Sunday, July 5, 2009

ಸಾವಯವ ರಸಾವರಿ



ಕೆಲಸಗಾರರ ಅಭಾವದ ಕಾಲದಲ್ಲಿ ಅನಿವಾರ್ಯ ವ್ಯವಸ್ಥೆ

ಬೇಸಾಯಕ್ಕೆ ಪೋಷಕಾಂಶಗಳು ಅತಿ ಅಗತ್ಯ. ಅದರಲ್ಲೂ ಸಾವಯವ ಕೃಷಿ ಮಾಡುವವರಿಗೆ ಹಟ್ಟಿಗೊಬ್ಬರ ಬೇಕೆ ಬೇಕು. ಇದನ್ನು ಒಂದು ಕಡೆ ತಯಾರಿಸಿ ಬೆಳೆಗಳಿಗೆ ಹಾಕುವುದು ದೊಡ್ಡ ಕೆಲಸವೇ ಸರಿ. ಪ್ರತಿ ವರ್ಷ ಹಟ್ಟಿಗೊಬ್ಬರವನ್ನು ಗುಂಡಿಯಿಂದ ತೆಗೆದು ಬೆಳೆಗಳಿಗೆ ನೀಡುವಾಗ ಕೃಷಿಕ ಸೋತು ಹೋಗುತ್ತಾನೆ. ಕೆಲಸದವರು ಸಿಗದೇ ಗೊಬ್ಬರ ಗುಂಡಿಯಲ್ಲಿಯೇ ಉಳಿಯುವ ಸಾಧ್ಯತೆಯೂ ಇದೆ. ಅದಕ್ಕಾಗಿಯೇ ಪ್ರಯೋಗಶೀಲ ರೈತ ಸುಲಭ ಉಪಾಯಗಳನ್ನು ಕಂಡು ಕೊಳ್ಳುತ್ತಿದ್ದಾನೆ. ಅದರಲ್ಲಿ ರಸಾವರಿಯು ಒಂದು.
ರಸಾವರಿ: ಇದರ ಕಲ್ಪನೆ ಮೊದಲು ಬಂದಿದ್ದು ರಾಸಾಯನಿಕ ಗೊಬ್ಬರಗಳನ್ನು ನೇರವಾಗಿ ಹನಿನೀರಾವರಿ ಅಥವಾ ತುಂತುರು ನೀರಾವರಿ ಮೂಲಕ ದ್ರವರೂಪದಲ್ಲಿ ನೀಡ ತೊಡಗಿದಾಗ. ಸಾವಯವ ಕೃಷಿಕರಿಗೆ ರಸಾವರಿ ಎಂಬುದನ್ನು ಮಾಡಲಿಕ್ಕೆ ಬರುತ್ತದೆ ಎಂದು ಗೊತ್ತಾಗಿದ್ದೆ ಸುಮಾರು ಹತ್ತು ವರ್ಷಗಳ ಹಿಂದೆ. ಕೆಲಸಗಾರರ ತೊಂದರೆಯನ್ನು ಅನುಭವಿಸುತ್ತಿರುವ ಬೆರಳೆಣಿಕೆಯ ಮಂದಿ ರಸಾವರಿಯ ಪ್ರಯೋಗಕ್ಕೆ ಇಳಿದರು.
ರಸಾವರಿ ತೊಟ್ಟಿ ನಿರ್ಮಾಣ: ಸಾವಯವ ರಸಾವರಿ ತಯಾರಿಕೆ ಬಹಳ ಸುಲಭ. ಆದರೆ ತಯಾರಿಕಾ ತೊಟ್ಟಿ ನಿರ್ಮಾಣ ಅಷ್ಟು ಸುಲಭವಲ್ಲ. ವ್ಯವಸ್ಥಿತವಾದ ರೀತಿಯಲ್ಲಿ ತೊಟ್ಟಯನ್ನು ನಿರ್ಮಿಸುವುದು ಖರ್ಚಿನ ಬಾಬ್ತು. ಆದರೆ ಒಮ್ಮೆ ರಸಾವರಿ ತೊಟ್ಟಿಯನ್ನು ನಿರ್ಮಿಸಿಕೊಂಡರೆ ಶಾಶ್ವತವಾದ ಕೆಲಸವನ್ನು ಮಾಡಿಕೊಂಡಂತೆ ಆಗುತ್ತದೆ. ರಸಾವರಿ ತೊಟ್ಟಿಯನ್ನು ಸುಲಭವಾಗಿ ಕಟ್ಟಿಕೊಳ್ಳಲು ಬರುತ್ತದೆ.
