Saturday, May 9, 2009

ಸಹಕಾರ ಸಂಘಟನೆ - ಕೃಷಿಕರ ಅನಿವಾರ್ಯ


ಕೃಷಿಕರ ಬದುಕು ಸಂಕೀರ್ಣ ಘಟ್ಟದಲ್ಲಿದೆ. ಒಂದೆಡೆ ನಗರದತ್ತ, ಸ್ವಯಂ ಉದ್ಯೋಗಗಳತ್ತ ರೈತ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಅಳಿದುಳಿದ ಕಾರ್ಮಿಕರನ್ನು ರೈತರು ಬಳಸಿಕೊಳ್ಳಬಹುದಿತ್ತು ಎಂದುಕೊಂಡರೆ ಸರ್ಕಾರಗಳು ಉದ್ಯೋಗ ಖಾತರಿ ಯೋಜನೆಯ ಹೆಸರಿನಲ್ಲಿ ಯಂತ್ರಗಳ ಬದಲು ಇದೇ ಕಾರ್ಮಿಕರನ್ನು ಉಪಯೋಗಿಸಿ ಅಕ್ಷರಶಃ ರೈತರ ಬದುಕನ್ನು ಗೋಳಾಟಕ್ಕೆ ತಂದಿಟ್ಟಿದ್ದಾರೆ. ಬೆಳೆಗೆ ಬೆಲೆ ಇಲ್ಲ, ಕೂಲಿಗೆ ಕೈಗೆಟುಕದ ದುಬಾರಿ ಪಗಾರ ಎಂದಾದರೆ ರೈತ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎನ್ನುವಂತಾಗಿದೆ.
ಇಲ್ಲ, ಬಹುಷಃ ಬಹುಸಂಖ್ಯಾತ ರೈತರು ಕಷ್ಟವನ್ನೇ ಉಂಡು ಹೊದ್ದು ಮಲಗಿದವರು. ಅವಮಾನಗಳಿಗೆ ನೊಂದಾರೆಯೇ ವಿನಃ ಸಮಸ್ಯೆಗಳಿಗಲ್ಲ
. ಆ ಲೆಕ್ಕದಲ್ಲಿ ಸರ್ಕಾರಗಳ ಉದ್ಯೋಗ ಖಾತರಿ ಯೋಜನೆಗಳಿಗೆ ಥ್ಯಾಂಕ್ಸ್‌ ಹೇಳಬೇಕು. ಇಂದು ಮುಖ್ಯವಾಗಿ ತೋಟಗಳ ಮಾಲಿಕನಾದ ರೈತ ತಾನೇ ಕೆಲಸಕ್ಕೆ ಮುಂದಾಗಿದ್ದು ಪರಸ್ಪರರ ಸಹಕಾರದ ಪದ್ಧತಿ ರೈತರ ಮಧ್ಯದಲ್ಲಿ ಹುಟ್ಟಿಕೊಂಡಿದೆ. ಒಂದು ತೆರನ ಒಡೆದ ಮನಸ್ಸುಗಳು ಈಗ ಒಂದುಗೂಡಿದ್ದು ಹಳ್ಳಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿದೆ.
ಅಂತದೊಂದು ಉದಾಹರಣೆಯನ್ನು ಕಣ್ಣಾರೆ ನೋಡಲು ನಾವು ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಪುರಪ್ಪೇಮನೆಯತ್ತ ಹೋಗಬೇಕು. ಅಲ್ಲಿನ ಐದು ಜನ ಅಡಿಕೆ ಬೆಳೆಗಾರರು ಸೇರಿ `ಪಂಚಮಿ ತಂಡ'ವನ್ನು ರಚಿಸಿಕೊಂಡಿದ್ದಾರೆ. ತಂಡಕ್ಕೆ ಒಂದು ಶಿಸ್ತಿನ ಆಧಾರದ ಅಗತ್ಯವಿದೆ ಎಂಬ ಕಾರಣಕ್ಕಾಗಿ ತಮ್ಮನ್ನು ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಭಾಗವಾದರು. ಅದರಲ್ಲಿ ಕೆಲವು ನಿಯಮಗಳಿವೆ. ಪ್ರತಿ ವಾರ 10 ರೂ. ಉಳಿತಾಯ ಮಾಡಬೇಕು. ವಾರಕ್ಕೊಂದು ದಿನವಾದರೂ ಕೆಲಸ ಮಾಡಲೇಬೇಕು. ತಂಡಕ್ಕೆ ಅಧ್ಯಕ್ಷರು, ಕಾರ್ಯದರ್ಶಿಗಳೆಲ್ಲ ಇರಬೇಕು.
