Thursday, August 27, 2009

ಪೇಟೆಯೊಳಗೊಂದು ತೋಟವ ಮಾಡಿ.....




ಕಿರಿದಾದ ಕಚ್ಚಾ ರಸ್ತೆ ಮಾತ್ರ ಸಂಪರ್ಕ ವ್ಯವಸ್ಥೆ. ಐದು ಎಕರೆ ತೋಟ, ಅಲ್ಲಿಯೇ ಮನೆ, ಆದರೆಮೂರೂ ದಿಕ್ಕುಗಳಲ್ಲಿ ಹರಿಯುವ ಹಿಳೆ. ಸಾಕ್ಷಾತ್ ಭಾರತದಂತೆ, ಪರ್ಯಾಯ ದ್ವೀಪ. ಮಳೆಗಾಲದಲ್ಲಂತೂ ಮನೆಯಲ್ಲೂ ಒಂದಡಿ ನೀರು. ಇಷ್ಟು ವಿವರಿಸುತ್ತಿದ್ದಂತೆ ಜನಸಂಪರ್ಕವೇ ಇಲ್ಲದ ಗೂಢ ಪ್ರದೇಶದ ಕೃಷಿಕರೋರ್ವರ ಪರಿಚಯ ಮಾಡಿಕೊಡಲಾಗುತ್ತಿದೆ ಎಂದುಕೊಂಡರೆ ಪಿಗ್ಗಿ ಬಿದ್ದಂತೆ. ಈ ಸ್ಥಳದಿಂದ ಕತ್ತು ಎತ್ತಿ ನೋಡಿದರೆ ವಾಹನ ನಿಬಿಡ ರಾಷ್ಟ್ರೀಯ ಹೆದ್ದಾರಿ. ತಾಲ್ಲೂಕಿನ ಮುಖ್ಯ ಭಾಗದಿಂದ ಕೂಗಳತೆ ದೂರದಲ್ಲಿದೆ ಈ ಕೃಷಿ ಭೂಮಿ!
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಕೇಂದ್ರಕ್ಕೆ, ಅಲ್ಲಿನ ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಕಮಲಾಕರ ಪಂಡಿತ್ - ದೀಪಕ್‌ರ ತೋಟ ಹಲವು ದೃಷ್ಟಿಯಿಂದ ವಿಶಿಷ್ಟವಾದದ್ದು. ಈ ಭೂಮಿಯ ಸುತ್ತಲೂ ನೀರಿನ ಹೊಳೆ ಹರಿಯುತ್ತದೆ. ಒಂದು ದಿಕ್ಕಿನಿಂದ ಮಾತ್ರ ಭೂ ಸಂಬಂಧ. ಸ್ವಾರಸ್ಯವೆಂದರೆ, ಒಂದೇ ಒಂದು ಕೃಷಿ ಆಳು ಬಳಸದೆ ಅಕ್ಷರಶಃ ಶೂನ್ಯ ಕೃಷಿ ನಡೆಸುತ್ತಿರುವ ಸಾಧನೆ ಇವರದು. ಐದು ಎಕರೆ ಪ್ರದೇಶದಲ್ಲಿ ಮುಖ್ಯ ಬೆಳೆ ಅಡಿಕೆ ಮತ್ತು ತೆಂಗು. ಜೊತೆಜೊತೆಗೆ ಪುನರ್ಪುಳಿ, ಏಲಕ್ಕಿ, ಬಾಳೆ, ಮಾವು, ವೆನಿಲ್ಲಾ, ಉದ್ದು, ಬಿದಿರು, ಭತ್ತ.... ಪೇಟೆಗೆ ಹತ್ತಿರದಲ್ಲಿಯೇ ಕೃಷಿ ಭೂಮಿ ಇರುವುದನ್ನು ಪಂಡಿತ್ ಜೋಡಿ ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವುದು ಗಮನಾರ್ಹ. ಅಡಿಕೆ ಬೆಳೆಯನ್ನು ಛೇಣಿಗೆ ಕೊಡುವುದರಿಂದ ಕೊಯ್ಲು ವಗೈರೆ ಕೆಲಸಗಳಿಗೆ ಆಳು ಅವಲಂಬನೆಯಿಲ್ಲ. ಇರುವ ೧೨೦ ತೆಂಗಿನ ಮರಗಳಿಂದ ಪೇಟೆಗೆ ಎಳನೀರು ವ್ಯಾಪಾರ. ವ್ಯಾಪಾರದವರೇ ಮನೆಬಾಗಿಲಿಗೆ ಬಂದು ಎಳನೀರು ಕೊಯ್ದು ಒಯ್ಯುವ ವ್ಯವಸ್ಥೆ. ಅದೂ ತಾಪತ್ರಯವಲ್ಲ. ತೋಟಕ್ಕೆ ಸ್ಲರಿ, ಜೀವಾಮೃತಗಳೇ ಗೊಬ್ಬರ. ಇದನ್ನು ಅಪ್ಪ-ಮಗ ದಕ್ಷತೆಯಿಂದ ನಿರ್ವಹಿಸುತ್ತಾರೆ. ಅದೂ ಆಳಿನ ಬಾಬತ್ತಲ್ಲ. ಕಳೆ ಕೊಚ್ಚಲು ಯಂತ್ರ. ಸಾಕಲ್ಲ?
ಹೋಗಲಿ, ಜಾನುವಾರು ಕೊಟ್ಟಿಗೆ ಇದೆ ಎಂದಮೇಲೆ ಆಳು, ಖರ್ಚಿಗೆ ದಾರಿಯಾಗಲೇಬೇಕಲ್ಲವೇ? ಊಹ್ಞೂ, ಇವರಲ್ಲಿ ನಾಲ್ಕು ಹಸುಗಳಿರುವುದೇನೋ ನಿಜ. ನಾಲ್ಕೂ ಸ್ಥಳೀಯ ಜಾತಿಯವು. ಇಲ್ಲಿ ದನ ಕರು ಹಾಕಿದರೂ ಇವರು ಹಸುವಿನ ಹಾಲು ಹಿಂಡುವುದಿಲ್ಲ. ಸಿದ್ಧ ಪಶು ಆಹಾರವಾದ ‘ಹಿಂಡಿ’ ಹಾಕುವುದಿಲ್ಲ! ಈ ಹಿಂಡಿಯದು ದುಬಾರಿ ಖರೀದಿಯಾಗುತ್ತಿತ್ತು. ಜಮೀನಿನಲ್ಲಿ ಧಾರಾಳವಾಗಿರುವ ಹಸಿರು ಹುಲ್ಲು ಅವುಗಳಿಗೆ ಮೇವು. ಗೋಮೂತ್ರ, ಸಗಣಿ ಇವರ ಜೀವಾಮೃತ ತಯಾರಿಗೆ ಸರಕು. ಪ್ರತಿ ದಿನ ಹಾಲನ್ನು ಖರೀದಿಸುತ್ತಾರೆ. ಅಷ್ಟಕ್ಕೂ ಪೇಟೆ ಮೂರು ಹೆಜ್ಜೆ ಆಚೆಯೇ ಇರುವುದರಿಂದ ಯಾವಾಗ ಬೇಕಾದರೂ ಹಾಲಿನ ಪ್ಯಾಕ್ ಖರೀದಿಗೆ ಲಭ್ಯ.
ಕಮಲಾಕರ ಪಂಡಿತರ ತಂದೆ ಈ ಭೂಮಿಯನ್ನು ಖರೀದಿಸಿದವರು. ಗದ್ದೆ ಹಾಗೂ ಕುರುಚಲು ತುಂಬಿದ್ದ ಭೂಮಿಯಾಗಿತ್ತದು. ೧೯೯೬ರಿಂದ ಹಂತ ಹಂತವಾಗಿ ಅಡಿಕೆ ಸಸಿ ಕೂರಿಸುತ್ತಾ ಬಂದಿದ್ದಾರೆ. ಒಟ್ಟು ಎಂಟು ವರ್ಷಗಳಲ್ಲಿ ತೋಟ ಎದ್ದಿದೆ. ಹಾಗೆಂದು ತೋಟವನ್ನು ಸಮತಟ್ಟು ಮಾಡಲು ಹೋಗಿಲ್ಲ. ಗದ್ದೆಯ ತಟ್ಟೆಗಳನ್ನು ಯಥಾವತ್ ಉಳಿಸಿಕೊಂಡಿದ್ದಾರೆ. ಗಮನಿಸಬೇಕಾದುದೆಂದರೆ, ಈ ಸಸಿಗೆ ೨ x ೨ರ ಗುಳಿ ತೋಡಲು ಮಾತ್ರ ಆಳು ಗುತ್ತಿಗೆ ಕೊಟ್ಟಿದ್ದರಂತೆ. ಸಸಿ ನೆಟ್ಟದ್ದೂ ಇವರೇ. ಮಣ್ಣು, ಬಣ್ಣ (ಅಡಿಕೆ ಮರದ ಸಾಲಿನ ಮಧ್ಯದ ಮಣ್ಣಿನ ರಾಶಿ) ಮಾಡಿಲ್ಲ. ಅದು ತೋಟಕ್ಕೆ ಬೇಕಾದುದೂ ಆಗಿಲ್ಲ.
