Saturday, December 27, 2008

ಬರಲಿದೆ...ಔಷಧ ಬೆಳೆಗಳ ಮಿಷನ್‌


2009 ಜನವರಿಗೆ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಅನುಷ್ಠಾನ. ಇದರಿಂದ ಬಹಳಷ್ಟು ಸಹಾಯಧನ ಸಿಗುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳುವ ಬದಲು ಯೋಜನೆಯ ಸದುಪಯೋಗ ಮುಖ್ಯ. ಇಲಾಖೆಯವರು ಅರ್ಹರಿಗೆ ಯೋಜನೆ ತಲುಪಿಸಿದರೆ ಇದರ ಉದ್ದೇಶ ಸಾರ್ಥಕ.


ನಗರ ಪ್ರದೇಶಗಳು ೃಹತ್ತಾಗಿ ಬೆಳೆಯುತ್ತಿವೆ. ಪರಿಣಾಮ, ಕೃಷಿ ಭೂಮಿಗಳು ಕಡಿಮೆಯಾಗುತ್ತಿದೆ. ಭೂಮಿ ಇರುವ ಕೃಷಿಕರು ಬೇಸಾಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಬೇಸಾಯ ಮಾಡುವವರಿಗೆ ಬೆಲೆ ಕೈಕೊಡುತ್ತಿದೆ. ಎಂತಹ ಸ್ಥಿತಿ!
ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿಯೇ ಕೃಷಿ ಉತ್ಪನ್ನ ಕಡಿಮೆ ಆಗುತ್ತಿರುವುದು ವಿಷಾದನೀಯ. ಅದಕ್ಕಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ತರುತ್ತಲೂ ಇದೆ. ಬಹಳಷ್ಟು ರೈತರು ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ನೀಡುವ ಅನುದಾನದ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಿಂದ ಸಿಗುವ ಅನುದಾನ ಬಳಸಿಕೊಂಡು ತಮ್ಮ ಜಮೀನಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಔಷಧ ಬೆಳೆಗಳನ್ನು ಉತ್ತೇಜಿಸಲಿಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಮಾದರಿಯಲ್ಲಿಯೇ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಸದ್ಯದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ.
ಭಾರತ ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆ ಇದು. ಇಂದಿನ ಜನರಲ್ಲಿ ನೈಸರ್ಗಿಕ, ಆಯುರ್ವೇದ ಔಷಧ ಮತ್ತು ಸೌಂದರ್ಯ ವರ್ಧಕಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ಇದನ್ನು ಗಮನಿಸಿದ ಸರ್ಕಾರ ಔಷಧ ಬೆಳೆಗಳನ್ನು ರೈತರ ಹೊಲದಲ್ಲಿ ಬೆಳೆಸಲು, ಅವರನ್ನು ಬೆಳೆಯುವಂತೆ ಉತ್ತೇಜಿಸುವುದು ಯೋಜನೆ ಉದ್ದೇಶ.
ಯಾರಿಗೆ ಯೋಜನೆ?
ಔಷಧಿ ಬೆಳೆಗಳನ್ನು ಯಾವ ಕೃಷಿಕ ಬೇಕಾದರೂ ಬೆಳೆಯಬಹುದು. ಭೂ ಗುಣವನ್ನು ನೋಡಿ. ಒಬ್ಬೊಬ್ಬರೇ ಔಷಧ ಬೆಳೆಗಳನ್ನು ಬೆಳೆದರೆ ಕೊಯ್ಲೋತ್ತರ ಸಂಸ್ಕರಣ ಘಟಕ ಮುಂತಾದವುಗಳಿಗೆ ಸಹಾಯಧನ ಕಡಿಮೆ. ತಮ್ಮದೇ ಗುಂಪು ಸ್ಥಾಪಿಸಿಕೊಂಡು ಕೃಷಿ ಮಾಡುವವರಿಗೆ ಈ ಔಷಧ ಮಿಷನ್‌ ಪ್ರಯೋಜನ ನೂರಕ್ಕೆ ನೂರು. ಸ್ವಸಹಾಯ ಗುಂಪುಗಳು ಈ ಕೃಷಿ ಮಾಡಲು ತೊಡಗಿದರೆ ಮಿಷನ್‌ ಸಹಕಾರದಿಂದ ಹೆಚ್ಚನ ಸ್ಥಿರತೆ ಸಾಧಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ. ಔಷಧ ಬೆಳೆಗಳನ್ನು ಬೆಳೆಯುವ ಪ್ರತಿಯೊಂದು ಹಂತದಲ್ಲಿಯೂ ಸಹಾಯಧನ ದೊರೆಯುತ್ತದೆ.
ನರ್ಸರಿ ಅಭಿವೃದ್ಧಿ
ಔಷಧೀಯ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೆಂದರೆ ಉತ್ತಮ ನರ್ಸರಿಯ ಅಗತ್ಯವು ಇದೆ. ಇದನ್ನು ಅಭಿವೃದ್ಧಿಪಡಿಸಲು ಈ ಮಿಷನ್‌ ಸಹಾಯಧನ ನೀಡುತ್ತದೆ. ಇದು ಎರಡು ವಿಭಾಗದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು, ಅಂದರೆ ಸ್ವಸಹಾಯ ಗುಂಪುಗಳು ನರ್ಸರಿ ಘಟಕ ಪ್ರಾರಂಭಿಸುತ್ತಾರೆಂದರೆ ಶೇ. 100 ಸಹಾಯಧನ ದೊರೆಯುತ್ತದೆ. ದೊಡ್ಡ ಪ್ರಮಾಣದ ಘಟಕಕ್ಕೆ 20 ಲಕ್ಷ ರೂ. ಮತ್ತು ಸಾರ್ವಜನಿಕರು ಸ್ಥಾಪಿಸುವ ಸಣ್ಣ ಘಟಕ್ಕೆ 4 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಖಾಸಗಿ ಸಂಸ್ಥೆಗಳು ನರ್ಸರಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಶೇ. 50 (10 ಲಕ್ಷ ರೂ.) ಮತ್ತು ಸಣ್ಣ ಘಟಕಕ್ಕೆ 2 ಲಕ್ಷ ರೂ. ಸಹಾಯಧನ ದೊರೆಯುತ್ತದೆ.
ಔಷಧ ಬೆಳೆ ಬೆಳೆಯುವುದು ಸುಲಭವಲ್ಲ. ಸಾವಯವ ಕೃಷಿ ಮಾಡಿದರೆ ಮಾರುಕಟ್ಟೆ ಮೌಲ್ಯ ಜಾಸ್ತಿ. ಬೇರೆ ಕಡೆಯಿಂದ ಸಾವಯವ ಪೋಷಕಾಂಶ ತಂದು ಕೃಷಿ ಮಾಡುವುದಾದರೆ ವೆಚ್ಚ ಹೆಚ್ಚು. ರಾಸಾಯನಿಕ ಪೋಷಕಾಂಶ ನೀಡಿದರು ಖರ್ಚು ಕಡಿಮೆಯಾಗದು. ಪೋಷಕಾಂಶ, ನೀರಾವರಿ ಉಳಿದ ಕೆಲಸಗಳಿಗೆ ತಗಲುವ ವೆಚ್ಚದ ಶೇ. 20 ರಿಂದ ಶೇ. 75ರವರೆಗೂ ಸಹಾಯಧನ ಲಭ್ಯ. ಆದರೆ ಷರತ್ತು ಅನ್ವಯ. ಬೆಳೆಯುವ ಪ್ರದೇಶ ವಿಸ್ತರಣೆಯನ್ನು ಗೊಂಚಲು ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದು ಆ ಷರತ್ತು.
