Friday, February 27, 2009

ಮೌಲ್ಯವರ್ಧನೆ


ಅದು ಪುಡಿ. ಈರುಳ್ಳಿಯ ಪುಡಿ. ನಿಮಗೆ ಈರುಳ್ಳಿಯ ಪುಡಿ ಬೇಡ ಈರುಳ್ಳಿಯೇ ಬೇಕು ಅನಿಸುತ್ತದೆ. ವೆರಿ ಸಿಂಪಲ್‌. ಆ ಪುಡಿಯನ್ನು ನೀರಿಗೆ ಹಾಕಿದರಾಯಿತು. ಈರುಳ್ಳಿ ರೆಡಿ.
ಇದೇನು ಶಂಕರ್‌ ಅವರ ಮ್ಯಾಜಿಕ್‌ ಅಲ್ಲ. ಅಥವಾ ಮಂಕುಬೂದಿಯ ಮಂತ್ರ ಅಲ್ಲ. ವಾಸ್ತವ. ಕಾಲ ಬದಲಾಗಿದೆ ಎನ್ನುವುದಕ್ಕೆ ಸಾಕ್ಷಿಯೋ ಎಂಬಂತೆ ಈಗ ಈರುಳ್ಳಿ ಪುಡಿಯನ್ನು ನೀರಲ್ಲಿ ಹಾಕಿ ಈರುಳ್ಳಿಯ ಮೂಲರೂಪವನ್ನು ಪಡೆಯಬಹುದು. ಈರುಳ್ಳಿ ಮಾತ್ರವಲ್ಲ, ಬೆಂಡೆಕಾಯಿ, ಬೆಳ್ಳುಳ್ಳಿ ಮುಂತಾದ ತರಕಾರಿ ಹಾಗೂ ಹಣ್ಣುಗಳಿಗೂ ಇದೇ ಕಥೆ ಅನ್ವಯಿಸುತ್ತದೆ.
ಹೌದು, ಮೌಲ್ಯವರ್ಧನೆ ಎಂಬ ಪರಿಕಲ್ಪನೆ ಇದನ್ನೆಲ್ಲ ಈಗ ಸಾಧ್ಯವಾಗಿಸಿದೆ. ಇದೂ ಮೌಲ್ಯವರ್ಧನೆಯ ಒಂದು ರೂಪ. ಹೀಗೆ ವಿವಿಧ ಆಹಾರ ಪದಾರ್ಥಗಳ ಮೌಲ್ಯವರ್ಧನೆ ಮಾಡುವ ಕೆಲಸವನ್ನು ಮಹಾರಾಷ್ಟ್ರದ ಜಲಗಾಂವ್‌ನ ಜೈನ್‌ ಕಂಪನಿ ಅವರು ಮಾಡುತ್ತಿದ್ದಾರೆ.
ಹಲವಾರು ಅಂಗ ಸಂಸ್ಥೆಗಳನ್ನು ಒಳಗೊಂಡಿರುವ ಜೈನ್‌ ಕಂಪನಿ, 1995ರಿಂದ ಆಹಾರದ ಮೌಲ್ಯವರ್ಧನೆ ಮಾಡುವ ಕೆಲಸ ಪ್ರಾರಂಭಿಸಿತು. ರಫ್ತಿಗಾಗಿ ಮೌಲ್ಯವರ್ಧನೆ ಮಾಡಬೇಕಿದ್ದರೆ ಅಂತಾರಾಷ್ಟ್ರೀಯ ಆಹಾರ ಸಂಸ್ಥೆ ಮತ್ತು ಐಎಸ್‌ಒ 20000 ಇದರ ಗುಣಮಟ್ಟವನ್ನು ಪಡೆದಿರಬೇಕಾಗುತ್ತದೆ. ಇದನ್ನು ಪಡೆಯುವಾಗ ಹರಸಾಹಸ ಪಡಬೇಕು. ಅದಕ್ಕಾಗಿ ಕಂಪನಿ ಅವರು ವ್ಯವಸ್ಥಿತ ಚಿತ್ರಣವನ್ನು ನೀಡಬೇಕು. ಅದನ್ನು ಅಂತಾರಾಷ್ಟ್ರೀಯ ಗುಣಮಟ್ಟ ನಿರ್ಧಾರ ಸಮಿತಿ ಅವರು ನಿಶಾನೆ ತೋರಿಸಿದ ನಂತರ ಆಹಾರೋತ್ಪಾನೆಯನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ರಫ್ತು ಮಾಡುವ ದೇಶಗಳ ಆಹಾರ ಗುಣಮಟ್ಟಕ್ಕೆ ಸರಿಯಾಗಿ ಮತ್ತು ಗ್ರಾಹಕರ ಮನಸ್ಥಿತಿ ಮತ್ತು ಬೇಡಿಗೆ ಅನುಗುಣವಾಗಿ ರಫ್ತು ಮಾಡಬೇಕಾಗುತ್ತದೆ. ಇದನ್ನು ಜೈನ್‌ ಕಂಪನಿ ಸಾಧಿಸಿದೆ.
ಮೌಲ್ಯವರ್ಧನೆಯ ರೂಪ ಮತ್ತು ಪದಾರ್ಥಗಳು: ಮೌಲ್ಯವರ್ಧನೆಗೆ ಬಹಳಷ್ಟು ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳದೆ ಸಿಮೀತ ಪದಾರ್ಥಗಳನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚು ಪ್ರಮಾಣದಲ್ಲಿ ಮಾಡುತ್ತಿದ್ದಾರೆ.
ಇವರು ತಯಾರಿಸುವ ಪದಾರ್ಥದ ಮೌಲ್ಯವನ್ನು ಹೆಚ್ಚಿಸಲು ಅನುಸರಿಸಿದ ಕ್ರಮವೆಂದರೆ ನಿರ್ಜಲೀಕರಣ ಮಾಡುವುದು. ಬಹಳ ಕಾರದ ಅಂಶ ಹೆಚ್ಚಿರುವ ಬಿಳಿ ಈರುಳ್ಳಿಯನ್ನು ಬಳಸುತ್ತಾರೆ. ನಮ್ಮಲ್ಲಿ ಬೆಳೆಯುವ ಕೆಂಪು ಈರುಳ್ಳಿ ನಿರ್ಜಲೀಕರಣಕ್ಕೆ ಸೂಕ್ತವಾಗುವುದಿಲ್ಲ. ಇದರಂತೆ ಬೆಳ್ಳುಳ್ಳಿ, ಕೆಂಪು ಮೆಣಸು, ದೊಣ್ಣೆ ಮೆಣಸು, ಟೊಮೆಟೋ ಮುಂತಾದ ತರಕಾರಿಗಳ ನಿರ್ಜಲೀಕರಿಸುತ್ತಾರೆ. ಇದು ಪೌಡರ್‌ ರೂಪದಲ್ಲಿರುತ್ತದೆ.
ತರಕಾರಿಯ ಜೊತೆಗೆ ಹಣ್ಣುಗಳನ್ನು ಶೀತಲೀಕರಣಗೊಳಿಸಿ ವಿದೇಶದಲ್ಲಿ ಮಾರುಕಟ್ಟೆಯನ್ನು ಕಂಡು ಕೊಂಡಿದ್ದಾರೆ. ಮಾವು, ಪೇರಲೆ, ದಾಳಿಂಬೆ, ಬಾಳೆಹಣ್ಣು, ನೆಲ್ಲಿಕಾಯಿಗಳನ್ನು ನಿರ್ಜೀವಗೊಳಿಸುತ್ತಾರೆ. ಹೀಗೆ ಮಾಡಿದರು ಇದರಲ್ಲಿರುವ ಜೀವಕೋಶಗಳು ಸಾಯುವುದಿಲ್ಲ. ಒಂದು ವರ್ಷದ ನಂತರ ಇದನ್ನು ಸಾಮಾನ್ಯ ವಾತಾವರಣದಲ್ಲಿಟ್ಟರೆ ತಾಜಾ ಹಣ್ಣಿನಂತೆಯೇ ಗ್ರಾಹಕರಿಗೆ ದೊರೆಯುತ್ತದೆ.
ನಿರ್ಜಲೀಕರಿಸಿದ ತರಕಾರಿಗಳು ಎಲ್ಲಾ ರೀತಿಯ ಆಹಾರಗಳಿಗೆ ಉಪಯೋಗಿಸುವಂತೆ ಇರುತ್ತದೆ. ಸಾಂಬಾರ, ಫೀಜಾ ಮುಂತಾದ ಆಹಾರಗಳಿಗೆ ನೇರವಾಗಿ ಬಳಸಬಹುದು. ಇದೊಂದು ಉಪಯೋಗಿಸುವವರಿಗೆ ಮಿತ್ರನಂತೆ ಇರುತ್ತದೆ. ಉಪಯುಕ್ತವಾಗಿಯೂ, ದೀರ್ಘ ಬಾಳಿಕೆಯೂ ಬರುತ್ತದೆ.
ಶೀತಿಲಗೊಳಿಸಿದ ಹಣ್ಣುಗಳನ್ನು ಪಾನೀಯಗಳನ್ನು ತಯಾರಿಸಲು, ಐಸ್‌ಕ್ರಿಮ್‌ಗೆ, ಹಣ್ಣುಗಳ ಮಿಶ್ರಣ (ಸಲಾಡ್‌)ಕ್ಕೆ ಬಳಸಲು ಯೋಗ್ಯವಾಗಿರುತ್ತದೆ. ಇದು ಯಾವುದೇ ರೀತಿಯ ರಾಸಾಯನಿಕಗಳನ್ನು ಒಳಗೊಂಡಿರದೇ ಬಹುದಿನ ಹಾಳಗಾದೇ ಇರುತ್ತದೆ.
ಮೌಲ್ಯವರ್ಧನೆ ಶ್ರಮ: ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಬಳಸುವ ತರಕಾರಿ, ಹಣ್ಣುಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕಾಗುತ್ತದೆ. ಇದನ್ನು ಸಾಮಾನ್ಯ ರೈತರಿಂದ ಪಡೆಯಲು ಸ್ವಲ್ಪ ಕಷ್ಟವೇ ಸರಿ. ಅದಕ್ಕಾಗಿ ಜೈನ್‌ ಕಂಪನಿ ರೈತರೊಂದಿಗೆ ಕರಾರು ಕೃಷಿಯನ್ನು ಮಾಡುತ್ತಿದೆ. ಬಹಳಷ್ಟು ಕೃಷಿಕರಿಗೆ ಕರಾರು ಕೃಷಿ ಆಸಕ್ತಿದಾಯಕವು ಅಲ್ಲ ಮತ್ತು ನಂಬಿಕೆಗೆ ಅರ್ಹವಲ್ಲ ಎಂಬ ಭಾವನೆಯು ಇದೆ. ಆದರೆ ಇವರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುತ್ತಿದ್ದಾರೆ. ಇವರು ಹೆಚ್ಚಾಗಿ ಬಿಳಿ ಈರುಳ್ಳಿಯ ಕರಾರು ಕೃಷಿಗೆ ಒಳಪಡಿಸಿದ್ದಾರೆ. ಇದಕ್ಕೆ ಕಾರಣವು ಇದೆ. ಭಾರತೀಯ ತಳಿಗಳು ಈರುಳ್ಳಿಯನ್ನು ನಿರ್ಜಲೀಕರಣಗೊಳಿಸುವುದು ಕಷ್ಟ. ಅದಕ್ಕಾಗಿ ಅಮೇರಿಕಾದ ತಳಿಯನ್ನು ಬಳಸಬೇಕಾಗುತ್ತದೆ.
ಇವರ ಕರಾರು ಕೃಷಿಯಲ್ಲಿ ಬೀಜ, ಪೋಷಕಾಂಶ ಹಾಗೂ ನೀರಾವರಿ ವ್ಯವಸ್ಥೆಯನ್ನು ಇವರೇ ಮಾಡುತ್ತಾರೆ. ರೈತರ ಹೊಲದಲ್ಲಿ ಬೆಳೆಸಿದ ಈರುಳ್ಳಿಯನ್ನು ಕೊಯ್ಲು ಮಾಡುವಾಗ ಇರುವ ಮಾರುಕಟ್ಟೆಯ ಮೌಲ್ಯದಲ್ಲಿ ಖರೀದಿಸುತ್ತಾರೆ. ಒನ್ನೊಮ್ಮೆ ಮಾರುಕಟ್ಟೆ ಮೌಲ್ಯ 3 ರೂಪಾಯಿಗಿಂತ ಕಡಿಮೆ ಇದ್ದರೆ ಇವರು ರೈತರಿಗೆ ಕನಿಷ್ಠ 3 ರೂಪಾಯಿಯನ್ನು ನೀಡುತ್ತಾರೆ.
`ನಮ್ಮ ಕಂಪನಿ ಇರುವವರೆಗೆ ಕರಾರು ಕೃಷಿಯಲ್ಲಿ ಯಾವುದೇ ರೀತಿಯ ಗೊಂದಲಗಳು ಆಗುವುದಿಲ್ಲ.ರೈತರನ್ನು ಸೋಲಿಸುವ ಕೆಲಸಕ್ಕೂ ಕೈ ಹಾಕುವುದಿಲ್ಲ.ಅವರಿಗೆ ಅನುಕೂಲವಾಗುವ ರೀತಿಯಲ್ಲಿ ನಾವುಕರಾರನ್ನು ಮಾಡಿಕೊಳ್ಳುತ್ತಿದ್ದೇವೆ. ನಾವು ಈ ರೀತಿಯಲ್ಲಿ ಈರುಳ್ಳಿಯನ್ನು ಖರೀದಿಸಿದರೂ ನಮ್ಮ ಬೇಡಿಕೆಗೆ ಸಾಕಾಗುತ್ತಿಲ್ಲ. ಹೊರಗಡೆಯಿಂದಲೂ ಖರೀದಿ ಮಾಡತ್ತಿದ್ದೇವೆ' ಎನ್ನುವ ಮಾತನ್ನು ಕಂಪನಿ ಮುಖ್ಯಸ್ಥ ಅಜಿತ್‌ ಜೈನ್‌ ಹೇಳುತ್ತಾರೆ.
ಹಣ್ಣಿನ ಮೌಲ್ಯವರ್ಧನೆಗೆ ಬೇಕಾಗುವ ಮಾವನ್ನು ಕೋಲಾರ ಮತ್ತು ಧಾರವಾಡದಿಂದ ಹೆಚ್ಚು ಖರೀಸುತ್ತಿದ್ದಾರೆ. ಇಂತಹ ಮೌಲ್ಯವರ್ಧನೆ ಮಾಡುವ ಘಟಕಗಳೂ ಕರ್ನಾಟಕಕ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗಮನ ಹರಿಸಿದರೆ ಬಹಳಷ್ಟು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಪ್ರಮೇಯ ಬರುವುದಿಲ್ಲ.
ಮಾಹಿತಿಗಾಗಿ ಸಂಪರ್ಕಿಸಿ: ಚಿದಂಬರ ಜೋಶಿ ಸಿಟಿಎಸ್‌ ನಂ. 7737, 24/13, ಸೆಕ್ಟರ್‌ 12, ಕುಸ್ರೋ ನಗರ, ಮಾಳಮಾರುತಿ ಎಕ್ಸ್‌ಟೆನ್ಷನ್‌, ಬೆಳಗಾವಿ-16, ದೂರವಾಣಿ: 9448286508.
ನಾಗರಾಜ ಮತ್ತಿಗಾರ

