Friday, February 27, 2009

ಮೌಲ್ಯವರ್ಧನೆ


ಅದು ಪುಡಿ. ಈರುಳ್ಳಿಯ ಪುಡಿ. ನಿಮಗೆ ಈರುಳ್ಳಿಯ ಪುಡಿ ಬೇಡ ಈರುಳ್ಳಿಯೇ ಬೇಕು ಅನಿಸುತ್ತದೆ. ವೆರಿ ಸಿಂಪಲ್‌. ಆ ಪುಡಿಯನ್ನು ನೀರಿಗೆ ಹಾಕಿದರಾಯಿತು. ಈರುಳ್ಳಿ ರೆಡಿ.
ಇದೇನು ಶಂಕರ್‌ ಅವರ ಮ್ಯಾಜಿಕ್‌ ಅಲ್ಲ. ಅಥವಾ ಮಂಕುಬೂದಿಯ ಮಂತ್ರ ಅಲ್ಲ. ವಾಸ್ತವ. ಕಾಲ ಬದಲಾಗಿದೆ ಎನ್ನುವುದಕ್ಕೆ ಸಾಕ್ಷಿಯೋ ಎಂಬಂತೆ ಈಗ ಈರುಳ್ಳಿ ಪುಡಿಯನ್ನು ನೀರಲ್ಲಿ ಹಾಕಿ ಈರುಳ್ಳಿಯ ಮೂಲರೂಪವನ್ನು ಪಡೆಯಬಹುದು. ಈರುಳ್ಳಿ ಮಾತ್ರವಲ್ಲ, ಬೆಂಡೆಕಾಯಿ, ಬೆಳ್ಳುಳ್ಳಿ ಮುಂತಾದ ತರಕಾರಿ ಹಾಗೂ ಹಣ್ಣುಗಳಿಗೂ ಇದೇ ಕಥೆ ಅನ್ವಯಿಸುತ್ತದೆ.
ಹೌದು, ಮೌಲ್ಯವರ್ಧನೆ ಎಂಬ ಪರಿಕಲ್ಪನೆ ಇದನ್ನೆಲ್ಲ ಈಗ ಸಾಧ್ಯವಾಗಿಸಿದೆ. ಇದೂ ಮೌಲ್ಯವರ್ಧನೆಯ ಒಂದು ರೂಪ. ಹೀಗೆ ವಿವಿಧ ಆಹಾರ ಪದಾರ್ಥಗಳ ಮೌಲ್ಯವರ್ಧನೆ ಮಾಡುವ ಕೆಲಸವನ್ನು ಮಹಾರಾಷ್ಟ್ರದ ಜಲಗಾಂವ್‌ನ ಜೈನ್‌ ಕಂಪನಿ ಅವರು ಮಾಡುತ್ತಿದ್ದಾರೆ.
ಹಲವಾರು ಅಂಗ ಸಂಸ್ಥೆಗಳನ್ನು ಒಳಗೊಂಡಿರುವ ಜೈನ್‌ ಕಂಪನಿ, 1995ರಿಂದ ಆಹಾರದ ಮೌಲ್ಯವರ್ಧನೆ ಮಾಡುವ ಕೆಲಸ ಪ್ರಾರಂಭಿಸಿತು. ರಫ್ತಿಗಾಗಿ ಮೌಲ್ಯವರ್ಧನೆ ಮಾಡಬೇಕಿದ್ದರೆ ಅಂತಾರಾಷ್ಟ್ರೀಯ ಆಹಾರ ಸಂಸ್ಥೆ ಮತ್ತು ಐಎಸ್‌ಒ 20000 ಇದರ ಗುಣಮಟ್ಟವನ್ನು ಪಡೆದಿರಬೇಕಾಗುತ್ತದೆ. ಇದನ್ನು ಪಡೆಯುವಾಗ ಹರಸಾಹಸ ಪಡಬೇಕು. ಅದಕ್ಕಾಗಿ ಕಂಪನಿ ಅವರು ವ್ಯವಸ್ಥಿತ ಚಿತ್ರಣವನ್ನು ನೀಡಬೇಕು. ಅದನ್ನು ಅಂತಾರಾಷ್ಟ್ರೀಯ ಗುಣಮಟ್ಟ ನಿರ್ಧಾರ ಸಮಿತಿ ಅವರು ನಿಶಾನೆ ತೋರಿಸಿದ ನಂತರ ಆಹಾರೋತ್ಪಾನೆಯನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ರಫ್ತು ಮಾಡುವ ದೇಶಗಳ ಆಹಾರ ಗುಣಮಟ್ಟಕ್ಕೆ ಸರಿಯಾಗಿ ಮತ್ತು ಗ್ರಾಹಕರ ಮನಸ್ಥಿತಿ ಮತ್ತು ಬೇಡಿಗೆ ಅನುಗುಣವಾಗಿ ರಫ್ತು ಮಾಡಬೇಕಾಗುತ್ತದೆ. ಇದನ್ನು ಜೈನ್‌ ಕಂಪನಿ ಸಾಧಿಸಿದೆ.
ಮೌಲ್ಯವರ್ಧನೆಯ ರೂಪ ಮತ್ತು ಪದಾರ್ಥಗಳು: ಮೌಲ್ಯವರ್ಧನೆಗೆ ಬಹಳಷ್ಟು ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳದೆ ಸಿಮೀತ ಪದಾರ್ಥಗಳನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚು ಪ್ರಮಾಣದಲ್ಲಿ ಮಾಡುತ್ತಿದ್ದಾರೆ.
ಇವರು ತಯಾರಿಸುವ ಪದಾರ್ಥದ ಮೌಲ್ಯವನ್ನು ಹೆಚ್ಚಿಸಲು ಅನುಸರಿಸಿದ ಕ್ರಮವೆಂದರೆ ನಿರ್ಜಲೀಕರಣ ಮಾಡುವುದು. ಬಹಳ ಕಾರದ ಅಂಶ ಹೆಚ್ಚಿರುವ ಬಿಳಿ ಈರುಳ್ಳಿಯನ್ನು ಬಳಸುತ್ತಾರೆ. ನಮ್ಮಲ್ಲಿ ಬೆಳೆಯುವ ಕೆಂಪು ಈರುಳ್ಳಿ ನಿರ್ಜಲೀಕರಣಕ್ಕೆ ಸೂಕ್ತವಾಗುವುದಿಲ್ಲ. ಇದರಂತೆ ಬೆಳ್ಳುಳ್ಳಿ, ಕೆಂಪು ಮೆಣಸು, ದೊಣ್ಣೆ ಮೆಣಸು, ಟೊಮೆಟೋ ಮುಂತಾದ ತರಕಾರಿಗಳ ನಿರ್ಜಲೀಕರಿಸುತ್ತಾರೆ. ಇದು ಪೌಡರ್‌ ರೂಪದಲ್ಲಿರುತ್ತದೆ.
ತರಕಾರಿಯ ಜೊತೆಗೆ ಹಣ್ಣುಗಳನ್ನು ಶೀತಲೀಕರಣಗೊಳಿಸಿ ವಿದೇಶದಲ್ಲಿ ಮಾರುಕಟ್ಟೆಯನ್ನು ಕಂಡು ಕೊಂಡಿದ್ದಾರೆ. ಮಾವು, ಪೇರಲೆ, ದಾಳಿಂಬೆ, ಬಾಳೆಹಣ್ಣು, ನೆಲ್ಲಿಕಾಯಿಗಳನ್ನು ನಿರ್ಜೀವಗೊಳಿಸುತ್ತಾರೆ. ಹೀಗೆ ಮಾಡಿದರು ಇದರಲ್ಲಿರುವ ಜೀವಕೋಶಗಳು ಸಾಯುವುದಿಲ್ಲ. ಒಂದು ವರ್ಷದ ನಂತರ ಇದನ್ನು ಸಾಮಾನ್ಯ ವಾತಾವರಣದಲ್ಲಿಟ್ಟರೆ ತಾಜಾ ಹಣ್ಣಿನಂತೆಯೇ ಗ್ರಾಹಕರಿಗೆ ದೊರೆಯುತ್ತದೆ.
ನಿರ್ಜಲೀಕರಿಸಿದ ತರಕಾರಿಗಳು ಎಲ್ಲಾ ರೀತಿಯ ಆಹಾರಗಳಿಗೆ ಉಪಯೋಗಿಸುವಂತೆ ಇರುತ್ತದೆ. ಸಾಂಬಾರ, ಫೀಜಾ ಮುಂತಾದ ಆಹಾರಗಳಿಗೆ ನೇರವಾಗಿ ಬಳಸಬಹುದು. ಇದೊಂದು ಉಪಯೋಗಿಸುವವರಿಗೆ ಮಿತ್ರನಂತೆ ಇರುತ್ತದೆ. ಉಪಯುಕ್ತವಾಗಿಯೂ, ದೀರ್ಘ ಬಾಳಿಕೆಯೂ ಬರುತ್ತದೆ.
ಶೀತಿಲಗೊಳಿಸಿದ ಹಣ್ಣುಗಳನ್ನು ಪಾನೀಯಗಳನ್ನು ತಯಾರಿಸಲು, ಐಸ್‌ಕ್ರಿಮ್‌ಗೆ, ಹಣ್ಣುಗಳ ಮಿಶ್ರಣ (ಸಲಾಡ್‌)ಕ್ಕೆ ಬಳಸಲು ಯೋಗ್ಯವಾಗಿರುತ್ತದೆ. ಇದು ಯಾವುದೇ ರೀತಿಯ ರಾಸಾಯನಿಕಗಳನ್ನು ಒಳಗೊಂಡಿರದೇ ಬಹುದಿನ ಹಾಳಗಾದೇ ಇರುತ್ತದೆ.
ಮೌಲ್ಯವರ್ಧನೆ ಶ್ರಮ: ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಬಳಸುವ ತರಕಾರಿ, ಹಣ್ಣುಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕಾಗುತ್ತದೆ. ಇದನ್ನು ಸಾಮಾನ್ಯ ರೈತರಿಂದ ಪಡೆಯಲು ಸ್ವಲ್ಪ ಕಷ್ಟವೇ ಸರಿ. ಅದಕ್ಕಾಗಿ ಜೈನ್‌ ಕಂಪನಿ ರೈತರೊಂದಿಗೆ ಕರಾರು ಕೃಷಿಯನ್ನು ಮಾಡುತ್ತಿದೆ. ಬಹಳಷ್ಟು ಕೃಷಿಕರಿಗೆ ಕರಾರು ಕೃಷಿ ಆಸಕ್ತಿದಾಯಕವು ಅಲ್ಲ ಮತ್ತು ನಂಬಿಕೆಗೆ ಅರ್ಹವಲ್ಲ ಎಂಬ ಭಾವನೆಯು ಇದೆ. ಆದರೆ ಇವರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುತ್ತಿದ್ದಾರೆ. ಇವರು ಹೆಚ್ಚಾಗಿ ಬಿಳಿ ಈರುಳ್ಳಿಯ ಕರಾರು ಕೃಷಿಗೆ ಒಳಪಡಿಸಿದ್ದಾರೆ. ಇದಕ್ಕೆ ಕಾರಣವು ಇದೆ. ಭಾರತೀಯ ತಳಿಗಳು ಈರುಳ್ಳಿಯನ್ನು ನಿರ್ಜಲೀಕರಣಗೊಳಿಸುವುದು ಕಷ್ಟ. ಅದಕ್ಕಾಗಿ ಅಮೇರಿಕಾದ ತಳಿಯನ್ನು ಬಳಸಬೇಕಾಗುತ್ತದೆ.
ಇವರ ಕರಾರು ಕೃಷಿಯಲ್ಲಿ ಬೀಜ, ಪೋಷಕಾಂಶ ಹಾಗೂ ನೀರಾವರಿ ವ್ಯವಸ್ಥೆಯನ್ನು ಇವರೇ ಮಾಡುತ್ತಾರೆ. ರೈತರ ಹೊಲದಲ್ಲಿ ಬೆಳೆಸಿದ ಈರುಳ್ಳಿಯನ್ನು ಕೊಯ್ಲು ಮಾಡುವಾಗ ಇರುವ ಮಾರುಕಟ್ಟೆಯ ಮೌಲ್ಯದಲ್ಲಿ ಖರೀದಿಸುತ್ತಾರೆ. ಒನ್ನೊಮ್ಮೆ ಮಾರುಕಟ್ಟೆ ಮೌಲ್ಯ 3 ರೂಪಾಯಿಗಿಂತ ಕಡಿಮೆ ಇದ್ದರೆ ಇವರು ರೈತರಿಗೆ ಕನಿಷ್ಠ 3 ರೂಪಾಯಿಯನ್ನು ನೀಡುತ್ತಾರೆ.
`ನಮ್ಮ ಕಂಪನಿ ಇರುವವರೆಗೆ ಕರಾರು ಕೃಷಿಯಲ್ಲಿ ಯಾವುದೇ ರೀತಿಯ ಗೊಂದಲಗಳು ಆಗುವುದಿಲ್ಲ.ರೈತರನ್ನು ಸೋಲಿಸುವ ಕೆಲಸಕ್ಕೂ ಕೈ ಹಾಕುವುದಿಲ್ಲ.ಅವರಿಗೆ ಅನುಕೂಲವಾಗುವ ರೀತಿಯಲ್ಲಿ ನಾವುಕರಾರನ್ನು ಮಾಡಿಕೊಳ್ಳುತ್ತಿದ್ದೇವೆ. ನಾವು ಈ ರೀತಿಯಲ್ಲಿ ಈರುಳ್ಳಿಯನ್ನು ಖರೀದಿಸಿದರೂ ನಮ್ಮ ಬೇಡಿಕೆಗೆ ಸಾಕಾಗುತ್ತಿಲ್ಲ. ಹೊರಗಡೆಯಿಂದಲೂ ಖರೀದಿ ಮಾಡತ್ತಿದ್ದೇವೆ' ಎನ್ನುವ ಮಾತನ್ನು ಕಂಪನಿ ಮುಖ್ಯಸ್ಥ ಅಜಿತ್‌ ಜೈನ್‌ ಹೇಳುತ್ತಾರೆ.
ಹಣ್ಣಿನ ಮೌಲ್ಯವರ್ಧನೆಗೆ ಬೇಕಾಗುವ ಮಾವನ್ನು ಕೋಲಾರ ಮತ್ತು ಧಾರವಾಡದಿಂದ ಹೆಚ್ಚು ಖರೀಸುತ್ತಿದ್ದಾರೆ. ಇಂತಹ ಮೌಲ್ಯವರ್ಧನೆ ಮಾಡುವ ಘಟಕಗಳೂ ಕರ್ನಾಟಕಕ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗಮನ ಹರಿಸಿದರೆ ಬಹಳಷ್ಟು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಪ್ರಮೇಯ ಬರುವುದಿಲ್ಲ.
ಮಾಹಿತಿಗಾಗಿ ಸಂಪರ್ಕಿಸಿ: ಚಿದಂಬರ ಜೋಶಿ ಸಿಟಿಎಸ್‌ ನಂ. 7737, 24/13, ಸೆಕ್ಟರ್‌ 12, ಕುಸ್ರೋ ನಗರ, ಮಾಳಮಾರುತಿ ಎಕ್ಸ್‌ಟೆನ್ಷನ್‌, ಬೆಳಗಾವಿ-16, ದೂರವಾಣಿ: 9448286508.
ನಾಗರಾಜ ಮತ್ತಿಗಾರ

No comments: