Wednesday, November 19, 2008

ಈ ಮರ - ಕೊಡಲಿ ಕಾವಿಗೊಂದು ವರ


ಕೊಡಲಿ, ಗುದ್ದಲಿ, ಪಿಕಾಸಿ ಇಲ್ಲದ ಕೃಷಿಕರ ಜೀವನ ಸಾಗದು. ಅದೇ ರೀತಿ ಆ ಕೊಡಲಿ ಗುದ್ದಲಿಗಳಿಗೆ ಹಿಡಿಕೆಯಾಗಿ ಮರದ ಕಾವು ಇಲ್ಲದಿದ್ದರೆ ಅವುಗಳು ಪ್ರಯೋಜನಕ್ಕೆ ಬಾರವು. ಆದರೆ ಇಂದಿನ ಕಾಡಿನ ಪರಿಸ್ಥಿತಿಯಲ್ಲಿ ಕೃಷಿ ಉಪಕರಣಗಳಿಗೆ ಬಳಸುವ ಮರದ ಹಿಡಿಕೆಗಳಿಗೆ ಸೂಕ್ತವಾದ ಮರ ಸಿಗುವುದು ಕಷ್ಟ. ಸಿಕ್ಕರೂ ನೇರವಾದ ದಪ್ಪನೆಯ ಹಿಡಿಕೆಗಾಗಿ ಮರವನ್ನು ಕಡಿಯುವುದು ಖೇದವೆನಿಸುವ ವಿಚಾರ. ಆದರೆ ಅನೀವಾರ್ಯ ಹಿಡಿಕೆ ಬೇಕು ಮತ್ತು ಅದಕ್ಕಾಗಿ ಮರ ಕಡಿಯಲೇ ಬೇಕು. ಆದರೆ ಸಾಗರ ತಾಲ್ಲೂಕಿನ ತಲವಾಟ ಸಮೀಪದ ಕಡವಿನಮನೆ ತಿರುಮಲ ಶರ್ಮಾರ ಪ್ರಕಾರ ಕೊಡಲಿ ಗುದ್ದಲಿಗಳಿಗೆ ಸೂಕ್ತವಾದ ಮರವೊಂದಿದೆ. ಅದನ್ನು ಉಪಯೋಗಿಸುವುದರಿಂದ ಮರವೂ ಉಳಿಯುತ್ತದೆ ಅತ್ಯಂತ ಘಟ್ಟಿಮುಟ್ಟಾದ ಕೊಡಲಿ ಕಾವು ದೊರೆತಂತಾಗುತ್ತದೆ. ಆ ಮರದ ಹೆಸರು ಸೂಜಿಗರಗಲು. ಇದು ಹೇಗೆ ಮರವೂ ಉಳಿಯುತ್ತದೆ ಹತ್ಯಾರಗಳಿಗೆ ಹಿಡಿಕೆಯೂ ದೊರೆಯುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.
ಟೊಂಗೆ ಟೊಂಗೆಗಲಲ್ಲಿ ಮುಳ್ಳುತುಂಬಿರುವ ಈ ಸೂಜಿಗರಗಲು ಮರ ತನ್ನ ಕಾಂಡದ ಸುತ್ತಲೂ ಕೊಡಲಿಯ ಹಿಡಿಕೆಯಾಕಾರದ ಉದ್ದನೆಯ ಉಬ್ಬನ್ನು ಹೊಂದಿದೆ. ನಮಗೆ ಬೇಕಾದ ಅಳತೆಯ ಕಾಂಡಕ್ಕೆ ಮೇಲ್ಗಡೆ ಹಾಗೂ ಕೆಳಗಡೆ ಗುರುತು ಮಾಡಿಕೊಂಡು ಕೊಡಲಿಯಿಂದ ಬಿಡಿಸಿಕೊಂದರೆ ಹಿಡಿಕೆ ರೆಡಿ. ಮತ್ತೆ ಮುಂದಿನ ವರ್ಷ ಅದೇ ಜಾಗದಲ್ಲಿ ಹೊಸ ಹಿಡಿಕೆ ಮೂಡಿರುತ್ತದೆ. ಇದರಿಂದ ಮರದ ಬೆಳವಣಿಗೆಗೆ ತೊಂದರೆಯಾಗುವುದಿಲ್ಲ. ಮತ್ತು ಇದು ಎಷ್ಟರಮಟ್ಟಿಗೆ ಗಟ್ಟಿ ಎಂದರೆ ಹಳ್ಳಿಗರು ತಮ್ಮ ಅನುಭವದ ಪ್ರಕಾರ ಕೊಡಲಿ ಅಥವಾ ಗುದ್ದಲಿ ಇರುವವರೆಗೂ ಹಿಡಿಕೆ ಇರುತ್ತದೆ ಎನ್ನುತ್ತಾರೆ. ಅದು ಅತಿಶಯೋಕ್ತಿಯ ಮಾತು ಖಂಡಿತಾ ಅಲ್ಲ. ಸೂಜಿಗರಗಲು ಮರ ಹೇರಳ ಸೊಪ್ಪನ್ನು ಬಿಡುವುದರಿಂದ ತೋಟಕ್ಕೆ ಮುಚ್ಚಿಗೆಗೆ ಕೂಡ ಸಹಾಯಕಾರಿ. ಈ ಅಪರೂಪದ ಮರವೂ ಕೂಡ ಸಹಜ ಕಾಡುಗಳಲ್ಲಿ ಅಪರೂಪವಾಗುತ್ತಿದೆ. ಸೂಜಿಗರಗಲು ಮರವನ್ನು ರಕ್ಷಿಸಿದರೆ ಅದು ಹಿಡಿಕೆಗಾಗಿ ನಾಶವಾಗುವ ಕಾಡನ್ನು ರಕ್ಷಿಸುತ್ತದೆ ಎನ್ನುವುದು ನಿಸ್ಸಂಶಯ.
ಆರ್‌.ಶರ್ಮಾ.ತಲವಾಟ

1 comment:

ತೇಜಸ್ವಿನಿ ಹೆಗಡೆ said...

ಕೇವಲ ತಮ್ಮ ಸ್ವಾರ್ಥಸಾಧನೆಗೋಸ್ಕರ ಮರಗಳನ್ನು ಕಡಿದು ನಾಶ ಮಾಡುವವರೇ ಹೆಚ್ಚು.. ಹೀಗಿರುವಾಗ ಇಂತಹ ಉಪಯುಕ್ತ ಮಾಹಿತಿಗಳ ಮೂಲಕ ಮರಗಳ ಅಳಿವನ್ನು ಆದಷ್ಟು ತಡೆಯಬಹುದು. ತುಂಬಾ ಉಪಯುಕ್ತವಾದ ಮಾಹಿತಿ. ಯಾವುದಾದರೂ ಪೇಪರಿನಲ್ಲೂ ಬಂದರೆ ಮತ್ತೂ ಒಳ್ಳೆಯದು. (ಮತ್ತಷ್ಟು ಜನರನ್ನು ತಲುಪುವುದು)