ಪುರಪ್ಪೇಮನೆಯ ಪಂಚಮಿ ತಂಡಕ್ಕೆ ವಾರಕ್ಕೊಂದು ದಿನ ಕೆಲಸ ಮಾಡಿದರೆ ಪೂರೈಸುವುದಿಲ್ಲ. ಹಾಗಾಗಿ ಅವರು ಅವಶ್ಯಕತೆ ಇದ್ದಾಗಲೆಲ್ಲ ಹಾಳೆಟೊಪ್ಪಿ ಹಾಕಿದ್ದೇ. ಬೆಳಿಗ್ಗೆ ಒಂಭತ್ತರಿಂದ ಮಧ್ಯಾಹ್ನ ಮೂರರವರೆಗೆ ಕೆಲಸ. ಯಾರ ಮನೆಯಲ್ಲಿ ಕೆಲಸವೋ ಅವರ ಮನೆಯಲ್ಲಿ ಊಟ. ಶ್ರಮ ವಿನಿಯೋಗದ ಪದ್ಧತಿಯಲ್ಲಿ ಲೆಕ್ಕಾಚಾರ ಸಲೀಸು. ಮೈಯಾಳು ಹೋಗಿ ಆಳು ಸಾಲ ತೀರಿಸುವುದು. ಅಷ್ಟಕ್ಕೂ ಒಬ್ಬಾತ ಹೆಚ್ಚುವರಿ ಆಳು ಕೆಲಸ ಮಾಡಿದ್ದರೆ ಅದಕ್ಕೆ ವರ್ಷಕ್ಕೊಮ್ಮೆ ಸಂಬಳ ರೂಪದಲ್ಲಿ ಪಾವತಿಸುವ ವ್ಯವಸ್ಥೆಯೂ ಇದೆ.
ಗಣೇಶ್‌, ರಾಜಾರಾಂ, ಮೋಹನ, ನಾಗರಾಜ, ಹೆಚ್‌.ಪಿ.ನಾಗರಾಜರ ಈ ತಂಡ ಮಾಡದ ಕೃಷಿ ಚಟುವಟಿಕೆಯೇ ಇಲ್ಲ. ಈ ವರ್ಷ ತೋಟದಲ್ಲಿ ಕಳೆ ತೆಗೆದದ್ದು, ತೋಟದ ಮಣ್ಣು ಅಗೆತ, ಗೊಬ್ಬರ ಹಾಕಿದ್ದು, ಅಡಿಕೆ ಸಸಿ ನೆಟ್ಟಿದ್ದು, ಕರಡ ಕಡಿದಿದ್ದು, ಸೊಪ್ಪು-ದರಲೆ ಒಟ್ಟು ಬಾಚಿದ್ದು, ತೋಟದಲ್ಲಿ ಮಣ್ಣು ಹಾಕಿದ್ದು........ ಯಾವ ಕೃಷಿ ಕಾರ್ಮಿಕರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡುತ್ತಿರುವುದು ಗಮನಾರ್ಹ.
ಇಂದು ಪುರಪ್ಪೇಮನೆ ಊರಿನಲ್ಲಿಯೇ ಎರಡು ಸಹಕಾರಿ ತಂಡಗಳಿವೆ. ಈ ಎರಡು ಗುಂಪುಗಳ ನಡುವೆಯೂ ಹೊಂದಾಣಿಕೆಯಿದೆ. ಒಂದೊಮ್ಮೆ ಹೆಚ್ಚು ಕೆಲಸಗಾರರು ಬೇಕಾದ ಕಾಮಗಾರಿಯಾದರೆ ಇವರು ಅವರಲ್ಲಿಗೆ, ಅವರು ಇಲ್ಲಿಗೆ ಬಂದು ಕೆಲಸ ಮಾಡಿಕೊಡುತ್ತಾರೆ.
ಬಹುಷಃ ಈ ಸಹಕಾರದ ಹಿಂದೆ ಆಗುತ್ತಿರುವ ಪರೋಕ್ಷ ಲಾಭದ ಬಗ್ಗೆ ಹಲವರಿಗೆ ಗೊತ್ತಿಲ್ಲ. ಒಟ್ಟಾಗಿ ಕೆಲಸ ಮಾಡುವುದರಿಂದ ಹರಟೆ, ಹಾಡು, ಖುಷಿಗಳು ಮನೋಲ್ಲಾಸಕ್ಕೆ ಕಾರಣವಾಗಿದೆ. ಒಟ್ಟಾಗಿ ಮಾತನಾಡುವುದರಿಂದ ಹಲವು ವಿಚಾರಗಳು ತಿಳಿಯುತ್ತದೆ. ನಿನ್ನೆ ಪೇಟೆಗೆ ಹೋಗಿದ್ದ ಗಣೇಶ್‌ ತೊಟಗಾರಿಕಾ ಇಲಾಖೆಯಲ್ಲಿ ರೈತರಿಗೆ ಕೊಡುತ್ತಿರುವ ಮೆಣಸಿನ ಬಳ್ಳಿಗಳ ಸುದ್ದಿ ಹೇಳುತ್ತಾರೆ. ಮೆಸ್ಕಾಂ ಕಛೇರಿಗೆ ಹೋಗುವವನಿಗೆ ಉಳಿದವರು ಬಿಲ್‌ ಪಾವತಿಸಲು ಕೊಡುತ್ತಾರೆ. ಶಂಕ್ರಣ್ಣನಿಗೆ ಕೇವಲ ಎರಡು ಲೆಂಗ್ತ್‌ ಒಂದೂಕಾಲು ಇಂಚಿನ ಪೈಪ್‌ ತರಬೇಕು. ಅಷ್ಟನ್ನೇ ತರುವುದು ಕಷ್ಟ, ನಷ್ಟ.ನಾಗರಾಜ 50 ಲೆಂಗ್ತ್‌ ಎರಡು ಇಂಚಿನ ಪೈಪ್‌ ತಮ್ಮನೆಗೆ ತರುವಾಗ ಶಂಕ್ರಣ್ಣನ ಎರಡು ಪೈಪ್‌ನ್ನೂ ಹಾಕಿಕೊಂಡು ಬರುತ್ತಾನೆ. ಈ ಲಾಭಕ್ಕೆ ಬೆಲೆ ಕಟ್ಟಲಾಗುತ್ತದೆಯೇ?
ಇಂದು ಮಲೆನಾಡು, ದಕ್ಷಿಣ ಕನ್ನಡ, ಮಡಿಕೇರಿ, ಸೊರಬ, ಮಾವಿನಸರ ಮುಂತಾದ ಕಡೆ ಈ ತರದ ರೈತ ಗುಂಪುಗಳು ಮೈಯಾಳೀನ ಆಧಾರದಲ್ಲಿ ಕೃಷಿ ಕೆಲಸಗಳನ್ನು ಸ್ವತಃ ತಾವೇ ಮಾಡಿಕೊಳ್ಳುತ್ತಿವೆ. ಆದರೆ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಂತದರ ಕೆಳಗೆ ಸೇರ್ಪಡೆಗೊಳ್ಳುವುದರಿಂದ ತಂಡಗಳಲ್ಲಿ ಒಂದು ಮಟ್ಟಿನ ಶಿಸ್ತು ಲಭ್ಯವಾಗುತ್ತದೆ. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾಲಕಾಲಕ್ಕೆ ಸಾಲ, ಸಹಾಯಧನಗಳೂ ಒದಗಿಬರಬಹುದು. ಇದು ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯಪಡುತ್ತಾರೆ ಪುರಪ್ಪೇಮನೆಯ ಗಣೇಶ್‌. ಇವರ ಪಂಚಮಿ ಸಂಘಕ್ಕೆ ಬರುವ ಜೂನ್‌ 30ಕ್ಕೆ ಬರೋಬ್ಬರಿ ಒಂದು ವರ್ಷ.
ಚುನಾವಣಾ ಕಾಲದಲ್ಲಿ ರಾಜಕಾರಣಿಗಳು ಕೃಷಿ ಮಾಲಿಕರು ಹಾಗೂ ಕಾರ್ಮಿಕ ವರ್ಗವನ್ನು ಒಡೆದು ಮತಬ್ಯಾಂಕ್‌ ಸೃಷ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮೊದಲೇ ಹದಗೆಟ್ಟ ವ್ಯವಸ್ಥೆಗೆ ಇದು ವಜ್ರಾಘಾತ. ಚುನಾವಣೆ ಮುಗಿದ ನಂತರ ರಾಜಕಾರಣಿಗಳು ಬೆಂಗಳೂರಿಗೋ, ದೆಹಲಿಗೋ ಹಾರುತ್ತಾರೆ. ಇಲ್ಲಿ ಮೂಡಿದ ಕಂದಕ ಹಾಗೇ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ, ರೈತರೇ ರಚಿಸಿಕೊಳ್ಳುವ ಸಹಕಾರ ತತ್ವದ ಸಂಘಟನೆ ಇಂದಿನ ಅನಿವಾರ್ಯ.

-ಮಾವೆಂಸ

2 comments:

jithendra hindumane said...

ಪ್ರಸಾದ್, ನಮ್ಮೂರಲ್ಲು ಸಂಘಟನೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದೇನೆ. ನಮ್ಮ ಯುವಕರಿಗೆ (ನಮ್ಮ ಊರಿನ)
ಬುದ್ಧಿ ಬರವಷ್ಟರಲ್ಲಿ ಕಾಲ ಮಿಂಚಿರುತ್ತೆ.

ಮಾವೆಂಸ said...

ಅಂತಹ ದೃಷ್ಟಾಂತ ಬೇಸರವನ್ನು ತರುತ್ತದೆ. ಇನ್ನೂ ಆಳು ಸಿಗುತ್ತಿದ್ದಾಗಲೇ ಸಂಘ ಮಾಡಿದಿರೋ ಹೇಗೆ?