ಕಡಿಮೆ ಖರ್ಚಿನ ರಸಾವರಿ ತೊಟ್ಟಿ: ಇಪ್ಪತ್ತು ಅಡಿ ಉದ್ದ, ಹತ್ತು ಅಡಿ ಅಗಲ, ಐದು ಅಡಿ ಎತ್ತರದ (ಅನುಕೂಲಕ್ಕೆ ತಕ್ಕ ಅಳತೆಯಲ್ಲಿ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು) ತೊಟ್ಟಿ ನಿರ್ಮಿಸಬೇಕು. ಈ ತೊಟ್ಟಿಯ ತಳಭಾಗ ಇಳಿಜಾರು ಇರಬೇಕು. ಇದಕ್ಕೆ ಸೋಸುವಿಕೆಯ(ಫಿಲ್ಟರ್‌) ವ್ಯವಸ್ಥೆ ಮಾಡಬೇಕಾಗುತ್ತದೆ. ತಳಭಾಗದಿಂದ ಒಂದು ಅಡಿ ಎತ್ತರಕ್ಕೆ ಅಡಿಕೆ ದಬ್ಬೆ ಅಥವಾ ಮರದ ಗಳ(ಪೋಲ್ಸ್‌) ಜೋಡಿಸಿ ಅಟ್ಲು(ಅಟ್ಟ) ಮಾಡಬೇಕು. ಇದರ ಕೆಳಗೆ ಇರುವ ಇಳಿಜಾರಿನ ಬುಡದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಬೇಕು. ಇದರ ಕೆಳಗೆ ಒಂದು ಅಥವಾ ಮುಕ್ಕಾಲು ಇಂಚಿನ ಪೈಪ್‌ನ್ನು ತೊಟ್ಟಿಯ ಹೊರಗಡೆ ಬರುವಂತೆ ಅಳವಡಿಸಬೇಕು. ಈ ಪೈಪ್‌ ಇರುವ ಜಾಗದಲ್ಲಿ ಒಂದು ಸಣ್ಣ ತೊಟ್ಟಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಇದು ಕಡಿಮೆ ಖರ್ಚಿನ ರಸಾವರಿ ತೊಟ್ಟಿ.
ಹೈಟೆಕ್‌ ತೊಟ್ಟಿ: ಈ ತೊಟ್ಟಿಯ ಅಗಲ ಮತ್ತು ಉದ್ದ ದೊಡ್ಡದಾಗಿರುತ್ತದೆ. ಸೋಸುವಿಕೆ(ಫಿಲ್ಟರ್‌)ಗೆ ಪೈಪ್‌ಗಳನ್ನು ಹೋಲ್‌ ಮಾಡಿ ಕೆಳಗಡೆ ಬಳಸುತ್ತಾರೆ. ರಸಾವರಿ ಸಂಗ್ರಹಣೆ ತೊಟ್ಟಿ ದೊಡ್ಡದಾಗಿರುತ್ತದೆ. ತೊಟ್ಟಿ ತಯಾರಿಸುವುದು ಉಳಿದಂತೆ ಖಡಿಮೆ ಖರ್ಚಿನ ತೊಟ್ಟಿ ನಿರ್ಮಿಸಿದ ಮಾದರಿಯಲ್ಲಿಯೇ ಇದು ಇರುತ್ತದೆ. ರಸಾವರಿ ತೊಟ್ಟಿಯನ್ನು ನಿರ್ಮಿಸುವಾಗ ಗಮನದಲ್ಲಿಡಬೇಕಾದ ಅಂಶವೆಂದರೆ ಜೈವಿಕ ಗ್ಯಾಸ್‌ ಪ್ಲಾಂಟ್‌ ಹತ್ತಿರವಿದ್ದರೆ ಉತ್ತಮ.
ರಸಾವರಿ ತಯಾರಿಕೆ: ರಸಾವರಿ ತೊಟ್ಟಿಯ ಒಳಗಡೆ ಮಾಡಿದ ಅಟ್ಟದ ಮೇಲೆ ಸೊಪ್ಪು, ಎಲೆ, ತರಗೆಲೆ (ದರಕು) ಇತರೆ ಸತ್ವಯುತ ಕಚ್ಚಾ ವಸ್ತುಗಳನ್ನು ಹಾಕಬೇಕು. ಅದರ ಮೇಲ್ಗಡೆ ನೀರನ್ನು ಮಿಶ್ರಣಮಾಡಿ ತೆಳ್ಳಗೆ ಮಾಡಿದ ಸೆಗಣಿ ರಾಡಿಯನ್ನು ಬಿಡಬೇಕು. ಇದರಿಂದ ಕಚ್ಚಾವಸ್ತು ಬೇಗನೆ ಕೊಳೆಯುತ್ತದೆ. ನಂತರ ಪುನಃ ತೆಳ್ಳಗೆ ಮಾಡಿದ ರಾಡಿಯನ್ನು ಚೆಲ್ಲಬೇಕು. ಕೆಲವೇ ದಿನಗಳಲ್ಲಿ ಕಚ್ವಾ ವಸ್ತುಗಳು ಕೊಳೆತು ಅದರ ರಸ ಕೆಳಗಡೆ ಇಳಿಯುತ್ತದೆ. ಜಲ್ಲಿ ಕಲ್ಲುಗಳ ನಡುವೆ ಗೊಬ್ಬರದ ರಸ ಸೋಸಿ ಬರುತ್ತದೆ. ಹೀಗೆ ಬಂದ ರಸವನ್ನು ಡಿಕಾಕ್ಷನ್‌ ಎನ್ನುತ್ತಾರೆ.
ರಸವನ್ನು ನೀರಾವರಿಗೆ: ರಸಾವರಿ ತೊಟ್ಟಿಯಿಂದ ಸೋಸಿ ಬಂದ ಡಿಕಾಕ್ಷನ್‌ ಮತ್ತೊಂದು ತೊಟ್ಟಿಯಲ್ಲಿ ಸಂಗ್ರಹವಾಗಿರುತ್ತದೆ. ಇದನ್ನು ಪಂಪ್‌ ಮೂಲಕ ಜಮೀನಿನಲ್ಲಿ ಅಳವಡಿಸಿದ ನೀರಾವರಿ ವ್ಯವಸ್ಥೆಗೆ ಹೋಗುವಂತೆ ಮಾಡಬೇಕು. ಡಿಕಾಕ್ಷನ್‌ ಟ್ಯಾಂಕ್‌ ಪುಟ್‌ವಾಲ್ವ ಸಹಿತ ಪೈಪ್‌ ಅಳವಡಿಸಬೇಕು. ತೊಟ್ಟಿಯಿಂದ ಸೋಸಿ ಬಂದ ಡಿಕಾಕ್ಷನ್‌ ಅನ್ನು ನೇರವಾಗಿ ಜಮೀನಿಗೆ ಹಾಯಿಸಬಾರದು. ಇದು ಕಠೋರವಾಗಿರುತ್ತದೆ. ಅದಕ್ಕಾಗಿ ಒಂದು ಲೀಟರ್‌ ಡಿಕಾಕ್ಷನ್‌ಗೆ ನಾಲ್ಕು ಲೀಟರ್‌ ನೀರಿನಂತೆ ಮಿಶ್ರಣ ಮಾಡಿ ನಂತರ ಗಿಡದ ಬುಡಕ್ಕೆ ಪೌಷ್ಠಿಕವಾದ ಗೊಬ್ಬರದ ರಸವನ್ನು ಹಾಯಿಸಬೇಕು.
ಒಂದು ಲಕ್ಷದ ಇಪ್ಪತ್ತೈದು ಸಾವಿರ ಖರ್ಚು ಮಾಡಿ ರಸಾವರಿ ವ್ಯವಸ್ಥೆಯನ್ನು ಉತ್ತರ ಕನ್ನಡ ಸಿದ್ದಾಪುರ ತಾಲೂಕಿನ ಹೊಸಗದ್ದೆ ರೈತ ಪಿ. ವಿ. ಹೆಗಡೆ ಅವರು ಮಾಡಿಕೊಂಡಿದ್ದಾರೆ. `ಪ್ರತಿ ವರ್ಷ ಗೊಬ್ಬರ ತೆಗೆಯುವ ಸಮಯದಲ್ಲಿ ಕೆಲಸಗಾರರಿಗಾಗಿ ಹುಡುಕಿ ಹುಡುಕಿ ಸುಸ್ತಾಗಿ ಹೋಗುತ್ತಿದ್ದೆವು. ಇಂದು ಗೊಬ್ಬರ ತೆಗೆದು ತೋಟಕ್ಕೆ ಹಾಕಬೇಕು ಎಂದು ನಿರ್ಧಾರ ಮಾಡಿದರೆ ಹದಿನೈದು ದಿನದ ನಂತರ ಆ ಕೆಲಸ ಮಾಡಬೇಕಾಗುತ್ತಿತ್ತು. ಈಗ ರಸಾವರಿ ತೊಟ್ಟಿಯನ್ನು ಮಾಡಿಕೊಂಡ ನಂತರ ಆ ಸಮಸ್ಯೆ ಇಲ್ಲ.
ಗೊಬ್ಬರ ಗುಂಡಿಗೆ ಹಾಕುವ ಕಚ್ಚಾ ಪದಾರ್ಥಗಳನ್ನು ಸ್ವಲ್ಪ ತೊಟ್ಟಿಗೆ ಹಾಕಿ ಉಳಿದವುಗಳನ್ನು ತೋಟಕ್ಕೆ ಹಾಕುತ್ತೇವೆ. ತೋಟದಲ್ಲಿ ಸಿಗುವ ತ್ಯಾಜ್ಯಗಳನ್ನು ಅಲ್ಲಿಯೇ ಕಡಿದು ಗಿಡಗಳ ಬುಡಕ್ಕೆ ಹಾಕುತ್ತೇವೆ. ಇರುವ ಐದು ಎಕರೆ ತೋಟವನ್ನು ಸಮನಾಗಿ ವಿಭಜಿಸಿಕೊಂಡು ವಾರಕ್ಕೆ ಒಂದು ಬಾರಿ ಒಂದೊಂದು ಭಾಗಕ್ಕೆ ತುಂತುರು ನೀರಾವರಿ ಮೂಲಕ ನೀಡುತ್ತಿದ್ದೇವೆ. ಈಗ ಜಮೀನಿನಲ್ಲಿ ಎರೆ ಹುಳುಗಳು ಕಾಣುತ್ತಿವೆ ಎನ್ನುತ್ತಾರೆ.
ಈ ರಸಾವರಿ ತೊಟ್ಟಿಯನ್ನು ಮಾಡಿಕೊಳ್ಳುವುದಕ್ಕೆ ತೋಟಗಾರಿಕಾ ಇಲಾಖೆಯಿಂದ ಮೂವತ್ತು ಸಾವಿರ ರೂಪಾಯಿ ಸಬ್ಸಿಡಿ ಸಿಕ್ಕಿದೆ. `ಕೆಲಸಗಾರರ ತತ್ವಾರದ ಈ ದಿನಗಳಲ್ಲಿ ಇಂತಹ ಸುಲಭ ಕೆಲಸಗಳನ್ನು ಅಳವಡಿಸಿ ಕೊಳ್ಳುವುದು ಅನಿವಾರ್ಯ' ಎನ್ನುವುದು ಪ.ವಿ. ಹೆಗಡೆ ಅವರ ಅಭಿಪ್ರಾಯ.
ಕಡಿಮೆ ಖರ್ಚಿನ ರಸಾವರಿ ವ್ಯವಸ್ಥೆಯನ್ನು ಸುಮಾರು ಹತ್ತು ವರ್ಷಗಳ ಹಿಂದೆಯೇ ಮಾಡಿಕೊಂಡಿರುವ ಶಿವಮೊಗ್ಗ ಸೊರಬ ತಾಲೂಕಿನ ಕೆ.ವಿ. ಲಕ್ಷ್ಮೀನಾರಾಯಣ ಭಟ್ಟರ ಪ್ರಕಾರ `ರಸಾವರಿಯನ್ನು ಮಾಡಿಕೊಂಡ ನಂತರ ನಮ್ಮ ತೋಟದಲ್ಲಿ ಅಡಿಕೆ ಇಳುವರಿ ಹೆಚ್ಚಾಗಿದೆ. ಕೂಲಿಗಳ ಅಭಾವದ ಈ ಕಾಲದಲ್ಲಿ ಇದು ಎಲ್ಲರೂ ಅಳವಡಿಸಿ ಕೊಳ್ಳಬೇಕಾದ ವಿಧಾನ' ಎನ್ನುತ್ತಾರೆ.
ತೋಟಗಾರಿಕಾ ಇಲಾಖೆ ಅವರು ಸಹ ರಸಾವರಿ ವ್ಯವಸ್ಥೆಗೆ ಶೇ. 30 ಸಬ್ಸಿಡಿಯನ್ನು ನೀಡುತ್ತಿದ್ದಾರೆ. ರೈತರು ಆದಷ್ಟು ಸ್ವಾವಲಂಬಿಯಾಗಿ ತಮ್ಮ ತೋಟದ ಅಗತ್ಯದ ಕೆಲಸಗಳನ್ನು ಬೇರೆಯವರಿಗಾಗಿ ಕಾಯದೆ ನಿರ್ವಹಿಸಿದರೆ ಕೃಷಿ ಕಷ್ಟವಾಗುವುದಿಲ್ಲ.
ಮಾಹಿತಿಗಾಗಿ: ಪಿ.ವಿ. ಹೆಗಡೆ ಹೊಸಗದ್ದೆ
ಅಂಚೆ: ಸಂಪಗೋಡ
ಸಿದ್ದಾಪುರ- ಉತ್ತರ ಕನ್ನಡ

ಕೆ.ವಿ. ಲಕ್ಷ್ಮೀನಾರಾಯಣ ಭಟ್ಟ
ಮುಟಗುಪ್ಪೆ- ಅಂಚೆ
ಸೊರಬ, ಶಿವಮೊಗ್ಗ


ಸ್ಲರಿ ( ಸಗಣಿ ರಾಡಿ) ಪಂಪ್‌
ಜೈವಿಕ ಗ್ಯಾಸ್‌ ಪ್ಲಾಂಟ್‌ನಿಂದ ಹೊರಬೀಳುವ ರಾಡಿಯನ್ನು ಒಂದು ಟ್ಯಾಂಕ್‌ನಲ್ಲಿ ಶೇಖರಿಸಿಡಬೇಕು. ನಂತರ ರಸಾವರಿ ತೊಟ್ಟಿಯಲ್ಲಿ ಹಾಕಿದ ಕಚ್ಚಾವಸ್ತುಗಳ ಮೇಲೆ ಚುಮುಕಿಸ ಬೇಕಾಗುತ್ತದೆ. ರಾಡಿಯನ್ನು ಬಕೆಟ್‌ ಅಥವಾ ಕೊಡಪಾನದಿಂದ ಹಾಕಲಿಕ್ಕೆ ಹೋದರೆ ಸಮಯ ಮತ್ತು ಶ್ರಮ ಎರಡು ಹೆಚ್ಚಿಗೆ ಬೇಕಾಗುತ್ತದೆ. ಅದಕ್ಕಾಗಿ ಉತ್ತರಕನ್ನಡ ಸಿದ್ದಾಪುರದ ಹೊಸಗದ್ದೆ ಪ್ರವೀಣ್‌ ಅವರು ಸ್ಲರಿಯನ್ನು ರಸಾವರಿ ತೊಟ್ಟಿಗೆ ಹಾಯಿಸಲು ಸುಲಭವಾದ ಕೈ ಪಂಪ್‌ ಅನ್ನು ಅನುಶೋಧಿಸಿದ್ದಾರೆ.
ಪಿವಿಸಿ ಪೈಪ್‌ನ್ನು ಈ ಪಂಪ್‌ ತಯಾರಿಸಲು ಬಳಸಿ ಕೊಂಡಿದ್ದಾರೆ. ಗುಜರಿಯಲ್ಲಿ ದೊರೆಯುವ ಸಾಮಗ್ರಿಗಳನ್ನು ಇದರ ಯಂತ್ರಗಳು. ಇದು ಬೋರ್‌ವೆಲ್‌ ಕೈಪಂಪ್‌ನಂತೆ ಇದು ಕೆಲಸ ಮಾಡುತ್ತದೆ. ಈ ಪಂಪ್‌ ತಯಾರಿಸಲು ಇವರಿಗೆ ತಗಲಿದ ವೆಚ್ಚ ಸಾವಿರ ರೂಪಾಯಿ. ಹತ್ತು ಅಡಿ ಆಳದಿಂದ ಯಾವುದೇ ಸಮಸ್ಯೆ ಇಲ್ಲದೆ ಸ್ಲರಿಯನ್ನು ಎತ್ತಿ, 15 ಅಡಿ ಎತ್ತರದವರಗೆ ಸ್ಲರಿಯನ್ನು ಸಾಗಿಸುತ್ತದೆ.
ಸುಲಭ ವಿಧಾನದ ರಸಾವರಿ ಮಾಡುವವರಿಗೆ ಜೊತೆಯಲ್ಲಿ ಈ ಕೈ ಪಂಪ್‌ ಇದ್ದರೆ ಅನುಕೂಲ.
ಮಾಹಿತಿಗಾಗಿ: ಪ್ರವೀಣ್‌ ಹೊಸಗದ್ದೆ- 08389-248238

No comments: