Sunday, May 31, 2009

ನುಗ್ಗಿ ನುಗ್ಗೆ ಬೆಳೆದರುಪ್ರಕಟಗೊಳ್ಳುವ ರೈತ ಯಶಸ್ಸಿನ ಕತೆಗಳಲ್ಲಿ ಸತ್ಯದ ಜೊತೆಗೆ ಸುಳ್ಳಗಳೂ ತೂರಿರುತ್ತವೆ ಎಂಬ ಆರೋಪವಿದೆ. ಅವರ ಯಶಸ್ಸನ್ನು ಪ್ರಭಾವಯುತಗೊಳಿಸಲು ಅತಿರಂಜಿತ ಅಂಕಿಅಂಶಗಳನ್ನು ಬಳಸಲಾಗುವುದೇ ಅಂತಹ ಒಂದು ಸಾಧ್ಯತೆ. ವಾಸ್ತವವಾಗಿ ಓದುಗ ರೈತರು ಅಂತಹ ಸಫಲತೆಯ ಉದಾಹರಣೆಯ ಗೆಲುವಿನ ಸೂತ್ರಗಳನ್ನು ಪರಿಗಣಿಸುವುದೇ ಹೆಚ್ಚು ಸೂಕ್ತವಾದೀತು. ಅಂದರೆ ಇಂತಹ ರೈತ ಯಶಸ್ಸಿಗೆ ಏನು ಕ್ರಮ ಕೈಗೊಂಡಿದ್ದಾನೆ ಎಂಬುದನ್ನು ಅರ್ಥೆಸಿಕೊಳ್ಳಬೇಕು.
ಇಲ್ಲಿ ಪ್ರಸ್ತಾಪಿಸುತ್ತಿರುವುದು ತಮಿಳುನಾಡಿನ ರೈತನ ಒಂದು ಯಶಸ್ಸಿನ ಕತೆ. ಬೆಳೆದದ್ದು ನುಗ್ಗೇಕಾಯಿ. ವಾರ್ಷಿಕ ಆದಾಯ ಆರು ಲಕ್ಷ ರೂಪಾಯಿ! ಅತಿರಂಜಿತವೆನ್ನಿಸುತ್ತದಾದರೆ ಅಂಕಿಅಂಶಗಳ ಗೋಜಲನ್ನು ಬಿಡಿ, ಆತನ ಯಶಸ್ಸಿನ ಹೆಜ್ಜೆಗಳನ್ನಷ್ಟೇ ಅನುಸರಿಸಿ.
ಅಲಾಗರ ಸ್ವಾಮಿ ತಮಿಳುನಾಡಿನ ದಿಂಡಿಗಲ್‌ನವರು. ಕಲಾವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು. ಅವರಿಗೆ 10 ಎಕರೆ ಜಮೀನು ಇತ್ತಾದರೂ ಬೇರೆಡೆ ಉದ್ಯೋಗ ಸಿಕ್ಕದ್ದು ಹಾಗೂ ಕ್ರಿಯಾತ್ಮಕ ಚಟುವಟಿಕೆಯ ಪ್ರವೃತ್ತಿ ಅವರನ್ನು ಸಾಧಕನಾಗಲು ಪ್ರೇರೇಪಿಸಿತು. ಆ ಸಮಯದಲ್ಲಿ ಹತ್ತೆಕರೆ ಜಮೀನೇ ಅವರ ಪ್ರಯೋಗಾಲಯವಾಯಿತು.
ಸ್ವಾಮಿ ತಮ್ಮದೇ ಆದ ನುಗ್ಗೆ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ ಪಿಎವಿಎಂ ಎನ್ನುವ ಹೆಸರನ್ನು ಕೊಟ್ಟಿದ್ದಾರೆ. ಇದನ್ನು ಅಭಿವೃದ್ಧಿಪಡಿಸಲು ಬಳಸಿದ ಮೂಲ ಮಾದರಿಯನ್ನು ಗುಪ್ತವಾಗಿಡಲಾಗಿದೆ. ಏತಕ್ಕಪ್ಪಾಂದರೆ, ಇಂದು ಅಲಾಗರ ಸ್ವಾಮಿಯವರ ದುಡಿಮೆಯ ದೊಡ್ಡ ಪಾಲು ಬರುವುದು ಈ ತಳಿಯ ನುಗ್ಗೆ ನರ್ಸರಿಯಿಂದ!