ಕೊಯ್ಲೋತ್ತರ ಸಂಸ್ಕರಣೆ
ಬೆಳೆಗಳನ್ನು ಕಟಾವು ಮಾಡಿದ ನಂತರದ ಚಟುವಟಿಕೆಗಳಾದ ಒಣಗಿಸುವ ಘಟಕ ಸ್ಥಾಪನೆ ಮತ್ತು ಉತ್ಪನ್ನಗಳನ್ನು ಶೇಖರಿಸಿಡಲು ಅಗತ್ಯವಿರುವ ಗೋದಾಮು ನಿರ್ಮಾಣಕ್ಕೆ ತಗಲುವ ವೆಚ್ಚಕ್ಕೆ ಕ್ರಮವಾಗಿ ಸಾರ್ವಜನಿಕ ಶೇ. 100ರಷ್ಟು ಮತ್ತು ಖಾಸಗಿ ಸಂಸ್ಥೆಗಳಿಗೆ ಶೇ. 50 ಸಹಾಯಧನವನ್ನು ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ ನೀಡುತ್ತದೆ.
ಔಷಧಿ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಅದನ್ನು ಸರಿಯಾದ ರೀತಿ ಸಂಸ್ಕರಣೆ ಮಾಡಬೇಕಾಗುತ್ತದೆ. ಇದರ ಸಂಸ್ಕರಣಾ ಘಟಕ ಸ್ಥಾಪನೆಗೆ ಶೇ. 25ರಂತೆ 50 ಲಕ್ಷಗಳವರೆಗೆ ದೊರೆಯುತ್ತದೆ. ಇದಲ್ಲದೇ, ಔಷಧ ಬೆಳೆಗಳನ್ನು ಬೆಳೆಸಿ ಅದರಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡುಹಿಡಿಯುವ ದೃಷ್ಠಿಯಿಂದ ಪ್ರಯೋಗಾಲಯ ಸ್ಥಾಪಿಸುವುದಾದರೆ ಶೇ. 30ರಂತೆ 30 ಲಕ್ಷಗಳವರೆಗೆ ಹಾಗೂ ಮಾರುಕಟ್ಟೆ ಉತ್ತೇಜನಕ್ಕೆ ಶೇ. 10ರಂತೆ 10 ಲಕ್ಷದವರೆಗೆ ಸಹಾಯಧನ ದೊರೆಯುತ್ತದೆ. ಅಷ್ಟೇ ಅಲ್ಲದೆ, ಮಾರುಕಟ್ಟೆ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಶೇ. 100ರಂತೆ ಗರಿಷ್ಟ 20 ಲಕ್ಷದವರೆಗೆ ಸಹಾಯಧನವನ್ನು ಮಿಷನ್‌ ಒದಗಿಸುತ್ತದೆ.
ಇದಲ್ಲದೇ ಮಾರುಕಟ್ಟೆ ತಂತ್ರ, ಮರು ಖರೀದಿ ಚಟುವಟಿಕೆಗಳು, ಸಾವಯವ ಧೃಡೀಕರಣ, ಬೆಳೆ ವಿಮೆಯಂತಹ ಚಟುವಟಿಕೆಗಳಿಗೆ ಯೋಜನಾ ವರದಿಯನ್ನಾಧರಿಸಿ ಸಹಾಯಧನವನ್ನು ನೀಡಲಾಗುತ್ತದೆ. ಈ ಸಹಾಯಧನ ಸುಮಾರು 93 ಬೆಳೆಗಳಿಗೆ ದೊರೆಯುತ್ತದೆ. ಹಾಗೆಯೇ ಬೆಳೆಗಳನ್ನು ಆಧರಿಸಿ ಶೇ. 20ರಿಂದ ಶೇ. 75ರವರೆಗೆ ಸಬ್ಸಿಡಿಯು ಸಿಗುತ್ತದೆ.
ಮರುಖರೀದಿ ಒಪ್ಪಂದ
ಔಷಧ ಬೆಳೆ ಬೆಳೆದಾಗ ರೈತರಿಗೆ ಎದುರಾಗುವ ಮೊದಲ ಸಮಸ್ಯೆ ಮಾರುಕಟ್ಟೆಯದ್ದು. ಅದಕ್ಕಾಗಿ ಈ ಬೆಳೆಯಲು ತೊಡಗುವ ರೈತರು ತಮ್ಮದೇ ಆದ ಸಹಕಾರ ಸಂಘವನ್ನು ಸ್ಥಾಪಿಸಿಕೊಳ್ಳುವುದು ಉತ್ತಮ. ಈ ಸಂಘದ ಮೂಲಕ ವಿಶ್ವಾಸನೀಯ ಕಂಪೆನಿಗಳೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಉತ್ತರ ಕನ್ನಡದ ಕಾರವಾರದಲ್ಲಿ `ಪ್ರಗತಿ' ಅನ್ನುವ ಕಂಪೆ ಈಗಾಗಲೇ 40 ಔಷಧೀಯ ಉತ್ಪನ್ನಗಳನ್ನು ಖರೀದಿಸುತ್ತಿದೆ. ಇದಲ್ಲದೇ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಔಷಧೀಯ ಬೆಳೆಗಳನ್ನು ಖರೀದಿಸುತ್ತವೆ. ಒಪ್ಪಂದ ಮಾಡಿಕೊಳ್ಳುವಾಗ ಮಾತ್ರ ರೈತರು ಜಾಗರೂಕರಾಗಿದ್ದರೆ ಒಳ್ಳೆಯದು.
ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ನ ಕ್ರೀಯಾ ಯೋಜನೆ ಸಿದ್ಧವಾಗಿದ್ದು ಜನವರಿ 2009ರ ಸಮಯಕ್ಕೆ ಆಶಾವಾದಿ ರೈತರ ಬಳಕೆಗೆ ಲಭ್ಯ. ಕೊನೆಯ ವಿನಂತಿ, ಸರ್ಕಾರದಿಂದ ದೊರೆಯುವ ಸಹಾಯಧನವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಸಿಕ್ಕುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳದಿದ್ದರೆ ಸರ್ಕಾರ ಅನುಷ್ಠಾನಕ್ಕೆ ತರುವ ಯೋಜನೆಗಳು ಸಾರ್ಥಕ. ಹಾಗೆಯೇ ತೋಟಗಾರಿಕಾ ಇಲಾಖೆಯವರು ಅರ್ಹ ಫಲಾನುಭವಿಗಳಿಗೆ ಯೋಜನೆ ಸಮರ್ಪಕವಾಗಿ ಸಿಗುವಂತೆ ಮಾಡಬೇಕು.
ನಾಗರಾಜ ಮತ್ತಿಗಾರ

Friday, December 19, 2008

ತುಡುವೆ ಜೇನಿನ ಕೃತಕ ಹಿಸ್ಸೆ!


                                               .                        
      ಜೇನು ಸಹಜ ಕೃಷಿಯ ಒಂದು ಭಾಗ. ತೋಟಗಾರಿಕಾ ಬೆಳೆಗಳ ಪರಾಗ  ಸ್ಪರ್ಷ ಕ್ರಿಯೆ ಹೆಚ್ಚಿಸಿ ಬೆಳೆ ಉತ್ತಮವಾಗುವಂತೆ ನೊಡಿಕೊಳ್ಳುವ ಜೇನು ತುಪ್ಪವನ್ನು ನೀಡಿ ಇನ್ನಷ್ಟು ಉಪಆದಾಯವನ್ನೂ ತಂದುಕೊಡುತ್ತದೆ. ಆದ್ದರಿಂದ  ವರ್ಷದಿಂದ ವರ್ಷಕ್ಕೆ ಜೇನು ಸಾಕಾಣಿಕೆ ಮಾಡುವ ಕೃಷಿಕರ ಸಂಖ್ಯೆ ಹೆಚ್ಚುತ್ತಿದೆ. ಮನೆಯ ಸುತ್ತಮುತ್ತ  ಪೆಟ್ಟಿಗೆಯಲ್ಲಿ ಸಾಕುವ ತುಡುವೆಜೇನು  ಸಾಕಾಣಿಕೆ ಮಾಡುವ   ಕೃಷಿಕರಿಗೆ  ನವೆಂಬರ್ ಡಿಸೆಂಬರ್ ತಿಂಗಳು ಬಂತೆಂದರೆ ಸಮಸ್ಯೆ ಪ್ರಾರಂಭವಾಯಿತೆಂದೇ ಅರ್ಥ. ಕಾರಣ  ಮಳೆಗಾಲಪೂರ್ತಿ  ಕೃತಕ ಆಹಾರ  ಕೊಟ್ಟು  ಮನೆಯಂಗಳದಲ್ಲಿ ಸಾಕಿದ  ತುಡುವೆ ಜೇನಿನ  ರಾಣಿಗೆ   ಹಿಸ್ಸೆಯಾಗಿ ಹೊಸರಾಣಿಹುಳುವನ್ನು ಸೃಷ್ಟಿಸಿ ಪೆಟ್ಟಿಗೆ  ಬಿಟ್ಟು  ಬೇರೆ  ಗೂಡನ್ನು ಅರಸಿ ಓಡಿಹೋಗುವ ಆತುರ. ಜೇನು ರಾಣಿಯ  ಈ ಪ್ರಾಕೃತಿಕ  ಕ್ರಿಯೆ  ತುಡುವೆಜೇನು ಸಾಕಾಣಿಕಾದಾರನಿಗೆ ಮಾತ್ರ ನಷ್ಟ. ಪೆಟ್ಟಿಗೆಯಲ್ಲಿನ ಜೇನುಪಡೆ   ಕಣ್ಣಾರೆ  ಕಾಡುಪಾಲಾಗುವುದನ್ನು  ನೋಡುತ್ತಾ  ನಿಲ್ಲಬೇಕು.  ಜೇನಿನ  ಹಿಸ್ಸೆ ಪ್ರಕ್ರಿಯೆನ್ನಾಗಲಿ ಅಥವಾ ಹೊಸ  ರಾಣಿಯ  ಹುಟ್ಟನ್ನಾಗಲಿ ರಾಣಿಮೊಟ್ಟೆಯ ಮುರಿದು  ತಡೆಗಟ್ಟಬಹುದಾದರೂ  ಅದು  ಪ್ರಕೃತಿ  ಸಹಜವಲ್ಲ.ಹಾಗೂ ಮತ್ತೊಂದು ಜೇನು ಸಂಸಾರ ಅಭಿವೃದ್ಧಿಯನ್ನು ತಡೆಗಟ್ಟಿದಂತಾಗುತ್ತದೆ. ಜತೆಗೆ  ರಾಣಿಜೇನು ಮೊಟ್ಟೆಯನ್ನಿಟ್ಟ ಸಮಯದಲ್ಲಿ   ಗೂಡಿಗೆ  ಕೈಹಾಕುವುದು  ಕಷ್ಟಕರ. ಹಾಗಾಗಿ ಜೇನು ಹುಟ್ಟನ್ನು ಮನೆಯಲ್ಲಿಯೇ ಉಳಿಸಿಕೊಂಡು ಗೂಡು ಹೆಚ್ಚಿಸಿಕೊಳ್ಳುವುದು ಎಲ್ಲಾ ಜೇನು ಕೃಷಿಕರ ಆಶಯ.  ಹಳೆರಾಣಿ ತನ್ನ ಪಾಲಿನ  ಹುಳುಗಳನ್ನು ಕರೆದುಕೊಂಡು  ಕಾಡುಪಾಲಾಗದಂತೆ  ತಡೆದು, ಜೇನಿನ ಹಿಸ್ಸೆಯನ್ನು ಸಹಜವಾಗಿ ನಡೆಯುವಂತೆ  ಮಾಡಿ  ಜೇನು ಸಂಸಾರವನ್ನೂ  ಹೆಚ್ಚಿಸಿಕೊಳ್ಳಲು ಇಲ್ಲಿದೆ  ಸುಲಬೋಪಾಯ.
     ಈಗಾಗಲೆ  ಇರುವ ಜೇನು ಪೆಟ್ಟಿಗೆಯನ್ನೇ  ಹೋಲುವ(ಒಂದೇ  ಬಣ್ಣದ್ದಾದರೆ  ಉತ್ತಮ)  ಇನ್ನೊಂದು  ಪೆಟ್ಟಿಗೆಯನ್ನು ಮೂಲಪೆಟ್ಟಿಗೆಯಿಟ್ಟ ಜಾಗಕ್ಕಿಂತ  ೩  ಅಡಿ ದೂರದಲ್ಲಿ  ಇಡಬೇಕು. ಮೂಲಪೆಟ್ಟಿಗೆಯನ್ನು  ಕೂಡ  ಅದರ  ಜಾಗದಿಂದ  ೩ ಅಡಿ  ಪಕ್ಕಕ್ಕೆ  ಇಡಬೇಕು(ಚಿತ್ರದಲ್ಲಿ ತೋರಿಸಿದಂತೆ). ಬೆಳಿಗಿನ  ಸಮಯದಲ್ಲಿ  ಹಿಸ್ಸೆ  ಪ್ರಕ್ರಿಯೆ  ಮಾಡಿದರೆ  ಉತ್ತಮ. ಮೂಲಪೆಟ್ಟಿಗೆಯಲ್ಲಿನ  ಯಾವುದಾದರೂ  ನಾಲ್ಕು  ತತ್ತಿಗಳನ್ನು  ಹೊಸ ಪೆಟ್ಟಿಗೆಗೆ  ಹಾಕಿ  ಮುಚ್ಚಳ ಹಾಕಿದರೆ  ಅರ್ದ ಕೆಲಸ  ಮುಗಿದಂತೆ.  ಈಗ  ಒಂದು  ಪೆಟ್ಟಿಗೆಯಲ್ಲಿ  ರಾಣಿನೊಣ  ಇರುತ್ತದೆ.  ರಾಣಿ ನೊಣ ಇರದ  ಇನ್ನೊಂದು  ಪೆಟ್ಟಿಗೆಯಲ್ಲಿ  ಇರುವ  ಕಡ್ಡಿಮೊಟ್ಟೆಗೆ  ಜೇನುಹುಳುಗಳು  ರಾಜಾಷಾಯಿ  ಯೆಂಬ  ಆಹಾರವನ್ನು  ಕೊಟ್ಟು  ರಾಣಿಯನ್ನಾಗಿ  ಪರಿವರ್ತಿಸಿಕೊಳ್ಳುತ್ತವೆ. ಹೀಗೆ ಹಿಸ್ಸೆಮಾಡಿ  ೧೩  ದಿವಸಕ್ಕೆ  ೩-೪  ಹೊಸರಾಣಿ ಹೊರಬರುತ್ತವೆ.  ಒಂದು  ರಾಣಿಯನ್ನು  ಉಳಿಸಿಕೊಳ್ಳಬೇಕು.  ಹುಳುಗಳ  ಸಂಖ್ಯೆ  ಜಾಸ್ತಿ   ಇದ್ದಲ್ಲಿ  ಇನ್ನೊಂದು  ಜೇನು  ಸಂಸಾರವನ್ನು ಕೂಡ  ಮಾಡಿಕೊಳ್ಳಬಹುದು.  ಇದರಿಂದಾಗಿ  ಅತ್ಯಂತ  ಸುಲಭವಾಗಿ  ಜೇನು  ಸಂಸಾರವನ್ನು  ವೃದ್ದಿಸಿಕೊಳ್ಳಬಹುದು  ಎಂಬುದು  ಕಳೆದ  ನಾಲ್ಕಾರು ವರ್ಷದಿಂದ  ಕೃತಕಹಿಸ್ಸೆಯನ್ನು  ಮಾಡಿ  ಜೇನು  ಸಂಸಾರ   ಹೆಚ್ಚಿಸಿಕೊಂಡ  ಸಾಗರ  ತಾಲ್ಲೂಕಿನ   ಪ್ರಶಾಂತ  ಕೆರೇಕೈರವರ  ಅಭಿಪ್ರಾಯ. 
 ಹೆಚ್ಚಿನ  ಮಾಹಿತಿಗೆ  ಸಂಪರ್ಕಿಸಿ   ಮೋ: ೯೪೪೮೯೧೪೭೯೧ 

ಚಿತ್ರ  ಬರಹ: ಕೆ.ಆರ್.ಶರ್ಮಾ  ತಲವಾಟ
shreeshum@gmail.com


Saturday, December 13, 2008

ಹರಿಯಾಣ ಎಮ್ಮೆ ಮಲೆನಾಡಿಗೆ ಬಂತು!




                                                                                                                                                                                                                                                       ಎಲ್ಲಿಯ ಮಾಮರ, ಎಲ್ಲಿಯ ಕೋಗಿಲೆ ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿ ಮೇಲಿನ ಸುದ್ದಿಯನ್ನು ತಳ್ಳಿಹಾಕುವಂತಿಲ್ಲ. ಸಾಗರದ ಚಿಕ್ಕತೋಟ ಶಶಿಧರ್ ಅಕ್ಷರಶಃ ಹರಿಯಾಣ ರಾಜ್ಯದಿಂದ ಎವ್ಮ್ಮೆಗಳನ್ನು ತಂದು ಹಾಲಿನ ಡೈರಿ ಆರಂಭಿಸಿದ್ದಾರೆ. ಮೈ ತುಂಬಾ ಸವಾಲುಗಳೇ ಇರುವ ಈ ಸಾಹಸ ಗಮನಿಸಲೇಬೇಕಾದಂತದು.
ಶಿವಮೊಗ್ಗ ಜಿಲ್ಲೆಯ ಈ ಚಿಕ್ಕತೋಟ ಎಂಬ ಪುಟ್ಟ ಹಳ್ಳಿ ಸಾಗರದಿಂದ ೧೩ ಕಿ.ಮೀ. ಅಂತರದಲ್ಲಿದೆ. ಅಲ್ಲಿನ ಯುವಕ ಸಿ.ಎಸ್. ಶಶಿಧರ್‌ರಿಗೆ ಮೊದಲಿನಿಂದಲೂ ಜಾನುವಾರು ಸಾಕಣೆ ಅಚ್ಚುಮೆಚ್ಚಿನ ಸಂಗತಿ. ಅದರಲ್ಲಿನ ಪ್ರಯೋಗಗಳತ್ತ ಆಸಕ್ತಿ, ಎಮ್ಮೆ ಎಂದರೆ ಆಕರ್ಷಣೆ. ಒಮ್ಮೆ ಟಿ.ವಿ.ಯಲ್ಲಿ ಕೃಷಿ ಕಾರ್ಯಕ್ರಮವೊಂದನ್ನು ನೋಡುವಾಗ, ಗೋಕಾಕ್‌ನಲ್ಲಿ ಹರಿಯಾಣ ಎಮ್ಮೆಗಳನ್ನು ತಂದು ಹೈನುಗಾರಿಕೆ ನಡೆಸುತ್ತಿರುವ ವಿಹಂಗಮ ಕತೆ ಗಮನ ಸೆಳೆಯಿತು. ನಮ್ಮೂರಿಗೂ ಹರಿಯಾಣ ಎಮ್ಮೆ ತಂದರೆ ಹೇಗೆ?
ಅಧ್ಯಯನದ ಅಗತ್ಯವಿತ್ತು. ಅಲ್ಲಿನ ಎಮ್ಮೆ ಮಲೆನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಹಲವು ಓಡಾಟಗಳ ನಂತರ ಮಲೆನಾಡಿನ ಚಳಿ, ಮಳೆಯನ್ನು ಇವು ತಾಳಿಕೊಳ್ಳುವುದು ಸ್ಪಷ್ಟವಾಯಿತು. ಸ್ವಾರಸ್ಯವೆಂದರೆ, ಗೋಕಾಕ್‌ನಲ್ಲಿರುವುದೂ ಹೆಚ್ಚು ಕಡಿಮೆ ಸಾಗರದ ಹವಾಮಾನ!
ಹರಿಯಾಣದಿಂದ ಎಮ್ಮೆ ತರಿಸುವುದೇ ತ್ರಾಸದ, ದುಬಾರಿಯ ಕೆಲಸ. ಒಂದೆರಡು ಎಮ್ಮ್ಮೆಯನ್ನು ಖರೀದಿಸಲಾಗದು. ಅಲ್ಲಿ ಹತ್ತು ಎಮ್ಮೆಗಳಿಗೆ ಒಂದು ಯೂನಿಟ್. ಒಂದು ಯೂನಿಟ್‌ಗೆ ತಕ್ಕುದಾದ ವಾಹನ ವ್ಯವಸ್ಥೆಯಿರುತ್ತದೆ. ಯೂನಿಟ್ ಒಂದರ ನಿರ್ವಹಣೆಗೆ ಒಬ್ಬ ನಿರ್ವಾಹಕನನ್ನು ಅಲ್ಲಿಂದಲೇ ಕಳಿಸಿಕೊಡಲಾಗುತ್ತದೆ. ಆತನಿಗೆ ದಿನಕ್ಕೆ ೧೦೦ ರೂಪಾಯಿ ಸಂಬಳ, ಜೊತೆಗೆ ಆಹಾರ ಸಾಮಗ್ರಿ ಕೊಡಬೇಕು. ಇವೆಲ್ಲವನ್ನೂ ನಿರ್ವಹಿಸಲು ‘ಎಮ್ಮೆ ಏಜೆಂಟ್’ಗಳಿರುತ್ತಾರೆ. ಈ ಏಜೆಂಟರು ದೂರದ ಊರಿನಿಂದ ಬರುವ ಗ್ರಾಹಕರಿಗೆ ಗೆಸ್ಟ್‌ಹೌಸ್ ಸೌಲಭ್ಯವನ್ನೂ ಮಾಡಿರುತ್ತಾರೆ!
ಶಶಿಧರ್ ಈ ಎಮ್ಮೆಗಳಿಗಾಗಿಯೇ ಹೊಸ ಕೊಟ್ಟಿಗೆ ನಿರ್ಮಿಸಿದ್ದಾರೆ. ಹರಿಯಾಣದಿಂದ ಅವರು ಒಂಭತ್ತು ಎಮ್ಮೆ-ಕರು ತರಿಸಿದ್ದಾರೆ. ಒಟ್ಟು ೩.೮೦ ಲಕ್ಷ ರೂಪಾಯಿ ಎಮ್ಮೆಗಳಿಗಾಗಿ ವೆಚ್ಚವಾಗಿದೆ. ಅಂದರೆ ಒಂದು ಎಮ್ಮೆಗೆ ೪೨ ಸಾವಿರ ರೂ.! ಪ್ರತಿ ಎಮ್ಮೆಗೆ ದಾರಿ ಖರ್ಚು ಎಂತಲೇ ಆರು ಸಾವಿರ ರೂಪಾಯಿ ಖರ್ಚಾಗಿದೆ.
ಅಷ್ಟಕ್ಕೂ ಹರಿಯಾಣ ಎಮ್ಮೆಯೇ ಹೈನುಗಾರಿಕೆಗೆ ಏಕೆ ಬೇಕು? ಶಶಿ ಉತ್ತರಿಸುವುದು ಹೀಗೆ, ಸ್ಥಳೀಯ ಎಮ್ಮೆಗಳಲ್ಲಿ ಹಲವು ದೋಷಗಳಿವೆ. ಗರ್ಭ ಕಟ್ಟದಿರುವಿಕೆ ದೊಡ್ಡ ಸಮಸ್ಯೆ. ಹಾಲು ಕೊಯ್ಲಿನ ಅವಧಿ ಅನಿಶ್ಚಿತವಾಗಿರುವುದು ಮತ್ತು ೬ - ೮ ತಿಂಗಳಿಗೇ ನಿಲ್ಲಿಕೆಯಾಗಿಬಿಡುವುದು ನಷ್ಟದ ಬಾಬತ್ತು. ಗರ್ಭಾವಧಿಯಲ್ಲೂ ಹಾಲು ಇಳುವರಿ ಕಡಿಮೆಯಾಗದಿರುವುದು ಮುರಾ ವೈಶಿಷ್ಟ್ಯ. ಸ್ಥಳೀಯ ಎಮ್ಮೆಗಿಂತ ಹೆಚ್ಚಿನ ಫ್ಯಾಟ್ ಅರ್ಥಾತ್ ೮ - ೯ ಅಂಶಗಳಷ್ಟು ಕೊಬ್ಬು ಹಾಲಿನಲ್ಲಿರುತ್ತದೆ. ಸಾಮಾನ್ಯವಾಗಿಯೇ ಹಾಲಿನ ಇಳುವರಿ ಜಾಸ್ತಿಯೇ. ಹರಿಯಾಣದಲ್ಲಿ ಹೊತ್ತಿಗೆ ಹತ್ತು ಲೀಟರ್‌ವರೆಗೆ ಬರುತ್ತಿದೆಯಂತೆ. ಈಗ ನಮ್ಮಲ್ಲೂ ಆರೂವರೆ ಲೀಟರ್ ಲಭಿಸುತ್ತಿದೆ
ಆ ಲೆಕ್ಕದಲ್ಲಿ, ನಿರ್ವಹಣೆ ಸಂಕೀರ್ಣವೇನಲ್ಲ. ಹತ್ತಿ ಹಿಂಡಿ, ಗೋಧಿ ಬೂಸ, ಜೋಳದ ಕಡಿ ಮಿಶ್ರಣದ ಮೂರು ಕೆ.ಜಿ. ಹಿಂಡಿ, ಕೋ ತ್ರಿ ಜಾತಿಯ ಹಸಿ ಹುಲ್ಲು, ಕತ್ತರಿಸಿದ ಒಣ ಹುಲ್ಲು ಎಮ್ಮೆಗಳಿಗೆ ಆಹಾರ. ಒಂದು ಎಮ್ಮೆಗೆ ದಿನಕ್ಕೆ ಸರಾಸರಿ ೧೧೫ ರೂ. ನಿರ್ವಹಣಾ ವೆಚ್ಚ. ಶಶಿಧರ್ ಪ್ರಕಾರ, ಸದ್ಯಕ್ಕಂತೂ ಹಾಲು ಮತ್ತು ನಿರ್ವಹಣೆಯ ಅನುಪಾತ ಸರಿಸಮ. ಸಗಣಿ ಗೊಬ್ಬರದ ಆದಾಯ ನಿಕ್ಕಿ ಉಳಿಯುತ್ತದೆ. ಒಂದು ವ್ಯಾನ್ ಲೋಡ್‌ಗೆ ೨,೩೦೦ ರೂ.ನಂತೆ ಗೊಬ್ಬರ ಮಾರಾಟವಾಗುತ್ತಿದೆ.
     ತಕ್ಷಣಕ್ಕೆ ಸಮಸ್ಯೆಗಳು ಬರಲಿಲ್ಲವೆಂದೇನಲ್ಲ. ವ್ಯಾನ್ ಹತ್ತಿದ ಒಂಬತ್ತು ಕರುಗಳಲ್ಲಿ ಒಂದು ದೊಡ್ಡ ಎಮ್ಮೆಗಳ ಕಾಲ್ತುಳಿತಕ್ಕೆ ಸಿಕ್ಕು ಬರುವಾಗಲೆ ಪ್ರಾಣ ಬಿಟ್ಟಿತ್ತು. ಚಿಕ್ಕತೋಟಕ್ಕೆ ಬಂದ ನಂತರವೂ ಮೂರು ಕರುಗಳು ವಿವಿಧ ಕಾರಣಗಳಿಂದ ಜೀವ ಕಳೆದುಕೊಂಡವು. ಬಂದ ಹೊಸದರಲ್ಲಿ ಎಮ್ಮೆಗಳಿಗೆ ಥಂಡಿ, ಜ್ವರ ಇತ್ಯಾದಿ ಸಣ್ಣ ಪುಟ್ಟ ರೋಗ ಕಾಣಿಸಿದ್ದುಂಟು. ಅದೃಷ್ಟಕ್ಕೆ, ಹರಿಯಾಣದಿಂದ ಬಂದಿರುವ ಪಶು ನಿರ್ವಾಹಕನಿಗೆ ಒಂದು ಮಟ್ಟಿನ ವೈದ್ಯವೂ ಗೊತ್ತಿದೆ., ಇಂಜಕ್ಷನ್ ಕೊಡುವುದಕ್ಕೂ ಸೈ. ಹಾಗಾಗಿ ತ್ರಾಸ ಎಷ್ಟೋ ಕಡಿಮೆಯಾದಂತೆ. ಇಂದು ಶಶಿ ಪಶು ಆಹಾರ, ಹಾಲು ಮಾರಾಟ ಮುಂತಾದ ವ್ಯಾವಹಾರಿಕ ವಿಚಾರಗಳಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿದರೆ ಸಾಕು. 
     ಸ್ಥಳೀಯ ಕೆಎಂಎಫ್ ಡೈರಿಗೆ ಹಾಲು ಹಾಕುವುದರಿಂದ ಲಾಭ ನಿರೀಕ್ಷಿಸಲಾಗದು. ಈ ವಿಚಾರ ಅರ್ಥವಾದ ತಕ್ಷಣ ಶಶಿಧರ್ ಸ್ವತಃ ಹಾಲು ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅವರು ಸಾಗರ ಪೇಟೆಗೆ ಪ್ಯಾಕೆಟ್ ಹಾಲು ಮಾಡಿ ಮಾರಲಾರಂಭಿಸಿದ್ದಾರೆ. ತಾಜಾ ಹಾಲಿನ ಒಂದು ಲೀಟರ್ ದರ ೨೦ ರೂ. ಈಗಾಗಲೇ ಹಲವರು ಬೆಣ್ಣೆ ಜಾಸ್ತಿ ಬರುತ್ತಿದೆ ಎನ್ನುವುದನ್ನು ದೃಢಪಡಿಸುತ್ತಿದ್ದಾರೆ.
ಹರಿಯಾಣ ಎಮ್ಮೆಗಳದ್ದು ವಾಸ್ತವವಾಗಿ ‘ಮುರಾ’ ಜಾತಿ. ಈ ಹಿಂದಿನಿಂದಲೇ ತಂದು ಸಾಕಿರುವ ಗೋಕಾಕ್‌ನ ಜೇನುಗೌಡ, ಗೋಣಿಯವರ ಮಾರ್ಗದರ್ಶನದಲ್ಲಿ ಶಶಿಧರ್ ಮಲೆನಾಡಿಗೆ ಎಮ್ಮೆ ತಂದಿದ್ದಾರೆ. ಅಧ್ಯಯನಕ್ಕೆ ಸಾಗರದ ಪಶು ವೈದ್ಯ ಶ್ರೀಪಾದರಾವ್ ನಂದೀತಳೆಯವರ ಸಹಕಾರವನ್ನು ಶಶಿ ಸ್ಮರಿಸುತ್ತಾರೆ.
ಇದಿನ್ನೂ ಯೋಜನೆಯ ಆರಂಭ ಮಾತ್ರ. ಇನ್ನೊಂದು ಯೂನಿಟ್ ದನಗಳನ್ನು ತಂದು ಕಟ್ಟಬೇಕಿದೆ. ಖರ್ಚು ಮಿಗತೆಗೆ ರಸಮೇವು, ಅಜೋಲಾಗಳಂತಹ ತಂತ್ರಗಳನ್ನು ಅನುಸರಿಸಬೇಕಿದೆ. ಬಹುಷಃ ಇನ್ನೊಂದು ತಿಂಗಳಲ್ಲಿ ಇನ್ನೊಂದು ಯೂನಿಟ್ ದನಗಳನ್ನು ಶಶಿ ತರಿಸಲಿದ್ದಾರೆ. ಈ ಸಂಬಂಧ ಬ್ಯಾಂಕ್ ಖುಷಿಯಿಂದಲೇ ಸಾಲ ವ್ಯವಸ್ಥೆ ಮಾಡಿದೆ. ಮುರಾದ ಅಸಲಿ ಗುಣದ ಸಂತತಿ ಬೆಳೆಸಬೇಕೆಂದರೆ ತಕ್ಷಣಕ್ಕೇ ‘ಮುರಾ ಕೋಣ’ವೊಂದನ್ನು ಕೊಟ್ಟಿಗೆಗೆ ತರಬೇಕಿದೆ! ಸದ್ಯ ಕೃತಕ ಗರ್ಭಧಾರಣೆ ಕ್ರಮವನ್ನು ಅನುಸರಿಸಲಾಗಿದೆ.
ಶಶಿ ಒಂದು ಸಾಹಸದ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ಮೇವಿನ ಅಗತ್ಯವನ್ನು ಸ್ವಜಮೀನು ಪೂರೈಸುವಂತಿದ್ದರೆ, ಏಕಾಏಕಿ ಜಾನುವಾರುಗಳಿಗೆ ಮರಣಾಂತಿಕ ಕಾಯಿಲೆ ಬಾರದಿದ್ದರೆ ಹೈನುಗಾರಿಕೆಯಲ್ಲಿ ಅಷ್ಟಿಷ್ಟು ಲಾಭ ಕಟ್ಟಿಟ್ಟ ಬುತ್ತಿ. ಮಲೆನಾಡಿಗೆ ಬಂದಿಳಿದ ಹರಿಯಾಣ ಎಮ್ಮೆಗಳ ಲಾಭ - ನಷ್ಟದ ಅನುಪಾತ ತೆಗೆಯಲು ಇನ್ನೂ ಸ್ವಲ್ಪಕಾಲ ಬೇಕಾದೀತು. ಮೂರು ತಿಂಗಳ ಈ ಕ್ಲುಪ್ತ ಸಮಯದಲ್ಲಿ ಶಶಿಯವರಿಗಂತೂ ತಮ್ಮ ಹೆಜ್ಜೆ ಸಮಾಧಾನ ತಂದಿದೆ. ಮಲೆನಾಡಿನ ಉಳಿದ ಕೃಷಿಕರೂ ಶಶಿಯವರ ದಾರಿ ಹಿಡಿಯುವಂತಾಗಲು ಇನ್ನೂ ಕೆಲಕಾಲ ಕಾಯಲೇಬೇಕು.
ಶಶಿಧರ್‌ರ ಸಂಪರ್ಕ ದೂರವಾಣಿ -(೦೮೧೮೩)೨೩೧೬೯೮ [ಸ್ಥಿರ] ಮತ್ತು ೯೪೪೮೦೧೮೫೫೫ [ಮೊಬೈಲ್]
 
-ಮಾವೆಂಸ
ಫೋನ್-೦೮೧೮೩ ೨೩೬೦೬೮, ೨೯೬೫೪೩, ೯೮೮೬೪೦೭೫೯೨
ಇ ಮೇಲ್- mavemsa@gmail.com

Thursday, December 4, 2008

ಜವಾರಿ ಸರೋಜ!

ರಾಜ್ಯದಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಲ್ಲಿ ದಾವಣಗೆರೆಯೂ ಒಂದು. ಇಲ್ಲಿನ ಹೆಚ್ಚಿನ ರೈತರು ರಾಸಾಯನಿಕ ಕೃಷಿ ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕೆಲವು ರೈತರು ರಾಸಾಯಾನಿಕ ಕೃಷಿ ಬಿಟ್ಟು ಸಾವಯವದತ್ತ ಮುಖ ಮಾಡಿದ್ದಾರೆ. ಹಂತ ಹಂತವಾಗಿ ರಸಗೊಬ್ಬರ ಹಾಕುವುದನ್ನು ಬಿಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಉತ್ತಮ ಬೆಳೆವಣಿಗೆಯೇ.
ದಾವಣಗೆರೆಯ ಜಿಲ್ಲೆ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಸರೋಜ, ನಾಗೇಂದ್ರ ಪಾಟೀಲ್‌ ದಂಪತಿ ಪ್ರಗತಿಪರ ಕೃಷಿಕರು. ಇವರಿಗೆ ಹತ್ತೊಂಬತ್ತು ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಆರು ಎಕರೆ ತೆಂಗು, ಮೂರು ಎಕರೆ ಅಡಿಕೆ ತೋಟವಿದೆ. ಉಳಿದ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ.
ಸರೋಜ ಹರಿಹರ ಗ್ರಾಮ ಸಂಪರ್ಕ ಕೇಂದ್ರದ ಸಂಪನ್ಮೂಲ ವ್ಯಕ್ತಿ. ಇವರು ಹಳ್ಳಿ ಹಳ್ಳಿಗಳಗೆ ಹೋಗಿ ಕೃಷಿಯಲ್ಲಿ ತಮಗಿರುವ ಅನುಭವದ ಕುರಿತು ಉಪನ್ಯಾಸ ಕೊಡುತ್ತಾರೆ. ಈ ಸಂದರ್ಭದಲ್ಲಿ ಇವರಿಗೆ ನೈಸರ್ಗಿಕ ಕೃಷಿಯ ಕಡೆಗೆ ಆಸಕ್ತಿ ಮೂಡಿತು. ಅಡಿಕೆ, ತೆಂಗಿನ ತೋಟಕ್ಕೆ ರಸಗೊಬ್ಬರ ಬಿಟ್ಟು ಜೀವಾಮೃತವನ್ನು ಹಾಕತೊಡಗಿದರು. ಭತ್ತದ ಕೃಷಿಗೂ ಇದನ್ನೇ ಅನುಸರಿಸಿದರು. ಸಾವಯವ ಕೃಷಿಯನ್ನು ಮಾಡತೊಡಗಿದಾಗ ನಾಟಿ ಭತ್ತದ ತಳಿ ಬೆಳೆಯಬೇಕೆಂಬ ಮನಸ್ಸು ಸರೋಜ ಅವರಿಗೆ ಬಂತು.
ನಾಟಿ ತಳಿ ಬೆಳೆಸಬೇಕೆಂದು ಮನಸ್ಸಾದರೆ ತಳಿಗಳು ಸಿಗಬೇಕಲ್ಲ? ಕಳೆದ ವರ್ಷ ಇವರು ಗಂಧಸಾಲಿ ಎನ್ನುವ ಒಂದು ತಳಿಯನ್ನು ಮಾತ್ರ ಬೆಳೆದಿದ್ದರು. ನಾಟಿ ತಳಿ ಬಹಳ ಆಸಕ್ತಿಯಿಂದ ಬೆಳೆದು, ಸಂರಕ್ಷಣೆ ಮಾಡುತ್ತಿದ್ದ ಮಂಡ್ಯ ಹತ್ತಿರದ ಶಿವಳ್ಳಿಯ ಬೋರೇಗೌಡರಲ್ಲಿಗೆ ಹೋಗಿ 23 ತಳಿಗಳನ್ನು ತಂದು ನಾಟಿ ಮಾಡಿದ್ದಾರೆ. ಇವರು ತಳಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ 5 ಕೆಜಿ ಸಗಣಿ, 100 ಗ್ರಾಂ ಸುಣ್ಣ ಮತ್ತು ಗೋಮೂತ್ರ ಮಿಶ್ರಣ ಮಾಡಿ, ಅದರಲ್ಲಿ ಬೀಜೋಪಚಾರ ನಡೆಸಿ ನಾಟಿ ಮಾಡಿದ್ದಾರೆ. ಇದರಿಂದ ಈ ಭಾಗದಲ್ಲಿ ಸಾಮಾನ್ಯವಾಗಿ ಬರುವ ಬೆಂಕಿರೋಗ ಮತ್ತು ಕಾಂಡಕೊರಕ ಬಾಧೆ ಬಂದಿಲ್ಲ.
ಇವರು ಬೀಜ ಬ್ಯಾಂಕ್‌ ಅನ್ನು ಮಾಡುತ್ತಿದ್ದಾರೆ. ಇವರಲ್ಲಿ ಇಂದು 23 ಜವಾರಿ ತಳಿಗಳು ಇವೆ. ಗಂಧಸಾಲಿ, ರಾಜಭೋಗ್‌, ರಾಜಮುಡಿ, ಬಂಗಾರಸಣ್ಣ, ರತ್ನಚೂಡಿ, ಮೋರಡ್ಡಿ, ಬೂಸ ಬಾಸಮತಿ, ಕರಿಮುಂಡ್ಗ, ರಾಜಕೈಮೆ, ಜೀರಿಗೆಸಾಂಬ, ಮೈಸೂರು ಮಲ್ಲಿಗೆ, ಕೆಂಪುದಡಿ, ಸೇಲಂ ಸಣ್ಣ, ಮಾಲ್ಗುಡಿ ಸಣ್ಣ, ನಾಗ ಭತ್ತ, ಚಿನ್ನಾಪನ್ನಿ, ನವರ, ಪೂಸಾ ಸುಗಂಧ, ಗೌರಿ ಸಣ್ಣ, ಎಚ್‌ಎಂಟಿ ಸೋನಾ ತಳಿಗಳನ್ನು ಇವರು ಪ್ರಾತ್ಯಕ್ಷಿಕೆ ಮಾದರಿ ಬೆಳೆಯುತ್ತಿದ್ದಾರೆ.
ನಮ್ಮಲ್ಲಿಯ ಭೂಮಿಗೆ ಯಾವ ತಳಿ ಹೆಚ್ಚು ಇಳುವರಿ ಬರುತ್ತದೆ ಎನ್ನುವುದನ್ನು ಗಮನಿಸಿ ಅಂತಹ ತಳಿಗಳನ್ನು ಹೆಚ್ಚು ಬೆಳೆಯುವುದು ಮತ್ತು ನಮ್ಮಲ್ಲಿನ ಅಪರೂಪದ ತಳಿಗಳನ್ನು ಸಂರಕ್ಷಿಸಿ ದ್ವಿಗುಣಗೊಳಸುವುದು ಉದ್ದೇಶ. ಸಾವಯವ ಕೃಷಿಗೆ ನಾಟಿ ತಳಿಯೇ ಸೂಕ್ತ. ನಾವು ಮೊದಲು ಇಳವರಿ ಪಡೆಯಲು ತುಂಬಾ ಕಸರತ್ತು ಮಾಡುತ್ತಿದ್ದೆವು. ರೋಗ ಬಾಧೆಗೆ, ಕೀಟ ಬಾಧೆಗೆ ಔಷಧಗಳನ್ನು ಸಿಂಪಡಿಸುತ್ತಿದ್ದೆವು. ಆದರೆ ಈಗ ಮಾತ್ರ ಅದಾವುದನ್ನೂ ಮಾಡದೇ ಸಾವಯವದಲ್ಲಿಯೇ ಕೃಷಿ ಮಾಡುತ್ತಿದ್ದೇವೆ. ಮಾರಾಟಕ್ಕಾಗಿ ಬೆಳೆಯುತ್ತಿರುವ ಭತ್ತದ ಗದ್ದೆಗಳಿಗೆ ಒಂದೂವರೆ ಕ್ವಿಂಟಾಲ್‌ ರಾಸಾಯನಿಕ ಗೊಬ್ಬರ ಹಾಕುತ್ತಿದ್ದೇವೆ. ಮೊದಲು ತುಂಬಾ ಗೊಬ್ಬರದ ಬಳಕೆ ಮಾಡುತ್ತಿದ್ದೆವು. ಈಗ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬರುತ್ತಿದ್ದೇವೆ. ಎರೆಗೊಬ್ಬರವನ್ನು ಹೆಚ್ಚು ಬಳಸುತ್ತಿದ್ದೇವೆ ಅನ್ನುತ್ತಾರೆ ಸರೋಜಮ್ಮ.
ನಾಟಿ ತಳಿಯನ್ನು ಬೆಳೆಸುತ್ತಿರುವ ತಾಕುಗಳಿಗೆ ಯಾವುದೇ ತರಹದ ರಾಸಾಯನಿಕವನ್ನು ಬಳಸುತ್ತಿಲ್ಲ. ಈ ಭಾಗದಲ್ಲಿ ಶ್ರೀಪದ್ಧತಿ ಭತ್ತವನ್ನು ಮೊದಲು ಬೆಳೆದವರು ಇವರು. ಕೃಷಿಯೇ ಬದುಕಾಗಿರುವ ಸರೋಜಮ್ಮ ಅವರ ಪ್ರತಿಯೊಂದು ಯೋಚನೆ, ಯೋಜನೆಗೆ ಬೆನ್ನೆಲುಬಾಗಿ ನಿಂತವರು ಪತಿ ನಾಗೇಂದ್ರಪ್ಪ ಪಾಟೀಲರು. ಇವರ ಕೃಷಿಯನ್ನು ನೋಡಿ ಕೃಷಿ ಇಲಾಖೆಯವರು ಬಹಳಷ್ಟು ಕೃಷಿಕರಿಗೆ ಇವರಿಂದ ಮಾರ್ಗದರ್ಶನ ಕೊಡಿಸಿದ್ದಾರೆ. ಇವರು ಸಹ ಕೃಷಿ ಇಲಾಖೆಯ ಸಲಹೆ ಪಡೆಯದೆ ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾರೆ. ಸರೋಜಮ್ಮ ಅವರ ಕೃಷಿ ತೋಟಕ್ಕೆ ಅಮೇರಿಕಾದ ಪತ್ರಕರ್ತೆ ರೆಬಾಕಾ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.
ನಾವು ಕೇವಲ ವಾಣಿಜ್ಯ ಉದ್ದೇಶಗಳಿಗೆ ಭತ್ತ ಬೆಳೆಯದೇ ನಮ್ಮದೇ ಆದ ಜವಾರಿ ತಳಿಗಳನ್ನು ಹುಡುಕಿ ಬೆಳೆಸಬೇಕು ಎಂದು ಪತ್ನಿ ಸರೋಜ ಹೇಳಿದಳು. ಕೃಷಿ ವಿಚಾರದಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಅವಳು. ನನಗೂ ಸರಿ ಅನ್ನಿಸಿತು. ಸಾವಯವ ಕೃಷಿಯ ಕಡೆಗೆ ಬಂದಿದ್ದೆವು. ಸಾವಯವ ಕೃಷಿಯ ಜೊತೆ ಜವಾರಿ ತಳಿಗಳನ್ನು ಬೆಳೆಯುವುದು ಸರಿಯಾದ ಹೊಂದಾಣಿಕೆ. ಅವಳ ಆಸಕ್ತಿಗೆ ನಾನು ಆಸರೆಯಾಗಿದ್ದೇನೆ. ನಾಟಿ ತಳಿಗಳಲ್ಲಿ ಇಳವರಿ ಹೆಚ್ಚು ಬಾರದಿದ್ದರೂ ಗುಣಮಟ್ಟ ಒಳ್ಳೆಯದಾಗಿರುತ್ತದೆ ಎಂಬುದು ಸತ್ಯ ಅನ್ನುತ್ತಾರೆ ನಾಗೇಂದ್ರಪ್ಪ ಪಾಟೀಲ.
ಕಾಣೆಯಾಗುತ್ತಿರುವ ನಾಟಿ ತಳಿಗಳನ್ನು ಹುಡುಕಿ ಬೆಳೆಯುತ್ತಿರುವ ಸರೋಜ ಅವರ ಪ್ರಯತ್ನ ಶ್ಲಾಘನೀಯ. ಒಂದೊಂದು ಭಾಗದಲ್ಲಿ ಇಂತಹ ಒಬ್ಬೊಬ್ಬರು ಇದ್ದರೂ ಜವಾರಿ ತಳಿಯ ಕೃಷಿ ಪುನರ್ಜನ್ಮ ಪಡೆಯುಯುವುದು ಖಂಡಿತ.
ಇವರ ಕೃಷಿ ಮಾಹಿತಿಗಾಗಿ: ಸರೋಜ ನಾಗೇಂದ್ರಪ್ಪ ಪಾಟೀಲ್‌
ನಿಟ್ಟೂರು
ಅಂಚೆ: ನಿಟ್ಟೂರು
ಹರಿಹರ, ದಾವಣಗೆರೆ
ದೂರವಾಣಿ: 08192293014
ನಾಗರಾಜ ಮತ್ತಿಗಾರ