ಕೃಷಿಯಲ್ಲಿ ಬದಲಾವಣೆಗಳು ಹೊಸತಲ್ಲ. ಹೆಚ್ಚಿನ ಇಳುವರಿಗಾಗಿ ಕೃಷಿಕರು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಹಲವರು ವಿವಿಧ ರೀತಿಯ ಪೋಷಕಾಂಶಗಳನ್ನು ನೀಡಿ ಹೆಚ್ಚಿಗೆ ಇಳುವರಿ ಪಡೆದರೆ ಮತ್ತೆ ಕೆಲವರು ನಾಟಿ ವಿಧಾನವನ್ನು ಬದಲಿಸಿ ಇಳುವರಿ ಹೆಚ್ಚಿಗೆ ಪಡೆಯಲು ಯತ್ನಿಸಿ ಯಶಸ್ವಿಯಾಗಿದ್ದಾರೆ.
ಬನವಾಸಿಯ ಪ್ರಗತಿಪರ ಕೃಷಿಕ ಅಬ್ದುಲ್ ರವೂಫ್ ಶೇಖ್ ಅವರು ಬಾಳೆಯಲ್ಲಿ ಅಧಿಕ ಸ್ಥಿತ್ಯಂತರ ನಾಟಿ ವಿಧಾನ (ಒತ್ತೊತ್ತಾಗಿ ಸಸಿ ನೆಡುವ ಕ್ರಮ)ವನ್ನು ಅಳವಡಿಸಿ ಯಶಸ್ವಿಯಾಗಿದ್ದಾರೆ. ಬಹುವಾರ್ಷಿಕ ಬೆಳೆಯಾದ ಮಾವಿನಲ್ಲಿ ಕಡಿಮೆ ಅಂತರದ ನಾಟಿ ಪದ್ದತಿಯಲ್ಲಿ ಕೃಷಿ ಮಾಡಿದವರಿಲ್ಲ. ಆದರೆ ಜಲಗಾಂವ್ನ ಜೈನ್ ಇರಿಗೇಷನ್ ಕಂಪನಿಯವರು ಮಾವಿನಲ್ಲಿ ಒತ್ತೊತ್ತಾಗಿ ಸಸಿ ನೆಡುವ ಪದ್ಧತಿ ಅಳವಡಿಸಿ ಯಶಸ್ವಿಯಾಗಿದ್ದಾರೆ.
ಕಡಿಮೆ ಅಂತರದ ನಾಟಿ ಪದ್ದತಿ
ಕಡಿಮೆ ಜಾಗದಲ್ಲಿ ಹೆಚ್ಚಿಗೆ ಗಿಡಗಳನ್ನು ನಾಟಿ ಮಾಡುವ ವಿಧಾನವೇ ಅಧಿಕ ಸ್ಥಿತ್ಯಂತರ ಕೃಷಿ ಪದ್ದತಿ. ಇದಕ್ಕೆ ಅಧಿಕ ಸಾಂದ್ರತೆ ಕೃಷಿ ಎಂಬ ಹೆಸರೂ ಇದೆ. ಗಿಡದಿಂದ ಗಿಡದ ಅಂತರ ಕಡಿಮೆ ಇರುತ್ತದೆ. ಸಾಲಿನಿಂದ ಸಾಲಿನ ಅಂತರವೂ ಕಡಿಮೆ. ಕಡಿಮೆ ಅಂತರದಲ್ಲಿ ಹೆಚ್ಚು ಸಸಿಗಳನ್ನು ನಾಟಿ ಮಾಡುವ ಕ್ರಮವೇ ಅಧಿಕ ಸ್ಥಿತ್ಯಂತರ ಕೃಷಿ ಪದ್ದತಿ. ಜೈನ್ ಇರಿಗೇಷನ್ ಕಂಪನಿ 1996 ರಿಂದಲೇ ಒತ್ತೊತ್ತಾಗಿ ಸಸಿ ನೆಡುವ ಪದ್ದತಿಯನ್ನು ಮಾವಿನ ಬೆಳೆಯಲ್ಲಿ ಅಳವಡಿಸಿಕೊಂಡಿದೆ.
ಸಾಮಾನ್ಯ ಮಾವಿನ ತೋಟಗಳಲ್ಲಿ 9 ಮೀಟರ್ ಅಂತರದಲ್ಲಿ ಮಾವಿನ ಗಿಡಗಳನ್ನು ನಾಟಿ ಮಾಡಿರುತ್ತಾರೆ. ಹೀಗೆ ನಾಟಿ ಮಾಡಿದ ತೋಟಗಳಲ್ಲಿ ಒಂದು ಎಕರೆಯಲ್ಲಿ 55ರಿಂದ 60 ಗಿಡಗಳು ಮಾತ್ರ ಇರುತ್ತವೆ. ಹೆಚ್ಚಿಗೆ ಮಾವಿನ ಗಿಡಗಳನ್ನು ನಾಟಿ ಮಾಡುವ ಸಲುವಾಗಿ ಜೈನ್ ಇರಿಗೇಷನ್ ಅವರು ಮೊದಲ ಹಂತದಲ್ಲಿ 4.5 ಮೀಟರ್ ಅಂತರದಲ್ಲಿ ಮಾವಿನ ಸಸಿಗಳನ್ನು ನಾಟಿ ಮಾಡಿದರು. ಈ ಹಂತದಲ್ಲಿ ಎಕರೆಗೆ 200 ಸಸಿಗಳನ್ನು ನಾಟಿ ಮಾಡಲು ಸಾಧ್ಯವಾಯಿತು. ಇದರ ನಂತರ 3X2 ಮೀಟರ್ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಈ ಪದ್ದತಿಯಲ್ಲಿ ಎಕರೆಗೆ 1309 ಸಸಿಗಳನ್ನು ನಾಟಿ ಮಾಡಿದ್ದಾರೆ. ಮೂರನೆ ಹಂತದ ನಾಟಿಯಲ್ಲಿ 3X2 ಮೀಟರ್ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಈ ಅಂತರದಲ್ಲಿ ನಾಟಿ ಮಾಡಿದಾಗ ಎಕರೆಯಲ್ಲಿ 2976 ಸಸಿಗಳನ್ನು ನಾಟಿ ಮಾಡಿದ್ದಾರೆ.
ಒತ್ತೊತ್ತಾಗಿ ನಾಟಿ ಮಾಡಿದಾಗ ಸಸಿಗಳನ್ನು ಪೋಷಿಸಲು ಹಲವಾರು ರೀತಿಯ ಕ್ರಮ ಬದ್ಧವಾದ ಕೃಷಿ ಮಾಡಬೇಕಾಗುತ್ತದೆ. ಸಸಿಗಳ ಗೆಲ್ಲುಗಳ ಕಟಾವು (ಪ್ರೂನಿಂಗ್), ಚಿಗುರು ಚಿವುಟುವುದು( ಪಿಂಚಿಂಗ್), ಈ ಕೃಷಿಯಲ್ಲಿ ಮುಖ್ಯವಾಗಿ ಅಳವಡಿಸಿಕೊಳ್ಳಬೇಕಾದ ಕ್ರಮ.
ಸಸಿಗಳು ಹತ್ತಿರದಲ್ಲಿ ಇರುವುದರಿಂದ ಸೊಂಟದಷ್ಟು( ಸುಮಾರು 45 ಸಿ ಎಂ) ಎತ್ತರಕ್ಕೆ ಬೆಳೆದ ನಂತರ ಬೇಡವಾದ ಗೆಲ್ಲುಗಳನ್ನು ಕಟಾವು ಮಾಡಬೇಕು. ಹಾಗೇಯೆ ಬೇಡದ ಚಿಗುರುಗಳನ್ನು ಚಿವುಟಿ ಹಾಕಬೇಕು. ಈ ರೀತಿ ಮಾಡುವುದರಿಂದ ಮಾವಿನ ಗಿಡ ಛತ್ರಿಯಾಕಾರದಲ್ಲಿ ಬೆಳೆಯುತ್ತದೆ. ಹೀಗೆ ಗಿಡಗಳು ಬೆಳೆದರೆ ಸೂರ್ಯನ ಬೆಳಕು ಹೆಚ್ಚು ಬಿದ್ದು ಗಿಡದ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಕಡಿಮೆ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದಾಗ ರೋಗ ಇರುವ ಗೆಲ್ಲುಗಳನ್ನು ಕಟಾವು ಮಾಡಬೇಕಾಗುತ್ತದೆ. ಹಾಗೆಯೇ ಗಿಡಗಳು ಬೆಳೆದು ಫಸಲು ಬಂದ ನಂತರ ಎರಡು ಮೂರು ಬೆಳೆ ಬಂದ ಗೆಲ್ಲುಗಳನ್ನು ಕತ್ತರಿಸಬೇಕು. ಅನವಶ್ಯಕವಾಗಿ ಬೆಳೆಯುವ ಗೆಲ್ಲುಗಳನ್ನು ಕತ್ತರಿಸಿದಾಗ ಸಮೃದ್ಧವಾಗಿರುವ ಗೆಲ್ಲುಗಳಿಗೆ ಹೆಚ್ಚಿಗೆ ಪೋಷಕಾಂಶ ದೊರೆತು ಹೆಚ್ಚಿನ ಫಸಲು ಬರಲು ಸಾಧ್ಯವಾಗುತ್ತದೆ.
`ವಾಣಿಜ್ಯಿಕ ದೃಷ್ಟಿಯಿಂದ ಮಾವಿನ ಕೃಷಿ ಮಾಡುವವರಿಗೆ ಈ ಪದ್ಧತಿ ಕೃಷಿ ಬಹಳ ಉತ್ತಮ. ಆದಾಯ ಹೆಚ್ಚಿಗೆ ಬರುತ್ತದೆ. ಈ ಪದ್ಧತಿಯಲ್ಲಿ ಕೃಷಿ ಮಾಡಿದಾಗ ಪ್ರೂನಿಂಗ್ ಸದಾ ಮಾಡುವುದರಿಂದ ಮಾವಿನ ಮರ ಬಹಳ ಎತ್ತರ ಬೆಳೆಯುವುದಿಲ್ಲ. ದೊಡ್ಡ ಮರಕ್ಕೆ ಬೇಕಾಗುವಷ್ಟು ಪೋಷಕಾಂಶ ಇದಕ್ಕೆ ಅಗತ್ಯವಿಲ್ಲ. ಸಾಮಾನ್ಯವಾಗಿ ಮಾವು ವರ್ಷ ಬಿಟ್ಟು ವರ್ಷ ಫಸಲು ನೀಡುತ್ತದೆ. ಆದರೆ ಗಿಡಗಳ ನಡುವಿನ ಅಂತರ ಕಡಿಮೆಯಾದಾಗ ಪ್ರತಿ ವರ್ಷವೂ ಫಸಲು ಸಿಗುತ್ತದೆ. ಈ ಕಾರಣದಿಂದ ಇದು ಮಾವು ಬೆಳೆಗೆ ಉತ್ತಮ ಪದ್ದತಿ' ಎನ್ನುತ್ತಾರೆ ಜೈನ್ ಕಂಪನಿಯ ಕರ್ನಾಟಕ ಉಪ ವ್ಯವಸ್ಥಾಪಕ ಚಿದಂಬರ ಜೋಶಿ.
ಜೈನ್ ಕಂಪನಿಯವರು ಮಾವಿನಲ್ಲಿ ಅಧಿಕ ಸ್ಥಿತ್ಯಂತರ ನಾಟಿ ಪದ್ದತಿಯಲ್ಲಿ ಜಲಗಾಂವ್, ಕೊಯಿಮತ್ತೂರಿನಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಸಾಮಾನ್ಯ ಅಂತರದಲ್ಲಿ ನಾಟಿ ಮಾಡಿ ಫಸಲನ್ನು ಪಡೆಯುವ ತೋಟದ ಆದಾಯಕ್ಕಿಂತ ಅಧಿಕ ಸ್ಥಿತ್ಯಂತರ ನಾಟಿ ಪದ್ದತಿಯಲ್ಲಿ ಬೆಳೆದರೆ ದುಪ್ಪಟ್ಟು ಆದಾಯವನ್ನು ಪಡೆಯಬಹುದು. ಇಳುವರಿಯಲ್ಲೂ ವ್ಯತ್ಯಾಸ ಆಗದಿರುವುದು ಪ್ರಯೋಗದಿಂದ ತಿಳಿದು ಬಂದಿದೆ.
ಮಾಹಿತಿಗಾಗಿ: ಚಿದಂಬರ ಜೋಶಿ: 9448286508
ನಾಗರಾಜ ಮತ್ತಿಗಾರ
ಇವರ ವಿಭಿನ್ನ ಲೇಖನ ನೋಡಲು
http://tandacool.blogspot.com/
http://oddola.blogspot.com/
No comments:
Post a Comment