Monday, February 23, 2009

ರಂಗಿಲ್ಲದ ರೇಷಿಮೆ


ಆರ್ಥಿಕ ಬಿಕ್ಕ­ಟ್ಟಿನ ಪರಿ­ಣಾಮ ರೇಷ್ಮೆ ಕೃಷಿ-ಕೈಗಾ­ರಿ­ಕೆ­ಗಳ ಮೇಲೆ ಪರಿ­ಣಾಮ ಬೀರಿದ್ದು, ರೇಷ್ಮೆ ಉದ್ಯಮ ತತ್ತ­ರಿ­ಸು­ತ್ತಿದೆ.
ಆಹಾರ ಪದಾ­ರ್ಥ­ವ­ಲ್ಲ­ದಿ­ದ್ದರೂ ಕೃಷಿ­ಕ­ರಿಗೆ ಸಾಕಷ್ಟು ಆದಾಯ ತಂದು ಕೊಡುವ ಕ್ಷೇತ್ರ ರೇಷ್ಮೆ. ಉಳಿ­ದೆಲ್ಲಾ ವಸ್ತು­ಗಳ ಬೆಲೆ ಕುಸಿ­ದರೂ ಆಲಂ­ಕಾ­ರಿಕ ಉತ್ಪ­ನ್ನ­ಗಳ ತಯಾ­ರಿ­ಕೆಯ ಕಚ್ಚಾ­ವ­ಸ್ತು­ವಾದ ರೇಷ್ಮೆ ಬೆಲೆ ಅಷ್ಟಾಗಿ ಇಳಿ­ಕೆ­ಯಾ­ಗು­ತ್ತಿ­ರ­ಲಿಲ್ಲ. ಅಗ­ತ್ಯ­ದಷ್ಟು ರೇಷ್ಮೆ ಉತ್ಪಾ­ದ­ನೆ­ಯಾ­ಗದೇ ಇರು­ವುದು ಇದಕ್ಕೆ ಕಾರ­ಣ­ವಾದ ಪ್ರಮುಖ ಅಂಶ­ವಾ­ಗಿತ್ತು. ದೇಶೀಯ ಬಳಕೆ ಜತೆ­ಯ­ಲ್ಲಿಯೇ ಭಾರ­ತೀಯ ಮೂಲದ ಅಪ್ಪಟ ರೇಷ್ಮೆಗೆ ವಿದೇಶಿ ನೆಲೆ­ಯಲ್ಲಿ ಬೇಡಿಕೆ ಸಾಕ­ಷ್ಟಿತ್ತು. ಭಾರ­ತದ ರೇಷ್ಮೆಗೆ ಚೈನಾ ಪ್ರಬಲ ಪೈಪೋಟಿ ನೀಡು­ತ್ತಿ­ದ್ದರೂ ಶುದ್ಧ­ತೆ­ಯಲ್ಲಿ ಸ್ಪರ್ಧಿ­ಸ­ಲಾ­ಗದೇ ವಿದೇಶಿ ರಾಷ್ಟ್ರ­ಗ­ಳಲ್ಲಿ ಭಾರ­ತದ ರೇಷ್ಮೆ ತನ್ನ ಅಸ್ತಿತ್ವ ಉಳಿ­ಸಿ­ಕೊಂ­ಡಿತ್ತು.
ಸ್ಥಳೀಯ ಬೇಡಿಕೆ ಪೂರೈ­ಸ­ಲಾ­ಗದೇ ಇದ್ದರೂ, ವಿದೇ­ಶಕ್ಕೆ ರಫ್ತು ಮಾಡುವ ಕಾರ­ಣ­ದಿಂ­ದಲೇ ರೇಷ್ಮೆ ಉದ್ಯಮ ಈ ಪರಿ ಬೆಳೆ­ದಿತ್ತು. ಭಾರ­ತದ ಉತ್ಪ­ನ್ನ­ಗಳ ಪ್ರಮುಖ ಮಾರು­ಕ­ಟ್ಟೆ­ಯಾ­ಗಿದ್ದ ಅಮೆ­ರಿಕ, ಬ್ರಿಟನ್‌, ಅರಬ್‌ ರಾಷ್ಟ್ರ­ಗಳು, ಇಟಲಿ ಹಾಗೂ ಜರ್ಮ­ನಿ­ಯಿಂದ ರೇಷ್ಮೆ ಬೇಡಿ­ಕೆಗೆ ಕಡಿ­ವಾಣ ಬಿದ್ದಿದೆ. ವಿಶ್ವ ಆರ್ಥಿಕ ಹಿಂಜ­ರಿ­ತದ ಪರಿ­ಣಾಮ ದುಭಾರಿ ವಸ್ತು­ಗಳ ಮಾರು­ಕಟ್ಟೆ ಮೇಲೆ ಅಡ್ಡ ಪರಿ­ಣಾಮ ಬೀರಿದ್ದೇ ಈ ಯಡ­ವ­ಟ್ಟಿಗೆ ಕಾರಣ. ಈ ಆರ್ಥಿಕ ವರ್ಷಾಂ­ತ್ಯ­ದೊ­ಳಗೆ ಶೇ.50 ರಷ್ಟು ಬೇಡಿಕೆ ಕಡಿ­ಮೆ­ಯಾ­ಗ­ಬ­ಹು­ದೆಂದು ಕೇಂದ್ರೀಯ ರೇಷ್ಮೆ ಮಂಡಳಿ ಅಂದಾ­ಜಿ­ಸಿದೆ. ಇದು ಇಡೀ ಭಾರ­ತದ ರೇಷ್ಮೆ ಬೆಳೆ, ಉತ್ಪಾ­ದನೆ ಹಾಗೂ ಉದ್ಯ­ಮದ ಮೇಲೆ ತೀಕ್ಷ್ಣ ಪರಿ­ಣಾಮ ಬೀರ­ಲಿದೆ.
ಗರಿ ಗರಿ ರೇಷ್ಮೆ:
ಇಡೀ ವಿಶ್ವ­ದಲ್ಲಿ ರೇಷ್ಮೆ ಉತ್ಪಾ­ದಿ­ಸುವ ಪ್ರಮುಖ ರಾಷ್ಟ್ರ­ಗ­ಳೆಂ­ದರೆ ಚೀನಾ ಮತ್ತು ಭಾರತ. ವಿಶ್ವ­ದಲ್ಲಿ ವಾರ್ಷಿಕ 1,53,000 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾ­ದ­ನೆ­ಯಾ­ಗು­ತ್ತದೆ. ಇದ­ರಲ್ಲಿ ಪ್ರಮುಖ ಪಾಲು ಚೀನಾ­ದ್ದಾ­ಗಿದ್ದು, 1,30,000 ಟನ್‌­ಗ­ಳ­ಷ್ಟಿದೆ. ಭಾರ­ತವು 18,320 ಟನ್‌­ಗ­ಳಷ್ಟು ಮಾತ್ರ ಕಚ್ಚಾ ತಯಾ­ರಿ­ಸು­ತ್ತದೆ.
ರೇಷ್ಮೆ ಕೃಷಿ, ರೀಲಿಂಗ್‌, ವೀಲಿಂಗ್‌, ಗ್ರೇಡಿಂಗ್‌ ಹೀಗೆ ಒಟ್ಟು 61 ಲಕ್ಷ ಮಂದಿಗೆ ರೇಷ್ಮೆ ಉದ್ಯೋಗ ಒದ­ಗಿ­ಸಿದೆ. ಈ ಪೈಕಿ ಶೇ.60 ರಷ್ಟು ಮಂದಿ ಮಹಿ­ಳೆ­ಯ­ರಿ­ದ್ದಾರೆ.
ವಿಶ್ವ­ದಲ್ಲಿ ಎರ­ಡನೇ ರಾಷ್ಟ್ರ ಭಾರ­ತ­ವಾ­ಗಿ­ದ್ದರೆ, ಭಾರ­ತ­ದಲ್ಲಿ ಕರ್ನಾ­ಟಕ ಮೊದಲ ಸ್ಥಾನ­ದ­ಲ್ಲಿದೆ. ದೇಶ­ದಲ್ಲಿ ಒಟ್ಟು 18 ಸಾವಿರ ಟನ್‌­ಗ­ಳಷ್ಟು ರೇಷ್ಮೆ ಬೆಳೆ­ಯು­ತ್ತಿ­ದ್ದರೆ ಇದ­ರಲ್ಲಿ ಕರ್ನಾ­ಟ­ಕದ ಪಾಲು 14 ಸಾವಿರ ಟನ್‌. ಅಂದರೆ ಶೇ.70 ರಷ್ಟು ಕಚ್ಚಾ ರೇಷ್ಮೆ ಕರ್ನಾ­ಟ­ಕದ್ದೇ ಆಗಿದೆ. ಇದನ್ನು ಲೆಕ್ಕ ಹಾಕಿ­ದರೆ ರೇಷ್ಮೆ ರಫ್ತಿನ ಪ್ರಮುಖ ಪಾಲು ಕರ್ನಾ­ಟ­ಕ­ದಿಂ­ದಲೇ ಆಗು­ತ್ತದೆ.
ಕರ್ನಾ­ಟ­ಕದ ಕೋಲಾರ, ರಾಮ­ನ­ಗರ, ಚಿತ್ರ­ದುರ್ಗ, ಚಿಕ್ಕ­ಬ­ಳ್ಳಾ­ಪುರ, ಹಾಸನ, ಶಿವ­ಮೊಗ್ಗ, ದಾವ­ಣ­ಗೆರೆ, ಮೈಸೂರು ಮತ್ತಿ­ತರ ಜಿಲ್ಲೆ­ಗ­ಳಲ್ಲಿ ರೇಷ್ಮೆ ಕೃಷಿ­ಯಲ್ಲಿ ತೊಡ­ಗಿ­ಕೊಂಡ ಸಾಕಷ್ಟು ಮಂದಿ­ಯಿ­ದ್ದಾರೆ. ಉತ್ತ­ರದ ಜಿಲ್ಲೆ­ಗಳೂ ಇದ­ರಿಂದ ಹೊರ­ತಲ್ಲ.
ಕೆಲವು ರೈತ­ರಿಗೆ ರೇಷ್ಮೆ ಕೃಷಿ ಉಪ ಕಸುಬು ಆಗಿ­ದ್ದರೆ ಇನ್ನು ಕೆಲ­ವರು ಪ್ರಮು­ಖ­ವಾಗಿ ಇದನ್ನು ಅವ­ಲಂ­ಬಿ­ಸಿ­ದ್ದಾರೆ. ಮಾರು­ಕಟ್ಟೆ ಕೊರತೆ ಮಧ್ಯೆಯೂ ರೇಷ್ಮೆ ಕೃಷಿ­ಯನ್ನು ಜೀವಂ­ತ­ವಾಗಿ ಇಟ್ಟಿ­ರು­ವುದು ರೈತರ ಸಾಧ­ನೆಯೇ ಸರಿ. ಏಕೆಂ­ದರೆ ರೇಷ್ಮೆಯ ಪ್ರಮುಖ ಮಾರು­ಕಟ್ಟೆ ರಾಮ­ನ­ಗರ(ಈಗ ಜಿಲ್ಲಾ ಕೇಂದ್ರ­ವಾ­ಗಿ­ರುವ)ದಲ್ಲಿ ಮಾತ್ರ­ವಿದ್ದು, ರಾಜ್ಯದ ಯಾವುದೇ ಭಾಗದ ರೈತ ಇಲ್ಲಿಗೆ ತಂದು ಮಾರ­ಬೇಕು. ಇಲ್ಲಾ ಆಯಾ ಜಿಲ್ಲೆ­ಗಳ ದಲ್ಲಾ­ಳಿ­ಗ­ಳಿಗೆ ಮಾರ­ಬೇ­ಕಾದ ಅನಿ­ವಾ­ರ್ಯ­ತೆ­ಯಿದೆ.