ಪಿಎವಿಎಂ ತಳಿ ವರ್ಷದ 8-9 ತಿಂಗಳು ಇಳುವರಿ ನೀಡುವುದು ವಿಶೇಷ. ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಇದಕ್ಕೆ ಕಡಿಮೆ ನೀರು ಸಾಕು. ನೆಲಕ್ಕೆ ನಾಟಿ ಮಾಡಿದ ಐದು ಅಥವಾ ಆರನೇ ತಿಂಗಳಿನಿಂದಲೇ ಪೈರು ಬರಲಾರಂಭಿಸುತ್ತದೆ. ಎರಡನೇ ವರ್ಷದಿಂದಲೇ ಒಂದು ಗಿಡದಿಂದ ಒಂದೂವರೆಯಿಂದ ಎರಡು ಕ್ವಿಂಟಾಲ್‌ ನುಗ್ಗೇಕಾಯಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಸಾವಯವ ಕ್ರಮದಲ್ಲಿ ಬೆಳೆದರಂತೂ ಪ್ರತಿ ನುಗ್ಗೇಕಾಯಿ 200 ಗ್ರಾಂಗಳಷ್ಟು ತೂಗಿದ್ದಿದೆ. ಅಷ್ಟೇಕೆ, ಹೆಚ್ಚು ಕಡಿಮೆ ಒಂದು ವಾರ ಕಾಲ ತಾಜಾವಾಗಿಯೇ ಉಳಿಯುತ್ತದೆಂದರೆ....
ಒಂದು ಎಕರೆ ನುಗ್ಗೇ ಕೃಷಿಯಿಂದ ವಾರ್ಷಿಕ 20 ಟನ್‌ ನುಗ್ಗೇಕಾಯಿ ಬೆಳೆಯಬಹುದು ಎಂದು ಲೆಕ್ಕಿಸುತ್ತಾರೆ ಅಲಾಗರ ಸ್ವಾಮಿ. ಒಂದು ಎಕರೆಯಲ್ಲಿ 200 ನುಗ್ಗೆ ಮರದಿಂದ ತಲಾ ಒಂದು ಕ್ವಿಂಟಾಲ್‌ ಬೆಳೆ ಎಂಬ ಸರಾಸರಿಯಲ್ಲಿ ಈ ಉತ್ಪತ್ತಿ ಸಾಧ್ಯ. ಗಮನಿಸಬೇಕಾದುದೆಂದರೆ, ಸ್ವಾಮಿ 10 ಲಕ್ಷ ಸಸಿಗಳನ್ನು ಸರಿಸುಮಾರು ಮೂರು ಸಾವಿರ ರೈತರಿಗೆ ಒದಗಿಸಿದ್ದಾರೆ. ಅಂದರೆ ತಮಿಳುನಾಡಿನ ದಿಂಡಿಗಲ್‌, ಮಧುರೈ ಹಾಗೂ ಕೊಯಮತ್ತೂರು ಜಿಲ್ಲೆಗಳಲ್ಲಿಯೇ ಸುಮಾರು ಆರು ಸಾವಿರ ಎಕರೆ ಪ್ರದೇಶದಲ್ಲಿ ಪಿಎವಿಎಂ ನುಗ್ಗೆ ಬೆಳೆಯಲಾಗುತ್ತಿದೆ!
ವೃತ್ತಿಧರ್ಮದ ಹೊರತಾಗಿ, ಸ್ವಾಮಿ ಈ ತಳಿಯ ಗಿಡ ತಯಾರಿಕೆಯ ವಿಧಾನಗಳನ್ನು ವಿವರಿಸುತ್ತಾರೆ. ಏರ್‌ ಲೇಯರಿಂಗ್‌ ಎಂದು ಕರೆಸಿಕೊಳ್ಳುವ ತಂತ್ರಜ್ಞಾನದಿಂದ ನರ್ಸರಿ ಗಿಡಗಳನ್ನು ಉತ್ಪಾದಿಸಲಾಗುತ್ತಿದೆ. ತಾಯಿ ಮರದ ಯೋಗ್ಯ ರೆಂಬೆಗಳನ್ನು ಆಯು ಅದರ ತೊಗಟೆಗಳನ್ನು ಕೆತ್ತಿಕೊಳ್ಳುತ್ತಾರೆ. ಆ ಭಾಗವನ್ನು ಅವರೇ ತಯಾರಿಸಿದ ವಿಶಿಷ್ಟ ಪಂಚಗವ್ಯ ದ್ರಾವಣದಿಂದ ಶುಶ್ರೂಷೆ ಮಾಡುತ್ತಾರೆ. ಇದರ ಮೇಲೆ ತೆಂಗಿನ ಸಿಪ್ಪೆಗಳನ್ನು ಪೇರಿಸಿ ಒಟ್ಟೂ ಭಾಗವನ್ನು ಪಾಲಿಥೀನ್‌ ಶೀಟ್‌ನಿಂದ ಮುಚ್ಚಿ ಗಟ್ಟಿಯಾಗಿ ಕಟ್ಟಲಾಗುತ್ತಿದೆ. ಸರಿಸುಮಾರು ಮೂರು ವಾರಗಳ ನಂತರ ಈ ರೆಂಬೆಯಲ್ಲಿ ಹೊಸ ಬೇರುಗಳು ಮೂಡುತ್ತವೆ. ಮುಂದಿನ ಹಂತವಾಗಿ ತಾಯಿ ಮರದಿಂದ ಬೇರ್ಪಡಿಸಿ ಪ್ರತ್ಯೇಕ ಪಾಲಿಥೀನ್‌ ಚೀಲಗಳಲ್ಲಿ ಹಾಕಿ ಪೋಷಿಸಲಾಗುತ್ತದೆ. ಮುಂದಿನ 20 ದಿನಗಳ ಆರೈಕೆಯ ನಂತರ ಇವು ಕೃಷಿ ಭೂಮಿಯಲ್ಲಿ ನಾಟಿ ಮಾಡಲು ಯೋಗ್ಯವಾಗುತ್ತದೆ.
ಯಶಸ್ಸಿನ ಎಳೆ ಇರುವುದೇ ಇಲ್ಲಿ! ಸ್ವಾಮಿಯವರ ಏರ್‌ ಲೇಯರಿಂಗ್‌ನ ಪಕ್ಕಾ ಮಾಹಿತಿಯನ್ನು ನಮ್ಮಲ್ಲಿನ ರೈತರು ಪಡೆಯಬೇಕು. ಇಲ್ಲಿನ ಅತ್ಯುತ್ಕಷ್ಟ ನುಗ್ಗೆ ತಳಿಗಳಲ್ಲೂ ಈ ಕ್ರಮ ಅನುಸರಿಸಿ ನರ್ಸರಿ ಸಸಿ ತಯಾರಿಸಬೇಕು. ಈಗಾಗಲೇ ಇಲ್ಲಿನ ಪರಿಸರಕ್ಕೆ ಒಗ್ಗಿರುವ ತಳಿಗಳೇ ಅಧಿಕ ಇಳುವರಿ ನೀಡುತ್ತವೆಂದಾದರೆ ಯಶಸ್ಸು ಕೈಗೆಟುಕಿದಂತೆ. ಖುದ್ದು ಅಲಾಗರ ಸ್ವಾಮಿಯವರನ್ನು ಸಂಪರ್ಕಿಸಬಯಸುವವರು ಅವರ ಮೊಬೈಲ್‌ 98653 45911 ಅಥವಾ 97917 74887ನಲ್ಲಿ ಸಂಪರ್ಕಿಸಬಹುದು. ಪತ್ರ ಮುಖೇನವಾದರೆ .ಂಟಚಿಚಿಡಿಚಿಚಿಥಿ, ಚಿಣ ಓ.6/39, ಣ ಣಡಿಣ, ಚಿಟಟಚಿಠಿಚಿಣಣ, ಓಟಚಿಞಣಣಚಿ ಖಿಚಿಟಞ, ಆಟಿಜಚಿಟ, ಖಿಚಿಟ ಓಚಿಜ.