ಕೃಷಿಗೆ ಮೈ ಕಸುವಿನಷ್ಟೇ ಜಾಣ್ಮೆ ಮುಖ್ಯ ಎಂಬುದಕ್ಕೆ ಇವರೇ ಸ್ಪಷ್ಟ ಉದಾಹರಣೆ. ತೋಟದ ಕೆಲಭಾಗವನ್ನು ಮಣ್ಣು ಹಾಕಿ ಏರಿಸಬೇಕಿತ್ತು. ಅವರಲ್ಲಿ ಮಣ್ಣು ತೆಗೆಯಲು ಗುಡ್ಡವಿಲ್ಲ, ಧರೆಯಿಲ್ಲ. ಮಾಡಿದ್ದಿಷ್ಟೇ, ಪೇಟೆಯ ಕೆಲವು ಮಣ್ಣು ಸಾಗಿಸುವ ಟ್ಯಾಕ್ಟರ್‌ನವರನ್ನು ಸಂಪರ್ಕಿಸಿದರು. ಪೇಟೆಯಲ್ಲಿ ತೆಗೆದ ಮಣ್ಣು, ಮನೆ ಕೆಡವಿದ ಮಣ್ಣುಗಳನ್ನು ಅವರು ಊರಾಚೆ ಸಾಗಿಸುತ್ತಿದ್ದರಷ್ಟೇ. ಅದನ್ನು ತಂದು ತಮ್ಮ ಜಾಗದಲ್ಲಿ ಸುರಿಯಲು ಅವಕಾಶವಿತ್ತರು. ಚಾಲಕನಿಗೆ ಪ್ರತಿ ಲೋಡ್‌ಗೆ ೫೦ ರೂ. ಭಕ್ಷೀಸು. ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಮಿ ಎದ್ದಿದೆ. ರಸ್ತೆ ಆಗಿದೆ!
ವಾಸ್ತವವಾಗಿ, ಪಂಡಿತ್‌ದ್ವಯರು ಕೃಷಿಗೆ ಮಾಡುವ ಖರ್ಚು ನಗಣ್ಯ. ಐದು ಪ್ಲಾಸ್ಟಿಕ್ ಡ್ರಂಗಳನ್ನು ಬಳಸಿ ಜೀವಾಮೃತ ತಯಾರಿ ಘಟಕವನ್ನು ರೂಪಿಸಿದ್ದಾರೆ. ತೋಟಕ್ಕೆ ಸ್ಪ್ರಿಂಕ್ಲರ್ ಮೂಲಕ ಪಂಪ್ ಶಕ್ತಿಯಿಂದ ಉಣಿಸುತ್ತಾರೆ. ಬೆಲ್ಲ, ಹಿಟ್ಟು ಮಾತ್ರ ಖರ್ಚಿನ ಬಾಬ್ತು. ನಾಲ್ಕು ಬಾರಿ ಫಿಲ್ಟರ್ ಆಗುವುದರಿಂದ ಸಮಸ್ಯೆ ಇಲ್ಲ. ತೋಟಕ್ಕೆ ಒಂದು ಕಾಳು ರಾಸಾಯನಿಕ ಗೊಬ್ಬರವನ್ನು ಮುಟ್ಟಿಸಿಲ್ಲ. ನಿಜಕ್ಕಾದರೆ, ೨೦ ಸಾವಿರ ರೂ. ಖರ್ಚು ಮಾಡಿ ಜೀವಾಮೃತ ಘಟಕ ಸಿದ್ಧಪಡಿಸಿದ್ದೇ ದೊಡ್ಡ ಖರ್ಚು.
ಪ್ರತಿ ಎಳನೀರಿಗೆ ಆರು ರೂ.ನಂತೆ ಮನೆಬಾಗಿಲಿನಲ್ಲೇ ವ್ಯಾಪಾರ. ವಾರ್ಷಿಕ ೪೦ ಸಾವಿರ ರೂ. ಆಜುಬಾಜಿನ ಆದಾಯ. ಅಡಿಕೆ, ವೆನಿಲ್ಲಾ ಇನ್ನಿತರ ಬೆಳೆಗಳಿಂದ ಒಟ್ಟಾರೆ ವಾರ್ಷಿಕ ಎರಡು ಲಕ್ಷ ರೂಪಾಯಿ ದುಡಿಮೆ. ಖರ್ಚು ಕಡಿಮೆಯಿರುವುದರಿಂದ ನಿರಾಳ ಜೀವನ. ಬಹುಷಃ ಬರುವ ದಿನಗಳಲ್ಲಿ ಪುನರ್ಪುಳಿ ಫಸಲು ಹೆಚ್ಚುವುದರಿಂದ ಕೋಕಂ ಜ್ಯೂಸ್ ತಯಾರಿಯೂ ದೊಡ್ಡ ಪ್ರಮಾಣದಲ್ಲಿ ನಡೆಸಬಹುದು. ತೋಟದ ಅಂಚಿಗೆ ಬಿದಿರು. ಮಣ್ಣು ಕುಸಿತ, ಕೊರೆತ ತಪ್ಪಿದೆ. ಇನ್ನೊಂದು ಆದಾಯಕ್ಕೂ ಕಾರಣವಾಗಿದೆ ಬಿದಿರು.
ಮಗ ದೀಪಕ್ ಬಿಕಾಂ ಪದವೀಧರ. ೧೯೯೧ರಿಂದ ಒಂಭತ್ತು ವರ್ಷ ಕಾಲ ಬ್ಯಾಂಕ್ ಕೆಲಸದಲ್ಲಿದ್ದವರು. ಮದುವೆಯಾಗುತ್ತಿದ್ದಂತೆ ಉದ್ಯೋಗಕ್ಕೆ ತಿಲಾಂಜಲಿ ಹೇಳಿ ಕೃಷಿಗೆಂದು ಮನೆಗೆ ಮರಳಿದವರು. ಇಂದು ಅವರಿಗೆ ತಮ್ಮ ನಿರ್ಧಾರದ ಬಗ್ಗೆ ದೊಡ್ಡ ಹೆಮ್ಮೆಯಿರುವುದು ವಿಶೇಷ.
ನಿಜ, ನಿಜ. ಪೇಟೆಯ ಸಮೀಪವಿರುವುದರಿಂದ ಅವರು ಹಲವು ಮಾದರಿಯಲ್ಲಿ ಆಳಿನ ಅವಲಂಬನೆಯನ್ನು ತಪ್ಪಿಸಿಕೊಂಡಿದ್ದಾರೆ. ಖುದ್ದು ತಂದೆ ಕಮಲಾಕರ್ ಹಾಗೂ ಮಗ ದೀಪಕ್ ತೋಟದಲ್ಲಿ ದುಡಿಯುತ್ತಿರುವುದರಿಂದ ಆಳು ಸಮಸ್ಯೆ ಕಾಡಿಲ್ಲ. ಮುಖ್ಯವಾಗಿ, ವ್ಯವಸ್ಥಿತ ಯೋಜನೆಯೊಂದಿಗೇ ಕೃಷಿ ಮಾಡುತ್ತಿರುವುದರಿಂದ ಬದುಕು ಗೋಜಲಾಗಿಲ್ಲ.
ಹಾಗೆಂದು ತೊಂದರೆಗಳೇ ಇಲ್ಲವೆಂದಲ್ಲ. ಮಳೆಗಾಲದಲ್ಲಿ ಒಂದೆರಡು ದಿನ ನೆರೆ ಬರುವುದಿದೆ. ಆಗ ತೋಟದ ಮುಚ್ಚಿಗೆಯೆಲ್ಲ ನೀರಿನೊಂದಿಗೆ ಕೊಚ್ಚಿ ಹೋಗುವ ತಾಪತ್ರಯ. ಮನೆಯಲ್ಲಿ ಒಂದಡಿ ನೀರು ನಿಲ್ಲುವ ಸಮಸ್ಯೆ. ಆದರೆ ಪೇಟೆಯ ಪಕ್ಕದಲ್ಲಿ ಕೃಷಿ ಮಾಡುವ ಸಾಹಸ ಮತ್ತು ಅದೇ ಪೇಟೆಯನ್ನು ತಮ್ಮ ಅನುಕೂಲಕ್ಕೆ ಬಗ್ಗಿಸಿಕೊಂಡ ರೀತಿಯಿಂದಲೇ ಕಮಲಾಕರ್ - ದೀಪಕ್‌ರ ಕೃಷಿ ವಿಧಾನ ಇತರರಿಗೆ ಮಾದರಿ. ಅವರನ್ನು ಸಂಪರ್ಕಿಸುವುದಾದರೆ ಕರೆ ಮಾಡಿ.... ೯೨೪೨೨೪೮೮೦೦ ಅಥವಾ ೯೪೪೯೮೯೬೨೩೦.
ಕೃಷಿಗೆ ಇಳಿಯುವ ಮುನ್ನ ಆಸಕ್ತರು ಒಮ್ಮೆ ಅವರ ಜಮೀನಿಗೆ ಭೇಟಿ ಕೊಡುವುದು ಒಳಿತು.

-ಮಾವೆಂಸ
ಇ ಮೇಲ್- mavemsa@gmail.com
ಈ ಲೇಖಕರ ಇತರ ಬರಹಗಳನ್ನು ಓದಲು ನೀವು ಬೇಟಿ ಕೊಡಿ,http://mavemsa.blogspot.com/

Friday, August 21, 2009

ಯುಕ್ತ ಶಕ್ತ ಯುಪಟೋರಿಯಂ



ಗೊಬ್ಬರ ಗಲಾಟೆ ಇತ್ತೀ­ಚೆಗೆ ಸಾಮಾ­ನ್ಯ­ವಾ­ಗಿದೆ. ರಸ­ಗೊ­ಬ್ಬರ ಇಲ್ಲ­ದಿ­ದ್ದರೆ ಕೃಷಿ ಇಲ್ಲ ಎನ್ನುವ ಸ್ಥಿತಿ ಬಂದಿದೆ. ಉತ್ತಮ ಇಳು­ವ­ರಿಗೆ ರಸ­ಗೊ­ಬ್ಬ­ರವೇ ಬೇಕೆಂ­ದಿಲ್ಲ. ನಮ್ಮ ಪರಿ­ಸ­ರ­ದಲ್ಲಿ ಇರುವ ನಿರು­ಪ­ಯುಕ್ತ ಎಂದು ತಿಳಿ­ಯುವ ಕಳೆ ಗಿಡ­ದಲ್ಲಿ ರಸ­ಗೊ­ಬ್ಬ­ರ­ದಲ್ಲಿ ಸಿಗುವ ಪೋಷ­ಕಾಂ­ಶ­ಗಳು ದೊರೆ­ಯು­ತ್ತವೆ ಎನ್ನು­ವುದು ಸಂಶೋ­ಧ­ನೆ­ಯಿಂದ ಸಾಬೀತು ಮಾಡಿ­ದ್ದಾರೆ.
ಸ್ಥಳೀ­ಯ­ವಾಗಿ ಪಾರ್ಥೇ­ನಿಯಂ ಕಾಂಗ್ರೆಸ್‌, ಕಮ್ಯು­ನಿಸ್ಟ್‌, ಲಾಟಾನಾ ಎಂದು ಕರೆ­ಸಿ­ಕೊ­ಳ್ಳುವ ಯುಪ­ಟೋ­ರಿ­ಯಂನ ಸಸ್ಯ ಶಾಸ್ತ್ರೀಯ ಹೆಸರು ಕ್ರೊಮೋ­ಲೀನಾ ಒಡೊ­ರಟ. ಪಶ್ಚಿಮ ಘಟ್ಟ ಪ್ರದೇ­ಶ­ದಲ್ಲಿ ಎಲ್ಲೆಂ­ದ­ರಲ್ಲಿ ಕಾಣುವ ಈ ಸಸ್ಯ­ಗ­ಳನ್ನು ನಿಷ್ಪ್ರ­ಯೋ­ಜಕ ಎಂದು ಎಲ್ಲರೂ ಭಾವಿ­ಸಿ­ದ್ದಾರೆ. ಆದರೆ ಇದ­ರಲ್ಲಿ ಭೂಮಿ­ಯನ್ನು ಫಲ­ವ­ತ್ತತೆ ಮಾಡುವ ಗುಣ­ವಿದೆ ಎಂದು ಕೃಷಿ ಸಂಶೋ­ಧನಾ ಕೇಂದ್ರ(ಭತ್ತ) ಶಿರಸಿ ಇವರು ಕಂಡು­ಕೊಂ­ಡಿ­ದ್ದಾರೆ.
ಹಸಿರು ಗೊಬ್ಬ­ರ­ವಾಗಿ ಬಳಕೆ: 1996ರಿಂದ ಕೃಷಿ ಸಂಶೋ­ಧನಾ ಕೇಂದ್ರ( ಭತ್ತ)ದಲ್ಲಿ ಪ್ರಾಯೋ­ಗಿ­ಕ­ವಾಗಿ ಬೆಳೆಗೆ ಯುಪ­ಟೋ­ರಿಯಂ ಗಿಡ­ಗ­ಳನ್ನು ಪೋಷ­ಕಾಂ­ಶ­ವಾಗಿ ಬಳಸಿ ಸಂಶೋ­ಧನೆ ನಡೆ­ಸಿ­ದ್ದಾರೆ. ಸಾಮಾ­ನ್ಯ­ವಾಗಿ ಯುಪ­ಟೋ­ರಿಯಂ ಗಿಡ ಜುಲೈ, ಆಗಸ್ಟ್‌ ತಿಂಗ­ಳಿ­ನಲ್ಲಿ ಎಳೆಯ ಗಿಡ­ವಾ­ಗಿ­ರು­ತ್ತದೆ. ಅದರ ಕಾಂಡ­ಗ­ಳನ್ನು ಕಡಿದು ಹಾಕಿ­ದರೆ ಸುಲ­ಭ­ವಾಗಿ ಕೊಳೆ­ಯು­ತ್ತದೆ. ಯುಪ­ಟೋ­ರಿಯಂ ಗಿಡ­ಗಳು ಇಂತಹ ಹಂತ­ದಲ್ಲಿ ಇರು­ವಾಗ ಭತ್ತ ನಾಟಿ ಮಾಡುವ ­ಯವು ಬಂದಿ­ರು­ತ್ತದೆ.
ರಸ­ಗೊ­ಬ್ಬ­ರದ ಗೊಡವೆ ಬೇಡ ಎನ್ನುವ ರೈತರು ಒಂದು ಎಕ­ರೆಗೆ ನಾಲ್ಕು ಸಾವಿರ ಕಿಲೋ­ದಷ್ಟು ಯುಪ­ಟೋ­ರಿಯಂ ಗಿಡ­ಗ­ಳನ್ನು ಗದ್ದೆಗೆ ಹಾಕ­ಬೇಕು. ನೀರಿ­ರುವ ಹೊಲ­ಗ­ಳಲ್ಲಿ ಒಂದೆ­ರಡು ದಿನ ಈ ಕತ್ತ­ರಿಸಿ ಹಾಕಿದ ಯುಪ­ಟೋ­ರಿಯಂ ಗಿಡ ಕೊಳೆ­ಯು­ತ್ತದೆ. ಆಗ ಟಿಲ್ಲರ್‌ ಮೂಲಕ ಅಥವಾ ಪಡ್ಲರ್‌ ಮುಖೇನ ಮಿಶ್ರಣ ಮಾಡಿ­ದರೆ. ರಸ­ಗೊ­ಬ್ಬ­ರ­ದಿಂದ ಸಿಗು­ವಷ್ಟೇ ಪೋಷ­ಕಾಂಶ ಇದ­ರಿಂ­ದಲೂ ಸಿಗು­ತ್ತದೆ.
ಯುಪ­ಟೋ­ರಿಯಂ ಗಿಡ­ಗ­ಳಲ್ಲಿ ಸಾರ­ಜ­ನಕ, ರಂಜಕ ಮತ್ತು ಪೋಟಾಷ್‌ ಸಾಕಷ್ಟು ಪ್ರಮಾ­ಣ­ದಲ್ಲಿ ಇರು­ತ್ತದೆ. ಇದ­ಲ್ಲದೆ, ಮಧ್ಯಮ ಪೋಷ­ಕಾಂ­ಶ­ಗ­ಳಾದ ಕ್ಯಾಲಿ­ಸಿಯಂ, ಮ್ಯಾಂಗ್ನೇ­ನಿ­ಸಿಯಂ, ಸಲ್ಫ­ರ್‌ನ ಅಂಶವು ಇರು­ವುದು ತಿಳಿದು ಬಂದಿದೆ. ಹಾಗೆಯೇ ಸೂಕ್ಷ್ಮ ಪೋಷ­ಕಾಂ­ಶ­ಗ­ಳಾದ ಸತು, ಖಾಫರ್‌, ಆಮ್ಲ, ಮ್ಯಾಂಗ­ನೀಸ್‌, ಕಬ್ಬಣ ಇರು­ತ್ತವೆ. ಇದ­ರಿಂದ ಭೂಮಿಯ ಫಲ­ವ­ತ್ತತೆ ತಾನಾ­ಗಿಯೇ ಹೆಚ್ಚಾ­ಗು­ತ್ತದೆ.
ಹಸಿರು ಗೊಬ್ಬ­ರ­ವಾಗಿ ಸೆಣಬು, ಡಾಯಂಚಾ, ಗಿಲ್ಸಿ­ಡಿಯಾ ಮುಂತಾ­ದ­ವು­ಗ­ಳನ್ನು ಬಳ­ಸು­ತ್ತಾರೆ. ಆದರೆ ಯುಪ­ಟೋ­ರಿಯಂ ಇವೆ­ಲ್ಲ­ಕ್ಕಿಂತ ಮುಂಚೆ ಮಣ್ಣಲ್ಲಿ ಮಣ್ಣಾ­ಗುವ ಗುಣ­ವನ್ನು ಹೊಂದಿದೆ.
ಯುಪ­ಟೋ­ರಿಯಂ ಗುಣಾ­ವ­ಗುಣ: ಪರಿ­ಸರ ಮಾಲಿನ್ಯ ಮಾಡುವ ಗಿಡ ಎಂದು ಯುಪ­ಟೋ­ರಿ­ಯಂನ ಕುಖ್ಯಾತಿ. ಇದಕ್ಕೆ ಕಾರ­ಣವು ಇದೆ. ಎಳೆಯ ಗಿಡ­ವಾ­ಗಿ­ರು­ವಾಗ ಇದನ್ನು ಕಟಾವು ಮಾಡ­ದಿ­ದ್ದರೆ, ಒಂದು ಗಿಡ­ದಿಂದ ಲಕ್ಷಾಂ­ತರ ಬೀಜ­ಗಳು ಉತ್ಪ­ತ್ತಿ­ಯಾ­ಗು­ತ್ತದೆ. ಇದು ಉಣು­ಗು­ಗಳು ಹುಟ್ಟಲು ಕಾರ­ಣ­ವಾ­ಗು­ತ್ತದೆ. ಇಷ್ಟೇ ಅಲ್ಲದೆ, ಅಸ್ತಮಾ ರೋಗ ಸಹ ಇದ­ರಿಂದ ಬರುವ ಸಾಧ್ಯತೆ ಇದೆ. ಅದ­ಕ್ಕಾಗಿ ಇದನ್ನು ಗೊಬ್ಬ­ರ­ವಾಗಿ ಬಳ­ಸಿ­ದರೆ ಪ್ರಯೋ­ಜ­ನಕ್ಕೆ ಬರು­ತ್ತದೆ.
ಕೊಟ್ಟಿ­ಗೆ­ಯಲ್ಲಿ ದನ­ಗ­ಳಿಗೆ ಈ ಯುಪ­ಟೋ­ರಿಯಂ ಗಿಡ­ಗ­ಳನ್ನು ಹಾಸಲು ಉಪ­ಯೋ­ಗಿಸಿ ನಂತರ ಗೊಬ್ಬ­ರ­ಗುಂ­ಡಿಗೆ ಹಾಕಿ­ದರೆ ಪೌಷ್ಠಿ­ಕ­ವಾದ ಗೊಬ್ಬರ ಸಿಗು­ತ್ತದೆ.
`ಯಾ­ವು­ದಕ್ಕೂ ಪ್ರಯೋ­ಜ­ನಕ್ಕೆ ಬಾರದ ಗಿಡ ಎನ್ನುವ ಸ್ಥಿತಿ ಯುಪ­ಟೋ­ರಿ­ಯಂಗೆ ಇದೆ. ಇಂತಹ ಗಿಡ­ದಲ್ಲಿ ಹೆಚ್ಚಿಗೆ ತಾಕತ್ತು ಇದೆ ಎಂದು ಗೊತ್ತಾ­ಗಿದ್ದು ಭತ್ತದ ಗದ್ದೆ­ಯಲ್ಲಿ ಇದನ್ನು ಗೊಬ್ಬ­ರ­ವಾಗಿ ಬಳ­ಸಲು ಆರಂ­ಭಿ­ಸಿ­ದಾಗ. ನಾವು ಇದನ್ನು 12 ವರ್ಷ­ದಿಂದ ಪ್ರಯೋಗ ಮಾಡಿದ ಮೇಲೆ ಇದನ್ನು ಯಾವುದೇ ಅನು­ಮಾ­ನ­ವಿ­ಲ್ಲದೆ ಗೊಬ್ಬ­ರ­ವಾಗಿ ಬಳಸ ಬಹುದು ಎನ್ನುವ ತಿರ್ಮಾ­ನಕ್ಕೆ ಬಂದಿ­ದ್ದೇವೆ. ಸಾವ­ಯವ ಕೃಷಿ ಮಾಡಿ­ದರೆ ಇಳು­ವರಿ ಕಡಿಮೆ ಬರು­ತ್ತದೆ ಎನ್ನು­ತ್ತಾರೆ. ಕಡಿಮೆ ಯಾಗು­ವುದು ಸತ್ಯ. ಆದರೆ ಸತತ ಹತ್ತು ವರ್ಷ ಯುಪ­ಟೋ­ರಿಯಂ ಬಳ­ಸಿ­ದರೆ ಭೂಮಿ ತುಂಬಾ ಫಲ­ವ­ತ್ತಾಗಿ ತಾನಾ­ಗಿಯೇ ಹೆಚ್ಚಿಗೆ ಇಳು­ವರಿ ಬರು­ತ್ತದೆ' ಎನ್ನು­ವು­ದಾಗಿ ಸಂಶೋ­ಧನಾ ಕೇಂದ್ರದ ಡಾ. ಮಂಜಪ್ಪ ಹೇಳು­ತ್ತಾರೆ.
ಬಯೋ ಗ್ಯಾಸ್‌ಗೆ ಕಚ್ಚಾ ವಸ್ತು: ಸಾಮಾ­ನ್ಯ­ವಾಗಿ ಬಯೋ­ಗ್ಯಾಸ್‌ ಉತ್ಪ­ದ­ನೆಗೆ ಸೆಗಣಿ ಬೇಕು. ಕಡಿಮೆ ಜಾನು­ವಾ­ರು­ಗ­ಳನ್ನು ಸಾಕಿ­ಕೊಂ­ಡ­ವ­ರಿಗೆ ಸೆಗ­ಣಿಯ ತೊದರೆ ಇರು­ತ್ತದೆ. ಇಂತ­ವರು ಯುಪ­ಟೋ­ರಿಯಂ ಗಿಡ­ವನ್ನು ಬಳ­ಸ­ಬ­ಹುದು. ಆದರೆ ಇದಕ್ದು ನಿಯ­ಮ­ವಿದೆ. ನಾಲ್ಕು ಭಾಗ ಸೆಗಣಿ, ಒಂದು ಭಾಗ ಯುಪ­ಟೋ­ರಿಯಂ ಸೇರಿ­ಸ­ಬೇಕು. ಹೆಚ್ಚಿಗೆ ಪ್ರಮಾ­ಣದ ಈ ಸಸ್ಯ­ಗ­ಳನ್ನು ಸೆಗ­ಣಿಯ ಜೊತೆಗೆ ಸೇರಿ­ಸಿ­ದರೆ ಬಯೋ­ಗ್ಯಾ­ಸ್‌ನ ಟ್ಯಾಂಕಿನ ಒಳ­ಗಡೆ ಈ ಸಸ್ಯ ಸಿಕ್ಕಿ ಹಾಕಿ­ಕೊ­ಳ್ಳುವ ಸಾಧ್ಯತೆ ಇರು­ತ್ತದೆ. ಯುಪ­ಟೋ­ರಿಯಂ ಅನ್ನು ಗ್ಯಾಸ್‌ಗೆ ಬಳ­ಸು­ವು­ದ­ರಿಂದ ಸುಮಾರು 150 ರಿಂದ 200 ಲೀ ಹೆಚ್ಚಿಗೆ ಗ್ಯಾಸ್‌ ಸಿಗು­ತ್ತದೆ.
ಇದು ನಿಷ್ಪ್ರ­ಯೋ­ಜಕ ಎಂದು ತಿಳಿ­ದಿ­ರುವ ಯುಪ­ಟೋ­ರಿ­ಯಂನ ಉಪ­ಯೋಗ. ರಸ­ಗೊ­ಬ್ಬ­ರ­ಕ್ಕಾಗಿ ಗಲಾಟೆ ಮಾಡುವ ಬದಲು, ನಮ್ಮ ಕಾಲಿಗೆ ಸಿಗುವ ಕಳೆ ಗಿಡ­ಗ­ಳನ್ನು ಬಳಸಿ ಉತ್ತಮ ಗೊಬ್ಬ­ರ­ವನ್ನು ತಯಾ­ರಿ­ಸಿ­ಕೊ­ಳ್ಳ­ಬ­ಹುದು.
ಇದರ ಕುರಿತು ಹೆಚ್ಚಿನ ಮಾಹಿ­ತಿ­ಗಾಗಿ: ಡಾ. ಕೆ. ಮಂಜಪ್ಪ
ಬೇಸಾಯ ತಜ್ಞರು
ಕೃಷಿ ಸಂಶೋ­ಧನಾ ಕೇಂದ್ರ
ಬನ­ವಾಸಿ ರಸ್ತೆ, ಶಿರಸಿ
ಉತ್ತ­ರ­ಕ­ನ್ನಡ
9448722648



ನಾಗ­ರಾಜ ಮತ್ತಿ­ಗಾರ
ಇವರ ವಿಭಿನ್ನ ಬರ­ಹ­ಗಳ ಲೇಖನ ನೋಡಲು
http://tandacool.blogspot.com
http://oddolaga.blogspot.com

Tuesday, August 11, 2009

ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ?





