

ಒಂದೂವರೆ ಎಕರೆ ಜಾಗ. ಬೆಳೆಯುವ ಬೆಳೆ ಭತ್ತ. ಒಂದಲ್ಲ, ಎರಡಲ್ಲ ಬರೋಬ್ಬರಿ 70 ದೇಶೀ ತಳಿಗಳು! ಸಣ್ಣ ಕಾಳು, ದೊಡ್ಡ ಕಾಳು, ಕಪ್ಪು ಕಾಳು, ಬಂಗಾರದಂತಹ ಭತ್ತದ ಕಾಳು ನಳನಳಿಸುವ ತಾಕುಗಳು. ಯಾವ ಕೃಷಿ ವಿಶ್ವವಿದ್ಯಾಲಯಗಳಲ್ಲೂ ಕಾಣ ಸಿಗದಿರುವಂತಹ ಜೀವಂತ ದೃಶ್ಯ ಕಣ್ಣಿಗೆ ಹಿತ ನೀಡುತ್ತದೆ. ಇದು ಮಂಡ್ಯ ಹತ್ತಿರದ ಶಿವಳ್ಳಿಯ ರೈತ ಬೋರೇಗೌಡರ ಹೊಲ.
ಹೈಬ್ರೀಡ್ ಭತ್ತ, ಗೊಬ್ಬರದ ಭರಾಟೆಯಲ್ಲಿ ನಮ್ಮ ನೆಲ ಮೂಲದ ದೇಶೀ ಭತ್ತದ ತಳಿಗಳು ಕಣ್ಮರೆಯಾಗುತ್ತವೆ. 'ದೇಶೀ ಭತ್ತ ಉಳಿಸಿ' ಆಂದೋಲನಕ್ಕೆ ಮೂರ್ತ ರೂಪದಲ್ಲಿ ಹೋರಾಟ ಮಾಡುತ್ತಿರುವ ರೈತ ಇವರು. ಎಲ್ಲರಂತೆ ಇವರೂ ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುತ್ತಿದ್ದರು. ಇದರಿಂದ ಬೆಳೆಯ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಬಂತು. ಉತ್ಪಾದನೆಯ ವೆಚ್ಚಕ್ಕೂ ಹುಟ್ಟುವಳಿಗೂ ಸಮನಾಗ ತೊಡಗಿತು.
ಇಂತಹ ಸಮಯದಲ್ಲಿ ಇವರನ್ನು ಪಾಳೇಕರ್ ಕೃಷಿ ಪದ್ಧತಿ ಸೆಳೆಯಿತು. ಇದರೊಂದಿಗೆ ಸಾವಯವ ಕೃಷಿಯ ಕುರಿತು ಪತ್ರಿಕೆಗಳಲ್ಲಿ ಬರುವ ಲೇಖನಗಳು ಇವರನ್ನು ಆಕಷರ್ಿಸಿತು.
ಸಾವಯವ ಕೃಷಿ ಮಾಡಲು ಪ್ರಾರಂಭಿಸಿದರು. ಹೈಬ್ರೀಡ್ ಭತ್ತದ ಬೆಳೆಗೆ ಸಾವಯವ ಕೃಷಿ ಅಳವಡಿಸಿಕೊಳ್ಳಲು ಯತ್ನಿಸಿದರು. ಆದರೆ ಪ್ರಯೋಜನ ಶೂನ್ಯ. ಸಾವಯವ ಕೃಷಿ ಯಶ ಕಾಣಬೇಕಿದ್ದರೆ ನಮ್ಮ ನೆಲದ ಭತ್ತದ ತಳಿಗಳಿಗೆ ಸೂಕ್ತ ಎಂದು ಮನಗಂಡರು. ದೇಶೀ ಭತ್ತದ ತಳಿಗಳ ಹುಟುಕಾಟಕ್ಕೆ ಪ್ರಾರಂಭಿಸಿದರು. ಆಗ ಪರಿಚವಾದವರು ಬೆಳ್ತಂಗಡಿ ಹತ್ತಿರದ ಕಿಲ್ಲೂರು ದೇವರಾಯರು. ಇವರು ಕೂಡಾ ಅಪರೂಪದ ಭತ್ತದ ಸಂರಕ್ಷಕರು. ಇವರಲ್ಲಿಗೆ ಹೋಗಿ ನಾಲ್ಕೈದು ತಳಿಯ ಭತ್ತವನ್ನು ತಲಾ 200 ಗ್ರಾಂ ಭತ್ತದ ಬೀಜಗಳನ್ನು ತಂದು ನಾಟಿ ಮಾಡಿದರು. 2003ನೇ ಸಾಲಿನಲ್ಲಿ 30 ಗುಂಟೆ ಜಮೀನಿನಲ್ಲಿ 26 ತಳಿಗಳನ್ನು ಬೆಳೆದರು. ಇದರ ಪರಿಣಾಮ ಇಂದು 70 ಭತ್ತದ ತಳಿಗಳನ್ನು ಬೆಳೆಯಲಿಕ್ಕೆ ಪ್ರೇರಕವಾಯಿತು.
ಇವರಲ್ಲಿರುವ ಭತ್ತದ ತಳಿಗಳು: ಸಿಪ್ಪಾಗಂಗ್, ಗಿಡ್ಡ ಬಾಸ್ಮತಿ, ಕಲನಮಕ್, ಅಂಬೆಮೋರ್, ಹೊಳೆಸಾಲು ಚಿಪ್ಪಿಗ, ಪರಿಮಳಸಣ್ಣ, ಮುಕ್ಕಣ್ಣುಸಣ್ಣ, ಕೃಷ್ಣಲೀಲಾ, ಬಾಸ್ಮತಿ ಸುಗಂಧ, ಗಂಧಸಾಲೆ, ಎಚ್ಎಂಟಿ, ಜೀರಿಗೆ ಸಾಂಬಾ, ರತ್ನಚೂಡಿ, ನಾಗಾಭತ್ತ, ಗೌರಿಸಣ್ಣ, ಬಂಗಾರಸಣ್ಣ, ನವರ, ಬಾದ್ಷಾ ಬೋಗ್, ಬೋರೇಗೌಡ 1, 2, 3, 4, 5, 6, 7, ಮಾಲ್ಗುಡಿಸಣ್ಣ, ರಾಜ್ ಬೋಗ್, ಕಪ್ಪು ಬಾಸ್ಮತಿ, ಕುರಿಗೆ ನೆಲ್ಲು, ದೆಹಲಿ ಬಾಸ್ಮತಿ, ಮೆಹಾಡಿ, ಚೋಮಲ್, ಎಂಎನ್ನೆಸ್-2, ಜಿರಿಗೆ ಸಣ್ಣ, ಸೇಲಂಸಣ್ಣ, ಮಲ್ಲಾನ್ಛೆನ್ನಾ, ತೊಂಡಿ, ತೊನ್ನುರು ರಾಮಾತೊಂಡಿ, ಜಿರಿಗೆ ಸಾಲಾ, ಅಚ್ಯುತನ್, ಮುಲ್ಲಾಪುಂಡಿ, ಕಲಾದ್ಯಾನ್, ರಾಯಚೂರು ಸಣ್ಣ, ಆನಂದನೂರ್ಸಣ್ಣ, ಬಿಳಿನೆಲ್ಲು, ಆಂದಾನೂರ ಸಣ್ಣ, ಚಿನ್ನಾಪೊನ್ನಿ ಕರಿಗಿಜಿಬಿಲಿ, ಕಾಲಾಜಿರಾ, ಬಮರ್ಾಬ್ಲಾಕ್, ರಸದ್ಕಂ ಮುಂತಾದ ತಳಿಗಳನ್ನು ಬೋರೇಗೌಡರು ಬೆಳೆಸುತ್ತಿದ್ದಾರೆ. ಇವುಗಳಲ್ಲಿ ಔಷಧಿಯ ಗುಣ ಮತ್ತು ಸುಗಂಧ ಭರಿತ ಭತ್ತದ ತಳಿಗಳು ಇವೆ.
ಹಸಿರು ಗೊಬ್ಬರ, ಜೀವಾಮೃತ ಕೃಷಿ: ಈ ಎಲ್ಲ ಭತ್ತದ ತಳಿಗಳು ಸರಿಯಾಗಿ ಬೆಳೆಯಲು ರಾಸಾಯನಿಕ ಗೊಬ್ಬರ ಖರೀದಿ ಮಾಡುವುದನ್ನು ನಿಲ್ಲಿಸಿದ ಬೋರೇಗೌಡರು. ಮಳೆಗಾಲ ಪ್ರಾರಂಭಕ್ಕೂ ಮುನ್ನ ಹುರುಳಿ, ಅಲಸಂಡೆ, ಡಾಯಂಚಾ, ಸೆಣಬು, ಎಳ್ಳು ಇವುಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಸಿದರು. ಹೊಲ ಹದ ಮಾಡುವ ಸಮಯದಲ್ಲಿ ಇವುಗಳನ್ನು ಸೇರಿಸಿ ಉಳುಮೆ ಮಾಡಿದರು. ನಂತರ ಭೂಮಿ ಮತ್ತಷ್ಟು ಫಲವತ್ತಾಗಲು ಜೀವಾಮೃತ ಬಳಸಲು ಪ್ರಾರಂಭಿಸಿದರು. ಇದರಿಂದ ಭೂಮಿಯ ಫಲವತ್ತತೆ ದ್ವಿಗುಣವಾಗಿ, ಇಳುವರಿಯು ಹೆಚ್ಚಾಯಿತು.
ಸುಗಂಧ ಭತ್ತದ ಬಳಕೆ
ಸುಗಂಧ ಭತ್ತಗಳ ಅಕ್ಕಿಯನ್ನು ಮಾತ್ರ ಅಡುಗೆಗೆ ಬಳಸಬಾರದು. ಒನ್ನೊಮ್ಮೆ ಕೇವಲ ಸುಗಂಧ ಭತ್ತಗಳನ್ನು ಬಳಸಿದರೆ ಸೆಂಟಿನ ಬಾಟಲಿ ಪೂರ್ಣ ಮೈಮೇಲೆ ಸುರಿದುಕೊಂಡ ಹಾಗಾಗುತ್ತದೆ. ಅದನ್ನೇ ಹಿತಮಿತವಾಗಿ ಬಳಸಿದರೆ ಎಲ್ಲರಿಗೂ ಹಿತ. ಹಾಗೆಯೇ ಸುಗಂಧ ಅಕ್ಕಿ ಬಳಸುವ ವೇಳೆ ಸಾದಾ ಅಕ್ಕಿಯ ಜೊತೆ ಒಂದು ಮುಷ್ಠಿ ಸುಗಂಧ ಅಕ್ಕಿಯನ್ನು ಬಳಸಿರೆ ಬಹಳ ಚೆನ್ನಾಗಿರುತ್ತದೆ ಎನ್ನುವ ಮಾಹಿತಿಯನ್ನು ಬೋರೇಗೌಡರು ನೀಡುತ್ತಾರೆ.
ರಾಸಾಯನಿಕ ಕೃಷಿ, ಹೈಬ್ರೀಡ್ ಭತ್ತದಲ್ಲಿ ಬರುವ ಲಾಭಕ್ಕಿಂತ ಹೆಚ್ಚಿನ ಲಾಭ ಸಾವಯವ ಕೃಷಿ ಮತ್ತು ದೇಶೀ ಭತ್ತದ ಬೆಳೆಯಿಂದ ಬರುತ್ತದೆ ಎನ್ನುವುದು ಬೋರೇಗೌಡರ ಅಭಿಮತ. ಇವರು ನಾಲ್ಕು ವರ್ಷಗಳಿಂದ ಸುಮಾರು 150 ಕ್ವಿಂಟಾಲ್ ಭತ್ತದ ಬೀಜ ಮಾರಾಟ ಮಾಡಿದ್ದಾರೆ. ಈ ರೀತಿಯಲ್ಲಿ ದೇಶೀ ಭತ್ತದ ತಳಿಗಳನ್ನು ರಕ್ಷಿಸುತ್ತಿರುವ ಬೋರೇಗೌಡರು ಕಾರ್ಯ ಶ್ಲಾಘನೀಯ.
ಭತ್ತದ ತಳಿಗಳ ಬಗ್ಗೆ ಮಾಹಿತಿಗಾಗಿ ಬೋರೇಗೌಡ-9986381167, ಎಸ್. ಶಂಕರ್- 9886853858
-ನಾಗರಾಜ ಮತ್ತಿಗಾರ