Wednesday, January 21, 2009

ಗಗನಕೆ ಏರಿದ ಅಕ್ಕಿ ಬೆಲೆ: ಇದೇ ಪರಿಹಾರವೇ


ನೆರೆಯ ಆಂಧ್ರ­ಪ್ರ­ದೇ­ಶ­ದಲ್ಲಿ ಸಾಧ್ಯ­ವಾ­ಗಿ­ರು­ವುದು? ಕರ್ನಾ­ಟ­ಕ­ದಲ್ಲಿ ಏಕೆ ಸಾಧ್ಯ­ವಾ­ಗು­ತ್ತಿಲ್ಲ? ಇದೇನಾ ಪರಿ­ಹಾರ?
ಅಕ್ಕಿ ಬೆಲೆ ಕೈಗೆ­ಟು­ಕದ ರೀತಿ­ಯಲ್ಲಿ ಗಗ­ನ­ಮುಖಿ ಆಗಿ­ರುವ ಕಾರಣ ತತ್ತ­ರಿ­ಸಿ­ರುವ ಜನ­ಸಾ­ಮಾ­ನ್ಯ­ರಿಂದ ಕೇಳಿ ಬರು­ತ್ತಿ­ರುವ ಪ್ರಶ್ನೆ­ಗ­ಳಿವು.
ಆಂಧ್ರ­ಪ್ರ­ದೇ­ಶ­ದ­ಲ್ಲಿಯೂ ಸರ್ಕಾ­ರ­ವಿದೆ. ರಾಜ್ಯ­ದ­ಲ್ಲಿ­ರು­ವಂ­ತಹ ಕಾನೂ­ನು­ಗಳೇ ಅಲ್ಲಿಯೂ ಇವೆ. ಅಲ್ಲಿ ಅಕ್ಕಿಯ ಬೆಲೆ ನಿಯಂ­ತ್ರ­ಣಕ್ಕೆ ತರುವ ರೀತಿ­ಯಲ್ಲಿ ರಫ್ತಿನ ಮೇಲೆ ನಿಯಂ­ತ್ರಣ ತರಲು ಸಾಧ್ಯ­ವಾ­ಗು­ತ್ತದೆ. ಆದರೆ ರಾಜ್ಯ­ದ­ಲ್ಲಿನ ಸರ್ಕಾರ ಏನು ಮಾಡು­ತ್ತಿದೆ? ಜನ ಸಾಮಾ­ನ್ಯರ ಆಕ್ರೋಶ ಈ ರೀತಿ­ಯಲ್ಲಿ ಕಟ್ಟೆ­ಯೊ­ಡೆ­ಯು­ತ್ತಿದೆ.
ಅಕ್ಕಿಯ ಬೆಲೆ ಕಳೆದ ಕೆಲವು ತಿಂಗ­ಳಿ­ನಿಂದ ಏರು­ಗ­ತಿ­ಯ­ಲ್ಲಿಯೇ ಇದೆ. ಕಳೆದ ಒಂದೇ ತಿಂಗ­ಳಿ­ನ­ಲ್ಲಿಯೇ ಪ್ರತಿ ಕೆಜಿಗೆ 3 ರಿಂದ 5 ರೂ.ಗಳ ತನಕ ಏರಿ­ಕೆ­ಯಾ­ಗಿದೆ. ಒಂದು ವರ್ಷದ ಅವ­ಧಿ­ಯಲ್ಲಿ 10 ರಿಂದ 13 ರೂ.ಗಳ ತನಕ ಅಕ್ಕಿಯ ಬೆಲೆ ಏರಿ­ಕೆ­ಯಾ­ಗಿದೆ. ಇದು ಮುಂದಿನ ವರ್ಷ­ದಲ್ಲಿ ಇನ್ನೂ ಹೆಚ್ಚಾ­ಗ­ಲಿದೆ ಎಂಬ ಆಘಾ­ತ­ಕಾರಿ ಸುದ್ದಿಯೂ ವರ್ತಕ ಸಮು­ದಾ­ಯ­ದ­ಲ್ಲಿದೆ. ಈ ಸದ್ಯಕ್ಕೆ ಬೆಲೆ ಹೆಚ್ಚ­ಳ­ವಾ­ಗಿದೆ. ಮುಂದೆ ಕೊರ­ತೆಯೂ ಕಾಣಿ­ಸಿ­ಕೊ­ಳ್ಳುವ ಎಲ್ಲಾ ಸಾಧ್ಯ­ತೆ­ಗಳೂ ಇವೆ. ಅದಕ್ಕೂ ಮೊದಲು ಪರಿ­ಹಾರ ಎಂದ ಸರ್ಕಾರ ಎಚ್ಚೆ­ತ್ತು­ಕೊ­ಳ್ಳ­ಬೇ­ಕಾ­ಗಿದೆ.
ಕರ್ನಾ­ಟಕ ರಾಗಿ, ಜೋಳ, ಗೋಧಿಯ ಜತೆಗೆ ಅಕ್ಕಿ ಸಹ ಹೆಚ್ಚು ಉಪ­ಯೋ­ಗಿ­ಸುವ ರಾಜ್ಯ­ಗಳ ಸಾಲಿಗೆ ಸೇರು­ತ್ತದೆ. ಇಲ್ಲಿ ಸಾಕಷ್ಟು ಪ್ರಮಾ­ಣ­ದಲ್ಲಿ ಭತ್ತ ಬೆಳೆ­ಯ­ಲಾ­ಗು­ತ್ತದೆ. ಆದರೆ ಈಗ ಉಂಟಾ­ಗಿ­ರುವ ಸಮ­ಸ್ಯೆಗೆ ತನ್ನದೇ ಆದ ಕೆಲವು ಕಾರ­ಣ­ಗ­ಳಿವೆ.
ಒಂದೆಡೆ ಆಂಧ್ರ ಪ್ರದೇಶ ಅಕ್ಕಿ ರಫ್ತಿನ ಮೇಲೆ ವಿಧಿ­ಸಿ­ರುವ ನಿರ್ಬಂಧ, ಇನ್ನೊಂ­ದೆಡೆ ರಾಜ್ಯ­ದಲ್ಲಿ ಉತ್ಪಾ­ದ­ನೆ­ಯಲ್ಲಿ ಆಗಿ­ರುವ ಕುಂಠಿತ, ಕಡಿ­ಮೆ­ಯಾ­ಗು­ತ್ತಿ­ರುವ ಇಳು­ವರಿ, ಮತ್ತೊಂ­ದೆಡೆ ಅಕ್ಕಿ ಬಳ­ಕೆಯ ಪ್ರಮಾಣ ಹೆಚ್ಚು­ತ್ತಿ­ರು­ವುದು ಹೀಗೆ ಅನೇಕ ಕಾರ­ಣ­ಗ­ಳನ್ನು ಗುರು­ತಿ­ಸ­ಬ­ಹು­ದಾ­ಗಿದೆ.
ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಅಕ್ಕಿ ಬಳ­ಕೆಯ ಯಥೇ­ಚ್ಚ­ವಾ­ಗಿಯೇ ಆಗು­ತ್ತಿದೆ. ಉತ್ತರ ಕರ್ನಾ­ಟ­ಕ­ದಲ್ಲಿ ಜೋಳದ ಜತೆಗೆ ಅಕ್ಕಿಯ ಬಳ­ಕೆ­ಯಾ­ದರೆ, ಹಳೇ ಮೈಸೂರು ಭಾಗ­ದಲ್ಲಿ ರಾಗಿಯ ಜತೆಗೆ ಬಳ­ಸ­ಲಾ­ಗು­ತ್ತದೆ. ಮಲೆ­ನಾಡು ಮತ್ತು ಕರಾ­ವಳಿ ಭಾಗ­ದಲ್ಲಿ ಅಕ್ಕಿಯೇ ಪ್ರಮುಖ ಉಪ­ಯೋ­ಗದ ಆಹಾರ ಉತ್ಪನ್ನ. ಒಂದು ಅಂದಾ­ಜಿನ ಪ್ರಕಾರ ಬೆಂಗ­ಳೂರು ನಗ­ರ­ವೊಂ­ದಕ್ಕೆ ಪ್ರತಿ ನಿತ್ಯ 50 ಲಾರಿ ಲೋಡ್‌­ನಷ್ಟು ಅಕ್ಕಿ ವ್ಯಾಪಾ­ರಿ­ಗ­ಳಿಗೆ ಬೇಕಾ­ಗು­ತ್ತದೆ. ಇಡೀ ರಾಜ್ಯಕ್ಕೆ ದಿನಕ್ಕೆ ಎಷ್ಟು ಅಕ್ಕಿ ಬೇಕಾ­ಗು­ತ್ತದೆ ಎಂಬು­ದನ್ನು ಈ ಆಧಾ­ರದ ಮೇಲೆ ಲೆಕ್ಕ ಹಾಕ­ಲಾ­ಗು­ತ್ತಿದೆ.
ರಾಜ್ಯ­ಕ್ಕಿಂತ ಆಂಧ್ರ­ಪ್ರ­ದೇಶ ಅಕ್ಕಿ ಹೆಚ್ಚು ಬೆಳೆ­ಯುವ ರಾಜ್ಯ. ಪ್ರತಿ ವರ್ಷ ಅಲ್ಲಿಂದ ಬೇರೆ ಬೇರೆ ರಾಜ್ಯ­ಗ­ಳಿಗೆ ಅಕ್ಕಿ ರಫ್ತು ಆಗು­ತ್ತಿತ್ತು. ಆದರೆ ಈ ವರ್ಷ ನಿಷೇಧ ಮಾಡಿ­ರುವ ಪರಿ­ಣಾಮ ಬೇರೆ ರಾಜ್ಯದ ವ್ಯಾಪಾ­ರಿ­ಗ­ಳೆಲ್ಲ ಕರ್ನಾ­ಟ­ಕ­ವನ್ನು ಅವ­ಲಂ­ಬಿ­ಸಿ­ದ್ದಾರೆ. ರಾಜ್ಯ­ದಿಂದ ಪ್ರತಿ ವರ್ಷ ಆಗು­ತ್ತಿದ್ದ ರಫ್ತು­ವಿನ ಪ್ರಮಾ­ಣ­ದಲ್ಲಿ ಶೇ.30ರಷ್ಟು ಹೆಚ್ಚಾ­ಗಿದೆ. ಬೇರೆ ರಾಜ್ಯದ ವ್ಯಾಪಾ­ರಿ­ಗಳು ಇಲ್ಲಿಗೆ ಆಗ­ಮಿಸಿ ಅಕ್ಕಿ ಖರೀದಿ ಮಾಡ­ಲಾ­ರಂ­ಭಿ­ಸಿ­ರುವ ಪರಿ­ಣಾಮ ಬೆಲೆ­ಯಲ್ಲಿ ಹೆಚ್ಚ­ಳ­ವಾ­ಗಿದೆ.
ಆಂಧ್ರ­ಪ್ರ­ದೇ­ಶ­ದಲ್ಲಿ ರಫ್ತು­ವಿನ ಮೇಲೆ ನಿಯಂ­ತ್ರಣ ಹಾಕಿ­ರುವ ಪರಿ­ಣಾಮ ಅಲ್ಲಿ ಅತ್ಯು­ತ್ತಮ ಅಕ್ಕಿಯ 19.40 ರೂ.ಗಳಿಗೆ ಲಭ್ಯ­ವಾ­ಗು­ತ್ತಿದೆ ಎಂಬು­ವುದು ಅಲ್ಲಿಂದ ದೊರ­ಕಿ­ರುವ ಮಾಹಿತಿ. ಆದರೆ ಅದೇ ಅಕ್ಕಿ ರಾಜ್ಯ­ದಲ್ಲಿ ಈಗ 30 ರೂ.ಗಳಿ­ಗಿಂತ ಕಡಿಮೆ ದರಕ್ಕೆ ಲಭ್ಯ­ವಾ­ಗು­ವು­ದಿಲ್ಲ. ರಾಜ್ಯ­ದಲ್ಲಿ ಸರ್ಕಾರ ಅಧಿ­ಕಾ­ರಕ್ಕೆ ಬರು­ವು­ದ­ಕ್ಕಿಂತ ಮುನ್ನ ಹೇಳಿದ ಬಿಜೆ­ಪಿಯೇ ಪರಿ­ಹಾರ ಎಂಬ ಮಾತು ಈಗ ಸುಳ್ಳಾ­ಗಿದೆ. ಏಕೆಂ­ದರೆ ಮುಂದಿನ ವರ್ಷ­ದಲ್ಲಿ ಈ ದರ ಇನ್ನೂ ಹೆಚ್ಚಾ­ಗುವ ಎಲ್ಲಾ ಸಾಧ್ಯ­ತೆ­ಗಳು ಗೋಚ­ರಿ­ಸ­ಲಾ­ರಂ­ಭಿ­ಸಿವೆ. ಅದಕ್ಕೂ ಮುನ್ನವೇ ಸರ್ಕಾರ ಎಚ್ಚೆ­ತ್ತು­ಕೊ­ಳ್ಳ­ಬೇ­ಕಾ­ಗಿದೆ.
ರಾಜ್ಯ­ದಲ್ಲಿ ಈ ವರ್ಷ ಭತ್ತ ಬೆಳೆ­ಯುವ ಪ್ರಮಾಣ ಕಡಿ­ಮೆ­ಯಾ­ಗು­ತ್ತಿದೆ. ನಿರೀ­ಕ್ಷಿತ ಪ್ರಮಾ­ಣ­ದಲ್ಲಿ ಭತ್ತ ನಾಟಿ­ಯಾ­ಗಿಲ್ಲ. ಈ ವರ್ಷದ ಮೂರು ಹಂಗಾ­ಮು­ಗ­ಳಿಂದ 14.07 ಲಕ್ಷ ಹೆಕ್ಟೇ­ರ್‌­ನಲ್ಲಿ ಬಿತ್ತ­ನೆಯ ಗುರಿ ಇತ್ತು. ಇನ್ನೂ ಬೇಸಿ­ಗೆಯ ಹಂಗಾಮು ನಾಟಿ­ಯಾ­ಗಿಲ್ಲ. ಮುಂಗಾ­ರಿ­ನಲ್ಲಿ ಸ್ವಲ್ಪ ಕಡಿ­ಮೆ­ಯಾ­ಗಿದೆ. ಮಳೆ ಆಶ್ರ­ಯ­ದಲ್ಲಿ ಬಿತ್ತ­ನೆಯೇ ಆಗ­ಲಿಲ್ಲ. ಕೆಲವು ಭಾಗ­ದಲ್ಲಿ ಹೆಚ್ಚು ಮಳೆ­ಯಿಂದ ಹಾನಿ­ಯಾ­ಗಿದೆ. ಇದು ಉತ್ಪಾ­ದ­ನೆಯ ಮೇಲೆ ಪರಿ­ಣಾಮ ಬೀರುವ ಸಾಧ್ಯ­ತೆ­ಗ­ಳಿವೆ. ಎಲ್ಲಾ ಹಂಗಾ­ಮು­ಗ­ಳಲ್ಲಿ ಉತ್ತಮ ಬೆಳೆ ಬಂದರೆ 40.78 ಲಕ್ಷ ಅಕ್ಕಿಯ ಉತ್ಪಾ­ದ­ನೆಯ ಗುರಿ­ಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಈಗ ಬೇಸಿ­ಗೆ­ಯ­ಲ್ಲಿಯೂ ಉತ್ತ­ಮ­ವಾಗಿ ಆದರೆ ಮಾತ್ರ 38 ಲಕ್ಷ ಟನ್‌ ಆಗ­ಬ­ಹು­ದೆಂದು ಅಂದಾಜು ಮಾಡ­ಲಾ­ಗು­ತ್ತಿದೆ. ಆದರೆ ಬೇಸಿ­ಗೆ­ಯಲ್ಲಿ ಆ ಪ್ರಮಾ­ಣ­ದಲ್ಲಿ ಆಗುವ ಸಾಧ್ಯ­ತೆ­ಗ­ಳಿ­ಲ್ಲದ ಕಾರಣ 30 ರಿಂದ 35 ಲಕ್ಷ ಟನ್‌ಗೆ ನಿಲ್ಲ­ಬ­ಹುದು ಎಂಬುದು ಒಂದು ಮೂಲ­ದಿಂದ ಲಭ್ಯ­ವಾ­ಗುವ ಮಾಹಿತಿ.
ಕೇಂದ್ರ ಸರ್ಕಾರ ರೂಪಿ­ಸಿ­ರುವ ರಾಷ್ಟ್ರೀಯ ಆಹಾರ ಭದ್ರತೆ ಮಿಷ­ನ್‌­ನಲ್ಲಿ ರಾಜ್ಯಕ್ಕೆ ಭತ್ತ ಮತ್ತು ದ್ವಿದಳ ಧಾನ್ಯ­ಗ­ಳಿಗೆ ಹೆಚ್ಚಿನ ಆದ್ಯತೆ ನೀಡ­ಲಾ­ಗು­ತ್ತಿದೆ. ಏಳು ಜಿಲ್ಲೆ­ಗ­ಳಲ್ಲಿ ಈ ಯೋಜನೆ ಜಾರಿ­ಯಾ­ಗು­ತ್ತಿದೆ. ಇದ­ರಿಂದ ಅಕ್ಕಿಯ ಉತ್ಪಾ­ದ­ಕತೆ ಹೆಚ್ಚಾ­ಗು­ತ್ತದೆ ಎಂದು ಕೃಷಿ ಇಲಾ­ಖೆಯ ಅಧಿ­ಕಾ­ರಿ­ಗಳು ಹೇಳು­ತ್ತಾರೆ.
ಆದರೆ ಲಭ್ಯ­ವಿ­ರುವ ಮತ್ತೊಂದು ಮೂಲದ ಪ್ರಕಾರ ಕೆಲವು ಜಿಲ್ಲೆ­ಗ­ಳಲ್ಲಿ ಇಳು­ವರಿ ಕುಂಠಿ­ತ­ವಾ­ಗು­ತ್ತಿದೆ. 15 ರಿಂದ 20ರಷ್ಟು ಭತ್ತದ ಇಳು­ವರಿ ಕಡಿ­ಮೆ­ಯಾ­ಗುವ ಸಾಧ್ಯ­ತೆ­ಗ­ಳಿವೆ. ಈ ರೀತಿ­ಯಾ­ದರೆ ನಿರೀ­ಕ್ಷಿತ ಪ್ರಮಾ­ಣದ ಉತ್ಪಾ­ದನೆ ಕುಸಿ­ತ­ವಾ­ಗು­ತ್ತದೆ. ಆಗ ಸಮಸ್ಯೆ ಇನ್ನಷ್ಟು ಹೆಚ್ಚಾ­ಗು­ತ್ತದೆ. ಏಕೆಂ­ದರೆ ರಾಜ್ಯಕ್ಕೆ ಆಂಧ್ರ­ಪ್ರ­ದೇ­ಶ­ದಿಂದ ಸಾಕಷ್ಟು ಅಕ್ಕಿ ಬರು­ತ್ತಿತ್ತು, ಆದರೆ ಈಗ ಅದು ನಿಂತಿದೆ.
ಕನಿಷ್ಠ ಬೆಂಬಲ ಬೆಲೆ­ಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿದೆ. ಇದ­ರಿಂದ ರೈತರು ಸಂತೋ­ಷ­ದ­ಲ್ಲಿ­ದ್ದಾರೆ. ಆದರೆ ಅಕ್ಕಿಯ ಬೆಲೆ ನಿಯಂ­ತ್ರ­ಣಕ್ಕೆ ಸರ್ಕಾರ ಶ್ರಮ­ವ­ಹಿ­ಸು­ತ್ತಿಲ್ಲ ಎಂಬ ದೂರು­ಗ­ಳಿವೆ.
ಈ ಬಗ್ಗೆ ಆಹಾರ ಮತ್ತು ನಾಗ­ರಿಕ ಸರ­ಬ­ರಾಜು ಸಚಿವ ಎಚ್‌. ಹಾಲಪ್ಪ ಹೇಳು­ವುದು, ಪಡಿ­ತ­ರ­ದಲ್ಲಿ ವಿತ­ರಣೆ ಮಾಡುವ ಆಹಾರ ಧಾನ್ಯದ ಬಗ್ಗೆ ಮಾತ್ರ ಸರ್ಕಾರ ತಲೆ ಕೆಡಿ­ಸಿ­ಕೊ­ಳ್ಳು­ತ್ತದೆ ಹೊರತು ಇನ್ನು­ಳಿದ ವಿಚಾ­ರ­ದಲ್ಲಿ ಅಲ್ಲ.
ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಲು ಎಲ್ಲಾ ಪ್ರಯತ್ನ ಮಾಡಿ ವಿಫ­ಲ­ವಾ­ಗಿ­ದ್ದೇವೆ. ಯಾವುದೇ ಕಾನೂ­ನಿ­ನಲ್ಲಿ ಇದು ಸಾಧ್ಯ­ವಾ­ಗು­ತ್ತಿಲ್ಲ ಎಂದು ಕೈಚೆ­ಲ್ಲು­ತ್ತಾರೆ.
ಪಡಿ­ತ­ರಕ್ಕೆ ಸಮಸ್ಯೆ ಇಲ್ಲ:
ಪಡಿ­ತ­ರಕ್ಕೆ ಸಮ­ಸ್ಯೆ­ಯಾ­ಗುವ ಸಾಧ್ಯ­ತೆ­ಗ­ಳಿಲ್ಲ. ಏಕೆಂ­ದರೆ ಈ ವರ್ಷ ಸರ್ಕಾರ ಲೆವಿ ಸಂಗ್ರ­ಹಣೆ ಬಿಗಿ­ಯಾಗಿ ಮಾಡು­ತ್ತಿದೆ. ರಾಜ್ಯ­ದಲ್ಲಿ 1.35 ಲಕ್ಷ ಮೆಟ್ರಿಕ್‌ ಟನ್‌ ಲೆವಿ ಸಂಗ್ರಹ ಮಾಡು­ತ್ತಿದೆ. ಕಳೆದ ಆರೇಳು ವರ್ಷ­ದಿಂದ ನಿಂತಿದ್ದ ಲೆವಿ ಸಂಗ್ರ­ಹಕ್ಕೆ ಈಗ ಚಾಲನೆ ನೀಡ­ಲಾ­ಗಿದೆ.
ಆದರೆ ಸಮ­ಸ್ಯೆ­ಯಾ­ಗು­ವುದು ಪಡಿ­ತರ ಬಿಟ್ಟು ಬೇರೆ­ಯ­ವರು ಖರೀದಿ ಮಾಡುವ ಭತ್ತಕ್ಕೆ. ಪಡಿ­ತ­ರ­ದಲ್ಲಿ ನೀಡು­ವುದು ಕೇವಲ ಹಸಿರು ಕಾರ್ಡ್‌ ಹೊಂದಿ­ರುವ ಕಡು ಬಡ­ವ­ರಿಗೆ ಮಾತ್ರ.
ಈಗ ಬೆಲೆ ಹೆಚ್ಚ­ಳ­ವಾ­ಗಿದೆ. ಮುಂದೆ ಕೊರ­ತೆಯೂ ಉಂಟಾ­ದರೆ ಜನ ಸಾಮಾ­ನ್ಯ­ರನ್ನು ಕಾಪಾ­ಡಲು ನಿಜಕ್ಕೂ ಆ ದೇವರೇ ಬರ­ಬೇ­ಕಾ­ಗು­ತ್ತದೆ.

ರುದ್ರಣ್ಣ ಹರ್ತಿ­ಕೋಟೆ

(ಕೃಪೆ-ಉದಯವಾಣಿ ವಾಣಿಜ್ಯ ಸಂಪದ)

1 comment:

Unknown said...

hmm Innu hechina smasye khandita