ಸುಮ್ಮನೆ ರೈತನ ಹೊಲಕ್ಕೆ ಈ ದಿನಗಳಲ್ಲಿ ಹೋದರೂ ಕಾಣುವುದು ನೇಗಿಲು ಉಳುಮೆ, ಮಾನವ ಶಕ್ತಿಯ ನಾಟಿ, ಅದೇ ಕತ್ತಿ, ಕೊಡಲಿ, ಗುದ್ದಲಿ. ಕೃಷಿಯ ಯಾಂತ್ರಿಕ ಸಂಶೋಧನೆಗಳಲ್ಲಿ ರೈತ ಬಳಸುತ್ತಿರುವುದು ಅಪರೂಪಕ್ಕೊಂದು ಟಿಲ್ಲರ್, ಕಳೆ ಕತ್ತರಿಸು
ವ ಯಂತ್ರ ಇತ್ಯಾದಿ. ಕುಲಾಂತರಿ ಬೀಜಗಳೆಂಬ ಬಹುರಾಷ್ಟ್ರೀಯ ಕಂಪನಿಗಳ ಸರಕನ್ನು, ರಾಸಾಯನಿಕ ಗೊಬ್ಬರವೆಂಬ ಆಹಾರ ವಿಷವನ್ನು ಕೊಟ್ಟದ್ದು ಇದೇ ಕೃಷಿ ಸಂಶೋಧನೆಗಳು. ಸ್ವಾರಸ್ಯವೆಂದರೆ, ಇವೆಲ್ಲ ಸಂಶೋಧನೆಗಳು ಕೃಷಿ ವಿಜ್ಞಾನಿಗಳಿಂದ ಪ್ರಕಟಗೊಂಡ ನಂತರವೇ ರೈತರ ಗಮನಕ್ಕೆ ಬರುವುದು. ಅನಿವಾರ್ಯವೋ, ಆಮಿಷವೋ ರೈತನಿಗೆ ಇಂತವುಗಳಲ್ಲಿ ಕೆಲವನ್ನು ಬಳಸುವುದು
ರೂಢಿಯಾಯಿತು.
ಆದರೆ ಕೃಷಿ ಸಂಶೋಧನೆಗೆ ಬಂದು ಬೀಳುತ್ತಿರುವ ಹಣ ನಮ್ಮ ನಿಮ್ಮ ನಿರೀಕ್ಷೆ ಮೀರಿದ್ದು. ವಿಶ್ವ ಬ್ಯಾಂಕ್ ನೆರವಿನಿಂದ ಭಾರತ ಸರ್ಕಾರ ಕೈಗೊಂಡಿರುವ ರಾಷ್ಟ್ರೀಯ ಕೃಷಿ ಅನುಶೋಧನಾ ಯೋಜನೆ (ಎನ್‌ಎಐಪಿ)ಗೆಂದು ತೆಗೆದಿರಿಸಿರುವ ಮೊತ್ತ ೨೧೪ ಮಿಲಿಯನ್ ಅಮೆರಿಕನ್ ಡಾಲರ್! ಬರೀ ಕೃಷಿಯ ಮೂಲಭೂತ ಹಾಗೂ ತಂತ್ರಗಳ ಸಂಶೋಧನೆಗೆಂದೇ ೫೬ ಮಿಲಿಯನ್ ಅಮೆರಿಕನ್ ಡಾಲರ್ ಮೀಸಲಿರಿಸಲಾಗಿದೆ. ದುಡ್ಡನ್ನು ಧಾರಾಳವಾಗಿ ಹಂಚಲಾಗಿದೆ. ಇಥೆನಾಲ್ ಉತ್ಪಾದನೆ, ಮತ್ಸೋದ್ಯಮ ಕುಶಲತೆ ಸುಧಾರಣೆ, ತೆಂಗಿನಲ್ಲಿ ಮಾರುಕಟ್ಟೆ ಒತ್ತಾಸೆ, ಸಾಂಬಾರು ಬೀಜಗಳ ಗುಣಮಟ್ಟ ಹೆಚ್ಚಳ... ಹೀಗೆ ಸಂಶೋಧನೆಗಳು ಹಲವಾರು. ಅದರ ಫಲ ಶೂನ್ಯ!
ನಿಜ, ಹಣವಿದೆ. ಸಂಶೋಧನೆಗಳಾಗಿವೆ. ಪ್ರಬಂಧಗಳು ಮಂಡನೆಯಾಗಿವೆ. ರೈತನಿಗೆ ಆತನ ಭೂಮಿಯಲ್ಲಿ ಇವಾವುವನ್ನು ಅಳವಡಿಸಿಕೊಳ್ಳುವುದು ಸಾದ್ಯವಿಲ್ಲದಷ್ಟು ಅಸಾಧು ಕಾರ್ಯಾಚರಣೆಗಳು ಇವು ಎಂಬುದೂ ರುಜುವಾತಾಗಿದೆ. ಆತಂಕದ ಮಾತೆಂದರೆ, ಎನ್‌ಎಐಪಿ ಯೋಜನೆ ೨೦೧೨ರ ಜೂನ್‌ವರೆಗೂ ಮುಂದುವರೆಯುತ್ತದೆ! ಅರ್ಥ ಇಷ್ಟೇ, ಮತ್ತಷ್ಟು ಹಣ ಕೃಷಿ ಸಂಶೋಧನೆಯ ಹೆಸರಿನಲ್ಲಿ ಪೋಲಾಗುತ್ತವೆ.
ಇದನ್ನೆಲ್ಲ ನೋಡಿ ಸುಮ್ಮನೆ ಕುಳಿತುಕೊಳ್ಳಬೇಕೆ? ಕೊನೆ ಪಕ್ಷ ರೈತ ಸಮುದಾಯ ಇದರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕ. ಇಂತಹ ಒಂದು ಅರಿವು ಮೊತ್ತಮೊದಲು ಮೂಡಿದ್ದು ಹೈದರಾಬಾದ್‌ನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಗೆ. ಕೃಷಿ ಸಂಶೋಧನೆಗಳಲ್ಲಿ ಅದರ ಮೊದಲ ಹಂತದಿಂದಲೂ ರೈತರ ಸಹಭಾಗಿತ್ವ ಇರಲೇಬೇಕು ಎಂಬ ಆಂದೋಲನವನ್ನು ಹುಟ್ಟುಹಾಕಿದ್ದು ಅದರ ಒಂದು ವಿಭಾಗ ‘ಆದರ್ಶ’. ಅದರ ಸಂಚಾಲಕರು ಕರ್ನಾಟಕದವರಾದ ಡಾ.ಪಿ.ವಿ.ಸತೀಶ್.
ಹಾಗೆ ನೋಡಿದರೆ, ಇಂದು ವಿಶ್ವದಾದ್ಯಂತ ಅಂತದೊಂದು ಕೂಗು ಎದ್ದಿದೆ. ‘ಕೃಷಿ ಸಂಶೋಧನೆಯ ಪ್ರಜಾತಾಂತ್ರೀಕರಣ’ ಎಂಬ ಪ್ರಗತಿಪರ ಕಲ್ಪನೆ ಹುಟ್ಟಿಕೊಂಡಿದೆ. ಜಗತ್ತಿನ ಸ್ವಯಂ ಸೇವಾ ಗುಂಪುಗಳು ಹೊಸ ಆಂದೋಲನಕ್ಕೆ ಶ್ರೀಕಾರ ಹಾಕಿದ್ದಾರೆ. ಇದರ ಮುಂದಾಳತ್ವವನ್ನು ಇಂಗ್ಲೆಂಡ್ ಮೂಲದ ಅಭಿವೃದ್ಧಿ ಸಂಸ್ಥೆ ಐಐಇಡಿ ವಹಿಸಿಕೊಂಡಿದೆ. ಇಡೀ ಆಂದೋಲನಕ್ಕೆ ದಕ್ಷಿಣ ಏಷ್ಯಾದಲ್ಲಿ ‘ಆದರ್ಶ’ ಎಂದು ಕರೆಯಲಾಗಿದೆ. ಈ ಭಾಗದಲ್ಲಿ ಹೈದರಾಬಾದ್‌ನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಯ ನೇತೃತ್ವ. ಬೊಲಿವಿಯಾ, ಪೆರು, ಇರಾನ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ.... ಈ ಮಾದರಿಯ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿದೆ.
ಅಷ್ಟಕ್ಕೂ ಈ ಕೃಷಿ ಸಂಶೋಧನೆಗಳ ಲಾಭ ಸಿಕ್ಕುತ್ತಿರುವುದು ಯಾರಿಗೆ? ಯುಎಸ್‌ಎಐಡಿ ಎಂಬ ಯೋಜನೆಯಡಿ ಆಫ್ರಿಕಾ ದೇಶದ ರೈತರಿಗೆ ನೆರವು ಎನ್ನಲಾಯಿತು. ರೈತರಿಗೆ ಸಿಕ್ಕಿದ್ದು ಕುಲಾಂತರಿ ಹತ್ತಿ ಬೀಜ. ಆದರೆ ಬೀಜ ಮಾರಾಟದಿಂದ ದುಡ್ಡು ಹೋಗಿ ಸೇರಿದ್ದು ಮೊನ್ಸಾಂಟೋ ತರದ ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ. ಇದೀಗ ಬಂದಿರುವ ನ್ಯಾನೋ ತಂತ್ರಜ್ಞಾನದ ಲಾಭ ಹಿರಿಯುವವರೂ ಬಹುರಾಷ್ಟ್ರೀಯ ಕಂಪನಿಗಳೇ. ಅಂದರೆ ಕೃಷಿ ಸಂಶೋಧನೆಗಳೆಂದರೆ ರೈತರ ದುಡ್ಡನ್ನು ಕಬಳಿಸುವ ಪರೋಕ್ಷ ಹುನ್ನಾರ ಎಂಬುದೇ ಸರಿ.
ಇನ್ನೊಂದು ಮಗ್ಗುಲಿನ ವಿಪರ್ಯಾಸ ನೋಡಿ. ಛತ್ತೀಸ್‌ಗಢದ ಬುಡಕಟ್ಟು ಜನರ ಬೆಳೆ ಹೆಕ್ಟೇರ್‌ಗೆ ೮-೧೦ ಟನ್. ಅದೇ ಇಂದಿನ ಹಸಿರು ಕ್ರಾಂತಿ ಭಾರತದ ಸರಾಸರಿ ೪.೫ ಟನ್ ಮಾತ್ರ! ಕೀನ್ಯಾದಲ್ಲಿ ಜಿಎಂ ತಂತ್ರಜ್ಞಾನ ವಿಫಲವಾಗಿದೆ ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಫಿಲಿಪೇನ್ಸ್‌ನಲ್ಲಂತೂ ಡೆಲ್ಸಾಂಟೋ ಇಂಟರ್‌ನ್ಯಾಷನಲ್ ಎಂಬ ಅಮೆರಿಕನ್ ಸಂಸ್ಥೆ ರೈತರ ಬದುಕಿನೊಂದಿಗೆ ಆಟವಾಡಿದೆ. ವಿನೂತನ ತಳಿಯ ಪೈನಾಪಲ್ ಬೆಳೆಯನ್ನು ರೈತರ ಸಹಿಯೊಂದಿಗೆ ಒಪ್ಪಂದ ಕೃಷಿಗೆ ಅಳವಡಿಸಿದ ಕಂಪನಿ ಬೆಳೆ ಗುಣಮಟ್ಟದ ಷರತ್ತು ಹೂಡಿ ಅಷ್ಟೂ ಬೆಳೆಯನ್ನು ಖರೀದಿಸಲು ನಿರಾಕರಿಸಿದೆ. ಬೇರೇನೂ ಬೆಳೆಯದೆ ಬರೀ ಪರಂಗಿ ಹಣ್ಣು ಬೆಳೆದವರು ಏನು ತಿನ್ನಬೇಕು?
ಭಾರತದ ನಾಲ್ಕು ಪ್ರಮುಖ ಕೃಷಿ ವಿ.ವಿ.ಗಳು ಮತ್ತು ಕೃಷಿ ಸಂಶೋಧನೆಯಲ್ಲಿ ಭಾರತ ಸರ್ಕಾರದ ಪ್ರಧಾನ ಅಂಗವಾದ ಐಸಿಎಆರ್‌ಗಳಲ್ಲಿ ಕೈಗೊಳ್ಳಲಾಗುತ್ತಿರುವ ಸಂಶೋಧನೆಗಳು ಎತ್ತ ಸಾಗುತ್ತಿವೆ ಎಂದು ಪರಿಶೀಲಿಸಲು ಡಿಡಿಎಸ್ ಒಂದು ಅಧ್ಯಯನ ನಡೆಸಿತು. ಮುಂಬರುವ ಎರಡು ದಶಕಗಳಲ್ಲಿ ಬಯೋಟೆಕ್ನಾಲಜಿ ಮತ್ತು ಜೆನೆಟಿಕ್ ಇಂಜಿನೀಯರ್‌ಗಳೇ ಭಾರತೀಯ ಕೃಷಿ ರಂಗವನ್ನು ಮುನ್ನಡೆಸುವ ಇಂಜಿನುಗಳು ಎಂದು ಪರಿಗಣಿಸಿ ಸಂಶೋಧನೆಗಳನ್ನು ಆ ದಿಕ್ಕಿಗೆ ಹೊರಳಿಸುತ್ತಿರುವ ಅತ್ಯಂತ ಆತಂಕಕಾರಿ ವಿಚಾರ ಈ ಅಧ್ಯಯನದಿಂದ ಬೆಳಕಿಗೆ ಬಂತು.
ಈ ಎಲ್ಲ ಹಿನ್ನೆಲೆಯಲ್ಲಿ ಐಎಎಎಸ್‌ಟಿಡಿ ಹೊಸ ಆಶಾಕಿರಣ ಎನ್ನಬಹುದು. ಈ ಯೋಜನೆಯಡಿ ನಿರೂಪಿತವಾಗುತ್ತಿರುವ ‘ಪ್ರಜಾಶಕ್ತಿ’ ಆಂದೋಲನದಲ್ಲಿ ಸಹಭಾಗಿತ್ವ ಹೊಂದಿರುವ ಇನ್ಸಿಟ್ಯೂಟ್ ಆಫ್ ಕಲ್ಚರಲ್ ರೀಸರ್ಚ್ ಎಂಡ್ ಆಕ್ಷನ್ (ಇಕ್ರಾ) ಹಾಗೂ ಸಿರಸಿಯ ಅಪ್ಪಿಕೋ ಚಳುವಳಿ ಸಂಘಟನೆಗಳು ಕರ್ನಾಟಕದ ಹೋರಾಟದ ರೂಪರೇಷೆಗಳನ್ನು ನಿರ್ವಹಿಸುತ್ತಿವೆ.
ರಾಜ್ಯದ ಹಲವು ಕ್ಷೇತ್ರಗಳ ಗಣ್ಯರನ್ನು ಒಳಗೊಂಡ ಒಂದು ಮೇಲ್ವಿಚಾರಕ ಸಮಿತಿಯ ರಚನೆಯಾಗಿದೆ. ಇದರ ಕೈಕೆಳಗೆ ರೈತಸಂಘ, ಸ್ವಯಂ ಸೇವಾ ಸಂಸ್ಥೆಗಳು, ರೈತರು, ಕೃಷಿ ಚಿಂತಕರು ಮುಂತಾದ ವರ್ಗಗಳನ್ನು ಪ್ರತಿನಿಧಿಸುವ ರಾಜ್ಯಮಟ್ಟದ ಸಮಿತಿಯೊಂದು ರಚನೆಯಾಗುತ್ತದೆ. ತದನಂತರದಲ್ಲಿ ಸ್ಪಷ್ಟ ಕಲ್ಪನೆಗಳ ಸಹಿತದ ೧೦೦ ಜನ ರೈತರ ತಂಡವನ್ನು ಕಟ್ಟಲಾಗುತ್ತದೆ. ಇವರಲ್ಲಿ ೨೦ ಜನರನ್ನು ತರಬೇತುಗೊಳಿಸಿ ರೈತ ಪರ ವಾದ ಮಂಡಿಸುವ ನಿಪುಣರನ್ನಾಗಿ ತಯಾರು ಮಾಡಲಾಗುತ್ತದೆ. ಈಗಾಗಲೇ ಧಾರಾವಾಡ ಹಾಗೂ ಬೆಂಗಳೂರಿನಲ್ಲಿ ಪ್ರಾಥಮಿಕ ಕಾರ್ಯಾಗಾರಗಳು ನಡೆದಿವೆ. ಸದ್ಯದ ವೇಳಾಪಟ್ಟಿಯಂತೆ ಬರುವ ನವೆಂಬರ್‌ನಲ್ಲಿ ಈ ‘ಪ್ರಜಾಶಕ್ತಿ’ ಯೋಚನೆ ತನ್ನ ಅಂತಿಮ ಸ್ವರೂಪವನ್ನು ಪಡೆಯುತ್ತದೆ.
ರಾಜ್ಯದ ಬೆಳವಣಿಗೆಗಳ ಹಿಂದೆ ಅದಾಗಲೇ ಕಂಡ ಆಂಧ್ರಪ್ರದೇಶದ ಯಶಸ್ಸಿದೆ. ಅಲ್ಲಿಯೂ ಡಾ.ಪಿ.ವಿ.ಸತೀಶ್‌ರ ಆದರ್ಶ ತಂಡ ರೈತರನ್ನು ಜಾಗೃತಗೊಳಿಸಿತ್ತು. ಅಂತಿಮ ಘಟ್ಟದಲ್ಲಿ ಕೃಷಿ ವಿಜ್ಞಾನಿಗಳು, ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳು, ರೈತ ತಜ್ಞರು ಒಂದು ವಿಚಾರ ಸಂಕಿರಣದಲ್ಲಿ ತಮ್ಮ ತಮ್ಮ ವಾದ ಮಂಡಿಸಿದರು. ೨೦ ಜನ ರೈತ ಮಹಿಳೆಯರು ಎಲ್ಲವಾದಗಳನ್ನು ಕೇಳಿ ತೀರ್ಪು ನೀಡುವ ನ್ಯಾಯಾಧೀಶರಾಗಿದ್ದರು. ಕೊನೆಗೂ ಈ ರೈತ ವರ್ಗ ಕುಲಾಂತರಿ ಬೆಳೆ, ಜೆನೆಟಿಕ್ ತಾಂತ್ರಿಕತೆಯನ್ನು ತಳ್ಳಿಹಾಕಿ ಸಾಂಪ್ರದಾಯಿಕ ಬೆಳೆ, ಕೃಷಿ ವಿಭಾಗಗಳ ಪರವಾಗಿಯೇ ತೀರ್ಪು ನೀಡಿದ್ದು ಗಮನಾರ್ಹ ಅಂಶ.
ಬಿಟಿ ಹತ್ತಿಯ ವ್ಯಾಮೋಹ, ರಾಸಾಯನಿಕ ಗೊಬ್ಬರಕ್ಕಾಗಿ ಹಾಹಾಕಾರ ನಡೆಯುತ್ತಿರುವ ಈ ದಿನಗಳಲ್ಲಿ ರೈತರಿಗೆ ಅರಿವು ಮೂಡಿಸುವ ಈ ಆಂದೋಲನದ ಪರಿಣಾಮ ಧನಾತ್ಮಕವಾದರೆ ಸಾಕು.......
-ಮಾವೆಂಸ
ಇ ಮೇಲ್- mavemsa@gmail.com
------
ಸದರಿ ಲೇಖಕರು ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆದ ‘ಕೃಷಿ ಸಂಶೋಧನೆಯ ಪ್ರಜಾತಾಂತ್ರೀಕರಣ’ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
------
ಈ ಲೇಖಕರ ಇತರ ಬರಹಗಳನ್ನು ಓದಲು ನೀವು ಬೇಟಿ ಕೊಡಿ, http://mavemsa.blogspot.com/



Wednesday, August 5, 2009

ಹಸಿರು ಗೊಬ್ಬರ ರಾಸಾಯನಿಕ ಕೃಷಿಗೆ ವಿದಾಯ



ಬಿತ್ತನೆ ಸಮಯ ಬಂದಾಗ ರೈತರು ರಸ­ಗೊ­ಬ್ಬ­ರ­ಕ್ಕಾಗಿ ಗೊಬ್ಬ­ರ­ಕ್ಕಾಗಿ ಪರ­ದಾ­ಡುವ ಸ್ಥಿತಿ­ಯನ್ನು ಇಂದು ಕಾಣು­ತ್ತಿ­ದ್ದೇವೆ. ಇಳು­ವರಿ ಹೆಚ್ಚು ಮಾಡುವ ಉದ್ದೇ­ಶ­ದಿಂದ `ಹ­ಸಿರು ಕ್ರಾಂತಿ' ಪ್ರಾರಂ­ಭ­ವಾ­ಯಿತೋ ಅಂದಿ­ನಿಂ­ದಲೇ ರೈತರು ಗೊತ್ತಿ­ಲ್ಲದೆ ಕಷ್ಟದ ಕಡೆ ಹೊರ­ಟಿ­ದ್ದರು. ಹೆಚ್ಚಿಗೆ ಇಳು­ವ­ರಿಗೆ ಹೆಚ್ಚಿಗೆ ಗೊಬ್ಬರ ಎನ್ನುವ ಸಿದ್ಧಾಂ­ತಕ್ಕೆ ಮೋರೆ ಹೋದರು. ಪರಿ­ಣಾಮ ಭೂಮಿ ಹೆಚ್ಚಿಗೆ ಗೊಬ್ಬ­ರ­ವನ್ನು ಕೇಳ ತೊಡ­ಗಿತು. ಇದ­ರಿಂದ ರೈತ ಹೊರ ಬರ­ಬೇ­ಕಾ­ದರೆ ರಸ­ಗೊ­ಬ್ಬ­ರದ ದಿಕ್ಕನ್ನು ಬಿಟ್ಟು ಪುನಃ ದೇಶೀ ಕೃಷಿ­ಯೆ­ಡಗೆ ಹಿಂತಿ­ರು­ಗ­ಬೇಕು.
ರಾಸಾ­ಯ­ನಿಕ ಕೃಷಿ­ಯನ್ನು ಬುಟ್ಟು ದೇಶೀ ಕೃಷಿ­ಯೆ­ಡೆಗೆ ಬಹಳ ಜನ ಬರು­ತ್ತಿ­ದ್ದಾರೆ. ಅಂತ­ವ­ರಲ್ಲಿ ರಾಮ­ನ­ಗರ ಜಿಲ್ಲೆ ಚನ್ನ­ಪ­ಟ್ಟಣ ತಾಲೂ­ಕಿನ ಅರ­ಳಾ­ಳು­ಸಂ­ದ್ರದ ಗಿರೀ­ಶ್‌­ಕೂಡಾ ಒಬ್ಬರು. ಇವರ ಜಮೀನು ಈಗ ರಸ­ಗೊ­ಬ್ಬ­ರ­ವನ್ನು ಕೇಳು­ವು­ದಿಲ್ಲ.
ಇವರು ಪಾಳೇ­ಕರ್‌ ಹೇಳಿ­ರುವ ಜೀವಾ­ಮೃತ ಕೃಷಿ ಹಾಗೂ ಸಹಜ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ. ಜೊತೆ­ಯಲ್ಲಿ ನೀರಿಂ­ಗಿ­ಸುವ ವ್ಯವ­ಸ್ಥೆ­ಯನ್ನು ಮಾಡಿ­ಕೊಂ­ಡಿ­ದ್ದಾರೆ.
ಗಿರೀಶ್‌ ಅವರ ಸಹಜ ಕೃಷಿ: ಇವ­ರಿಗೆ ನಾಲ್ಕು ಎಕರೆ ಜಮೀ­ನಿದೆ. ಅದ­ರಲ್ಲಿ ಮೂರು ಎಕರೆ ಜಾಗ­ದಲ್ಲಿ ಭತ್ತ ಬೆಳೆ­ಯು­ತ್ತಾರೆ. ಭತ್ತ­ವನ್ನು ನಾಟಿ ಮಾಡುವ ಪೂರ್ವ­ದಲ್ಲಿ ಇವರು ಹಸಿರು ಗೊಬ್ಬರ ತಯಾ­ರಿಗೆ ಮೊದಲ ಆದ್ಯತೆ ನೀಡು­ತ್ತಿ­ದ್ದಾರೆ. ಮೇ ತಿಂಗ­ಳ­ಲಿ­ನಲ್ಲಿ ಭತ್ತ ಬೆಳೆ­ಯುವ ಮೂರು ಎಕ­ರೆ­ಯಲ್ಲೂ ಸೆಣ­ಬನ್ನು ಬಿತ್ತು­ತ್ತಾರೆ. ಇದು ಸುಮಾರು ಒಂದು ಆಳು ಎತ್ತ­ರಕ್ಕೆ ಬೆಳೆದ ಮೇಲೆ ಅಲ್ಲಿಯೇ ಕಡಿ­ದು­ಹಾಕಿ ಉಳಿ­ಮೆ­ಯನ್ನು ಮಾಡು­ತ್ತಾರೆ. ಇದು ಸಂಪೂರ್ಣ ಕೊಳೆ­ಯು­ವ­ವ­ರೆಗೂ ಬಿಟ್ಟು ಮತ್ತೊಮ್ಮೆ ಉಳಿಮೆ ಮಾಡು­ತ್ತಾರೆ. ಇದ­ರಿಂದ ಭೂಮಿ ಸಾಕಷ್ಟು ತಾಕತ್‌ ಪಡೆ­ದಿ­ರು­ತ್ತದೆ. ಭೂಮಿ­ಯಲ್ಲಿ ಸಾರ­ಜ­ನಕ ತಾನಾ­ಗಿಯೇ ಹೆಚ್ಚಾ­ಗು­ತ್ತದೆ. ಯೂರಿಯಾ ಗೊಬ್ಬರ ನೀಡಿ­ದರೆ ನೀಡುವ ಪರಿ­ಣಾ­ಮ­ವನ್ನು ಸೆಣಬು ನೀಡು­ತ್ತದೆ.
ಇದ­ಲ್ಲದೇ ಜೀವಾ­ಮೃತ ತಯಾ­ರಿಸಿ ಭತ್ತದ ಬೆಳೆಗೆ ಬಳ­ಸು­ತ್ತಾರೆ. 10 ಲೀ ಗಂಜಲ, 10 ಕಿಲೋ ಸೆಗಣಿ, 2 ಕಿಲೋ ಬೆಲ್ಲ, 2 ಕಿಲೋ ದ್ವಿದಳ ಧಾನ್ಯದ ಹಿಟ್ಟು, ನೀರು, ಮತ್ತು ಮಣ್ಣನ್ನು ಮಿಶ್ರಣ ಮಾಡಿ ಜೀವಾ­ಮೃ­ತ­ವನ್ನು ತಯಾ­ರಿಸಿ ಕೊಳ್ಳು­ತ್ತಾರೆ.
`ನಾನು ಈ ರೀತಿ ಕೃಷಿ ಮಾಡ­ಲಿಕ್ಕೆ ತೊಡ­ಗಿದ ಮೇಲೆ ಇಳು­ವ­ರಿಯು ಒಂದು ಹಂತ­ದಲ್ಲಿ ಹೆಚ್ಚಾ­ಗಿದೆ. ರಾಸಾ­ಯ­ನಿಕ ಗೊಬ್ಬರ ಹಾಕಿ ಕೃಷಿ ಮಾಡು­ವಾಗ ಭತ್ತ ಹೆಚ್ಚಗೆ ಬಂದ­ಹಾಗೆ ಕಾಣು­ತ್ತಿತ್ತು. ಆಗ ಜೊಳ್ಳು ಹೆಚ್ಚಿಗೆ ಬರು­ತ್ತಿತ್ತು. ಆದರೆ ಜೊಳ್ಳು ರಹಿತ ಭತ್ತ ಸಿಗು­ತ್ತಿದೆ. ಆದ­ರಿಂದ ಇಳು­ವ­ರಿ­ಯಲ್ಲಿ ಕಡಿ­ಮೆ­ಯಾದ ಹಾಗೇ ಕಾಣು­ವು­ದಿಲ್ಲ. ಈ ರೀತಿಯ ಕೃಷಿ­ಯಲ್ಲಿ ಭತ್ತಕ್ಕೆ ರೋಗ ತಡೆದು ಕೊಳ್ಳುವ ಶಕ್ತಿ ಬರು­ವುದು ಗಮ­ನಕ್ಕೆ ಬಂದಿದೆ' ಎಂಬು­ದಾಗಿ ತಮ್ಮ ಕೃಷಿ ಅನು­ಭ­ವ­ವನ್ನು ಗಿರೀಶ್‌ ಹಂಚಿ­ಕೊ­ಳ್ಳು­ತ್ತಾರೆ.
ರೇಷ್ಮೆ ಕೃಷಿ: ಅರ್ಧ ಎಕರೆ ಜಾಗ­ದಲ್ಲಿ ರೇಷ್ಮೆ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ. ಸಾವ­ಯವ ಕೃಷಿ­ಯಲ್ಲಿ ಇದನ್ನು ಮಾಡು­ತ್ತಿ­ರು­ವ­ದ­ರಿಂದ ರೋಗ ರಹಿ­ತ­ವಾಗಿ ಒಳ್ಳೆಯ ಗೂಡನ್ನು ಬೆಳೆ­ಯಲು ಸಾಧ್ಯ­ವಾ­ಗಿದೆ. 31 ಕಿಲೋ ರೇಷ್ಮೆ ಗುಡನ್ನು ಪಡೆ­ದಿ­ರು­ವುದು ಇದಕ್ಕೆ ಸಾಕ್ಷಿ.
ರೇಷ್ಮೆ ಸೊಪ್ಪಿನ (ಹಿಪ್ಪು ನೇರಳೆ) ಗಿಡ­ಗಳ ಸಾಲು­ಗಳ ಮಧ್ಯೆ ಹೊಂಗೆ ಸೊಪ್ಪಿನ ಹಾಸನ್ನು ಮಾಡಿ­ದ್ದಾರೆ. ಇದಕ್ಕೆ ಸೆಗಣಿ ಗೊಬ್ಬರ ಮತ್ತು ನೀರನ್ನು ಕಾಲ­ಕಾ­ಲಕ್ಕೆ ಬಿಡು­ವು­ದ­ರಿಂದ ಎರೆ­ಹು­ಳು­ಗಳು ಉತ್ಪ­ತ್ತಿ­ಯಾ­ಗು­ತ್ತಿದೆ. ಗೀಡ­ಗಳು ರೋಗ ರಹಿ­ತ­ವಾಗಿ ಉತ್ತಮ ಸೊಪ್ಪು ಬಿಡು­ತ್ತಿದೆ.
ಇಂಗು ­ಗುಂಡಿ: ಗಿರೀಶ್‌ ಅವರ ಜಮೀನು ದೊಡ್ಡ ಗುಡ್ಡದ ಬುಡ­ದ­ಲ್ಲಿದೆ. ರಾಮ­ನ­ಗರ ಜಿಲ್ಲೆ­ಯಲ್ಲಿ ಮಳೆಯ ಪ್ರಮಾಣ ಕಡಿಮೆ ಇರು­ವು­ದ­ರಿಂದ ಜಮೀ­ನಿಗೆ ನೀರಿನ ಅಗ­ತ್ಯ­ವಿತ್ತು. ಅದ­ಕ್ಕಾಗಿ ಇವರು ಕಂಡು ಕೊಂಡ ಪರಿ­ಹಾ­ರ­ವೆಂ­ದರೆ ಇಂಗು­ಗುಂ­ಡಿ­ಯನ್ನು ಮಾಡಿ­ಕೊ­ಳ್ಳು­ವುದು.
ಅದ­ಕ್ಕಾಗಿ ಇವರು ತಮ್ಮ ಜಮೋ­ನಿನ ಮೇಲ್ಬಾ­ದಲ್ಲಿ9 ಹತ್ತು ಅಡಿ ಆಳ, 30 ಅಡಿ ಉದ್ದ, 40 ಅಡಿ ಅಗ­ಲದ ಇಂಗು­ಗುಂ­ಡಿ­ಯನ್ನು ತೊಡಿ­ದರು. ಬಿದ್ದ ಕಡಿಮೆ ಮಳೆಯ ನೀರು ಗುಡ್ಡ­ದಿ­ಮದ ಹರಿದು ಬಂದು ಇಂಗು­ಗುಂ­ಡಿ­ಯಲ್ಲಿ ಶೇಖ­ರಣೆ ಆಗು­ತ್ತಿದೆ. ಇದ­ರಿಂದ ಜಮೀ­ನಲ್ಲಿ ಇರುವ ಬಾವಿ ಸದಾ ತುಂಬಿ­ರು­ತ್ತದೆ. ಅಲ್ಲದೆ ಇವರ ಜಮೀ­ನಿನ ಪಕ್ಕ­ದ­ಲ್ಲಿ­ರುವ ಮಾವಿನ ತೋಟಕ್ಕೂ ಅನು­ಕೂ­ಲ­ವಾ­ಗಿ­ರು­ವುದು ಕಂಡು ಬಂದಿದೆ.
`ರೈತ ಸಂಘದ ಸೋಮ­ಲಿಂ­ಗಯ್ಯ ಹಾಗೂ ಪುಟ್ಟ­ಸ್ವಾಮಿ ಸಹ­ಕಾ­ರ­ದಿಂದ ಸುಸ್ಥಿರ ಕೃಷಿ ತರ­ಬೇ­ತಿಗೆ ಹೋಗಿ ಬಂದ ಮೇಲೆ ಇಂತಹ ದೇಶೀ ಕೃಷಿ ಬಗ್ಗೆ ಜಾಗೃ­ತ­ನಾ­ಗಿ­ದ್ದೇನೆ. ಖರ್ಚು ಕಡಿ­ಮೆ­ಯಾ­ಗು­ತ್ತದೆ. ಇಂಗು ಗುಂಡಿ ಮಾಡಿ­ಕೊಂ­ಡಿ­ರು­ವು­ದ­ರಿಂದ ನೀರಿನ ಸಮಸ್ಯೆ ಇಲ್ಲ. ನಾನು ಮಾಡು­ತ್ತಿರು ಕೃಷಿ ಕ್ರಮಕ್ಕೆ ಮನೆ­ಯ­ವರ ಸಹ­ಕಾ­ರವು ಇದೆ' ಎಂದು ಗಿರೀಶ್‌ ಹೇಳು­ತ್ತಾರೆ.
ಮಾಹಿ­ತಿ­ಗಾಗಿ: ಗಿರೀಶ್‌ s/o ಶಿವಣ್ಣ
ಅರ­ಳಾ­ಳು­ಸಂದ್ರ,
ವಿರು­ಪಾ­ಕ್ಷ­ಪುರ ಹೋಬಳಿ
ಚನ್ನ­ಪ­ಟ್ಟಣ, ರಾಮ­ನ­ಗರ
ದೂರ­ವಾಣಿ: 9900804677