ಲಾಭದಾಯಕ ಹೈನುಗಾರಿಕೆ! ಪಶುಸಂಗೋಪನೆಯಿಂದ ಕೃಷಿಕನಿಗೆ ಆದಾಯ.... ಎಂಬರ್ಥದ ಶೀರ್ಷಿಕೆಯ ಕೃಷಿ ಲೇಖನಗಳು ರೈತರನ್ನು ಜಾನುವಾರು ಸಾಕಲು ಪ್ರೇರೇಪಿಸಬಹುದು. ಒಳಹೊಕ್ಕ ನಂತರವೇ ಸತ್ಯ ಗೊತ್ತಾಗುವುದು. ನಿಜಕ್ಕಾದರೆ ಹೈನುಗಾರಿಕೆಗೆ ಮೊತ್ತಮೊದಲಾಗಿ ರೈತನಿಗೆ ಅಗತ್ಯವಿದ್ದಷ್ಟು ಹಸಿರು ಹುಲ್ಲು ಬೆಳೆದುಕೊಳ್ಳಲು ತಕ್ಕ ಭೂಮಿಯಿರಬೇಕು. ಇಲ್ಲದಿದ್ದರೆ ಬದುಕು ತಂತಿ ಮೇಲಿನ ನಡಿಗೆ, ಲಾಭ ಮರೀಚಿಕೆ! ಕೊಂಡು ತರುವ ಬೈಹುಲ್ಲು, ಜಾನುವಾರು ತಿಂಡಿಗಳು ವರ್ಷಾಂತ್ಯಕ್ಕೆ ನಷ್ಟ ತರದಿದ್ದರೆ ಪುಣ್ಯ! ಸರಳವಾಗಿ ಹೇಳುವುದಾದರೆ ಹಸಿರು ಹುಲ್ಲು ಬೆಳೆದರೆ ಮಾತ್ರ ಹೈನುಗಾರಿಕೆ ಕೈಹಿಡಿದು ನಡೆಸುತ್ತದೆ. ಇಲ್ಲದಿದ್ದರೆ ತೊಂದರೆ.
ಎರಡನೇ ಹಂತದ ತಪ್ಪು ಹಸಿರು ಹುಲ್ಲಿನ ಕೃಷಿ ಮಾಡುವಲ್ಲಿ ಆಗುತ್ತದೆ. ರೈತ ಪರಮಾವಧಿ ಪ್ರಮಾಣದ ಹುಲ್ಲು ಬೆಳೆಯಬೇಕು. ಅದಕ್ಕೆ ಪೂರಕವಾದ ಸಲಹೆಗಳನ್ನು ಇಲ್ಲಿ ಒದಗಿಸಲಾಗಿದೆ. ಅನುಭವಿಕರ ಮಾತಿನ ಸಾರವಿದು ಎಂಬುದು ನಿಮ್ಮ ಗಮನದಲ್ಲಿರಲಿ. ಭೂಮಿಯನ್ನು ಸಣ್ಣದಾಗಿ ಉಳುಮೆ ಮಾಡಿ ಅರ್ಧ ಅಡಿ ಎತ್ತರದ ಏರು ಮಡಿ ಮಾಡಿಕೊಳ್ಳಬೇಕು. ಭೂಮಿ ಸಮತಟ್ಟಾಗಿರಲೇಬೇಕು ಎಂಬುದಿಲ್ಲ. ಅದರ ಮೇಲೆ ಎರಡು ಅಡಿಗಿಂತ ಹೆಚ್ಚಿನ ಉದ್ದವಿರದ ಹುಲ್ಲು ಬೀಜದ ದಂಟುಗಳನ್ನು ಮಲಗಿಸಿ ನೆಡಬೇಕು. ಇದೂ ಕಬ್ಬಿನ ಬಿತ್ತನೆಯ ತರಹವೇ. ಎರಡು ಅಡಿಗಿಂತ ಜಾಸ್ತಿ ಉದ್ದನೆಯ ದಂಟು ಮಡಿಯ ಮೇಲೆ ಸರಿಯಾಗಿ ಮಲಗುವುದಿಲ್ಲ. ಅಂದರೆ ಹಲವು ಗಣ್ಣುಗಳಲ್ಲಿ ಮೊಳಕೆ ಬಾರದೆಯೇ ಹೋಗುತ್ತದೆ.

ನಾಟಿ ಮಾಡಿದಾಗ ತೆಳುವಾಗಿ ಮಣ್ಣು ಹರಡಿದರೆ ಸಾಕು. ಒಮ್ಮೆ ಚಿಗುರು ಬಂದ ನಂತರ ಇನ್ನೊಮ್ಮೆ ಮಣ್ಣು ಏರಿಸಬೇಕು. ಮಳೆಗಾಲದ ಆರಂಭದಲ್ಲಿ ನಾಟಿ ಯುಕ್ತ. ಅರ್ಥಾತ್ ಜೂನ್, ಜುಲೈ ವೇಳೆಯೇ ಪ್ರಶಸ್ತ. ಸೆಪ್ಟೆಂಬರ್ನ ಗಣೇಶ ಚತುರ್ಥಿ ಆಸುಪಾಸಿನಲ್ಲೂ ನಾಟಿ ಮಾಡಬಹುದು. ಬಾಹ್ಯವಾಗಿ ಆ ವೇಳೆ ನೀರು ಒದಗಿಸುವಂತಿರಬೇಕಷ್ಟೇ. ಮೊದಲ ಒಂದು ವರ್ಷ ಹುಲ್ಲಿಗೆ ನೀರು ಕೊಡುವಂತಿದ್ದರೆ ಒಳ್ಳೆಯದು. ಇದಕ್ಕೂ ಮೊದಲು ನಾಟಿಗೆ ಯೋಗ್ಯ ಭೂಮಿ ಯಾವುದು ಎಂಬುದನ್ನು ಖಚಿತಪಡಿಸಿಕೊಂಡಿರಬೇಕು. ಹಸಿರು ಹುಲ್ಲಿಗೆ ಸದಾ ನೀರಿನ ತೇವ ಇರುವ ತಂಗಲು ಭೂಮಿ ಅಗತ್ಯ. ಮರಗಳ ನೆರಳು ಧಾರಾಳವಾಗಿದ್ದಲ್ಲಿ ಹುಲ್ಲಿನ ಇಳುವರಿ ಚೆನ್ನಾಗಿ ಬಾರದು.
ಸಾಗರ ತಾಲ್ಲೂಕಿನ ಮಾವಿನಸರದ ಎಂ.ಜಿ.ಶ್ರೀಪಾದರಾವ್ ಕಳೆದ ಇಪ್ಪತ್ತು ವರ್ಷಗಳಿಂದ ಹೈನುಗಾರಿಕೆಯ ಜೊತೆಜೊತೆಗೆ ಹಸಿರು ಹುಲ್ಲಿನ ಕೃಷಿಯನ್ನೂ ಸಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ವಿಚಾರದಲ್ಲಿ ಅವರದು ಅನುಭವದಲ್ಲಿ ಅದ್ದಿ ತೆಗೆದ ಮಾತುಗಳು. ಅವರ ಪ್ರಕಾರ, ತೆಂಗಿನ ತೋಟಗಳಲ್ಲಿಯೂ ಹಸಿರು ಹುಲ್ಲು ಕೃಷಿ ಓ.ಕೆ! ತೆಂಗಿನ ಮರದ ಬುಡದಲ್ಲಿ ಮಾತ್ರ ಬೇಡ ಎನ್ನುತ್ತಾರವರು. ಅಡಿಕೆ ತೋಟದಲ್ಲಿಯೂ ಹುಲ್ಲು ಬೆಳೆಯಬಹುದೇನೋ. ಆದರೆ ದೊಡ್ಡದಾಗುತ್ತ ಹೋಗುವ ಹುಲ್ಲಿನ ಬುಡ ಅಡಿಕೆ ಇಳುವರಿಗೆ ಪೆಟ್ಟು ಕೊಟ್ಟೀತು. ಶ್ರೀಪಾದ್ರ ತೆಂಗಿನ ತೋಟದಲ್ಲಿ ಹಸಿರು ಹುಲ್ಲನ್ನು ಇಡೀ ನಾಲ್ಕು ಎಕರೆಯಲ್ಲಿ ಬೆಳೆಯುತ್ತಿದ್ದಾರೆ. ಅಡಿಕೆ ತೋಟದಲ್ಲಿ ಹಚ್ಚಲು ಹೋಗಿಲ್ಲ.
ಹುಲ್ಲಿಗೆ ವರ್ಷಕ್ಕೊಮ್ಮೆ ಮಣ್ಣು ಕೊಡಲೇಬೇಕು. ಅದು ವರ್ಷದ ಯಾವುದೇ ಕಾಲದಲ್ಲಾದರೂ ಸೈ. ಹಾಗೆಂದು ಗೊಬ್ಬರವನ್ನು ಬಳಸಿದರೆ ತಪ್ಪಾಗುತ್ತದೆ. ಗೊಬ್ಬರವನ್ನು ಉಪಯೋಗಿಸುವುದರಿಂದ ಹುಲ್ಲಿನ ಗಡ್ಡೆ ಮೇಲು ಬೇರಾಗಿ ಎರಡೇ ವರ್ಷಕ್ಕೆ ಮೂಲ ಬುಡವನ್ನೇ ಕಳೆದುಕೊಳ್ಳುವಂತಾಗುತ್ತದೆ. ಒಮ್ಮೆ ಹುಲ್ಲಿನ ನಾಟಿ ಮಾಡಿದ ನಂತರ ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಕೊಯ್ಲಿಗೆ ಸಿಕ್ಕುತ್ತದೆ. ಚಳಿಗಾಲ, ವಿಪರೀತ ಮಳೆ ಹೊಯ್ಯುವ ಮಳೆಗಾಲದಲ್ಲಿ ಹುಲ್ಲಿನ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ವರ್ಷಕ್ಕೆ ೫-೬ ಕೊಯ್ಲು ಮಾಡಬಹುದಷ್ಟೇ.
ದನವೊಂದಕ್ಕೆ ದಿನಕ್ಕೆ ೧೫ ಕೆ.ಜಿ.ಯಷ್ಟು ಹಸಿ ಹುಲ್ಲು ಕೊಡಬಹುದು. ಕತ್ತರಿಸಿ ಕೊಡುವುದರಿಂದ ತಿನ್ನದೆ ಬಿಡುವ ಭಾಗ ಕಡಿಮೆಯಾಗುತ್ತದೆ. ತಿಂಡಿಯ ಜೊತೆಗೂ ಬೆರೆಸಿ ಕೊಡುವುದರಿಂದ ತಿಂಡಿಯ ಪ್ರಮಾಣ ಅಷ್ಟರಮಟ್ಟಿಗೆ ಉಳಿತಾಯ ಸಾಧ್ಯ. ಪುಷ್ಕಳ ಹಸಿರು ಹುಲ್ಲು ಇದ್ದರೆ ಕ್ಯಾಟಲ್ ಫೀಡ್ ಬಳಸದೇ ಕರಾವು ನಡೆಸಲು ಶಕ್ಯವಿದೆ ಎನ್ನುತ್ತಾರೆ ಶ್ರೀಪಾದ್. ಆದರೆ ಜಾನುವಾರುಗಳಿಗೆ ಬರೇ ಹಸಿರು ಹುಲ್ಲು ನೀಡುವುದು ಸಮಂಜಸವಲ್ಲ. ಲಾಭಕ್ಕಿಂತ ನಷ್ಟವೇ ಹೆಚ್ಚು. ಜೀರ್ಣಕ್ರಿಯೆಗೆ ನಾರಿನ ಅಂಶ ಅತ್ಯಗತ್ಯವಾಗಿ ಬೇಕು. ಹಸಿರು ಹುಲ್ಲಿನಿಂದ ನಾರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಲಭ್ಯ. ಹಾಗಾಗಿ ನಾವು ಪ್ರತಿದಿನ ಬೈಹುಲ್ಲನ್ನೂ ಸ್ವಲ್ಪ ಪ್ರಮಾಣದಲ್ಲಿ, ಒಂದು ಅವಧಿಗೆ ಉಣಿಸಬೇಕು. ಬೈಹುಲ್ಲಿನಲ್ಲಿ ನಾರಿನಂಶ ಧಾರಾಳ.
ಕೆಲವು ಗಮನಿಸಲೇಬೇಕಾದ ಅನುಭವಗಳು ಎಂಜಿಎಸ್ರ ಬುತ್ತಿಯಲ್ಲಿವೆ. ಯಾವತ್ತೂ ಎಳೆಯದಾದ ಹುಲ್ಲನ್ನು ಜಾನುವಾರುಗಳಿಗೆ ಕೊಡಲೇಬಾರದು. ಆ ಹುಲ್ಲಿನಲ್ಲಿ ಪಶುಗಳಿಗೆ ವಿಷವಾಗುವಂತ ಅಂಶಗಳಿರುವುದು ದೃಢಪಟ್ಟಿದೆ. ಅಷ್ಟೇಕೆ, ಗರ್ಭ ಧರಿಸಿದ ಹಸು ಎಮ್ಮೆಗಳು ಎಳೆ ಹಸಿರು ಹುಲ್ಲು ತಿಂದರೆ ಗರ್ಭಪಾತ ಆಗಿಬಿಡಬಹುದಂತೆ. ಹುಲ್ಲು ಕೊಯ್ಲಿನಲ್ಲೂ ಕೆಲವು ಕಿವಿಮಾತುಗಳಿವೆ. ಹರಿತವಾದ ಕತ್ತಿಯನ್ನೇ ಬಳಸಿ ಕೊಯ್ಲು ಮಾಡಬೇಕು. ಸಾಧ್ಯವಾದಷ್ಟೂ ನೆಲಮಟ್ಟಕ್ಕೆ ಹುಲ್ಲನ್ನು ಕತ್ತರಿಸಬೇಕು. ಹರಿತವಿಲ್ಲದ ಕತ್ತಿಯನ್ನು ಉಪಯೋಗಿಸಿದರೆ ಬುಡದ ದಂಟಿಗೆ ಘಾಸಿಯಾಗುತ್ತದೆ, ಒಡೆದೀತು. ಆಗ ನೀರು ಸಿಕ್ಕಿ ಕೊಳೆಯುವುದು ಸಂಭವನೀಯ. ನೀರು ತನ್ನ ಬುಡದಲ್ಲಿ ನಿಂತರೆ ಈ ಹುಲ್ಲು ಸಹಿಸುವುದಿಲ್ಲ. ಕೊಳೆತು ಪ್ರತಿಭಟಿಸುತ್ತದೆ.
ವರ್ಷಕ್ಕೊಮ್ಮೆ ಹೊಸ ಮಣ್ಣು ಕೊಟ್ಟರೆ ಅದಕ್ಕೆ ಸಮಾಧಾನ. ಸ್ವಲ್ಪ ಪ್ರಮಾಣದಲ್ಲಿ ಎರೆಗೊಬ್ಬರವನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಒಂದೊಮ್ಮೆ ಎರೆಜಲ ಸಿಗುತ್ತದೆಂದಾದರಂತೂ ಅದನ್ನು ಎಲೆಯ ಮೇಲೆ ಸಿಂಪಡಿಸುತ್ತಿದ್ದರೆ ಒಳ್ಳೆಯ ಕೊಯ್ಲು ಖಚಿತ. ಹೈನುಗಾರಿಕೆಗೆ ತೊಡಗುವವರು ಸ್ವತಃ ಹಸಿರು ಹುಲ್ಲು ಬೆಳೆಯುವವರಾಗಿದ್ದರೆ ಮಾತ್ರ ಅವರು ಹಾಲಿನ ಮಾರಾಟದಲ್ಲಿ ಲಾಭ ಕಾಣಬಹುದು. ವಾಸ್ತವವಾಗಿ, ನಾಟಿ ಮಾಡುವಾಗ ಒಮ್ಮೆ ಸ್ವಲ್ಪ ಕೂಲಿಯಾಳಿನ ಖರ್ಚು ಬರುತ್ತದೇ ವಿನಃ ಆನಂತರ ಯಾವುದೇ ಗಣನೀಯ ವೆಚ್ಚವಿಲ್ಲ. ರಾಸಾಯನಿಕ ಸಿಂಪಡಿಸದ ಹಸಿರು ಹುಲ್ಲು ಜಾನುವಾರುಗಳ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಈಗ ಎಲ್ಲರಿಗೂ ಗೊತ್ತು. ಬೈಹುಲ್ಲು ಬಳಕೆ ಎಂದರೆ ಸಮಸ್ಯೆ ಹೆಚ್ಚು, ತಿಂಡಿಯೂ ತುಸು ಜಾಸ್ತಿಯೇ ಬೇಕು. ಆಗ ಹೈನುಗಾರಿಕೆ ಕೈ ಕಚ್ಚುವ ಅಪಾಯ ಕಾಡುತ್ತದೆ.
ಈಗ ಹುಲ್ಲಿನಲ್ಲಿ ಹಲವು ಜಾತಿಗಳಿವೆ. ಕೃಷಿ ವಿಶ್ವವಿದ್ಯಾಲಯಗಳು ನೂತನ ತಳಿಗಳನ್ನು ಸಂಶೋಧಿಸಿವೆ. ಅವುಗಳಲ್ಲಿ ಎನ್ಬಿ ೨೨, ಎಲಿಫೆಂಟ್ ಗ್ರಾಸ್, ಕೋ-೩, ಪ್ಯಾರಾ ಮುಂತಾದ ಮಾದರಿಗಳಿವೆ. ಕೋ-೩, ಎಲಿಫೆಂಟ್ ಗ್ರಾಸ್ ಹೆಚ್ಚು ಮಳೆಯನ್ನೂ ಸುಧಾರಿಸಿಕೊಂಡಿವೆ. ಈ ತಳಿಗಳ ವಿಚಾರದಲ್ಲಿ ಮಾತ್ರ ನಿಮ್ಮ ಪ್ರದೇಶಕ್ಕೆ ಯಾವುದು ಸೂಕ್ತವೆಂದು ಕೃಷಿ ತಜ್ಞರ ಸಲಹೆ ಪಡೆದು ಅಥವಾ ಈಗಾಗಲೇ ಹುಲ್ಲು ಬೆಳೆಯುತ್ತಿರುವವರ ಅನುಭವ ತಿಳಿದು ಮುಂದುವರೆಯುವುದು ಬುದ್ಧಿವಂತಿಕೆ.