ರೇಷ್ಮೆ ಕೃಷಿ ಉಳಿದ ಕೃಷಿ­ಗ­ಳಂ­ತಲ್ಲ. ಅದಕ್ಕೆ ತನ್ನದೇ ಆದ ನಾಜೂಕು ಬೇಕು. ರೇಷ್ಮೆ ಹುಳು­ಗ­ಳಿಗೆ ಬೇಕಾದ ಆಹಾರ( ಹಿಪ್ಪು ನೇರಳೆ ಸೊಪ್ಪು) ಬೆಳೆ­ಯ­ಬೇಕು, ಅದನ್ನು ತಂದು ಓರಣ ಮಾಡ­ಬೇಕು. ರೇಷ್ಮೆ ತಟ್ಟಿ­ಗ­ಳಲ್ಲಿ ಆ ಸೊಪ್ಪು­ಗ­ಳನ್ನು ನೀಟಾಗಿ ಕತ್ತ­ರಿಸಿ ಹಾಕಿ, ಹುಳು­ಗ­ಳನ್ನು ಅದಕ್ಕೆ ಬಿಡ­ಬೇಕು. ಸೊಪ್ಪಿ­ನಲ್ಲಿ ರೋಗಾ­ಣು­ಗ­ಳಿ­ದ್ದರೆ ಅಥವಾ ರೇಷ್ಮೆ ತಟ್ಟಿ­ಗ­ಳಲ್ಲಿ ಸೋಂಕಿ­ದ್ದರೆ ಅಷ್ಟೂ ಹುಳು­ಗಳು ಪ್ರಾಣ ಬಿಡು­ತ್ತವೆ. ಹುಳು­ಗ­ಳಿಗೆ ಕೊಟ್ಟ ದುಡ್ಡು ಕೂಡ ವಾಪಸ್ಸು ಬರದು. ಹಾಗೆಯೇ ಹುಳು ಬಲಿತು, ಗೂಡು ಕಟ್ಟಿ ರೇಷ್ಮೆ ನೂಲನ್ನು ತಯಾ­ರಿ­ಸು­ವ­ವ­ರೆಗೂ ಅದನ್ನು ಮಗು­ವಿ­ನಂತೆ ಆರೈಕೆ ಮಾಡ­ಬೇಕು. ನಿಜ­ವಾಗಿ ಹೇಳ­ಬೇ­ಕೆಂ­ದರೆ ಬಾಣಂ­ತಿ­ಯನ್ನು ಸಲ­ಹಿದ ರೀತಿಯ ಸೂಕ್ಷ್ಮತೆ ರೇಷ್ಮೆ ಕೃಷಿಗೆ ಅಗತ್ಯ.
ಇತ್ತೀ­ಚಿನ ವರ್ಷ­ಗ­ಳಲ್ಲಿ ಬೆಲೆ ಉತ್ತ­ಮ­ವಾ­ಗಿ­ದೆ­ಯಾ­ದರೂ ಕೂಲಿ­ಗಳ ಸಮ­ಸ್ಯೆ­ಯಿಂದ ರೈತರು ಬಸ­ವ­ಳಿ­ದಿ­ದ್ದಾರೆ. ಮೇಲೆ ಉಲ್ಲೇ­ಖಿ­ಸಿ­ದಂ­ತಹ ಅಷ್ಟೂ ಕೆಲ­ಸ­ವನ್ನು ಕೇವಲ ಮನೆ­ಯಂದಿ ಮಾಡ­ಲಾ­ಗು­ವು­ದಿಲ್ಲ. ಅದಕ್ಕೆ ಸೂಕ್ಷ್ಮ­ತೆ­ಯುಳ್ಳ ಕೃಷಿ ಕೆಲ­ಸ­ಗಾ­ರರೇ ಬೇಕು. ನಗ­ರೀ­ಕ­ರ­ಣ­ದಿಂ­ದಾಗಿ ರೇಷ್ಮೆ ಕೃಷಿ­ಕರು ಕೂಲಿ­ಕಾ­ರ್ಮಿ­ಕರ ಸಮ­ಸ್ಯೆ­ಯನ್ನು ಎದು­ರಿ­ಸು­ತ್ತಿ­ದ್ದಾರೆ.
ಇದರ ಜತೆಗೆ ಮಲ­ಬಾರಿ ತಳಿಗೆ ತಗು­ಲಿ­ರುವ ರೋಗ­ದಿಂ­ದಾಗಿ ಸುಮಾರು 47 ಸಾವಿರ ಹೆಕ್ಟೇ­ರ್‌­ನ­ಲ್ಲಿದ್ದ ಮಲ­ಬಾರಿ ತಳಿ­ಯನ್ನು ರೈತರು ಕಿತ್ತು­ಹಾ­ಕಿ­ದ್ದಾರೆ. ಇದು ಕೂಡ ರೈತ­ರನ್ನು ಕಾಡು­ತ್ತಿ­ರುವ ಸಮ­ಸ್ಯೆ­ಯಾ­ಗಿದೆ.
ಇದರ ಜತೆಗೆ ರೇಷ್ಮೆ ನೂಲು ತೆಗೆ­ಯು­ವ­ವರು, ರೇಷ್ಮೆ ಮಗ್ಗ­ಗ­ಳಲ್ಲಿ ರೈತ­ರಷ್ಟೇ ಪ್ರಮಾ­ಣ­ದಲ್ಲಿ ಕೆಲಸ ಮಾಡು­ವ­ವ­ರಿ­ದ್ದಾರೆ. ಗ್ರೇಡಿಂಗ್‌, ಬಣ್ಣ ಹಾಕು­ವ­ವರು ಕೂಡ ಸಮ­ಪ್ರ­ಮಾ­ಣ­ದ­ಲ್ಲಿ­ದ್ದಾರೆ. ಮಾರು­ಕಟ್ಟೆ ಮಾಡು­ವ­ವ­ರನ್ನು ಹೊರತು ಪಡಿ­ಸಿಯೂ ನೇರ­ವಾಗಿ ರೇಷ್ಮೆ ಕೃಷಿ-ಉದ್ಯ­ಮ­ದಲ್ಲಿ ಸಾಕಷ್ಟು ಮಂದಿ ತೊಡ­ಗಿ­ದ್ದಾರೆ. ವಿದೇ­ಶದ ರಫ್ತು ಶೇ.50 ರಷ್ಟು ಕುಸಿತ ಕಂಡ ಪರಿ­ಣಾಮ ಇವ­ರೆಲ್ಲಾ ತತ್ತ­ರಿ­ಸ­ಲಿ­ದ್ದಾರೆ. ದೇಶ­ದಲ್ಲಿ ಒಟ್ಟು 61 ಲಕ್ಷ ಮಂದಿ ರೇಷ್ಮೆ­ಯನ್ನು ನೆಚ್ಚಿ­ಕೊಂ­ಡಿದ್ದು, ಮಾರ್ಚ್‌ ಅಂತ್ಯ­ದೊ­ಳಗೆ 6 ಲಕ್ಷ ಮಂದಿ ಕೆಲಸ ಕಳೆ­ದು­ಕೊ­ಳ್ಳ­ಲಿ­ದ್ದಾ­ರೆಂದು ಅಂದಾ­ಜಿ­ಸ­ಲಾ­ಗಿದೆ.
ಚೀನಾ ರೇಷ್ಮೆ:
ಭಾರ­ತ­ದಲ್ಲಿ ಕಚ್ಚಾ ರೇಷ್ಮೆ, ರೇಷ್ಮೆ ಉತ್ಪನ್ನ ಸ್ಥಳೀಯ ಬೇಡಿ­ಕೆ­ಯನ್ನು ಪೂರೈ­ಸುವ ಮಟ್ಟ­ದ­ಲ್ಲಿಲ್ಲ. ಈ ಮಾರು­ಕಟ್ಟೆ ಕೊರತೆ ಹಾಗೂ ಭಾರ­ತದ ರೇಷ್ಮೆಗೆ ವಿದೇಶಿ ಮಾರು­ಕ­ಟ್ಟೆ­ಯಲ್ಲಿ ಬೇಡಿಕೆ ಇರು­ವು­ದನ್ನು ಗಮ­ನಿ­ಸಿದ ಮಾರಾ­ಟ­ಗಾ­ರರು ಕಡಿಮೆ ದರ­ದಲ್ಲಿ ಸಿಗುವ ಚೀನಾ ರೇಷ್ಮೆಯ ಮೊರೆ ಹೋಗಿ­ದ್ದಾರೆ.
ಕಳ್ಳ ಮಾರ್ಗ­ದಿಂದ ಭಾರ­ತದ ಮಾರು­ಕ­ಟ್ಟೆಗೆ ಸಾಕಷ್ಟು ಚೀನಾ ರೇಷ್ಮೆ ಹರಿದು ಬರು­ತ್ತಿದ್ದು ಮಾರು­ಕಟ್ಟೆ ಹಾಗೂ ರೇಷ್ಮೆ ಕೃಷಿಯ ಮೇಲೆ ಹೊಡೆತ ನೀಡಿದೆ.
ರೇಷ್ಮೆ ಕೃಷಿ­ಕರ ಒತ್ತ­ಡ­ದಿಂ­ದಾಗಿ ವಿದೇ­ಶ­ದಿಂದ ಆಮ­ದಾ­ಗುವ ರೇಷ್ಮೆ ಮೇಲೆ ಆಮದು ನಿರ್ಬಂಧ ಶುಲ್ಕ­ವನ್ನು ಕೇಂದ್ರ ಸರ್ಕಾರ ವಿಧಿ­ಸಿದೆ. ಇದು 2009 ಮಾರ್ಚ್‌ಗೆ ಅಂತ್ಯ­ಗೊ­ಳ್ಳ­ಲಿದೆ. ಆರ್ಥಿಕ ಹಿಂಜ­ರಿ­ತದ ಕಾರ­ಣ­ದಿಂದ ದೇಶೀಯ ರೇಷ್ಮೆ ಕಾಪಾ­ಡಲು ಕೇಂದ್ರ ಸರ್ಕಾರ 2013 ರವ­ರೆಗೆ ಆ್ಯಂಟಿ ಡಂಪಿಂಗ್‌ ಶುಲ್ಕ­ವನ್ನು ವಿಸ್ತ­ರಿ­ಸಿದೆ.
ಹಾಗಿದ್ದೂ ರೇಷ್ಮೆ ಪರಿ­ಸ್ಥಿತಿ ಸುಧಾ­ರಿ­ಸಿಲ್ಲ. ವಿದೇ­ಶ­ದಿಂದ ಬೇಡಿಕೆ ಕಡಿ­ಮೆ­ಯಾ­ಗಿ­ರುವ ಹಿನ್ನೆ­ಲೆ­ಯಲ್ಲಿ ರೇಷ್ಮೆ ರಫ್ತು ಮೇಲೆ ಹೊಡೆತ ಬಿದ್ದಿದೆ. ಈ ಹಿನ್ನೆ­ಲೆ­ಯಲ್ಲಿ ಭತ್ತ, ರಾಗಿ, ಸೆಣಬು ಮತ್ತಿ­ತರ ಬೆಳೆ­ಗ­ಳಿಗೆ ನೀಡು­ವಂತೆ ಬೆಂಬಲ ಬೆಲೆ ನೀಡು­ವಂತೆ ಆಗ್ರಹ ಕೇಳಿ­ಬಂ­ದಿದೆ. ಇದಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡ­ಬೇ­ಕಷ್ಟೆ. ಮೈಸೂರು ಸಿಲ್ಕ್‌ ಎಂದು ಹೆಸ­ರು­ವಾ­ಸಿ­ಯಾ­ಗಿ­ರುವ ಕರ್ನಾ­ಟ­ಕದ ರೇಷ್ಮೆ­ಯನ್ನು ಉಳಿ­ಸಲು, ರೇಷ್ಮೆ ಕೃಷಿ­ಕ­ರಲ್ಲಿ ಧೈರ್ಯ ತುಂಬಲು ರಾಜ್ಯ­ಸ­ರ್ಕಾರ ಕೂಡ ಮುಂದಾ­ಗ­ಬೇ­ಕಾದ ಅಗ­ತ್ಯ­ವಿದೆ.


-ವೈ.ಗ. ಜಗದೀಶ್‌

Sunday, February 15, 2009

ಶ್ರಮ ಬೇಡದ ಶಮೆ ಬಿದಿರು


ಕಳೆದ ವರ್ಷ ಮಲೆನಾಡಿನಲ್ಲಿ ಕಾಡುಬಿದಿರಿಗೆ ಹೂಬಿಟ್ಟ ಮರಣಸಂಭ್ರಮ. ಇಷ್ಟು ದಿನ ಬಿದಿರಿನೆಡೆಗೆ ಇದ್ದ ತಾತ್ಸಾರ ಮಾಯವಾಗಿ ತತ್ವಾರ ಉಂಟಾಗುವ ಸಂಭವನೀಯತೆ. ಅದು ಬಿಡಿ, ತಮ್ಮ ಕೃಷಿ ಜೀವನದಲ್ಲಿ ಬಿದಿರಿಗೂ ಮಹತ್ವದ ಸ್ಥಾನಮೊಂದನ್ನು ನೀಡಿ, ಅದಕ್ಕೆ ಮತ್ತು ತಮ್ಮ ಬಾಳಿಗೆ ಗುರುತರ ದಾರಿ ತೋರಿದ ಕುಟುಂಬಮೊಂದು ಸಾಗರ ತಾಲ್ಲೂಕು ಹೆಗ್ಗೋಡಿನ ಸಮೀಪದಲ್ಲಿದೆ.
ಶೆಮೆ ಎಂಬುದು ಬಿದಿರಿನ ಒಂದು ವರ್ಗಕ್ಕೆ ಸೇರಿದೆ. ಇದು ಅವುಗಳಲ್ಲಿ ಸೌಂದರ್ಯ ಸ್ಪರ್ಧೆ ಇಟ್ಟರೆ ಪ್ರಥಮ ಬಹುಮಾನ ಗಿಟ್ಟಿಸುವುದು ಖಚಿತ! ಉದ್ದುದ್ದಕ್ಕೆ ಆಕಾಶಕ್ಕೆ ಚಾಚಿದಂತೆ 18 -20 ಅಡಿ ಬೆಳೆಯುವ ಈ ಬೂದು ಹಸಿರಿನ ಬಿದಿರು ಅಡಿಕೆ ತಟ್ಟಿ ಮಾಡಿಸಲು ಹೇಳಿ ಮಾಡಿಸಿದ್ದು. ಇವತ್ತು ಹೊಸನಗರದ ಜಡ್ಡಿನಕೊಪ್ಪದ ಉಮೇಶ್‌ - ಸುರೇಶ್‌ ತಮ್ಮ ಮನೆಯ ತಟ್ಟಿ, ಬುಟ್ಟಿಯ ಅಗತ್ಯವನ್ನು ನಯಾ ಪೈಸೆ ಖರ್ಚಿಲ್ಲದೆ ಪೂರೈಸಿಕೊಳ್ಳುವ ಜೊತೆಗೆ ಒಂದಿಷ್ಟು ಪುಡಿಗಾಸನ್ನೂ ಸಂಪಾದಿಸಲು ಕಾರಣವಾಗಿರುವುದು ಶೆಮೆ ಬಿದಿರು!
ಏನಿದು ಶೆಮೆ ಬಿದಿರು?
ಶೆಮೆಯಲ್ಲಿ ಗಣ್ಣುಗಳು ದೂರ ದೂರ. ಒಂದು ಒಂದೂವರೆ ಇಂಚು ದಪ್ಪ. ಇದರಿಂದ ಎತ್ತುವ ಸಲಾಕು, ಅಂದರೆ ತಟ್ಟಿ ಬುಟ್ಟಿ ಮಾಡಲು ಬಳಸುವ ಬಿದಿರ ಎಳೆಗಳು ಉಳಿದ ಬಿದಿರುಗಳಿಗಿಂತ ಗಟ್ಟಿ. ಬಾಳ್ವಿಕೆ ಹೆಚ್ಚು. ಹಾಗಾಗಿ ಶೆಮೆ ತಟ್ಟಿಗೆ ಆ ಪರಿ ಬೆಲೆ.
ಅದರಲ್ಲೂ ಜೂನ್‌ನಿಂದ ಸೆಪ್ಟೆಂಬರ್‌ ವೇಳೆ ಹೆಚ್ಚಿನ ರಕ್ಷಣೆ ಬೇಕು. ಇವು ಬೆಳವಣಿಗೆಯ ತಿಂಗಳುಗಳು. ಇದಕ್ಕೆ ಯಾವುದೇ ರೋಗವೂ ಇಲ್ಲ. ಸಾಮಾನ್ಯವಾಗಿ ಕೃಷಿಕರಲ್ಲಿ ಲಭ್ಯವಿರುವ ದರಕು, ಸೋಗೆಯಂತಹ ಸಾವಯವ ಪದಾರ್ಥಗಳನ್ನು ಬುಡಕ್ಕೆ ಹಾಕಿದರೆ ಆಯಿತು, ಅದೇ ಗೊಬ್ಬರ. ನಾಲ್ಕನೇ ವರ್ಷದಿಂದಲೇ ಬಿದಿರು ಗಳಗಳು ಕೊಯ್ಲಿಗೆ ಸಿಗುತ್ತವೆ.
ಈ ಬಿದಿರು ಬೆಟ್ಟ, ಕಾಡಲ್ಲಿ ಬೆಳೆಯಲು ಮಾತ್ರ ಯೋಗ್ಯ. ಏತಕ್ಕಪ್ಪಾಂದ್ರೆ, ಇದಕ್ಕೆ ಒಂದು ಮರದ ಆಶ್ರಯ ಬೇಕೇ ಬೇಕು. ಮರದ ಪಕ್ಕದಲ್ಲಿಯೇ ನಾಟಿ ಮಾಡಬೇಕು. ಬಿದಿರು ಬೆಳೆದಂತೆ ಮರದ ಬೆನ್ನಿಗೆ ಆತು ನೇರವಾಗಿ ಮೇಲೆ ಚಿಮ್ಮುತ್ತದೆ. ಮರದ ಆಶ್ರಯವಿಲ್ಲದಿದ್ದರೆ ಬಿದಿರ ಮೆಳೆ ನೆಲದೆಡೆಗೆ ಬಾಗುತ್ತದೆ. ಈ ಮಾದರಿಯ ಗಳಗಳಿಗೆ ಗುಣಮಟ್ಟ ಇರುವುದಿಲ್ಲ. ತಟ್ಟಿ ಬುಟ್ಟಿ ಮಾಡುವವರು ಅತ್ಯಧಿಕ `ವೇಸ್ಟ್‌' ಬರುವ ಹಿನ್ನೆಲೆಯಲ್ಲಿ ಖಾಯಸ್‌ ಪಡುವುದಿಲ್ಲ. ನೇರವಾಗಿರುವ ಬಿದಿರಿಗೆ ಪರಮಾವಧಿ ಬೆಲೆ.
ಜಡ್ಡಿನಕೊಪ್ಪ ಸಹೋದರರ ಲೆಕ್ಕಾಚಾರ ಸರಳ. ಅವರಲ್ಲಿ ಸರಿಸುಮಾರು 50 ಬಿದಿರು ಬುಡಗಳಿವೆ. ಮನೆ ಸುತ್ತಲಿನ ಬೆಟ್ಟದಲ್ಲೆಲ್ಲ ಇದೇ. ಎಳ್ಳಾರೆ ರಾಮಯ್ಯ ಎಂಬುವವರಿಂದ ಅಪ್ಪ ತಂದು ಹಚ್ಚಿದ್ದು ಎಂದು ಇತಿಹಾಸ ನೆನೆಯುತ್ತಾರೆ ಸುರೇಶ್‌. ಇಂದು ಎಲ್ಲವೂ ಪುಷ್ಕಳವಾಗಿ ಬೆಳೆದಿವೆ. ಇವರು ಮರು ನಾಟಿ ಮಾಡಿದ್ದೂ ಇವೆ. ನಾಲ್ಕು ಐದು ವರ್ಷ ಪ್ರಾಯದ ಗಳಗಳನ್ನಷ್ಟೇ ಇವರು ಕಟಾವ್‌ಗೆ ಕೊಡುತ್ತಾರೆ. ಒಂದು ಮೆಳೆಯಿಂದ ಕನಿಷ್ಟ 12 ಗಳ ಗ್ಯಾರಂಟಿ. 20 -25 ಗಳ ಸಿಗುವುದೂ ಇದೆ.
ಇವರೇ ಸ್ವತಃ ಕೆಂಪು ಅಡಿಕೆ ಒಣಗಿಸಲು ಬೇಕಾದ ತಟ್ಟಿ ಮಾಡಿಸಿ ಮಾರುತ್ತಾರೆ. ಐದಾರು ವರ್ಷ ಬಾಳುವ ತಟ್ಟಿ ಎಂಬ ಖ್ಯಾತಿ ಸಿಕ್ಕಿರುವುದರಿಂದ ಸಾಗರದವರಲ್ಲದೆ ಸೊರಬ, ಹೊಸನಗರಗಳ ಅಡಿಕೆ ಬೆಳೆಗಾರರೂ ಮನೆಗೆ ಬಂದು ತಟ್ಟಿ ಖರೀದಿಸುತ್ತಾರೆ. ಇಷ್ಟಕ್ಕೂ ಇವರ ವಾಸ ಹೆಗ್ಗೋಡು ಸಮೀಪ. 16 ಕಿ.ಮೀ. ದೂರದ ಸಾಗರದ ಸಂಪರ್ಕ ಹೆಚ್ಚಿದ್ದರೂ ತಾಲ್ಲೂಕು ಮಾತ್ರ ಹೊಸನಗರ! ಇವರದ್ದು ವಾರ್ಷಿಕ 15 ಸಾವಿರ ರೂಪಾಯಿಗಳ ವ್ಯವಹಾರ. ಕೈಗೆ ಹೆಚ್ಚೆಂದರೆ ಐದು ಸಾವಿರ ಉಳಿದೀತು. ಆದರೆ ಮನೆಯ ಅಡಿಕೆ ಕೊಯ್ಲಿಗೆ ಅಥವಾ ಇನ್ನಾವುದೇ ಮಣ್ಣು ಕೆಲಸಕ್ಕೆ ತಟ್ಟಿ, ಚಬ್ಬೆ, ಹೆಡಿಗೆ, ಬುಟ್ಟಿ ಖರೀದಿಸಬೇಕಾದ ಖರ್ಚಿನ ಬಾಬತ್ತಿಲ್ಲ.
ಮಾರಾಟ ವ್ಯವಸ್ಥೆ ಏನು?
ಕೃಷಿಕನೇ ಸ್ವತಃ ತಟ್ಟಿ ಮಾಡಿಸಬೇಕೆಂದೇನೂ ಇಲ್ಲ. ಗಳದ ಗಾತ್ರ ನೋಡಿ 15ರಿಂದ 20 ರೂ. ದರಕ್ಕೆ ಕಡಿದು ಒಯ್ಯುವ ಕುಶಲಕರ್ಮಿಗಳಿದ್ದಾರೆ. ಮಲೆನಾಡಿನಲ್ಲಿ ಹಲವರ ಮನೆ ಹಿತ್ತಲಿನಲ್ಲಿ ಒಂದು ಎರಡು ಶೆಮೆ ಬುಡಗಳಿದ್ದು ಅವರೆಲ್ಲ ಗಳ ಮಾರುತ್ತಾರೆ. ಆದರೆ ಯಾರೊಬ್ಬರೂ ದೊಡ್ಡ ಪ್ರಮಾಣದಲ್ಲಿ ಶೆಮೆ ಕೃಷಿ ನಡೆಸಲು ಯೋಚಿಸಿದಂತಿಲ್ಲ. ವಾಸ್ತವವಾಗಿ ಖರ್ಚೇ ಇಲ್ಲದ ಶೆಮೆ ಕೃಷಿ ಅಡಿಕೆ ಬೆಳೆಗಾರರನ್ನು ಆಕರ್ಷಿಸಬೇಕಿತ್ತು. ಆದರೆ ಪ್ರತಿಕ್ರಿಯೆ ಶೂನ್ಯ ಎನ್ನುವ ಉಮೇಶ್‌ ಪ್ರಕಾರ, ಹತ್ತಿರದ ನಂದ್ರೆ ಗ್ರಾಮದ ಮಹಾಬಲಗಿರಿ ಎನ್‌.ಎಸ್‌. ಶೆಮೆ ಕೃಷಿ ಮಾಡಿರುವುದು ಒಂದು ಅಪವಾದ.
ಜಡ್ಡಿನಕೊಪ್ಪ ಸಹೋದರರ ವ್ಯಾಪಾರವೆಲ್ಲ ಮನೆ ಬಾಗಿಲಿನಲ್ಲೇ. ಬಹುಪಾಲು ಫೋನ್‌ ಮೂಲಕ ಬೇಡಿಕೆ ಸ್ವೀಕಾರ (08183 265150). ಸಾಮಾನ್ಯವಾಗಿ 7 -4 ರ ಅಳತೆಯ ತಟ್ಟಿ ತಯಾರಿ. ತಟ್ಟಿ ತಯಾರಿಸಿದ ನಂತರ ನಾಲ್ಕು ದಿನ ನೀರಲ್ಲಿ ಮುಳುಗಿಸುತ್ತಾರೆ. ಇದರಿಂದ ಬಿದಿರಿನ ಸಿಹಿಯೆಲ್ಲ ತೊಳೆದು ಹೋಗುವುದರಿಂದ ಬಾಳಿಕೆ ಹೆಚ್ಚುತ್ತದೆ. ಸ್ವಾರಸ್ಯವೆಂದರೆ, ಈ ಬಿದಿರಿನ ಕಟಾವ್‌ ಮಾಡಲು ಹುಣ್ಣಿಮೆ ಅಮವಾಸ್ಯೆಗಳ ನಿರ್ಬಂಧ ಇಲ್ಲವಂತೆ. ಆಸಕ್ತರಿಗೆ ಬಿದಿರ ಬುಡ ಒದಗಿಸಲೂ ಸುರೇಶ್‌ ತಯಾರಿದ್ದಾರೆ. ಒಂದು ಬುಡಕ್ಕೆ ನೂರು ರೂ.ಗಳ ದರ ನಿಗದಿಪಡಿಸಿದ್ದಾರೆ.
ಕೃಷಿಕರು ಶೆಮೆ ಬಿದಿರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಟ್ಟೆ ಒಣಗಿಸುವುದರಿಂದ ಹಿಡಿದು ಕಬ್ಬಿಣದ ಗೇಟಿಗೆ ಪರ್ಯಾಯವಾಗಿ ಈ ಬಿದಿರನ್ನು ಬಳಸಬಹುದು. ಇದನ್ನೇ ಆಕರ್ಷಕ ಬೇಲಿಯನ್ನಾಗಿಸಿದವರೂ ಇದ್ದಾರೆ. ತಟ್ಟಿಯಲ್ಲದೆ ಬುಟ್ಟಿ, ಹೂವಿನ ಸಿಬ್ಬಲು, ತಾತ್ಕಾಲಿಕ ಶೆಡ್‌ ಮಾಡಿಗೂ ಬಿದಿರು ಕಚ್ಚಾವಸ್ತು. ಕೃಷಿಕ ಕಬ್ಬಿಣದ ಸರಳು, ಮರದ ರೀಪಿನ ಬದಲಿಯಾಗಿ ಶೆಮೆ ಬಿದಿರನ್ನು ಉಪಯೋಗಿಸಬಹುದು. ಗಾಳಿ ಮಳೆಗೆ ನಲುಗದ ಶಮೆ 20 ವರ್ಷ ಕಳೆದರೂ ಗಟ್ಟಿ ಮುಟ್ಟಾಗಿರುವ ಉದಾಹರಣೆ ಇವೆ.
ಆದಾಯ, ಲಾಭ, ವಿದೇಶಿ ಮಾರುಕಟ್ಟೆಗಳ ವರ್ತುಲದಿಂದ ಕೃಷಿಕರು ಹೊರಬಂದು ಪರ್ಯಾಯ ಚಿಂತನೆ ನಡೆಸಲು ಈ ಬಡಿ ಬಿದಿರು ಸ್ಫೂರ್ತಿ ನೀಡುವಂತಾದರೆ ಅದೇ ಬಡಾ ವಿಚಾರ, ಅಲ್ಲವೇ?
-ಮಾವೆಂಸ

mavemsa@gmail.com

Thursday, February 5, 2009

ಅವಾಂತರಿ ಕುಲಾಂತರಿ “ತಂತ್ರಜ್ಞಾನ”


ಕಾಡಿ­ನಲ್ಲಿ ಇರುವ ಬದ­ನೆ­ಯನ್ನು ಹಾಗೇ ತಿಂದರೆ ಅದು ಪ್ರಕೃತಿ. ಕಾಡಿನ ಬದ­ನೆಗೆ ನಾಡ ಬದ­ನೆ­ಯನ್ನು ಸೇರಿಸಿ ಅದ­ಕ್ಕೊಂದು ಸಂಸ್ಕಾರ ನೀಡಿ ತಿಂದರೆ ಅದು ಸಂಸ್ಕೃತಿ. ಇವೆ­ರಡು ಬಿಟ್ಟು ಮತ್ತೊಂದು ಇದೆ, ಇರುವ ಬದ­ನೆಗೆ ಯಾವುದೋ ಜೀವಿಯ ಜೀನ್‌ ತಂದು ಸೇರಿಸಿ, ಅದನ್ನು ಮಾರ್ಪ­ಡಿಸಿ ಅದು ಮುಂದೆಂದು ತನ್ನ ಸಂತಾ­ನ­ವನ್ನು ಪಡೆ­ಯ­ದಿ­ರುವ ಹಾಗೇ ಮಾಡು­ವುದು ವಿಕೃತಿ. ಇದನ್ನು ಇಂದು ಬಹು­ರಾ­ಷ್ಟ್ರೀಯ ಬೀಜ ಕಂಪ­ನಿ­ಗಳು ಮಾಡು­ತ್ತಿವೆ.
ಭಾರತ ಸಾಮಾ­ಜಿ­ಕ­ವಾಗಿ, ಭೌಗೋ­ಳಿ­ಕ­ವಾಗಿ ಮಾತ್ರ ವೈವಿ­ಧ್ಯ­ವಾ­ಗಿ­ರದೆ, ಇಲ್ಲಿನ ಬೇಸಾ­ಯ­ಗ­ಳಲ್ಲೂ ವೈವಿ­ಧ್ಯ­ವಾ­ಗಿದೆ. ತರ­ಕಾ­ರಿ­ಯಲ್ಲೂ ಸಹ. ನಮ್ಮ­ಲ್ಲಿನ ಬಹು­ತೇಕ ಜನರು ಉಪ­ಯೋ­ಗಿ­ಸುವ ಬದನೆ ವೈವಿ­ಧ್ಯ­ತೆ­ಯಿಂದ ಕೂಡಿ­ರುವ ತರ­ಕಾ­ರಿ­ಗ­ಳ­ಲ್ಲೊಂದು. ವಿದೇಶಿ ಕಂಪನಿ ತಮ್ಮ ನೆಲ­ವನ್ನು ಬಿಟ್ಟು ನಮ್ಮ­ಲ್ಲಿಗೆ ಬಂದು `ಬಹು­ವ­ದನೆ'ಯಾದ ಬದ­ನೆಯ `ಕುಲ'ಗೆಡಿ­ಸುವ ಕಾರ್ಯ­ವನ್ನು ಮಾಡು­ತ್ತಿವೆ. ಅಂದರೆ `ಕುಲಾಂ­ತರಿ ತಳಿ­ಯನ್ನು ತಯಾರು ಮಾಡು­ತ್ತಿವೆ. ಆಸ್ಟ್ರಿಯಾ, ಇಟಲಿ ಮತ್ತು ಕೆಲವು ಯುರೋಪ್‌ ದೇಶ­ಗ­ಳಲ್ಲಿ `ಕುಲಾಂ­ತರಿ' ತಳಿ/ ಆಹಾ­ರ­ವನ್ನು ನಿಷೇಧ ಮಾಡಿ­ರು­ವಾ­ಗಲೇ ನಮ್ಮ­ಲ್ಲಿಗೆ ಅವರು ಬಂದಿ­ದ್ದಾರೆ.
ಕುಲಾಂ­ತರಿ ಅಥವಾ ಬಿಟಿ ಬದನೆ:
ಮಣ್ಣಿ­ನ­ಲ್ಲಿ­ರುವ ಬ್ಯಾಸಿ­ಲಸ್‌ ಥುರ­ನ್‌­ಜೆ­ನಿ­ಸಸ್‌ ಎನ್ನುವ ಬ್ಯಾಕ್ಟೀ­ರಿ­ಯಾಕ್ಕೆ ಬಿಟಿ ಎನ್ನು­ತ್ತಾರೆ. ಇದಕ್ಕೆ ಕಾಯಿ ಮತ್ತು ಕಾಂಡ ಕೊರಕ ಕೀಟ­ಗ­ಳಿಗೆ ಮಾರ­ಕ­ವಾ­ಗ­ಬಲ್ಲ ಪ್ರೋಟೀನು ಉತ್ಪಾ­ದಿ­ಸುವ ಸಾಮ­ರ್ಥ್ಯ­ವಿದೆ. ಕೀಟ­ಗ­ಳಿಗೆ ಮೃತ್ಯು­ಕಾ­ರ­ಕ­ವಾ­ಗ­ಬಲ್ಲ ಬ್ಯಾಕ್ಟಿ­ರೀ­ಯಾದ ವಂಶ­ವಾಯಿ(ಜೀನ್‌)ಯನ್ನು ನಮ್ಮ­ಲ್ಲಿಯ ಬದ­ನೆ­ಯೊ­ಳಗೆ ಸೇರಿ­ಸು­ತ್ತಾರೆ. ಇದು ಹೊಲಿ­ಗೆ­ಯವ ಪ್ಯಾಂಟನ್ನು ಕತ್ತ­ರಿಸಿ ಹೋಲಿ­ದಷ್ಟು ಸುಲ­ಭ­ವಲ್ಲ. ಅತ್ಯಾ­ಧು­ನಿಕ ಸಲ­ಕ­ರ­ಣೆ­ಗಳು ಬೇಕು. ಇದು ಕೋಟ್ಯಾಂ­ತರ ಡಾಲರ್‌ ಖರ್ಚಿನ ಬಾಪತ್ತು.
ಹೀಗೆ ತಯಾ­ರಿ­ಸಿದ ಬದನೆ, ಬಿಟಿ­ಯನ್ನು ತನ್ನ ಮೈಯೊ­ಳಗೆ ತುಂಬಿಸಿ ಕೊಳ್ಳು­ತ್ತದೆ. ಇದೊಂದು ರೀತಿ ಮೈಯೆಲ್ಲಾ ವಿಷ ಇರುವ `ಪೂತನಿ'ಯಾಗಿ­ರು­ತ್ತದೆ. ಹೀಗಿ­ರು­ವಾಗ ಬದ­ನೆಯ ಮೇಲೆ ದಾಳಿ ಮಾಡುವ ಕಾಂಡ­ಕೊ­ರಕ, ಕಾಯಿ­ಕೊ­ರಕ ಹುಳು­ಗಳ ಬಾಧೆ ಇದಕ್ಕೆ ಇರು­ವು­ದಿಲ್ಲ. ಕಾರ­ಣ­ವಿಷ್ಟೇ ಬಿಟಿ ಬದ­ನೆ­ಯನ್ನು ತಿಂದ ಹುಳು­ಗಳ ಜೀರ್ಣಾಂಗ ವ್ಯವಸ್ಥೆ ಹದ­ಗೆಟ್ಟು ಸಾಯು­ತ್ತವೆ. ಔಷಧಿ ಹೊಡೆ­ಯುವ ಸಮ­ಸ್ಯೆ­ಯಿ­ರು­ವು­ದಿಲ್ಲ. ಇಳು­ವರಿ ತಾನಾ­ಗಿಯೇ ಹೆಚ್ಚಾ­ಗು­ತ್ತದೆ.
ಇದ­ನ್ನೆಲ್ಲಾ ನೋಡಿ­ದಾಗ `ಅಬ್ಬಾ! ಎಂತಹ ತಂತ್ರ­ಜ್ಞಾನ? ಆಗ­ಬ­ಹುದು' ಎಂದು ಕೊಂಡರೆ ತಪ್ಪಾ­ಗು­ತ್ತದೆ. `ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ' ಆಗು­ತ್ತದೆ. ಕಾಂಡ­ವನ್ನೇ ತಿಂದು ಜೀರ್ಣಿ­ಸಿ­ಕೊ­ಳ್ಳುವ ಹುಳು­ಗಳೇ ಸಾಯ­ಬೇ­ಕಾ­ದರೆ. ಬದ­ನೆ­ಯನ್ನು ನಿತ್ಯದ ಆಹಾ­ರ­ಗ­ಳಲ್ಲಿ ಒಂದಾ­ನ್ನಾ­ಗಿಸಿ ಕೊಂಡ ಮನು­ಷ್ಯನ `ಗತಿ' ಎನಾ­ಗ­ಬಾ­ರದು? ಇಂತಹ ಪ್ರಯೋಗ ಈಗಾ­ಗಲೇ ಉಡು­ಪಿಯ ಮಟ್ಟು­ಗು­ಳ್ಳದ ಮೇಲಾ­ಗಿ­ರು­ವುದು ವಿಷಾ­ಧದ ಸಂಗತಿ.
ಕುಲಾಂ­ತರಿ ಬದನೆ ತಿಂದರೆ ನರ­ನಿಗೆ ಪ್ರಾಂಭ­ವಾ­ಗ­ಬ­ಹುದು ನರ­ಳಾಟ:
ಬಿಟಿಯ ದುಷ್ಪ­ರಿ­ಣಾ­ಮದ ಬಗ್ಗೆ ಹೇಳು­ವಾಗ ಬಿಟಿ ಹತ್ತಿ ನೆನ­ಪಾ­ಗು­ತ್ತದೆ. ಯಾವುದೇ ಕೀಟ­ಗಳು ದಾಳಿ ಮಾಡಲು ಸಾಧ್ಯ­ವಿಲ್ಲ ಎನ್ನುವ ಬಿಟಿ ತಳಿ­ಗ­ಳಿಗೆ ರಸ­ಹೀ­ರುವ ಕೀಟ­ಗಳು ದಾಳಿ­ನ­ಡೆ­ಸು­ತ್ತವೆ ಎನ್ನು­ವು­ದನ್ನು ಸರ್ಕಾರಿ ದಾಖ­ಲೆ­ಗಳು ಹೇಳು­ತ್ತವೆ. ಬಿಟಿ ಹತ್ತಿ­ಯನ್ನು ಬೆಳೆದ ರೈತ ಕೀಟ­ನಾ­ಶ­ಕ­ವನ್ನು ಬಳ­ಸ­ಬೇ­ಕಾ­ಗು­ತ್ತದೆ. ಅದಕ್ಕೆ ಮತ್ತಷ್ಟು ಹಣ­ವನ್ನು ವ್ಯಯ ಮಾಡ­ಬೇ­ಕಾ­ಗು­ತ್ತದೆ. ಬಿಟಿ­ಹತ್ತಿ ಬೆಳೆದ ಆಂದ್ರ­ಪ್ರ­ದೇ­ಶದ ವಿಧರ್ಭ ಪ್ರಾಂತ್ಯದ ರೈತರೇ ಆತ್ಮ­ಹತ್ಯೆ ಮಾಡಿ­ಕೊಂ­ಡ­ವ­ರಲ್ಲಿ ಹೆಚ್ಚು.
ಬೆಳೆಯ ನಂತರ ಗಿಡದ ಬಿಟಿ ಜೀನ್‌ ಮಣ್ಣಿನ ಬ್ಯಾಕ್ಟೀ­ರಿಯಾ ವರ್ಗಾ­ವ­ಣೆ­ಯಾ­ಗುವ ಸಾಧ್ಯತೆ ಇದೆ. ಬಿಟಿ ಬೀಟ್‌­ರೂ­ಟ್‌­ನಲ್ಲಿ ಇದು ಆಗಿದೆ. `ಮಣ್ಣಿನ ಸೂಕ್ಷ್ಮ­ಜೀ­ವಿ­ಗಳ ಮೇಲೆ ಬಿಟಿ­ಯಿಂ­ದಾ­ಗುವ ಪರಿ­ಣಾ­ಮದ ಅಧ್ಯ­ಯ­ನ­ಗಳು ಆಗಿಲ್ಲ' ಎನ್ನು­ತ್ತಾರೆ ಹಿರಿಯ ವಿಜ್ಞಾನಿ ಡಾ.ಬಾಲ­ರವಿ.
ಇನ್ನೂ ಬಿಟಿ­ಬ­ದ­ನೆ­ಯನ್ನು ತಿಂದ ಮನು­ಷ್ಯನ ಜೀರ್ಣಾಂ­ಗದ ಕರು­ಳಿನ ಬ್ಯಾಕ್ಟೀ­ರಿ­ಯಾಕ್ಕೆ ವರ್ಗಾ­ವ­ಣೆ­ಯಾ­ಗುವ ಸಂಭವ ಹೆಚ್ಚಿದೆ. ಇದ­ರಿಂದ ರೋಗ ನಿರೋ­ಧಕ ಶಕ್ತಿಯ ಮೇಲೆ ಅಡ್ಡ ಪರಿ­ಣಾಮ ಬೀರು­ವುದು ಮಾತ್ರ­ವ­ಲ್ಲದೇ ಜೀವ­ಕೋ­ಶ­ಗಳು ಅಸ­ಹ­ಜ­ವಾಗಿ ಬೆಳೆ­ಯುವ ಸಾಧ್ಯ­ತೆ­ಯಿದೆ. ಬಿಟಿಯ ಉಪು­ತ್ಪ­ನ್ನ­ಗ­ಳನ್ನು ತಿಂದ ದನ­ಕ­ರು­ಗಳು, ಕುರಿ­ಗಳು ಸಾವ­ನ್ನ­ಪ್ಪಿ­ರು­ವುದು ಕಂಡು­ಬಂ­ದಿದೆ. ಬಿಟಿ ತಳಿ­ಗ­ಳನ್ನು ಬೆಳೆ­ಯುವ ಪ್ರದೇ­ಶ­ಗ­ಳಲ್ಲಿ ಕೆಲಸ ಮಾಡು­ವ­ವ­ರಿಗೆ ಅಲರ್ಜಿ, ತುರಿಕೆ, ದದ್ದು­ಗಳು ಎದ್ದ ವರ­ದಿ­ಗಳು ಈಗಾ­ಗಲೇ ಪ್ರಕ­ಟ­ಗೊಂ­ಡಿದೆ.
ಇದ­ಲ್ಲೆ­ಕ್ಕಿಂತ ಹೆಚ್ಚಾಗಿ ನಮ್ಮ ರಾಜ್ಯ­ದಲ್ಲಿ ಸಾವ­ಯವ ಕೃಷಿ ನೀತಿ­ಯನ್ನು ಜಾರಿ­ಗೊ­ಳಿ­ಸಿದೆ. ಸಾವ­ಯವ ಮಿಷನ್‌ ಕೆಲಸ ಮಾಡು­ತ್ತಿದೆ. ಸಾವ­ಯವ ಗ್ರಾಮ­ಗಳು ರಚಿ­ತ­ವಾ­ಗಿದೆ. ಹೀಗಿ­ರು­ವಾಗ ಕುಲಾಂ­ತರಿ ತಳಿ­ಯಲ್ಲಿ ಕೃಷಿ ಮಾಡಿ­ದರೆ ಸಾವ­ಯವ ಧೃಢೀ­ಕ­ರಣ ನೀಡು­ವಂ­ತಿಲ್ಲ. ಸಾವ­ಯವ ರೀತಿ­ಯ­ಲ್ಲಿಯೇ ಬಿಟಿ ತಳಿ­ಗ­ಳನ್ನು ಬೆಳೆ­ಸಿ­ದ್ದರೂ `ಸಾವ­ಯವ ಲೇಬಲ್‌' ಹಚ್ಚಿ ಮಾರು­ವಂ­ತಿಲ್ಲ.
ಏಕ­ಸ್ವಾ­ಮ್ಯದ ಹುನ್ನಾ­ರವೇ?
`ಜೀನ್‌' ತಂತ್ರ­ಜ್ಞಾನ ಸಾಮಾನ್ಯ ಜನ­ರಿಗೆ ಸಿಗು­ವು­ದಿಲ್ಲ. ಯಾಕೆಂ­ದರೆ, ಅವು­ಗಳ ಪೇಟೆಂಟ್‌ ಬಹು­ರಾ­ಷ್ಟ್ರೀಯ ಕಂಪ­ನಿಯ ಕಪಿ­ಮು­ಷ್ಟಿ­ಯ­ಲ್ಲಿದೆ. ಕುಲಾಂ­ತರಿ ತಳಿ­ಯನ್ನು ಬೆಳೆಯ ಬೇಕೆಂ­ದರೆ ಕಂಪ­ನಿಗೆ ಮಾರು­ಹೋ­ಗ­ಬೇಕು. ಅವರು ನೀಡುವ ಜೀಬ­ವನ್ನೇ ಬಿತ್ತ­ಬೇಕು. ಕುಲಾಂ­ತರಿ ತಳಿ­ಗ­ಳಿಂದ ಬೀಜ­ವನ್ನು ದ್ವಿಗು­ಣ­ಗೊ­ಳಿ­ಸ­ಲಿಕ್ಕೆ ಸಾಧ್ಯ­ವಿಲ್ಲ. ಇಳು­ವ­ರಿ­ಯನ್ನು ಮನ­ದ­ಲ್ಲಿ­ಟ್ಟು­ಕೊಂಡು `ಕುಲಾಂ­ತರಿ'ಯನ್ನು ಬೆಳೆ­ಸ­ಲಿಕ್ಕೆ ತೋಡ­ಗಿ­ದರೆ `ಬಿತ್ತನೆ ಬೀಜ­ಕ್ಕಾಗಿ' ಪರ­ದಾ­ಡು­ವುದು ತಪ್ಪು­ವು­ದಿಲ್ಲ. ಕಂಪ­ನಿ­ಗಳು ನಮ್ಮ­ಲ್ಲಿನ ವೈವಿ­ಧ್ಯ­ತೆ­ಯನ್ನು ನಾಶ ಮಾಡಿ `ಏಕ­ರೂಪ ಕೃಷಿ'ಯನ್ನು ಹೇರು­ವು­ದಕ್ಕೆ ಪ್ರಯ­ತ್ನಿ­ಸು­ತ್ತಿ­ರು­ವುದು ಇವರ ಪ್ರಯೋ­ಗ­ಗ­ಳಿಂದ ತಿಳಿ­ಯು­ತ್ತದೆ. ಅಂದರೆ ಇವರ ಮೂಲ ಉದ್ದೇಶ ರೈತ­ರಿಗೆ ಬೇಕಾ­ಗುವ ಬಿತ್ತನೆ ಬೀಜದ ಮೇಲೆ ಏಕ­ಸ್ವಾ­ಮ್ಯ­ವನ್ನು ಹೊಂದು­ವುದು ಎನ್ನು­ವುದು ಸ್ಪಷ್ಟ. ಒಂದು ದೃಷ್ಟಿ­ಯಿಂದ ನೋಡಿ­ದರೆ `ಅಮಲು ಪದಾ­ರ್ಥದ' ಚಟ್ಟ­ದಂತೆ ರೈತ­ರಿಗೆ ತಾವು ತಯಾ­ರಿ­ಸಿದ ಬಿಟಿ ತಳಿ­ಗ­ಳಿಂದ ಮಾಡ­ಲಿಕ್ಕೆ ಹೊರ­ಟಿ­ರು­ವುದು ಸ್ಪಷ್ಟ­ವಾ­ಗು­ತ್ತದೆ.
ಕುಲಾಂ­ತರಿ ವಿರುದ್ಧ ಹೋರಾಟ:
ಅಂತ­ರಾ­ಷ್ಟ್ರೀಯ ಪರಿ­ಸ­ರ­ಪರ ಸಂಘ­ಟ­ನೆ­ಗಳು `ಜಿ.ಎಂ. ಆಹಾ­ರದ ವಿರುದ್ಧ ಈಗಾ­ಗಲೇ ದನಿ ಎತ್ತಿ ಹೋರಾ­ಟ­ವನ್ನು ಮಾಡು­ತ್ತಿ­ದ್ದಾರೆ. ದೆಹ­ಲಿ­ಯಲ್ಲಿ ರೈತರು ಬೀದಿಗೆ ಇಳಿದು ಹೋರಾ­ಟ­ವನ್ನು ಮಾಡಿ­ದ್ದಾರೆ. ಕೇಂದ್ರ ಆಹಾರ ಮಂತ್ರಿ ಅಂಬು­ಮಣಿ ರಾಮ­ದಾಸ್‌ ಕುಲಾಂ­ತರಿ ಬೇಡ ಎನ್ನುವ ಅಭಿ­ಪ್ರಾ­ಯ­ವನ್ನು ವ್ಯಕ್ತ ಪಡಿ­ಸಿ­ದ್ದಾರೆ. ಕರ್ನಾ­ಟ­ಕ­ದಲ್ಲೂ ಸಹಜ ಸಮೃದ್ಧ, ಗ್ರೀನ್‌­ಪೀಸ್‌ ಮುಂತಾದ ಸಂಘ­ಟ­ನೆ­ಗಳು ರೈತ ಸಂಘದ ಜೊತೆ­ಗೂಡಿ ` ನಾನೂ ಪ್ರಯೋಗ ಪಶು­ವಲ್ಲ' ಎನ್ನುವ ಚಳು­ವ­ಳಿ­ಯನ್ನು ಕುಲಾಂ­ತ­ರಿಯ ವಿರುದ್ಧ ರೂಪಿ­ಸಿದೆ. ಇವ­ರಿಗೆ ಉಡುಪಿ ಪೇಜಾ­ವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ರಾಮ­ಚಂ­ದ್ರಾ­ಪುರ ಮಠದ ಶ್ರೀರಾ­ಘ­ವೇ­ಶ್ವರ ಸ್ವಾಮೀಜಿ, ಸಾಹಿತಿ ಯು.ಆರ್‌. ಅನಂ­ತ­ಮೂರ್ತಿ ಮುಂತಾದ ಚಿಂತ­ಕರು ಬೆಂಬ­ಲ­ವನ್ನು ವ್ಯಕ್ತ ಪಡಿ­ಸಿ­ದ್ದಾರೆ.
ಕೊನೆ­ಯಲ್ಲಿ: ಕುಲಾಂ­ತರಿ ಬದನೆ ರೈತರ ಹೊಲಕ್ಕೆ ಬರಲು ಬಿಟ್ಟರೆ, ಅವು­ಗಳ ಹಿಂದೆ ಬಿಟಿ ಭತ್ತ, ಆಲೂ, ಟೊಮೆಟೋ, ಪಪ್ಪಾಯ, ಸೋಯಾ, ಮೆಕ್ಕೆ ಜೋಳ ಸಾಲಾಗಿ ಅಂಗ­ಳ­ದ­ಲ್ಲಯೇ ಕಾಯುತ್ತ ನಿಂತಿವೆ. ಕುಲಾಂ­ತ­ರಿಯ ಪ್ರಯೋಗ ಫಲಿ­ತಾಂಶ ಸಾರ್ವ­ಜ­ನಿ­ಕ­ರೆ­ದುರು ಪಾರ­ದ­ರ್ಶ­ಕ­ವಾಗಿ ತೆರೆ­ದಿ­ಡ­ಬೇಕು ಎನ್ನುವ ಆಗ್ರಹ ಸಂಘ­ಟ­ನೆ­ಗ­ಳದ್ದು.
ರೈತರ ಪ್ರಗತಿ ನೆಪ ಮಾಡಿ­ಕೊಂಡು ಕಂಪ­ನಿ­ಗಳು ಸಾಂಪ್ರ­ದಾ­ಯಿಕ ಕೃಷಿ ಹಾಳು­ಮಾ­ಡಲು ಹೊರ­ಟಿ­ರುವ `ತಂತ್ರ'ಜ್ಞಾನ ನಮಗೆ ಬೇಕೆ?


ನಾಗ­ರಾಜ ಮತ್ತಿ­ಗಾರ


ಉದಯವಾಣಿ ಕೃಷಿ ಸಂಪದದಲ್ಲಿ ಪ್ರಕಟಗೊಂಡ ಲೇಖನ