ಪಿಎವಿಎಂ ತಳಿಯ ರೋಗ ನಿರೋಧಕತೆ ಹಾಗೂ ಸಾವಯವ ಕೃಷಿಗೆ ಅತ್ಯುತ್ತಮವಾಗಿ ಸ್ಪಂದಿಸುತ್ತದೆ ಎಂಬುದು ಅದೇ ದಿಂಡಿಗಲ್‌ ಜಿಲ್ಲೆಯ ರೈತ ರಾಜೇಂದ್ರನ್‌ರ ಅಭಿಪ್ರಾಯ. ಒಂದು ಎಕರೆ ಭೂಮಿಯಲ್ಲಿ ಮೊದಲ ವರ್ಷವೇ ಒಂದು ಲಕ್ಷ ರೂಪಾಯಿಯ ಆದಾಯ ಪಡೆದಿದ್ದಾರಂತೆ. ವಾರ ಕಾಲ ಬಾಳುವುದು ನುಗ್ಗೆಯ ಬೆಲೆ ಸ್ಥಿರತೆಗೆ ಕಾರಣ. ಹಾಗಾಗಿ ಇನ್ನೋರ್ವ ರೈತ ಇರೋಡ್‌ನ ಕುಪ್ಪುಸ್ವಾಮಿ ಕೆ.ಜಿ.ಗೆ ಐದರಿಂದ 20 ರೂ.ವರೆಗೆ ಮಾರುತ್ತಿದ್ದಾರೆ.
ಮುಖ್ಯವಾಗಿ, ರೈತನೊಬ್ಬನ ಸಂಶೋಧನೆ ಮಧುರೈನ ಸಸ್ಟೈನಬಲ್‌ ಅಗ್ರಿಕಲ್ಚರ್‌ ಮತ್ತು ಎನ್ವಿರೋನ್ಮೆಂಟ್‌ ವಾಲಂಟರಿ ಆ್ಯಕ್ಷನ್‌ `ಸೇವಾ' ಎನ್‌ಜಿಓ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ವಿವೇಕಾನಂದನ್‌ ಪಿಎವಿಎಂ ತಳಿಯ ಜನಪ್ರಿಯತೆಗೆ ತಲೆದೂಗಿದ್ದಾರೆ. ಆಸಕ್ತರು ಇವರನ್ನು ಞಚಿಜಚಿಣಚಿಟಿ.ಟಿನಲ್ಲಿ ಮೇಲ್‌ ಮಾಡಿ ಮಾಹಿತಿ ಕೇಳಬಹುದು. ಅವರ ದೂರವಾಣಿ (0452)2380082 ಮತ್ತು 2380943.
ನಿಜ, ಯಶಸ್ಸಿನ ಘಟನೆ ತಮಿಳುನಾಡಿನದೆದು. ನೇರವಾಗಿ ಅದು ನಮ್ಮಲ್ಲಿನ ರೈತರಿಗೆ ಎಷ್ಟು ಅನುಕೂಲವಾದೀತು ಎಂಬುದು ಗೊತ್ತಿಲ್ಲ. ಆದರೆ ಗೆಲುವಿನ ಸೂತ್ರವನ್ನು ನಮ್ಮ ಯಶಸ್ಸಿಗೆ ಬಗ್ಗಿಸಿ ಅಳವಡಿಸಿಕೊಳ್ಳಲು ಅವಕಾಶವಿದೆ. ನೀವೇ ಹೇಳಿ, ನಿಜಕ್ಕೂ ರೈತರಿಗೆ ಬೇಕಾದುದು ಅದೇ ಅಲ್ಲವೇ?
-ಮಾವೆಂಸ
ಈ ಲೇಖಕರ ವಿಭಿನ್ನ ಬರಹಗಳಿಗಾಗಿ
http://mavemsa.blogspot.com ನೋಡಿ

No comments: