Sunday, March 8, 2009

ಮಾಡಿ ನೋಡಿ ಮಿನಿ-ಡೈಜೆಸ್ಟರ್


ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದ ಡೈಜೆಸ್ಟರ್‌ ಒಂದನ್ನು ಉಪಯೋಗಿಸುತ್ತಿದ್ದಾರೆ, ಬೆಂಗಳೂರು ಸಮೀಪದ ಮರಸರಹಳ್ಳಿಯ ಸಾವಯವ ಕೃಷಿಕ ಎನ್‌. ಆರ್‌. ಶೆಟ್ಟಿ. ಎರೆಡು ಎಕರೆಯ ಸಣ್ಣ ಕೃಷಿ ಕ್ಷೇತ್ರ. ಜೀವ ವೈವಿಧ್ಯ ತುಂಬಿದ, ನೂರಾರು ಮರಗಳಿರುವ ಕೃಷಿ ಭೂಮಿ. ಕೆಂಪು ಚೆರ್ರಿ, ದಾಳಿಂಬೆ, ಸೀತಾಫಲ, ನೆಲ್ಲಿ ಮೊದಲಾದ ಹಣ್ಣಿನ ಗಿಡಗಳು, ರಾಗಿ, ತೊಗರಿ, ಅವರೆ ಮುಂತಾದ ಮಳೆ ಆಶ್ರಿತ ಬೆಳೆಗಳು. ತರಕಾರಿಗಾಗಿ ಏರುಮಡಿಗಳು. ಇದು ಶೆಟ್ಟಿಯವರ ಕನಸಿನ ನವ ನಂದನ.
ಎಲ್ಲಾ ಸಾವಯವ ಕೃಷಿಕರ ಬಾಯಲ್ಲೂ ಡೈಜೆಸ್ಟರ್‌ ಸುದ್ದಿ. ಬೆಳಗಾಂನ ಕೃಷಿಕರೊಬ್ಬರು ತೊಟ್ಟಿ ಕಟ್ಟಿ ಅದರಲ್ಲಿ ಕೃಷಿತ್ಯಾಜ್ಯಗಳು, ಹೊಂಗೆ ಎಲೆ, ಬೇವಿನ ಎಲೆಗಳು, ಗ್ಲಿರಿಸೀಡಿಯ, ಮೇಲಿನಿಂದ ಸಗಣಿ ಗಂಜಲಗಳ ಮಿಶ್ರಣ ಹಾಕಿ ಚೆನ್ನಾಗಿ ಕಳೆಯಿಸಿ ಗೊಬ್ಬರ ಮಾಡುತ್ತಾರಂತೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಹಲವರು ಅದನ್ನು ನೋಡಿಬರಲೂ ಉತ್ಸುಕತೆ ತೋರಿದರು.
ಶೆಟ್ಟಿ ದಂಪತಿಗಳಿಗೂ ಅದನ್ನು ನೋಡಿ ಬಂದ ನಂತರ ಹಗಲೂ ರಾತ್ರೆ ಅದರದ್ದೇ ಚಿಂತೆ. ಆದರೆ ಮಾಡುವುದೇನು? ಆ ಡೈಜೆಸ್ಟರ್‌ ಭಾರಿ ದೊಡ್ಡದು, ಹತ್ತಿಪ್ಪತ್ತು ಎಕರೆ ಇರುವಂತಹವರಿಗೆ ಸರಿ. ಎರೆಡೆಕರೆ ಕೃಷಿಭೂಮಿಗೆ ಹೇಗೆ? ಏನಾದರೂ ಮಾಡಲೇಬೇಕೆಂಬ ತವಕ. ಮನಸ್ಸೊಂದಿದ್ದರೆ ಮಾರ್ಗ ತಾನೇ ತೆರೆದುಕೊಳ್ಳುವುದಂತೆ. ಶೆಟ್ಟಿಯವರೂ ಇದಕ್ಕೆ ಹೊರತಲ್ಲವಲ್ಲ.
ಶೆಟ್ಟಿಯವರು ಮಾಡಿದ್ದೂ ಅದನ್ನೇ! ಸಿಮೆಂಟಿನ ಕುಂಡಗಳನ್ನು ಮಾಡುವವರನ್ನು ವಿಚಾರಿಸಿದರು. ಕೆಳಭಾಗದಲ್ಲಿ ಸಣ್ಣ ತೂತಿರುವಂತೆ ಎರೆಡು ತೊಟ್ಟಿಗಳು ಸಿದ್ದವಾದವು. ಮೂರನೆಯ ತೊಟ್ಟಿಗೆ ತೂತಿಲ್ಲ. ಮೊದಲೆರಡು ತೊಟ್ಟಿಗಳ ತಳಭಾಗದಲ್ಲಿ ದಪ್ಪ ಜಲ್ಲಿ ಹರಡಿದರು. ಅದರ ಮೇಲೆ ಸಣ್ಣ ಬಟಾಣಿ ಜಲ್ಲಿ, ಅದರ ಮೇಲೆ ಮರಳು. ಮರಳಿನ ಮೇಲೊಂದು ಪ್ಲಾಸ್ಟಿಕ್‌ ಮೆಶ್‌. ಅದರ ಮೇಲೆ ಕೃಷಿ ತ್ಯಾಜ್ಯ, ಮೇಲೆ ಸಗಣಿ ಗಂಜಲಗಳ ಮಿಶ್ರಿತ ದ್ರಾವಣ.
ಮೊದಲ ತೊಟ್ಟಿಯಲ್ಲಿಳಿದ ಕಶಾಯ ಎರಡನೆಯ ತೊಟ್ಟಿಗೆ ಬೀಳಬೇಕು. ಅಂದರೆ ಮೊದಲನೆಯ ತೊಟ್ಟಿ ಸ್ವಲ್ಪ ಎತ್ತರದಲ್ಲಿರಬೇಕು. ಆಲೋಚನೆ ಬಂದಿದ್ದೇ ತಡ, ಕಲ್ಲು ಮಣ್ಣು ಸೇರಿಸಿ ನೆಲ ಎತ್ತರಿಸಿ ಸಮತಟ್ಟು ಮಾಡಿದರು. ಇಲ್ಲಿ ಮೊದಲ ತೊಟ್ಟಿ ಇಟ್ಟರು. ಕೆಳಗಿನ ತೂತಿಗೆ ಒಂದು ಕೊಳವೆ ಜೋಡಿಸಿ ಅದು ಸೋರದಂತೆ ಸಿಮೆಂಟಿನಿಂದ ಭದ್ರ ಪಡಿಸಿದರು. ಆ ಕೊಳವೆಯಿಂದ ಬರುವ ದ್ರಾವಣ ಎರಡನೆಯ ತೊಟ್ಟಿಯ ಮೇಲ್ಭಾಗದಲ್ಲಿ ಬೀಳುವ ಹಾಗಿರಬೇಕು. ಅದಕ್ಕೆ ಸರಿಹೊಂದುವ ಎತ್ತರದಲ್ಲಿ ಎರಡನೆಯ ತೊಟ್ಟಿ ಇಟ್ಟರು. ಅದರ ತಳದ ಕೊಳವೆಯಿಂದ ಬಂದ ನೀರು ಮೂರನೆಯ ತೊಟ್ಟಿಗೆ.
ಎರೆಡೂ ತೊಟ್ಟಿಗಳಲ್ಲಿ ಶೋಧಕಗಳಿರುವುದರಿಂದ ಮೂರನೆಯ ತೊಟ್ಟಿಯಲ್ಲಿರುವ ದ್ರಾವಣದಲ್ಲಿ ಕಸ ಕಡ್ಡಿಗಳಿರುವುದಿಲ್ಲ. ಸಿಂಪರಣೆಗೆ ಸಹ ಸೂಕ್ತ.
ಕಾರ್ಯವೈಖರಿ: ಮೊದಲ, ಮೇಲಿನ ತೊಟ್ಟಿಯಲ್ಲಿ ಕೃಷಿತ್ಯಾಜ್ಯ, ಸಗಣಿ ಬಗ್ಗಡ, ಗಂಜಲ ಎಲ್ಲವನ್ನೂ ಚೆನ್ನಾಗಿ ಬೆರೆಸಿ ಹಾಕಬೇಕು. ನಂತರ ತೊಟ್ಟಿಯ ಅಳತೆಗನುಸಾರವಾಗಿ ನೀರನ್ನು ಹಾಕಿ ಕಲಕಬೇಕು. ( ತೊಟ್ಟಿಗಳನ್ನು 5ಲೀ, 10ಲೀ, 15ಲೀ ಅಳತೆಗೆ ಮಾಡಿಸಬಹುದು.)ಪ್ರತಿ ದಿನ ಬೆಳಗ್ಗೆ ಸಾಯಂಕಾಲ ಕಲಕಬೇಕು. ಮೊದಲಬಾರಿ ಹಾಕಿದಾಗ 8ದಿನ ಕಳಿಯಲು ಬಿಡಬೇಕು. ಅಲ್ಲಿಯವರೆಗೆ ಕೊಳವೆಯ ಬಾಯಿ ಮುಚ್ಚಿರ ಬಹುದು. ನಂತರ ಅದನ್ನು ತೆಗೆದಾಗ ಮೇಲಿನ ತೊಟ್ಟಿಯ ದ್ರಾವಣ ನಿಧಾನವಾಗಿ ಶೋಧಕದೊಳಕ್ಕಿಳಿದು ಎರಡನೆಯ ತೊಟ್ಟಿಗೆ ಬೀಳಲಾರಂಭಿಸುತ್ತದೆ. ಅಲ್ಲಿಯೂ ಮರಳು ಜಲ್ಲಿ ಇರುವುದರಿಂದ ಮತ್ತೊಂದು ಬಾರಿ ಸೋಸಿಕೊಂಡು 3ನೆಯ ಸಂಗ್ರಹಣಾ ತೊಟ್ಟಿಗೆ ಬೀಳುತ್ತದೆ. ಈ ದ್ರಾವಣಕ್ಕೆ 1;10ರ ಅನುಪಾತದಲ್ಲಿ ನೀರು ಬೆರೆಸಿ ಸಿಂಪರಣೆ ಮಾಡಬಹುದು.
ಶೆಟ್ಟಿಯವರ ತೋಟದಲ್ಲಿ ಮರಗಳು ಇರುವುದರಿಂದ ಪ್ರತಿ ಗಿಡದ ಬುಡಕ್ಕೆ ಒಂದು ಲೀಟರ್‌ ದ್ರಾವಣ ಹಾಕುತ್ತಾರೆ. ಸಿಂಪರಣೆ ಮಾಡುವುದಾದರೆ 1/4ಎಕರೆ ಪ್ರದೇಶಕ್ಕೆ ಇಷ್ಟು ದ್ರಾವಣ ಸಾಕು ಎನ್ನುವುದು ಶೆಟ್ಟಿಯವರ ಅನಿಸಿಕೆ. ಆಶ್ಯಕತೆಗೆ ಅನುಸಾರವಾಗಿ ಮೇಲಿನ ತೊಟ್ಟಿಗೆ ನೀರು ಹಾಕಬೇಕು.
300ರೂ ನಿಂದ 500ರೂ ಖರ್ಚಿನಲ್ಲಿ 3 ತೊಟ್ಟಿಗಳನ್ನು ಮಾಡಿಸಬಹುದು. ದೊಡ್ಡ ಡೈಜೆಸ್ಟರ್‌ಗೆ 30ರಿಂದ 40ಸಾವಿರ ರೂಗಳು ಬೇಕಾದೀತು. ಅಲ್ಲದೆ ನಾವು ಖರ್ಚುಮಾಡಿದ ನಂತರವೇ ಸರ್ಕಾರದಿಂದ ಸಬ್ಸಿಡಿ ದೊರಕುವುದು. ಸಣ್ಣ ಹಿಡುವಳಿದಾರರಿಗೆ ಈ ಮಿನಿ ಡೈಜೆಸ್ಟರ್‌ ಸೂಕ್ತ. ಸಾಲದ ಹಂಗಿಲ್ಲ, ಸಬ್ಸಿಡಿಗಾಗಿ ಅಲೆದಾಡಬೇಕಿಲ್ಲ. ಯಾರು ಬೇಕಾದರೂ ಮಾಡಿಕೊಳ್ಳಬಹುದಾದ ಮಿನಿ ಡೈಜೆಸ್ಟರ್‌ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು. ಎನ್‌.ಆರ್‌. ಶೆಟ್ಟಿ. 23330999.

-ಅನುಸೂಯ ಶರ್ಮ

No comments: