುಭವಿಯಾಗುವಂತ ವಿಮಾ ಕಂಪನಿಗಳ ಚಾಣಾಕ್ಯ ತಲೆಯನ್ನು ಮೆಚ್ಚಲೇ ಬೇಕು! ರೈತನ ಕಿವಿಗೆ ಓಲೆ ಹಾಕ್ಯಳಕ್ಕ ಅಥವಾ ಜಾನುವಾರಿಗೊಂದೆ ಹಾಕಿರೆ ಸಾಕಾ!

ರಾಸುಗಳಿಗೆ ಮಾಡಿಸುವ ಜೀವ ವಿಮೆಯ ಬಗ್ಗೆ ಗೊತ್ತೇ ಇರದ ಅನೇಕ ಮಾಹಿತಿಯನ್ನು ಒದಗಿಸಿದ್ದೀರಿ.. ಇನ್ನೂ ಹೀಗೆ ಅನೇಕ ಮಾಹಿತಿ ಹೊತ್ತ ಲೇಖನಗಳು ಮೂಡಿ ಬರಲಿ..

ಕೊನೆಯ ಮಾತು ನಿನ್ನ ಹೆಸರಿನ ಬ್ಲಾಗ್(www.mavemsa.blogspot.com)ಮಾಡಿ ಕೊಟ್ನಲ ಅದು ಖಾಲಿ ಹೋಡಿತಾ ಇದ್ದು..ಅದರಲ್ಲು ಯಾವ್ದಾರು ಲೇಖನ ಬರಿಯಪಾ ನೀನು..

raitapy said...

ನಿಜ ಸ್ವಾಮಿ, ತಪ್ಪಿವೆ. ಅವು ಅದೆಂತದೋ ಕಂಪ್ಯಾಟಬಿಲಿಟಿ ಅಂತಾರಲ್ಲ, ಆ ಸಮಸ್ಯೆ. ಪದ ಇಂಗ್ಲೀಸಗಿತ್ತು ನೋಡಿ. ಪರಪೋಟಾಗಿದೆ. ವಸಿ ಸುಧಾರಿಸಿಕೊಳ್ಳಿ. ಇನ್ನು ಮ್ಯಾಕೆ ಸರಿ ಮಾಡುವ ಅಪಾಯವಿದೆ! ಈ ತರದ ವಿಮೆಗೆ ಕಂತಿನ ಮಾತಿಲ್ಲ. ವರ್ಷಕ್ಕೊಮ್ಮೆ. ಇನ್ನು ವೈಯುಕ್ತಿಕ ಬ್ಲಾಗ್‌ನಲ್ಲೂ ಲೇಖನ ಹಾಕಲಾಗಿದೆ, ನೀವು ದಿನ ನೋಡಬೇಕಷ್ಟೆ!

Unknown said...

ಭಾರತ ಸರ್ಕಾರ ಜಾನುವಾರು ವಿಮೆ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಾನುಸಾರ ವಿಮೆಗೆ ಕಟ್ಟಬೇಕಾದ ಪ್ರೀಮಿಯಮ್ನಲ್ಲಿ ಸರ್ಕಾರ ೫೦% ಕಟ್ಟುತ್ತೆ, ಮಾಲೀಕ ೫೦% ಕಟ್ಟಬೇಕು. ೩ ವರ್ಷಗಳ ವಿಮೆ ಸೌಲಭ್ಯವೂ ಇದೆ.ಇಷ್ಟೆಲ್ಲಾ ಸೌಲಭ್ಯ ಇದ್ದರೂ ರೈತರು ವಿಮೆ ಮಾಡಿಸಲೇಕೋ ಮನಸ್ಸು ಮಾಡುತ್ತಿಲ್ಲ. ಪ್ರಾಯಶಃ ಅವರು ಲೋನ್ ತಗೊಳ್ಳುವಾಗ ಮಾತ್ರ ಅನಿವಾರ್ಯವೆಂದು ವಿಮೆ ಮಾಡಿಸುತ್ತಾರೆ.

Unknown said...

<>
ಪಶುವೈದ್ಯರಿಗೆ ಯಾವುದೇ ಆಧುನಿಕ ರೋಗ ತಪಾಸಣಾ ಯಂತ್ರಗಳ ಸೌಲಭ್ಯವಿಲ್ಲ. ಎಲ್ಲಾ ಅಂದಾಜಿನಲ್ಲೇ ಮಾಡಬೇಕಾದ ಪರಿಸ್ಥಿತಿ. ಕೆಲವು ಖಾಯಿಲೆಗಳಿಗೆ ಖಚಿತವಾಗಿ ರೋಗ ಇದೇ ಎಂದು ಹೇಳಲು ನಿರ್ದಿಷ್ಟ ಪರೀಕ್ಷೆಗಳಿವೆ. ಆದರೆ ಸರ್ಕಾರ ಸರಿಯಾಗಿ ಒಂದು ಸೂಕ್ಷ್ಮದರ್ಶಕವನ್ನೂ ಪೂರೈಸಿರುವುದಿಲ್ಲ.ಇದು ನನ್ನ ಸ್ವಂತ ಅನುಭವ.